೧೫೮. ಲಲಿತಾ ಸಹಸ್ರನಾಮ ೭೦೪ರಿಂದ ೭೦೫ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೦೪ -೭೦೫
Sarasvatī सरस्वती (704)
೭೦೪. ಸರಸ್ವತೀ
ದೇವಿಯು ಜ್ಞಾನದ ಅಧಿದೇವತೆಯಾದ ಸರಸ್ವತೀ ದೇವಿಯ ರೂಪದಲ್ಲಿದ್ದಾಳೆ. ಬ್ರಹ್ಮವು ಜ್ಞಾನದ ಮೂರ್ತರೂಪವಾಗಿದೆ. ಮಾಯೆಯ ಪ್ರಭಾವದಿಂದಾಗಿ ಜನರು ದ್ವೈತ್ವ ಅಥವಾ ಅಜ್ಞಾನದಿಂದ ಬಂಧಿತರಾಗಿದ್ದಾರೆ. ಸರಸ್ವತೀ ದೇವಿಯ ರೂಪವು ಅಜ್ಞಾನವನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ಹೊಂದಿದೆ. ಅಜ್ಞಾನವು ಬ್ರಹ್ಮಸಾಕ್ಷಾತ್ಕಾರಕ್ಕೆ ಇರುವ ದೊಡ್ಡ ಅಡಚಣೆಯಾಗಿದೆ. ಭಗವದ್ಗೀತೆಯು (೫.೧೫) ಈ ಸಂಗತಿಯನ್ನು ಹೀಗೆ ವಿವರಿಸುತ್ತದೆ, "ಜ್ಞಾನವು ಅಜ್ಞಾನದೊಳಗೆ ಅಡಗಿಸಲ್ಪಟ್ಟಿದೆ". ಈ ಸಮಸ್ತ ವಿಶ್ವವು ದೇವಿಯ ರೂಪಾಂತರವಾಗಿದೆ. ಇದನ್ನು ಅರ್ಥಮಾಡಿಕೊಳ್ಳಲು ಜ್ಞಾನದ ಅವಶ್ಯಕತೆ ಇದೆ. ದೇವಿಯು ಜ್ಞಾನದ ಭಂಡಾರವಾಗಿದ್ದಾಳೆ (ನಾಮ ೬೪೪ ಜ್ಞಾನ ವಿಗ್ರಹಾ) ಮತ್ತು ಯಾರು ಈ ಪರಮೋನ್ನತ ಜ್ಞಾನವನ್ನು ಹೊಂದಬಯಸುತ್ತಾರೋ ಅವರಿಗೆ ದೇವಿಯು ಜ್ಞಾನವನ್ನು ಕರುಣಿಸುತ್ತಾಳೆ (ನಾಮ ೬೪೩ ಜ್ಞಾನದಾ). ಯಾರು ಯೋಗ್ಯರೋ ಅವರಿಗೆ ದೇವಿಯು ಜ್ಞಾನವನ್ನು ಪ್ರಸಾದಿಸುತ್ತಾಳೆ. ಪಾಪಿಗಳಿಗೆ ನಿಲುಕದಂತೆ ಜ್ಞಾನದ ಉನ್ನತ ರೂಪವು ಅಜ್ಞಾನದಿಂದ ಮರೆಮಾಚಲ್ಪಟ್ಟಿರುತ್ತದೆ. ಯಾರು ಜ್ಞಾನವನ್ನು ಅರಸುವುದಿಲ್ಲವೋ ಅವರಿಗೆ ನಿಜವಾದ ಜ್ಞಾನದಿಂದ ಏನೂ ಪ್ರಯೋಜನವಿಲ್ಲ. ಸರಸ್ವತಿಯು ಸೃಷ್ಟಿಕರ್ತನಾದ ಬ್ರಹ್ಮನ ಮಡದಿ. ಬ್ರಹ್ಮ ಮತ್ತು ಪರಬ್ರಹ್ಮ ಇವೆರಡೂ ಬೇರೆ ಬೇರೆ ಎನ್ನುವುದನ್ನು ನೆನಪಿಡಿ.
ನಾಮ ೬೧೪ ಸಚಾಮರ-ರಮಾ-ವಾಣೀ-ಸವ್ಯ-ದಕ್ಷಿಣ-ಸೇವಿತಾ ಎಂದು ಹೇಳುತ್ತದೆ, ಅದರರ್ಥ ರಮಾ (ಲಕ್ಷ್ಮೀದೇವಿ) ಮತ್ತು ಸರಸ್ವತೀ (ವಾಣೀ) ದೇವಿಯ ಎಡ ಮತ್ತು ಬಲಭಾಗಗಳಲ್ಲಿ ನಿಂತು ಅವಳಿಗೆ ಚಾಮರವನ್ನು ಬೀಸುತ್ತಿದ್ದಾರೆ. ಈ ನಾಮವು ದೇವಿಯೇ ಸ್ವಯಂ ಸರಸ್ವತೀ ಆಗಿದ್ದಾಳೆ ಎಂದು ಹೇಳುತ್ತದೆ. ಸರಸ್ವತಿಯನ್ನು ಇಲ್ಲಿ ಬ್ರಹ್ಮದ ಒಂದು ಗುಣವಾಗಿ ಪರಿಗಣಿಸಲಾಗಿದೆ. ಸರಸ್ವತೀ ರೂಪವು ಲಲಿತಾಂಬಿಕೆಯ ಕ್ರಿಯಾಶೀಲ ಗುಣಗಳಲ್ಲೊಂದಾಗಿದೆ. ಇತರೇ ಕ್ರಿಯಾಶೀಲ ಗುಣಗಳನ್ನು ಮುಂದಿನ ನಾಮದಲ್ಲಿ ಚರ್ಚಿಸಲಾಗಿದೆ. ವೇದಗಳು ಪರಬ್ರಹ್ಮದ ವಿವಿಧ ಕ್ರಿಯೆಗಳನ್ನು ವಿವಿಧ ದೇವ-ದೇವಿಯರ ರೂಪದಲ್ಲಿ ವಿವರಿಸುತ್ತವೆ.
ಎರಡು ವರ್ಷ ವಯಸ್ಸಿನ ಬಾಲೆಯನ್ನು ಸಹ ಸರಸ್ವತೀ ಎಂದು ಕರೆಯುತ್ತಾರೆ. ಪುರಾತನ ಕೃತಿಗಳ ಪ್ರಕಾರ ಸರಸ್ವತೀ ದೇವಿಯು ಎಲ್ಲಾ ಮಾನವರ ನಾಲಿಗೆಯಲ್ಲಿ ನೆಲೆಸಿ ಮಾತನ್ನು ಉಂಟುಮಾಡುತ್ತಾಳೆ.
ದೇವಿ ಮಹಾತ್ಮ್ಯದಲ್ಲಿ ಮೂರು ಮುಖ್ಯ ಅಧ್ಯಾಯಗಳಿವೆ, ಅವೆಂದರೆ - ಪ್ರಥಮ ಚರಿತ, ಮಧ್ಯಮ ಚರಿತ ಮತ್ತು ಉತ್ತಮ ಚರಿತ. ಈ ಪ್ರತಿಯೊಂದು ಚರಿತವನ್ನು ಒಬ್ಬೊಬ್ಬ ದೇವಿಯರು ಪ್ರತಿನಿಧಿಸುತ್ತಾರೆ; ಅವರು ಅನುಕ್ರಮವಾಗಿ ಹೀಗಿದ್ದಾರೆ ದುರ್ಗಾ ದೇವಿ (ನಾಮ ೧೯೦), ಮಹಾಲಕ್ಷ್ಮೀ (ನಾಮ ೨೧೦) ಮತ್ತು ಸರಸ್ವತೀ (ಪ್ರಸ್ತುತ ನಾಮ ೭೦೪). ಈ ಮೂರು ದೇವರುಗಳ ಸಮಷ್ಟಿ ರೂಪವೇ (ಒಂದುಗೂಡಿದ ರೂಪವೇ) ಚಂಡಿಕಾ (ನಾಮ ೭೫೫).
Śāstramayī शास्त्रमयी (705)
೭೦೫. ಶಾಸ್ತ್ರಮಯೀ
ದೇವಿಯು ಶಾಸ್ತ್ರಗಳ ಅಂದರೆ ಧಾರ್ಮಿಕ ಕಟ್ಟಳೆಗಳ ರೂಪದಲ್ಲಿ ಇದ್ದಾಳೆ. ಗೊಂದಲವು ಮಾಯೆಯ ಪ್ರಭಾವದಿಂದ ಉಂಟಾಗುತ್ತದೆ. ದೇವಿಯು ಮಹಾ ಮಾಯಾ ಸ್ವರೂಪಿಣೀ, ಅಂದರೆ ಆಕೆಯು ಮಹತ್ತರವಾದ ಭ್ರಮೆಯನ್ನುಂಟು ಮಾಡುವ ರೂಪದಲ್ಲಿದ್ದಾಳೆ. ಮಾಯೆಯು ಅರ್ಥವಾಗದೇ ಇರುವಾಗ ಉಂಟಾಗುವಂತಹ ಗೊಂದಲವಾಗಿದೆ.
ಛಾಂದೋಗ್ಯ ಉಪನಿಷತ್ತು (೩.೧೪.೧),"ಸರ್ವಂ ಕಲ್ವಿದಂ ಬ್ರಹ್ಮ" ಅಂದರೆ ಇದೆಲ್ಲವೂ ಯಾವುದೇ ಸಂಶಯವಿಲ್ಲದೇ ಬ್ರಹ್ಮವಾಗಿದೆ ಎಂದು ಹೇಳುತ್ತದೆ. ಉಪನಿಷತ್ತುಗಳು ಇದನ್ನು ಅಧಿಕಾರಯುತವಾಗಿ ಹೇಳುತ್ತವೆ. ಒಂದು ವೇಳೆ ಉಪನಿಷತ್ತುಗಳು ಇದನ್ನು ದೃಢಪಡಿಸದಿದ್ದರೆ ನಾವು ಬ್ರಹ್ಮವನ್ನು ಕೇವಲ ತರ್ಕದಿಂದ ಅರಿಯಬೇಕಷ್ಟೇ. ಆದ್ದರಿಂದ ಉಪನಿಷತ್ತುಗಳನ್ನು ಜ್ಞಾನದ ಮೂಲಗಳಾಗಿ ಪರಿಗಣಿಸಲಾಗಿದೆ. ಅವು ಕೇವಲ ಹೇಳಿಕೆಗಳನ್ನು ಕೊಡುತ್ತವೆ ಅವು ವಿಶ್ಲೇಷಣೆ ಅಥವಾ ಅಭಿಪ್ರಾಯಗಳನ್ನು ಕೊಡುವುದಿಲ್ಲ. ಆದ್ದರಿಂದ ಬ್ರಹ್ಮಸೂತ್ರವು (೧.೧.೩), ”ಶಾಸ್ತ್ರ-ಯೋನಿತ್ವಾತ್” ಅಂದರೆ ಬ್ರಹ್ಮವನ್ನು ಅರಿಯುವುದಕ್ಕೆ ಶಾಸ್ತ್ರಗಳು ಜ್ಞಾನದ ಮೂಲಗಳು ಎಂದು ಹೇಳುತ್ತದೆ. ಉಪನಿಷತ್ತುಗಳು ಮತ್ತು ಶಾಸ್ತ್ರಗ್ರಂಥಗಳು ನಮಗೆ ಬ್ರಹ್ಮವನ್ನು ಅರಿಯುವುದಕ್ಕೆ ಅಮೂಲ್ಯವಾದ ಮಾಹಿತಿಗಳನ್ನು ಒದಗಿಸುತ್ತವೆ. ಈ ಮಾಹಿತಿಗಳು ಸಕರಾತ್ಮಕ ಮತ್ತು ನಕಾರಾತ್ಮಕ ಹೇಳಿಕೆಗಳಾಗಿವೆ. ಉದಾಹರಣೆಗೆ, ಬೃಹದಾರಣ್ಯಕ ಉಪನಿಷತ್ತು (೩.೯.೯) "ಪ್ರಾಣ ಶಕ್ತಿಯು ಬ್ರಹ್ಮವಾಗಿದೆ, ಅದನ್ನೇ ’ಅದು’ ಎಂದು ಕರೆಯಲಾಗುತ್ತದೆ" ಎಂದು ಹೇಳುತ್ತದೆ. ಇದನ್ನೇ ಪಂಚದಶೀ ಮಂತ್ರದ ಕಡೆಯ ಕೂಟದಲ್ಲಿ ಒತ್ತು ಕೊಟ್ಟು ಹೇಳಲಾಗಿದೆ; ಅದು ’ಸ+ಕ+ಲ=ಸಕಲ (ಸ ಎಂದರೆ ವಿಷ್ಣು, ಕ ಎಂದರೆ ಬ್ರಹ್ಮ , ಲ ಎಂದರೆ ಇಂದ್ರ) + ಹ್ರೀಂ (ಶಿವ ಮತ್ತು ಶಕ್ತಿಯರನ್ನು ಉಲ್ಲೇಖಿಸುತ್ತದೆ) ಅಂದರೆ ಈ ಸಮಸ್ತ ಬ್ರಹ್ಮಾಂಡದಲ್ಲಿರುವುದೆಲ್ಲಾ (ಸಕಲವೂ) ಶಿವ ಮತ್ತು ಶಕ್ತಿ (ಹ್ರೀಂ) ಆಗಿದೆ ಅಥವಾ ನಿರ್ಗುಣ ಮತ್ತು ಸಗುಣ ಬ್ರಹ್ಮವಾಗಿದೆ.
ಈ ನಾಮವು ದೇವಿಯ ಶರೀರದ ಸಂಪೂರ್ಣ ಭಾಗಗಳು ಕೇವಲ ಶಾಸ್ತ್ರಗಳಿಂದ ರಚಿಸಲ್ಪಟ್ಟಿದೆ ಎಂದು ಹೇಳುತ್ತದೆ. ಆಕೆಯ ಉಸಿರು ವೇದಗಳಾಗಿವೆ (ನಾಮ ೩೩೮-ವೇದ ಜನನೀ), ಆಕೆಯ ಅಹಂಕಾರವು ಮಂತ್ರಗಳಾಗಿವೆ (ನಾಮ ೨೦೪ - ಸರ್ವ-ಮಂತ್ರ-ಸ್ವರೂಪಿಣೀ), ಆಕೆಯ ಮಾತುಗಳು ಮಹಾಕಾವ್ಯಗಳನ್ನು ಸೃಷ್ಟಿಸಿದವು (ನಾಮ ೭೯೮, ಕಾವ್ಯಕಲಾ), ಆಕೆಯ ನಾಲಿಗೆಯು ಸರಸ್ವತೀ ದೇವಿಯನ್ನು (ನಾಮ ೭೦೪, ಸರಸ್ವತೀ) ಸೃಷ್ಟಿಸಿದವು, ಆಕೆಯ ಗದ್ದವು ವೇದಾಂಗಗಳನ್ನು ಸೃಷ್ಟಿಸಿತು. ದೇವಿಯ ಕಂಠದ ಮೇಲ್ಭಾಗದಿಂದ ಎಲ್ಲಾ ಶಾಸ್ತ್ರಗಳು (ಪ್ರಸ್ತುತ ನಾಮ ೭೦೫, ಶಾಸ್ತ್ರಮಯೀ), ಕಂಠದ ಮಧ್ಯಭಾಗದಿಂದ ಔಷಧೀ ಮತ್ತು ಬಿಲ್ವಿದ್ಯೆ ಮತ್ತು ಆಕೆಯ ಕಂಠದ ಕೆಳಭಾಗದಿಂದ ೬೪ ತಂತ್ರಗಳು (ನಾಮ ೨೩೬ ಚತುಷ್ಷಷ್ಟಿ-ಕಲಾಮಯೀ) ಮತ್ತು ಆಕೆಯ ಭುಜಗಳಿಂದ ಪ್ರೇಮವು ಸೃಷ್ಟಿಸಲ್ಪಟ್ಟವು (ಬ್ರಹ್ಮಾಂಡ ಪುರಾಣ).
ವೇದಾಂಗ ಮತ್ತು ವೇದಾಂತದ ಕುರಿತು ಹೆಚ್ಚಿನ ವಿವರಗಳು
ವೇದಾಂಗವು ವೇದಗಳ ಒಂದು ಅಂಗವಾಗಿದ್ದು ಅವು ವೇದಗಳಿಗೆ ಪೂರಕವಾದವುಗಳು ಮತ್ತು ಅವು ಒಂದರ್ಥದಲ್ಲಿ ವೇದಗಳ ಭಾಗಗಳೇ ಆಗಿವೆ ಮತ್ತು ಅವನ್ನು ಬಹುತೇಕ ಸೂತ್ರಗಳ ರೂಪದಲ್ಲಿ (ನೆನಪಿಟ್ಟುಕೊಳ್ಳಲು ಸುಲಭವಾದ ನುಡಿಗಟ್ಟುಗಳ ರೂಪದಲ್ಲಿ) ರಚಿಸಲಾಗಿದೆ. ಅವುಗಳು ಆರು ಸಂಖ್ಯೆಯಷ್ಟಿವೆ.
೧) ಶಿಕ್ಷಾ - ಎಂದರೆ ಸರಿಯಾಗಿ ವ್ಯಕ್ತಮಾಡುವುದು ಮತ್ತು ಉಚ್ಛರಿಸುವುದು, ಇದು ಅಕ್ಷರಗಳ ಜ್ಞಾನವನ್ನು ಒಳಗೊಂಡಿದೆ, ಉಚ್ಛಾರಣೆಯ ಧಾಟಿ, ಮಾತ್ರಾ, ಉಚ್ಛಾರಣೆಗೆ ಬಳಸಬೇಕಾದ ಅಂಗಗಳು ಮತ್ತು ಧ್ವನಿಶಾಸ್ತ್ರ ಇವುಗಳನ್ನು ಸಾಮಾನ್ಯವಾಗಿ ಒಳಗೊಂಡಿರುತ್ತವೆ, ಆದರೆ ಶ್ರುತಿ ಮಾಧುರ್ಯ (ಸುಸ್ವರ) ಎನ್ನುವುದು ವೇದಗಳಿಗೆ ವಿಶಿಷ್ಠವಾಗಿದೆ. ಹಲವಾರು ಕಿರು ಹೊತ್ತುಗೆಗಳು ಮತ್ತು ತೈತ್ತರೀಯ ಅರಣ್ಯಕದ ಒಂದು ಅಧ್ಯಾಯವು ಈ ವಿಷಯವನ್ನು ಪ್ರತಿನಿಧಿಸುತ್ತವೆ ಎಂದು ಪರಿಗಣಿಸಲಾಗಿದೆ.
೨) ಛಂದಸ್ಸು (ಪದ್ಯ ರಚನೆಯ ನಿಯಮ) - ಇದನ್ನು ಪಿಂಗಳ ನಾಗನು ರಚಿಸಿದ ಒಂದು ಗ್ರಂಥವು ಪ್ರತಿನಿಧಿಸುತ್ತದೆ. ಆದರೆ ಈ ಗ್ರಂಥವು ಬಹುತೇಕ ಪ್ರಾಕೃತ ಮತ್ತು ಸಂಸ್ಕೃತ ಛಂದಸ್ಸುಗಳನ್ನು ಒಳಗೊಂಡಿದ್ದು ಅವುಗಳಲ್ಲಿ ವೈದಿಕ ಛಂದಸ್ಸುಗಳು ಕಡಿಮೆ ಇವೆ.
೩) ವ್ಯಾಕರಣ ಅಥವಾ ಭಾಷಾ ರಚನಾ ನಿಯಮವು ಪ್ರಸಿದ್ಧವಾದ ಪಾಣಿನಿಯ ಸೂತ್ರಗಳಿಂದ ಪ್ರತಿನಿಧಿಸಲ್ಪಟ್ಟಿದೆ.
೪) ನಿರುಕ್ತ - ವೇದಗಳ ಕಠಿಣ ಶಬ್ದಗಳನ್ನು ವಿವರಿಸುವ ಅಂಗ.
೫) ಜ್ಯೋತಿಷ - ಖಗೋಳ ಶಾಸ್ತ್ರ ಅಥವಾ ವೈದಿಕ ಪಂಚಾಂಗವು ಸಣ್ಣದಾದ ಅಂಗವಾಗಿದ್ದು, ಈ ಅಂಗದ ಉದ್ದೇಶವು ಯಜ್ಞ-ಯಾಗಾದಿಗಳನ್ನು ಕೈಗೊಳ್ಳಲು ಅತ್ಯಂತ ಪ್ರಶಸ್ತವಾದ ದಿನಗಳನ್ನು ನಿಗದಿ ಪಡಿಸುವುದಾಗಿದೆ. ಇದನ್ನು ಜೋತಿಷ್ಯ ಶಾಸ್ತ್ರವೆಂದೂ ಕರೆಯುತ್ತಾರೆ.
೬) ಕಲ್ಪ - ಇದು ಶಿಷ್ಟಾಚಾರಗಳ ಕುರಿತಾದದ್ದು. ಇದು ಸೂತ್ರಗಳಿಂದ ಕೂಡಿದ ಬಹಳಷ್ಟು ಗ್ರಂಥಗಳಿಂದ ಪ್ರತಿನಿಧಿಸಲ್ಪಟ್ಟಿದೆ.
ವೇದಾಂತವು ವೇದಗಳ ಸಂಪೂರ್ಣ ಜ್ಞಾನವಾಗಿದೆ. ಇದು ಮೀಮಾಂಸ ತತ್ವ ಸಿದ್ಧಾಂತದ ಎರಡನೇ ಮತ್ತು ಅತ್ಯಂತ ಮಹತ್ವದ ಭಾಗವಾಗಿದೆ ಅಥವಾ ಹಿಂದೂ ತತ್ವ ಸಿದ್ದಾಂತಗಳ ಮೂರು ಮಹಾನ್ ವಿಭಾಗಗಳಲ್ಲಿ ಇದು ಮೂರನೆಯದಾಗಿದ್ದು ವೇದಾಂತ ಎಂದು ಕರೆಯಲಾಗಿದೆ. ವೇದಾಂತವೆಂದರೆ ವೇದಗಳ ಅಂತಿಮ ಗುರಿ ಅಥವಾ ಉಪನಿಷತ್ತುಗಳಲ್ಲಿ ವಿವರಿಸಿರುವಂತೆ ಇವು ವೇದಗಳ ಅಂತ್ಯ ಭಾಗದಲ್ಲಿ ಬರುತ್ತವೆ.
ಈ ಪದ್ಧತಿಯು ಮೀಮಾಂಸ ದರ್ಶನಕ್ಕೆ ಸೇರಿದ್ದರೂ ಸಹ ಇದನ್ನು ಕೆಲವೊಮ್ಮೆ ಉತ್ತರ ಮೀಮಾಂಸ ಎಂದು ಕರೆಯಲಾಗುತ್ತದೆ; ಉತ್ತರ ಮೀಮಾಂಸವೆಂದರೆ ವೇದಗಳ ಜ್ಞಾನ-ಕಾಂಡದ ಭಾಗಗಳನ್ನು ತದನಂತರ ಅನ್ವೇಷಿಶಿಸುವುದಾಗಿದೆ. ಈ ಪದ್ಧತಿಯು ನಿಜವಾಗಿಯೂ ಹಿಂದೂ ಪಂಥದ ಅನುಯಾಯಿಗಳ ಸಾಂಪ್ರದಾಯಿಕ ತತ್ವ ಸಿದ್ದಾಂತವಾಗಿದ್ದು ಇದು ಜನರು ಅನುಸರಿಸುವ ಬಹುದೇವತಾರಾಧನೆ ಮತ್ತು ಬಹುರೂಪೀ ಪುರಾಣಗಳಿಗೆ ಅಡಿಪಾಯವಾಗಿದೆ.
ಇದರ ಪ್ರಮುಖ ಸಿದ್ಧಾಂತವೆಂದರೆ ಆದಿ ಶಂಕರರು ಪ್ರತಿಪಾದಿಸಿದ ಅದ್ವೈತ ತತ್ವವಾಗಿದೆ. ಅದರ ಪ್ರಕಾರ ವಾಸ್ತವವಾಗಿ ಯಾವುದೂ ಅಸ್ತಿತ್ವದಲ್ಲಿ ಇಲ್ಲ ಆದರೆ ಕೇವಲ ಒಂದೇ ಆತ್ಮ ಅಥವಾ ಈ ಜಗದ ಆತ್ಮವಾಗಿರುವ ಬ್ರಹ್ಮ ಅಥವಾ ಪರಮಾತ್ಮ ಎಂದು ಕರೆಯಲ್ಪಡುವುದರ ಹೊರತಾಗಿ, ಮತ್ತು ಈ ಜೀವಾತ್ಮ ಅಥವಾ ವ್ಯಕ್ತಿಗತ ಮಾನವ ಜೀವಿಗಳು ಮತ್ತು ಪ್ರಕೃತಿಯ ಎಲ್ಲಾ ತತ್ವಗಳು ನಿಜವಾಗಿಯೂ ಪರಮಾತ್ಮದೊಂದಿಗೆ ಏಕತೆಯನ್ನು ಹೊಂದಿವೆ, ಮತ್ತು ಅವುಗಳ ಇರುವಿಕೆಯು ಕೇವಲ ಅಜ್ಞಾನದಿಂದ ಉಂಟಾಗಿದೆ; ಇದನ್ನೇ ಅವಿದ್ಯಾ ಅಥವಾ ಆ ವಿಶ್ವಾತ್ಮದ ಕುರಿತು ಇರುವ ಅಜ್ಞಾನದಿಂದಾಗಿ ಅದನ್ನು ಸೃಷ್ಟಿಕರ್ತ ಮತ್ತು ಸೃಷ್ಟಿ ಎರಡೂ ಎಂದು ವರ್ಣಿಸಲಾಗುತ್ತದೆ.
ಅದು ‘ಸತ್-ಚಿತ್-ಆನಂದ’ವಾಗಿದೆ ಮತ್ತದು ತ್ರಿಗುಣ ರಹಿತವಾಗಿದೆ. ಮಾನವ ಜೀವಿಯ ಮುಕ್ತಿಯು ಜನನ ಮರಣಗಳ ಚಕ್ರವನ್ನು ಅಧಿಗಮಿಸಿ, ಮತ್ತೆ ಪರಮಾತ್ಮದೊಂದಿಗೆ ಪುನರ್ಮಿಲನವಾಗಿ ಅದರೊಂದಿಗೆ ಅದು ನಿಜವಾಗಿ ಗುರುತಿಸಿಕೊಳ್ಳುವುದಾಗಿದೆ. ಇದನ್ನು ಸಾಧ್ಯಗೊಳಿಸಬೇಕಾದರೆ ವೇದಾಂತವನ್ನು ಸರಿಯಾಗಿ ಅರ್ಥೈಸಿಕೊಂಡು ಅಜ್ಞಾನವನ್ನು ಹೋಗಲಾಡಿಸಿಕೊಳ್ಳಬೇಕು.
ಈ ಪದ್ಧತಿಯನ್ನು ಬ್ರಹ್ಮ-ಮೀಮಾಂಸಾ ಮತ್ತು ಶಾರೀರಕಮೀಮಾಂಸಾ ಎಂದೂ ಕರೆಯಲಾಗುತ್ತದೆ ಅಂದರೆ ಆತ್ಮದ ಅನ್ವೇಷಣೆ ಅಥವಾ ಶರೀರದಿಂದ ಆವೃತವಾಗಿರುವ ಆತ್ಮದ ಜಿಜ್ಞಾಸೆ.
ಈ ಶಾಖೆಯ ಸ್ಥಾಪಕರು ಬಾದರಾಯಣ ಎಂದು ಕರೆಯಲ್ಪಡುವ ವ್ಯಾಸರಾಗಿದ್ದಾರೆ ಮತ್ತು ಈ ಶಾಖೆಯ ಪ್ರಮುಖ ಬೋಧಕರು ಶಂಕರಾಚಾರ್ಯರು. ಎಲ್ಲಾ ಉಪನಿಷತ್ತುಗಳೂ ಸಹ ವೇದಾಂತ ತತ್ವಕ್ಕೆ ಸಂಭಂದಿಸಿದ ಕೃತಿಗಳಾಗಿವೆ.
ವೇದಾಂಗಗಳಲ್ಲಿ ಮೊದಲನೆಯದು ಮತ್ತು ಎರಡನೆಯದರ ಉದ್ದೇಶಗಳು ವೇದಗಳನ್ನು ಸರಿಯಾಗಿ ಪಠಿಸುವುದು ಅಥವಾ ಉಚ್ಛರಿಸುವುದಾಗಿದೆ, ಮೂರನೆಯ ಮತ್ತು ನಾಲ್ಕನೆಯ ಅಂಗಗಳು ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯಕವಾಗಿವೆ, ಐದು ಮತ್ತು ಆರನೆಯವು ಯಜ್ಞ-ಯಾಗಾದಿಗಳಲ್ಲಿ ವೇದಗಳನ್ನು ಸೂಕ್ತ ಕ್ರಮದಲ್ಲಿ ಬಳಸುವ ಉದ್ದೇಶವನ್ನು ಹೊಂದಿವೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 704 - 705 http://www.manblunder.com/2010/04/lalitha-sahasranamam-704-705.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೫೮. ಲಲಿತಾ ಸಹಸ್ರನಾಮ ೭೦೪ರಿಂದ ೭೦೫ನೇ ನಾಮಗಳ ವಿವರಣೆ
ಶ್ರೀಧರರೆ, "೧೫೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೦೪ -೭೦೫
_____________________________________________
.
೭೦೪. ಸರಸ್ವತೀ
ಜ್ಞಾನದ ಮೂರ್ತ ರೂಪ ಬ್ರಹ್ಮ, ಜ್ಞಾನಾಧಿದೇವತೆ ಸರಸ್ವತೀ ರೂಪದಿರುತೆ
ದ್ವೈತ ಅಜ್ಞಾನದೆ ಜನರ ಬಂಧಿಸಿದ ಮಾಯೆಯ ದೇವಿ ಹೊಡೆದೋಡಿಸುತೆ
ಜ್ಞಾನದಲಡಗಿ ಕುಳಿತ ಅಜ್ಞಾನ, ಬ್ರಹ್ಮ ಸಾಕ್ಷಾತ್ಕಾರಕೆ ಅಡಚಣೆಯಾಗುತೆ
ಸಾಧಕನಿಗೆ ಜ್ಞಾನ ಕರುಣಿಸೊ ಸೃಷ್ಟಿಕರ್ತ ಬ್ರಹ್ಮ ಸತಿರೂಪದಲಿಹ ಲಲಿತೆ ||
.
ದೇವಿ ಕ್ರಿಯಾಶೀಲ ರೂಪದಲೊಂದಾಗಿ ಸರಸ್ವತಿ, ಬ್ರಹ್ಮದ ಗುಣ
ಪರಬ್ರಹ್ಮದ ವಿವಿಧ ಕ್ರಿಯೆ, ವಿವಿಧ ದೇವ-ದೇವಿರೂಪದಿ ಸ್ಮರಣ
ದೇವಿಯೆ ಸರಸ್ವತಿ, ಜಿಹ್ವೆಯ ಮಾತಾಗಿ ಎರಡು ವರ್ಷದ ಬಾಲೆ
ದುರ್ಗಾ-ಮಹಾಲಕ್ಷ್ಮೀ-ಸರಸ್ವತೀ ದೇವಿ ಮಹಾತ್ಮೆ ಅಧ್ಯಾಯಗಳೆ ||
.
೭೦೫. ಶಾಸ್ತ್ರಮಯೀ
ದೇವಿ ಧಾರ್ಮಿಕ ಕಟ್ಟಳೆ ರೂಪ, ಶಾಸ್ತ್ರದಲೆ ರಚಿಸಿದಾ ದೇಹ ಭವ್ಯ
ಉಸಿರಾಗಿ ವೇದ, ಅಹಂಕಾರವಾಗಿ ಮಂತ್ರ, ಮಾತೆ ಮಹಾ ಕಾವ್ಯ
ನಾಲಿಗೆಯಿಂದ ಸರಸ್ವತೀ, ಗದ್ದ ವೇದಾಂಗ, ಕಂಠೊನ್ನತದೆಲ್ಲ ಶಾಸ್ತ್ರ
ಭುಜವೆ ಪ್ರೇಮ, ನಡುಕಂಠ ಔಷದಿ ಬಿಲ್ವಿದ್ಯೆ, ಕೇಳಕಂಠ ೬೪ ತಂತ್ರ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ೧೫೮. ಲಲಿತಾ ಸಹಸ್ರನಾಮ ೭೦೪ರಿಂದ ೭೦೫ನೇ ನಾಮಗಳ ವಿವರಣೆ by nageshamysore
ಉ: ೧೫೮. ಲಲಿತಾ ಸಹಸ್ರನಾಮ ೭೦೪ರಿಂದ ೭೦೫ನೇ ನಾಮಗಳ ವಿವರಣೆ
"ಶಾಸ್ತ್ರಮಯೀ"ಕಡೆಯ ಸಾಲಿನಲ್ಲಿ "ಕೇಳಕಂಠ" ಎಂದು ತಪ್ಪಾಗಿದೆ. ಅದು 'ಕೆಳಕಂಠ' ಎಂದಾಗಬೇಕು
ಉ: ೧೫೮. ಲಲಿತಾ ಸಹಸ್ರನಾಮ ೭೦೪ರಿಂದ ೭೦೫ನೇ ನಾಮಗಳ ವಿವರಣೆ
ಶ್ರೀಧರ್‌ಜಿ,
-ಎರಡು ವರ್ಷ ವಯಸ್ಸಿನ ಬಾಲೆಯನ್ನು ಸಹ ಸರಸ್ವತೀ ಎಂದು ಕರೆಯುತ್ತಾರೆ.
ಯಾಕೆ ಎಂದು ಹುಡುಕಿದಾಗ-
Jñanarnava Rudrayamala ತಂತ್ರದಲ್ಲಿ ಹೆಣ್ಣು ಮಗುವಿಗೆ ಪ್ರತೀ ವರ್ಷಕ್ಕೆ (೧- ಸಂಧ್ಯಾ,೨-ಸರಸ್ವತೀ ೩- ತ್ರಿಧಾಮೂರ್ತಿ...)ಒಂದೊಂದು ಹೆಸರಿದೆ ಎಂದು ಗೊತ್ತಾಯಿತು. http://en.wikipedia.org/wiki/Kumari_%28children%29
In reply to ಉ: ೧೫೮. ಲಲಿತಾ ಸಹಸ್ರನಾಮ ೭೦೪ರಿಂದ ೭೦೫ನೇ ನಾಮಗಳ ವಿವರಣೆ by ಗಣೇಶ
ಉ: ೧೫೮. ಲಲಿತಾ ಸಹಸ್ರನಾಮ ೭೦೪ರಿಂದ ೭೦೫ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮದಲ್ಲಿ ಆಗಾಗ ಬರುತ್ತಿದ್ದ ಇಂತಹ ವಿಷಯಗಳ ಕುರಿತಾದ ಆಲೋಚನೆಯಾಗಲಿ ಅದರ ಉದ್ದೇಶವಾಗಲಿ ಅರ್ಥವಾಗಿರಲಿಲ್ಲ. ನಿಮ್ಮ ಕೊಂಡಿಯಿಂದ ಇಂತಹ ಅನೇಕ ವಿಷಯಗಳು ವ್ಯಕ್ತವಾಗುತ್ತಿವೆ. ಅದಕ್ಕಾಗಿ ಧನ್ಯವಾದಗಳು, ಗಣೇಶ್‌ಜಿ.