ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ?

ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ?

____________________________________________ 

ಊರ್ಮಿಳೆಯನ್ನು ಹೋಗದಂತೆ ತಡೆದಿದ್ದು, ಸ್ವಾರ್ಥವೋ, ನಿಸ್ವಾರ್ಥವೋ? 
____________________________________________
.
ಮೊನ್ನೆ, ಮೊನ್ನೆ ಸೀತೆಯ ಪಾತ್ರದ ದುರಂತದ ಬಗ್ಗೆ ಬರೆಯುತ್ತಿದ್ದಾಗ ಪ್ರಾಸಂಗಿಕವಾಗಿ ಲಕ್ಷ್ಮಣನ ಪ್ರಸ್ತಾಪ ಬಂದ ಹೊತ್ತಿನಲ್ಲಿ ಅವನ ಸತಿ ಊರ್ಮಿಳೆಯೂ ನೆನಪಾಯ್ತು - ಒಂದು ತರಹ ಅವಳದು ವ್ಯಥೆ ತುಂಬಿದ ಬದುಕಲ್ಲವೆ ಅನಿಸಿತ್ತು. ಮುಂದೊಮ್ಮೆ ಅದರ ಕುರಿತು ಬರೆಯಬೇಕೆಂದು ಅಂದುಕೊಂಡೆ. ಅದೇ ಸಮಯದಲ್ಲಿ ಸೀತೆಯನ್ನೊದಿದ ಭಾವನಾರವರು, ಉರ್ಮಿಳೆಯನ್ನು ಕುರಿತ ಶ್ರೀ 'ಮನು' ರವರು ಬರೆದ ಸುಂದರ ಕವನವೊಂದನ್ನು ಕಳಿಸಿ, ಊರ್ಮಿಳೆಯ ಬದುಕಿನ ವ್ಯಥೆಯನ್ನು ಮತ್ತೆ ನೆನಪಿಸಿದರು. ಅದು ಊರ್ಮಿಳೆಯ ಪಾತ್ರದ ಕುರಿತು, ಮತ್ತಷ್ಟು ಆಲೋಚಿಸುವಂತೆ ಮಾಡಿತಲ್ಲದೆ, ಕೆಲವು ವಿಭಿನ್ನ ದೃಷ್ಟಿಕೋನಗಳನ್ನು ತೆರೆದಿಡುವ ಸಾಧ್ಯತೆಗಳನ್ನು ಪ್ರೇರೆಪಿಸಿತು.  ಆ ಪ್ರೇರೆಪಣೆಯ ಫಲಿತ, ಈ ಬರಹ - ಊರ್ಮಿಳೆಯನ್ನು ಅವಳ ಮತ್ತು ಹೊರಗಿನವರ ದೃಷ್ಟಿಕೋನದಿಂದ ಸಂಯುಕ್ತವಾಗಿ ನೋಡಲ್ಹವಣಿಸಿದ ಚಿತ್ರಣ.
.
ರಾಮನ ಹಿಂದೆ ಹೊರಟಳೆ ಕಾಡಿಗೆ ಸೀತೆ
ಲಕ್ಷ್ಮಣನ ಊರ್ಮಿಳೆಗೇಕೊ ಬೇಡವಾಗಿತ್ತೆ?
ಹದಿನಾಲ್ಕು ವರ್ಷದಿಡಿ ವನವಾಸ ಪೂರ
ತಡೆದಿತ್ತೇನವಳಾಂತಃಪುರ ಕಾರ್ಯಭಾರ? || 01 ||
.
ಕಾಡಿತ್ತೆ ವನವಾಸದ ಬದುಕಿನಾ ಘೋರಾ
ಬಿಟ್ಟೋಗದಾರಮನೆ ಸುಖ ಸಂತಸ ತೀರ
ಭೋಗ ವೈಭೋಗದ ಸುಗ್ಗಿ ಮೈಮನ ಒಗ್ಗಿ
ತಂದಿತ್ತೆ ಕಾನನದಂಜಿಕೆ ತನುವಾಗಾ ಬಗ್ಗಿ || 02 ||
.
ವನವಾಸದ ವಿಷಯಕ್ಕೆ ಬರುತ್ತಿದ್ದ ಹಾಗೆ, ಎಲ್ಲರ ಕಣ್ಮುಂದೆ ನಿಲ್ಲುವ ದೃಶ್ಯಗಳೆಂದರೆ ರಾಮ ಕಾಡಿಗೆ ಹೊರಟಿದ್ದು, ಪತಿವ್ರತೆಯಾಗಿ ಪತಿಯ ಹಿಂದೆ ಸೀತೆಯು ನಡೆದಿದ್ದು, ಅಣ್ಣನನ್ನು ಬಿಟ್ಟಿರಲಾಗದ ಸಂಕಟಕ್ಕೆ ತಮ್ಮ ಲಕ್ಷ್ಮಣನು ಜತೆಗೆ ಹೊರಟಿದ್ದು. ರಾಮನಿಗೇನೊ ಜೊತೆಯಾಗಿ ಸೀತೆ ಬಂದಳು, ಕಷ್ಟವೊ, ಸುಖವೊ ಕಟ್ಟಿಕೊಂಡ ಮೇಲೆ ಜತೆಗೆ ನೀಸಬೇಕೆಂದು. ಆದರೆ ಲಕ್ಷ್ಮಣ ಪತ್ನಿ ಊರ್ಮಿಳೆಗೇನಾಗಿತ್ತು? ಅವರಿಗೂ ಮದುವೆಯಾದ ಹೊಸತು ಬೇರೆ - ಅಂದ ಮೇಲೆ ಸತಿಧರ್ಮವನನುಸರಿಸಿ, ಸೀತೆಯ ಹಾಗೆ ಅವಳೂ ನಾರುಮಡಿಯುಟ್ಟು ಲಕ್ಷ್ಮಣನ ಹಿಂದೆ ಕಾಡಿನ ಹಾದಿ ಹಿಡಿದಿದ್ದರೆ ಉಚಿತವಿತ್ತಲ್ಲವೆ? ಅದು ಬಿಟ್ಟು , ಗಂಡನನ್ನು ಹಿಂಬಾಲಿಸದೆ ಅರಮನೆಯ ಸುಖದ ಸುಪ್ಪತ್ತಿಗೆಯಿಲ್ಲದೆ ಬದುಕಲಾರೆನೆಂಬಂತೆ, ಏಕೆ ಹದಿನಾಲ್ಕು ವರ್ಷವೂ ವಿರಹದ ಬೇಗುದಿಯಲೆ ಕಾದು, ಬೇಯುವ ಹಾದಿ ಹಿಡಿದಳು?
.
ಸೀತೆಯಂತ್ಹೊರಡದೆ ಹಿಂದೆ ಅರಮನೆ ಅಂತಃಪುರದಲುಳಿಯುವ ಕಾರ್ಯಭಾರವಾದರೂ ಏನಿತ್ತವಳಿಗೆ? ಬಹುಶಃ ಕಾಡಿನ ಒರಟು ಜೀವನಕ್ಕೆ ಒಗ್ಗದ ದೇಹ, ಸುಖ ಭೋಗ ಜೀವನದ, ಐಶ್ವರ್ಯಾರಾಮದ ಅರಮನೆಯನ್ನು ಬಿಟ್ಟು ಹೋಗಿ ದಂಡಿಸಿಕೊಳ್ಳಲು ತಯಾರಿರಲಿಲ್ಲವೊ ಏನೊ? ಅದರಲ್ಲೂ ಒಂದಲ್ಲ, ಎರಡಲ್ಲ ಹದಿನಾಲ್ಕು ವರ್ಷ ಪತಿಯಿಂದಗಲಿ ದೂರವಿರಬೇಕಾದ ಕಥೆ - ಬ್ರಹ್ಮಚಾರಿಣಿಯಾಗಿ. ಮೈ ಕೈ ಬಗ್ಗಿಸಿ ಎಲ್ಲ ಕೆಲಸ ಕಾರ್ಯ ಸ್ವತಃ ಮಾಡಿಕೊಂಡು  ನರಳಬೇಕೆಂಬ ಅರಿವು, ಹಾಗೆ ಮಾಡಲೊಪ್ಪದ ಅರಮನೆಯ ಸುಖಲಾಲಸೆ, ಅವಳನ್ನು ಹೋಗದಂತೆ ತಡೆಯಿತೆ? ಸರಳವಾಗಿ ಹೇಳುವುದಾದರೆ ಉರ್ಮಿಳೆಯನ್ನು ಹಿಡಿದಿಟ್ಟಿದ್ದು ಸ್ವಾರ್ಥವೆ? ಲಕ್ಷ್ಮಣನಿಚ್ಚಿಸಿದರು ಧಿಕ್ಕರಿಸಿ ಜತೆಗ್ಹೋಗದ ಹುನ್ನಾರವೆ? ಹೋಗುತ್ತಿರುವ ಪತಿಗೂ ತನ್ನ ಅಯಿಷ್ಟತೆಯನ್ನು ಪ್ರಕಟಿಸುವ, ಪ್ರತಿಭಟನೆಯನ್ನು ವ್ಯಕ್ತಪಡಿಸುವ ತರವಾಗಿತ್ತೆ? ಹೇಗೂ ಲಕ್ಷ್ಮಣನೊಬ್ಬನೆ ಜತೆಗ್ಹೊರಟರೆ ಇಡಿ ಜಗತ್ತಿಗೆ ಎದ್ದು ಕಾಣುವುದರಿಂದ ಮನಸು ಬದಲಿಸಿ ಲಕ್ಷ್ಮಣನೂ ಹಿಂದುಳಿಯಬಹುದೆಂಬ ದುರಾಲೋಚನೆಯೆ? ಅಥವಾ ಆ ಕಾಲದಲ್ಲೆ ತಾನು ಬೇರೆಯದೆ ಆದ ವಿಚಾರಣಾ ಧೋರಣೆಯ, ಸ್ವತಂತ್ರ-ಪ್ರಗತಿ ಪರ ನಾರಿ ಎಂದು ತೋರಿಕೊಳ್ಳುವ ಹಮ್ಮೆ? ಇದಾವುದೂ ಅಲ್ಲದ ಸರಳ ಪತಿ ವಾಕ್ಯ ಪರಿಪಾಲಿಸುವ ಸಂಕೋಚ ಸ್ವಭಾವದ ಹೆಣ್ಣೊಂದರ ಸಾಮಾನ್ಯ ಚಿತ್ರಣವೆ? ಯಾರಿವರಲ್ಲಿ ನಿಜವಾದ ಊರ್ಮಿಳೆಯ ಪ್ರತಿನಿಧಿ? ಈ ಜಿಜ್ಞಾಸೆಗೆ ಏನೆಲ್ಲಾ  ಸರಳ ತಾರ್ಕಿಕ ಉತ್ತರವಿದೆಯೆಂದು ಮುಂದೆ ನೋಡೋಣ.
.
ಕಾಡಿಗ್ಹೊರಟರೆ ಮನೆಯ ನೋಡುವರಾರು
ಸುಮಿತ್ರನಂದನ ಮಾತೆ ಕಾಪಾಡುವವರು
ಅಣತಿಯಿತ್ತೆ ನಡೆದನೆ ಸೌಮಿತ್ರಿ ಹಿಂದುಳಿ
ಅರಮನೆಯಂತಃಪುರದಲೆಲ್ಲ ನೋಡುತಲಿ || 03 ||
.
ಸ್ವಲ್ಪ ವಿಭಿನ್ನ ನೋಟದಲ್ಲಿ ನೋಡಲೆತ್ನಿಸಿದಾಗ ಅನೇಕಾನೇಕ ತರಹದ ಸಾಧ್ಯತೆಗಳು ಕಂಡುಬರುತ್ತವೆ - ಅದರಲ್ಲಿ ತುಂಬ ಸರಳ ಹಾಗೂ ಮಾನುಷವಾಗಿ ಕಾಣುವ ಕಾರಣ ಈ ಮೇಲಿನ ಪದ್ಯದ ಭಾವ. ಲಕ್ಷ್ಮಣ ಹೇಗೆ ಅಣ್ಣ ರಾಮನ ಭಾರಿ ಅನುಯಾಯಿಯೊ, ತಾಯಿ ಸುಮಿತ್ರೆಯ ಮೇಲೂ ಅಷ್ಟೆ ಮಮತೆ ಪ್ರೇಮವಿಟ್ಟವನು. ರಾಮ ವನವಾಸಕ್ಕೆ ಹೊರಟಾಗ ಅವನು ಸುಲಭವಾಗಿ ಹಿಂದೆಯೆ ಅರಮನೆಯಲ್ಲುಳಿಯಬಹುದಿತ್ತು. ಆದರೆ ಜತೆಯಲ್ಲೆ ಉಂಡು ಬೆಳೆದ, ಸೋದರಿಕೆ, ಭಾತೃತ್ವಕಿಂತ ಹೆಚ್ಚಿನ ಮಟ್ಟದ ಸಹಚರ್ಯೆಯಲ್ಲಿ ಒಡನಾಡಿದ ಲಕ್ಷ್ಮಣನಿಗದು ಅಸಾಧ್ಯವಿತ್ತು. ಅಂತಲೆ ಹಿಂದೂಮುಂದೂ ಆಲೋಚಿಸದೆ ಅಣ್ಣನೊಡನೆ ಹೊರಟು ನಿಂತ. ಆದರೆ, ಆ ಅವಸರದಲ್ಲೂ ಒಂದು ವಿವೇಚನಾ ಶಕ್ತಿಯು ಕೆಲಸ ಮಾಡಿತ್ತು - ತಾನು ಹೋಗಲಿರುವುದು ಹದಿನಾಲ್ಕು ವರ್ಷದ ಮಹಾನ್ ಪರ್ವಕ್ಕೆ.  ಹೇಗೂ ಅಣ್ಣ ರಾಮನ ಜತೆ ಸೀತೆಯೂ ಹೊರಟಿರುವುದರಿಂದ, ಊರ್ಮಿಳೆಯೂ ಹೊರಟರೆ ಸೀತೆಗೆ ಜತೆಯೂ ಆಗುತ್ತಿತ್ತು; ಆ ಸುಧೀರ್ಘ ಕಾಲ ಒಬ್ಬಂಟಿ ಬ್ರಹ್ಮಚರ್ಯದ ಪಾಡು ತಪ್ಪುತ್ತಿತ್ತು. ಅದರೆ ಇಲ್ಲೆ ಅಡಗಿರುವುದು ಧರ್ಮಸೂಕ್ಷ್ಮ ನೋಡಿ. ಒಂದು ವೇಳೆ ತನ್ನ ಜತೆ ಸತಿಯು ಹೊರಟರೆ, ಅರಮನೆಯಲ್ಲೆ ಉಳಿದುಬಿಡುವ ತಾಯಿಯ ಯೋಗಕ್ಷೇಮ ನೋಡಿಕೊಳ್ಳುವವರು ಯಾರು? ತಾನು ಕಾಡಿನಲಿ ಅಣ್ಣನ ಕ್ಷೇಮ ನೋಡಿಕೊಂಡರೆ, ತಮ್ಮನಾಗಿ ತನ್ನ ಕರ್ತವ್ಯ ಪೂರೈಸಿದಂತಾಯ್ತು. ಆದರೆ, ಅದೇ ರೀತಿಯಲ್ಲಿ ತಾಯಿಗೂ ಮಾಡಬೇಕಾದ ಕರ್ತವ್ಯ, ತೀರಿಸಬೇಕಾದ ಋಣಗಳಿರುತ್ತವಲ್ಲ - ಅದನ್ನು ಪೂರೈಸುವುದು ಹೇಗೆ? ಅದು ಇಷ್ಟು ಧೀರ್ಘಕಾಲ ದೂರವಿದ್ದಾಗ ಹೇಗೆ ತಾನೆ ಆ ತಾಯಿ ಸಹಿಸಿಯಾಳು ವೇದನೆ? ಹೀಗೆಲ್ಲ ಯೋಚಿಸಿ ಸತಿಪತಿಯರೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿರಬೇಕು - ಲಕ್ಷಣ ರಾಮನ ಬೆಂಗಾವಲಾಗಿರಲಿ, ಊರ್ಮಿಳೆ ಸುಮಿತ್ರೆಯನ್ನು ಜತನದಲಿ ಕಾಪಾಡಲಿ ಎಂಬುದಾಗಿ. ಮತ್ತೊಬ್ಬ ಸುತನಾಗಿ ಶತ್ರುಘ್ನ ಮತ್ತವನ ಸತಿಯಿದ್ದರೂ, ಯಾಕೊ ಪತ್ನಿಯ ಮೇಲೆ ಅಪರಿಮಿತ ನಂಬಿಕೆ, ವಿಶ್ವಾಸ.. ಅಲ್ಲದೆ, ಬೇರೆ ಯಾರೆ ಇದ್ದರೂ ಸತಿ ಗಂಡನನ್ನು ಪ್ರತಿನಿಧಿಸುವ ಹಾಗೆ , ಬೇರಾರು ತಾನೆ ಮಾಡಲು ಸಾಧ್ಯ? ಹೀಗಾಗಿ ಸ್ವಂತ ತಮ್ಮನನ್ನು ನಂಬದೆ ಹೆಂಡತಿಯ ಹೆಗಲಿಗೆ ಜವಾಬ್ದಾರಿ ಹೊರೆಸುತ್ತ - ಇಬ್ಬರೂ ತಮ್ಮ ತಮ್ಮ ಜೀವನದ ಅನುಪಮ ತ್ಯಾಗದ ಪರಾಕಾಷ್ಟೆಯನ್ನು ತಲಪುತ್ತಾರೆ. ತ್ಯಾಗದಲ್ಲೆ ಸುಖವನ್ನು ಕಾಣುವ ಮೂರ್ತರೂಪಿಗಳಾಗಿಬಿಡುತ್ತಾರೆ.
.
ಏನೇನಾಗುವುದ್ಹದಿನಾಲ್ಕು ವರ್ಷವೆ ಬಹಳ
ನಮ್ಮವರಿರಬೇಕೊಬ್ಬರು ಗಮನಿಸುತಾಕಾಲ
ಬದಲಾಗದೆಂದೂ ಬದಲಾಗೆ ಜನಮನಧರ್ಮ
ಹೇಳುವರಿರಬೇಕಲ್ಲ ಊರ್ಮಿಳೆ ನಿನದಾಕರ್ಮ? || 04 ||
.
ಅಷ್ಟು ಮಾತ್ರವೆ ಅಲ್ಲ...ಲಕ್ಷ್ಮಣನ ದೂರಾಲೋಚನೆಯನ್ನು ನೋಡಿ. ಮೊದಲೆ ಕೈಕೆಯ ಸಂಚಿನಿಂದಾಗಿ ರಾಮನ ವನವಾಸದ ಪ್ರಸಂಗ ಬಂತು. ಮುಂದೆ ಅವಳ ಮಗನಿಗೆ ಪಟ್ಟಾಭಿಷೇಕವಾದ ಮೇಲೆ, ಅವನು ಹದಿನಾಲ್ಕು ವರ್ಷ ರಾಜ್ಯವಾಳುವಾಗ ಅದೆ ಪಟ್ಟಾಧಿಕಾರದ ಮೇಲೆ ಮೋಹ, ಮಮಕಾರ ಬೆಳೆಸಿಕೊಳ್ಳುವುದಿಲ್ಲವೆಂದು ಏನು ಗ್ಯಾರಂಟಿ? ಅಧಿಕಾರ ಮದ ತಲೆಗೇರಿದರೆ ಎಂತಹವರಿಗೂ ದಿಕ್ಕು ತಪ್ಪಿಸುವ ಸುರಾಪಾನವಿದ್ದಂತೆ. ಹಾಗಾದೀತೊ ಇಲ್ಲವೊ ಅದು ಬೇರೆ ವಿಷಯ - ಆದರೆ ಹದಿನಾಲ್ಕು ವರ್ಷ ದೂರವಿದ್ದ ಹೊತ್ತಲ್ಲಿ ಏನೇನು ನಡೆಯುವುದೊ ಯಾರು ಬಲ್ಲರು? ಕನಿಷ್ಟ ಅರಮನೆ ಹಾಗೂ ರಾಜ್ಯದಲ್ಲಿ ಏನಾಗುತ್ತಿದೆಯೆಂಬ ಸುಳಿವೂ ಇರುವುದಿಲ್ಲ. ಇಂತಹ ಪರಿಸ್ಥಿತಿ, ಪರಿಸರದಲ್ಲಿ ಯಾರಾದರೊಬ್ಬರೂ ಅರಮನೆಯಲ್ಲೆ ಇದ್ದರೆ ನಡೆಯುವುದನ್ನೆಲ್ಲ ನೋಡುವ, ವರದಿಯೊಪ್ಪಿಸುವ ಕಣ್ಣು, ಕಿವಿಗಳಾಗಬಹುದು. ವಾಪಸ್ಸು ಬಂದಾಗ ಆ ಅಗಾಧ ಅಂತರದ ಹೊತ್ತಿನಲ್ಲಿ ನಡೆದಿದ್ದೆಲ್ಲ ಏನು, ಇತ್ಯಾದಿಗಳನ್ನು ನಮ್ಮವರೆನ್ನುವವರೊಬ್ಬರಿದ್ದರೆ ತಿಳಿದುಕೊಳ್ಳುವುದು ತುಂಬಾ ಸುಲಭವಾಗುತ್ತದೆ. ಯೌವ್ವನ ಪ್ರಾಯದ ಹೊಸ್ತಿಲಲ್ಲಿ ಕಾಲಿಟ್ಟ ಜಾಣೆ ಊರ್ಮಿಳೆ ಅರಮನೆಯಲ್ಲೆ ಉಳಿದರೆ, ಅವಳೆ ಈ 'ಅಲಿಖಿತ' ಗೂಢಾಚಾರಿಣಿಯಾಗಿ ಜತೆಗೆ ಸುಮಿತ್ರಾ ಮಾತೆಯ ಸಹವರ್ತಿಯಾಗಿ ನಿಭಾಯಿಸಬಹುದು. ಅಲ್ಲದೆ ಯಾರಾದರೊಬ್ಬರು ಹೀಗೆ ಕಣ್ಮುಂದೆ ಸುಳಿದಾಡುತ್ತಿದ್ದರೆ, ಏನಾದರೂ ಪಾಪ ಮಾಡಬೇಕೆಂಬ ಆಲೋಚನೆ ಬಂದವರಿಗೂ ಕೊಂಚ ಹಿಂದೇಟು ಹಾಕುವಂತಾಗುತ್ತದೆ. ಯಾರೂ ಹತ್ತಿರವಿರದಿದ್ದರೆ ಆ ಭಯವೂ ಇರುವುದಿಲ್ಲ. ಜನಮನದ ಗುಣಧರ್ಮ ಬದಲಾಗದೆಂದು ಅಂದುಕೊಂಡೆ, ಬದಲಾದ ಅದೆಷ್ಟು ಜನರ ಉದಾಹರಣೆಗಳಿಲ್ಲ? ಹಾಗೇನಾದರೂ ಆಗುತ್ತಿದೆಯೆ ಇಲ್ಲವೆ ಎಂದು ಗಮನವಿಡುವ ಕರ್ಮ ಪಾಪ ಊರ್ಮಿಳೆಯ ಪಾಲಿಗೆ. ಕಾರಣವೇನೆ ಇರಲಿ, ಒಟ್ಟಾರೆ ಲಕ್ಷ್ಮಣನ ಅಣತಿಯಂತೆ, ಸತಿಪತಿಯರ ಸಹಮತಿ ಒಡಂಬಡಿಕೆಯೊಂದಿಗೆಯೆ ಊರ್ಮಿಳೆ ಅರಮನೆಯಲ್ಲೆ ಉಳಿಯುವಾ ಹಾಗೂ ಲಕ್ಷ್ಮಣ ರಾಮನನ್ನು ಹಿಂಬಾಲಿಸುವ ನಿರ್ಧಾರಕ್ಕೆ ಬಂದಿರಬೇಕು. ಮುಂದೆ ತಾಯಿಯ ಪಿತೂರಿಗೆ ಸಹಮತವಿಲ್ಲದ ಭರತ, ತಾಯಿಚ್ಚೆಗೆ ವಿರುದ್ಧದ ಹಾದಿ ಹಿಡಿದು ನಡೆದರೂ ನಿರ್ಧಾರದ ಹೊತ್ತಿನಲ್ಲಿ ಅವನ ನಿಲುವಿನ್ನು ಗೊತ್ತಿರಲಿಲ್ಲ ಲಕ್ಷ್ಮಣಾ ಊರ್ಮಿಳೆಯರಿಗೆ. ಒಂದು ವೇಳೆ ಗೊತ್ತಾಗಿದ್ದರು ಲಕ್ಷ್ಮಣನ ನಿರ್ಧಾರವೇನೂ ಬದಲಾಗುತ್ತಿರಲಿಲ್ಲವೆಂದು ಕಾಣುತ್ತದೆ. ಹದಿನಾಲ್ಕು ವರ್ಷದ ಅವಧಿಯಲ್ಲೇನೇನಾಗುತ್ತದೊ ಯಾರು ಬಲ್ಲರು? 

.
ಕೈಕಯಿನಂದನ ನಾಳೆ ಕುತಂತ್ರಿ ಮಂಥರೆ ಜತೆ
ತಾವಿಲ್ಲದ ಹೊತ್ತಲೇನಾಗುವುದೊ ಸವತಿ ಕಥೆ
ವಯಸಾದವರ ಸಲಹೆ ಶಾಪವಾಯ್ತೆ ವಯಸೆ
ಗಂಡನಿಲ್ಲದಾ ವರ್ಷ ಕಳೆದುಹೋಯ್ತೆ ಆಯಸ್ಸು || 05 ||
.
ಹೀಗೆ ವಯಸ್ಸಾಗುತಿರುವ ಹಿರಿಯ ಜೀವಗಳ ಆರೈಕೆಯ ಜಪನ, ಮೊದಲೆ ಪಿತೂರಿಯಿಂದ ಇದೆಲ್ಲಾ ಪ್ರಕರಣಕ್ಕೂ ಮೂಲಕಾರಣವಾದ ಕೈಕೆಯಂಥಹ ಸವತಿಯ ಹಾಗೂ ಅವಳ ಆಪ್ತೆ ಮಂಥರೆಯ ಇನ್ನೇನೇನೊ ತರದ ಕಾಟ, ಕೋಟಲೆಗಳಿಗೊಂದು ಭದ್ರ ಕಾವಲು ಇರುವುದು ಅಗತ್ಯವಾಗಿತ್ತು. ಕೈಕಯಿನಂದನನ ನಿಲುವಿಂದಾಗಿ ವನವಾಸದ ಹೊತ್ತಿನಲಿ ಬೇರೇನೂ ದುರಂತಗಳು ಸಂಭವಿಸಲಿಲ್ಲ, ಅಷ್ಟೆ. ಒಂದು ವೇಳೆ ಅವನೂ ತಾಯಿಯ ಜಾಡಿನಲ್ಲೆ ನಡೆದಿದ್ದರೆ ಏನಾಗುತ್ತಿತ್ತೊ ಯಾರು ಬಲ್ಲರು? ಹೀಗಾಗಿ ಅತ್ತೆ, ದೊಡ್ಡತ್ತೆಯರನು ಕಾಯುವ ಭಾರ, ಸಲಹುವ ಹೊಣೆ ವಯಸಿನ ಹುಡುಗಿ ಊರ್ಮಿಳೆಯ ಪಾಲಿಗೆ ಬಂತು. ಒಂದು ರೀತಿಯಲ್ಲಿ ಆ ದೃಷ್ಟಿಯಿಂದ ಯೌವ್ವನದಾ ವಯಸ್ಸು ವರವಾಗುವ ಬದಲು ಶಾಪವಾಗಿಹೋಯ್ತು. ಆ ಪ್ರಾಯದರ್ಧ ಆಯಸ್ಸು ಗಂಡನ ಜತೆಯಿಲ್ಲದೆಯೆ ಹಾಗೆ ಕಳೆದುಹೋಯ್ತು - ತ್ಯಾಗ, ಸೇವೆಯ ಹೆಸರಿನಡಿಯಲ್ಲಿ!
.
ಹೇಗೆ ನೋಡಲಿ ತ್ಯಾಗ ಕುಟುಂಬದ ಅನುರಾಗ
ಸ್ವಾರ್ಥಕೆ ಉಳಿದಿದ್ದರೂ ಹೆಣ್ಣಾದವಳದು ತ್ಯಾಗ
ಸುಖವೇನಿದ್ದೇಕಾಂತ ಪತಿಯಿಲ್ಲದ ಮನಧೂರ್ತ
ಸಂಭಾಳಿಸಿ ಕಾದವಳಲಿ ಹುಡುಕಲ್ಹೇಗೊ ಸ್ವಾರ್ಥ || 06 ||
.
ಹೀಗೆ ಯಾವ ತರದಲಿ ನೋಡಿದರೂ ಅಲ್ಲಿ ನಿಸ್ವಾರ್ಥ, ತ್ಯಾಗ, ಕುಟುಂಬಸಹಜ ಕಾಳಜಿ, ಅನುರಾಗಗಳ ಹೂರಣ ಕಾಣುವುದೆ ಹೊರತು ಸ್ವಾರ್ಥದ ಕುರುಹಲ್ಲ. ಒಂದು ವೇಳೆ ಕಷ್ಟವನ್ನನುಭವಿಸದ, ಸುಖಕೋಗೊಡುವ ಸ್ವಾರ್ಥವೆ ಆದರೂ, ಆ ಹೆಸರಿನಲ್ಲೆ ಒಬ್ಬ ಸಾಮಾನ್ಯ ಹೆಣ್ಣಾಗಿ ಅವಳನುಭವಿಸಬೇಕಾದ ಏಕಾಂತ, ಯಾತನೆ ಪಾಡುಗಳು ಯಾವ ತ್ಯಾಗಕ್ಕಿಂತಲೂ ಕಡಿಮೆಯೇನಲ್ಲ. ಪತಿಯ ನೆರಳಿಲ್ಲದ ಹದಿನಾಲ್ಕು ವರ್ಷ ಕಂಗೆಡಿಸುವ ಧೂರ್ತ ಮನವನ್ಹಿಡಿತದಲ್ಲಿಟ್ಟುಕೊಂಡು, ತನ್ನಾಸೆ ಆಕಾಂಕ್ಷೆಗಳನೆಲ್ಲ ಅದುಮಿ, ಸುಟ್ಟು, ಭಸ್ಮ ಮಾಡಿಕೊಳ್ಳುತ್ತ ಒಂದೊಂದೆ ದಿನವಾಗಿ ಅದೆಲ್ಲಾ ಹದಿನಾಲ್ಕು ವರ್ಷಗಳನ್ನು ಸಹನೆಯಿಂದ ಕಳೆಯುತ್ತ, ಕಾದು ಕುಳಿತವಳನ್ನು ಸ್ವಾರ್ಥಿ ಎನ್ನಲು ಮನಸಾದರೂ ಹೇಗೆ ಬಂದೀತು? ಅಂತಹ ಕಡೆ ಸ್ವಾರ್ಥದ ಎಳೆಯನ್ನು ಹುಡುಕಲಾದರೂ ಹೇಗೆ?
.
ನಿಜದಲಿ ಹಿರಿದು, ಹಿರಿಮೆಯದು ದಂಪತಿ ಸೂತ್ರ
ತಮ್ಮನೆ ಸಿಗಿದು ಕುಟುಂಬವ ಕಟ್ಟಿಡಿವ ತ್ಯಾಗಪಾತ್ರ
ಹರಿದು ಹಂಚಿದರೂ ಒಲಿದಾ ಮನ ದೂರದ ಪ್ರೀತಿ
ಬಂಧಿಸಿತ್ತೆ ಜತನದಿ ಮತ್ತೆ ಸೇರುವಾ ತವಕದ ಆಸ್ತಿ || 07 ||
.
ಈ ದೃಷ್ಟಿಕೋನದಿಂದ ನೋಡಿದಾಗ ದಂಪತಿಗಳಾಗಿ ಲಕ್ಷ್ಮಣ, ಊರ್ಮಿಳೆಯ ಜೋಡಿ ಪಾತ್ರ ಅಪಾರ ಶ್ಲಾಘನೀಯ ಎಂದೆ ಹೇಳಬಹುದು. ಒಂದು ರೀತಿ ಕುಟುಂಬದ ಒಟ್ಟಾರೆ ಹಿತಕ್ಕಾಗಿ ಅವರಿಬ್ಬರೂ ಯಾರೂ ಆದೇಶಿಸದಿದ್ದರೂ ತಮ್ಮ ಕರ್ತವ್ಯವೆಂಬಂತೆ ಪರಿಗಣಿಸಿ, ಈ ಹಿರಿದಾದ ತ್ಯಾಗ, ವಿದಾಯಕ್ಕೆ ಸಿದ್ದರಾಗುತ್ತಾರೆ. ಹರಿದು ಹಂಚಿದ ದೇಹಗಳ ನಡುವಿನ ಕಂದಕವನ್ನು, ವನವಾಸದ ತರುವಾಯದ ಮಿಲನದ ತನಕ ಹದ್ದುಬಸ್ತಿನಲ್ಲಿಡಲು, ಆ ವಿರಹ ತುಂಬಿದ ತವಕವನ್ನೆ ಆಸ್ತಿಯಾಗಿಸಿಕೊಳ್ಳುತ್ತಾರೆ. ಕೊನೆತನಕ ಅದನ್ನು ಹಾಗೆಯೆ ಜತನದಿ ಕಟ್ಟಿಡುವಲ್ಲಿ ಯಶಸ್ವಿಯೂ ಆಗುತ್ತಾರೆ. 
.
ಮತ್ತ್ಯಾರೂ ನೋಡದ ಗಮನಿಸದ ಊರ್ಮಿಳೆ ಸುಖ
ತಿಳಿದಿದ್ದವನೊಬ್ಬನೆ ಲಕ್ಷ್ಮಣ ದೂರದೆ ಕಾಡಿದ ಸಖ
ವನವಾಸದಲೆಲ್ಲವೂ ಸೌಖ್ಯಾ ಮನೆಯಲಿತ್ತೆಂದರಲ್ಲಿ
ಇರಬೇಕಲ್ಲವೆ ಊರ್ಮಿಳೆಗಳ ಪಾಲು ದನಿ ಕೇಳದಲ್ಲಿ || 08 ||
.
ಇಷ್ಟೆಲ್ಲಾ ಆದರೂ ಈ ಬಗ್ಗೆ ಅವರಾರಲ್ಲೂ ತುಟಿಬಿಚ್ಚದೆ ಮೌನ ಸಂಭ್ರಮದೊಳಗೆ ಬಚ್ಚಿಟ್ಟುಬಿಡುತ್ತಾರೆ. ಆ ವೇದನೆ, ನೋವಿನ ಗುಟ್ಟೆಲ್ಲಾ ಬರಿ ಅವರಿಬ್ಬರಿಗೆ ಮಾತ್ರ ಗೊತ್ತು; ಅರಮನೆಯಲೆ ಇದ್ದರೂ ಊರ್ಮಿಳೆ ಪಡುತ್ತಿರುವ ಸುಖವೇನೆಂದು ಕಾಡಿನಲಿರುವ ಸೌಮಿತ್ರಿಗೆ ಮಾತ್ರ ಗೊತ್ತು. ಅವನಲ್ಲಿ ಕಾಡಿನ ಜೀವನದಲ್ಲಿ ನೆಮ್ಮದಿಯಾಗಿ ಬದುಕಬೇಕೆಂದರೆ, ಇತ್ತ ಅರಮನೆಯಲಿ ಎಲ್ಲವೂ ಸೌಖ್ಯವಾಗಿ, ಸುಗಮವಾಗಿ ನಡೆದಿದ್ದರೆ ಮಾತ್ರ ಸಾಧ್ಯ. ಆ ರೀತಿ ಮನೆವಾರ್ತೆಯನ್ನು ಸುಲಲಿತವಿರುವಂತೆ ನೋಡಿಕೊಂಡವಳು ಊರ್ಮಿಳೆ. ಅದರಿಂದಾಗಿಯೆ ಲಕ್ಷ್ಮಣ ಮನೆಯ ಆಲೋಚನೆಯನೆಲ್ಲ ಮರೆತು ಕಾಡಿನ ವ್ಯವಹಾರದಲ್ಲಿ ಮುಳುಗಿಹೋಗಲಿಕ್ಕೆ ಸಾಧ್ಯವಾಯ್ತು. ಅದರಲ್ಲಿ ಬಹು ದೊಡ್ಡ ಪಾಲಿನ, ಶ್ರೆಯಸ್ಸು ಸಲ್ಲಬೇಕಾದದ್ದು ಊರ್ಮಿಳೆಗೆ. ಆದರೆ ಆ ಸೇವಾ ಕೈಂಕರ್ಯವೆ ತಮ್ಮ ಜೀವನದ ಬಲು ದೊಡ್ಡ ಭಾಗ್ಯವೆಂದುಕೊಳ್ಳುವ ಎಷ್ಟೊ ಊರ್ಮಿಳೆಯಂತಹ ಹೆಣ್ಣುಗಳಿಗೆ ತಮ್ಮ ಶಂಖ ತಾವೆ ಬಾರಿಸಿಕೊಳ್ಲುವ ಅಭ್ಯಾಸವೂ ಇಲ್ಲ, ಅಗತ್ಯವೂ ಇಲ್ಲ್ಲ. ಪತಿಯೊಬ್ಬ ಮೆಚ್ಚಿದರೆ ಸಾಕು - ಅಷ್ಟೆ ಅವರ ಜಗವೆಲ್ಲ!
.
ಹೀಗೆ ರಾಮಾಯಣದ ಮತ್ತೊಂದು ತ್ಯಾಗಪೂರ್ಣ ಹೆಣ್ಣಾಗಿ ಅನಾವರಣಗೊಳ್ಳುತ್ತದೆ ಊರ್ಮಿಳೆಯ ಬದುಕಿನ ಚಿತ್ರಣ. ಸೀತೆ ಕಾಡಿನಲಿ ಜತೆಯಲಿದ್ದೂ ಪತಿಯೊಡನೆ ಬಾಳಲಾಗದ ದುರದೃಷ್ಟವಂತೆಯಾಗಿ ಹೆಚ್ಚಿನ ಪಾಡು ಪಟ್ಟವಳಾದರೂ, ಊರ್ಮಿಳೆಯ ವಿಷಯದಲ್ಲಿ ವಿಧಿ ಅಷ್ಟು ಕ್ರೂರವಾಗಿ ನಡೆದುಕೊಳ್ಳಲಿಲ್ಲ. ಕನಿಷ್ಟ ವನವಾಸದ ನಂತರವಾದರೂ ಅವಳು ಲಕ್ಷ್ಮಣನ ಜತೆಯಾಗಿ ನೆಮ್ಮದಿಯಾಗಿ ಬಾಳುವಂತೆ ಮಾಡಿತು. ಆ ವರ್ಷಗಳ ಬೇರ್ಪಡಿಕೆ ಪ್ರಾಯಶಃ ಅವರ ಬಂಧ ಮತ್ತಷ್ಟು ಬಲವಾಗುವಂತೆ ಮಾಡಿಬಿಟ್ಟಿತೇನೊ. ಸೀತೆಗೊ, ಆ ಭಾಗ್ಯವೂ ಇರಲಿಲ್ಲ. ಅಷ್ಟರಮಟ್ಟಿಗೆ ಊರ್ಮಿಳೆ ಅದೃಷ್ಟವಂತೆ ಎಂದೆ ಹೇಳಬಹುದು.
.
-----------------------------------------------------------
ನಾಗೇಶ ಮೈಸೂರು, ಸಿಂಗಾಪುರ
____________________________________
.
ಅಡಿ ಟಿಪ್ಪಣಿ 1 : ಊರ್ಮಿಳೆಯ ನಿರ್ಧಾರದ ಕುರಿತಾದ ಮತ್ತಿತರ ಸಾಧ್ಯತೆಗಳ ಆಳದ ವಿಶ್ಲೇಷಣೆ ಅಗತ್ಯವೆನಿಸಲಿಲ್ಲ - ಆ ಕಾಲಮಾನದ ಸಂಪ್ರದಾಯ, ನಡುವಳಿಕೆ, ಪದ್ದತಿಗಳ ಹಿನ್ನಲೆಯಲ್ಲಿ. ಅದಕ್ಕೆಂದೆ ಆ ಪರಿಸರದ ಹಿನ್ನಲೆಯಲ್ಲಿ ಮೇಲ್ನೋಟಕ್ಕೆ ಸಮಂಜಸ, ಸೂಕ್ತವೆನಿಸಿದ ತಾರ್ಕಿಕ ಆವರಣದ ಚೌಕಟ್ಟಿನೊಳಗೆ ಸೀಮಿತವಾಗಿರಿಸಿ ವಿಶ್ಲೇಷಿಸಿದ್ದೇನೆ. ಊರ್ಮಿಳೆಯ ಕುರಿತಾದ ಬರಹಗಳು ಸಾಕಷ್ಟು ಬಂದಿರಬಹುದಾದರೂ, ಈ ವಿಶ್ಲೇಷಕ ದೃಷ್ಟಿಯಿಂದ ಬಂದ ಬರಹಗಳು ಹೆಚ್ಚಿರಲಾರವು - ಹಾಗಾಗಿ ಇದು ಹೆಚ್ಚು ಆಪ್ತವಾದೀತೆಂದು ಭಾವಿಸುತ್ತೇನೆ.
.
ಅಡಿ ಟಿಪ್ಪಣಿ 2: ತಡೆರಹಿತ ಓದುವಿಕೆಯ ಅನುಕೂಲಕ್ಕಾಗಿ ಇಲ್ಲಿ ಮತ್ತೆ ಒಟ್ಟಾಗಿ ಸೇರಿಸಿದ ಪದ್ಯಗಳ ಗೊಂಚಲು ಕೆಳಗಿದೆ.
________________________________________ 
.
ಕವನದ ಸಂಗ್ರಹಿತ ರೂಪ: ಜತೆ ನೀ ಹೋಗಲಿಲ್ಲವೇಕೆ ಊರ್ಮಿಳೆ?
________________________________________ 
.
ರಾಮನ ಹಿಂದೆ ಹೊರಟಳೆ ಕಾಡಿಗೆ ಸೀತೆ
ಲಕ್ಷ್ಮಣನ ಊರ್ಮಿಳೆಗೇಕೊ ಬೇಡವಾಗಿತ್ತೆ?
ಹದಿನಾಲ್ಕು ವರ್ಷದಿಡಿ ವನವಾಸ ಪೂರ
ತಡೆದಿತ್ತೇನವಳಾಂತಃಪುರ ಕಾರ್ಯಭಾರ? || 01 ||
.
ಕಾಡಿತ್ತೆ ವನವಾಸದ ಬದುಕಿನಾ ಘೋರಾ
ಬಿಟ್ಟೋಗದಾರಮನೆ ಸುಖ ಸಂತಸ ತೀರ
ಭೋಗ ವೈಭೋಗದ ಸುಗ್ಗಿ ಮೈಮನ ಒಗ್ಗಿ
ತಂದಿತ್ತೆ ಕಾನನದಂಜಿಕೆ ತನುವಾಗಾ ಬಗ್ಗಿ || 02 ||
.
ಕಾಡಿಗ್ಹೊರಟರೆ ಮನೆಯ ನೋಡುವರಾರು
ಸುಮಿತ್ರನಂದನ ಮಾತೆ ಕಾಪಾಡುವವರು
ಅಣತಿಯಿತ್ತೆ ನಡೆದನೆ ಸೌಮಿತ್ರಿ ಹಿಂದುಳಿ
ಅರಮನೆಯಂತಃಪುರದಲೆಲ್ಲ ನೋಡುತಲಿ || 03 ||
.
ಏನೇನಾಗುವುದ್ಹದಿನಾಲ್ಕು ವರ್ಷವೆ ಬಹಳ
ನಮ್ಮವರಿರಬೇಕೊಬ್ಬರು ಗಮನಿಸುತಾಕಾಲ
ಬದಲಾಗದೆಂದೂ ಬದಲಾಗೆ ಜನಮನಧರ್ಮ
ಹೇಳುವರಿರಬೇಕಲ್ಲ ಊರ್ಮಿಳೆ ನಿನದಾಕರ್ಮ? || 04 ||
.
ಕೈಕಯಿನಂದನ ನಾಳೆ ಕುತಂತ್ರಿ ಮಂಥರೆ ಜತೆ
ತಾವಿಲ್ಲದ ಹೊತ್ತಲೇನಾಗುವುದೊ ಸವತಿ ಕಥೆ
ವಯಸಾದವರ ಸಲಹೆ ಶಾಪವಾಯ್ತೆ ವಯಸೆ
ಗಂಡನಿಲ್ಲದಾ ವರ್ಷ ಕಳೆದುಹೋಯ್ತೆ ಆಯಸ್ಸು || 05 ||
.
ಹೇಗೆ ನೋಡಲಿ ತ್ಯಾಗ ಕುಟುಂಬದ ಅನುರಾಗ
ಸ್ವಾರ್ಥಕೆ ಉಳಿದಿದ್ದರೂ ಹೆಣ್ಣಾದವಳದು ತ್ಯಾಗ
ಸುಖವೇನಿದ್ದೇಕಾಂತ ಪತಿಯಿಲ್ಲದ ಮನಧೂರ್ತ
ಸಂಭಾಳಿಸಿ ಕಾದವಳಲಿ ಹುಡುಕಲ್ಹೇಗೊ ಸ್ವಾರ್ಥ || 06 ||
.
ನಿಜದಲಿ ಹಿರಿದು, ಹಿರಿಮೆಯದು ದಂಪತಿ ಸೂತ್ರ
ತಮ್ಮನೆ ಸಿಗಿದು ಕುಟುಂಬವ ಕಟ್ಟಿಡಿವ ತ್ಯಾಗಪಾತ್ರ
ಹರಿದು ಹಂಚಿದರೂ ಒಲಿದಾ ಮನ ದೂರದ ಪ್ರೀತಿ
ಬಂಧಿಸಿತ್ತೆ ಜತನದಿ ಮತ್ತೆ ಸೇರುವಾ ತವಕದ ಆಸ್ತಿ || 07 ||
.
ಮತ್ತ್ಯಾರೂ ನೋಡದ ಗಮನಿಸದ ಊರ್ಮಿಳೆ ಸುಖ
ತಿಳಿದಿದ್ದವನೊಬ್ಬನೆ ಲಕ್ಷ್ಮಣ ದೂರದೆ ಕಾಡಿದ ಸಖ
ವನವಾಸದಲೆಲ್ಲವೂ ಸೌಖ್ಯಾ ಮನೆಯಲಿತ್ತೆಂದರಲ್ಲಿ
ಇರಬೇಕಲ್ಲವೆ ಊರ್ಮಿಳೆಗಳ ಪಾಲು ದನಿ ಕೇಳದಲ್ಲಿ || 08 ||
.
.
ಧನ್ಯವಾದಗಳೊಂದಿಗೆ 

ನಾಗೇಶ ಮೈಸೂರು

 

Comments

Submitted by nageshamysore Tue, 11/12/2013 - 03:41

In reply to by kavinagaraj

ಕವಿಗಳೆ ನಿಮ್ಮ ಮಾತು ನಿಜ. ಊರ್ಮಿಳೆಯದು ಮೌನಸಾಧಕಿಯ ಪಾತ್ರವೆ. ಎಂದಿನಂತೆ (ಈಗಲೂ ಕೂಡ) ಮೌನಸಾಧಕರದು ನೇಪಥ್ಯದ ಉಸ್ತುವಾರಿಯೆ. ಅವರು ತಾವಾಗಿ ಬೆಳಕಿಗೆ ಬರಲು ಇಚ್ಛಿಸದ ಸಂಕೋಚ. ಅದೆ ಹೊತ್ತಿನಲ್ಲಿ ಅದರ ಹಿರಿಮೆ ಗೊತ್ತಿದ್ದವರಿಗೆ ಬೆಳಕಿಗೆ ತರಲು ಉಢಾಫೆ (ಟೇಕನ್ ಫಾರ್ ಗ್ರಾಂಟೆಡ್ - ಅನ್ನುವ ರೀತಿ). ಆ ಹಿನ್ನಲೆಯಲ್ಲಿ ಊರ್ಮಿಳೆಯ ಪಾತ್ರ ವಿಶಿಷ್ಟವೆನಿಸುತ್ತದೆ. ಕನಿಷ್ಠ ಅಂಚೆ ಸುದ್ದಿಯೂ ಇರದೆ ಹದಿನಾಲ್ಕು ವರ್ಷ ಕಾದ ಸಹನೆಯೇನು ಕಡಿಮೆಯದಲ್ಲ. [ (ಆಗಿನ ಕಾಲದಲ್ಲಿ ಇ-ಮೇಲುಗಳಿದ್ದಿದ್ದರೆ, ಈ ಫೀಮೇಲುಗಳ ತಪನೆಗೆ ಕನಿಷ್ಠ ಸಂವಹನದ ದಾರಿಯಾದರೂ ಇರುತ್ತಿತ್ತೊ ಏನೊ? :-) ]

Submitted by partha1059 Mon, 11/11/2013 - 21:22

ಊರ್ಮಿಳೆಯ ಪಾತ್ರವನ್ನು ಆಳವಾಗಿ ವಿಶ್ಲೇಷಿಸಿದ್ದೀರಿ. ಹಾಗೆ ಎಂದಿನಂತೆ ಸುಂದರ ಕವನ. ರಾಮಾಯಣದಲ್ಲಿ ಊರ್ಮಿಳೆಯದೊಂದು ಮೌನರಾಗ. ನೀವು ಲಕ್ಷ್ಮಣನ ಕತೆ ಓದುವಾಗ ಊರ್ಮಿಳೆಯನ್ನು ನೆನೆದಿರಿ ಆದರೆ ನಾನು ಮೊದಲು ಊರ್ಮಿಳೆಯ ಬಗ್ಗೆ ಬರೆದು ನಂತರ ಲಕ್ಷ್ಮಣನನ್ನು ಕುರಿತು ಬರೆದಿದ್ದೆ :‍)
ಇರಲಿ
ಅದೇ ಊರ್ಮಿಳೆಯ ಮತ್ತೊಂದು ಚಿಂತನೆಯ ಚಿತ್ರಣ ಇಲ್ಲಿ ಓದಿ ..... ಲಿಂಕ್ ಆಗದಿದ್ದರೆ, ನನ್ನ ಕತೆ
'ರಾಮಾಯಣದಲ್ಲೊಂದು ಮೌನರಾಗ ‍ ಊರ್ಮಿಳ ' ಅಕ್ಟೋಬರ್ ಹನ್ನೊಂದು 2011 ರಲ್ಲಿ ಬರೆದಿರುವುದು ಓದಿ ನೋಡಿ

ರಾಮಯಣದಲ್ಲೊಂದು ಮೌನರಾಗ ಊರ್ಮಿಳ

Submitted by nageshamysore Tue, 11/12/2013 - 03:42

In reply to by partha1059

ಧನ್ಯವಾದಗಳು ಪಾರ್ಥಾ ಸಾರ್ - ಲಿಂಕು ಕೆಲಸ ಮಾಡಿದ ಕಾರಣ, ನಿಮ್ಮ ಊರ್ಮಿಳೆಯ ಸುಂದರ ಕಥನ ತಕ್ಷಣವೆ ಓದಲು ಸಾಧ್ಯವಾಯ್ತು. ಬಹುಶಃ ನೀವು ಬರೆಯಲೆಣಿಸಿರುವ 'ಕರಿಗಿರಿ ರಾಮಾಯಣಕ್ಕೆ' ಹೇಳಿಮಾಡಿಸಿದ ಶೈಲಿ, ಹಂದರ (ಒಂದು ಅಧ್ಯಾಯವಾಗಿ ಸೇರಿಸಿಬಿಡಬಹುದೆಂದು ಕಾಣುತ್ತದೆ) :-)

ನಿಮ್ಮ ಕಥೆಯ ಲಕ್ಷ್ಮಣ ಅಸೀಮ ಸೋದರ ಭಕ್ತಿಯ ಹೊದರಿನಲ್ಲಿ, ಊರ್ಮಿಳೆಯತ್ತ ತುಸು ಕಠೋರತೆಯ, ನಿರ್ಲಕ್ಷದ ಹೊದಿಕೆ ಹೊದ್ದರೆ, ನನ್ನ ವಿಶ್ಲೇಷಣೆಯಲ್ಲಿ ಸಾಮರಸ್ಯದಲ್ಲಿ ಊರ್ಮಿಳೆಯೊಡಗೂಡೆ ಸಂಯುಕ್ತ ನಿರ್ಧಾರ ಕೈಗೊಂಡಂತೆ ಚಿತ್ರಿಸಿದ್ದೇನೆ. ಆದರೆ ಎರಡೂ ರೀತಿಯಲ್ಲೂ, ದಂಡನೆಗೊಳಗಾದವಳು ಪಾಪ ಊರ್ಮಿಳೆಯೆ! 

ಒಂದೆಡೆ ಅವಳದು ಮೌನರಾಗ, ಇನ್ನೊಂದೆಡೆ ಮೌನ ಸಾಧನೆ - ಎರಡೂ, ತಂತಾನೆ ಪ್ರಚಾರವಾಗದ ತರಗಳೆ. ಹೀಗಾಗಿ ಊರ್ಮಿಳೆ ಅಷ್ಟಾಗಿ ಸದ್ದು ಮಾಡದಿರುವುದು ಅಚ್ಚರಿಯೇನಲ್ಲ, ಅಲ್ಲವೆ ?

Submitted by kavinagaraj Wed, 11/13/2013 - 10:12

In reply to by partha1059

ನಾಗೇಶರ ಲೇಖನಕ್ಕೆ ಪ್ರತಿಕ್ರಿಯಿಸುವಾಗ ನಿಮ್ಮ ಈ ಬರಹದ ಲಿಂಕ್ ಸೇರಿಸಬೇಕೆಮದುಕೊಂಡಿದ್ದೆ. ಹುಡುಕಾಟದಲ್ಲಿ ನಿಮ್ಮ ಲೇಖನ ನನಗೆ ಸಿಗಲಿಲ್ಲ. ೀಗ ಮತ್ತೊಮ್ಮೆ ಓದಿದೆ. ಇಬ್ಬರಿಗೂ ಧನ್ಯವಾದಗಳು.

Submitted by nageshamysore Thu, 11/14/2013 - 03:35

In reply to by kavinagaraj

ಕವಿ ನಾಗರಾಜರೆ, ಮತ್ತೆ ನನ್ನ ಮತ್ತು ಪಾರ್ಥ ಸಾರ್ ಪರವಾಗಿ ಧನ್ಯವಾದಗಳು. ಆಸಕ್ತರೆಲ್ಲರಿಗೆ ಹಳೆಯ ಬರಹವೂ ಜತೆ ಸೇರಿ ಸಮಗ್ರ ನೋಟದ ರಸದೂಟ ಸಿಗುತ್ತಿದೆ -  ನನ್ನನ್ನು ಸೇರಿದಂತೆ. ಅದಕ್ಕೆ ಲಿಂಕು ಸೇರಿಸಿದ ಪಾರ್ಥರಿಗೂ ಮತ್ತೊಮ್ಮೆ ಧನ್ಯವಾದಗಳು!

Submitted by makara Tue, 11/12/2013 - 06:51

ನಾಗೇಶರೆ,
ಎ.ಕೆ. ರಾಮಾನುಜನ್ ಅವರು ಲ್ಯಾಂಡ್ ಆಫ್ ತೌಝೆಂಡ್ ರಾಮಾಯಣಾಸ್ ಎಂದು ಯಾವ ಉದ್ದೇಶದಿಂದ ಹೇಳಿದರೋ ತಿಳಿಯದು. ಆದರೆ ಆ ಮಹಾನ್ ಕೃತಿಯನ್ನು ಎಷ್ಟು ಹಲವು ವಿಧದಲ್ಲಿ ವಿಶ್ಲೇಷಿಸಬಹುದು ಎನ್ನುವುದಕ್ಕೆ ನಿಮ್ಮ ದೃಷ್ಟಿಕೋನವೂ ಒಂದು ಉದಾಹರಣೆಯಾಗಿ ನಿಲ್ಲುತ್ತದೆ. ಕವಿ ನಾಗರಾಜರೆಂದಂತೆ, ಮೌನ ಸಾಧಕಿ ಊರ್ಮಿಳೆಯನ್ನು ವಿಭಿನ್ನ ದೃಷ್ಟಿಯಿಂದ ಚಿತ್ರಿಸಿದ್ದೀರ. ಪಾರ್ಥಸಾರಥಿಗಳು ಊರ್ಮಿಳೆ ತನ್ನನ್ನು ಸೀತೆಯೊಂದಿಗೆ ತುಲನೆ ಮಾಡಿಕೊಂಡಂತೆ ಚಿತ್ರಿಸಿದರೆ ನೀವು ಆಕೆಯನ್ನು ಲಕ್ಷ್ಣಣನ ದೃಷ್ಟಿಕೋನದಿಂದ ಚಿತ್ರಿಸಿದ್ದೀರ. ಏನೇ ಆಗಲಿ ರಾಮಾಯಣದಲ್ಲಿ ಎಲೆ ಮರೆಯ ಕಾಯಿಯಂತಿದ್ದ ಊರ್ಮಿಳೆಯನ್ನು ಬೆಳಕಿಗೆ ತರುವಂತಹ ಒಳ್ಳೆಯ ಬರಹವನ್ನು ಕೊಟ್ಟಿದ್ದೀರ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Tue, 11/12/2013 - 19:53

In reply to by makara

ಶ್ರೀಧರರೆ, ಧನ್ಯವಾದಗಳು. ಲ್ಯಾಂಡ್ ಒಫ್ ಥೌಸಂಡ್ ರಾಮಾಯಣಾಸ್ ಅನ್ನುವ ಮಾತಂತೂ ನಿಜ. ನಾನಾಗಲೆ ಭಾರತದ ಹೊರಗೂ, ಥಾಯಿ ರಾಮಾಯಣ , ಇಂಡೋನೇಶಿಯಾದ ರಾಮಾಯಣವನ್ನು ಕಂಡು / ಕೇಳಿದ್ದೇನೆ.
.
ಭಿನ್ನ ಭಿನ್ನ ದೃಷ್ಟಿಕೋನದಲ್ಲಿ ನೋಡಿದಾಗ ಬೇರೆಯದೆ ಆದ ಅಂಶಗಳು, ಸಾಧ್ಯತೆಗಳು ಹೊಳೆಯುವುದಲ್ಲದೆ ಎಲ್ಲಾ ಕೋನಗಳಿಂದ ಪರೀಕ್ಷಿಸಿದ ಹಾಗೂ ಆಗುತ್ತದೆ. ಇಲ್ಲಿನ ಮುಖ್ಯ ಒಳನೋಟ - ಊರ್ಮಿಳೆಯೆಂಬ ಪಾತ್ರವೂ ಈ ಕಥಾನಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದಿರಬಹುದು ಎಂಬ ಸಾಧ್ಯತೆಯನ್ನು ಎತ್ತಿ ತೋರಿಸುವ ಯತ್ನ :-)