ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ ಗೊತ್ತಾ?
ಯಾವಾಗಲೂ ಅಷ್ಟೆ,ಸ್ವಂತಕ್ಕೆ ಅನುಭವವಾಗುವ ವರೆಗೂ ಯಾರ ಮಾತೂ ಯಾರಿಗೂ ಮಹತ್ವ ವೆನಿಸುವುದಿಲ್ಲ. ಇಂದೇಕೋ ನನ್ನ ಬಾಲ್ಯದ ನೆನಪುಗಳು ಕಾಡುತ್ತಿವೆ. ನನ್ನ ಹೆತ್ತಮ್ಮ, ನಮ್ಮ ಗೌರತ್ತೆ ಇಂದು ಬಲು ನೆನಪಾಗುತ್ತಿದ್ದಾರೆ. ಕಡುಬಡವನಾಗಿದ್ದ ನಮ್ಮಪ್ಪ ನೆನಪಾಗುತ್ತಿದ್ದಾರೆ
ಇವರೆಲ್ಲರೂ ನೆನಪಾಗುತ್ತಿರುವುದು ಅವರ "ಮಾತೃಹೃದಯದಿಂದ".ಅಪ್ಪನಿಗೂ ಇದೇ ಅನ್ವಯಿಸುತ್ತದೆ.
ನಿತ್ಯದ ಹೊಟ್ಟೆ ತುಂಬಲು ತುತ್ತು ಅನ್ನ ಇಲ್ಲವೇ ಇಲ್ಲ. 5X10 ಅಡಿಯ ಹಳೆಯ ಜಮಖಾನದ ಮೇಲೆ ಮಲಗುತ್ತಿದ್ದೆವು ಮಕ್ಕಳೆಲ್ಲಾ. ಬಹುಷ: ಆ ಜಮಖಾನವೂ ನಮ್ಮ ಪುಟ್ಟನಂಜತ್ತೆ ಮನೆಯಿಂದ ತಂದಿದ್ದಿರಬೇಕು. ಗೌರತ್ತೆಗೆ ಒಂದು ಗೋಣೀಚೀಲ. ನಾವಾರು ಜನ ಮಕ್ಕಳು.ನಮ್ಮಮ್ಮ ಯಾವಾಗ ಮಲಗಿ ಯಾವಾಗ ಏಳುತ್ತಿದ್ದರು ಗೊತ್ತೇ ಇಲ್ಲ. ಯಾವಾಗಲೋ ನಮ್ಮ ನಡುವೆ ಮಲಗಿ ಎಲ್ಲರಿಗೂ ಮುಂಚೆ ಎದ್ದು ತಮ್ಮ ಕೆಲಸದಲ್ಲಿ ತೊಡಗುತ್ತಿದ್ದರು.ನಮ್ಮ ದೊಡ್ದಮ್ಮ ಒಂದು ಚಾಪೆಯ ಮೇಲೆ ಮಲಗುತ್ತಿದ್ದರು. ಜೊತೆಗೆ ನಮ್ಮ ಅಜ್ಜಿ [ತಂದೆಯವರ ತಾಯಿ] ಅಮ್ಮನ ಅಮ್ಮ. ನನಗೆ ತಿಳುವಳಿಕೆ ಬಂದಾಗ ನಮ್ಮ ಮನೆಯಲ್ಲಿದ್ದ ಜನ ಇವರು. ಅದಕ್ಕೆ ಮುಂಚೆ ಮೂರು ಮಕ್ಕಳೊಡನೆ ನಮ್ಮ ಸೋದರತ್ತೆ ಪುಟ್ಟನಂಜಮ್ಮ ನ ಕುಟುಂಬವೂ ಕೆಲಕಾಲ ನಮ್ಮ ಮನೆಯಲ್ಲಿಯೇ ಇದ್ದರಂತೆ. ಪಾಪ! ನಮ್ಮ ಮಾವನ ಅಕಾಲಿಕ ಮರಣದ ಪರಿಣಾಮ ನಮ್ಮ ಸೋದರತ್ತೆಯ ಸಂಸಾರವನ್ನು ಚಿಕ್ಕಮಗಳೂರಿನಿಂದ ನಮ್ಮಪ್ಪ ಕರೆದುಕೊಂಡು ಬಂದಿದ್ದರಂತೆ. ಅವರ ಮನಸ್ಸು ಹೇಗಿದೆ ನೋಡಿ, ಮಕ್ಕಳಿಗೆ ಹಾಕಲು ತುತ್ತು ಅನ್ನಕ್ಕೆ ದಾರಿದ್ರ್ಯವಿದ್ದರೂ ಮಾನಸಿಕ ದಾರಿದ್ರ್ಯವಿರಲಿಲ್ಲ. ಒಂದು ಎತ್ತಿನ ಗಾಡಿ ಮಾಡಿಕೊಂಡು ಹೋಗಿ ಅಕ್ಕ ಮಕ್ಕಳನ್ನು ಕರೆದು ಕೊಂಡು ಬಂದೇ ಬಿಟ್ಟರು. ನಮ್ಮ ಪುಟ್ಟನಂಜತ್ತೆಯ ಮನೆಯಲ್ಲಿದ್ದ ಬೆಂಚುಗಳು, ಹಂಡೆ,ಪಾತ್ರೆ ಪಗಡಿ ಎಲ್ಲವೂ ನಮ್ಮ ಮನೆಗೆ ಸೇರಿದ್ದಾಯ್ತು. ಈಗಲೂ ಎರಡು ಬೆಂಚುಗಳನ್ನು ಸೇರಿಸಿ ನನ್ನ ತಮ್ಮ ಮಂಚದಂತೆ ಮಾಡಿಕೊಂಡು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾನೆ. ಆ ಮಂಚವನ್ನು ನೋಡಿದೊಡನೆ ನಮ್ಮ ಅತ್ತೆ-ಮಾವ ನೆನಪಾಗುತ್ತಾರೆ.
ಯಾಕೆ ಇಷ್ಟೆಲ್ಲಾ ಮನೆಪುರಾಣವನ್ನು ಬರೆದೆನೆಂದರೆ ಅದರಿಂದ ಇಂದಿನ ಮಕ್ಕಳು ಕಲಿಯುವುದು ಬಹಳ ಇದೆ. ಆದರೆ ಆಡಂಬರದ ಜಗತ್ತಿಗೆ ಬಲಿಯಾಗಿರುವ ಇಂದಿನ ಜನರಿಗೆ ಅದು ಅರ್ಥವಾಗುವುದಿಲ್ಲ ಎಂಬ ಮಾತು ಬೇರೆ. ಆದರೂ ನಮ್ಮ ಕಾಲದ್ದನ್ನು ನಾವು ದಾಖಲು ಮಾಡಿಬಿಡುವುದು ಸೂಕ್ತವೆಂದು ನನ್ನ ಭಾವನೆ. ಅದರ ಪ್ರಯೋಜನ ಆದರೆ ಸಂತೋಷ. ಆಗದಿದ್ದರೆ ಅವರಿಗೇ ನಷ್ಟ.
ಅದೇನು ಲಾಭ ನಷ್ಟದ ಮಾತು ಅಂತೀರಾ?
ಅಂದು ಆರ್ಥಿಕ ಬಡತನ ಬಹಳವಾಗಿತ್ತು ನಿಜ. ಆದರೆ ಪ್ರೀತಿ, ವಿಶ್ವಾಸ,ವಾತ್ಸಲ್ಯ,ಮಮಕಾರ, ನಮ್ಮವರೆನ್ನುವ ಭಾವ ತೀವ್ರವಾಗಿತ್ತು. ಅದರ ಪರಿಣಾಮ ಮನೆಯಲ್ಲಿ ಸೆಕ್ಯೂರಿಟಿ ಇತ್ತು. ಮನೆಯಲ್ಲಿದ್ದ ಹತ್ತು ಹನ್ನೆರಡು ಜನರಲ್ಲಿ ಯಾರೋ ಒಬ್ಬರಿಗೆ ಆರೋಗ್ಯ ತಪ್ಪಿದರೆ ಸುಧಾರಿಸಲು ನಾಲ್ಕಾರು ಜನರು ಇರುತ್ತಿದ್ದರು. ನಿಜ ಹೇಳುವೆ. ನಮಗೆ ರುಚಿ ರುಚಿಯಾದ ಆಹಾರ ಸಿಕ್ಕದೆ ಇದ್ದಿರಬಹುದು. ಆದರೆ ನಮ್ಮಪ್ಪ ಅನ್ನಮ್ಮ ,ನಮ್ಮ ಗೌರತ್ತೆ , ಅವರ ಪ್ರಾಣ ಒತ್ತೆ ಇಟ್ಟು ನಮ್ಮ ಹೊಟ್ಟೆಗೆ ಏನೋ ಹೊಂದಿಸುತ್ತಿದ್ದರು. ಅದು ದೊಡ್ದ ಕತೆ. ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಆದರೆ ಮಕ್ಕಳು ಯಾರಿಗಾದರೂ ಹುಶಾರು ತಪ್ಪಿದ್ದರೆ ಮೂಲೆಯಲ್ಲಿ ಹಾಸಿಗೆ ಹಿಡಿದು ಮಲಗಿದ್ದ ನಮ್ಮಜ್ಜಿಯ ಮುಂದೆ ಒಂದು ಚಾಪೆ ಹಾಕಿ ಮಕ್ಕಳನ್ನು ಮಲಗಿಸಿದರೆ ಸಾಕು ಅವರ ಕೈ ಮಕ್ಕಳ ತಲೆಯನ್ನು ಸವರಲು ಶುರುವಾಗುತ್ತಿತ್ತು. "ಅಯ್ಯೋ ಮುಂಡೇದೇ, ಜ್ವರ ಬಂದು ಬಿಟ್ಟಿದೆಯಲ್ಲಾ! ಆ ದೇವರಿಗೆ ಕಣ್ಣಿಲ್ಲವೇ, ನಿಮ್ಮಂತ ಮಕ್ಕಳನ್ನು ಗೋಳುಹೊಯ್ದುಕೊಳ್ಳುತ್ತಾನಲ್ಲಾ! ಕಣ್ಮುಚ್ಚಿ ಮಲಗು ಕಂದಾ ನಿನಗೆ ನಿದ್ರೆ ಬರೆಸುವೆನೆಂದು ಹೇಳುತ್ತಾ ಅವರು ತಲೆ ತಡವರೆಸುತ್ತಿದ್ದರೆ ಯಾವಾಗ ನಿದ್ರೆ ಬರುತ್ತಿತ್ತೋ ಗೊತ್ತಾಗುತ್ತಿರಲಿಲ್ಲ.
ಈಗ ಹೇಳಿ ಆ ಪ್ರೀತಿಯ ಮಾಂತ್ರಿಕ ಕೈಗಿರುವ ಶಕ್ತಿ ನಿಮ್ಮ ಯಾವ ವೈದ್ಯರಿಗಿದೆ?
ಇಂದು......
ಜ್ವರ ಬಂತು, ಸ್ಟ್ರೆಸ್ ನಿಂದಾಗಿ ವಿಪರೀತ ತಲೆನೋವು, ಬಿ.ಪಿ ಹೆಚ್ಚಾಯ್ತು, ಏನೋ ಸರಿ ಇಲ್ಲವೆನಿಸಿದಕೂಡಲೇ ವೈದ್ಯರಿಗೆ ಫೋನ್ ಮಾಡಿ ಅವರು ಬಂದರೆ ಸರಿ ಇಲ್ಲದಿದ್ದರೆ ಕಾರ್ ನಲ್ಲಿ ಕೂರಿಸಿಕೊಂದು ಹೋಗಿ ಒಂದು ಇಂಜಕ್ಷನ್ ಚುಚ್ಚಿಸಿ, ಬರುವಾಗಲೇ ಎಳನೀರು ತಂದು ,ಡಾಕ್ಟರ್ ಕೊಟ್ಟ ಸ್ಟ್ರಾಂಗ್ ಡೋಸ್ ಕ್ಯಾಪ್ಸುಲ್ ನುಂಗಿ ಹೊದ್ದಿಗೆ ಹೊದ್ದು ಮಲಗಿದರೆ ಮುಗೀತು.ನಿಜ ಹೇಳಿ, ಆರೋಗ್ಯತಪ್ಪಿದವರ ಪಕ್ಕದಲ್ಲಿದ್ದು ಅವರ ಮೈ ತಡವರಿಸುತ್ತ, ಅವರಿಗೆ "ನಾನಿದ್ದೇನೆ ಹೆದರ ಬೇಡ" ಎಂಬ ಪ್ರೀತಿಯ ಬರವಸೆಯ ಮಾತುಗಳನ್ನಾಡುವ ಮಂದಿ ಎಷ್ಟು ಜನರಿದ್ದಾರೆ? ಹೇಳಿ.
ಅಲ್ಲೆಲ್ಲೋ ಮಾತು ಶುರುವಾಗಿರಬಹುದು. ಇವನೆಲ್ಲೋ ಹುಚ್ಚ. ಅವತ್ತೆಲ್ಲಿ? ಇವತ್ತೆಲ್ಲಿ? ಅಂದಿನ ಜನರ ಬದುಕೆಲ್ಲಿ? ಇಂದಿನ ಜನರ ಬದುಕೆಲ್ಲಿ? ನಾಲ್ಕು ಜನರಂತೆ ನಾವಿರ ಬೇಡವೇ? ಅದಕ್ಕಾಗಿ ಲಕ್ಷ ಲಕ್ಷ ದುಡಿಯದಿದ್ದರೆ ನಮ್ಮ ಮಕ್ಕಳ ಕೈಗೆ ಕೊಡಬೇಕಾಗುತ್ತದೆ ಚಿಪ್ಪು !!!
ಹೌದು, ಈ ಮಾತು ನನ್ನ ಕಿವಿಗೆ ಬೀಳುತ್ತಲೇ ಇರುತ್ತದೆ. ಆಗ ಕನಿಕರ ಪಡುವಂತಾಗುತ್ತದೆ. ಅಯ್ಯೋ, ಭಗವಂತಾ! ದುಡಿದು, ದುಡಿದು, ಹೊಟ್ಟೆಗೆ ತಿನ್ನಲೂ ಪುರಸೊತ್ತಿಲ್ಲದಂತೆ ದುಡಿದು, ಗಂಡ ಹೆಂಡತಿ ಹಗಲು ರಾತ್ರಿ ಎನ್ನದೆ ಪಾಳಿಯಲ್ಲಿ ದುಡಿದು, ಕೆಲಸ ಮುಗಿಸಿ ನಡುರಾತ್ರಿಯಲ್ಲಿ ಕ್ಯಾಬ್ ನಲ್ಲಿ ಬರುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂದು ಬರುತ್ತಿದ್ದೀರಲ್ಲಾ! ಇದು ನಿಮಗೆ ಬೇಕಾ? ಇಂತಾ ದುಡಿಮೆ ಮಾಡಿ ಬಂಗಲೆಯ ಜೀವನ ಮಾಡಬೇಕಾ? ಅಪ್ಪ-ಅಮ್ಮ ಮನೆಯಲ್ಲಿಲ್ಲದೆ ಮಕ್ಕಳು ಮಾತ್ರ ಮನೆಯಲ್ಲಿದ್ದಾಗ ಏನೇನು ಅಚಾತುರ್ಯ ನಡೀತಿದೆ? ಎಂಬಾ ಅರಿವೇ ನಿಮಗಿಲ್ಲವಲ್ಲಾ! ಎಂಬ ದೀನ ನುಡಿಯು ಯಾರ ಕಿವಿಗೂ ಬೀಳುವುದೇ ಇಲ್ಲ.
ನಮ್ಮಂತ ಅತ್ತಲೂ ಇಲ್ಲ-ಇತ್ತಲೂ ಇಲ್ಲದ ತ್ರಿಶಂಕುಗಳು ಉಗುಳಲಾರದೆ ಬಿಸಿ ತುಪ್ಪವ ನುಂಗಲಾರದೆ ಪರದಾಡುತ್ತಿರುವ ನನ್ನ ವಯೋಮಾನದ ಜನರಿದ್ದಾರಲ್ಲಾ, ಅವರದು ಬಲು ಕಷ್ಟ ರೀ.
ಅಂದು ನಮ್ಮ ಮನೆಯಲ್ಲಿದ್ದುದು 5X10 ಅಡಿಯ ಹಳೆಯ ಜಮಖಾನ. ಹಳ್ಳಿಯಲ್ಲಿ ಹಳೆಯ ನಾಡಹೆಂಚಿನ ಮನೆ. ಮನೆ ತುಂಬಾ ಜನ.
ಇಂದು ಮನೆಯಲ್ಲಿ ಇಪ್ಪತ್ತು ಜನ ಬಂದರೂ ಊಟಕ್ಕೂ ಕೊರತೆ ಇಲ್ಲ. ಮಲಗಲೂ ಚಿಂತೆ ಇಲ್ಲ. ಮನೆಯಲ್ಲಿ ನಾವಿಬ್ಬರು. ನಾವೇ ಇಬ್ಬರು.
ನಮ್ಮಂತ ಅಪ್ಪ-ಅಮ್ಮಂದಿರಿಗೆ ಮಕ್ಕಳು ಹೇಳಿಬಿಡಬಹುದು " ಮನೆಯನ್ನು ಬಾಡಿಗೆಗೆ ಕೊಟ್ಟು ನಮ್ಮೊಡನೆ ಬಂದು ಇದ್ದು ಬಿಡಿ. ಬಾಡಿಗೆಗೆ ಕೊಟ್ಟು ಹೋಗಿ ಬಿಡಲು 15 ದಿನಗಳು ಸಾಕು. ಈ ಸ್ಥಿತಿಗೆ ಬರಲು ಅದರ ಹಿಂದಿರುವ 40ವರ್ಷಗಳ ಬೆವರಿನ ವಾಸನೆ ನಮ್ಮ ಮನೆಯ ಇಟ್ಟಿಗೆ ಕಣಕಣದಲ್ಲೂ ಸೇರಿದೆಯಲ್ಲಾ!
ಅದಕ್ಕೇನು ಮಾಡಬೇಕು ಅಂತೀರಾ? ಕೆಲಸ ಬಿಟ್ಟು ಬಂದು ಇಲ್ಲಿ ಕೂತು ಬಿಡೋಣವೇ? ಅಂತಾ ಮಕ್ಕಳು ಕೇಳಬಹುದು.ಅವರಿಗೆ ನಮ್ಮಂತವರ ಉತ್ತರ ಇಷ್ಟೆ. " ಮಕ್ಕಳೇ, ನೀವೆಷ್ಟು ದುಡಿದರೂ ದುಡಿಯಬೇಕೆಂಬ ಆಸೆ ತಪ್ಪುವುದಿಲ್ಲ. ನೀವು ಸುಖವಾಗಿ ಯಾವಾಗ ಸಂಸಾರ ಮಾಡುತ್ತೀರಿ? ರಸ್ತೆಯಲ್ಲಿ ಹೋಗಿ ಪಾನಿಪೂರಿ ತಿಂದು ಬಂದರೆ ಸಾಕು ಎಂದು ಕೊಂಡಿದ್ದೀರಲ್ಲಾ! ಅದಕ್ಕೂ ಮೀರಿದ ಸುಖ ಸಂಸಾರದಲ್ಲಿದೆ. ಅದರ ಅರಿವು ನಿಮಗಿಲ್ಲ. ಅದಕ್ಕಾಗಿ ನೀವು ಏನು ಮಾಡಬಹುದು ಗೊತ್ತಾ? 20-25 ವರ್ಷ ದುಡೀರಿ. ಬೇಡ ಎನ್ನುವವರಾರು? ಆಮೇಲಾದರೂ ನಿಮ್ಮ ಅಪ್ಪ-ಅಮ್ಮನ ಮನೆಗೆ ಬನ್ನಿ .ಅಪ್ಪ-ಅಮ್ಮನ ಕಡೆಗಾಲದಲ್ಲಿ ಅವರ ಜೊತೆ ಸುಖವಾಗಿ ಜೀವನ ಮಾಡಿ. ಅವರೂ ಮಕ್ಕಳು ಮರಿ ನೋಡಿ ಸಂತೊಷ ಪಡ್ತಾರೆ. ಅವರಿಂದ ನಿಮಗೂ ಸೆಕ್ಯೂರಿಟಿ ಫೀಲಿಂಗ್ ಬರುತ್ತೆ. ಮಕ್ಕಳಿಗೆ ಅಪ್ಪ-ಅಮ್ಮನ ಜೊತೆಗೆ ಅಜ್ಜಿ-ತಾತನ ಪ್ರೀತಿ ಸಿಗುತ್ತೆ.ನಿಜವಾಗಿ ಕೂಡು ಕುಟುಂಬದಲ್ಲಿ ಸಿಗುವಷ್ಟು ಸಂತೋಷ, ಸಂಸ್ಕಾರ, ಬಿಡಿ ಕುಟುಂಬದಲ್ಲಿ ಸಿಗುವುದಿಲ್ಲ. ಇದು ಇಂದಿನ ಯುವಕರೆಲ್ಲಾ ಯೋಚಿಸಬೇಕಾದ ವಿಷಯ. ಏನಂತೀರಾ?
Comments
ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ...
ನಮಸ್ಕಾರ ಶ್ರೀಧರ್,
ನೀವು ವರ್ಣಿಸಿದ ಚಿತ್ರಣ - ಒಂದು ಸ್ತರದ ಸಂತುಲಿತ ಚಿತ್ರಣ. ಬಹುಶಃ ನಮ್ಮಲ್ಲಿ ಸಾಕಷ್ಟು ಜನ ಆ ವಾತಾವರಣದಲ್ಲೆ ಬೆಳೆದವರು. ಅಲ್ಲಿ ಐಹಿಕ ಭೋಗ ಮೀರಿದ ಸಾಮಾಜಿಕ ಹೊಂದಾಣಿಕೆ ಇತ್ತು. ಈಗಲೂ ನೆನಪಿದೆ - ರೂಮುಗಳೆ ಇಲ್ಲದ ಮನೆಗಳಲ್ಲಿ ಹಜಾರ, ಅಡಿಗೆ ಮನೆಗಳಲ್ಲಿ ಸಾಲು ಸಾಲಾಗಿ ಮಲಗುತ್ತಿದ್ದ ಬಗ್ಗೆ, ಕೆಲವೊಮ್ಮೆ ನೆಂಟರಿಷ್ಟರೂ ಸೇರಿದಂತೆ.
ಆದರೆ ಈಗಿನ ಸಮತೋಲನದ ವಾತಾವರಣ ಮಕ್ಕಳಿಗೆ ಬೇರೆಯದೆ ಆದ ಸಂದೇಶ ನೀಡುತ್ತದೆ. ಹುಟ್ಟಿದಾಗಿಂದಲೆ ಟಿವಿ, ಫ್ರಿಡ್ಜು, ಕಾರು, ಸ್ಕೂಟರಿನ ನಡುವೆ ಬೆಳೆದ ಪೀಳಿಗೆಗೆ ಅವೆಲ್ಲ ಇಲ್ಲದೆ ಹೇಗೆ ಬೆಳೆದೆವೆಂಬುದನ್ನು ಊಹಿಸಲೂ ಕಷ್ಟವೆ. ಅದರಿಂದಾಗಿಯೆ ನಮ್ಮ ದಿನದ ಎಷ್ಟೊ ಸರಳ ಆಟಗಳು (ಗಿಲ್ಲಿ ದಾಂಡು,ಲಗೋರಿ, ಮಾರಿಗುಂಡು - ಎಲ್ಲಾ ಬಿಡಿಗಾಸಿನ ಖರ್ಚಲಿ ಆಡುವ ಆಟಗಳು;ಅದನ್ನೀಗ ಕ್ರಿಕೆಟ್ ಕಿಟ್ಟಿಗೆ ಹೋಲಿಸಿದರೆ ವ್ಯತ್ಯಾಸ ಅಪಾರ) ಆಚಾರಗಳು, ಸಂಸ್ಕೃತಿ ಸದ್ದಿಲ್ಲದೆ ಮರೆಯಾಗಿಬಿಡುವುದು.
ಆ ಪರಿಸರ ಪ್ರಭಾವದಲ್ಲಿ ಬೆಳೆದ ಮಕ್ಕಳು ಮತ್ತೆ ಹೆತ್ತವರ ತೆಕ್ಕೆಗೆ ಬಂದು ಜೀವನ ನಡೆಸುವ ಸಾಧ್ಯತೆ ಈ ಬದಲಾದ ಪರಿಸರ ವಾತಾವರಣದಲ್ಲಿ ಪಂಥವೆ ಸರಿ :-)
ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ...
ಶ್ರೀಧರ್ ಸರ್,
ನೀವು ಹೇಳಿರುವದು ನೂರಕ್ಕೆ ನೂರರಷ್ಟು ನಿಜ. ನಾಗೇಶರಂದಂತೆ ನಾವೆಲ್ಲಾ ಇಂತಹ ಒಟ್ಟು ಕುಟುಂಬಗಳಲ್ಲೇ ಬೆಳೆದವರು, ಬಡತನದ ಬೇಗೆಯನ್ನು ಅನುಭವಿಸಿದರೂ ಸಹ ಎಂದಿಗೂ ಪ್ರೀತಿ-ವಾತ್ಸಲ್ಯದ ಬೇಗೆಯನ್ನು ಅನುಭವಿಸಲಿಲ್ಲ ಎನ್ನುವುದಂತೂ ಅಕ್ಷರಶಃ ನಿಜ. ನೀವು ಹೇಳಿದಂತೆ ಸರಳ ಜೀವನ ನಡೆಸಲು ಯಾರೂ ತಯಾರಿಲ್ಲ; ಎಲ್ಲರಿಗೂ ಸುಖದ ಸುಪ್ಪತ್ತಿಗೆಯಲ್ಲಿ ಮಲಗುವ ಆಸೆ ಆದರೆ ವಾಸ್ತವವಾಗಿ ಅವರು ಅದನ್ನು ಅನುಭವಿಸಲು ಆಗುತ್ತಿಲ್ಲ ಎಂದು ಆಲೋಚಿಸಲೂ ಬಿಡುವಿಲ್ಲದ ಧಾವಂತದ ಜೀವನ ಅವರದು. ಇಂದು ಜೀವನವೆಂದರೆ ಕೇವಲ ದೊಡ್ಡ ಹುದ್ದೆ, ಬಂಗಲೆ, ಪ್ರಿಡ್ಜು, ಕಾರು, ಮೊಬೈಲು, ಚಂದದ ನಾಯಿಮರಿ ಇದೇ ಆಗಿದೆ; ಏನೂ ಹೇಳಲು ಆಗದೆ ಕಾಲಾಯ ತಸ್ಮೈ ನಮಃ ಎನ್ನದೇ ಬೇರೆ ವಿಧಿಯಿಲ್ಲ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ...
ಶ್ರೀಧರ ಸಾರ್
ಎಲ್ಲ ಸರಿ, ಆದರೆ ಇಪ್ಪತ್ತು ಇಪ್ಪತೈದು ವರ್ಷಕಾಲ ಅವರು ದುಡಿಯುವ ಹೊತ್ತಿಗೆ, ಅವರಿಗೆ ಅವರ ಮಕ್ಕಳು ಹೆಂಡತಿ ಎಂಬ ಲೋಕ ಸ್ಱುಷ್ಟಿಯಾಗಿರುತ್ತದೆ. ಅವರು ತಮ್ಮ ಲೋಕಗಳನ್ನು ಬಿಟ್ಟು ಪುನಹ ಹಿಂದಿನ ತಮ್ಮ ಅಪ್ಪ ಅಮ್ಮನ ಲೋಕಕ್ಕೆ ಬರುವಷ್ಟು ಆಸಕ್ತಿ ಉಳಿದಿರುವದಿಲ್ಲ. ನಾನು ಅವರು ತಪ್ಪು ದೊಡ್ಡವರು ತಪ್ಪು ಎಂದು ವಾದ ಮಾಡುತ್ತಿಲ್ಲ. ಈಗಿನ ಸಾಮಾಜಿಕ ಸ್ಥಿತಿ ಬೇರೆಯೆ ಇದೆ. ಹೊಂದಿಕೊಳ್ಳುವುದು ಕಷ್ಟ. ಹೊಂದಿಕೊಳ್ಳಲು ನಮ್ಮಲ್ಲೆ ಅತಿ ಹಳೆಯ ಉಪಾಯವು ಇದೆ ಬೇರೆ ದೇಶಗಳಲ್ಲಿ ಇಲ್ಲದ್ದು ಅದೆ ಭಗವದ್ಗೀತೆಯ ಸಾರ ಅಳವಡಿಸಿಕೊಳ್ಳುವುದು ಎಲ್ಲವನ್ನು ನಿರ್ಲಿಪ್ತತೆಯಿಂದ ಕಾಣುವುದು ಅವರಾಗೆ ಬಂದರೆ ಸ್ವಾಗತ. ಇಲ್ಲವೆ ನಮ್ಮ ಬದುಕು ನಮ್ಮದು ಎನ್ನುವುದು . ಅವರ ಸ್ವಾತಂತ್ರ್ಯ ಅವರದು ಅಲ್ಲವೆ ?
In reply to ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ... by partha1059
ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ...
ಇಪ್ಪತ್ತು-ಇಪ್ಪತ್ತೈದು ವರ್ಷವೂ ಜಾಸ್ತಿಯಾಯ್ತು. ವಾಸಕ್ಕೆ ಯೋಗ್ಯವಾದ ಮನೆಯನ್ನು ಅಪ್ಪ ಕಟ್ಟಿಸಿದ್ದರೆ ಮಕ್ಕಳು ತಮ್ಮ ಸರಳಬದುಕಿಗೆ ಅಗತ್ಯವಾದಷ್ಟು ದುಡಿದು ಇನ್ನೂ ಮುಂಚೆಯೇ ಗೂಡು ಸೇರಬಹುದು. ಅವರಿಗೂ ಮಕ್ಕಳಾಗಿದ್ದರೆ ಮೊಮ್ಮಕ್ಕಳಿಗೂ ಸಂತೋಷ, ಅಜ್ಜ ಅಜ್ಜಿಯರಿಗೂ ಸಂತೋಷ. ಅಪ್ಪನ ಮನೆಯನ್ನು ಕೇಂದ್ರವಾಗಿಟ್ಟುಕೊಂಡು ಮಕ್ಕಳ ಓದುಬರಹ ಮುನ್ನಡೆ ಸಾಧಿಸಲು ಅಸಾಧ್ಯವೇನಲ್ಲ.ಅತಿಯಾದ ಹಣಕ್ಕೆ ಮಹತ್ವ ಕೊಡದಿದ್ದರೆ ಕೂಡುಬದುಕಿನಲ್ಲಿ ಸಿಗುವಷ್ಟು ನೆಮ್ಮದಿ ಬೇರೆಲ್ಲೂ ಸಾಧ್ಯವಿಲ್ಲ. ದೇಶಕ್ಕೆ ಉಳಿತಾಯ ಕೂಡ.
In reply to ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ... by hariharapurasridhar
ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ...
ಪ್ರಿಯ ಶ್ರೀಧರ, ಅನುಭವದ ಸುಂದರ, ಸರಳ ನಿರೂಪಣೆ! ಕಷ್ಟದ ಅರಿವಿರುವವರಿಗೆ ಸುಖದ ರುಚಿ ಜಾಸ್ತಿ, ಈಗಿನವರ ಕಷ್ಟದ ಪರಿಯೇ ಬೇರೆ! ಅವರೂ ಮುಂದೊಮ್ಮೆ ಹೀಗೆ ಬರೆಯುತ್ತಾರೆ, ಬರೆದಾರು!!
In reply to ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ... by kavinagaraj
ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ...
ಪ್ರೀತಿಯಿಂದ ಓದಿ ಪ್ರತಿಕ್ರಿಯಿಸಿರುವ ಆತ್ಮೀಯರುಗಳಾದ ಶ್ರೀ ನಾಗೇಶ್,ಶ್ರೀ ಶ್ರೀಧರ್ ಭಂಡ್ರಿ, ಶ್ರೀ ಪಾರ್ಥ, ಶ್ರೀ ಗುಣಶೇಖರಮೂರ್ತಿ ಮತ್ತು ಶ್ರೀ ನಾಗರಾಜ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.
ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ...
ಹರಿಹರಪುರಶ್ರೀಧರ್ ಅವರೆ,
ಈ ಸಮಾಜ ಸೇವೆ ಹುಚ್ಚಿದೆಯಲ್ಲಾ..ಅದು ಕುಡಿತದ ಹಾಗೇ.. ಮಗನೂ ಬೇಡ, ಮೊಮ್ಮಕ್ಕಳೂ ಬೇಡ..ತಾನಾಯಿತು, ಸಮಾಜೋದ್ಧಾರವಾಯಿತು. ಆ ಸಮಾಜವೋ ನೀವು ಮಾಡಿದ ಸೇವೆಯನ್ನು ಕ್ಷಣವೂ ನೆನೆಸುವುದಿಲ್ಲ.
ನೀವು ಒಮ್ಮೆ ಮಗನ ಸ್ಥಾನದಲ್ಲಿ ನಿಂತು ಆಲೋಚಿಸಿ. ಆತನಿಗೂ ತನ್ನ ತಂದೆ ತಾಯಿಯ ಸೇವೆ ಮಾಡಬೇಕೆಂದು ಇರುತ್ತದೆ. ಕಾಲ ಬದಲಾಗಿದೆ. ಊರಲ್ಲೇ ನಿಂತರೆ, ತನ್ನ ಕಲಿಕೆಗೆ ತಕ್ಕ ಉದ್ಯೋಗ ಸಿಗದು.
ಇಷ್ಟುದ್ದ ಡಯಲಾಗ್ ಹೇಳುವ ಬದಲು, ಮಗನಿದ್ದ ಊರಲ್ಲಿ, ಮಗ-ಸೊಸೆ-ಮೊಮ್ಮಕ್ಕಳೊಂದಿಗೆ ಇದ್ದು, ಅಲ್ಲಿಯೇ ಸಮಾಜ ಸೇವೆ ಮುಂದುವರೆಸಬಾರದೇ? ಮೊಮ್ಮಕ್ಕಳ ಬಾಲ್ಯದಲ್ಲಿ ಅಜ್ಜ-ಅಜ್ಜಿಯ ಆವಶ್ಯಕತೆ ಜಾಸ್ತಿ. ಅಂತಹ ಮಧುರ ಕ್ಷಣವನ್ನು ವ್ಯರ್ಥಮಾಡಿ, ೨೫-೩೦ ವರ್ಷ ಕಳೆದು ಮನೆಗೆ ಬಾ ಅಂತೀರಲ್ಲಾ!? :(
೨೦-೩೦-೪೦ ವರ್ಷ ಇದ್ದ "ನಿರ್ಜೀವ ಮನೆಗೇ" ಅಂಟಿಕೊಂಡಿರುವವರಿಗೆ, "ಪಾರ್ಥಸಾರಥಿ" ಹೇಳಿದ "ನಿರ್ಲಿಪ್ತತೆ" ಬರಲು ಸಾಧ್ಯವೇ ಇಲ್ಲ.
ಹರಿಹರಪುರಶ್ರೀಧರ್ ಅವರೆ, ಈ ವಿಷಯದಲ್ಲಿ ನಿಮ್ಮ ಪತ್ನಿಯ ಅಭಿಪ್ರಾಯ ಕೇಳಿದ್ದೀರಾ? ಎಲ್ಲಿ ಕೇಳುತ್ತೀರಿ? ನಿಮ್ಮ ತೀರ್ಮಾನವೇ ಕೊನೆ...ಹೌದಲ್ವಾ? ಈಗಾದರೂ ನಿಮ್ಮ ಮಕ್ಕಳ ಬಳಿ ಹೋಗಿ,ಮೊಮ್ಮಕ್ಕಳೊಂದಿಗೆ ಸುಖವಾಗಿ ಬಾಳಿ.
In reply to ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ... by ಗಣೇಶ
ಉ: ರಸ್ತೆ ಬದಿಯಲ್ಲಿ ಸಿಗುವ ಪಾನಿಪೂರಿಯ ಸವಿಗಿಂತ ಹೆಚ್ಚು ಸುಖ ಅಂದರೆ...
ಮೊಮ್ಮಕ್ಕಳು ಬರಲಿ, ಆಮೇಲೆ ಯೋಚಿಸುತ್ತಾರೆ. :)