ಅಕ್ಷಯ ಪ್ರತಿಭೆ

ಅಕ್ಷಯ ಪ್ರತಿಭೆ

ಅಕ್ಷಯ ಪ್ರತಿಭೆ

ಹೊಸ ಕುತೂಹಲ, ಮೊಗ್ಗ ಹೊಸಕುವವರಿದ್ದರೂ
ಹೊಸದಾಗಿ ಅರಳುವುದು ಹಸಿರರಾಗ|
ಬೆಸೆದು ಕಂಪನು ಕೊನರ ಮೊಗ್ಗಿನಾ ಉಸಿರಿನಲಿ
ಪಸರಿಪರು ಜಗದಗಲ ಪರಿಣಿತಿಯ ಪರಿಮಳ

ಮೊಗ್ಗುಗಳು ಇವರು ಹಿಗ್ಗುವರೆಲ್ಲರು
ಕುಗ್ಗಿ ಕಂಗೆಡದಂತೆ ಕಣ್ಗಾವಲಾಗೋಣ.
ಬಿರುಬಿಸಿಲ ಉರಿಬೇಗೆ ಬಿರುಗಾಳಿ ತಾಂಡವಕೆ
ನೆಲಕಚ್ಚದಂತೆ ನೆರವು ನೀಡೋಣ

ಕಡಲಂತರಂಗದಲಿ ಹುದುಗಿ ಕುಳಿತಿಹ ಚಿಪ್ಪು
ಒಡೆದು ಹೊರಹೊಮ್ಮಿರುವ ಸ್ವಾತಿ ಮುತ್ತುಗಳಿವರು
ಎತ್ತಿಮತ್ತೊರೆಸಿ ಒತ್ತಿ ಪೋಣಿಸಿ ಸಾಕು
ಉತ್ತಮನ ಕೊರಳಲ್ಲಿ ಕಂಗೊಳಿಪರು

ಯಾವ ನೆಲದಡಿಯಲ್ಲಿ ಬಂಗಾರಹುದುಗಿದೆಯೊ
ಯಾವ ಝರಿ ತೊರೆಯಲ್ಲಿ ಅಮೃತ ತುಂಬಿದೆಯೊ
ಯಾರು ಬಲ್ಲರು ಯಾರ ಮನದಂತರಾಳಗಳ
ಗುಪ್ತಗಾಮಿನಿಯಾದ ಸುಪ್ತ ಪ್ರತಿಭೆಯ ಕುಡಿಯ
ನೀರೆರೆದು ಬೆಳೆಸೋಣ ನೀಲಿನಭದೆತ್ತರಕೆ.

ರಚನೆ ರೂಪಾ ರವೀಂದ್ರ ಜೋಶಿ

Comments

Submitted by nageshamysore Fri, 11/15/2013 - 03:17

ನಮಸ್ಕಾರ ರೂಪಾ ಜೋಶಿಯವರೆ,
ಅಕ್ಷಯ ಪ್ರತಿಭೆ ಅಕ್ಷಯವಾಗಿ, ಅವಿರತವಾಗಿ, ಅನಂತವಾಗಿ ಹೊರಹೊಮ್ಮಲು ಸುತ್ತಲ ಪೂರಕ ಪರಿಸರ ಮುಖ್ಯ. ಅದನ್ನು ಸೃಷ್ಟಿಸಿ, ಪೋಷಿಸಿ, ನೀರೆರೆದರೆ ತಂತಾನೆ ಮುತ್ತುಗಳು ಅನಾವರಣಗೊಳ್ಳುತ್ತವೆ ಸಹಜವಾಗಿ. ಆಶಯ ಚೆನ್ನಾಗಿದೆ :-)

Submitted by roopa r joshi Sat, 11/16/2013 - 22:14

In reply to by nageshamysore

ನಾಗೇಶ್ ಅವರೆ ನಿಮ್ಮ ಮಾತು ನಿಜ. ಎಲ್ಲ ತಂದೆ ತಾಯಂದಿರೂ ಜೀವನ ಪೂರ್ತಿ ಕೇವಲ ಆಸ್ತಿ ಅಂತಸ್ತನ್ನು ಹೆಚ್ಚಿಸುವತ್ತಲೇ ಆಸಕ್ತರಾಗುವ ಬದಲು ಈ ದೈವೀದತ್ತ ಆಸ್ತಿ (ಮಕ್ಕಳು)ಯತ್ತ ಚಿತ್ತವಿರಿಸಿ ತಿದ್ದಿ ತೀಡಿ ಉತ್ತಮ ಪ್ರಜೆಗಳನ್ನಾಗಿಸಿದರೆ ಜಗತ್ತಿನ ಯಾವ ರಾಷ್ಟ್ರವೂ ನಮ್ಮನ್ನು ಸರಿಗಟ್ಟಲಾರದಲ್ಲಾ!

Submitted by makara Fri, 11/15/2013 - 06:50

ಜೋಷಿಯವರೆ,
ನಿಮ್ಮ ಕವನದ ಆಶಯ ಚೆನ್ನಾಗಿದೆ, ಅದರಂತೆ ಈ ನವ ಮಣಿಗಳು ಭರತ ಮಾತೆಯ ಕೊರಳನ್ನು ಅಲಂಕರಿಸಲಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಗಣೇಶ Sat, 11/16/2013 - 23:14

ಯಾವ ನೆಲದಡಿಯಲ್ಲಿ ಬಂಗಾರಹುದುಗಿದೆಯೊ :) ಸ್ವಾಮಿ ಕನಸ ನಂಬಿ ನೆಲದಡಿಯ ಬಂಗಾರ ಹುಡುಕಿದ್ದು ನೆನಪಾಯಿತು.
ರೂಪಾ ಅವರೆ, ನಿಮ್ಮ ಕವನ ಚೆನ್ನಾಗಿದೆ.

Submitted by roopa r joshi Sun, 11/17/2013 - 12:35

In reply to by ಗಣೇಶ

ಹ್ಹ ಹ್ಹ ಹ್ಹಾ ಎಂಥ ವಿಭಿನ್ನ ವಿಮರ್ಶೆ ತುಂಬಾ ಇಷ್ಟವಾಯಿತು.ಹಾಂ ಈಗೊಂದು ಸಾಲು ಹೊಳೆಯಿತು ‘ಎಲ್ಲ ಗಾಂಭೀರ್ಯದ ಗರ್ಭದೊಳಗಡೆ ತುಂಟತನ ಅಡಗಿಹುದು’.ಅಲ್ಲವೆ?