೧೫೫. ಲಲಿತಾ ಸಹಸ್ರನಾಮ ೬೮೪ರಿಂದ ೬೯೩ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೮೪-೬೯೩
೬೮೪ರಿಂದ ೬೮೯ನೇ ನಾಮಗಳು ರಾಜ ಶಬ್ದದಿಂದ ಪ್ರಾರಂಭವಾಗುತ್ತವೆ.
Rāja-rājeśvarī राज-राजेश्वरी (684)
೬೮೪. ರಾಜ-ರಾಜೇಶ್ವರೀ
ದೇವಿಯು ರಾಜರೆಂದು ಕರೆಯಲ್ಪಡುವ ಬ್ರಹ್ಮ, ವಿಷ್ಣು ಮತ್ತು ರುದ್ರ ಇವರಿಗೆಲ್ಲಾ ಈಶ್ವರೀ ಆಗಿದ್ದಾಳೆ. ಸಂಪತ್ತಿನ ಅಧಿದೇವತೆಯಾದ ಕುಬೇರನೂ ಸಹ ರಾಜ-ರಾಜ ಎಂದು ಕರೆಯಲ್ಪಡುತ್ತಾನೆ. ಅವನಿಂದಲೂ ದೇವಿಯು ಪೂಜಿಸಲ್ಪಡುವುದರಿಂದ ದೇವಿಯನ್ನು ರಾಜ-ರಾಜೇಶ್ವರೀ ಎಂದು ಕರೆಯಲಾಗಿದೆ. ಶಿವನು ರಾಜರಾಜೇಶ್ವರ ಹಾಗಾಗಿ ಅವನ ಸಂಗಾತಿಯು ರಾಜರಾಜೇಶ್ವರೀ. ಆದಿ ಶಂಕರರು ತಮ್ಮ ಶ್ರೀ ಮಂತ್ರ ಪುಷ್ಪಮಾಲಾ ಎನ್ನುವು ಕೃತಿಯಲ್ಲಿ ರಾಜರಾಜೇಶ್ವರೀ ದೇವಿಯನ್ನು ಈ ವಿಧವಾಗಿ ವರ್ಣಿಸುತ್ತಾರೆ. "ಯಾರು ಪಂಚದಶೀ ಮಂತ್ರದ ಪ್ರತಿಯೊಂದು ಕೂಟದ ಕೊನೆಯ ಬೀಜಾಕ್ಷರವಾಗಿ ಹ್ರೀಂ ಅನ್ನು ಹೊಂದಿದ್ದಾರೋ, ಯಾರು ‘ಸಮಯ’ ಎನ್ನುವ ಮಾನಸಿಕ ಪೂಜೆಯನ್ನು ಇಷ್ಟ ಪಡುತ್ತಾರೆಯೋ, ಯಾರು ಎಲ್ಲಾ ಜೀವಿಗಳನ್ನು ತನ್ನ ಕುಟುಂಬಕ್ಕೆ ಸೇರಿದವರೆಂದು ಭಾವಿಸುತ್ತಾಳೆಯೋ ಮತ್ತು ಹಂಸ ಮಂತ್ರದ (ಅಜಪ ಮಂತ್ರದ) ಮೂಲಕ ತಾಂತ್ರಿಕ ವಿಧಿಯ ಪ್ರಕಾರ ಪೂಜೆಗೊಳ್ಳುತ್ತಾಳೆಯೋ, ಯಾರು ಕರುಣಾಮೂರ್ತಿಯ ರೂಪದಲ್ಲಿದ್ದು ಕಾಮಾಕ್ಷೀ ಎಂದು ಕರೆಯಲ್ಪಡುತ್ತಾಳೋ, ಯಾರು ಷೋಡಶೀ ಮಂತ್ರದ ಶ್ರೀಂ ಬೀಜದ ಮೂಲಕ ತಿಳಿಯಲ್ಪಡುತ್ತಾಳೆಯೋ (ಶ್ರೀಂ ಅನ್ನು ಪಂಚದಶೀ ಮಂತ್ರಕ್ಕೆ ಸೇರಿಸಿದರೆ ಆ ಹದಿನೈದು ಅಕ್ಷರಗಳ ಮಂತ್ರವು ಹದಿನಾರು ಅಕ್ಷರಗಳುಳ್ಳ ಷೋಡಶೀ ಮಂತ್ರವಾಗುತ್ತದೆ. ಆದರೆ ಆಚರಣೆಯಲ್ಲಿ ಷೋಡಶೀ ಮಂತ್ರವನ್ನು ಬೇರೆ ವಿಧದಲ್ಲಿ ಪಠಿಸುತ್ತಾರೆ. ನಾಮ ೫೮೭ನ್ನು ಹೆಚ್ಚಿನ ವಿವರಗಳಿಗೆ ನೋಡಿ), ಯಾರು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ರುದ್ರ ಇವರುಗಳ ಸ್ವರೂಪದಲ್ಲಿದ್ದಾರೋ ಮತ್ತು ಯಾರು ಶ್ರೀ ಚಕ್ರದ ಪೂಜೆಯಿಂದ ಸಂತುಷ್ಟಗೊಳ್ಳುತ್ತಾರೆಯೋ ಆ ರಾಜರಾಜೇಶ್ವರಿಗೆ ನಾನು ನಮಸ್ಕರಿಸುತ್ತೇನೆ".
Rājya-dāyinī राज्य-दायिनी (685)
೬೮೫. ರಾಜ್ಯ-ದಾಯಿನೀ
ರಾಜ್ಯ-ದಾಯಿನೀ ಎಂದರೆ ಯಾರು ವಿಷ್ಣುವಿನ ಲೋಕವಾದ ವೈಕುಂಠದಲ್ಲಿ ಅಥವಾ ಶಿವನ ಲೋಕವಾದ ಕೈಲಾಸದಲ್ಲಿ ವಾಸಿಸುವುದಕ್ಕೆ ಹಕ್ಕುಗಳನ್ನು ದಯಪಾಲಿಸುತ್ತಾಳೆಯೋ ಅವಳು. ದೇವಿಯು ಈ ಸಮಸ್ತ ವಿಶ್ವದ ಆಡಳಿತಾಧಿಕಾರಿಣಿಯಾಗಿರುವುದರಿಂದ, ಜೀವಿಗಳ ಅಂತಿಮ ಗತಿಯನ್ನು ದೇವಿಯು ನಿರ್ಣಯಿಸುತ್ತಾಳೆ. ಯಾವ ಜೀವಿಗಳು ಪುಣ್ಯದ ಕರ್ಮ ಶೇಷವನ್ನು ಹೊಂದಿರುತ್ತಾರೆಯೋ ಅವರು ವೈಕುಂಠ ಮತ್ತು ಕೈಲಾಸದಂತಹ ಸ್ಥಳಗಳಲ್ಲಿ ವಿರಮಿಸುತ್ತಾರೆ. ಇದರರ್ಥ ಆ ಜೀವಿಗಳು ಮತ್ತೆ ಪುನರ್ಜನ್ಮವನ್ನು ತಾಳುವುದಿಲ್ಲ ಎಂದು ಅರ್ಥವಲ್ಲ. ಅವರ ಪುಣ್ಯಕರ್ಮದ ಶೇಷವು ಬರಿದಾದ ಮೇಲೆ ಅವರು ಪುನಃ ಜನಿಸುತ್ತಾರೆ. ಈ ಪ್ರಕ್ರಿಯೆಯನ್ನು ಮೋಕ್ಷವೆನ್ನುತ್ತಾರೆ. ಜೀವಿಯ ಮುಕ್ತಿಯು ಬೇರೆ ವಿಧದ್ದಾಗಿದೆ, ಅಲ್ಲಿ ಜೀವಿಯು ಪರಬ್ರಹ್ಮದೊಡನೆ ಐಕ್ಯವಾಗಿ ಅದು ಪುನರ್ಜನ್ಮವನ್ನು ಮತ್ತೆ ಪಡೆಯುವುದಿಲ್ಲ. ಒಳ್ಳೆಯ ಅಥವಾ ಕೆಟ್ಟ ಕರ್ಮ ಶೇಷವಿಲ್ಲದಿದ್ದರೆ ಮಾತ್ರ ಒಬ್ಬನು ಮುಕ್ತಿಯನ್ನು ಪಡೆಯುತ್ತಾನೆ. ಒಬ್ಬನು ಅತ್ಯಂತ ಕೆಟ್ಟ ಕರ್ಮ ಖಾತೆಯನ್ನು ಹೊಂದಿದ್ದರೆ, ಅವನ ಆತ್ಮವು ನರಕಕ್ಕೆ ಹೋಗಿ ಅಲ್ಲಿ ಯಾತನೆಗಳನ್ನು ಅನುಭವಿಸಿ ಪುನಃ ಜನಿಸುತ್ತದೆ.
Rājya-vallabhā राज्य-वल्लभा (686)
೬೮೬. ರಾಜ್ಯ-ವಲ್ಲಭಾ
ದೇವಿಯು ರಾಜರಾಜೇಶ್ವರಿಯಾಗಿರುವುದರಿಂದ ಆಕೆಯು ಈ ಪ್ರಪಂಚವನ್ನು ಆಳುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಬ್ರಹ್ಮ, ವಿಷ್ಣು, ರುದ್ರ, ಇಂದ್ರ ಮತ್ತು ಇತರೇ ದೇವ-ದೇವಿಯರು ಶ್ರೀ ಲಲಿತೆಯ ಆವಾಸ ಸ್ಥಾನವಾಗಿರುವ ಶ್ರೀ ಚಕ್ರದಲ್ಲಿ ನಿವಸಿಸುತ್ತಾರೆ. ಈ ನಾಮಗಳಲ್ಲಿನ ರಾಜ್ಯ ಶಬ್ದವು ಶ್ರೀ ಚಕ್ರವನ್ನು ಉಲ್ಲೇಖಿಸುತ್ತದೆ ಎಂದು ಹೇಳಬಹುದು; ಅದರಲ್ಲಿ ಇಡೀ ದೇವಾನು ದೇವತೆಗಳ ಸಮೂಹವೇ ವಾಸಿಸುತ್ತದೆ. ದೇವಿಯು, ಸಕಲ ದೇವಾನು ದೇವತೆಗಳ ವಾಸಸ್ಥಾನವಾಗಿರುವ ಶ್ರೀ ಚಕ್ರದ ಪರಿಪಾಲಕಳಾಗಿದ್ದಾಳೆ. ಈ ನಾಮವು ೬೮೪ನೇ ನಾಮದ ಸಂಗತಿಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ.
Rājat-kṛpā राजत्-कृपा (687)
೬೮೭. ರಾಜತ್-ಕೃಪಾ
ದೇವಿಯು ಕರುಣೆಯನ್ನು ಹೊರಸೂಸುವ ವಿಗ್ರಹವಾಗಿದ್ದಾಳೆ (ಕರುಣೆಯನ್ನು ಸ್ಪುರಿಸುವ ಮೂರ್ತಿಯಾಗಿದ್ದಾಳೆ); ಇದು ಶ್ರೀ ಮಾತೆಯ ಪ್ರಾಥಮಿಕ ಲಕ್ಷಣವಾಗಿದೆ. ಕೃಪೆ ಎಂದರೆ ಕರುಣೆ.
Rājapīṭha-niveśita-nijāśritā राजपीठ-निवेशित-निजाश्रिता (688)
೬೮೮. ರಾಜಪೀಠ-ನಿವೇಶಿತ-ನಿಜಾಶ್ರಿತಾ
ದೇವಿಯು ತನ್ನ ಭಕ್ತರನ್ನು ಸಿಂಹಾಸನದ ಮೇಲೆ ಅಧಿಷ್ಠಾನಗೊಳಿಸುತ್ತಾಳೆ. ಶ್ರೀ ದೇವಿ ಮಹಾತ್ಮ್ಯದಲ್ಲಿ, (೨೫.೧೯ರಿಂದ ೨೧) ದೇವಿಯು ಯಾರು ಅವಳಿಗೆ ಶರಣಾಗತರಾಗಿದ್ದರೋ ಅವರಿಗೆ ಸಿಂಹಾಸವನ್ನು ಕೊಡಿಸಿದ್ದಳು ಎಂದು ಹೇಳಲಾಗಿದೆ. ಸಿಂಹಾಸನದಂತಹ ಪ್ರಾಪಂಚಿಕ ಸಂಪದಗಳನ್ನು ಕೊಟ್ಟು ಒಬ್ಬನು ಪ್ರಾಪಂಚಿಕ ವಸ್ತುಗಳಿಗೆ ಆಕರ್ಷಿತನಾಗುವುದರ ಬಗೆಗೆ ದೇವಿಯು ಅವನ ನಿಗ್ರಹ ಶಕ್ತಿಯನ್ನು ಪರೀಕ್ಷಿಸುತ್ತಾಳೆ. ಒಬ್ಬನು ಅಂತಹ ಪ್ರಾಪಂಚಿಕ ವಸ್ತುಗಳನ್ನು ತಿರಸ್ಕರಿಸುವುದನ್ನು ಆಯ್ದುಕೊಂಡರೆ, ದೇವಿಯು ತನ್ನ ಸಾಮ್ರಾಜ್ಯದಲ್ಲಿ ಅವನಿಗೆ ಸ್ಥಾನವನ್ನು ಕೊಡುತ್ತಾಳೆ. ಈ ವಿಧವಾಗಿ ಬೇರೆ ಬೇರೆ ದೇವ-ದೇವಿಯರು ಶ್ರೀ ಚಕ್ರದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ನಾಮ ೬೯೩ರಲ್ಲಿ ಛಾಂದೋಗ್ಯ ಉಪನಿಷತ್ತಿನ ವಾಕ್ಯವನ್ನು ನೋಡಿ.
Rājayalakṣmīḥ राजयलक्ष्मीः (689)
೬೮೯. ರಾಜ್ಯಲಕ್ಷ್ಮೀಃ
ಈ ಸಮಸ್ತ ವಿಶ್ವವು ದೇವಿಯ ರಾಜ್ಯ ಅಥವಾ ಸಾಮ್ರಾಜ್ಯವಾಗಿದೆ. ಆಕೆಯ ರಾಜ್ಯಕ್ಕೆ ಎಲ್ಲೆಗಳಿಲ್ಲ, ಏಕೆಂದರೆ ಪ್ರಪಂಚದ ಗಡಿಯು ಅನಂತವಾಗಿದ್ದು ಮಾನವನ ಬುದ್ಧಿಮತ್ತೆಗೆ ನಿಲುಕದ್ದಾಗಿದೆ. ದೇವಿಯು ಈ ಸಮಸ್ತ ಪ್ರಪಂಚದ ಸಂಪದವನ್ನು ಕೈಯ್ಯಲ್ಲಿ ಹಿಡಿದಿದ್ದಾಳೆ. ಈ ನಾಮವು ರಾಜರಾಜೇಶ್ವರೀ ಎನ್ನುವ ೬೮೪ನೇ ನಾಮದಿಂದ ಹೊರಹೊಮ್ಮಿ ದೇವಿಯೇ ಏಕೈಕ ಪರಮೋನ್ನತ ಅಧಿಕಾರಿಣಿಯಾಗಿರುವುದರಿಂದ ಆಕೆಯು ಈ ಸಮಸ್ತ ಪ್ರಪಂಚದ ಸಂಪತ್ತನ್ನು ನಿಯಂತ್ರಿಸುತ್ತಾಳೆ ಎಂದು ಸೂಚಿಸುತ್ತದೆ.
Kośanāthā कोशनाथा (690)
೬೯೦. ಕೋಶನಾಥಾ
ಕೋಶವೆಂದರೆ ರಾಜ್ಯದ ಸಂಪತ್ತು. ದೇವಿಯು ವಿವಧ ರಾಜ್ಯಗಳ ಮೇಲೆ ಸಮಸ್ತ ಅಧಿಕಾರವನ್ನು ಹೊಂದಿರುವುದರಿಂದ ಆಕೆಯನ್ನು ಕೋಶನಾಥಾ ಎಂದು ಕರೆಯಲಾಗಿದೆ.
ಕೋಶವೆಂದರೆ ಭೌತಿಕ ಕಾಯದ ಪೊರೆಗಳು ಎಂದೂ ಅರ್ಥ. ವೇದಾಂತ ತತ್ವದ ಪ್ರಕಾರ, ಈ ಮಾನವ ಆತ್ಮವನ್ನು ಐದು ವಿಧವಾದ ಪೊರೆಗಳು ಆವರಿಸಿವೆ. ನಾಮ ೪೨೮ರಲ್ಲಿ ಐದು ವಿಧವಾದ ಕೋಶಗಳು ಅಥವಾ ಹೊದಿಕೆಗಳನ್ನು ಕುರಿತಾಗಿ ಚರ್ಚಿಸಲಾಗಿತ್ತು. ಅವೆಂದರೆ, ಆನಂದಮಯ ಕೋಶ, ವಿಜ್ಞಾನಮಯ ಕೋಶ, ಮನೋಮಯ ಕೋಶ, ಪ್ರಾಣಮಯ ಕೋಶ ಮತ್ತು ಅನ್ನಮಯ ಕೋಶ. ನಮ್ಮ ದೇಹದಲ್ಲಿರುವ ಸ್ವಯಂಪ್ರಕಾಶಿತ ಆತ್ಮವು ಈ ಐದು ವಿಧವಾದ ಹೊದಿಕೆಗಳಿಂದ ಆವೃತಗೊಂಡಿದೆ. ದೇವಿಯು ಈ ಪಂಚಕೋಶಗಳ ಹೊದಿಕೆಯೊಳಗಿರುವ ಆತ್ಮದಂತಿದ್ದಾಳೆ.
Caturaṅga-baleśvarī चतुरङग-बलेश्वरी (691)
೬೯೧. ಚತುರಂಗ-ಬಲೇಶ್ವರೀ
ಚತುರಂಗವೆಂದರೆ ನಾಲ್ಕು ವಿಧವಾದ ಬಲಗಳು. ದೇವಿಯು ಪ್ರಚಂಡವಾದ ಕುದುರೆ, ಆನೆ, ರಥ ಮತ್ತು ಪದಾತಿ ದಳಗಳ (ಕಾಲಾಳು) ಸೇನೆಯನ್ನು ಹೊಂದಿದ್ದಾಳೆ. ಆಂತರಿಕವಾಗಿ ಮನಸ್ಸು, ಬುದ್ಧಿ, ಚಿತ್ತ (ಕೆಳಸ್ತರದ ಪ್ರಜ್ಞೆ) ಮತ್ತು ಅಹಂಕಾರಗಳನ್ನೊಳಗೊಂಡ ಅಂತಃಕರಣ(ಒಳಗಿನ ಉಪಕರಣ)ವನ್ನು ಚತುರಂಗ ಬಲವು ಸೂಚಿಸುತ್ತದೆ. ಬಾಹ್ಯವಾಗಿ ಮತ್ತು ಆಂತರಿಕವಾಗಿ ದೇವಿಯು ಸೈನ್ಯವನ್ನು ಮತ್ತು ಅಂತಃಕರಣಗಳೆರಡನ್ನೂ ಆಳುತ್ತಾಳೆ. ವ್ಯಕ್ತಿಯೊಬ್ಬನ ಅಂತಃಕರಣವು ಸೈನ್ಯದಂತೆ ಅತ್ಯಂತ ಬಲಶಾಲಿಯಾಗಿದ್ದು ಅದು ಪ್ರಳಯವನ್ನೇ ಸೃಷ್ಟಿಸಬಲ್ಲುದು.
Sāmrājya-dāyinī साम्राज्य-दायिनी (692)
೬೯೨. ಸಾಮ್ರಾಜ್ಯ-ದಾಯಿನೀ
ನಾಮ ೬೮೫ ರಾಜ್ಯ-ದಾಯಿನೀ ಆದರೆ ಈ ನಾಮವು ಸಾಮ್ರಾಜ್ಯ-ದಾಯಿನೀ ಎಂದು ಹೇಳುತ್ತದೆ. ಸಾಮ್ರಾಜ್ಯವು ರಾಜ್ಯಕ್ಕಿಂತ ದೊಡ್ಡದು. ರಾಜ್ಯವು ಒಬ್ಬ ರಾಜ ಅಥವಾ ರಾಣಿಯಿಂದ ಪಾಲಿಸಲ್ಪಟ್ಟರೆ; ಸಾಮ್ರಾಜ್ಯವು ಅನೇಕ ರಾಜ್ಯಗಳನ್ನು ಒಳಗೊಂಡಿರುತ್ತದೆ. ಬ್ರಹ್ಮ, ವಿಷ್ಣು ಮತ್ತು ಶಿವ ಇವರುಗಳ ಲೋಕಗಳನ್ನು ರಾಜ್ಯಗಳೆಂದು ಪರಿಗಣಿಸಿದರೆ, ಆಕೆಯ ವಾಸಸ್ಥಾನವು ಈ ತ್ರಿಲೋಕಗಳನ್ನು (ಬ್ರಹ್ಮಲೋಕ, ವೈಕುಂಠ ಮತ್ತು ಕೈಲಾಸ) ಮೀರಿಸುವ ಶ್ರೀ ಚಕ್ರವಾಗಿದೆ. ಯಾರು ದೇವಿಯನ್ನು ಶ್ರದ್ಧಾಪೂರ್ವಕವಾಗಿ ಪೂಜಿಸುತ್ತಾರೆಯೋ ಅವರಿಗೆ ದೇವಿಯು ತನ್ನ ಶ್ರೀ ಚಕ್ರದಲ್ಲಿ ಸ್ಥಳವನ್ನು ಕೊಡುತ್ತಾಳೆ. ಶ್ರೀ ಚಕ್ರದ ಒಂಭತ್ತನೆಯ ಮತ್ತು ಹತ್ತನೆಯ ಕೋಟೆಗಳ ಮಧ್ಯದಲ್ಲಿ ಸಿದ್ಧರು (ಋಷಿ ಮುನಿಗಳು) ದೇವಿಯನ್ನು ಸ್ತುತಿಸುತ್ತಾ ವಾಸಿಸುತ್ತಾರೆ. ಆದ್ದರಿಂದ ಸಾಮ್ರಾಜ್ಯವೆಂದರೆ ಶ್ರೀ ಚಕ್ರವಾಗಿದೆ.
ರಾಜಸೂಯ ಎಂದು ಕರೆಯಲ್ಪಡುವ ಯಜ್ಞವೊಂದಿದೆ. ಈ ವಿಧವಾದ ಯಜ್ಞಗಳನ್ನು ಕೇವಲ ಚಕ್ರವರ್ತಿಗಳು ಮತ್ತು ಮಹಾರಾಜರುಗಳು ಮಾತ್ರವೇ ಕೈಗೊಳ್ಳುತ್ತಾರೆ. ಯಾರು ಈ ಯಜ್ಞವನ್ನು ಕೈಗೊಂಡಿರುತ್ತಾರೆಯೋ ಅವರನ್ನು ಸಮ್ರಾಟರೆಂದು ಕರೆಯುತ್ತಾರೆ. ದೇವಿಯು ಸಮ್ರಾಟ್ ಪದವಿಯನ್ನು ಕರುಣಿಸುವವಳಾಗಿದ್ದಾಳೆ, ಏಕೆಂದರೆ ಆಕೆಯ ಕೃಪೆಯಿಲ್ಲದಿದ್ದರೆ ರಾಜಸೂಯ ಯಜ್ಞವನ್ನು ಕೈಗೊಳ್ಳುವುದು ಸಾಧ್ಯವಿಲ್ಲ.
ತೈತ್ತರೀಯ ಉಪನಿಷತ್ತು (೧.೬) ಹೇಳುತ್ತದೆ, "ಆಪ್ನೋತಿ ಸ್ವಾರಾಜ್ಯಮ್" ಅಂದರೆ ತನ್ನನ್ನು ಬ್ರಹ್ಮದೊಂದಿಗೆ ಗುರುತಿಸಿಕೊಳ್ಳುವುದು. ಸಾಮ್ರಾಜ್ಯವು ಯಾರು ಬ್ರಹ್ಮದೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುತ್ತಾರೆಯೋ ಅವರಿಗೆ ಮಾತ್ರ ಸಾಧ್ಯವಾಗುತ್ತದೆ. ಅವರನ್ನು ಆತ್ಮ ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಗಳು ಎನ್ನುತ್ತಾರೆ.
Satyasandhā सत्यसन्धा (693)
೬೯೩. ಸತ್ಯಸಂಧಾ
ದೇವಿಯು ಸತ್ಯದ ಬಗೆಗೆ ಅಚಲವಾದ ನಿಷ್ಠೆಯನ್ನು ಹೊಂದಿದ್ದಾಳೆ ಆದ್ದರಿಂದ ಆಕೆಯು ಎಲ್ಲವನ್ನೂ ಸತ್ಯದ ಆಧಾರದ ಮೇಲೆಯೇ ನಿರ್ಧರಿಸುತ್ತಾಳೆ. ಈ ನಾಮವು ದೇವಿಯ ಆಡಳಿತದಲ್ಲಿ ಸತ್ಯದ ಮಹತ್ವದ ಕುರಿತಾಗಿ ತಿಳಿಸುತ್ತದೆ. ದೇವಿಯು ಕೈಗೊಂಡ ಪ್ರತಿಜ್ಞೆಗಳನ್ನು ಪ್ರಪಂಚದ ಯಾವುದೇ ಶಕ್ತಿಯಿಂದ ಮಣಿಸಲಾಗದು. ದೇವಿಯು ಈ ಪ್ರಪಂಚವನ್ನು ಸುಸ್ಥಿರತೆಯಲ್ಲಿಡಲು ಶ್ರೀ ಮಾತೆಯಾಗಿ ಪ್ರತಿಜ್ಞೆಯನ್ನು ಕೈಗೊಳ್ಳುತ್ತಾಳೆ.
ಛಾಂದೋಗ್ಯ ಉಪನಿಷತ್ತು (೮.೧.೫) ಹೇಳುತ್ತದೆ, "ಸತ್ಯಕಾಮಃ" ಎಂದರೆ ಸತ್ಯದ ಬಗೆಗೆ ಒಲವು ಮತ್ತು "ಸತ್ಯ ಸಂಕಲ್ಪಃ" ಎಂದರೆ ಸತ್ಯಕ್ಕೆ ನಿಷ್ಠರಾಗಿರುವುದು. ಈ ಉಪನಿಷತ್ತು ಮುಂದುವರೆಯುತ್ತಾ ಹೇಳುತ್ತದೆ, "ಅದು ಸತ್ಯದ ಬಗೆಗೆ ಒಲವುಳ್ಳದ್ದು ಮತ್ತು ಅದು ಸತ್ಯನಿಷ್ಠೆಗೆ ಕಾರಣವಾದದ್ದು" (ಅದು ಎಂದರೆ ಬ್ರಹ್ಮ). ಒಬ್ಬ ವ್ಯಕ್ತಿಯು ತಮ್ಮನ್ನು ಪರಿಪಾಲಿಸುವ ದೊರೆಯು ಏನು ಹೇಳುತ್ತಾನೆಯೋ ಅದನ್ನು ಕರಾರುವಾಕ್ಕಾಗಿ ಪಾಲಿಸಿದರೆ, ಅವನು ಅದಕ್ಕೆ ಪ್ರತಿಫಲವಾಗಿ ಸ್ವಲ್ಪ ಭೂಮಿಯನ್ನೋ ಅಥವಾ ಒಂದು ಜಾಗೀರನ್ನೋ ಬಳುವಳಿಯಾಗಿ ಪಡೆಯಬಹದು.
ಶ್ರೀಮದ್ಭಾಗವತವು (೧೦.೩.೨೫) ಹೇಳುತ್ತದೆ, "ನಾವು ನಿನ್ನಲ್ಲಿ ಶರಣು ಬೇಡುತ್ತೇವೆ.......ಯಾವುದರ ಮೂಲಕ ಅತ್ಯುನ್ನತವಾದ ನಿನ್ನನ್ನು ಹೊಂದಬಹುದೋ ಆ ಸತ್ಯವಾಕ್ಕಿಗೆ ಪ್ರೇರಕನಾಗಿರುವವನೇ ಮತ್ತು ಸತ್ಯದ ಬಗೆಗೆ ಸ್ಪಷ್ಟವಾದ ಕಲ್ಪನೆಯನ್ನು ಸಹ ಉಂಟು ಮಾಡುವವನೇ"
ಪ್ರಸ್ತುತ ನಾಮವು ಸತ್ಯಕ್ಕೆ ವಿಪರೀತ ಮಹತ್ವವನ್ನು ಕೊಡುತ್ತದೆ. ವಿಷ್ಣು ಸಹಸ್ರನಾಮ ೫೧೦ ಸಹ ಸತ್ಯಸಂಧಃ ಆಗಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 684 - 693 http://www.manblunder.com/2010/04/lalitha-sahasranamam-684-693.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೫೫. ಲಲಿತಾ ಸಹಸ್ರನಾಮ ೬೮೪ರಿಂದ ೬೯೩ನೇ ನಾಮಗಳ ವಿವರಣೆ
ಶ್ರೀಧರರೆ, "೧೫೫. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೮೪-೬೯೩
________________________________________
.
೬೮೪. ರಾಜ-ರಾಜೇಶ್ವರೀ
ರಾಜ-ರಾಜ ಕುಬೇರ ಪೂಜಿತೆ, ಬ್ರಹ್ಮ-ವಿಷ್ಣು-ರುದ್ರರಿಗೆ ಈಶ್ವರೀ
ರಾಜರಾಜೇಶ್ವರ ಶಿವಸಂಗಾತಿಯಾಗಿ ಲಲಿತೆ, ರಾಜ-ರಾಜೇಶ್ವರೀ
ಚಕ್ರಪೂಜೆಗೆ ಸಂತುಷ್ಟೆ, ಪಂಚದಶೀಕೂಟ ಕೊನೆಬೀಜಾಕ್ಷರ 'ಹ್ರೀಂ'
ಅಜಪ-ಸಮಯ ಪೂಜಾಪ್ರಿಯೆ ಕಾಮಾಕ್ಷಿ, ಷೋಡಶೀಬೀಜ 'ಶ್ರೀಂ' ||
.
೬೮೫. ರಾಜ್ಯ-ದಾಯಿನೀ
ವೈಕುಂಠದೆ ವಿಷ್ಣು, ಕೈಲಾಸಲೋಕದೆ ಶಿವ ವಾಸಿಸಲ್ಹಕ್ಕು ಪರವಾನಗಿ
ದಯಪಾಲಿಸುವ ವಿಶ್ವದಾಡಳಿತಾಧಿಕಾರಿ ಕೊಡುತ ಜೀವಿಗಂತಿಮ ಗತಿ
ಪುಣ್ಯಶೇಷ ಜೀವಿಗೆ ವಿರಮಿಸೆ ಕೈಲಾಸ-ವೈಕುಂಠ, ಪುನರ್ಜನ್ಮ ಮೋಕ್ಷ
ಪಾಪಶೇಷ ನರಕ ಯಾತನೆ ಪುನರ್ಜನ್ಮ, ಶೂನ್ಯಶೇಷಕಷ್ಟೆ ಮುಕ್ತಿಗೆ ದೀಕ್ಷ ||
.
೬೮೬. ರಾಜ್ಯ-ವಲ್ಲಭಾ
ಶ್ರೀ ಚಕ್ರವೆ ರಾಜ್ಯ, ಅದನಾಳುವ ಸಮರ್ಥೆ ರಾಜ್ಯ-ವಲ್ಲಭಾ ಲಲಿತೆ
ಬ್ರಹ್ಮ-ವಿಷ್ಣು-ರುದ್ರ-ಇಂದ್ರಾದಿ ದೇವ-ದೇವಿಯರ ಜತೆ ನಿವಸಿಸುತೆ
ದೇವಾನುದೇವತೆ ಸಮೂಹ ನಿವಾಸ ಶ್ರೀ ಚಕ್ರದ ಪರಿಪಾಲಕಿಯಾಗಿ
ತ್ರಿಮೂರ್ತಿರೂಪಿಣಿ ರಾಜರಾಜೇಶ್ವರಿ ಸಕಲಜಗವೇಕ ಕುಟುಂಬವಾಗಿ ||
.
೬೮೭. ರಾಜತ್-ಕೃಪಾ
ರಾಜ್ಯವಲ್ಲಭಾ ರಾಜರಾಜೇಶ್ವರೀ ಕರುಣೆಯಾ ಮೂರ್ತಿ
ನಿರಂತರ ಹೊರಸೂಸುತಲೆ ಕರುಣಾಳುವೆಂಬ ಕೀರ್ತಿ
ಶ್ರೀಮಾತೆಯ ಪ್ರಾಥಮಿಕ ಲಕ್ಷಣವಾಗಿ ಕರುಣಾರೂಪ
ಕೃಪೆ ತೋರುವ ಪ್ರಕ್ರಿಯೆ ನಿರಂತರದೆ ರಾಜತ್-ಕೃಪಾ ||
.
೬೮೮. ರಾಜಪೀಠ-ನಿವೇಶಿತ-ನಿಜಾಶ್ರಿತಾ
ಪ್ರಾಪಂಚಿಕ ಸುಖ ಸಂಪದ ಸಿಂಹಾಸನದಲಿರಿಸಿ ಶರಣಾಗತರ
ನಿಗ್ರಹಶಕ್ತಿ ಪರೀಕ್ಷಿಸುವಳು ಅಧಿಷ್ಟಾನಗೊಳಿಸುತಲ್ಲಿ ಸಾಧಕರ
ಲೌಕಿಕ ಗೆದ್ದು ತಿರಸ್ಕರಿಸಲದನೆ, ದೇವಿಸಾಮ್ರಾಜ್ಯ ಶ್ರೀಚಕ್ರದತ್ತ
ದೇವ ದೇವಿಯಾಗಿ ಸ್ಥಾನವಿತ್ತ ರಾಜಪೀಠ-ನಿವೇಶಿತ-ನಿಜಾಶ್ರಿತಾ ||
.
೬೮೯. ರಾಜ್ಯಲಕ್ಷ್ಮೀಃ
ರಾಜರಾಜೇಶ್ವರೀ ದೇವಿ ಲಲಿತೆ, ಏಕೈಕ ಪರಮೋನ್ನತ ಅಧಿಕಾರಿಣಿ
ಸಮಸ್ತ ಜಗ ಸಂಪದಕೆಲ್ಲ ಒಡತಿ, ನಿಯಂತ್ರಿಸುತಲಿ ಸಂಪತ್ತಿನ ಗಣಿ
ಸಕಲ ವಿಶ್ವವೆ ಲಲಿತಾ ಸಾಮ್ರಾಜ್ಯ, ಎಲ್ಲೆಗಡಿಗಳಿಲ್ಲದ ಅನಂತವಾಹಿ
ಮನುಜ ಬುದ್ದಿಮತ್ತೆಗೆ ನಿಲುಕದ ವಿಸ್ತಾರದೊಡತಿ, ದೇವಿ ರಾಜ್ಯಲಕ್ಷ್ಮೀಃ ||
.
೬೯೦. ಕೋಶನಾಥಾ
ಸಾಮ್ರಾಜ್ಯದೊಡತಿ ಲಲಿತೆ, ಸಂಪತ್ತಿನ ಕೋಶದಧಿಕಾರಿಣಿ ಕೋಶನಾಥ
ಪಂಚ ವಿಧ ಕೋಶ ಸಂಪದ ಪೊರೆಯಂತಾವರಿಸಿ, ಮಾನವನಾತ್ಮ ಸುತ್ತ
ಅನಂದ-ವಿಜ್ಞಾನ-ಮನೋ-ಪ್ರಾಣ-ಅನ್ನಮಯಾದಿ ಕೋಶಾವೃತ್ತ ಹೊದಿಕೆ
ಪಂಚಕೋಶಗಳೊಳಗಿನ ಆತ್ಮದಂತಿಹಳು ಕೋಶನಾಥಾ ರೂಪದಿ ಲಲಿತೆ ||
.
೬೯೧. ಚತುರಂಗ-ಬಲೇಶ್ವರೀ
ಕುದುರೆ-ಆನೆ-ರಥ-ಪದಾತಿ ದಳ, ಚತುರಂಗ ಸೇನೆಗೊಡತಿ ಲಲಿತೆ
ಮನಸ್ಸು-ಬುದ್ಧಿ-ಚಿತ್ತ-ಅಹಂಕಾರಂತಃಕರಣ ಆಂತರಿಕವಾಗಿ ಆಳುತೆ
ಒಳಗ್ಹೊರಗಿನ ಯುದ್ಧವೆಲ್ಲ ನಿಭಾಯಿಸಿ, ದೇವಿ ಚತುರಂಗ-ಬಲೇಶ್ವರೀ
ಪ್ರಳಯ ಸೃಷ್ಟಿ ಬಲ ವ್ಯಕ್ತಿಯಂತಃಕರಣವೆ ಸೈನ್ಯ, ಲಲಿತೆ ಬಲಸೇರಿ ||
.
೬೯೨. ಸಾಮ್ರಾಜ್ಯ-ದಾಯಿನೀ
ರಾಜರ ರಾಜ್ಯ ಸಮೂಹವೆ ಸಾಮ್ರಾಜ್ಯ, ಆಳುವ ಲಲಿತೆ ಸಾಮ್ರಾಜ್ಯ-ದಾಯಿನೀ
ತ್ರಿಮೂರ್ತಿಲೋಕ ಮೀರಿಸೊ ಶ್ರೀಚಕ್ರ ನಿವಾಸಿನಿ, ಸಾಮ್ರಾಟ ಪದ ಪ್ರದಾಯಿನೀ
ಋಷಿ-ಮುನಿ-ಸಿದ್ಧರ ಸ್ತುತಿ ನಿವಾಸ, ಚಕ್ರದ ಒಂಭತ್ತು ಹತ್ತರ ಕೋಟೆ ನಡುವಲಿ
ಶ್ರದ್ಧಾಪೂರ್ಣ ಭಕ್ತರಿಗೆ ಶ್ರೀಚಕ್ರದಲಿಹುದು ಸ್ಥಾನ, ಬ್ರಹ್ಮವನು ಗುರುತಿಸೆ ತನ್ನಲಿ ||
.
೬೯೩. ಸತ್ಯಸಂಧಾ
ಸತ್ಯಕೆ ವಿಪರೀತ ಮಹತ್ವ, ಬ್ರಹ್ಮ ಹೊಂದುವ ದಾರಿಗೆ ಪ್ರೇರಕ, ಸಾಕಾರ
ಅಚಲ ನಿಷ್ಠೆಯಲಿ ನಿರ್ಧಾರ, ಸತ್ಯದಾಧಾರದೆ ದೇವಿಯ ಅಡಳಿತ ಪೂರ
ಮಣಿಸದಾವ ಶಕ್ತಿ ಅಚಲ ನಿರ್ಧಾರ, ಸತ್ಯದೊಲವು ಸಂಕಲ್ಪ ಸುಸಂಬದ್ಧ
ಜಗಸುಸ್ಥಿತಿಗೆ ಶ್ರೀ ಮಾತೆಯಾಗಿ ಪ್ರತಿಜ್ಞೆ, ಕೈಗೊಳ್ಳುವ ಲಲಿತೆ ಸತ್ಯಸಂಧಾ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು