೧೫೪. ಲಲಿತಾ ಸಹಸ್ರನಾಮ ೬೭೭ರಿಂದ ೬೮೩ನೇ ನಾಮಗಳ ವಿವರಣೆ

೧೫೪. ಲಲಿತಾ ಸಹಸ್ರನಾಮ ೬೭೭ರಿಂದ ೬೮೩ನೇ ನಾಮಗಳ ವಿವರಣೆ

                                                                              ಲಲಿತಾ ಸಹಸ್ರನಾಮ ೬೭೭ - ೬೮೩

Bali-priyā बलि-प्रिया (677)

೬೭೭. ಬಲಿ-ಪ್ರಿಯಾ

           ಬಲಿ ಎಂದರೆ ನಿತ್ಯ ಅರ್ಪಣೆ, ಅಥವಾ ದಿನ ನಿತ್ಯದ ಆಹಾರದಲ್ಲಿ ಒಂದು ಭಾಗವನ್ನು ಎಲ್ಲಾ ಪ್ರಾಣಿಗಳಿಗೆ ಅರ್ಪಿಸುವುದು. ಇದನ್ನು ಭೂತ ಯಜ್ಞ ಎಂದೂ ಹೇಳುತ್ತಾರೆ. ದೇವಿಯು ಯಾರು ಈ ವಿಧವಾದ ಭೂತಯಜ್ಞವನ್ನು ಕೈಗೊಳ್ಳುತ್ತಾರೋ ಅಂತಹವರ ಬಗೆಗೆ ಆದರವನ್ನು ಹೊಂದಿದ್ದಾಳೆ (ಪಂಚಯಜ್ಞಪ್ರಿಯಾ ನಾಮ ೯೪೬ರಲ್ಲಿ ಹೆಚ್ಚಿನ ವಿವರಣೆಗಳನ್ನು ನೋಡೋಣ). ಭೂತ ಯಜ್ಞವು ಐದು ಯಜ್ಞಗಳಲ್ಲಿ ಒಂದಾಗಿದೆ. ಬಲಿ ಎಂದರೆ ಮಹಾನ್ ವೀರರು; ಯಾರು ಅಂತರಂಗದಲ್ಲಿರುವ ಮತ್ತು ಬಹಿರಂಗದಲ್ಲಿರುವ ಎರಡೂ ರೀತಿಯ ಶತ್ರುಗಳನ್ನು ಜಯಿಸುತ್ತಾರೋ ಅವರು. ಆಂತರಿಕ ಶತ್ರುಗಳೆಂದರೆ ಮನಸ್ಸು ಮತ್ತು ಇಂದ್ರಿಯಗಳು. ಒಬ್ಬನು ಸಾಕ್ಷಾತ್ಕಾರ ಹೊಂದಬೇಕೆಂದರೆ ಅವನಿಗೆ ದೃಢವಾದ ಭೌತಿಕ ಶರೀರ ಮತ್ತು ಮನಸ್ಸು ಇರಬೇಕಾಗುತ್ತದೆ. ಮುಂಡಕ ಉಪನಿಷತ್ತು (೩.೨.೪) ಹೀಗೆ ಹೇಳುತ್ತದೆ, "ಆತ್ಮವು ಯಾರಿಗೆ ಬಲವಿಲ್ಲದಿರುವುದೋ ಅವರಿಂದ ಹೊಂದಲ್ಪಡುವುದಿಲ್ಲ". ತೈತ್ತರೀಯ ಉಪನಿಷತ್ತು (೨.೮) ಸಹ ಇಂತಹ ಶಬ್ದಗಳನ್ನು ಉಪಯೋಗಿಸುತ್ತದೆ - ದೃಢಿಷ್ಠಃ ಮತ್ತು ಬಲಿಷ್ಠಃ (ದೃಢಿಷ್ಠಃ ಅಂದರೆ ಯಾರು ಕಟ್ಟು ಮಸ್ತಾಗಿರುತ್ತಾರೆಯೋ ಮತ್ತು ಬಲಿಷ್ಠಃ ಅಂದರೆ ಯಾರು ಶಕ್ತಿವಂತರಾಗಿರುತ್ತಾರೆಯೋ ಅವರು). ಬ್ರಹ್ಮವು ಪ್ರತಿನಿಧಿಸುವ ಆನಂದದ ಪರಿಕಲ್ಪನೆಯನ್ನು ಹೊಂದಲು ಬೇಕಾದ ಅನೇಕ ಅವಶ್ಯಕ ವಸ್ತುಗಳಲ್ಲಿ ಎರಡನ್ನು ಈ ಉಪನಿಷತ್ತಿನಲ್ಲಿ ಪ್ರಸ್ತಾಪಿಸಲಾಗಿದೆ. ಯಾರು ದೇವಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಅಪೇಕ್ಷಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಠರಾಗಿರುತ್ತಾರೆಯೋ ಅಂತಹವರನ್ನು ಆಕೆಯು ಇಷ್ಟ ಪಡುತ್ತಾಳೆ.

         ಬಲಿ ಎಂದರೆ ದೇವತೆಗಳಿಗೆ ಮಾಡುವ ಅರ್ಪಣೆಗಳೂ ಸಹ ಆಗಿವೆ. ದೇವಿಯು ತನ್ನ ಸಹಾಯಕರಿಗೆ ಮಾಡುವ ಇಂತಹ ಅರ್ಪಣೆಗಳಿಂದ ಸಂತುಷ್ಟಳಾಗುತ್ತಾಳೆ, ಏಕೆಂದರೆ ಅವಳು ಎಲ್ಲಾ ದೇವಾನು ದೇವತೆಗಳನ್ನು ಪರಿಪಾಲಿಸುವವಳಾಗಿದ್ದಾಳೆ.

Bhāṣā-rūpā भाषा-रूपा (678)

೬೭೮. ಭಾಷಾ-ರೂಪಾ

           ದೇವಿಯು ಭಾಷೆಗಳ ರೂಪದಲ್ಲಿದ್ದಾಳೆ. ಭಾಷೆಗಳು ಕಲಿಕೆಯ ಮೂಲವಾಗಿವೆ ಮತ್ತು ಶಬ್ದದ ಮೂಲಕ ಅರ್ಥ ಮಾಡಿಕೊಳ್ಳುವ ಸಾಧನಗಳಾಗಿವೆ. ಈ ನಾಮವು ದೇವಿಯು ಕಲಿಯುವುದರ ಮತ್ತು ಅರ್ಥಮಾಡಿಕೊಳ್ಳುವುದರ ಮೂಲವಾಗಿದ್ದಾಳೆ ಎಂದು ಹೇಳುತ್ತದೆ. ದೇವಿಯು ಶಬ್ದ ಬ್ರಹ್ಮವಾಗಿದ್ದಾಳೆ. ದೇವಿಯು ಶಬ್ದವನ್ನು ಪ್ರತಿನಿಧಿಸಿದರೆ ಶಿವನು ಅದರ ಅರ್ಥವನ್ನು ಪ್ರತಿನಿಧಿಸುತ್ತಾನೆಂದು ಹೇಳಲಾಗುತ್ತದೆ. ಶಿವ ಮತ್ತು ಶಕ್ತಿಯರು ಶಬ್ದ ಮತ್ತು ಅದರ ಅರ್ಥವಿದ್ದಂತೆ. ಯಾವಾಗ ಒಂದು ಶಬ್ದವನ್ನು ಅದರ ಅರ್ಥದಿಂದ ಬೇರ್ಪಡಿಸಲಾಗುವುದೋ ಆಗ ಆ ಶಬ್ದವು ಅರ್ಥರಹಿತವಾಗುತ್ತದೆ. ಅವೆರಡೂ ಪರಸ್ಪರಾವಲಂಬಿಗಳು ಅದೇ ವಿಧವಾಗಿ ಶಿವ-ಶಕ್ತಿಯರು.

Bṛhat-senā बृहत्-सेना (679)

೬೭೯. ಬೃಹತ್-ಸೇನಾ

           ದೇವಿಗೆ ಬೃಹತ್ತಾದ (ದೊಡ್ಡದಾದ) ಸೈನ್ಯವಿದೆ. ದೇವಿಯು ಈ ಪ್ರಪಂಚವನ್ನು ತನ್ನ ಸೈನ್ಯದ ಸಹಾಯದಿಂದ ಪರಿಪಾಲಿಸುತ್ತಾಳೆ. ಈ ನಾಮವನ್ನು ೬೭೭ನೇ ನಾಮದೊಂದಿಗೆ ಓದಿಕೊಳ್ಳಬೇಕು.

Bhāvābhāva-vivarjitā भावाभाव-विवर्जिता (680)

೬೮೦. ಭಾವಾಭಾವ-ವಿವರ್ಜಿತಾ

           ದೇವಿಯು ಇರುವಿಕೆ ಮತ್ತು ಇಲ್ಲದಿರುವಿಕೆಯಿಂದ ಮುಕ್ತಳಾಗಿದ್ದಾಳೆ. ಭಾವ ಮತ್ತು ಅಭಾವ ಎನ್ನುವುವು ವೇದಾಂತದ ಶಬ್ದಗಳು. ಭಾವ ಎಂದರೆ ಇರುವಿಕೆ ಮತ್ತು ಅಭಾವ ಎಂದರೆ ಇಲ್ಲದಿರುವಿಕೆ. ಕೇವಲ ಇರುವಿಕೆಯ ಸಿದ್ಧಾಂತವನ್ನವಲಂಬಿಸದೆ ಪ್ರಯೋಗಶೀಲತೆ ಮತ್ತು ಗಮನಿಸುವಿಕೆಯಿಂದ ತಿಳಿದುಕೊಳ್ಳುವುದು ಭಾವವಾಗಿದೆ. ಮಾಯೆಯು ಅಭಾವ ಅಥವಾ ಇಲ್ಲದಿರುವಿಕೆಗೆ ವಸ್ತುಶಃ ಕಾರಣವಾಗಿದೆ. ಅಭಾವವು ನಾಲ್ಕು ವಿಧದ್ದಾಗಿದೆ. ೧) ಪ್ರಾಗ್ಭಾವ - ಉತ್ಪಾದನೆಗಿಂತ ಮುಂಚೆ ಆ ವಸ್ತುವು ಇಲ್ಲದಿರುವುದು. ಉದಾಹರಣೆಗೆ ನೂಲಿನಿಂದ ಮಾಡಿದ ಬಟ್ಟೆ. ಯಾವಾಗ ನೂಲು ಇತ್ತೋ ಆಗ ಬಟ್ಟೆಯು ಇರಲಿಲ್ಲ. ನೂಲು ಬಟ್ಟೆಯಾಗಿ ಮಾರ್ಪಟ್ಟಿತು. ೨) ಧ್ವಂಸಾಭಾವ - ವಿನಾಶ ಹೊಂದಿದ ಬಳಿಕ ಇಲ್ಲದಿರುವಿಕೆ. ನೂಲು ಬಟ್ಟೆಯನ್ನು ತಯಾರಿಸಿದ ಮೇಲೆ ತನ್ನ ನೈಜ ರೂಪದಲ್ಲಿ ಇಲ್ಲದೇ ಇರುವುದು. ೩) ಅತ್ಯಂತಾಭಾವ - ಅಪ್ಪಟವಾಗಿ ಇಲ್ಲದಿರುವಿಕೆ. ಅದ್ವೈತ ಸಿದ್ಧಾಂತದ ಪ್ರಕಾರ, ಕೇವಲ ಬ್ರಹ್ಮವು ಮಾತ್ರವೇ ಸಂಪೂರ್ಣವಾಗಿ ಇಲ್ಲದಿರುವವನಾಗಿದ್ದಾನೆ. ೪) ಅನ್ಯೋನ್ಯಾಭಾವ - ಪರಸ್ಪರ ಇಲ್ಲದಿರುವಿಕೆ. ಉದಾಹರಣೆಗೆ ಒಂದು ಮಡಕೆಯು ಬಟ್ಟೆಯಲ್ಲಿ ಇರಲಾರದು ಅದೇ ವಿಧವಾಗಿ ಒಂದು ತುಂಡು ಬಟ್ಟೆಯು ಮಡಕೆಯೊಳಗಿರಲಾರದು. ಇದನ್ನೇ, ’ಇದು ಅದಲ್ಲ’ ಎಂದು ಹೇಳುತ್ತಾರೆ. ಉಪನಿಷತ್ತುಗಳು ನೇತಿ, ನೇತಿ (ಇದಲ್ಲ, ಇದಲ್ಲ) ಎಂದು ಬ್ರಹ್ಮವನ್ನು ನಿಷ್ಪತ್ತಿಗೊಳಿಸುತ್ತವೆ. ಒಬ್ಬ ಅಜ್ಞಾನಿಯು ಜೀವಿಯು ಬ್ರಹ್ಮಕ್ಕಿಂತ ಬೇರೆಯಾದುದು ಎಂದು ತಿಳಿಯುತ್ತಾನೆ. ಆದರೆ ಅದ್ವೈತದ ಪ್ರಕಾರ ಜೀವಿ ಮತ್ತು ಬ್ರಹ್ಮವು ಒಂದೇ ಆಗಿವೆ. ಅವಿದ್ಯೆ ಅಥವಾ ಅಜ್ಞಾನದಿಂದಾಗಿ ಅವೆರಡನ್ನೂ ಬೇರೆಯಾಗಿ ಪರಿಗಣಿಸುತ್ತೇವೆ.

        ಒಂದು ವಸ್ತು ಅಥವಾ ಗುಣದ ಅಭಾವ ಅಥವಾ ಇಲ್ಲದಿರುವಿಕೆಯನ್ನು ಇಂದ್ರಿಯಗಳಿಂದಾಗಲೀ ಅಥವಾ ತರ್ಕದಿಂದಾಗಲಿ ಗ್ರಹಿಸಲಾಗದು, ಆದರೆ ಅದನ್ನು ನೇರವಾಗಿ ಅರಿಯಬಹುದು ಅದರ ನೇತಿ ನೇತಿ (ಇದಲ್ಲ ಇದಲ್ಲ) ಅಥವಾ ಅಗ್ರಾಹ್ಯತೆಯಿಂದಾಗಿ. ಬ್ರಹ್ಮಸೂತ್ರವು (೨.೨.೨೮) ಹೇಳುತ್ತದೆ, "ನಾಭಾವ ಉಪಲಬ್ಧೇಃ नाभाव उपलब्धेः" ಅಂದರೆ ಬಾಹ್ಯ ವಸ್ತುಗಳು ಅಸ್ತಿತ್ವದಲ್ಲಿ ಇಲ್ಲ ಏಕೆಂದರೆ ಅವನ್ನು ಗ್ರಹಿಸಬಹುದಾಗಿದೆ. ಯಾವುದರ ಮೂಲಕ ಅಸ್ತಿತ್ವದಲ್ಲಿರುವುದನ್ನು ಸಾಕ್ಷಾತ್ಕರಿಸಿಕೊಳ್ಳಬಹುದೋ  ಆ ಆಂತರಿಕ ಅರಿವಿನ ಕುರಿತಾಗಿ ಈ ಸೂತ್ರವು ಹೇಳುತ್ತದೆ. 

        ಈ ನಾಮವು ದೇವಿಯು ಇದ್ದಾಳೆ ಮತ್ತು ಇಲ್ಲವಾಗಿದ್ದಾಳೆ. ಅವಳು ನಿತ್ಯಳು ಮತ್ತು ವಿನಾಶವಿಲ್ಲದವಳು (ಬ್ರಹ್ಮಳು) ಮತ್ತು ಇಲ್ಲದಿರುವವಳು ಅಂದರೆ ಪರಿಮಿತಳು ಮತ್ತು ನಾಶ ಹೊಂದುವವಳು (ಮಾಯೆ) ಎರಡೂ ಆಗಿದ್ದಾಳೆ ಎಂದು ಹೇಳುತ್ತದೆ.

Sukhārādhyā सुखाराध्या (681)

೬೮೧. ಸುಖಾರಾಧ್ಯಾ

           ದೇವಿಯನ್ನು ಯಾವುದೇ ವಿಧವಾದ ಕಷ್ಟಗಳಿಲ್ಲದೇ ಪೂಜಿಸಬಹುದು. ಉದಾಹರಣೆಗೆ, ಉಪವಾಸ, ಬೆಂಕಿಯ ಮೇಲೆ ನಡೆಯುವುದು ಮುಂತಾದವುಗಳನ್ನು ಮಾಡಬೇಕಾಗಿಲ್ಲ. ಯಾರಾದರೂ ತಮ್ಮ ದೇಹವನ್ನು ಅವಳ ಪೂಜೆಯನ್ನು ಮಾಡುವಾಗ ಹಾನಿ ಮಾಡಿಕೊಂಡರೆ ಅವರು ಆಕೆಯನ್ನು ಆಂತರ್ಯದಲ್ಲಿ ಅಕ್ಷರಶಃ ಹಾನಿಗೊಳಮಾಡುತ್ತಾರೆ. ದೇವಿಯನ್ನು ಆಂತರ್ಯದಲ್ಲಿ ಅರಿಯಬೇಕೆಂದು ಬಯಸುವವರು ದೇಹವನ್ನು ದಂಡಿಸಬಾರದು. ಆರೋಗ್ಯಪೂರ್ಣ ಶರೀರವು ಆತ್ಮಸಾಕ್ಷಾತ್ಕಾರಕ್ಕೆ ಬೇಕಾಗುವ ಪ್ರಥಮ ಅವಶ್ಯಕತೆಯಾಗಿದೆ. ಕೇವಲ ಅಮಾಯಕರು ಮಾತ್ರ ಕಠಿಣ ವ್ರತಗಳ ಹೆಸರಿನಲ್ಲಿ ತಮ್ಮ ದೇಹವನ್ನು ಘಾಸಿಗೊಳಿಸಿಕೊಳ್ಳುತ್ತಾರೆ. ದೇಹವು ಒಂದು ಗುಡಿಯಂತೆ, ಹೃದಯ ಚಕ್ರವು ಅದರ ಪರಮ ಪವಿತ್ರವಾದ ಸ್ಥಳ ಮತ್ತು ಅದರೊಳಗಿರುವ ಬ್ರಹ್ಮವು (ಆತ್ಮವು) ವಿಗ್ರಹವಾಗಿದೆ.

         ಕೃಷ್ಣನೂ ಸಹ ಭಗವದ್ಗೀತೆಯಲ್ಲಿ (೧೭.೫ ಮತ್ತು ೬) ಹೀಗೆ ಹೇಳುತ್ತಾನೆ, “ಯಾವ ಜನರು ಆಷಾಢಭೂತಿತನ ಮತ್ತು ಅಹಂಕಾರದಿಂದಲೂ (ದಂಭಾಹಂಕಾರಗಳಿಂದಲೂ) ಕಾಮರಾಗಬಲಗಳಿಂದಲೂ ಕೂಡಿದವರಾಗಿ ಅವಿವೇಕಿಗಳಾಗಿ ಶರೀರದಲ್ಲಿರುವ ಇಂದ್ರಿಯ ಸಮುದಾಯವನ್ನೂ ಮತ್ತು ನನ್ನನ್ನೂ ಕ್ಲೇಶಗೊಳಿಸುತ್ತಿರುವರೋ ಮತ್ತು ಶಾಸ್ತ್ರವಿಹಿತವಲ್ಲದ ಘೋರವಾದ ತಪಸ್ಸನ್ನು ಮಾಡುತ್ತಿರುವರೋ ಅಂತಹವರನ್ನು ಅಸುರೀಬುದ್ಧಿಯುಳ್ಳವರೆಂದು ತಿಳಿ”.  

        ದೇವಿಯನ್ನು ಪೂಜಿಸುವಾಗ ಯಾರೂ ಅವನ ದೇಹಕ್ಕೆ ಹಾನಿಯುಂಟು ಮಾಡಿಕೊಳ್ಳಬಾರದು ಇದು ತನ್ನ ಅಂತರಾತ್ಮದೊಳಗಿರುವ ದೇವಿಗೇ ಹಾನಿಯುಂಟು ಮಾಡಿದಂತೆ (ಆಕೆಗೆ ಹಾನಿಮಾಡಲಾಗದೆನ್ನುವುದು ನಿಜವಾದರೂ ಸಹ ಒಬ್ಬನು ದೈವದೊಂದಿಗೆ ಅಂತಹ ದಿವ್ಯವಾದ ತಾದಾತ್ಮ್ಯ ಭಾವವನ್ನು ಬೆಳೆಸಿಕೊಳ್ಳಬೇಕು, ತನ್ಮೂಲಕ ಆತ್ಮ ಸಾಕ್ಷಾತ್ಕಾರವು ತನ್ನಷ್ಟಕ್ಕೆ ತಾನೇ ಆಗುತ್ತದೆ). ಕೇವಲ ಉಪವಾಸವಿರುವುದರಿಂದ ಮತ್ತು ಕಠಿಣ ವ್ರತಾಚರಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ಇದರರ್ಥ ಒಬ್ಬನು ಹೊಟ್ಟೆಬಾಕನಾಗಿ ಇರಬಹುದೆಂದಲ್ಲ. ಅಂತಿಮವಾಗಿ, ಧ್ಯಾನದೊಂದಿಗೆ ಮಧ್ಯಮ ಮಾರ್ಗವು ಆತ್ಮಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುತ್ತದೆ.

Subhakarī सुभकरी (682)

೬೮೨. ಶುಭಕರೀ

          ಕಠಿಣ ವ್ರತಾಚರಣೆಗಳನ್ನು ಕೈಗೊಳ್ಳದಿದ್ದರೆ ದೇವಿಯು ನಮಗೆ ಹಾನಿಯುಂಟು ಮಾಡಬಹುದೆಂಬ ಅನುಮಾನಗಳನ್ನು ಒಬ್ಬರು ನೀರೆರದು ಪೋಷಿಸಿಕೊಳ್ಳಬಹುದು. ಈ ವಿಧವಾದ ಗೊಂದಲವನ್ನು ಹೋಗಲಾಡಿಸಲು, ವಾಗ್ದೇವಿಗಳು ಈ ನಾಮವನ್ನು ಇಲ್ಲಿ ಇರಿಸಿದ್ದಾರೆ. ಈ ನಾಮವು ದೇವಿಯನ್ನು ತಪ್ಪುತಪ್ಪಾಗಿ ಪೂಜಿಸಿದರೂ ಸಹ ಆಕೆಯು ತನ್ನ ಭಕ್ತರಿಗೆ ಕೇವಲ ಒಳ್ಳೆಯದನ್ನು ಅಥವಾ ಮಂಗಳಕರವಾದುದನ್ನು ಮಾಡುತ್ತಾಳೆ. ಎಷ್ಟೇ ಆಗಲಿ ಆಕೆಯು ಶ್ರೀ ಮಾತೆಯಲ್ಲವೇ? ಆಕೆಯ ಪೂಜೆಯಲ್ಲಿ ನಿಜವಾಗಿ ಬೇಕಾಗಿರುವುದು ಅವಳ ಬಗೆಗಿನ ನಿಜವಾದ ಒಲವು. ಕೇವಲ ದೇವಿಯ ಆಲೋಚನೆಯೇ ಮಂಗಳವನ್ನುಂಟು ಮಾಡುತ್ತದೆ.

          ಶಿವ ಎಂದರೆ ಮಂಗಳವನ್ನುಂಟು ಮಾಡುವವನು. ದೇವಿಯು ಶಿವನ ಸಂಗಾತಿಯಾಗಿರುವುದರಿಂದ ಆಕೆಯು ಸಹಜವಾಗಿಯೇ ಶುಭಕರವಾದುದನ್ನು ಕೊಡಮಾಡುತ್ತಾಳೆ.

Śobhanā-sulabhā-gatiḥ शोभना-सुलभा-गतिः (683)

೬೮೩. ಶೋಭನಾ-ಸುಲಭಾ-ಗತಿಃ

          ಈ ನಾಮವು ಹಿಂದಿನ ನಾಮದ ವಿಸ್ತರಣೆಯಾಗಿದೆ. ದೇವಿಯು ನಮಗೆ ಯಾವ ವಿಧವಾದ ಶುಭವನ್ನುಂಟು ಮಾಡುತ್ತಾಳೆ? ಈ ನಾಮವು ಅದಕ್ಕೆ ಉತ್ತರವಾಗಿದೆ. ಶೋಭನಾ ಎಂದರೆ ಮಂಗಳಕರವಾದದ್ದು ಅಥವಾ ಶುಭಪ್ರದವಾದದ್ದು (ಇದರ ಗೂಡಾರ್ಥವು ಮುಕ್ತಿಯಾಗಿದೆ). ಸುಲಭ ಎಂದರೆ ಯಾವುದೇ ವಿಧವಾದ ತೊಂದರೆಯಿಲ್ಲದೇ ಆಕೆಯನ್ನು ಪಡೆಯಬಹುದು ಅಥವಾ ಹೊಂದಬಹುದು ಮತ್ತು ಗತಿ ಎಂದರೆ ಮಾರ್ಗ. ದೇವಿಯನ್ನು ಸುಲಭವಾಗಿ ಪೂಜಿಸುವ ಮಾರ್ಗದಿಂದ ಸದ್ಗತಿಯನ್ನು ಅಥವಾ ಮುಕ್ತಿಯನ್ನು ಪಡೆಯಬಹುದು. ತಾಂತ್ರಿಕವಾಗಿ ಮೋಕ್ಷ ಮತ್ತು ಮುಕ್ತಿ ಇವೆರಡೂ ಬೇರೆ. ಮೋಕ್ಷದಲ್ಲಿ ಒಂದು ಜೀವಿಯು ತನ್ನ ಪುಣ್ಯ ವಿಶೇಷದ ಆಧಾರದ ಮೇಲೆ ಹಲವು ಕಾಲ ಸ್ವರ್ಗದಲ್ಲಿರಬಹುದು. ಒಮ್ಮೆ ಈ ಪುಣ್ಯ ವಿಶೇಷವು ಮುಗಿದ ಮೇಲೆ ಆ ಜೀವಿಯು ತನ್ನ ಕರ್ಮ ಶೇಷದ ಆಧಾರದ ಮೇಲೆ ಪುನಃ ಹುಟ್ಟ ಬೇಕಾಗುವುದು. ಆದರೆ ಮುಕ್ತಿಯಲ್ಲಿ ಆತ್ಮವು ನಿತ್ಯ ಸ್ವಾತಂತ್ರ್ಯವನ್ನು ಜನನ ಮತ್ತು ಮರಣಗಳಿಂದ ಬಿಡುಗಡೆಯನ್ನು ಪಡೆಯುತ್ತದೆ; ಬ್ರಹ್ಮದೊಳಗೆ ಐಕ್ಯವಾಗಿ.

         ೪೬೨ನೇ ನಾಮವು ಶೋಭನಾ ಆಗಿದೆ ಅಲ್ಲಿ ಸೌಂದರ್ಯವು ಪವಿತ್ರತೆಯಿಂದ ಕೂಡಿದೆ ಎನ್ನುವ ಅರ್ಥವನ್ನು ಹೊಂದಿದೆ. ನಾಮ ೯೭೨ ಸಹ ಆಶೋಭನಾ ಅದು ಸಹ ಸುಂದರ ಎನ್ನುವ ಅರ್ಥವನ್ನು ಕೊಡುತ್ತದೆ. ಶೋಭನ ಎಂದರೆ ಸಂಸ್ಕೃತದಲ್ಲಿ ಹೊಳೆಯುವ, ಕಣ್ಣು ಕೋರೈಸುವ, ಸುಂದರವಾದ, ಚೆಲುವಾದ, ಒಳ್ಳೆಯದಾದ, ಶುಭಕರವಾದ, ಪವಿತ್ರವಾದ, ಮಂಗಳಕರವಾದ, ಕಳೆಯಿಂದ ಕೂಡಿದ, ಪ್ರಕಾಶಿಸುವ, ಮೊದಲಾದ ಅರ್ಥಗಳನ್ನು ಹೊಂದಿದೆ. ಈ ಸಹಸ್ರನಾಮದಲ್ಲಿ ವಾಗ್ದೇವಿಗಳು ಶೋಭನಾ ಪದವನ್ನು ಮೂರು ಬಾರಿ ಉಪಯೋಗಿಸಿದ್ದಾರೆ ಮತ್ತು ಅವೆಲ್ಲಕ್ಕೂ ವಿವಿಧ ಅರ್ಥಗಳಿವೆ.

         ಕೆಲವರು ಈ ನಾಮವನ್ನು ಎರಡು ನಾಮಗಳಾಗಿ ವಿಭಜಿಸುತ್ತಾರೆ. ಶೋಭನಾ ಮತ್ತು ಸುಲಭಾ-ಗತಿಃ ಎಂದು. ಇನ್ನೂ ಕೆಲವರು ಈ ನಾಮವನ್ನು ಮೂರು ನಾಮಗಳಾಗಿ, ಶೋಭನಾ, ಸುಲಭಾ ಮತ್ತು ಅಗತಿಃ ಎಂದು ವಿಭಜಿಸುತ್ತಾರೆ. ಅವರು ಈ ನಾಮವನ್ನು ಯಾವುದೇ ವಿಧವಾಗಿ ವಿಭಾಗಿಸಿದರೂ ಸಹ ಅರ್ಥದಲ್ಲಿ ಮಹತ್ತರವಾದ ವ್ಯತ್ಯಾಸವು ಉಂಟಾಗುವುದಿಲ್ಲ.

        ಒಬ್ಬನು ಸೂಕ್ತ ಗುರುವಿನ ಮೂಲಕ ಪಂಚದಶೀ ಮತ್ತು ಷೋಡಶೀ ಮಂತ್ರಗಳ ಉಪದೇಶವನ್ನು ಪಡೆದರೆ ಅವನಿಗೆ ಪುನರ್ಜನ್ಮದಿಂದ ಮುಕ್ತಿಯುಂಟಾಗುತ್ತದೆ ಎಂದು ಹೇಳಲಾಗುತ್ತದೆ.

                                                                                  ******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 677 - 683 http://www.manblunder.com/2010/04/lalitha-sahasranamam-677-683.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Fri, 11/08/2013 - 21:43

ಶ್ರೀಧರರೆ, "೧೫೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ಧ :-)
.
ಲಲಿತಾ ಸಹಸ್ರನಾಮ ೬೭೭ - ೬೮೩
______________________________
.
೬೭೭. ಬಲಿ-ಪ್ರಿಯಾ
ಮನಸ್ಸು ಇಂದ್ರಿಯಗಳೆ ಆಂತರಿಕ ಶತ್ರು, ಬೇಕು ದೃಢಕಾಯ ದೃಢಮನ
ಜಯಿಸಿದವರೆ ಬಲಿಗಳು, ನಿತ್ಯಬಲಿಗರ್ಪಿತ ಆಹಾರಭಾಗವೆ ಭೂತಯಜ್ಞ
ಬ್ರಹ್ಮಾನಂದ ಹೊಂದೊ ಪರಿಕರ ಕಟ್ಟುಮಸ್ತಿನ ಶಕ್ತಿಯುತ ತನು ಹೃದಯ
ದೈಹಿಕ ಮಾನಸಿಕ ಬಲಿಷ್ಠ, ಬಲಿಯರ್ಪಣೆ ಸಂತುಷ್ಟೆ ದೇವಿ ಬಲಿ-ಪ್ರಿಯಾ ||
.
೬೭೮. ಭಾಷಾ-ರೂಪಾ
ಕಲಿಕೆಯ ಮೂಲ ಭಾಷೆ, ಶಬ್ದಮುಖೇನ ಜೀರ್ಣಿಸುವ ಸಾಧನ
ಕಲಿತರ್ಥವಾಗಿಸುವ ಮೂಲ ಲಲಿತೆ, ಶಬ್ದಬ್ರಹ್ಮವಾಗಿಹ ಘನ
ಶಬ್ದವೆ ಶಕ್ತಿ ಅದರರ್ಥ ಶಿವ, ಬೇರ್ಪಡೆ ಅರ್ಥರಹಿತ ಶಬ್ದರೂಪ
ಬೇರ್ಪಡದಾ ಐಕ್ಯತೆ ಪರಸ್ಪರಾವಲಂಬಿಕೆ, ದೇವಿ ಭಾಷಾ-ರೂಪ ||
.
೬೭೯. ಬೃಹತ್-ಸೇನಾ
ಭಂಢಾಸುರರೆ ತುಂಬಿಹ ಜಗ, ಅಂತರಂಗ ಬಹಿರಂಗದಲಿ ಕದನ
ನಿರಂತರದೆಲ್ಲವನು ಜಯಿಸೆ, ಕಟ್ಟಿಹಳು ಲಲಿತೆ ಬೃಹತ್ ಸೇನಾ
ತನುಮನ ಶಕ್ತಿ, ಬಲಾಡ್ಯತೆ, ದೃಢಕಾಯತೆ,ಕಟ್ಟು ಮಸ್ತು ಸೈನಿಕ
ಪ್ರಪಂಚ ಪರಿಪಾಲನೆಗಿಹರವಿರತ, ಧ್ವಂಸ ಮಾಡಿ ಅಜ್ಞಾನದ ಲೆಕ್ಕ ||
.
೬೮೦. ಭಾವಾಭಾವ-ವಿವರ್ಜಿತಾ
ಇರುವಿಕೆ ಭಾವ ಇಲ್ಲದಿರುವಿಕೆ ಅಭಾವ, ಭಾವಾಭಾವ ಮುಕ್ತೆ ಲಲಿತೆ
ಪ್ರಯೋಗಶೀಲತೆ ಗಮನಿಸುವಿಕೆ ಭಾವ, ಮಾಯೆ ಅಭಾವ ತರಿಸುತೆ
ಇದ್ದೂ ಇಲ್ಲದ ಬ್ರಹ್ಮ ನಿತ್ಯಳವಿನಾಶಿನಿ, ಪರಿಮಿತಳೂ ಆಗಿಹ ಮಾಯೆ
ಜೀವಿ ಬ್ರಹ್ಮ ಒಂದಾಗಿಹ ಅದ್ವೈತದೆ, ಎರಡೂ ಅವಳಾಗಿರುವ ಪ್ರಕ್ರಿಯೆ ||
.
ಅಭಾವದೆ ನಾಲ್ಕುವಿಧ, ಪ್ರಾಗ್ಭಾವದೆ ನೂಲಿನ್ನೂ ಬಟ್ಟೆಯಾಗದ ಸ್ಥಿತಿ
ಧ್ವಂಸಾಭಾವ ನೂಲನೆ ನುಂಗಿ, ಬಟ್ಟೆಯಾಗಿ ನೈಜ್ಯರೂಪವಿರದ ರೀತಿ
ಅತ್ಯಂತಾಭಾವ ಬ್ರಹ್ಮದ ಸ್ವತ್ತೆ, ಸಂಪೂರ್ಣ ಇಲ್ಲದಿರುವಿಕೆ ಬ್ರಹ್ಮಕಷ್ಟೆ
ಅನ್ಯೋನ್ಯಾಭಾವದೆ ಪರಸ್ಪರವಿರದ 'ನೇತಿ ನೇತಿ' ಮಡಿಕೆಯಲಿ ಬಟ್ಟೆ ||
.
ಬ್ರಹ್ಮವನರಿವಪರಿ 'ಇದಲ್ಲ ಇದಲ್ಲ' 'ಇದು ಅದಲ್ಲ'ವೆನುತದ್ವೈತವರಿ
ಒಂದಾಗಿಹ ಜೀವಿ-ಬ್ರಹ್ಮರ ಮರೆಮಾಚಿಸೊ ಅವಿದ್ಯೆ, ಅಜ್ಞಾನ ಕಮರಿ
ಇಂದ್ರಿಯ, ತರ್ಕ ಗ್ರಹಿಸಲಸದಳ ಅಭಾವ, ಅರಿವದಾರಿ ಅಗ್ರಾಹ್ಯತೆ
ಅಸ್ತಿತ್ವದಲಿಹುದ ಸಾಕ್ಷಾತ್ಕರಿಸೊ, ಆಂತರಿಕ ಅರಿವಿನ ಸೂತ್ರ ಲಭ್ಯತೆ ||
.
೬೮೧. ಸುಖಾರಾಧ್ಯಾ
ದೇಹವ ದಂಡಿಸಿ ಪೂಜಿಸೆ, ಹಾನಿಯಾದಂತಲ್ಲವೆ ಒಳಗಿಹ ಲಲಿತೆಗೆ
ಅತಿರೇಖವಿಲ್ಲದ ಆರೋಗ್ಯಪೂರ್ಣ ತನು, ಬೇಕು ಆತ್ಮಸಾಕ್ಷಾತ್ಕಾರಕೆ
ದೇಹ ಗುಡಿ, ಹೃದಯ ಚಕ್ರದಲಿ ಬ್ರಹ್ಮಾತ್ಮ ವಿಗ್ರಹವಾಗಿ ಸುಖಾರಾಧ್ಯ
ಅಷಾಡಭೂತಿ, ಡಂಭಾಚಾರವಿರದ ಭಕ್ತರಿಗೆ ಲಲಿತೆಯನೊಲಿಸೆ ಸಾಧ್ಯ ||
.
೬೮೨. ಶುಭಕರೀ
ಕಠಿಣ ವ್ರತಾಚರಣೆಯ ನಂಬಿಕೆ ಮಾಡದಿರೆ ಹಾನಿಯ ಹೆದರಿಕೆ
ಹೋಗಲಾಡಿಸೆ ಶುಭಕರೀ ಹೆಸರಲಿ, ತಪ್ಪು ಪೂಜೆಗು ಒಲಿವಾಕೆ
ಶ್ರೀಮಾತೆ ದೇವಿ ಮಂಗಳದಾಯಿನಿ, ಓಲೈಕೆಗಾಲೋಚನೆ ಸಾಕು
ಮಂಗಳಕರ ಶಿವನರ್ಧಾಂಗಿ ಶುಭಕರೀ ಸಹಜದಲಳಿಸಿ ತೊಡಕು ||
.
೬೮೩. ಶೋಭನಾ-ಸುಲಭಾ-ಗತಿಃ
ಶೋಭನಾ ಗೂಢಾರ್ಥ ಮುಕ್ತಿ, ಸುಲಭದೆ ಗಳಿಸುವ ಮಾರ್ಗ ದೇವಿ ಪೂಜೆ
ಪುಣ್ಯವಿಶೇಷ ಕರಗೊತನಕ ಮೋಕ್ಷ, ಸ್ವರ್ಗಕಾಲ ಕಳೆದು ಜಸಿಸೊ ಗೋಜೆ
ಮುಕ್ತಿ ನಿತ್ಯ ಸ್ವಾತ್ಯಂತ್ರ, ಜನನ ಮರಣ ಚಕ್ರ ಬಿಡುಗಡೆ ಬ್ರಹ್ಮೈಕ್ಯದ ಸದ್ಗತಿ
ಸೂಕ್ತ ಗುರುವಲಿ ಮಂತ್ರೋಪದೇಶ ಜತೆ ಮುಕ್ತಿಗೆ ಶೋಭನಾ ಸುಲಭಾ ಗತಿಃ ||
.
.
- ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Submitted by ಗಣೇಶ Fri, 11/08/2013 - 23:15

ಶ್ರೀಧರ್‌ಜಿ, ಬಲಿಪ್ರಿಯದ ( http://sampada.net/blog/%E0%B2%A6%E0%B3%87%E0%B2%B5%E0%B2%B0%E0%B3%81-%E... ) ಅರ್ಥವೇ ಬೇರೆ ಆಯಿತಲ್ಲಾ :)
----"ಬಲಿ ಎಂದರೆ ನಿತ್ಯ ಅರ್ಪಣೆ, ಅಥವಾ ದಿನ ನಿತ್ಯದ ಆಹಾರದಲ್ಲಿ ಒಂದು ಭಾಗವನ್ನು ಎಲ್ಲಾ ಪ್ರಾಣಿಗಳಿಗೆ ಅರ್ಪಿಸುವುದು." ಈ ಅರ್ಥ ಚೆನ್ನಾಗಿದೆ. ಆದರೆ ಒಂದೇ ಪ್ರಾಬ್ಲಂ :-ದಿನ ನಿತ್ಯದ ಆಹಾರದಲ್ಲಿ ಒಂದು ಭಾಗವನ್ನು "ಎಲ್ಲಾ" ಪ್ರಾಣಿಗಳಿಗೆ ಹಂಚುವುದು ಹೇಗೆ? ಅಥವಾ "ಎಲ್ಲಾ ಪ್ರಾಣಿಗೆ ಸಮರ್ಪಯಾಮಿ" ಎಂದು ಹೇಳಿ ಒಂದು ಅಗಳು ಅನ್ನವನ್ನು ಎಲೆ ಪಕ್ಕಕ್ಕೆ ಇಟ್ಟರೆ ಸಾಕಾ? :)
----------" ದೇವಿಯನ್ನು ಯಾವುದೇ ವಿಧವಾದ ಕಷ್ಟಗಳಿಲ್ಲದೇ ಪೂಜಿಸಬಹುದು. ಉದಾಹರಣೆಗೆ, ಉಪವಾಸ, ಬೆಂಕಿಯ ಮೇಲೆ ನಡೆಯುವುದು ಮುಂತಾದವುಗಳನ್ನು ಮಾಡಬೇಕಾಗಿಲ್ಲ. ...." -> ತನ್ನ ಮಗು ಉಪವಾಸವಿರುವುದನ್ನು ಯಾವ ತಾಯಿ ಸಹಿಸಿಯಾಳು. ಅದಕ್ಕೆ ಈ ತರಹ ದೇಹವನ್ನು ದಂಡಿಸಿದರೆ ದೇವಿ ಬೇಗ ಒಲಿಯಬಹುದು ಎಂದು ಭಕ್ತರ ಆಲೋಚನೆ ಇರಬಹುದೇ?
-----"ಕೇವಲ ಉಪವಾಸವಿರುವುದರಿಂದ ಮತ್ತು ಕಠಿಣ ವ್ರತಾಚರಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ಇದರರ್ಥ ಒಬ್ಬನು ಹೊಟ್ಟೆಬಾಕನಾಗಿ ಇರಬಹುದೆಂದಲ್ಲ. ಅಂತಿಮವಾಗಿ, ಧ್ಯಾನದೊಂದಿಗೆ ಮಧ್ಯಮ ಮಾರ್ಗವು ಆತ್ಮಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುತ್ತದೆ."
-> ಸಣ್ಣ ತಿದ್ದುಪಡಿ..."...ಆದರೆ ಇದರರ್ಥ ಒಬ್ಬನು ಹೊಟ್ಟೆಬಾಕನಾಗಿದ್ದರೂ ಪರವಾಗಿಲ್ಲ ಅಂತಿಮವಾಗಿ, ಧ್ಯಾನದೊಂದಿಗೆ...." ಮಾಡಿ :)
ನಾಗೇಶರೆ, ನಿಮ್ಮ ಕವನ ಎಂದಿನಂತೆ ಸೂಪರ್.