ಕಾಲಾಯ ತಸ್ಮೈ ನಮಃ
ಎಣ್ಣೆಗಪ್ಪು ಮುಖ, ನಕ್ಕರೆ ಮುಂದೆ ಕಾಣುವ ಬಿಳಿಯ ಹಲ್ಲುಗಳು, ಯಾವಗಲೂ ಬನಿಯನ್ ನಲ್ಲೇ ಇರುತ್ತಿದ್ದ ತನ್ನ ಮಾಜಿ ಸ್ಟೂಡೆಂಟ್ ನರೇಶ್ ಎಂದರೆ ಮೇಷ್ಟ್ರಿಗೇನು ಇಷ್ಟವಾಗದು... ಯಾವಗಲೂ ಕ್ಲಾಸ್ಗೆ ಲೇಟ್ ಆಗಿ ಬರುವ, ಕೊನೆಯ ಬೆಂಚಿನಲ್ಲಿ ಕೂರುವ, ಆಟ ಪಾಠ ಯಾವುದರಲ್ಲೂ ಮುಂದಿರದ 30-35 ಅಂಖದಿಂದ ಪಾಸ್ ಆಗುವ ಶಿಷ್ಯ ಯಾರಿಗೆ ತಾನೇ ಇಷ್ಟವಾಗಬಹುದು...? ಈಗ ಅವರ ಮನೆಯಿರುವ ಬೀದಿಯಲ್ಲೆ ಕಿರಾಣಿ ಅಂಗಡಿಇಟ್ಟುಕೊಂಡಿದ್ದ... ಅವರು ಆ ದಾರಿಯಲ್ಲಿ ಓಡಾಡುವಾಗಲೆಲ್ಲ ಎದ್ದು ನಿಂತು ಮುಗ್ಧತೆಯಿಂದ 'ಸೆಲ್ಯೂಟ್' ಹೊಡೆಯುತ್ತಿದ್ದರೆ ಅವರಿಗೆ ನಗು ಬರುತ್ತಿತ್ತೇ ವಿನಃ ಯಾವುದೇ ರೀತಿಯಿಂದಲೂ ಸಂತಸವಾಗುತ್ತಿರಲಿಲ್ಲ.
"ರಿಟೈರ್ಡ್ ಆಗಿ ಒಂದು ವರ್ಷವಾಗಿದ್ದರೂ ಏಕೊ ನನ್ನ ಪೆನ್ಶನ್ ಬರುತ್ತಿಲ್ಲ ಸರ್..."ಎದುರಿಗೆ ಕುಳಿತಿದ್ದವ ತನ್ನ ಅರ್ಧ ವಯಸ್ಸಿನವನಾಗಿದ್ದರೂ ಗೌರವ ಕೊಡುವ ಸೌಜನ್ಯ ತೋರಿದ್ದರು... "ಪೆನ್ಶನ್ ಬರಲಿಲ್ಲ ಎಂದು ಮನೆಯಲ್ಲೇ ಕುಳಿತರೆ ಆಗತ್ತ? ಇಲ್ಲಿ ಎಲ್ಲರ ಕೈ ಬಿಸಿಮಾಡಬೇಕು". 'ಪವನ್ ಕುಮಾರ್' ಟೇಬಲ್ ಮೇಲಿನ ಬರಹ ಅವರ ಕಣ್ಣು ಸೆಳೆಯಿತು. " ಅರೆ ಇವನು ತನ್ನ ಶಿಷ್ಯನಲ್ಲವೇ? ಅದೂ ಕ್ಲಾಸ್ಗೇ ಫಸ್ಟ್ ಬರುತ್ತಿದ್ದ ಪವನ್...!!! ನನ್ನ ಮೆಚ್ಚಿನ ಶಿಷ್ಯ..." ಬಾಧೆಯಿಂದ ತೇವವಾದ ಕಂಗಳನ್ನೂ ಒರೆಸಿಕೊಳ್ಳದೆ ವಾಪಸ್ಸಾಗಿದ್ದರು...
"ಲಂಚ ತೆಗೆದುಕೊಳ್ಳುವುದು ಅಪರಾಧ... ಎಂದು ೫೦ ವರ್ಷ ನಾನೇ ಅಲ್ಲವೇ ಮಕ್ಕಳಿಗೆ ಹೇಳಿ ಕೊಟ್ಟಿದ್ದು... ಈಗ, ಅದೂ ಯಕ್ಕಶ್ಚಿತ್ ಪೆನ್ಶನ್ ಗಾಗಿ ಲಂಚ ಕೊಟ್ಟುಬಿಡುತ್ತೇನಾ? ನನಗೆ ಪ್ರಿಯವಾಗಿದ್ದ ಪವನ್, ಅದೂ ಕ್ಲಾಸ್ ಗೇ ಫಸ್ಟ್ ಬರುತ್ತಿದ್ದವ... ಈ ದುರ್ಮಾರ್ಗ ಹಿಡಿಯಬಹುದೆಂದುನಾನೆಣಿಸಿರಲಿಲ್ಲವಪ್ಪಾ...೫೦ವರ್ಷ ದೇಶ ಕಟ್ಟುವ ಮಕ್ಕಳಿಗಾಗಿ ಮುಡುಪಾಗಿಟ್ಟು ಒಳ್ಳೆಯ ನೀತಿಯನ್ನು ಕಲಿಸಿದ್ದು ನಿರರ್ಥಕವಾಯಿತೆ?" ಅವರ ಮನ ಸಾವಿರದೊಂದನೇ ಬಾರಿಗೆ ತನ್ನನ್ನು ತಾನೇ ಸಮರ್ಥಿಸಿಕೊಳ್ಳುತ್ತಿತ್ತು. "ತನ್ನೆದುರಿಗೆ ತನ್ನ ನೀತಿ ಸಿದ್ದಾಂತದ ಕೊಲೆ ಅದು ತನ್ನ ಪ್ರಿಯ ಶಿಷ್ಯನಿಂದ..."ಅವರ ಮನ ಬಾಧೆಯಿಂದ ಚೀರುತ್ತಿತ್ತು...ಇನ್ನೇನೇನು ಯೊಚಿಸುತ್ತಿದ್ದರೋ...
ಅಷ್ಟರಲ್ಲೇ ಅವರೆದುರಿಗೆ ಬಂದ ನರೇಶ "ಮೇಷ್ಟ್ರೇ ನಿನ್ನೆ ನಿಮ್ಮ ಮಗ ೫೦೦ರರ ನೋಟು ಕೊಟ್ಟು ಚಿಲ್ಲರೆಯನ್ನೇ ಮರೆತು ಹೋಗಿದ್ದರು.... ಅವರಿಗೆ ಇದನ್ನು ತಲುಪಿಸಿ ಬಿಡಿ." ಎಂದು ಪ್ರಾಮಾಣಿಕವಾಗಿ ಹೇಳದಿದ್ದರೆ. ಅವನ ಆ ಮಾತು ಮೇಷ್ಟ್ರ ಉರಿಯುತ್ತಿದ್ದ ಹೃದಯವನ್ನು ತಂಪು ಮಾಡಿತು.