೧೫೭. ಲಲಿತಾ ಸಹಸ್ರನಾಮ ೭೦೧ರಿಂದ ೭೦೩ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೦೧ - ೭೦೩
Deśa-kālā-paricchinnā देश-काला-परिच्छिन्ना (701)
೭೦೧. ದೇಶ-ಕಾಲಾ-ಪರಿಚ್ಛಿನ್ನಾ
ದೇವಿಯು ದೇಶ ಮತ್ತು ಕಾಲಗಳ ಪರಿಮಿತಿಗಳಿಗೆ ಒಳಪಡುವುದಿಲ್ಲ. ಮಹರ್ಷಿ ಪತಂಜಲಿಯು ತನ್ನ ಯೋಗ ಸೂತ್ರದಲ್ಲಿ (೧.೨೬) ಹೀಗೆ ಹೇಳುತ್ತಾನೆ, "ಸ ಪೂರ್ವಾಷೇಮಪಿ ಗುರುಃ ಕಾಲೇನಾನವಚ್ಛೇದಾತ್” ಅಂದರೆ ಕಾಲದ ಪರಿಮಿತಿಗೆ ಒಳಪಡದ್ದರಿಂದ ಅವನು (ಬ್ರಹ್ಮವು) ಗುರುಗಳಿಗೂ ಗುರುವಾಗಿದ್ದಾನೆ. ಇದು ಬ್ರಹ್ಮದ ವಿಶಿಷ್ಠ ಲಕ್ಷಣವಾಗಿದೆ. ಎಲ್ಲಾ ಜೀವಿಗಳು ಕಾಲ ಮತ್ತು ದೇಶಗಳಿಗೆ ಬದ್ಧವಾಗಿವೆ.
ಈ ಸಹಸ್ರನಾಮದಲ್ಲಿ ಲಲಿತಾಂಬಿಕೆಯ ಪರಬ್ರಹ್ಮ ಸ್ವರೂಪವನ್ನು ದೃಢಪಡಿಸುವ ಅನೇಕ ನಾಮಗಳಿವೆ. ಆದರೆ ಈ ಪ್ರತಿಯೊಂದು ನಾಮವೂ ಬ್ರಹ್ಮದ ವಿವಿಧ ಗುಣಗಳನ್ನು ಸೂಚಿಸುತ್ತವೆ. ಇಲ್ಲಿ ಅವಶ್ಯವಾಗಿ ಗಮನಿಸಬೇಕಾದ ಸಂಗತಿಯೇನೆಂದರೆ, ಬ್ರಹ್ಮವು ನಾಮ, ರೂಪ ಮತ್ತು ಗುಣಗಳಿಗೆ ಅತೀತವಾಗಿದೆ. ಸುಲಭವಾಗಿ ಅರ್ಥಮಾಡಿಕೊಳ್ಳುವುದಕ್ಕೋಸ್ಕರ ಬ್ರಹ್ಮವನ್ನು ಎರಡು ವಿಧಗಳಾಗಿ ವಿಭಜಿಸಲಾಗಿದೆ - ಮೊದಲನೆಯದು ಸಗುಣ ಬ್ರಹ್ಮವಾದರೆ ಎರಡನೆಯದು ನಿರ್ಗುಣ ಬ್ರಹ್ಮವಾಗಿದೆ. ಸಗುಣ ಬ್ರಹ್ಮವು ಶಕ್ತಿಯಾದರೆ, ನಿರ್ಗುಣ ಬ್ರಹ್ಮವು ಶಿವನಾಗಿದೆ. ಒಬ್ಬರಿಲ್ಲದಿದ್ದರೆ ಮತ್ತೊಬ್ಬರು ನಿಷ್ಕ್ರಿಯರಾಗುತ್ತಾರೆ.
Sarvagā सर्वगा (702)
೭೦೨. ಸರ್ವಗಾ
ದೇವಿಯು ಸರ್ವವ್ಯಾಪಕವಾಗಿದ್ದಾಳೆ. ಇದು ಹಿಂದಿನ ನಾಮದ ಫಲವಾಗಿದೆ. ಯಾವಾಗ ಕಾಲ ಮತ್ತು ದೇಶಗಳನ್ನು ಮೀರುತ್ತೇವೆಯೋ ಆಗ ಉಳಿಯುವುದೇ ಸರ್ವವ್ಯಾಪಕತ್ವ, ಇದು ಬ್ರಹ್ಮದ ಮತ್ತೊಂದು ಗುಣವಾಗಿದೆ. ದೇವಿಯ ಸರ್ವವ್ಯಾಪಕವ್ಯಾಪಕ ಗುಣದ ಬಗೆಗೆ ಒಂದು ಕಥೆಯಿದೆ. ದೇವಿಯು ಒಮ್ಮೆ ತಪಸ್ಸನ್ನು ಕೈಗೊಳ್ಳುತ್ತಿರಬೇಕಾದರೆ, ಬ್ರಹ್ಮನು ಅವಳ ಮುಂದೆ ಪ್ರತ್ಯಕ್ಷನಾಗಿ ಅವಳಿಗೆ ಒಂದು ವರವನ್ನು ಕೊಡಬಯಸಿದ ಮತ್ತು ಅವನಿಂದ ದೇವಿಯು ಸರ್ವವ್ಯಾಪಕವ್ಯಾಪಕತ್ವದ ಗುಣವನ್ನು ಬೇಡಿದಳಂತೆ. ನಾವು ವಿಶೇಷವಾಗಿ ೫೮ನೇ ನಾಮವಾದ ಪಂಚ-ಬ್ರಹ್ಮಾಸನ-ಸ್ಥಿತಾ ಮತ್ತು ೨೪೯ನೇ ನಾಮವಾದ ಪಂಚ-ಪ್ರೇತಾಸನಾಸೀತಾ ಇವುಗಳನ್ನು ಗಮನಿಸಿದಾಗ ಈ ಕಥೆಯನ್ನು ಈ ಸಹಸ್ರನಾಮಕ್ಕೆ ಸಮೀಕರಿಸಲಾಗದು.
ದೇವಿಯು ಸರ್ವಗಾ ಆಗಿರುವುದರಿಂದ ಅವಳು ಸಹಜವಾಗಿಯೇ ಸರ್ವಜ್ಞಾ (ನಾಮ ೧೯೬) ಅಂದರೆ ಎಲ್ಲವನ್ನೂ ಬಲ್ಲವಳಾಗಿದ್ದಾಳೆ. ಅವಳ ಸರ್ವವ್ಯಾಪಕವ್ಯಾಪಕತ್ವದ ಗುಣವು ದೇವಿಯು ಎಲ್ಲಾ ಜೀವಿಗಳ ಆತ್ಮವಾಗಿದ್ದಾಳೆ ಎನ್ನುವುದನ್ನು ಸೂಚಿಸುತ್ತದೆ. ಈಶ ಉಪನಿಷತ್ತು ಹೇಳುತ್ತದೆ, "ಅಸ್ಯ ಸರ್ವಸ್ಯ ಅಂತಃ, ಅಸ್ಯ ಸರ್ವಸ್ಯ ಬಾಹ್ಯತಃ" ಅಂದರೆ ‘ಯಾವುದು ಎಲ್ಲದರ ಅಂತರಂಗವಾಗಿದೆಯೋ ಮತ್ತು ಯಾವುದು ಎಲ್ಲದರ ಬಾಹ್ಯವಾಗಿದೆಯೋ’. ನಾರಾಯಣ ಸೂಕ್ತವು (ಮಹಾನಾರಾಯಣ ಉಪನಿಷತ್ತು ೧೩.೫), "ಅಂತರ್ ಬಹಿಶ್ಚ ತತ್ ಸರ್ವಮ್ ವ್ಯಾಪ್ಯಾ ನಾರಾಯಣ ಸ್ಥಿತಃ" ಅಂದರೆ ಹೊರಗೂ ಮತ್ತು ಒಳಗೂ ವ್ಯಾಪಿಸಿರುವುದು ನಾರಾಯಣವಾಗಿದೆ. ಶ್ರೀ ದೇವಿ ಮಹಾತ್ಮ್ಯವು (೫೯೮) ಹೇಳುತ್ತದೆ, “ಸರ್ವ ಸ್ವರೂಪೇ ಸರ್ವೇಶೇ ಸರ್ವ ಶಕ್ತಿ ಸಮನ್ವಿತೇ” ಅಂದರೆ ‘ಎಲ್ಲಾ ಜೀವಿಗಳ ಮೂರ್ತರೂಪ, ಎಲ್ಲ ವಸ್ತುಗಳ ಒಡತಿ ಮತ್ತು ಎಲ್ಲಾ ಶಕ್ತಿಗಳ ಮೂರ್ತರೂಪ’. ಇದು ಸರ್ವಗಾದ ಲಕ್ಷಣವಾಗಿದೆ.
Sarva-mohinī सर्व-मोहिनी (703)
೭೦೩. ಸರ್ವ-ಮೋಹಿನೀ
ದೇವಿಯು ತನ್ನ ಮೋಹಕತೆಯನ್ನು ಎಲ್ಲರ ಮೇಲೆ ಬೀರುತ್ತಾಳೆ. ಆಕೆಯು ತನ್ನ ಮೋಹಕತೆಯನ್ನು ಮಾಯೆಯ ಪ್ರಭಾವದಿಂದ ಬೀರುತ್ತಾಳೆ. ಸರ್ವಾಂತರಯಾಮಿ ಎಂದರೆ ದೇವಿಯು ಎಲ್ಲಾ ವಸ್ತುಗಳಲ್ಲಿ ಇದ್ದಾಳೆನ್ನುವುದಾಗಿದೆ, ಅದು ನಶ್ವರವಾದುದಾಗಲಿ ಅಥವಾ ಶಾಶ್ವತವಾದುದಾಗಲೀ, ವಿರುದ್ಧಾತ್ಮಕವಾದ ಗುಣಗಳಿಂದ ಕೂಡಿದ್ದವುಗಳಾಗಲಿ ಅಥವಾ ವಿರೋಧಾಬಾಸದ ಗುಣಗಳಿಂದ ಕೂಡಿದವುಗಳಾಗಿರಲಿ - ಇದು ಆಕೆಯ ಗುಣದ ಬಗೆಗೆ ಗೊಂದಲವನ್ನುಂಟು ಮಾಡುತ್ತದೆ. ಆದರೆ ಈ ನಾಮವು ಈ ಗೊಂದಲವನ್ನು ತೊಲಗಿಸುತ್ತದೆ. ಇದನ್ನು ದೇವಿ ಮಹಾತ್ಮ್ಯದಲ್ಲಿ (೧.೫೫) ವಿವರಿಸಲಾಗಿದೆ, "ಮಹಾಮಾಯಾ ...... ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ" ಇದರರ್ಥ ದೇವಿ ಭಗವತಿಯ ಮಾಯಾ ಸ್ವರೂಪವು ಜ್ಞಾನಿಗಳ ಮನವನ್ನೂ ಸಹ ತನ್ನ ಮೋಹಕತೆಯಿಂದ ಆಕರ್ಷಿಸುತ್ತದೆ". ಶಿವನು ಕೂರ್ಮ ಪುರಾಣದಲ್ಲಿ, "ಈ ಪರಮಶಕ್ತಿಯು ನನ್ನೊಳಗೆ ಇದ್ದಾಳೆ ಮತ್ತದು ಬ್ರಹ್ಮವಾಗಿದೆ. ಈ ಮಾಯೆಯು ನನಗೆ ಪ್ರಿಯವಾಗಿದೆ, ಅದು ಅನಂತವಾಗಿದ್ದು ಈ ವಿಶ್ವವು ಅದರಿಂದ ಗೊಂದಲಕ್ಕೊಳಗಾಗುತ್ತದೆ", ಎಂದು ಹೇಳುತ್ತಾನೆ.
ಭಗವದ್ಗೀತಯು (೫.೬) ಹೀಗೆ ವಿವರಿಸುತ್ತದೆ, "ಆ ಸರ್ವಾಂತರಯಾಮಿಯಾದ ದೇವನು (ಮೇಲಿನ ೭೦೨ನೇ ನಾಮವನ್ನು ನೋಡಿ) ಯಾರ ಪುಣ್ಯ ಅಥವಾ ಪಾಪವನ್ನು ಗಳಿಸುವುದಿಲ್ಲ. ಜ್ಞಾನವು ಅಜ್ಞಾನದೊಳಗೆ ಹುದುಗಿಸಲ್ಪಟ್ಟಿದೆ. ಆದ್ದರಿಂದ ಆ ಜೀವಿಗಳು ಸತತವಾಗಿ ಮಾಯೆಯ ಬಲೆಯೊಳಗೆ ಸಿಲುಕುತ್ತಿದ್ದಾರೆ". ಮಾಯೆ ಎನ್ನುವುದರ ಮೂಲಕ ಅನುಭವವನ್ನು ಅಳೆಯಬಹುದು ಇದು ಅಳತೆಗೆ ನಿಲುಕದ ಸರ್ವಾಂತರಯಾಮಿಯಾಗಿರುವ ಬ್ರಹ್ಮಕ್ಕೆ ವಿರುದ್ಧವಾಗಿದೆ. ಆದ್ದರಿಂದ ಆಕೆಯನ್ನು ‘ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣೀ’ ಎಂದು ಕರೆಯಲಾಗಿದೆ.
ಮಾಯೆಯು ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಬಹುದೊಡ್ಡ ತೊಡಕಾಗಿದೆ. ಯಾರು ಆಧ್ಯಾತ್ಮಿಕವಾಗಿ ಉನ್ನತಿಯನ್ನು ಸಾಧಿಸುತ್ತಾರೆಯೋ ಅವರಿಂದ ತನ್ನ ಮಾಯೆಯ ಮುಸುಗನ್ನು ದೇವಿಯು ಒಳಗೆಳೆದುಕೊಳ್ಳುತ್ತಾಳೆ.
ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣೀ ಕುರಿತು ಹೆಚ್ಚಿನ ವಿವರಗಳು
ಮಾಯೆಯ ವಸ್ತುತಃ ರೂಪಾಂತರವು "ಇದುವೇ ನಾನು" ಎನ್ನುವುದಾಗಿದೆ. ಇದು ಎನ್ನುವುದೇ ಪ್ರಕೃತಿ. ಈ ಪ್ರಕೃತಿಯು ಮೂರು ಗುಣಗಳಿಂದ ಕೂಡಿದೆ, ಅವೆಂದರೆ ಸತ್ವ, ರಜಸ್ಸು ಮತ್ತು ತಮಸ್ಸು. ಅವುಗಳು ಮೂರು ವಿಧವಾದ ಶಕ್ತಿಗಳಿಂದ ಉದ್ಭವವಾಗುತ್ತವೆ ಅವೆಂದರೆ ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳು. ನಮ್ಮ ಬಳಿ ಏನೂ ಇಲ್ಲವೆಂದಾದ ಮೇಲೆ ಇನ್ನು ಯಾವುದೇ ರೀತಿಯ ವಸ್ತುವಿನ ಪ್ರಶ್ನೆಯೇ ಉದ್ಭವಿಸವುದಿಲ್ಲ ಅಲ್ಲವೇ? ಯಾವಾಗ ವಸ್ತುವೇ ಇಲ್ಲವೆಂದ ಮೇಲೆ ಇನ್ನು ’ಇದು’ ಎನ್ನುವ ಪ್ರಶ್ನೆ ಎಲ್ಲಿಯದು. ಆದ್ದರಿಂದ ಇಲ್ಲಿ ವಿಷಯ ಮತ್ತು ವಸ್ತು ಎರಡೂ ಅಂಶಗಳು ಇಲ್ಲವಾಗುತ್ತವೆ. ಯಾವಾಗ ವಿಷಯ ಮತ್ತು ವಸ್ತುಗಳ ಇರುವಿಕೆಯು ಇಲ್ಲವಾಗುತ್ತದೆಯೋ ಆಗ ಇಚ್ಛೆಯ ಪ್ರಶ್ನೆಯೇ ಉದ್ಭವಿಸದು ಅಥವಾ ಮೂರು ಶಕ್ತಿಗಳಾದ ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳ ಪ್ರಸಕ್ತಿಯೇ ಉಂಟಾಗದು. ಇಲ್ಲಿ ೩೬ ತತ್ವಗಳಲ್ಲಿ ಪ್ರಕೃತಿಯಿಂದುಂಟಾದ ೩೪ ತತ್ವಗಳು ನಾಶವಾಗಿವೆ. ಕೇವಲ ನಮಗೆ ಸಂಭಂದಪಟ್ಟದ್ದು ಏನೂ ಇಲ್ಲ ಎನ್ನುವುದನ್ನು ಅರಿತುಕೊಳ್ಳುವುದರಿಂದ ನಾವು ನಮ್ಮನ್ನು ಪರಮಾತ್ಮನೊಂದಿಗೆ ಗುರುತಿಸಿಕೊಳ್ಳಲು ಅಡ್ಡಿಯಾಗುತ್ತಿದ್ದ ೩೪ ತತ್ವಗಳನ್ನು ತೆಗೆದುಹಾಕಲು ಸಾಧ್ಯವಾಗಿದೆ. ಈಗ ಕೇವಲ ಪ್ರಕಾಶ ಮತ್ತು ವಿಮರ್ಶ ಎನ್ನುವ ಎರಡು ತತ್ವಗಳು ಮಾತ್ರವೇ ಉಳಿದುಕೊಳ್ಳುತ್ತವೆ. ಈ ಎಲ್ಲಾ ೩೪ ತತ್ವಗಳನ್ನು ’ವಿಮರ್ಶ’ವು ಸೃಷ್ಟಿಸುವುದಲ್ಲದೆ ತನ್ನ ಅಂಕೆಯಲ್ಲಿರಿಸಿಕೊಳ್ಳುತ್ತದೆ. ವಿಮರ್ಶವು ಮಾಯೆಯನ್ನುಂಟು ಮಾಡುವ ಏಕೈಕ ಕಾರಣವಾಗಿರುವುದರಿಂದ ನಾವು ವಿಮರ್ಶವನ್ನು, ’ವಿಮರ್ಶ ಮಹಾ ಮಾಯಾ ಸ್ವರೂಪಿಣೀ’ ಎಂದು ಕರೆಯಬಹುದು. ಏಕೆ ಮಹಾ ಮತ್ತು ಮಾಯೆ ಮತ್ತು ಶಕ್ತಿಗಳನ್ನು ಸ್ತ್ರೀ ರೂಪದಲ್ಲಿ (ಲಿಂಗದಲ್ಲಿ) ನೋಡಬೇಕು? ಏಕೆಂದರೆ, ದೇವಿಯು ಈ ವಿಶ್ವವನ್ನು ಸೃಷ್ಟಿಸುವುದಷ್ಟೇ ಅಲ್ಲ ಅದನ್ನು ಪೋಷಿಸುತ್ತಾಳಾದ್ದರಿಂದ. ಈಗ ನಾವು ’ಮಹಾ ಮಾಯಾ ಸ್ವರೂಪಿಣೀ’ಯನ್ನು ತಿಳಿದುಕೊಳ್ಳುತ್ತಿದ್ದೇವೆ. ಮುಂದಿನ ಹಂತವೇ ನಾವು ಪ್ರಕಾಶ ಅಂದರೆ ಸ್ವಯಂ ಬೆಳಗುತ್ತಿರುವುದರ ಬಗ್ಗೆ ತಿಳಿದುಕೊಳ್ಳುವುದು. ಈ ಪ್ರಕಾಶವನ್ನು ತಿಳಿದುಕೊಳ್ಳುವುದೇ ನಮ್ಮ ಅಂತಿಮ ಗುರಿಯಾಗಿದೆ.
ಈ ಮುಂಚೆ ನಾವು ತಿಳಿದುಕೊಂಡಂತೆ ವಿಮರ್ಶವು ಪ್ರಕಾಶದ ಸೃಷ್ಟಿಯಷ್ಟೇ. ವಿಮರ್ಶವು ಪ್ರಕಾಶದಿಂದ ಸಂಪೂರ್ಣ ಸ್ವಾಯತ್ತತೆಯನ್ನು ಪಡೆದ ಶಕ್ತಿಯಾಗಿದೆ ಅದನ್ನೇ ’ಸ್ವಾತಂತ್ರ್ಯ ಶಕ್ತಿ’ ಎಂದು ಕರೆಯಲಾಗುತ್ತದೆ. ಪ್ರಕಾಶವು ವಿಮರ್ಶಗೆ ಸೃಷ್ಟಿ, ಸ್ಥಿತಿ, ಮಾಯೆ, ಧಾರಣ ಮತ್ತು ವಿಶ್ವವನ್ನು ಅನುಗ್ರಹಿಸುವ ಕೆಲಸವನ್ನು ಕೊಟ್ಟಿದೆ. ವಿಮರ್ಶೆಯಿಲ್ಲದೆ ಪ್ರಕಾಶವು ಈ ಕೆಲಸವನ್ನು ಮಾಡಲಾರದು. ಪ್ರಕಾಶವು ಯಾವಾಗಲೂ ಒಬ್ಬಂಟಿಯಾಗಿದ್ದು ಅದಕ್ಕೆ ಯಾವುದೇ ಜೊತೆಗಾರ ಅಥವಾ ತನ್ನಂತಹ ಇನ್ನೊಂದಿಲ್ಲ. ಅದು ಆದಿ ಮತ್ತು ಅನಾದಿ. ಅಂದರೆ ಅದುವೇ ಪ್ರಥಮ ಮತ್ತು ಅನಾದಿ ಕಾಲದಿಂದಲೂ ಅದೊಂದೇ ಇದೆ. ಯಾವಾಗಲೂ ಎರಡನೆಯದಿದ್ದರೆ ಮಾತ್ರ ಸೃಷ್ಟಿ ಕ್ರಿಯೆಯು ಸಾಧ್ಯವಾಗುತ್ತದೆ; ಒಂದೇ ಇದ್ದಾಗ ಸೃಷ್ಟಿ ಕಾರ್ಯವು ಸಾಧ್ಯವಾಗದು. ಇದೇ ತತ್ವ ಇಲ್ಲಿಯೂ ಕೂಡಾ ಅನ್ವಯವಾಗುತ್ತದೆ. ಯಾವಾಗ ವಿಮರ್ಶವು ಪ್ರಕಾಶದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆಯೋ ಆಗ ಅದು ಪರಿಪೂರ್ಣವಾಗುತ್ತದೆ. ಈ ಹಂತದಲ್ಲಿ ನಾವು ವಿಮರ್ಶವನ್ನು "ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣೀ" ಎನ್ನಬಹುದು. ಇಲ್ಲಿ ವಿಮರ್ಶವು ಇನ್ನೂ ಪ್ರಕಾಶದೊಂದಿಗೆ ಇದೆ; ಆದ್ದರಿಂದ ಅದನ್ನು ಪರಿಪೂರ್ಣವೆನ್ನಬಹುದು. ಸಾಮಾನ್ಯವಾಗಿ ನಾವು ಶಕ್ತಿಯ ಮೂಲಕ ಹೋದರೆ ಮಾತ್ರ ಬ್ರಹ್ಮದ (ಶಿವನ) ಸಾಕ್ಷಾತ್ಕಾರವಾಗುತ್ತದೆ ಎನ್ನುತ್ತಾರೆ. ಇಲ್ಲಿ ಒಂದು ವಾದವಿದೆ ಅದೇನೆಂದರೆ, ಕೇವಲ ಶಕ್ತಿಯೊಂದೇ ತನ್ನ ವಿಮರ್ಶ ರೂಪ ಅಥವಾ ಚಿತ್ ರೂಪದಿಂದ ಬ್ರಹ್ಮಸಾಕ್ಷಾತ್ಕಾರಕ್ಕೆ ಕೊಂಡೊಯ್ಯಬಲ್ಲುದು. ಇಲ್ಲಿ ಶಕ್ತಿ ಸ್ತ್ರೀಲಿಂಗವಾಗಿದ್ದರೆ ಬ್ರಹ್ಮವು (ಶಿವನು) ಪುಲ್ಲಿಂಗವಾಗಿದೆ. ಬ್ರಹ್ಮವಿಲ್ಲದಿದ್ದರೆ ಶಕ್ತಿಯು ಕಾರ್ಯನಿರ್ವಹಿಸಲಾರದು ಮತ್ತು ಶಕ್ತಿಯಿಲ್ಲದಿದ್ದರೆ ಬ್ರಹ್ಮವು (ಶಿವನು) ಕ್ರಿಯಾಶೀಲವಾಗಿರಲಾರದು. ಎರಡೂ ಪರಸ್ಪರ ಒಂದನ್ನೊಂದು ಅವಲಂಬಿಸಿವೆ. ಆದ್ದರಿಂದ ಯಾವಾಗ ಶಕ್ತಿಯು ಬ್ರಹ್ಮ(ಶಿವ)ದೊಂದಿಗೆ ಇರುವುದೋ ಆಗ ಮಾತ್ರ ಅದನ್ನು ಪರಿಪೂರ್ಣವೆನ್ನುತ್ತಾರೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 701 - 703 http://www.manblunder.com/2010/04/lalitha-sahasranamam-701-703.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೫೭. ಲಲಿತಾ ಸಹಸ್ರನಾಮ ೭೦೧ರಿಂದ ೭೦೩ನೇ ನಾಮಗಳ ವಿವರಣೆ
ಶ್ರೀಧರರೆ, "೧೫೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೦೧ - ೭೦೩
_________________________________
.
೭೦೧. ದೇಶ-ಕಾಲಾ-ಪರಿಚ್ಛಿನ್ನಾ
ಜೀವಿ ಬದ್ಧ ಕಾಲ ದೇಶ ಪರಿಮಿತಿಗೆ, ಬ್ರಹ್ಮಕೆ ಅಸಂಬದ್ಧ
ಕಾಲಾತೀತತೆ ಬ್ರಹ್ಮದ ವಿಶಿಷ್ಟಗುಣ, ದೇಶವೆ ಅವನಾದ
ಪರಿಮಿತಿಯಿಲ್ಲದ ಅಪರಿಮಿತ, ಗುರುವಿಗೆಗುರು ನಮನ
ಶಕ್ತಿಯಿರದೆ ಶಿವನಿಲ್ಲವೆ ಲಲಿತೆ, ದೇಶ-ಕಾಲಾ-ಪರಿಚ್ಛಿನ್ನಾ ||
.
೭೦೨. ಸರ್ವಗಾ
ಜಗ ಸಕಲದಂತರಂಗಬಹಿರಂಗ ಬ್ರಹ್ಮ, ಚರಾಚರ ಮೂರ್ತರೂಪ
ಕಾಲದೇಶಾತೀತದೆ ಸರ್ವವ್ಯಾಪಕತೆ, ಬ್ರಹ್ಮ ಗುಣ ಎಲ್ಲೆಡೆಯಿರ್ಪ
ದೇವಿ ತಾನೆ ಸರ್ವಗಾ, ಎಲ್ಲ ಬಲ್ಲ ಸರ್ವಜ್ಞಾ ಸಕಲ ಜೀವಿಗಾತ್ಮ
ವ್ಯಾಪಿಸಿ ಒಳ ಹೊರಗೆಲ್ಲ, ಸಕಲದೊಡತಿ ಶಕ್ತಿ ಲಲಿತೆ ಪರಬ್ರಹ್ಮ ||
.
೭೦೩. ಸರ್ವ-ಮೋಹಿನೀ
ಅಜ್ಞಾನದೆ ಹುದುಗಿ ಜ್ಞಾನ, ಕೆಡವುತ ಜೀವಿಯ ಮಾಯಾ ಬಲೆಗೆ
ಆತ್ಮ ಸಾಕ್ಷಾತ್ಕಾರ ತೊಡಕೆ, ಆಧ್ಯಾತ್ಮಿಕೌನ್ನತ್ಯಕೆ ಸರಿವ ಮುಸುಗೆ
ಬಿಡದಲ್ಲ ಬ್ರಹ್ಮಮಾಯೆ ಜ್ಞಾನಿಗು, ಗೊಂದಲದಲಿಡುವಳು ಜನನೀ
ಶಾಶ್ವತಕು ನಶ್ವರಕು ಮೋಹಕತೆ ಬೀರಿ ಲಲಿತೆ ಸರ್ವ ಮೋಹಿನೀ ||
.
ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣೀ ಕುರಿತು ಹೆಚ್ಚಿನ ವಿವರಗಳು
_______________________________________________
.
ಇಚ್ಛಾ-ಜ್ಞಾನ-ಕ್ರಿಯಾಶಕ್ತಿಯಿಂದುದ್ಭವ ಪ್ರಕೃತಿಗೆ ಸತ್ವ-ರಜೋ-ತಮೋ ಗುಣ
ಮಾಯೆ ಪ್ರಕೃತಿ, ವಸ್ತು ವಿಷಯವಿರದೆ ತ್ರಿಶಕ್ತಿಯಿಂವಿಮುಕ್ತಿ ೩೪ ತತ್ವನಾಶನ
ಅದರೊಡತಿ ವಿಮರ್ಶ, ಮಾಯಾಕಾರಣಿ ಸೃಷ್ಟಿಸಿ, ಪೋಷಿಸುವ ವಿಶ್ವ ಮಾತೆ
ಜತೆಗುಳಿದ ಪ್ರಕಾಶ ತತ್ವ, ಸ್ವಯಂಕಾಂತಿಯನರಿವ ಅಂತಿಮ ಗುರಿ ಸೇರುತೆ ||
.
ಸರ್ವತಂತ್ರ ಸ್ವತಂತ್ರ ಶಕ್ತಿಯಾಗಿಸಿ ವಿಮರ್ಶವ ಸೃಷ್ಟಿಸಿದ ಪ್ರಕಾಶ ಅಪೂರ್ಣ
ಅದಿಯಿಂದನಾದಿಯವರೆಗೆ ಏಕಾಂತದೆ, ಸೃಷ್ಟಿಗೆ ವಿಮರ್ಶ ಸೇರಿ ಪರಿಪೂರ್ಣ
ಶಕ್ತಿಮುಖೇನ ಶಿವ ಕ್ರಿಯಾಶೀಲ, ಬ್ರಹ್ಮಸಾಕ್ಷಾತ್ಕಾರದತ್ತ ಒಯ್ಯುವಳು ಲಲಿತೆ
ಶಿವ ಶಕ್ತಿ ಪರಿಪೂರ್ಣತೆ 'ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣೀ' ಜತೆ ||
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು