ಸಂತ ಮೇರಿ ಚರ್ಚ್

ಸಂತ ಮೇರಿ ಚರ್ಚ್

ಬರಹ

ಕ್ರೈಸ್ತಮತದ ಮೇರುವ್ಯಕ್ತಿ ಯೇಸುಕ್ರಿಸ್ತನಿಗೇ ತಾಯಿಯಾದ ಮೇರಿಮಾತೆಯ ಜನನೋತ್ಸವವನ್ನು ಸೆಪ್ಟೆಂಬರ್ ೮ರಂದು ಜಗದಾದ್ಯಂತ ಕಥೋಲಿಕ ಕ್ರೈಸ್ತರು ಅತ್ಯುತ್ಸಾಹದಿಂದ ಆಚರಿಸುತ್ತಾರೆ. ಶಿವಾಜಿನಗರ ಬಸ್ನಿಲ್ದಾಣದ ಬದಿಯಲ್ಲೇ ಇರುವ ಬೆಂಗಳೂರಿನ ಪ್ರಾಚೀನ ಸಂತ ಮೇರಿ ದೇವಾಲಯ ಸೆಪ್ಟೆಂಬರ್ ಮೊದಲ ವಾರದಲ್ಲಿ ಜನಜಾತ್ರೆಯಿಂದ ಗಿಜಿಗುಡುತ್ತದೆ. ಹಬ್ಬಕ್ಕೆ ಮುಂಚಿನ ಎಂಟು ದಿನಗಳಲ್ಲೂ ಭಕ್ತರ ಯಾತ್ರೆ ಇರುತ್ತದೆ. ಇಡೀ ದಿನ ಎಲ್ಲೆಲ್ಲಿಂದಲೋ ಬಂದ ಭಕ್ತರ ಮಹಾಪೂರ ಸಂಜೆಯಾಗುತ್ತಿದ್ದಂತೆಯೇ ಉತ್ತುಂಗಕ್ಕೇರುತ್ತದೆ. ಮೇರಿ ಮಾತೆಗೆ ಹರಕೆಯೊಪ್ಪಿಸಲು ಏನೆಲ್ಲ ವೇಷಗಳು. ಇತ್ತೀಚೆಗಂತೂ ಕಾವಿಯ ಭರಾಟೆ ಜೋರಾಗಿದೆ. ಕಾವಿಯ ಶರ್ಟು ಪೈಜಾಮ, ಕಾವಿಯ ಸೀರೆ, ಕಾವಿಯ ಸೆಲ್ವಾರ್ಕಮಿಜ್ಗಳನ್ನು ತೊಟ್ಟವರ ಸಂಖ್ಯೆ ಬಹಳವಾಗಿದೆ. ಇಷ್ಟಾರ್ಥ ಕೈಗೂಡಲೆಂದೋ, ಕೆಲಸ ಸಿಗಲೆಂದೋ, ಮಕ್ಕಳಾಗಲೆಂದೋ, ಒಟ್ಟಿನಲ್ಲಿ ಯಾವುದೋ ನೆಪದಿಂದ ಜನ ಇಲ್ಲಿ ಧಾವಿಸಿ ಬರುತ್ತಾರೆ. ಮೋಂಬತ್ತಿ ಹಿಡಿದು ಸರತಿ ಸಾಲಿನಲ್ಲಿ ನಿಂತು ಮೇರಿ ಮಾತೆಯ ದರ್ಶನ ಪಡೆಯುತ್ತಾರೆ. ಕೆಲವರು ಉರುಳು ಸೇವೆಯನ್ನೂ ಮಾಡುತ್ತಾರೆ. ಕೆಲವರಂತೂ ಸಮೂಹಸನ್ನಿಗೊಳಗಾದವರಂತೆ ಬಿಕ್ಷುಕರ ಸಾಲಿನಲ್ಲಿ ನಿಂತು ಬಿಕ್ಷೆಯನ್ನೂ ಬೇಡುತ್ತಾರೆ.

ಕ್ರಿಸ್ತಶಕ ೧೬೪೮ರಲ್ಲಿ ಅಂದಿನ ಮೈಸೂರು ದೇಶದ ರಾಜಧಾನಿಯಾದ ಶ್ರೀರಂಗಪಟ್ಟಣಕ್ಕೆ ಕ್ರೈಸ್ತಧರ್ಮ ಕಾಲಿರಿಸಿದಾಗ ಬೆಂಗಳೂರು ಹೇಳಿಕೊಳ್ಳುವಂಥ ದೊಡ್ಡ ಪಟ್ಟಣವೇನೂ ಆಗಿರಲಿಲ್ಲ. ಬೆಂಗಳೂರಿನ ಮೊತ್ತಮೊದಲ ಚರ್ಚ್ ಅನ್ನು ಕಲಾಸಿಪಾಳ್ಯದಲ್ಲಿ ಹೈದರಾಲಿಯ ಕಾಲದಲ್ಲೇ ಅಂದರೆ ಸುಮಾರು ೧೭೨೪-೨೫ರಲ್ಲಿ ಕಟ್ಟಲಾಗಿತ್ತಾದರೂ ಟಿಪ್ಪುವಿನ ಆಳ್ವಿಕೆಯ ಅವಧಿಯಲ್ಲಿ ವಿದೇಶೀ ಪಾದ್ರಿಗಳು ಇಲ್ಲಿರಲು ಹಿಂಜರಿದರು. ಹಾಗಾಗಿ ೧೮ನೇ ಶತಮಾನದ ಮೈಸೂರು ಸೀಮೆಯ ಕ್ರೈಸ್ತ ಸಮುದಾಯದ ಇತಿಹಾಸ ೧೭೯೯ರವರೆಗೆ ಕತ್ತಲಿನಲ್ಲಿದೆ.

ಟಿಪ್ಪುವಿನ ಮರಣಾನಂತರ ಫ್ರೆಂಚ್ ಪಾದ್ರಿ ಅಬ್ಬೆದ್ಯುಬುವಾರವರ ಆಗಮನದೊಂದಿಗೆ ಕ್ರೈಸ್ತಧರ್ಮದ ಪುನರುಜ್ಜೀವನ ಕಾರ್ಯ ನಡೆಯಿತು. ಮೈಸೂರು ಸೀಮೆಯಲ್ಲಿ ಪ್ರಥಮಬಾರಿಗೆ ಸಿಡುಬು ನಿರೋಧಕ ಲಸಿಕೆಯನ್ನು ಪರಿಚಯಿಸಿದ ಅಬ್ಬೆದ್ಯುಬ್ವಾರವರು ಸೋಮನಹಳ್ಳಿ, ಕಾಮನಹಳ್ಳಿ, ಬೇಗೂರು, ಗಂಜಾಂ, ಪಾಲಳ್ಳಿ, ದೋರನಹಳ್ಳಿ, ಗಾರೇನಹಳ್ಳಿ, ಶೆಟ್ಟಿಹಳ್ಳಿ ಮುಂತಾದೆಡೆಗಳಲ್ಲಿದ್ದ ಕ್ರೈಸ್ತ ಗುಡಿಗಳನ್ನು ಸಂದರ್ಶಿಸುತ್ತಿದ್ದರು. ಈ ಸಂದರ್ಭದಲ್ಲಿಯೇ ಅವರು ಬರೆದ ಸಂಶೋಧನಾತ್ಮಕ ಪುಸ್ತಕ Hindu Manners, Customs and Ceremonies ಬೆಳಕು ಕಂಡಿತು. ಅವರ ಪೂಜಾರ್ಪಣೆಯ ವೇಳೆ ಧರಿಸುತ್ತಿದ್ದ ಧಾರ್ಮಿಕ ಉಡುಗೆತೊಡುಗೆಗಳನ್ನು ಪಾಲಳ್ಳಿ ಚರ್ಚಿನಲ್ಲಿ ಇಂದಿಗೂ ಸಂರಕ್ಷಿಸಿಡಲಾಗಿದೆ. ಅವರ ಪ್ರಯತ್ನದಿಂದ ಸುಮಾರು ಕ್ರಿಸ್ತಶಕ ೧೮೦೩ ರಲ್ಲಿ ಇಂದು ಶಿವಾಜಿನಗರ ಎನಿಸಿಕೊಂಡಿರುವ ಬಿಳೇಕಹಳ್ಳಿ (ಬಿಳಿ ಅಕ್ಕಿ ಹಳ್ಳಿ) ಎಂಬ ಪುಟ್ಟ ಊರಿನಲ್ಲಿ ತೆಂಗಿನ ಗರಿಯ ಸೂರು ಹೊದ್ದ ಪುಟ್ಟ ಚರ್ಚೊಂದು ತಲೆಯೆತ್ತಿತು.

೧೮೧೩ರಲ್ಲಿ ಬ್ರಿಟಿಷರು ತಮ್ಮ ನೌಕರರ ಬಳಕೆಗಾಗಿ ಈ ಬಿಳೇಕಹಳ್ಳಿಯ ಚರ್ಚ್ಅನ್ನು ಮೇಲ್ದರ್ಜೆಗೇರಿಸಿದರು. (ಮೇರಿಪ್ರತಿಮೆ ಇದ್ದ ಹಳೆಯ ದೇವಸ್ಥಾನದ ಮುಂಭಾಗದಲ್ಲಿ ಇಂದಿಗೂ '೧೮೧೩' ಎಂದು ಕೆತ್ತಿರುವುದನ್ನು ಕಾಣಬಹುದು). ಅಂದಿನಿಂದ ಆ ಚರ್ಚು Church of our Lady of Purification, Blackpalli ಎಂದು ಕರೆಸಿಕೊಂಡಿತು. ಆ ಸ್ಥಳದಲ್ಲಿ ಬಹುಸಂಖ್ಯೆಯಲ್ಲಿದ್ದ ತಿಗುಳ ಜನಾಂಗಕ್ಕೆ ಸೇರಿದ ಕ್ರೈಸ್ತರು ಬಿಳೇಕಹಳ್ಳಿಯನ್ನು ಬಿಳೇಕಪಳ್ಳಿ ಎನ್ನುತ್ತಿದ್ದರಿಂದಲೂ ಫ್ರೆಂಚ್ ಪಾದ್ರಿಗಳು ಪಾಂಡಿಚೇರಿಯಲ್ಲಿ ತರಬೇತಿ ಪಡೆದು ಬಂದವರಾಗಿದ್ದರಿಂದಲೂ ಅವರು ಬರೆದ ದಾಖಲೆಗಳಲ್ಲಿ ಬ್ಲ್ಯಾಕ್ಪಳ್ಳಿ ಎಂದ ನಮೂದಾಗಿರುವುದು ಸಹಜ. ೧೮೩೨ರಲ್ಲಿ ಜನಾಂಗ ಸಂಘರ್ಷ ನಡೆದು ಚರ್ಚ್ ಕಟ್ಟಡ ನೆಲಸಮವಾಯಿತೆಂದು ದಾಖಲಾಗಿದೆಯಲ್ಲದೆ ೧೮೫೬ರಿಂದ ೧೮೮೨ರವರೆಗೆ ಈ ಚರ್ಚ್ ಅನ್ನು Church of our Lady of Presentation ಎಂದು ಕರೆಯಲಾಗಿದೆ. ಕ್ರೈಸ್ತ ದೀಕ್ಷೆ ಪಡೆದವರ ಕುರಿತು ದಾಖಲಿಸುವ ದಸ್ತಾವೇಜು ೧೮೪೪ರಿಂದೀಚೆಗಿನ ಎಲ್ಲ ಅಂದರೆ ವ್ಯಕ್ತಿಯ ಮೂಲಹೆಸರು, ದೀಕ್ಷೆಯ ನಂತರದ ಹೆಸರು, ಮಾತೃಭಾಷೆ, ಕುಲ, ಅಂತಸ್ತು, ಕಸುಬು, ಮೂಲನೆಲೆ ಹಾಗೂ ಪ್ರಸಕ್ತ ನಿವಾಸಗಳ ವಿವರಗಳನ್ನು ಒಳಗೊಂಡಿದ್ದು ಇಲ್ಲಿನ ಮೂಲನಿವಾಸಿಗಳ ಹಾಗೂ ಅಂದು ಬ್ರಿಟಿಷರೊಂದಿಗೆ ಮದ್ರಾಸಿನಿಂದ ವಲಸೆ ಬಂದು ಅವರ ಅಡಿಗೆಯವರಾಗಿ, ಮಾಲಿಯಾಗಿ, ಸಿಪಾಯಿಯಾಗಿ ಚೇರಿಗಳಲ್ಲೋ ಬ್ಯಾರಕುಗಳಲ್ಲೋ ವಾಸವಿದ್ದವರ ವಿವರವನ್ನು ನೀಡುತ್ತದೆ.

ಫಾದರ್ ಕ್ಲೈನರ್ ಎಂಬುವರು ೧೮೭೫-೮೨ರ ಅವಧಿಯಲ್ಲಿ ಈಗಿರುವ ಭವ್ಯ ಚರ್ಚ್ ಅನ್ನು ಕಟ್ಟಿದರು. ಇದು ಬೆಂಗಳೂರಿನ ಮೊತ್ತಮೊದಲ ಗೋಥಿಕ್ ಶೈಲಿಯ ಚರ್ಚ್ ಆಗಿದ್ದು ಒಳಗಿನ ಕಂಬಗಳಲ್ಲಿ ದ್ರಾಕ್ಷಾಬಳ್ಳಿಯ ಉಬ್ಬು ಚಿತ್ತಾರವಿದೆ. ಪೂಜಾಪೀಠದ ಹಿಂದಿನ ಗೋಡೆಯಲ್ಲಿ ತಂದೆತಾಯಿಯರೊಂದಿಗೆ ಕ್ರಿಸ್ತನಿರುವ ವರ್ಣಸಂಯೋಜನೆಯ ಗಾಜಿನ ಫಲಕವಿದೆ. ಚರ್ಚ್ ಶಿಲುಬೆಯಾಕಾರದ ನೆಲಗಟ್ಟಿನಲ್ಲಿದ್ದು ಪೀಠದ ಎದುರಿನ ಅಂಕಣ ನಿಮ್ನ ವರ್ಗದವರಿಗೂ, ಅಡ್ಡರೆಕ್ಕೆಗಳು ಮೇಲ್ವರ್ಗದವರಿಗೂ ವಿದೇಶೀಯರಿಗೂ ಸ್ಥಾನ ಕಲ್ಪಿಸುತ್ತಿದ್ದವು. ೧೮೮೨ನೇ ಡಿಸೆಂಬರ್ ತಿಂಗಳ ೮ ನೇ ತಾರೀಕು ಪ್ರತಿಷ್ಠಾಪನೆ ಮಾಡಲಾದ ಈ ಚರ್ಚ್ಗೆ Church dedicated to the nativity of our Lady ಎಂದು ಹೆಸರಾಯಿತು.

ಅಂದು ಇಟಲಿ ದೇಶದಿಂದ ತರಿಸಿ ಸ್ಥಾಪಿಸಿದ ಮೇರಿಮಾತೆಯ ಸುಂದರ ಪ್ರತಿಮೆಯೇ ಇಂದು ಕ್ರೈಸ್ತರನ್ನು ದೇಶದೆಲ್ಲೆಡೆಯಿಂದ ಕೈಬೀಸಿ ಕರೆಯುತ್ತಿರುವ, ಅವರ ಇಷ್ಟಾರ್ಥಗಳನ್ನು ಈಡೇರಿಸುವ ಅತ್ಯಾಕರ್ಷಕವಾದ ಪವಾಡಪ್ರತಿಮೆ. ಮೂಲ ಪ್ರತಿಮೆಯಲ್ಲಿ ಮೇರಿಯ ಸೌಂದರ್ಯ ಇಟಾಲಿಯನ್ ದಿರುಸಿನಲ್ಲಿ ಕಂಗೊಳಿಸುತ್ತಿದ್ದರೆ ಇಂದು ಆಕೆ ಭಾರತನಾರಿಯ ಸಲ್ಲಕ್ಷಣ ಉಡುಪಾದ ಸೀರೆಯನ್ನುಟ್ಟು ನಯನ ಮನೋಹರವಾಗಿ ನಿಂತಿದ್ದಾಳೆ. ಆಕೆ ಎಡ ತೋಳಲ್ಲಿ ಹಸನ್ಮುಖಿ ಬಾಲಕ ಯೇಸು ವಿರಾಜಮಾನನಾಗಿದ್ದಾನೆ. ಭಕ್ತಾದಿಗಳು ಅರ್ಪಿಸಿದ ಬಂಗಾರದಿಂದ ತಯಾರು ಮಾಡಲಾದ ಕಿರೀಟಗಳು ಇವರಿಬ್ಬರ ತಲೆಗಳನ್ನು ಅಲಂಕರಿಸಿವೆ. ಮೇರಿ ಮಾತೆಯ ಬಲಗೈಯಲ್ಲಿ ಐವತ್ಮೂರು ಮಣಿಗಳ ಜಪಮಾಲೆ ತೂಗುತ್ತಿದೆ. ಭಕ್ತರು ಎಷ್ಟೇ ಪಾಪಿಷ್ಟರಾದರೂ ದೇವರ ಶಿಕ್ಷೆಗೆ ಗುರಿಯಾಗದಂತೆ ಈ ಮಮತಾಮಯಿ ತಾಯಿ ಉದ್ಧರಿಸುತ್ತಾಳೆಂದು ಭಾವಿಸಲಾಗುತ್ತದೆ. ಅಲ್ಲದೆ ಮೇರಿ ಮಾತೆ ಶುಭಪ್ರಸನ್ನಳಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ದಯಪಾಲಿಸುತ್ತಾಳೆಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಆಕೆಯನ್ನು ಆರೋಗ್ಯಮಾತೆ ಎಂದು ಗೌರವಿಸುತ್ತಾರೆ. ತಮ್ಮ ಪ್ರೀತಿ ಗೌರವ ಮತ್ತು ಭರವಸೆಗಳ ಪ್ರತೀಕವಾಗಿ ಮೇಣದ ಬತ್ತಿಗಳನ್ನು ಉರಿಸುತ್ತಾ ಪ್ರಾರ್ಥನೆ ಮಾಡುತ್ತಾ ಹೂಗಳನ್ನು ಅರ್ಪಿಸುತ್ತಾರೆ.

ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾದ ಈ ಸಂತ ಮೇರಿ ಚರ್ಚ್ ೧೯೭೩ರಲ್ಲಿ Church of our Lady of health ಎಂಬ ಹೆಸರು ಪಡೆದಿದೆಯಲ್ಲದೆ ತನ್ನ ಪ್ರಸಿದ್ಧಿಯ ಕಾರಣ ಕ್ರೈಸ್ತ ಜಗದ್ಗುರುಪೀಠದಿಂದ Basilica (ಮಹಾದೇವಾಲಯ) ಎಂಬ ಬಿರುದಿಗೆ ಪಾತ್ರವಾಗಿದೆ.