೧೫೯. ಲಲಿತಾ ಸಹಸ್ರನಾಮ ೭೦೬ರಿಂದ ೭೦೮ನೇ ನಾಮಗಳ ವಿವರಣೆ

೧೫೯. ಲಲಿತಾ ಸಹಸ್ರನಾಮ ೭೦೬ರಿಂದ ೭೦೮ನೇ ನಾಮಗಳ ವಿವರಣೆ

                                                                      ಲಲಿತಾ ಸಹಸ್ರನಾಮ ೭೦೬ - ೭೦೮

Guhāmbā गुहाम्बा (706)

೭೦೬. ಗುಹಾಂಬಾ

            ಈ ನಾಮಕ್ಕೆ ಎರಡು ವಿಧವಾದ ವ್ಯಾಖ್ಯಾನಗಳ ಸಾಧ್ಯತೆಯಿದೆ. ೧) ಗುಹಾ ಎಂದರೆ ಭಗವಾನ್ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ ಸ್ವಾಮಿ ಮತ್ತು ಅಂಬಾ ಎಂದರೆ ತಾಯಿ. ದೇವಿಯು ಕಾರ್ತಿಕೇಯನ ತಾಯಿಯಾಗಿದ್ದಾಳೆ. ಸುಬ್ರಹ್ಮಣ್ಯ ಅಥವಾ ಸ್ಕಂದನು ಶಿವ ಮತ್ತು ಪಾರ್ವತಿಯರ ಮಗನಾಗಿದ್ದಾನೆ. ಗುಹನ ಜನನದ ಕುರಿತಾಗಿ ಅನೇಕಾನೇಕ ಕಥೆಗಳಿವೆ. ಆದರೆ ಎಲ್ಲದರಲ್ಲಿಯೂ ಅವನ ಜನನವು ರಾಕ್ಷಸ ಸಂಹಾರಕ್ಕಾಗಿ ಆಯಿತೆನ್ನುವುದು ಸರ್ವೇಸಾಮಾನ್ಯವಾಗಿ ಹೇಳಲ್ಪಟ್ಟಿದೆ. ರಾಕ್ಷಸರೆಂದರೆ ದುಷ್ಟ ಕ್ರಿಯೆಗಳು ಅಥವಾ ಕೆಟ್ಟ ಕೆಲಸಗಳಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳೂ ಆಗಬಹುದು. ೨) ಗುಹಾ ಎಂದರೆ ಬಚ್ಚಿಡಲ್ಪಟ್ಟ (ರಹಸ್ಯವಾಗಿರಿಸಿದ) ಮತ್ತು ಅಂಬಾ ಎಂದರೆ ತಾಯಿ. ಕಠೋಪನಿಷತ್ತು (೧.೩.೧), "ಗುಹಾಮ್ ಪ್ರವಿಷ್ಟೌ" ಅಂದರೆ ‘ಹೃದಯಾಕಾಶದ ಗುಹೆಯಲ್ಲಿ ಇರುವವಳು’, ಎಂದು ಹೇಳುತ್ತದೆ. ಆ ಉಪನಿಷತ್ತು ಮತ್ತಷ್ಟು ವಿವರಣೆಗಳನ್ನು ಕೊಡುತ್ತಾ, ಈ ಎರಡು ಆತ್ಮಗಳು (ಒಂದು ಪರಮಾತ್ಮ ಮತ್ತು ಸಾಮಾನ್ಯ ಆತ್ಮ) ಕರ್ಮಗಳ ಫಲಗಳನ್ನು ಅನುಭವಿಸುತ್ತವೆ, ಹೃದಯಾಕಾಶದಲ್ಲಿ ನಿವಸಿಸುತ್ತಾ; ಅದು ಸಾಕ್ಷಾತ್ಕಾರಕ್ಕೆ ಅತ್ಯಂತ ಉತ್ಕೃಷ್ಟವಾದ ಸ್ಥಳವಾಗಿದೆ ಎಂದು ಹೇಳುತ್ತದೆ. ಆತ್ಮ ಮತ್ತು ಪರಮಾತ್ಮಗಳೆರಡೂ ಬೆಳಕು ಮತ್ತು ನೆರಳಿನ ಸಂಭಂದ ಹೊಂದಿವೆ ಎಂದು ಹೇಳಲಾಗುತ್ತದೆ. ಯಾವಾಗ ಆತ್ಮ ಮತ್ತು ಪರಮಾತ್ಮವನ್ನು ಉಲ್ಲೇಖಿಸಲಾಗುತ್ತದೆಯೋ ಆಗ ಶಾಸ್ತ್ರಗಳು ದ್ವೈತವನ್ನು ಭೋದಿಸುತ್ತವೇನೋ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ ಆದರೆ ಇದು ವಾಸ್ತವವಲ್ಲ, ಏಕೆಂದರೆ ಆತ್ಮವು ಪರಮಾತ್ಮಕ್ಕಿಂತ ಭಿನ್ನವಾದುದಲ್ಲ. ಆದರೆ ಈ ರೀತಿಯ ವ್ಯಾಖ್ಯಾನಗಳಿಗೆ ಕಾರಣಗಳನ್ನು ಮುಂದಿನ ನಾಮಗಳಲ್ಲಿ ಕೊಡಲಾಗಿದೆ. ಈ ನಾಮವು ದೇವಿಯು ರಹಸ್ಯವಾದ ಸ್ಥಳದಲ್ಲಿ ಇದ್ದಾಳೆಂದು ತಿಳಿಸುತ್ತದೆ.

Guhya rūpiṇī गुह्य रूपिणी (707)

೭೦೭. ಗುಹ್ಯ ರೂಪಿಣೀ

            ಈ ನಾಮವು ಹಿಂದಿನ ನಾಮದ ಮುಂದುವರಿಕೆಯಾಗಿದೆ. ಹಿಂದಿನ ನಾಮವು ದೇವಿಯು ರಹಸ್ಯವಾದ ಸ್ಥಳದಲ್ಲಿ ಇರುತ್ತಾಳೆಂದು ತಿಳಿಸಿದರೆ ಈ ನಾಮವು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಆಕೆಯ ಸ್ವರೂಪವೇ ರಹಸ್ಯಾತ್ಮಕವಾದುದೆಂದು ಹೇಳುತ್ತದೆ. ದ್ವೈತವು ಸ್ಥೂಲವಾದುದಾದರೆ ಅದ್ವೈತವು ಸೂಕ್ಷ್ಮವಾದುದಾಗಿದೆ. ಗುಹಾಂಬ (ಗುಹನ ತಾಯಿ) ಎನ್ನುವುದು ಸ್ಥೂಲವಾದುದು ಮತ್ತು ಗುಹ್ಯರೂಪಿಣೀ ಎನ್ನುವುದು ಸೂಕ್ಷ್ಮವಾದುದು. ದೇವಿಯ ಕಾಮಕಲಾ ರೂಪವು ಅತೀಸೂಕ್ಷ್ಮ (ಸೂಕ್ಷ್ಮತರ) ರೂಪವಾದರೆ ಆಕೆಯ ಕುಂಡಲಿನೀ ರೂಪವು ಅತ್ಯಂತ ಸೂಕ್ಷ್ಮ ಅಥವಾ ಸೂಕ್ಷ್ಮಾತಿಸೂಕ್ಷ್ಮವಾದುದು. ದ್ವೈತವು ವಿನಾಶ ಹೊಂದುವಂಥಹುದು ಏಕೆಂದರೆ ಅದು ದೇಶಕಾಲಕ್ಕೆ ಅತೀತವಾಗಿಲ್ಲದಿರುವುದಾಗಿದೆ. ಅದ್ವೈತವು ನಾಶರಹಿತವಾಗಿದೆ ಮತ್ತು ಇದು ದೇಶಕಾಲಗಳಿಗೆ ಅತೀತವಾದುದಾಗಿದೆ. ದೇವಿಯೊಂದಿಗೆ ಸಂಭಂದ ಹೊಂದಿರುವುದೆಲ್ಲಾ ರಹಸ್ಯವಾದುದಾಗಿದೆ. ಉದಾಹರಣೆಗೆ, ಆಕೆಯ ಪಂಚದಶೀ ಅಥವಾ ಷೋಡಶೀ ಮಂತ್ರಗಳು, ಆಕೆಯ ಪೂಜಾಚರಣ ಕ್ರಮಗಳು - ನವಾವರಣ ಪೂಜೆ, ಕುಂಡಲಿನೀ ಉಪಾಸನೆ ಮೊದಲಾದವು. ಕಠೋಪನಿಷತ್ತು ಹೀಗೆ ಹೇಳುತ್ತದೆ, "ಯಾವಾಗ ಬ್ರಹ್ಮವು ಈ ರಹಸ್ಯ ಸ್ಥಳದಲ್ಲಿರುವುದನ್ನು ಒಬ್ಬನು ಅರಿಯುತ್ತಾನೆಯೋ ಆಗ ಬ್ರಹ್ಮವು ಅವನೊಬ್ಬನಿಂದ ರಹಸ್ಯವಾಗಿ ಉಳಿಯ ಬಯಸುವುದಿಲ್ಲ. ಆತ್ಮಸಾಕ್ಷಾತ್ಕಾರದ ನಂತರ ದ್ವೈತ ಭಾವನೆಯು ಇಲ್ಲವಾಗಿ ಕೇವಲ ಅದ್ವೈತ ಭಾವನೆಯೊಂದೇ ಉಳಿಯುತ್ತದೆ. ಆದರೆ ಆತ್ಮ ಸಾಕ್ಷಾತ್ಕಾರವೆನ್ನುವುದು ಬಹಳ ಅಪರೂಪವೆಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (೭.೩) ಹೀಗೆ ಹೇಳಿದ್ದಾನೆ, "ಪ್ರಯಾಸದಿಂದ ಸಾವಿರದಲ್ಲಿ ಒಬ್ಬನು ನನ್ನನ್ನು ಅರಿಯಲು ಪ್ರಯತ್ನಿಸುತ್ತಾನೆ ಮತ್ತು ಅವರಲ್ಲಿ ಕೆಲವು ವಿರಳರು ಮಾತ್ರ ನನ್ನನ್ನು ನಿಜವಾಗಿ ಅರಿಯುತ್ತಾರೆ"

          ಗುಹ್ಯ ಉಪನಿಷತ್ತು ಎನ್ನುವ ಒಂದು ಉಪನಿಷತ್ತು ಸಹ ಇದೆ ಮತ್ತು ಕೂರ್ಮ ಪುರಾಣವು ದೇವಿಯೇ ಗುಹ್ಯ ಉಪನಿಷತ್ತಾಗಿದ್ದಾಳೆಂದು ಹೇಳುತ್ತದೆ. ವಿಷ್ಣು ಸಹಸ್ರನಾಮದ ೫೪೨ನೇ ನಾಮವೂ ಸಹ ಗುಹ್ಯಃ ಆಗಿದೆ.

Sarvopādhi-vinirmuktā सर्वोपाधि-विनिर्मुक्ता (708)

೭೦೮. ಸರ್ವೋಪಾಧಿ-ವಿನಿರ್ಮುಕ್ತಾ

           ದೇವಿಯು ಎಲ್ಲಾ ವಿಧವಾದ ಪರಿಮಿತಗಳಿಂದ ಮುಕ್ತಳಾಗಿದ್ದಾಳೆ. ಯಾವೊಂದು ಸ್ಥಿತಿಯಿಂದಾಗಿ ಒಂದು ಅಪರಿಮಿತ ವಸ್ತುವು ಪರಿಮಿತವಾಗಿ ಕಾಣಿಸುತ್ತದೆಯೋ ಅದನ್ನೇ ’ಉಪಾಧಿ’ ಎನ್ನುತ್ತಾರೆ. ಉಪಾಧಿಗೆ ಇನ್ನೊಂದು ವ್ಯಾಖ್ಯಾನವೆಂದರೆ ತನ್ನ ಸಮೀಪದಲ್ಲಿರುವ ವಸ್ತುವಿನ ಗುಣಗಳನ್ನು ಪಡೆಯುವುದು. ಉದಾಹರಣೆಗೆ, ಶಿವನು ಸ್ಪಟಿಕದ ಮೈಕಾಂತಿಯುಳ್ಳವನು ಮತ್ತು ಶಕ್ತಿಯು ಕೆಂಪು ಮೈಕಾಂತಿಯುಳ್ಳವಳು (ವಿವರಗಳಿಗೆ ಧ್ಯಾನಶ್ಲೋಕಗಳನ್ನು ನೋಡಿ). ಯಾವಾಗ ಶಕ್ತಿಯು ಶಿವನ ಪಕ್ಕದಲ್ಲಿ ಆಸೀನಳಾಗುತ್ತಾಳೆಯೋ ಆಗ ಅವನೂ ಸಹ ಕೆಂಪಾಗಿ ಪರಿವರ್ತಿತನಾಗುತ್ತಾನೆ. ಇದನ್ನೇ ‘ಉಪಾಧಿ’ ಎನ್ನುತ್ತಾರೆ. ಉಪಾಧಿಯು ನಾಲ್ಕು ವಿಧದ್ದಾಗಿದೆ - ಅವ್ಯಾವುವೆಂದರೆ, ವಿವೇಕ, ಜ್ಞಾನ, ವ್ಯಕ್ತಿ ಮತ್ತು ಮಾಯೆಗಳ ಪ್ರಭಾವದಿಂದಾಗಿ ನಾಲ್ಕು ವಿಧಗಳಲ್ಲಿ ಪರಿಮಿತಗೊಳ್ಳುವ ಪ್ರಜ್ಞೆಯ ವಿಧಗಳಾಗಿವೆ.  ಬ್ರಹ್ಮದ ನಿಜವಾದ ಸ್ವರೂಪವು ಈ ಉಪಾಧಿಗಳಿಂದಾಗಿ ಮರೆಮಾಚಲ್ಪಟ್ಟಿದೆ. ಸರ್ವ ಎಂದರೆ ಎಲ್ಲವೂ, ಉಪಾಧಿ ಎಂದರೆ ಅವಸ್ಥೆಗಳು ಮತ್ತು ವಿನಿರ್ಮುಕ್ತಾ ಎಂದರೆ ಸ್ವತಂತ್ರವಾಗಿರುವುದು, ಆದ್ದರಿಂದ ಈ ನಾಮದ ಒಟ್ಟಾರೆಯರ್ಥವು ದೇವಿಯು ಎಲ್ಲಾ ಉಪಾಧಿಗಳಿಗೆ ಅತೀತಳಾಗಿದ್ದಾಳೆ ಎನ್ನುವುದಾಗಿದೆ. ಬ್ರಹ್ಮವೂ ಸಹ ಎಲ್ಲಾ ಉಪಾಧಿಗಳಿಗೆ ಅತೀತವಾಗಿದೆ.

           ಹಿಂದಿನ ನಾಮಗಳು ದೇವಿಯ ಗುಣಗಳನ್ನು ಆಕೆಯು ಕಾರ್ತಿಕೇಯನ ತಾಯಿ ಎನ್ನುವುದರ ಮೂಲಕ ಮತ್ತು ಆಕೆಯು ರಹಸ್ಯವಾದ ಸ್ಥಳದಲ್ಲಿ ವಾಸಿಸುತ್ತಾಳೆ, ಆಕೆಯು ಸರಸ್ವತೀ, ಲಕ್ಷ್ಮೀ ಮೊದಲಾದವರ ಸ್ವರೂಪದಲ್ಲಿರುತ್ತಾಳೆ ಎನ್ನುವುದರ ಮೂಲಕ ಪರಿಮಿತಗೊಳಿಸಿದ್ದವು. ಆದರೆ, ಬ್ರಹ್ಮವು ಸರ್ವವ್ಯಾಪಿಯಾಗಿದೆ. ಬ್ರಹ್ಮವನ್ನು ಎರಡು ವಿಧವಾಗಿ ವಿಶ್ಲೇಷಿಸಲಾಗುತ್ತದೆ; ಮೊದಲನೆಯದು ಅದ್ವೈತದ ಮೂಲಕವಾದರೆ ಮತ್ತೊಂದು ದ್ವೈತದ ಮೂಲಕವಾಗಿದೆ. ಯಾರು ಶಾಸ್ತ್ರವಿಧಿತ ಆಚರಣೆಗಳನ್ನು ಕೈಗೊಳ್ಳುತ್ತಾ ದೇವತಾ ರೂಪಗಳನ್ನು ಪೂಜಿಸುತ್ತಾರೆಯೋ ಅಂತಹವರಿಗೆ ದ್ವೈತದ ಮೂಲಕ ಬ್ರಹ್ಮದ ವಿವರಣೆಯನ್ನು ಮಾಡಲಾಗುತ್ತದೆ. ಜ್ಞಾನಿಗಳಿಗೆ ಬ್ರಹ್ಮದ ವ್ಯಾಖ್ಯಾನವನ್ನು ಅದ್ವೈತದ ಮೂಲಕ ಮಾಡುತ್ತಾರೆ. ಹೀಗೆ ಎರಡು ವಿಧವಾಗಿ ವ್ಯಾಖ್ಯಾನಿಸುವುದರಿಂದ ಶಾಸ್ತ್ರಗಳು ಒಂದಕ್ಕೊಂದು ವಿರುದ್ಧವಾಗಿವೆ ಎಂದಲ್ಲ. ಸಕಲ ಶಾಸ್ತ್ರಗಳೂ ಅದೇ ಬ್ರಹ್ಮವನ್ನು ತೋರುತ್ತವೆ, ಆದರೆ ಅವರು ಅನುಸರಿಸುವ ಮಾರ್ಗ ಮತ್ತು ವಿಧಾನಗಳು ಭಿನ್ನವಾಗಿವೆ.

          ಈ ನಾಮವು ದೇವಿಯ ನಿರ್ಗುಣ ಬ್ರಹ್ಮದ ಸ್ವರೂಪವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. 

                                                                                           ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 706 - 708 http://www.manblunder.com/2010/04/lalitha-sahasranamam-706-708.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Sun, 11/17/2013 - 05:25

ಶ್ರೀಧರರೆ, "೧೫೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೦೬ - ೭೦೮
________________________________________
.
೭೦೬. ಗುಹಾಂಬಾ
ಗುಹನೆ ಕಾರ್ತಿಕೇಯ-ಸುಬ್ರಮಣ್ಯ, ದೇವಿಯಾಗಿ ಸ್ಕಂದನ ತಾಯಿ
ದುಷ್ಟಕ್ರಿಯಾ ಕರ್ಮ ರಾಕ್ಷಸತ್ವ, ಸಂಹರಿಸಲೆಂದೆ ಹುಟ್ಟಿದ ದಾಯಿ
ಹೃದಯಾಕಾಶದ ಗುಹೆಯಲಿ ಬಚ್ಚಿಟ್ಟೆ ಮಾತೆ, ಲಲಿತೆ ಗುಹಾಂಬ
ಗುಹೆ ನಿಗೂಢದಲಿಹ ಅದ್ವೈತ, ಆತ್ಮ-ಪರಮಾತ್ಮ ಸೇರಿಸಿ ಅಂಬಾ ||
.
೭೦೭. ಗುಹ್ಯ ರೂಪಿಣೀ
ನಿವಾಸದಷ್ಟೆ ನಿಗೂಢ ಸ್ವರೂಪ, ಅದ್ವೈತ ಸೂಕ್ಷ್ಮ ಗುಹ್ಯ ರೂಪಿಣೀ
ಸ್ಥೂಲ ದ್ವೈತವಲ್ಲ ಅವಿನಾಶಿ, ದೇಶಕಾಲಾತೀತ ಅದ್ವೈತದಗುಣಿ
ಅವಿನಾಶಿ ಅದ್ವೈತ ಲಲಿತಾ ಮಂತ್ರ ಪೂಜಾಚಾರವೆಲ್ಲ  ನಿಗೂಢ
ಬ್ರಹ್ಮ ನಿಗೂಢತೆಯರಿತವ ಅದ್ವೈತಿ, ಗೂಢವಿರಲೆಲ್ಲಿ ಏಕತ್ವ ಬಿಡ ||
.
೭೦೮. ಸರ್ವೋಪಾಧಿ-ವಿನಿರ್ಮುಕ್ತಾ
ಅಪರಿಮಿತತೆ ಪರಿಮಿತವಾಗುವ ಸ್ಥಿತಿ, ಉಪಾಧಿಯಾಗಿ ಪ್ರಕಟ
ಸ್ಪಟಿಕ ಶಿವನ ಕೆಂಪಾಗಿಸೊ ಶಕ್ತಿ, ಸಾಮೀಪ್ಯದ ಗುಣ ಪಡೆಯುತ
ವಿವೇಕ-ಜ್ಞಾನ-ವ್ಯಕ್ತಿ-ಮಾಯೌಪಾಧಿ ಪರಿಮಿತವಾಗಲೆ ವಿಧಪ್ರಜ್ಞೆ
ಬಚ್ಚಿಟ್ಟ ಸ್ವರೂಪ ಲಲಿತೆ, ಸಕಲಾವಸ್ಥೆ ಪರಿಮಿತಿಗತೀತ ಸರ್ವಜ್ಞೆ ||
.
ಬ್ರಹ್ಮವ ತೋರುವ ದಾರಿ, ದ್ವೈತ ಅದ್ವೈತದ ಕವಲಿನ ಗಣ
ಶಾಸ್ತ್ರಾಚರಣೆ ಕೈಂಕರ್ಯಾಕಾಂಕ್ಷಿಗೆ ದ್ವೈತದಲಿ ಬ್ರಹ್ಮಜ್ಞಾನ
ಜ್ಞಾನಿಗಳಿಗನಗತ್ಯ ಪರಿಮಿತ ರೂಪ, ಅದ್ವೈತದೆ ವ್ಯಾಖ್ಯಾನ
ದ್ವೈತಾದ್ವೈತ ಮಾರ್ಗ ವಿಧಾನ ಭಿನ್ನ, ಒಂದೆ ಗಮ್ಯ ಬ್ರಹ್ಮನ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು