೧೫೬. ಲಲಿತಾ ಸಹಸ್ರನಾಮ ೬೯೪ರಿಂದ ೭೦೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೯೪ - ೭೦೦
Sāgara-mekhalā सागर-मेखला (694)
೬೯೪. ಸಾಗರ-ಮೇಖಲಾ
ದೇವಿಯು ಸಾಗರಗಳಿಂದ ಮಾಡಿದ ಹಾರವನ್ನು ಧರಿಸಿದ್ದಾಳೆ. ಕಠೋಪನಿಷತ್ತಿನ (೧.೨.೨೦) ಪ್ರಸಿದ್ಧ ಹೇಳಿಕೆಯಾದ, "ಅಣೋಃ ಅಣೀಯಾನ್ ಮಹತಃ ಮಹೀಯಾನ್ अणोः अणीयान् महतः महीयान्" ಅಂದರೆ ಆ ಬ್ರಹ್ಮವು ಅತ್ಯಂತ ಸಣ್ಣದಕ್ಕಿಂತ ಸಣ್ಣದಾಗಿದೆ ಮತ್ತು ಅತ್ಯಂತ ದೊಡ್ಡದಕ್ಕಿಂತ ದೊಡ್ಡದಾಗಿದೆ. ಜೀವಿಗಳ ಗಾತ್ರವು ಯಾವುದೇ ಇರಲಿ ಅವೆಲ್ಲವೂ ಆ ಪರಮಾತ್ಮದಿಂದಲೇ ಹೊರಹೊಮ್ಮಿವೆ. ಈ ಸಂದರ್ಭದಲ್ಲಿ ಈ ನಾಮವು ದೇವಿಯು ಅತ್ಯಂತ ದೊಡ್ಡದಕ್ಕಿಂತ ದೊಡ್ಡವಳೆಂದು ವರ್ಣಿಸುತ್ತದೆ. ಆದ್ದರಿಂದ ವಾಗ್ದೇವಿಗಳು ಅತ್ಯಂತ ದೊಡ್ಡದಾದ ನೀರನ್ನು ಹೊಂದಿರುವ ವಸ್ತುಗಳಾದ ಸಾಗರಗಳು ದೇವಿಯ ಕುತ್ತಿಗೆಯನ್ನು ಅಲಂಕರಿಸುತ್ತವೆ ಎಂದು ಹೇಳುತ್ತಾರೆ. ದೇವಿಯು ಈ ಪ್ರಪಂಚದ ನಿಯಂತ್ರಕಳಾಗಿರುವುದರಿಂದ, ಈ ನಾಮವು ಈ ವಿಶ್ವದ ಒಂದು ಗ್ರಹವಾದ ಭೂಮಿಯ ರೂಪದಲ್ಲಿ ದೇವಿಯು ಇದ್ದಾಳೆಂದೂ ಮತ್ತು ನೀರಿನ ಅನಂತ ಸಾಗರಗಳು ಅವಳ ಕೊರಳನ್ನು ಅಲಂಕರಿಸುತ್ತವೆ ಎಂದು ಬಣ್ಣಿಸಿದ್ದಾರೆ.
ರಾಜರಾಜೇಶ್ವರೀ ಎನ್ನುವ ೬೮೪ನೇ ನಾಮದಿಂದ ಹಿಡಿದು ಈ ನಾಮದವರೆಗೆ ರಾಜರಾಜೇಶ್ವರಿಯ ಗುಣಲಕ್ಷಣಗಳನ್ನು ವಿವರಿಸಲಾಗಿದೆ.
Dīkṣitā दीक्षिता (695)
೬೯೫. ದೀಕ್ಷಿತಾ
ಒಬ್ಬ ಗುರುವು ತನ್ನ ಶಿಷ್ಯರಿಗೆ ದೀಕ್ಷೆಯನ್ನು ಕೊಡಬಹುದು. ದೀಕ್ಷೆಯನ್ನು ಮಂತ್ರೋಪದೇಶ ಎಂದೂ ಸಹ ಹೇಳಲಾಗುತ್ತದೆ. ಶ್ರೀ ವಿದ್ಯಾ ಪಂಗಡದಲ್ಲಿ, ಮೊದಲು ಒಂದು ಮಂತ್ರದ ಉಪದೇಶವನ್ನು ಮಾಡಲಾಗುತ್ತದೆ, ಶಿಷ್ಯನ ಪುರೋಗತಿಯನ್ನು ಗಮನಿಸಿ ಗುರುವು ತನ್ನ ಸ್ವಂತ ನಿರ್ಣಯಕ್ಕನುಸಾರವಾಗಿ ದೀಕ್ಷೆಯನ್ನು ಕೊಡುತ್ತಾನೆ. ದೀಕ್ಷಾ ಸಮಯದಲ್ಲಿ ಶಿಷ್ಯನಿಗೆ ಒಂದು ದೀಕ್ಷಾ ಹೆಸರನ್ನೂ ಕೊಡಲಾಗುತ್ತದೆ; ಉದಾಹರಣೆಗೆ, ಆನಂದಾನಂದ, ಕೃಷ್ಣಾನಂದ ಮೊದಲಾದವು. ನಿಯಮಾನುಸಾರ ಎಲ್ಲಾ ದೀಕ್ಷಾ ಹೆಸರುಗಳು ಪರಮಾನಂದದ ಸ್ಥಿತಿಯನ್ನು ಸೂಚಿಸುವ ’ಆನಂದ’ದಿಂದ ಕೊನೆಗೊಳ್ಳುತ್ತವೆ. ಸಾಮಾನ್ಯವಾಗಿ, ದೀಕ್ಷೆಯನ್ನು ಬ್ರಹ್ಮಸಾಕ್ಷಾತ್ಕಾರಕ್ಕೆ ಅವಶ್ಯವಿರುವ ಒಬ್ಬನ ಜ್ಞಾನವನ್ನು ಆಧರಿಸಿ ಕೊಡಲಾಗುತ್ತದೆ. ಈ ನಾಮವು ದೇವಿಯು ಗುರುವಿನ ಸ್ಥಾನದಲ್ಲಿದ್ದು ದೇವಿಯು ತನ್ನ ಶಿಷ್ಯರಿಗೆ ದೀಕ್ಷೆಯನ್ನು ಕೊಡುತ್ತಾಳೆಂದು ಹೇಳುತ್ತದೆ. ದೇವಿಯ ಗುರುಸ್ಥಾನವನ್ನು ಕುರಿತು ಈಗಾಗಲೇ ೬೦೩ನೇ ನಾಮವಾದ ‘ಗುರುಮೂರ್ತಿಃ’ಯಲ್ಲಿ ಚರ್ಚಿಸಲಾಗಿದೆ. ಮಂತ್ರ ದೀಕ್ಷೆಯ ಸಮಯದಲ್ಲಿ, ಶಿಷ್ಯನ ಪಾಪ ಕರ್ಮಗಳು ನಾಶಹೊಂದುತ್ತವೆ. ದೇವಿಯು ಕರುಣಾಮೂರ್ತಿಯಾಗಿರುವುದರಿಂದ ಆಕೆಯು ತನ್ನ ಭಕ್ತರಿಗೆ ದೀಕ್ಷೆಯನ್ನು ಕೊಡುತ್ತಾಳೆ; ಅವರ ಪಾಪಗಳನ್ನು ಪರಿಹರಿಸಲು. (ಈ ವ್ಯಾಖ್ಯಾನವು ಕರ್ಮ ನಿಯಮ ಅಥವಾ ಬ್ರಹ್ಮವು ತನ್ನ ನಿಯಮಗಳನ್ನು ತಾನೇ ಮೀರುವುದಿಲ್ಲ ಎನ್ನುವ ದೈವ ನಿಯಮಕ್ಕೆ ವಿರುದ್ಧವಾಗಿದೆ. ಕೆಲವೊಮ್ಮೆ ಕಾವ್ಯಾತ್ಮಕತೆಯು ಇಂತಹ ವಿಧವಾದ ವರ್ಣನೆಗಳನ್ನು ಬಳಸಲು ಒಪ್ಪಿಗೆ ನೀಡುತ್ತದೆ). ಈ ನಾಮವು ಬಹುಶಃ ಶ್ರೀ ವಿದ್ಯಾ ದೀಕ್ಷೆಯನ್ನು ಕೊಡುವ ಗುರುವು ದೇವಿಯ ರೂಪದಲ್ಲಿದ್ದಾನೆಂದು ಹೇಳುತ್ತದೆ. ಶ್ರೀ ವಿದ್ಯಾ ಉಪಾಸನೆಯ ಪ್ರಕಾರ ಗುರು, ಮಂತ್ರ ಮತ್ತು ದೇವತೆಗಳು ಭಿನ್ನವಲ್ಲ; ಈ ಮೂರನ್ನೂ ಒಂದೇ ಆಗಿ ಪರಿಗಣಿಸಲಾಗುತ್ತದೆ.
ದೇವಿಯು ಶಿವನಿಂದ ಮಂತ್ರದೀಕ್ಷೆಯನ್ನು ಪಡೆದವಳಾದ್ದರಿಂದ ಆಕೆಯು ದೀಕ್ಷಿತಾ. ಹಿಂದಿನ ನಾಮಗಳಲ್ಲಿ ಈ ಸಮಸ್ತ ಪ್ರಪಂಚಕ್ಕೆ ಅವಳು ಒಡತಿ ಎಂದು ಹೇಳಲಾಗಿದೆ. ಈ ನಾಮವಾದ ದೀಕ್ಷಿತಾವನ್ನು ವಾಗ್ದೇವಿಯರು ಇಲ್ಲಿ ಸೇರಿಸಿರುವ ಕಾರಣವೇನೆಂದರೆ ಬಹುಶಃ ಅವರು ದೇವಿಯು ಈ ಸಮಸ್ತ ಜಗತ್ತನ್ನು ಪರಿಪಾಲಿಸಲು ಅವಶ್ಯವಿರುವ ಸಕಲ ವಿದ್ಯೆಗಳ (ತಂತ್ರಗಳ) ದೀಕ್ಷೆಯನ್ನು ಶಿವನಿಂದ ಪಡೆದುಕೊಂಡಿದ್ದಾಳೆ ಎನ್ನುವುದಾಗಿದೆ.
Daitya-śamanī दैत्य-शमनी (696)
೬೯೬. ದೈತ್ಯ-ಶಮನೀ
ದೇವಿಯು ರಾಕ್ಷಸರ ಸಂಹಾರಕಳು. ರಾಕ್ಷಸರೆಂದರೆ ಆತ್ಮಸಾಕ್ಷಾತ್ಕಾರಕ್ಕೆ ತಡೆಯುಂಟು ಮಾಡುವ ಅಂತರಂಗದಲ್ಲಿನ ದುಷ್ಟ ಶಕ್ತಿಗಳು (ಕಾಮ, ಕ್ರೋಧ, ಮೊದಲಾದವು). ದೇವಿಯು ಅಂತಹ ದುಷ್ಟ ಶಕ್ತಿಗಳನ್ನು ನಾಶಮಾಡುತ್ತಾಳೆ. ದೇವಿಯನ್ನು ಸ್ಮರಿಸಿದರೆ ಸಾಕು; ಆಕೆಯು ಆ ವಿಧವಾದ ಮನೋ ವಿಕಾರಗಳನ್ನು ನಾಶಮಾಡುತ್ತಾಳೆ.
Sarva-loka-vaśankari सर्व-लोक-वशंकरी (697)
೬೯೭. ಸರ್ವ-ಲೋಕ-ವಶಂಕರೀ
ದೇವಿಯು ಎಲ್ಲಾ ಲೋಕಗಳನ್ನು ಶರಣಾಗುವಂತೆ ಮಾಡುತ್ತಾಳೆ. ಗಾಯತ್ರೀ ಮಂತ್ರವು ಮೂರು ಲೋಕಗಳಾದ ಭೂಃ, ಭುವಃ, ಸುವಃ ಇವುಗಳನ್ನು ಕುರಿತಾಗಿ ಹೇಳುತ್ತದೆ. ಆದರೆ ಬ್ರಹ್ಮ ಗಾಯತ್ರೀ ಮಂತ್ರವು ಏಳು ಲೋಕಗಳನ್ನು ಕುರಿತಾಗಿ ಹೇಳುತ್ತದೆ. ಅವೆಂದರೆ ಭೂಃ, ಭುವಃ, ಸುವಃ, ಮಹಃ, ಜನಃ, ತಪಃ ಮತ್ತು ಸತ್ಯಂ. ಸತ್ಯ ಲೋಕವು ಬ್ರಹ್ಮನ ವಾಸಸ್ಥಾನವಾಗಿದೆ ಮತ್ತು ಭೂಃ ಎನ್ನುವುದು ಭೂಮಿಯಾಗಿದೆ. ಒಬ್ಬನು ಅತ್ಯಂತ ಕೆಳಲೋಕವಾದ ‘ಭೂಃ’ವಿನಿಂದ ಪ್ರಾರಂಭಿಸಿ ಅತ್ಯುನ್ನತ ಲೋಕವಾದ ‘ಸತ್ಯಂ’ವರೆಗೆ ಸಾಗಬೇಕು. ಈ ಲೋಕಗಳೆಂದರೆ ಅವು ಪ್ರಜ್ಞೆಯ ವಿವಿಧ ಹಂತಗಳನ್ನು ಸೂಚಿಸುತ್ತವೆ. ದೇವಿಯು ಈ ವಿಶ್ವದ ಪರಮೋನ್ನತ ಪರಿಪಾಲಕಳಾಗಿರುವುದರಿಂದ ಆಕೆಯ ಶರಣಾಗಿಸುವ ಅಧಿಕಾರವನ್ನು ಇಲ್ಲಿ ಒತ್ತು ಕೊಟ್ಟು ಹೇಳಲಾಗಿದೆ.
Sarvārtha-dātrī सर्वार्थ-दात्री (698)
೬೯೮. ಸರ್ವಾರ್ಥ-ದಾತ್ರೀ
ದೇವಿಯು ಮನುಷ್ಯರ ಎಲ್ಲಾ ಆಸೆಗಳನ್ನು ಪೂರೈಸುವವಳಾಗಿದ್ದಾಳೆ. ಮಾನವ ಜೀವನವನ್ನು ನಿರ್ಧಿಷ್ಠವಾದ ಗುರಿಗಳಿಂದ ಕೂಡಿದ ಪುರುಷಾರ್ಥಗಳ ಮೂಲಕ ಸಾಗಿಸುವ ಒಂದು ವಿಶೇಷ ಪದ್ಧತಿಯಿದೆ. ಒಬ್ಬನು ನಾಲ್ಕು ಪುರಷಾರ್ಥಗಳಾದ ಧರ್ಮ. ಅರ್ಥ, ಕಾಮ ಮತ್ತು ಮೋಕ್ಷ ಇವುಗಳಂತೆ ಜೀವಿಸಿದಾಗ ಜೀವನದ ಗುರಿಯು ಪರಿಪೂರ್ಣವಾಗುತ್ತದೆ. ಇವನ್ನೇ ಚತುರ್ವಿಧ ಪುರುಷಾರ್ಥಗಳೆನ್ನುತ್ತಾರೆ. ಮನುಜರು ಏನನ್ನು ಕೋರಿಕೊಳ್ಳುತ್ತಾರೋ ಅದೇ ಪುರುಷಾರ್ಥವೆನ್ನುವುದು ಅದರ ಶಬ್ದಶಃ ಅರ್ಥ. ಈ ನಾಲ್ಕು ಪುರಷಾರ್ಥಗಳಲ್ಲಿ ಧರ್ಮ ಮತ್ತು ಮೋಕ್ಷಗಳು ವೇದಗಳ ಉದ್ದೇಶವಾಗಿದೆ; ಎಕೆಂದರೆ ಅವುಗಳು ಇವೆರಡರ ನಿಜವಾದ ಗುಣಲಕ್ಷಣಗಳನ್ನು ವಿವರಿಸುವುದಲ್ಲದೇ ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತವೆ. ಆದ್ದರಿಂದ ಈ ಎರಡು ಪುರುಷಾರ್ಥಗಳನ್ನು ಉನ್ನತವಾದವುಗಳೆಂದು ಪರಿಗಣಿಸಲಾಗುತ್ತದೆ; ಅವುಗಳ ಆಧ್ಯಾತ್ಮಿಕ ಸ್ವಭಾವದಿಂದಾಗಿ. ಉಳಿದೆರಡು ಪುರಷಾರ್ಥಗಳಾದ ಅರ್ಥ ಮತ್ತು ಕಾಮಗಳು ಖಂಡಿತವಾಗಿಯೂ ಕೆಳಮಟ್ಟದವುಗಳಲ್ಲ. ಆದರೆ ಇವುಗಳನ್ನು ಪಡೆಯಲು ಅನುಸರಿಸುವ ಮಾರ್ಗವು ವ್ಯತ್ಯಾಸವನ್ನುಂಟು ಮಾಡುತ್ತದೆ. ಅವುಗಳನ್ನು ತೃಷೆ ಮತ್ತು ದುರಾಸೆಗಳಿಂದ ಕೈಗೊಂಡರೆ ಅವು ಅಪಾಯಕಾರಿಯಾಗುವುವು ಆದರೆ ಅವುಗಳನ್ನು ಕೇವಲ ಸರಳ ಜೀವನಕ್ಕಾಗಿ ಕೈಗೊಂಡರೆ ಅವುಗಳನ್ನು ಪುಣ್ಯದಾಯಕವಾದವುಗಳೆಂದು ಪರಿಗಣಿಸಲಾಗುತ್ತದೆ.
ಈ ನಾಮವು ದೇವಿಯು ಎಲ್ಲಾ ವಿಧವಾದ ಪುರುಷಾರ್ಥಗಳನ್ನು ಕರುಣಿಸುವವಳೆಂದು ಹೇಳುತ್ತದೆ. ಈ ಪುರುಷಾರ್ಥಗಳನ್ನು ದೇವಿಯು ಮಹಾಸಾಮ್ರಾಜ್ಞಿಯಾದ ರಾಜರಾಜೇಶ್ವರಿಯಾಗಿ (ನಾಮ ೬೮೪) ಮತ್ತು ಶ್ರೀ ಮಾತಾ (ನಾಮ ೧) ಆಗಿ ಅನುಗ್ರಹಿಸುತ್ತಾಳೆ.
Sāvitrī सावित्री (699)
೬೯೯. ಸಾವಿತ್ರೀ
ಸೃಷ್ಟಿಕರ್ತ ಎನ್ನುವ ಅರ್ಥ ಹೊಂದಿರುವ ಸವಿತಾ ಎನ್ನುವ ಶಬ್ದದಿಂದ ಶಿವನನ್ನು ಕರೆಯುತ್ತಾರೆ ಮತ್ತವನ ಪತ್ನಿಯು ಸಾವಿತ್ರೀ ಆಗಿದ್ದಾಳೆ. ಸೂರ್ಯ ಮತ್ತು ಅವನ ಹೆಂಡತಿಯನ್ನೂ ಸಹ ಸವಿತಾ ಮತ್ತು ಸಾವಿತ್ರೀ ಎನ್ನುತ್ತಾರೆ.
ಸಾವಿತ್ರೀ ಉಪನಿಷತ್ ಎನ್ನುವ ಒಂದು ಉಪನಿಷತ್ತೂ ಇದೆ. ಅದು ಅಗ್ನಿಯೇ ಸವಿತಾ ಎನ್ನುತ್ತದೆ ಮತ್ತು ವಾಯುವು ಸಾವಿತ್ರೀ ಎನ್ನುತ್ತದೆ. ನೀರಿನ ಅಧಿದೇವತೆಯಾದ ವರುಣನೂ ಸಹ ಸವಿತಾ ಮತ್ತು ನೀರು ಸಾವಿತ್ರೀ ಆಗಿದೆ, ವಾಯುವು ಸವಿತಾ ಆಗಿದ್ದರೆ ಆಕಾಶವು ಸಾವಿತ್ರೀ ಆಗಿದೆ ಎಂದೂ ಹೇಳುತ್ತದೆ.
ಆದ್ದರಿಂದ ತನ್ಮೂಲಕ ವ್ಯಕ್ತವಾಗುವುದೇನೆಂದರೆ ಸವಿತಾ ಮತ್ತು ಸಾವಿತ್ರೀ ಇವು ಸೃಷ್ಟಿಯನ್ನುಂಟು ಮಾಡುವ ಸಂಯುಕ್ತ ತತ್ವಗಳಾಗಿದ್ದು ಅದರರ್ಥ ಶಿವ ಮತ್ತು ಶಕ್ತಿ ಆಗಿದೆ. ಈ ನಾಮದಲ್ಲಿ ದೇವಿಯನ್ನು ಸೃಷ್ಟಿಕರ್ತಾ ಎಂದು ಸಂಭೋದಿಸಲಾಗಿದೆ. ಈ ನಾಮವು ದೇವಿಯ ಪರಿಶುದ್ಧತೆಯನ್ನೂ ಸಹ ಸೂಚಿಸುವುದರಿಂದ ಆಕೆಯನ್ನು ಎಲ್ಲಾ ದೇವಾನುದೇವತೆಗಳು ಪೂಜಿಸುತ್ತಾರೆ. ಮನಸ್ಸು ಮತ್ತು ಕ್ರಿಯೆಗಳ ಶುದ್ಧತೆಯು ವ್ಯಕ್ತಿಯೊಬ್ಬನ ದೇಹದಲ್ಲಿ ಪ್ರತಿಫಲನಗೊಳ್ಳುತ್ತವೆ ಅದರಲ್ಲೂ ವಿಶೇಷವಾಗಿ ಮುಖದಲ್ಲಿ; ಹಾಗಾಗಿ ಅದು ಅವನನ್ನು ಪೂಜಾರ್ಹನನ್ನಾಗಿಸುತ್ತದೆ.
ದೇವಿಯು ಸವಿತಾ ಎಂದು ಕರೆಯಲ್ಪಡುವ ಸೂರ್ಯನಂತೆ ಪ್ರಜ್ವಲಿಸುವವಳು ಆದ್ದರಿಂದ ಆಕೆಯನ್ನು ಸಾವಿತ್ರೀ ಎಂದು ಕರೆಯಲಾಗಿದೆ. ಈ ವಿಶ್ಲೇಷಣೆಯು ಹೆಚ್ಚು ಅರ್ಥಪೂರ್ಣವೆನಿಸುತ್ತದೆ, ಏಕೆಂದರೆ ಮುಂದಿನ ನಾಮವು ಸಚ್ಚಿದಾನಂದ-ರೂಪಿಣೀ ಆಗಿದೆ.
Saccidānanda-rūpiṇī सच्चिदानन्द-रूपिणी (700)
೭೦೦. ಸಚ್ಚಿದಾನಂದ-ರೂಪಿಣೀ
ದೇವಿಯು ಸತ್-ಚಿತ್-ಆನಂದದ ಸ್ವರೂಪದಲ್ಲಿದ್ದಾಳೆ. ಈ ಮೂರೂ ಗುಣಗಳು ಬ್ರಹ್ಮವನ್ನು ರೂಪಿಸುತ್ತವೆ. ಸತ್ ಎಂದರೆ ಇರುವಿಕೆ, ಚಿತ್ ಎಂದರೆ ಶುದ್ಧ ಚೈತನ್ಯ, ಮತ್ತು ಆನಂದ ಎಂದರೆ ಎಣೆಯಿಲ್ಲದ ಸಂತೋಷ ಅಥವಾ ಪರಮಾನಂದ. ವಾಸ್ತವವಾಗಿ ಈ ಮೂರೂ ಗುಣಗಳು ಬ್ರಹ್ಮದ ಗುಣಗಳಲ್ಲ, ಏಕೆಂದರೆ ಬ್ರಹ್ಮವು ಯಾವುದೇ ವಿಧವಾದ ಗುಣಲಕ್ಷಣಗಳನ್ನು ಹೊಂದಿಲ್ಲ. ಇವು ಬ್ರಹ್ಮದ ತ್ರಿವಿಧವಾದ ಅಂಶಗಳಷ್ಟೇ. ಆದರೆ ಮಾನವನ ದೃಷ್ಟಿಯಲ್ಲಿ ಮಾಯೆಯ ಪ್ರಭಾವದಿಂದಾಗಿ ಅವು ಮೂರು ಭಿನ್ನವಾದ ಲಕ್ಷಣಗಳಾಗಿ ಕಾಣಿಸುತ್ತವೆ. ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ಇವುಗಳು ಒಂದರ ನಂತರ ಒಂದು ಹಾದುಹೋಗುತ್ತವೆ. ಮೊದಲು ಇರುವಿಕೆಯು ಅನುಭವಕ್ಕೆ ಬರುತ್ತದೆ, ಎರಡನೆಯದಾಗಿ ಪ್ರಜ್ಞೆಯ ಸ್ವರೂಪವು (ಚಿತ್ತವು) ಪರಿಶುದ್ಧಗೊಂಡು ಉನ್ನತ ಸ್ಥಾಯಿಯಾದ ಚಿತ್‌ನೆಡೆಗೆ ಕರೆದೊಯ್ಯುತ್ತದೆ ಮತ್ತು ಅಂತಿಮವಾಗಿ ಪರಮಾನಂದದ ಸಾಕ್ಷಾತ್ಕಾರವಾಗುತ್ತದೆ. ಆದ್ದರಿಂದ ಅವುಗಳನ್ನು ಮಾನವನ ಸ್ಥಾಯಿಯಲ್ಲಿ ಪ್ರತ್ಯೇಕ ಅಂಶಗಳೆಂದು ಪರಿಗಣಿಸಲಾಗುತ್ತದೆ. ಇವುಗಳು ಬ್ರಹ್ಮದಲ್ಲಿ ಒಂದೇ ಒಂದು (ಏಕೈಕ) ಅಂಶವಾಗಿ ಅಭಿನ್ನವಾಗಿರುತ್ತವೆ.
ಈ ನಾಮವು ದೇವಿಯ ಪರಬ್ರಹ್ಮಸ್ವರೂಪವನ್ನು ಮತ್ತೊಮ್ಮೆ ದೃಢಪಡಿಸುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 694 - 700 http://www.manblunder.com/2010/04/lalitha-sahasranamam-694-700.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೫೬. ಲಲಿತಾ ಸಹಸ್ರನಾಮ ೬೯೪ರಿಂದ ೭೦೦ನೇ ನಾಮಗಳ ವಿವರಣೆ
ಶ್ರೀಧರರೆ, "೧೫೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೯೪ - ೭೦೦
____________________________________
.
೬೯೪. ಸಾಗರ-ಮೇಖಲಾ
ಕಣದಾ ಕಣ ಬೃಹತ್ತಿನ ಬೃಹತ್ಪರಿಮಾಣ ಬ್ರಹ್ಮದಿಂದಲೆ ಸೃಷ್ಟಿ
ಬೃಹತ್ ಜಲಕೋಶ ಸಾಗರಗಳೆ ಕೊರಳಹಾರಗಳಾಗಿ ಸಮಷ್ಟಿ
ಭೂಮಿರೂಪಲಿಹ ದೇವಿ ಕುತ್ತಿಗೆಯಪ್ಪಿ ಲಲಿತೆ ಸಾಗರಮೇಖಲ
ಜಗ ನಿಯಂತ್ರಕಳಾಗಿ ಸಕಲ ಗ್ರಹದೊಡತಿ ಇಳೆ ರೂಪದ ಜಲ ||
.
೬೯೫. ದೀಕ್ಷಿತಾ
ಜಗದೊಡತಿಗೆ ಜಗಪಾಲಿಸೆ ಬೇಕಿದ್ದೆಲ್ಲ ವಿದ್ಯೆ, ಮಂತ್ರದೀಕ್ಷೆ ರೂಪದಿ ಶಿವನಿತ್ತ
ಸಾಧಕ ಶಿಷ್ಯರಿಗೆ ಗುರುವಾಗಿ ಕೊಡುವಾ ದೀಕ್ಷೆ, ಗುರು ರೂಪದಲಿಹ ದೀಕ್ಷಿತಾ
ಬ್ರಹ್ಮಜ್ಞಾನದನುಸಾರ ಗುರು ನಿರ್ಧಾರ, ಹೊಸ ಹೆಸರ ಜತೆ ಮಂತ್ರೋಪದೇಶ
ಕರ್ಮಶೇಷಗಳೆಲ್ಲ ನಿರ್ನಾಮ ದೀಕ್ಷೆಯಲಿ, ಬ್ರಹ್ಮ ನಿಯಮ ಮೀರಿ ಗುರುದೀಕ್ಷಾ ||
.
೬೯೬. ದೈತ್ಯ-ಶಮನೀ
ಕಾಮ ಕ್ರೋಧಾದಿ ರಾಕ್ಷಸರು ಅಂತರಂಗದ ದುಷ್ಟ ಶಕ್ತಿಗಳು
ಅತ್ಮ ಸಾಕ್ಷಾತ್ಕಾರಕೆ ತಡೆಯುಂಟು ಮಾಡುವವಿ ದೈತ್ಯಗಳು
ಸ್ಮರಣೆಯಿಂದಲೆ ದೇವಿ ಮನೋವಿಕಾರ ಸಂಹರಿಸುತೆ ಜನನಿ
ಬಾಹ್ಯಾಂತರಂಗ ದುಷ್ಟಶಕ್ತಿ ದಮನಿಸಿ,ಲಲಿತೆ ದೈತ್ಯ ಶಮನೀ ||
.
೬೯೭. ಸರ್ವ-ಲೋಕ-ವಶಂಕರೀ
ವಿಶ್ವದ ಪರಮೋನ್ನತ ಪರಿಪಾಲಕಿಗೆಲ್ಲಾ ಲೋಕ ಶರಣಾಗುವ ಪರಿ
ಬ್ರಹ್ಮ ಗಾಯತ್ರೀ ಮಂತ್ರದೇಳುಲೋಕ ವಶ ಸರ್ವಲೋಕವಶಂಕರೀ
ಭೂಃ-ಭುವಃ-ಸುವಃ-ಮಹಃ-ಜನಃ-ತಪಃ-ಸತ್ಯಂ ವಿವಿಧಪ್ರಜ್ಞಾಹಂತ
'ಭೂಃ' ಕೆಳಲೋಕದಿಂದ ಅತ್ಯುನ್ನತ 'ಸತ್ಯಂ'ವರೆಗೆ ಸಾಧಕ ಸಾಗುತ ||
.
೬೯೮. ಸರ್ವಾರ್ಥ-ಧಾತ್ರೀ
ಜೀವಿಸೆ ಚತುರ್ವಿಧ ಪುರುಷಾರ್ಥನುಸಾರ ಜೀವನವ ಪರಿಪೂರ್ಣಾಕ್ಷ
ಮನುಜ ಕೋರಿಕೆಯೆ ಪುರುಷಾರ್ಥ ಧರ್ಮ-ಮೋಕ್ಷ ವೇದಗಳುದ್ದೇಶ
ಅರ್ಥ-ಕಾಮ ಪಡೆಯಲನುಸರಿಸೊ ಮಾರ್ಗ ವಿಹಿತವಿರೆ ಪುಣ್ಯ ಖಾತ್ರಿ
ತೃಷೆ ದುರಾಶಾರಹಿತ ಸೂಕ್ತಪುರುಷಾರ್ಥ ಕರುಣಿಸಿ ಸರ್ವಾರ್ಥಧಾತ್ರಿ ||
.
೬೯೯. ಸಾವಿತ್ರೀ
ಸವಿತಾ ಅರ್ಥಾತ್ ಸೃಷ್ಟಿಕರ್ತ, ಶಿವನ ಸತಿಯಾಗಿ ಸಾವಿತ್ರೀ
ಸೂರ್ಯ-ಅಗ್ನಿ-ವರುಣ-ವಾಯುಗಳು ಸವಿತಾ, ಸತಿ ಸಾವಿತ್ರೀ
ಸೃಷ್ಟಿ ಸಂಯುಕ್ತ ತತ್ವ ಶಿವ ಶಕ್ತಿ, ದೇವಿ ಪರಿಶುದ್ಧತೆ ಪೂಜಾರ್ಹ
ಸವಿತಾ ಸೂರ್ಯ ಪ್ರಜ್ವಲಿಸುತಿರೆ ಲಲಿತೆ, ಸಾವಿತ್ರೀ ಎನಲರ್ಹ ||
.
೭೦೦. ಸಚ್ಚಿದಾನಂದ-ರೂಪಿಣೀ
ಸತ್-ಇರುವಿಕೆ, ಚಿತ್-ಶುದ್ಧ ಚೈತನ್ಯ, ಅನಂದವೆ-ಅಪರಿಮಿತ ಸಂತೋಷ
ಸತ್-ಚಿತ್-ಆನಂದ ಸ್ವರೂಪದಲಿಹ ದೇವಿ, ಬ್ರಹ್ಮ ರೂಪಿಸಿ ತ್ರಿವಿಧ ಅಂಶ
ಮಾಯೆಯ ಮುಸುಕಲಿ ಭಿನ್ನಲಕ್ಷಣ, ಕ್ರಮದೆ ಪ್ರಜ್ಞೆಗನುಭವವಾಗೊ ಸರಣಿ
ಮಾನವನಲಷ್ಟೆ ಪ್ರತ್ಯೇಕಾಂಶ, ಬ್ರಹ್ಮಕೇಕೈಕ ಅಂಶ ಸಚ್ಚಿದಾನಂದ ರೂಪಿಣೀ ||
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ೧೫೬. ಲಲಿತಾ ಸಹಸ್ರನಾಮ ೬೯೪ರಿಂದ ೭೦೦ನೇ ನಾಮಗಳ ವಿವರಣೆ
ಶ್ರೀಧರ ಬಂಡ್ರಿಯವರಿಗೆ ನಮಸ್ಕಾರಗಳು.
ಅತೀ ತನ್ಮಯತೆಯಿಂದ ಹಾಗೂ ಶ್ರದ್ಧೆಯಿಂದ ಶ್ರೀ ಲಲಿತ ಸಹಸ್ರನಾಮದ ವಿವರಣೆಯನ್ನು ನಮಗೆಲ್ಲಾ ಸರಳ ರೀತಿಯಲ್ಲಿ ತರ್ಜುಮೆ ಮಾಡಿ ವಿವರಿಸುತ್ತಿರುವಿರಿ. ನನ್ನಲ್ಲಿ ತಮ್ಮ ಬಗ್ಗೆ ಅಪಾರ ಗೌರವನ್ನುಂಟುಮಾಡಿದೆ. ಅಂತೆಯೆ ಶ್ರೀ ನಾಗೇಶರು ಸಹ ಪದ್ಯ ರೂಪದಲ್ಲಿ ವಿವರಣೆ ಬರೆದು ತಮ್ಮಅಳಿಲು ಸೇವೆಯನ್ನು ಮಾಡುತ್ತಿರುವರು.ಅವರಿಗೂ ಸಹ ನನ್ನ ಧನ್ಯವಾದಗಳು.
< ಸಾಗರ-ಮೇಖಲಾ> ನಾಮವಳಿಯಲ್ಲಿ" ಮೇಖಲಾ " ಎಂಬ ಶಬ್ಧದ ಅರ್ಥವಿವರಣೆ ನನಗೆ ತಿಳಿಯಲಿಲ್ಲಾ. ದಯಮಾಡಿ ಬೇಸರಿಸದೆ ತಿಳುಸುವಿರಾ. ವಂದನೆಗಳು...........ರಮೇಶ ಕಾಮತ್
In reply to ಉ: ೧೫೬. ಲಲಿತಾ ಸಹಸ್ರನಾಮ ೬೯೪ರಿಂದ ೭೦೦ನೇ ನಾಮಗಳ ವಿವರಣೆ by swara kamath
ಉ: ೧೫೬. ಲಲಿತಾ ಸಹಸ್ರನಾಮ ೬೯೪ರಿಂದ ೭೦೦ನೇ ನಾಮಗಳ ವಿವರಣೆ
ಕಾಮತ್ ಸರ್,
ನಿಮ್ಮ ಹೃದಯಪೂರ್ವಕ ಮೆಚ್ಚುಗೆಗೆ ಧನ್ಯವಾದಗಳು. ಸಾಗರ ಮೇಖಲಾ ಎಂದರೆ ಸಾಗರವನ್ನೇ ಕೊರಳ ಮಾಲೆಯಾಗಿ ಧರಿಸಿರುವವಳು ಎಂದರ್ಥ. (ಮೇಖಲಾ ಅಂದರೆ ಕೊರಳು). ಇದನ್ನು ಮೂಲ ಬರವಣಿಗೆಯಲ್ಲಿ ತಿದ್ದಿಕೊಳ್ಳುತ್ತೇನೆ ಆಗ ವಿವರಣೆ ಹೆಚ್ಚು ಸ್ಪಷ್ಟವಾಗುತ್ತದೆ ಎನಿಸುತ್ತದೆ.
ನೀವಂದ ಹಾಗೆ ನಾಗೇಶರದು ಅಳಿಲು ಸೇವೆಗಿಂತ ಹೆಚ್ಚಿನದೇ ಅವರ ನಿರಂತರ ಪದ್ಯರೂಪದ ಪ್ರತಿಕ್ರಿಯೆಯಿಲ್ಲದಿದ್ದರೆ ಈ ಕಾರ್ಯ ಮುಂದೆ ಸಾಗುತ್ತಿರಲಿಲ್ಲವೇನೋ ಅನಿಸುತ್ತದೆ. ನಿಮ್ಮಂತಹ ಹಿರಿಯರು ಇಬ್ಬರನ್ನೂ ಪ್ರೋತ್ಸಾಹಿಸುತ್ತಿರುವುದಕ್ಕೆ ಮತ್ತೊಮ್ಮೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೧೫೬. ಲಲಿತಾ ಸಹಸ್ರನಾಮ ೬೯೪ರಿಂದ ೭೦೦ನೇ ನಾಮಗಳ ವಿವರಣೆ by makara
ಉ: ೧೫೬. ಲಲಿತಾ ಸಹಸ್ರನಾಮ ೬೯೪ರಿಂದ ೭೦೦ನೇ ನಾಮಗಳ ವಿವರಣೆ
ಕಾಮತ್ ಸರ್, ನಿಮ್ಮ ಅಭಿಮಾನದ ಮಾತುಗಳಿಗೆ ಶ್ರೀಧರರ ಜತೆ ನನ್ನ ಧನ್ಯವಾದಗಳು ಕೂಡ. ಈ ಕಾವ್ಯಯಾನ ಜತೆಗಿರದಿದ್ದರೂ ಶ್ರೀಧರರು ಇಷ್ಟೆ ಸೊಗಸಾಗಿ ಎಲ್ಲಾ ಕಂತುಗಳನ್ನು ಬರೆಯುತ್ತಿದ್ದರೆನ್ನುವುದರಲ್ಲಿ ಸಂದೇಹವೆ ಇಲ್ಲ - ಈಗಾಗಲೆ ಸಾಕಷ್ಟು ಸರಣಿಗಳನ್ನು ಮುಗಿಸಿ ಪಳಗಿದ ಕೈ ಅವರದು :-) ಭಾಷಾಂತರದ ಕಾಠೀಣ್ಯತೆಯನ್ನು ನೋಡಿದರಷ್ಟೆ, ಇದೆಂಥಾ ಅದ್ಭುತ ಕಾರ್ಯವೆಂದು ಅರಿವಾಗುವುದು - ಅದರಲ್ಲೂ ಪದಗಳಿಗೆ ಸೂಕ್ತ, ಸಮಾನಾಂತರ ಪದ ಹುಡುಕಬೇಕಾದಾಗ. ನಾವು ಓದುವಾಗ ಅದೆಷ್ಟು ಸರಳವಾಗಿ ಕಾಣುತ್ತದೆಂದರೆ, ಅನುವಾದವೆಂಬುದೆ ಮರೆತುಹೋಗುವಷ್ಟು. ಈ ಭಕ್ತಿಯಾನಕ್ಕೆ ಬರಿ ಪಕ್ಕವಾದ್ಯವಾಗಷ್ಟೆ ಈ ಕಾವ್ಯಯಾನ. { ಜತೆಗೆ, ನಮ್ಮ ಸ್ಕೂಲುಗಳಲ್ಲಿ ಹಿಂದೆ ಹೇಳುತ್ತಿದ್ದರು - ಹತ್ತು ಬಾರಿ ಓದುವುದಕ್ಕಿಂತ ಒಂದು ಬಾರಿ ಬರೆವುದು ಲೇಸು ಎಂದು. ಹೀಗೆ ಬರೆಯುವ ನೆಪದಲ್ಲಾದರೂ ಸ್ವಲ್ಪ ತಲೆಯಾಳಾಕ್ಕಿಳಿಯಲಿ ಅಂತ :-) }
In reply to ಉ: ೧೫೬. ಲಲಿತಾ ಸಹಸ್ರನಾಮ ೬೯೪ರಿಂದ ೭೦೦ನೇ ನಾಮಗಳ ವಿವರಣೆ by nageshamysore
ಉ: ೧೫೬. ಲಲಿತಾ ಸಹಸ್ರನಾಮ ೬೯೪ರಿಂದ ೭೦೦ನೇ ನಾಮಗಳ ವಿವರಣೆ
ಹತ್ತು ಸಾರಿ ಓದುವುದಕ್ಕಿಂತ ಒಂದು ಬಾರಿ ಬರೆಯುವುದು ಲೇಸು ಎನ್ನುವ ನಿಮ್ಮ ಮಾತು ನಿಜ ನಾಗೇಶರೆ. ಸ್ವಲ್ಪ ಹೆಚ್ಚು ಕಡಿಮೆ ಇದೇ ಉದ್ದೇಶದಿಂದ ಅಂದರೆ ವಿಶ್ಲೇಷಣೆಯನ್ನು ಹೆಚ್ಚು ಅರ್ಥಪೂರ್ಣವಾಗಿ ಗ್ರಹಿಸಬೇಕೆಂದರೆ ಅದಕ್ಕಿರುವ ಏಕೈಕ ಮಾರ್ಗ ಕನ್ನಡ ಭಾಷಾಂತರ ಎನಿಸಿತು. ಹಾಗಾಗಿ ಸ್ವಾಮಿ ಕಾರ್ಯ ಸ್ವ-ಕಾರ್ಯ ಎರಡೂ ಕೈಗೂಡುವುದರಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡೆ. ನಿಮ್ಮ ನಿರಂತರ ಪ್ರೋತ್ಸಾಹ ಮತ್ತು ಕಾರ್ಯಕ್ಷಮತೆಗೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ