ಮಹಾತಾಯಿ

ಮಹಾತಾಯಿ

 

ಮೊದಲ ಬಾರಿಗೆ ಮನೆಗೆ ಬರುತ್ತಿರುವ ತನ್ನ ಗೆಳೆಯರ ಉಪಚಾರದಲ್ಲಿ ಯಾವುದೇ ಲೋಪ ಬರಬಾರದೆಂದು ಮೋಹನ್ ತನ್ನ ತಾಯಿಗೆ ಮೊದಲೇ ತಾಕೀತು ಮಾಡಿದ್ದನು. ಕಮಲಮ್ಮ ಎಲ್ಲ ರೀತಿಯ ತಿಂಡಿಗಳನ್ನು ಬಹಳ ಎಚ್ಚರಿಕೆಯಿಂದ ಮಾಡಿದ್ದರು. ಮಗನೇನೂ ಹೇಳದಿದ್ದರೂ ಆತನ ಮನವರಿತ ಕಮಲಮ್ಮ ಸಾಯಂಕಾಲ ಎಲ್ಲರೂ ಬರುವ ಮೊದಲೇ ದೇವರ ಕೋಣೆ ಸೇರಿದ್ದರು.

"ಎಲ್ಲಾನೂ ತುಂಬಾ ಚೆನ್ನಾಗಿದೆ ಕಣೊ" ಬಂದವರೆಲ್ಲರೂ ಬಹಳ ಹೊಗಳಿಯೇ ಕೈ ತೊಳೆದುಕೊಂಡರು.

ಎಲ್ಲರೂ ಹೊರಗೆ  ಹೊರಟು ಹೋದ ನಂತರವೇ ಕಮಲಮ್ಮ ಊಟದ ಕೋಣೆಗೆ  ಬಂದು ಎಲ್ಲವನ್ನೂ ಚೊಕ್ಕಟಗೊಳಿಸತೊಡಗಿದರು.

ಅಷ್ಟರಲ್ಲಿಯೆ ಮೊಬೈಲ್ ಅಲ್ಲೇ ಬಿಟ್ಟುಹೋಗಿದ್ದವನೊಬ್ಬ ಮೋಹನ್ ಜೊತೆಗೂಡಿ ಊಟದ ಕೋಣೆಗೆ ಬರುವುದಕ್ಕೂ ಅಲ್ಲಿಯೇ ಇದ್ದ ಕಮಲಮ್ಮ ತಮ್ಮ ಅರ್ಧ ಸುಟ್ಟಿ ವಿಕಾರವಾಗಿದ್ದ ಮುಖವನ್ನೆತ್ತಿ ಬಂದವರನ್ನು ನೋಡುವುದಕ್ಕೂ ಸಮವಾಯಿತು. ಅವರ ಮುಖವನ್ನು ನೋಡಿ ಬೆಚ್ಚಿದ  ಗೆಳೆಯನ ಪ್ರಶ್ನಾರ್ಥಕ ದೃಷ್ಟಿಯನ್ನು ಮೋಹನ ಎದುರಿಸದಾದ. ಮೋಹನನ ಮೊಗ ನಾಚಿಕೆ ಅವಮಾನ ಹಾಗು ಕೋಪದಿಂದ ಕೆಂಪಾಗಿದ್ದನ್ನೂ ನೋಡಿದ ಆ ತಾಯಿಯೇ " ನಾನೊಬ್ಬ ಅನಾಥೆಯಪ್ಪ... ಸಾಹೇಬರಿಗೆ ತುಂಬ ದಯೆ... ಅವರೇ ನನ್ನನ್ನು ಸಾಕಿಕೊಂಡಿದ್ದಾರಪ್ಪ..."

ಅಷ್ಟರಲ್ಲಾಗಲೇ ಅವರ ಕಂಗಳು ತುಂಬಿ ಬಂದಿದ್ದವು... "

ಬಂದ ಗೆಳೆಯನಿಗೇನೆನ್ನಿಸಿತೊ... ಅವರ ಹತ್ತಿರ ಬಂದು "ಅಮ್ಮಾ ನೀವೇನು ಭಯಪಡಬೇಡಿ. ಮೋಹನ್ ಚೆನ್ನಾಗಿ ನೊಡ್ಕೊಳ್ತಾನೆ...". ಎಂದ ಕನಿಕರದಿಂದ...

ಅವರಿಗೇನು ಗೊತ್ತು? ತನ್ನಮಗನ ಪ್ರಾಣವನ್ನು ಬೆಂಕಿ ಅನಾಹುತದಿಂದ ರಕ್ಷಿಸಲು ತನ್ನ ಜೀವದ ಕ್ಷೇಮವನ್ನೆ ಮರೆತ, ಆತನ ಏಳ್ಗೆಗಾಗಿ ತನ್ನ ಸ್ವಾಭಿಮಾನವನ್ನೇ ಬಲಿಕೊಟ್ಟು ಶ್ರೀಮಂತರ ಮನೆಯ ಪಾತ್ರೆಗಳನ್ನು ತೊಳೆದ ಮಹಾತಾಯಿ ಆಕೆ ಎಂದು... 

Rating
No votes yet