ಸಂಧಾನ
ತೆರೆಯಬಾರದೆ ಎದೆಯ ಕವಾಟವ
ನಮ್ಮೊಳಗಿನ ಕಲಹ ಅಚಾಟಕ
ಅದಕ್ಕೇಕೆ ಇಷ್ಟೊಂದು ಬಿಗುಮಾನ
ಕಪಾಟುವಿನಿಂದ ಇಣುಕಿ ನೋಡುವುದು ಹೇಗೆ?
ಮರುಕ ಹುಟ್ಟಿ ಮಧ್ಯಸ್ಥಿಕೆ ವಹಿಸಿದೆ
ಬರುವೆಯಾ ಸಂಧಾನಕೆ
ವಿರಹದ ಮಾರಿಯು ಮನದೊಳಗೆ ಹೊಕ್ಕಿ
ಚಂಡಮದ್ದಳೆಯಂತೆ ಕುಣಿಯುತ್ತಿಹಳು
ಬಾಹುರೇಖೆ ನಡುವೆ ಗಡಿರೇಖೆ ಹಾಕಿ
ರಣಕಹಳೆ ಊದುತಿಹಳು
ರಂಗುರಂಗಿನ ಬಣ್ಣವೆರಚಿ ಕೂಗುವಳಿಗೆ
ತಾಳಕ್ಕೆ ತಕ್ಕಂತೆ ನರ್ತಿಸಬೇಡ
ಅಂತರಾಳವನ್ನು ಪ್ರಯಾಸದಿ ಅದುಮಿಕೊಂಡು
ಮನದ್ರೋಹಿ ನೀನಾಗಬೇಡ
ನಾಳಿನ ಯಾತನೆ ದುಃಖಾಂತಮಯ
ಮರುಕ ಹುಟ್ಟಿ ರಾಯಭಾರತ್ವ ವಹಿಸಿದೆ
ಬರುವೆಯಾ ಸಂಧಾನಕೆ
ನೆನಪುಗಳು ಗಿರಿಗೋಪುರಗಳಂತೆ ಮೈರಾಚಿವೆ
ಹೊರಲಾರದಷ್ಟು ಹೊರೆಯಾಗಿದೆ
ಹೃದಯವಿದು ದಿನದಿನವು ಕುಗ್ಗುತ್ತ
ತುಕ್ಕು ಹಿಡಿದ ಸಲಾಕೆಯಾಗಿದೆ
ಪೊರೆ ಕಳಚಿ ಬಿಟ್ಟು ಹೋದ ಹಾವಂತೆ
ಬೆಸುಗೆ ಕಳಚುವುದು ಕಷ್ಟ
ಅಪ್ಪಳಿಸುವ ನೋವಿನ ಅಲೆಗಳೊಡೆತ
ಅನುಭವಿಸಲು ವಿಪರೀತ ಸಂಕಷ್ಟ
ಇದರ ಅರಿವು ನಿನಾಗುತ್ತಿಲ್ಲವೆ
ಮರುಕ ಹುಟ್ಟಿ ಗುರಿಕಾರತ್ವ ವಹಿಸಿದೆ
ಬರುವೆಯಾ ಸಂಧಾನಕೆ
ಹಾರೋಹಳ್ಳಿ ರವೀಂದ್ರ
Rating