ಕನ್ನಡನಾಡಿಗೆ ಕ್ರಿಸ್ತನಾಗಮನ

ಕನ್ನಡನಾಡಿಗೆ ಕ್ರಿಸ್ತನಾಗಮನ

ಬರಹ

ಮೈಸೂರು ರಾಜ್ಯವನ್ನು ಕಂಠೀರವ ನರಸರಾಜ ಒಡೆಯರು ಆಳುತ್ತಿದ್ದ ಸಂದರ್ಭದಲ್ಲಿ ಅಂದರೆ ಕ್ರಿಸ್ತಶಕ ೧೬೪೮ ರಲ್ಲಿ ಇಟಲಿಯಿಂದ ಬಂದ ಜೆಸ್ವಿತ್ ಪಾದ್ರಿಗಳಿಂದ ಇಲ್ಲಿ ಕ್ರೈಸ್ತ ಧರ್ಮಪ್ರಚಾರ ಕಾರ್ಯ ಶುರುವಾಯಿತು. (ಇದಕ್ಕೂ ಮುನ್ನ ಹದಿಮೂರನೇ ಶತಮಾನದಲ್ಲಿ ದೊಮಿನಿಕನ್ನರೆಂಬ ಮಿಷನರಿಗಳು ಬೆಂಗಳೂರಿನ ಆಸುಪಾಸಿನಲ್ಲಿ ಓಡಿಯಾಡಿದ್ದರೆಂಬ ಊಹಾಪೋಹ ಇರುವುದಾದರೂ ಆ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ). ಗೋವೆಯಲ್ಲಿ ಮುಖ್ಯ ಕಚೇರಿ ಹೊಂದಿದ್ದ ಇಟಾಲಿಯನ್ ಜೆಸ್ವಿತರು ಕನ್ನಡನಾಡಿನ ಕರಾವಳಿ ಊರುಗಳಾದ ಹೊನ್ನಾವರ ಮತ್ತು ಮಂಗಳೂರುಗಳಲ್ಲಿ ಕ್ರಿಸ್ತಶಕ ೧೬೪೦ ರಲ್ಲೇ ಕ್ರೈಸ್ತ ಧರ್ಮಪ್ರಚಾರ ಕಾರ್ಯ ಕೈಗೊಂಡಿದ್ದರು. ಒಂದೆರಡು ವರ್ಷಗಳಲ್ಲಿ ಅವರು ಬಿದನೂರು ರಾಜ್ಯವನ್ನು ಪ್ರವೇಶಿಸಿದ್ದರು. ಕ್ರಿಸ್ತಶಕ ೧೬೪೮ರಲ್ಲಿ ಮೈಸೂರು ಸೀಮೆಯನ್ನು ಮೊದಲು ಪ್ರವೇಶಿಸಿದ ಪಾದ್ರಿ ಲಿಯೊನಾರ್ಡೊ ಚಿನ್ನಮಿ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಬಂದು ರಾಜನಿಂದ ಲಿಖಿತ ಅನುಮತಿ ಪಡೆದು ಕ್ಷೇತ್ರಕಾರ್ಯಕ್ಕೆ ತೊಡಗಿದರು.
ನಂತರದ ಹಲವಾರು ವರ್ಷಗಳಲ್ಲಿ ಅವರ ಹಾಗೂ ಅವರ ಸಂಗಡಿಗರ ಸತತ ಯತ್ನದಿಂದಾಗಿ ಶ್ರೀರಂಗಪಟ್ಟಣ, ಗಂಜಾಂ, ಪಾಲಳ್ಳಿ, ಚಿಕ್ಕಅರಸಿನಕೆರೆ, ಬಸವಾಪಟ್ಟಣಗಳಲ್ಲೂ ಚಾಮರಾಜನಗರ ಜಿಲ್ಲೆಯ ಕೂಟಗಲ್ಲು, ರಾಮಾಪುರ, ಪರಸೆಗೌಡನಪಾಳ್ಯಗಳಲ್ಲೂ ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ ಉಯ್ಯಂಬಳ್ಳಿ, ಹಾರೋಬೆಲೆ, ಸಣ್ಣೇನಹಳ್ಳಿ, ದೇವನಹಳ್ಳಿ, ಕಾರಹಳ್ಳಿಗಳಲ್ಲೂ ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ, ಗಂಜಾಂ ಪಾಲಳ್ಳಿ, ಚಿಕ್ಕಅರಸಿನಕೆರೆ, ಕೂಟಗಲ್ಲುಗಳಲ್ಲೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಬನ್ನೇರುಘಟ್ಟದ ಬಳಿಯ ಕಾಮನಹಳ್ಳಿ, ಆನೆಕಲ್ಲು, ಬಿಳೇಕಳ್ಳಿ(ಶಿವಾಜಿನಗರ),ಬೇಗೂರು, ಸೋಮನಹಳ್ಳಿ ಹಾಸನ ಜಿಲ್ಲೆಯಲ್ಲಿ ಶೆಟ್ಟಿಹಳ್ಳಿ, ಮಗ್ಗೆ, ಗಾರೇನಹಳ್ಳಿ, ಮೂಡಲದಾಸಾಪುರಗಳಲ್ಲೂ, ಶೀಮೊಗ್ಗೆಯಲ್ಲೂ, ಬೆಳಗಾವಿಯ ಕಿತ್ತೂರಿನಲ್ಲೂ, ಬಿಜಾಪುರ ಜಿಲ್ಲೆಯ ಗುಳೇದಗುಡ್ಡದಲ್ಲೂ ಈಗಿನ ತಮಿಳುನಾಡಿಗೆ ಸೇರಿಹೋಗಿರುವ ದಗನಿಕೋಟೆ ಜಿಲ್ಲೆಯ ತಳಿ, ಮರಂಡನಹಳ್ಳಿ, ಮದಗೊಂಡನಹಳ್ಳಿ, ದಾಸರಹಳ್ಳಿ ಮುಂತಾದೆಡೆಗಳಲ್ಲಿ ಚರ್ಚುಗಳು ತಲೆಯೆತ್ತಿದವು.
ಮೈಸೂರು ರಾಜ್ಯದಲ್ಲಿ ಹೈದರಾಲಿಯ ಆಳ್ವಿಕೆ ಪ್ರಾರಂಭವಾಗುವ ವೇಳೆಗೆ ನಾಡಿನ ಎಲ್ಲೆಗಳಲ್ಲಿ ಮಾರ್ಪಾಡುಗಳುಂಟಾಗಿ ದೇವನಹಳ್ಳಿಯವರೆಗೂ ರಾಜ್ಯವಿಸ್ತರಣೆ ಆಯಿತು. ಆ ವೇಳೆಗೆ ಜೆಸ್ವಿತರು ತಮ್ಮ ತಮ್ಮ ಪ್ರಚಾರ ಕ್ಷೇತ್ರಗಳನ್ನು ವಿಂಗಡಿಸಿಕೊಂಡು ಕರಾವಳಿ ಪ್ರಾಂತ್ಯದ ಮಲಬಾರ್ ಮಿಷನ್, ಮೈಸೂರು ಪ್ರಾಂತ್ಯದ ಮೈಸೂರು ಮಿಷನ್, ಮಧುರೆ ಪ್ರಾಂತ್ಯದ ಮಧುರೆ ಮಿಷನ್ ಹಾಗೂ ದೇವನಹಳ್ಳಿಯಿಂದಾಚೆಗೆ ಪೂರ್ವ ಕರಾವಳಿವರೆಗೆ ಕರ್ನಾಟಿಕ್ ಮಿಷನ್ ಎಂದು ಗುರುತಿಸಿಕೊಂಡಿದ್ದರು. ಇವರಿಗೆಲ್ಲ ಪ್ರಚಾರ ಸಾಮಗ್ರಿ, ಹಣ, ರಾಜಕಾಣಿಕೆ, ಪೂಜಾವಸ್ತು, ಪತ್ರ, ಔಷಧಿ ಇವೆಲ್ಲವೂ ಗೋವಾದಿಂದ ಕೋಡುಂಗಲ್ಲೂರಿಗೆ ಸಮುದ್ರಮಾರ್ಗದಲ್ಲೂ ಅಲ್ಲಿಂದ ಒಳನಾಡುಗಳಿಗೆ ನೆಲಮಾರ್ಗದಲ್ಲೂ ತಲುಪುತ್ತಿದ್ದವು. ಈ ಪ್ರದೇಶಗಳಿಗೆ ಹೊರತಾದ ಅಂದರೆ ಉಳ್ಳಾಲ, ಫರಂಗಿಪೇಟೆ, ಬಸ್ರೂರು, ಖಾನಾಪುರ, ಹೊನ್ನಾವರ, ಕಿತ್ತೂರು ಮುಂತಾದೆಡೆಗಳಲ್ಲಿನ ಪ್ರಚಾರ ಕಾರ್ಯವು ಗೋವೆಯಿಂದ ನೇರವಾಗಿ ನಡೆದಿತ್ತಲ್ಲದೆ ಅಲ್ಲಿನ ಪ್ರಚಾರ ಭಾಷೆ ಕೊಂಕಣಿಯೇ ಆಗಿತ್ತು. ಕ್ರಿಸ್ತಶಕ ೧೬೮೩ರಲ್ಲಿ ಗೋವೆಯು ಮರಾಠರ ದಾಳಿಗೆ ತುತ್ತಾದಾಗ ಅಲ್ಲಿನ ಕ್ರೈಸ್ತರು ಕರ್ನಾಟಕಕ್ಕೆ ಓಡಿಬಂದರು.
ಮೈಸೂರು ಮಿಷನ್ ಪಾದ್ರಿಗಳ ಒಂದು ನೂರು ವರ್ಷಗಳ ಪರಿಶ್ರಮದ ಫಲವಾಗಿ ನಾಡಿನಾದ್ಯಂತ ಗಣನೀಯ ಸಂಖ್ಯೆಯಲ್ಲಿ ಕ್ರೈಸ್ತರ ಮತ್ತು ಅವರ ಸಂತಾನದ ಸಂಖ್ಯೆ ಪರಿವರ್ಧಿಸಿತು. ಹೈದರಾಲಿಯು ಬೆಂಗಳೂರಿನ ಪೇಟೆ ಪ್ರದೇಶದಲ್ಲಿ ಕ್ರಿಸ್ತಶಕ ೧೭೨೪-೨೫ರಲ್ಲಿ ಕೋಟೆ ಕಟ್ಟಲುಪಕ್ರಮಿಸುವಾಗ ಆ ಕೋಟೆಯಂಚಿನಲ್ಲೇ ಸೈನಿಕರ ಮತ್ತು ಕೂಲಿಕಾರ್ಮಿಕರ ಧಾರ್ಮಿಕ ಅಗತ್ಯಗಳಿಗಾಗಿ ಒಂದು ಚರ್ಚ್ ತಲೆಯೆತ್ತಿತ್ತು. ಸ್ವಾಮಿ ಮರೀನೋ (Fr. Salvator Marino, SJ) ಅವರು ಅಮಲೋದ್ಭವಿ ಮರಿಯಾಮಾತೆಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದ ಈ ಚರ್ಚಿನ ಪ್ರಾರಂಭೋತ್ಸವಕ್ಕೆ ಬೆಂಗಳೂರಿನ ಪಾರುಪತ್ಯಗಾರನೂ ಬಂದು ಪ್ರಾರ್ಥನೆ ಮಾಡಿದನೆಂದು ಜೆಸ್ವಿತ್ ಪತ್ರಗಳಿಂದ ವೇದ್ಯವಾಗುತ್ತದೆ. (ಬೆಂಗಳೂರಿನ ಮೊತ್ತಮೊದಲನೆಯದೆನಿಸಿದ್ದ ಈ ಚರ್ಚ್ ತೀರಾ ಇತ್ತೀಚಿನವರೆಗೂ ಕಾರ್ಯನಿರ್ವಹಿಸಿ ಸುಮಾರು ೧೯೮೬ರ ವೇಳೆಗೆ ಪರಭಾರೆಯಾಯಿತು). ಇತ್ತ ಈ ಎಲ್ಲ ಚಟುವಟಿಕೆಗಳು ನಡೆದಿರುವಂತೆಯೇ ಅತ್ತ ಯೂರೋಪಿನಲ್ಲಿ ಧಾರ್ಮಿಕ ಸ್ಥಿತ್ಯಂತರಗಳು ನಡೆದುಹೋಗಿದ್ದವು. ಇಂಡಿಯಾ ಮತ್ತು ಪೌರ್ವಾತ್ಯದೇಶಗಳ ವ್ಯಾಪಾರ ಮತ್ತು ಧರ್ಮಪ್ರಚಾರಗಳ ಸ್ವಾಮ್ಯ ತಮ್ಮದೇ ಎಂದು ವಾದಿಸಿದ ಪೋರ್ಚುಗೀಸರು ಪೋಪರ ಮೇಲೆ ಒತ್ತಡ ತಂದು ಇಂಡಿಯಾದಲ್ಲಿದ್ದ ಎಲ್ಲ ಜೆಸ್ವಿತ್ ಪಾದ್ರಿಗಳನ್ನೂ ಹಿಂದಕ್ಕೆ ಹೋಗುವಂತೆ ಮಾಡಿದರು. ಇದು ಸಾಲದೆಂಬಂತೆ ಮೈಸೂರು ಸೀಮೆಯಲ್ಲಿ ಟಿಪ್ಪುವಿಗೂ ಇಂಗ್ಲಿಷರಿಗೂ ನಡುವೆ ನಾಲ್ಕು ಮಹಾಯುದ್ಧಗಳು ನಡೆದು ಆ ಸಂದರ್ಭದ ಧರ್ಮಪ್ರಚಾರಕ್ಕೂ ಹಿನ್ನಡೆ ಉಂಟಾಯಿತು.

೧೭೯೧ರಲ್ಲಿ ಮೂರನೇ ಮೈಸೂರು ಯುದ್ಧ ನಡೆದು ಬೆಂಗಳೂರು ಕೋಟೆ ಪೇಟೆಯೆಲ್ಲ ಇಂಗ್ಲಿಷರ ಕೈವಶವಾಯ್ತು. ಒಂದು ವರ್ಷದ ನಂತರ ಮತ್ತೆ ಅದನ್ನು ಅವರು ಟಿಪ್ಪುವಿಗೇ ನೀಡಿದರು. ಟಿಪ್ಪು ಸಂಪೂರ್ಣ ನೆಲಕಚ್ಚಿದ ನಂತರ ಅಂದರೆ ೧೮೦೯ರಲ್ಲಿ ಬೆಂಗಳೂರಿನ ಅರ್ಧಭಾಗ ಇಂಗ್ಲಿಷ್ ಸೈನ್ಯದ ಶಾಶ್ವತ ಠಾಣ್ಯವಾಗಿ ಮಾರ್ಪಟ್ಟಿತು. ಈ ದಂಡುಪ್ರದೇಶವು ಬೆಳೆದಂತೆಲ್ಲ ಅವರ ಸೇವಕರಾಗಿ ಬಂದ ತಮಿಳರೂ ಬೆಂಗಳೂರಿನ ಖಾಯಂ ನಿವಾಸಿಗಳಾದರು.

ಟಿಪ್ಪುವಿನ ಮರಣಾನಂತರ ಅಂದರೆ ೧೮೦೩ರ ವೇಳೆಗೆ ಇಂಡಿಯಾದ ಪ್ರೆಂಚ್ ವಸಾಹತುಗಳಲ್ಲಿದ್ದ ಫ್ರೆಂಚ್ ಪಾದ್ರಿಗಳು ಮೈಸೂರಿನತ್ತ ಮುಖ ಮಾಡಿದರು. ಇವರಲ್ಲಿ ಮೊದಲಿಗೆ ಬಂದವರು ಅಬ್ಬೆ ದ್ಯುಬುವಾ ಎಂಬ ಪಾದ್ರಿ. ಮೈಸೂರು ಪ್ರಾಂತ್ಯದಲ್ಲಿ ಮೊತ್ತಮೊದಲ ಬಾರಿಗೆ ಸಿಡುಬುಲಸಿಕೆಯನ್ನು ಪರಿಚಯಿಸಿದ ಕೀರ್ತಿ ಇವರದು. ಇವರು Hindu Manners, Customs and Ceremonies ಎಂಬ ಮೌಲಿಕ ಪುಸ್ತಕವನ್ನೂ ಬರೆದಿದ್ದಾರೆ. ಶ್ರೀರಂಗಪಟ್ಟಣದ ಬಳಿಯಿರುವ ಚರ್ಚಿನಲ್ಲಿ ಅಬ್ಬೆ ದ್ಯುಬುವಾರವರು ಧರಿಸುತ್ತಿದ್ದರೆನ್ನಲಾದ ಪೂಜಾವಸ್ತ್ರಗಳನ್ನು ಇನ್ನೂ ಸಂರಕ್ಷಿಸಿಡಲಾಗಿದೆ.

ಇವರ ನಂತರ ಬಂದ ಇತರ ಫ್ರೆಂಚ್ ಪಾದ್ರಿಗಳು ಪಾಂಡಿಚೇರಿಯಲ್ಲಿ ಸಿದ್ಧತಾ ಶಿಕ್ಷಣ ಪಡೆದು ಬರುತ್ತಿದ್ದರಲ್ಲದೆ ಇಂಡಿಯಾದಲ್ಲಿ ತಮಿಳು ಭಾಷೆಯೊಂದೇ ಚಲಾವಣೆಯಲ್ಲಿದೆ ಎಂದು ಪರಿಭಾವಿಸಿದ್ದರು. ಈ ಎಂಇಪಿ (ಮಿಸಿಯೋಂ ಎತ್ರಾಂಜೇರ್ ದ ಪಾರೀ = ಪ್ಯಾರಿಸ್ಸಿನ ಹೊರದೇಶ ಧರ್ಮಪ್ರಚಾರ ಸಂಸ್ಥೆ) ಪಾದ್ರಿಗಳು ಇಟಾಲಿಯನ್ ಜೆಸ್ವಿತರಂತೆ ಬುದ್ಧಿವಂತರೂ ವಾಗ್ಮಿಗಳೂ ಆಗಿರಲಿಲ್ಲ. ಅವರ ಸೇವಾ ಮನೋಭಾವವೂ ಅಷ್ಟಕ್ಕಷ್ಟೇ. ಅದೇ ವೇಳೆಗೆ ದೂರದ ಫ್ರೆಂಚ್ ಸಂಸತ್ತಿನಲ್ಲಿ ಇಂಡಿಯಾದಲ್ಲಿ ವಸಾಹತು ಹೊಂದುವ ಪ್ರಸ್ತಾವ ಬಿದ್ದುಹೋಯಿತಲ್ಲದೇ ಧರ್ಮಪ್ರಚಾರಕರಿಗೆ ನೀಡುವ ಸಹಾಯಧನದ ಕುರಿತಂತೆ ಒಮ್ಮತ ಉಂಟಾಗಲಿಲ್ಲ. ಎಂಇಪಿ ಸಂಸ್ಥೆಯ ಪಾದ್ರಿಗಳು ಹೊಸದಾಗಿ ಮತಪ್ರಚಾರ ಮಾಡುವುದಿರಲಿ ಇದ್ದ ಅಲ್ಪಸ್ವಲ್ಪ ಕ್ರೈಸ್ತ ಘಟಕಗಳಿಗೇ ಧಾರ್ಮಿಕ ಅಗತ್ಯಗಳನ್ನು ಪೂರೈಸುವುದಕ್ಕೇ ಹೆಣಗಬೇಕಾಯಿತು.

ಬೆಂಗಳೂರಿನಲ್ಲಿ ಅದಾಗಲೇ ಇಂಗ್ಲಿಷರ ಸೇವಕರಾಗಿ ಮನೆಮಾಡಿದ್ದ ತಮಿಳರು ಚರ್ಚುಗಳಲ್ಲಿ ತಮ್ಮ ಆಧಿಪತ್ಯ ನಡೆಸಿದ್ದರು. ಈ ಸ್ಥಳದಲ್ಲಿ ಬಹುಸಂಖ್ಯೆಯಲ್ಲಿದ್ದ ತಿಗುಳ ಜನಾಂಗಕ್ಕೆ ಸೇರಿದ ಕ್ರೈಸ್ತರು ಜೆಸ್ವಿತರಿಂದ ಕನ್ನಡದಲ್ಲಿ ಧರ್ಮದೀಕ್ಷೆ ಪಡೆದು ಕನ್ನಡದಲ್ಲೇ ವ್ಯವಹರಿಸುವವರಾಗಿದ್ದರೂ ಸಹ ಅವರನ್ನು ತಮಿಳರೆಂದೇ ತಪ್ಪಾಗಿ ಭಾವಿಸಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಮೈಸೂರು ಸೀಮೆಯಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಮೂಲನಿವಾಸಿಗಳಾಗಿದ್ದ ಕನ್ನಡಿಗ ಕ್ರೈಸ್ತರಿಗೆ ಹೆಚ್ಚಿನ ಆತ್ಮಿಕ ಪೋಷಣೆ ಸಿಗಲಿಲ್ಲ. ಆದರೆ ಗೃಹಸ್ಥ ಉಪದೇಶಿಗಳ ನಿರಂತರ ಕಾರ್ಯತತ್ಪರತೆಯ ಕಾರಣದಿಂದ ಹಳ್ಳಿಗಳಲ್ಲಿನ ಕ್ರೈಸ್ತರಲ್ಲಿ ಕನ್ನಡತನ ಉಳಿದಿತ್ತೆಂಬುದೇ ಸಮಾಧಾನದ ಅಂಶ.

ಕನ್ನಡ ಕ್ರೈಸ್ತರ ಚಳವಳಿ
೧೯೬೦ರ ದಶಕದ ವ್ಯಾಟಿಕನ್ ಸುಧಾರಣೆಯನ್ವಯ ಧರ್ಮಪೀಠಗಳು ಸ್ಥಳೀಯ ಸಂಸ್ಕೃತಿ, ಸ್ಥಳೀಯ ಬಾಷೆ ಹಾಗೂ ನೆಲದ ನಿಯಮಗಳಿಗೆ ಮಾನ್ಯತೆ ನೀಡಬೇಕಿತ್ತು. ಭಾಷೆಯ ನೆಲೆಗಟ್ಟಿನಲ್ಲಿ ರೂಪಿತವಾದ ಕರ್ನಾಟಕ ರಾಜ್ಯದ ನೆಲದ ನಿಯಮದನ್ವಯ ಕನ್ನಡ ಸಂಸ್ಕೃತಿ ಕನ್ನಡ ಭಾಷೆಗಳಿಗೆ ಮನ್ನಣೆ ಸಿಗಬೇಕಲ್ಲವೇ? ಆದರೆ ಬೆಂಗಳೂರು ಪ್ರದೇಶದಲ್ಲಿದ್ದ ವರಿಷ್ಠ ಪಾದ್ರಿಗಳು ಕ್ರೈಸ್ತರೆಂದರೆ ತಮಿಳು ಮಾತನಾಡುವವರು ಇಲ್ಲವೇ ತಮಿಳು ಬಲ್ಲವರು ಮಾತ್ರ, ತಮಿಳೇತರರು ಯಾರೂ ಕ್ರೈಸ್ತರಲ್ಲ ಎಂದು ಭಾವಿಸಿಕೊಂಡರು. ಅದೇ ರೀತಿ ಬಿಷಪ್ ತೋಮಾಸ ಪೋತಕಮರಿಯವರ ಕಾಲದಲ್ಲಿ ಕರ್ನಾಟಕದ ಕರಾವಳಿ ಭಾಗದಿಂದ ಹಾಗೂ ಗೋವೆಯಿಂದ ಎರವಲಾಗಿ ಬಂದಿದ್ದ ಪಾದ್ರಿಗಳು ನಿಜಕ್ರೈಸ್ತರೆಂದರೆ ತಾವು ಮಾತ್ರ, ಉಳಿದವರೆಲ್ಲ ಗುಗ್ಗುಗಳು ಎಂದು ಭಾವಿಸಿಕೊಂಡರು. ಇದರಿಂದ ಬೆಂಗಳೂರು, ಕೋಲಾರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಮಣ್ಣಿನ ಮಕ್ಕಳು ತಮಿಳಿನಲ್ಲಿ ದೈವಾರಾಧನೆ ನಡೆಸುವ ಅನಿವಾರ್ಯತೆಯ ಜೊತೆಗೆ ಗುರುಪಟ್ಟ ಪಡೆಯುವ ಹಾಗೂ ಬಿಷಪ್ಗಿರಿ ಹೊಂದುವುದರಿಂದ ವಂಚಿತರಾದರು.

ಕೊಡಗು, ಮಂಡ್ಯ, ಮೈಸೂರುಗಳನ್ನೊಳಗೊಂಡ ಮೈಸೂರು ಧರ್ಮಪೀಠ, ಹಾಸನ, ಚಿಕ್ಕಮಗಳೂರು, ಶೀಮೊಗ್ಗೆಯನ್ನೊಳಗೊಂಡಿದ್ದ ಚಿಕ್ಕಮಗಳೂರು ಧರ್ಮಪೀಠ, ರಾಯಚೂರು, ಬಳ್ಳಾರಿಗಳುಳ್ಳ ಬಳ್ಳಾರಿ ಧರ್ಮಪೀಠಗಳಲ್ಲಿ ವ್ಯಾಟಿಕನ್ ಸುಧಾರಣೆಯನ್ನು ಯಥಾವತ್ತಾಗಿ ಆನುಷ್ಠಾನಗೊಳಿಸಿದ ಪರಿಣಾಮ ಆ ಧರ್ಮಪೀಠಗಳಲ್ಲಿ ಸ್ಥಳೀಯ ಭಾಷೆ- ಸಂಸ್ಕೃತಿಗಳು ಚರ್ಚಿನ ಅಳವಡಿಕೆಗೆ ಬಂದವು.

ಆದರೆ ಆ ಧರ್ಮಪೀಠಗಳಿಗೆ ಪಾದ್ರಿಗಳಾಗಿ ಹೋಗುವವರಿಗೆ ತರಬೇತಿ ನಡೆಯುತ್ತಿದ್ದುದು ಬೆಂಗಳೂರಿನ ಗುರುಮಠದಲ್ಲಿ. ಈ ಬೆಂಗಳೂರಿನ ಗುರುಮಠದ ಆಳ್ವಿಕೆಯ ಸಿಂಹಪಾಲು ತಮಿಳರ ಕೈಯಲ್ಲಿತ್ತು, ಇಲ್ಲಿ ತರಬೇತಿ ಪಡೆಯುತ್ತಿದ್ದವರೂ ಹೆಚ್ಚಿನ ಪಾಲು ತಮಿಳರೇ. (ಇದು ಈಗಲೂ ಬದಲಾಗಿಲ್ಲ). ಇವರ ಅಟ್ಟಹಾಸದ ನಡುವೆ ಕನ್ನಡ ಭಾಷಿಕ ಗುರುಅಭ್ಯರ್ಥಿಗಳು ತಮ್ಮ ಪ್ರತಿಭೆಗಳನ್ನು ಗುಪ್ತವಾಗಿ ಮೆರೆಯಬೇಕಿತ್ತು. ತಮಿಳರ ಧಾರ್ಮಿಕ ಸಾಹಿತ್ಯರಚನೆ, ಗಾಯನಾಭ್ಯಾಸ, ನಾಟಕಾಭ್ಯಾಸಗಳಿಗೆ ರಾಜಮನ್ನಣೆಯಿದ್ದು ಸಭಾಂಗಣದಲ್ಲಿ ನೆರವೇರುತ್ತಿದ್ದವು. ಕನ್ನಡಿಗರ ಈ ಕೆಲಸಗಳು ಅವರ ಕೊಠಡಿಗಳಲ್ಲೆ ನಡೆಯಬೇಕಿತ್ತು. ಗುರುಮಠದ ವರಿಷ್ಠರ ಕಣ್ಣಿಗೆ ಇದು ಪಿತೂರಿಯಾಗಿ ಕಾಣುತ್ತಿತ್ತು. ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಅತಿ ಕ್ಷುಲ್ಲಕ ಕಾರಣಕ್ಕೂ ಕನ್ನಡ ಗುರುಅಭ್ಯರ್ಥಿಗಳನ್ನು ಸೆಮಿನರಿಯಿಂದ ಹೊರಗಟ್ಟುವುದು ಸಾಮಾನ್ಯ ವಿಷಯವಾಗಿತ್ತು.

ಫಾದರ್ ಪೆನ್ವೆನ್ ಎಂಬ ಫ್ರೆಂಚ್ ಪಾದ್ರಿಯ ಅಭಯಾಶ್ರಯದಲ್ಲಿ ವಿಧ್ಯಾರ್ಥಿಗಳಾಗಿದ್ದ ಜಾರ್ಜ್ ಡಿಸೋಜ, ಅಂತಪ್ಪ, ಎನ್. ಎಸ್. ಮರಿಜೋಸೆಫ್, ಸ್ಟ್ಯಾನಿಬ್ಯಾಪ್ಟಿಸ್ಟ್ ಮುಂತಾದವರು ಕಲೆತು ಬೈಬಲ್ ಭಾಷಾಂತರ, ಕನ್ನಡದಲ್ಲಿ ಪಾರ್ಥನಾ ವಿಧಿಗಳು, ಕನ್ನಡ ದೈವಾರಾಧನಾ ಗೀತೆಗಳು ಮುಂತಾದವನ್ನು ಪ್ರಕಾಶಕ್ಕೆ ತಂದರು. ಚಿಕ್ಕಮಗಳೂರು ಧರ್ಮಪ್ರಾಂತ್ಯದ ಜ್ಯೋಮೇರಿ ಲೋಬೊರವರು ಪ್ರಕಟಿಸಿದ ಗೀತಾಮೃತ, ಗಾನಾಮೃತ ಎಂಬ ಸ್ವರಪ್ರಸ್ತಾರಗಳ ಪುಸ್ತಕಗಳು ಕಥೋಲಿಕ ಗಾನಮಾಧುರ್ಯಕ್ಕೆ ಅದ್ಭುತ ದಾಖಲೆಗಳು. ಅಂತೆಯೇ ಮಂಗಳೂರಿನ ಪ್ರಕಾಶಾಲಯದವರು ಪ್ರಕಟಿಸುತ್ತಿದ್ದ ಧಾರ್ಮಿಕ ಪುಸ್ತಕಗಳು ಈ ಹಾದಿಯಲ್ಲಿ ಹೊಸ ಸೊಗಡು ತಂದವು. ಕ್ರಿಸ್ತಧರ್ಮವನ್ನು ಕನ್ನಡನಾಡಿನಲ್ಲಿ ಬಲವಾಗಿ ಬೇರೂರಿಸುವ ಪ್ರಯತ್ನದಲ್ಲಿ ಮೈಸೂರಿನ ಅಪ್ರತಿಮ ಕನ್ನಡಾಭಿಮಾನಿ ಬಿಷಪ್ ಮತಿಯಾಸ್ ಫೆರ್ನಾಂಡಿಸರ ಸೇವೆಯನ್ನು ಮರೆಯಲಾಗದು. ಇವೆಲ್ಲವುಗಳಿಂದ ಬೆಂಗಳೂರು ಹೊರತುಪಡಿಸಿ ಮೇಲೆ ಹೇಳಿದ ಎಲ್ಲ ಇತರ ಧರ್ಮಪೀಠಗಳು ಕನ್ನಡದ ನಿಟ್ಟಿನಲ್ಲಿ ಸಮೃದ್ಧವೆನಿಸಿದವು.

ದುರದೃಷ್ಟವಶದಿಂದ ಅದೇ ವೇಳೆಗೆ ಬೆಂಗಳೂರು ಮಹಾಧರ್ಮಾಧಿಕಾಯಾಗಿ ಲೂರ್ದುಸಾಮಿಯವರು ನೇಮಕಗೊಂಡಿದ್ದರಿಂದ ಇಲ್ಲಿನ ಎಲ್ಲ ಕನ್ನಡಪರ ಚಟುವಟಿಕೆಗಳಿಗೆ ಕಲ್ಲು ಬಿತ್ತು. ವ್ಯಾಟಿಕನ್ ಸುಧಾರಣೆಗೂ ಮೊದಲೇ ಬಳಕೆಯಲ್ಲಿದ್ದ ಕನ್ನಡ ಆರಾಧನಾವಿಧಿ, ಪ್ರಾರ್ಥನೆಗಳು, ಬೈಬಲ್ ಭಾಷಾಂತರಕಾರ್ಯ ಎಲ್ಲವೂ ಅನಧಿಕೃತ ಎಂಬಂತೆ ಚರ್ಚ್ ವರಿಷ್ಠರು ನಡೆದುಕೊಂಡರು. ಲೂರ್ದುಸಾಮಿಯವರ ತಮಿಳು ಭಾಷಾಂಧತೆಯೆಂಬ ನೀಚತನದಿಂದಾಗಿ ಚರ್ಚು ವಲಸಿಗರ ಏಜಂಟಿನಂತೆ ವರ್ತಿಸಿ ಕನ್ನಡ ಭಾಷೆಯನ್ನೂ ಸಂಸ್ಕೃತಿಯನ್ನೂ ನಿರಂತರವಾಗಿ ತುಳಿಯತೊಡಗಿತು. ಬೆಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಭಾಷೆ ತಮಿಳು ಎಂಬಂತೆ ಬಿಂಬಿಸಲಾಯಿತು. ತಮಿಳು ಪ್ರಾರ್ಥನೆಗಳನ್ನು ಹಾಡುಗಳನ್ನು ಎಲ್ಲ ಕ್ರೈಸ್ತರೂ ಬಳಸುವ ಸಲುವಾಗಿ ಅವನ್ನು ಕನ್ನಡ ಲಿಪಿಯಲ್ಲಿ ಮುದ್ರಣ ಮಾಡುವ ಪರಿಪಾಠ ಸಹಾ ಮೊದಲಾಯಿತು. ಚರ್ಚಿನ ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ತಮಿಳರೇ ತುಂಬಿಕೊಂಡರು. ತಮಿಳುಭಾಷಿಕ ಪಾದ್ರಿಗಳನ್ನು ತಮಿಳುನಾಡಿನಿಂದ ಆಮದು ಮಾಡಿಕೊಳ್ಳಲಾಯಿತು. ಸ್ಥಳೀಯ ಅಭ್ಯರ್ಥಿಗಳಲ್ಲಿ ಪ್ರಬುದ್ಧತೆಯಲ್ಲಿ ಕೊರತೆಯಿದ್ದವರೂ ತಮ್ಮ ಹೌದಪ್ಪ ಗುಣದ ಕಾರಣ ಪಾದ್ರಿಗಳಾದರು. ಆದರೆ ನಿಜವಾಗಿಯೂ ಅರ್ಹರೆನಿಸಿದ್ದ ಅಭ್ಯರ್ಥಿಗಳು ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿದರೆಂಬ ಕಾರಣಕ್ಕೆ ಗುರುಮಠದಿಂದ ಹೊರದಬ್ಬಲ್ಪಟ್ಟರು.

ಇನ್ನು ಜನಸಾಮಾನ್ಯರ ಪಾಡೂ ಹೇಳತೀರದಾಗಿತ್ತು. ಪಾದ್ರಿಯೆಂದರೆ ದೈವಸ್ವರೂಪಿ, ಪಾದ್ರಿ ಹೇಳಿದ್ದೇ ವೇದವಾಕ್ಯ ಎಂದು ತಿಳಿದಿದ್ದ ಭೋಳೆ ಸ್ವಭಾವದ ಕನ್ನಡಿಗ ಭಕ್ತಾದಿಗಳು ಇವೆಲ್ಲವನ್ನೂ ಸಹಿಸಿಕೊಂಡು ತಮಿಳು ಪ್ರಾರ್ಥನೆ, ಹಾಡುಗಳನ್ನು ಕನ್ನಡ ಲಿಪಿಯಲ್ಲಿ ಬರೆದು ಬಳಸುತ್ತಿದ್ದುದು ಇನ್ನೂ ನೆನಪಿನಿಂದ ಮಾಸಿಲ್ಲ. ಚರ್ಚಿನಲ್ಲಿ ಬಳಸಲ್ಪಡುವ ಭಾಷೆಗೆ ಜೋತು ಬಿದ್ದದ್ದು ವಿನಯತೆ ವಿಧೇಯತೆಯ ಸಂಕೇತವಾಗಿತ್ತು. ಅಲ್ಲದೆ ಧಾರ್ಮಿಕ ಕಟ್ಟುಪಾಡುಗಳನ್ನು ಪ್ರಶ್ನಿಸಬಾರದೆನ್ನುವ ಮತಸಂಹಿತೆಗೆ ಅನುಗುಣವಾಗಿತ್ತು. ಆದರೆ ಬದುಕಿನ ಎಲ್ಲ ಆಯಾಮಗಳಲ್ಲೂ ಅವರದು ಹೇಳಿತೀರದ ಬವಣೆ. ಕ್ರೈಸ್ತ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಸ್ಥಾನವಿಲ್ಲ, ಉದ್ಯೋಗವಿಲ್ಲ, ಅವರ ಮಕ್ಕಳಿಗೆ ಚರ್ಚಿನ ಶಾಲೆಗಳಲ್ಲಿ ಪ್ರವೇಶವಿಲ್ಲ. ಯಾವುದೇ ಸಭೆ ಸಮಾರಂಭಗಳಲ್ಲಿ ಕನ್ನಡಿಗರು ದ್ವಿತೀಯ ದರ್ಜೆಯ ಪ್ರಜೆಗಳು. ಆಯಕಟ್ಟಿನ ಜಾಗಗಳಲ್ಲಿ, ಉದ್ಯೋಗಗಳಲ್ಲಿ, ಶಿಕ್ಷಣ, ಆರ್ಥಿಕ ಕೊಳುಕೊಡುಗೆಗಳಲ್ಲಿ ಎಲ್ಲದರಲ್ಲೂ ತಮಿಳರಿಗೇ ಮೊದಲಮಣೆ ಸಿಗತೊಡಗಿದಾಗ ಮಣ್ಣಿನ ಮಕ್ಕಳ ಒಳಗುದಿ ಕ್ರಮೇಣ ಬಲಿಯತೊಡಗಿತ್ತು.

ಸಾವು, ಮದುವೆಗಳಂತಹ ಖಾಸಗಿ ಸಂದರ್ಭಗಳಲ್ಲೂ ಕನ್ನಡದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲವೆಂದಾಗ ಮಾತ್ರ ಕನ್ನಡಿಗರ ರೋಷ ಭುಗಿಲೆದ್ದಿತು. ಸುಪ್ತವಾಗಿ ಹೊಗೆಯಾಡುತ್ತಿದ್ದ ಈ ಅಸಹನೆಯ ಕಾವು ೧೯೭೭ರಲ್ಲಿ ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದಲ್ಲಿ ಭುಗಿಲೆದ್ದಿತು. ಜನಸಾಮಾನ್ಯರ ಕೂಗಿಗೆ ಸ್ಪಂದಿಸದೆ ಕಣ್ಣು ಮುಚ್ಚಿಕೊಂಡಿದ್ದ ಧರ್ಮಸಭೆಯನ್ನು ತಿವಿದು ಎಬ್ಬಿಸಿ ಗಾಂಧಿಮಾರ್ಗದಲ್ಲಿ ಹೋರಾಟ ಪ್ರಾರಂಭಿಸಿದ ಕನ್ನಡ ಕ್ರೈಸ್ತರು ಧಾರ್ಮಿಕ ಮುಖಂಡರಿಂದ ಬಹಿಷ್ಕಾರದ ಬೆದರಿಕೆಯನ್ನು, ಮನೆಮಂದಿಯಿಂದ ವಾಗ್ಬಾಣಗಳನ್ನು ಎದುರಿಸಬೇಕಾಗಿ ಬಂದರೂ ಅಂದಿನ ಐತಿಹಾಸಿಕ ಘಟನೆಗೆ ಕಾರಣಪುರುಷರಾದರು.

ಕರ್ನಾಟಕದ ಚರ್ಚುಗಳಲ್ಲಿ ಕನ್ನಡಕ್ಕೆ ಮೊದಲ ಮರ್ಯಾದೆ ಸಿಕ್ಕಬೇಕು, ಚರ್ಚುಗಳ ಸವಲತ್ತುಗಳು ಸ್ಥಳೀಯ ಕನ್ನಡ ಕ್ರೈಸ್ತರಿಗೂ ದಕ್ಕಬೇಕು ಎಂಬ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ೧೯೭೭ ನವೆಂಬರ್ ೧೭ರಂದು "ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ" ಎಂಬ ನಾಮಫಲಕದಡಿ ಹೊಸ ಕ್ರಾಂತಿಗೆ ತೊಡಗಿತು. ಕ್ರೈಸ್ತ ಕನ್ನಡಿಗರ ನ್ಯಾಯಯುತ ಹಕ್ಕೊತ್ತಾಯಗಳನ್ನು ಈಡೇರಿಸುವುದರ ಬದಲಿಗೆ ಧರ್ಮಸಭೆಯು ತಮಿಳು ಕ್ರೈಸ್ತರನ್ನು ಎತ್ತಿಕಟ್ಟಿ ವಿರೋಧ ಹುಟ್ಟಿಸುವಲ್ಲಿ ಯಶಸ್ವಿಯಾಯಿತಲ್ಲದೆ ಚಳವಳಿಗಾರರನ್ನು ಜೈಲಿಗೆ ಕಳಿಸುವ ಸಾಹಸಕ್ಕೂ ಕೈ ಹಾಕಿತು. ಅನಂತರ ಚಳವಳಿ ಬೃಹದ್ವ್ಯಾಪಿಯಾಗಿ ರೋಮಿನವರೆಗೆ ದೂರು ಹೋಯಿತು.