ಬೇಡಯ್ಯ ತಂದೆ ಆಶ್ರಯದ ಬಾಳು !

ಬೇಡಯ್ಯ ತಂದೆ ಆಶ್ರಯದ ಬಾಳು !

 

ದಿನವೂ ಕಾಣುವೆ ನಾ ಈಕೆಯ
ಕುಂಟುತ ಓಡಾಡುವ ಹಿರಿಯಾಕೆಯ

ಕಛೇರಿಗೆ ಹೋಗುವಾಗ ನಾ ಕಾರಲಿ
ಕಾಣುವರು ಈ ತಾಯಿ ಆ ತಿರುವಿನಲಿ

ಮೊದಲಿಗೆ ನಮ್ಮ ನಡುವೆ ಶೂನ್ಯ ನೋಟವಿತ್ತಷ್ಟೇ
ಈ ನಡುವೆ ಮುಗುಳ್ನಗೆಯೊಂದಿಗೆ ನಮಸ್ತೆಯ ನಿಷ್ಟೆ

ಹಾದು ಹೋಗಲಿ ಅವರು ಎಂದು ನಾನೊಮ್ಮೆ ಕಾಯಲು
ಮುಗುಳ್ನಕ್ಕು ಸನ್ನೆ ಮಾಡಿ ತಿಳಿಸಿದರು ನಾ ಹೋಗಲು

ನನ್ನ ಧಾವಂತದ ಕಾಲವಾಯ್ತು ಇದು ನಿನ್ನ ಕಾಲ
ನುಡಿದಿದ್ದರೇನೋ ಕಷ್ಟದಿ ಎತ್ತಿಡುತ ತಮ್ಮ ಕಾಲ

ಈ ಇಳಿ ವಯಸ್ಸಿನಲ್ಲೂ, ಮಳೆ, ಛಳಿಯಲ್ಲೂ ನೆಡೆಸೋ ಓಡಾಟ
ಪಾಲಿಸಬೇಕು ನಾ ಒಂದಂಶವಾದರೂ ಪಕ್ಕಕ್ಕಿಟ್ಟು ದಿನದ ಒದ್ದಾಟ

ಒಂದು ಮಧ್ಯಾನ್ನ ಹೊರಗಿನ ಥಂಡಿಗೆ, ಸುಡುತ್ತಿತ್ತು ಎನ್ನ ಹಣೆ
ಕೂರಲಾರದೆ ಹೇಳಿ ಹೊರಬಿದ್ದಿದ್ದೆ, ಮುಗಿಸದೆ ದಿನದ ಬವಣೆ

ಬೇಗ ಮನೆ ಸೇರಿ ಹೊದ್ದು ಮಲಗುವುದೇ ನನಗಿದ್ದ ಗುರಿ
ನೀ ಎಣಿಸಿದಂತೆ ನಾ ನೆಡೆಸೆ ಎಂದಿತ್ತು ಭಗವಂತನ ಪರಿ

ತಿರುವಿನೋಳ್ ತಿರುಗಿ ಕಾರು ಓಡಿಸಲು ಮನೆಯು ಮೂರೇ ನಿಮಿಷ
ತಿರುವಿಗೆ ಬರುತ್ತಿದ್ದಂತೆ ಆ ಹಿರಿಯಾಕೆಯು ಕುಸಿದಿದ್ದು ಅದೇ ನಿಮಿಷ

ಕಾರನ್ನು ನಿಲ್ಲಿಸಿ, ನೀರು ಹೊತ್ತು ಓಡಿದೆ ಆಕೆಯೆಡೆಗೆ
ನೀರನ್ನು ಕುಡಿದು ಮುಗುಳ್ನಕ್ಕರು ನೋಡುತಾ ನನ್ನೆಡೆಗೆ

ಹಠ ಹಿಡಿದು ಕೂರಿಸಿದ್ದೆ ಆಕೆಯನ್ನು ನನ್ನ ಕಾರಿನಲಿ
ಮಂದಗತಿಯಲ್ಲಿ ಸಾಗಿದ್ದೆ ಅವರು ತೋರಿದ ಹಾದಿಯಲಿ

ನಿಂತಿತ್ತೆನ್ನ ಕಾರು ಬಾಗಿಲು ಬಡಿದಿದ್ದ ಮನೆ ಮುಂದೆ
ಇಳಿದು ನೆಡೆದಿದ್ದರಾಕೆ ಬೇಡುತ ಬಾರದಿರು ನನ್ನ ಹಿಂದೆ

ಕಾರಿನಿಂದಿಳಿದು ನಿಂತು ಕಾದೆ ಅವರು ಹೋಗೋ ತನಕ
ನಿಧಾನಗತಿಯಲ್ಲಿ ಸಾಗಿ, ಮೆಲ್ಲ ಬಡಿದಿದ್ದರು ಬಾಗಿಲ ಚಿಲಕ

ತೆರೆಯಿತೋ ಬಾಗಿಲು .... ಹರಿಯಿತೋ ಬೈಗುಳು
"privacy ಇಲ್ಲ ಈ ಮನೇಲಿ... ಅರ್ಧಘಂಟೆಗೇ ವಕ್ಕರಿಸಿದೆ ಮುದುಕಿ" 

ಮಂಜು ಬೀಳ್ತಿತ್ತು
ಥಂಡಿ ಏರಿತ್ತು
ಹಣೆಯೇನೋ ಥಣ್ಣಗಾಗಿತ್ತು
ಆದರೆ ಹೃದಯ ಸುಡುತ್ತಿತ್ತು

ಕಿಟಕಿಯಲ್ಲಿ ಕಂಡ ಆಕೆಯ ಕಂಗಳಲಿ ನೀರು ಹರಿದಿತ್ತು
ಆ ದೈನ್ಯದ ನೋಟ ಎದುರಿಸಲಾರದೆ ಹೃದಯ ಅತ್ತಿತ್ತು

ನಮ್ಮ ನಡುವಿನ ಮೂಕ ಭಾಷೆ ಸ್ನೇಹವೇ ಸೊಗಸಿತ್ತು
ಬೈಗುಳ ಆ ಭಾಷೆ ನನಗೆ ಅರ್ಥವಾಗದಿದ್ರೆ ಚೆನ್ನಿತ್ತು !

 

Comments

Submitted by ಗಣೇಶ Wed, 12/04/2013 - 00:19

ಈಗ ತಾನೇ ಸುಬ್ಬನ ಹಾಸ್ಯಪ್ರಸಂಗ ಓದಿ, "ಆಶ್ರಯ" ಮನೆಯ ಹಾಸ್ಯಕವನವಿರಬಹುದು ಅಂತ ಓದಿದೆ.. ನಿಜಕ್ಕೂ ನನ್ನ ಹೃದಯವೂ ಅತ್ತಿತ್ತು. ಭಲ್ಲೇಜಿ, ಸೂಪರ್ ಕವನ. ೧೭೨ ಮಂದಿ ಓದಿದವರೆಲ್ಲರೂ ಪ್ರತಿಕ್ರಿಯೆ ನೀಡಲಾಗದಷ್ಟು ಸ್ಟನ್ ಆಗಿರಬಹುದು..