೧೬೦. ಲಲಿತಾ ಸಹಸ್ರನಾಮ ೭೦೯ರಿಂದ ೭೧೧ನೇ ನಾಮಗಳ ವಿವರಣೆ

೧೬೦. ಲಲಿತಾ ಸಹಸ್ರನಾಮ ೭೦೯ರಿಂದ ೭೧೧ನೇ ನಾಮಗಳ ವಿವರಣೆ

                                                                                                                          ಲಲಿತಾ ಸಹಸ್ರನಾಮ ೭೦೯ - ೭೧೧

Sadāśiva-pativratā सदाशिव-पतिव्रता (709)

೭೦೯. ಸದಾಶಿವ-ಪತಿವ್ರತಾ

           ಶಿವನಿಗೆ ಹಲವಾರು ರೂಪಗಳಿವೆ ಅದರಲ್ಲಿ ಸದಾಶಿವ (ಸದಾಶಿವ ಎಂದರೆ ಯಾವಾಗಲೂ ಸಂತೋಷದಿಂದ ಇರುವ ಅಥವಾ ಅಭಿವೃದ್ಧಿ ಹೊಂದುತ್ತಿರುವ ಎನ್ನುವ ಅರ್ಥವನ್ನು ಹೊಂದಿದೆ) ರೂಪವೂ ಒಂದು. ಈ ಕೆಳಗಿನವು ಸದಾಶಿವ ಶಬ್ದಕ್ಕೆ ಇರುವ ಕೆಲವೊಂದು ವ್ಯಾಖ್ಯಾನಗಳು. ಬ್ರಹ್ಮ, ವಿಷ್ಣು, ರುದ್ರ, ಮಹದೇವ ಮತ್ತು ಸದಾಶಿವ ಇವು ಅನುಕ್ರಮವಾಗಿ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಎನ್ನುವ ಪಂಚಮಹಾಭೂತಗಳಾಗಿವೆ. ಶಿವನ ಎಲ್ಲಾ ರೂಪಗಳಲ್ಲಿ ಸದಾಶಿವ ರೂಪವು ಅತ್ಯಂತ ಶ್ರೇಷ್ಠವಾದುದೆಂದು ಪರಿಗಣಿಸಲ್ಪಟ್ಟಿದೆ, ಏಕೆಂದರೆ ಮಹಾಪ್ರಳಯದ ನಂತರ ಪುನಃಸೃಷ್ಟಿಯನ್ನು ಉಂಟುಮಾಡುವವನು ಸದಾಶಿವನಾಗಿದ್ದಾನೆ. ಸದಾಶಿವ ತತ್ವವು ೩೪ನೇ ತತ್ವವಾಗಿದ್ದು ಅದರ ನಂತರ ಇರುವ ಎರಡು ತತ್ವಗಳೆಂದರೆ ಶಕ್ತಿ ಮತ್ತು ಅಂತಿಮವಾಗಿ ಶಿವ; ಹೀಗೆ ಒಟ್ಟು ೩೬ ತತ್ವಗಳಾಗುತ್ತವೆ. ತತ್ವಗಳೆಂದರೆ ಇಲ್ಲಿ ಪ್ರಜ್ಞೆಯ ವಿವಧ ಹಂತಗಳಲ್ಲದೆ ಮತ್ತೇನೂ ಅಲ್ಲ. ಸದಾಶಿವ ಹಂತದಲ್ಲಿ ಸಾಧಕನಿಗೆ ’ಅಹಂ ಇದಂ’ (ನಾನು ಇದಾಗಿದ್ದೇನೆ) ಎನ್ನುವುದು ಅನುಭವಕ್ಕೆ ಬರುತ್ತದೆ. ಇದಂ ಎನ್ನುವುದು ಒಂದು ವಸ್ತುವಿನ ಹಿಂದೆ ಅದನ್ನು ತ್ವರಿತವಾಗಿ ಹಿಂಬಾಲಿಸಿ ಬರುವುದು ಎನ್ನುವುದನ್ನು ಸಹ ಸೂಚಿಸುತ್ತದೆ. ಈ ಸಂದರ್ಭದಲ್ಲಿ ಅಹಂ ಇದಮ್ ಎನ್ನುವುದು ನಾನಿಲ್ಲಿ ’ಶಕ್ತಿ ಮತ್ತು ಶಿವ’ರ ಶೀಘ್ರ ಬರುವಿಕೆಗಾಗಿ ಕಾಯುತ್ತಿದ್ದೇನೆ ಎನ್ನುವುದಾಗಿದೆ. (ಹೆಚ್ಚಿನ ವಿವರಗಳನ್ನು ನಾಮ ೯೯೯ರಲ್ಲಿ ನೋಡೋಣ). ಇದು ಆತ್ಮಸಾಕ್ಷಾತ್ಕಾರವಾಗುವ ಮುಂಚಿನ ಕಡೆಯ ಹಂತವಾಗಿದೆ. ಈ ಸದಾಶಿವ ಹಂತದಲ್ಲಿ "ಅಹಂ ಪ್ರಜ್ಞೆಯು" ಇನ್ನೂ ಪ್ರಮುಖವಾಗಿದ್ದು ಅದು ಇಚ್ಚೆಯೊಂದಿಗೆ ಅನುಬಂಧವನ್ನು ಹೊಂದಿರುತ್ತದೆ. ಸದಾಶಿವ ತತ್ವವು ಶಕ್ತಿಯೆಡೆಗೆ ಕರೆದೊಯ್ದು ಅಂತಿಮವಾಗಿ ಶಿವನಲ್ಲಿ ಲೀನವಾಗುತ್ತದೆ. ಶಿವ ತತ್ವದ ನಂತರ ಮತ್ತೇನೂ ಇಲ್ಲ.

          ಈ ನಾಮವು ದೇವಿಯು ಸದಾಶಿವನ ಪತ್ನಿ ಎನ್ನುವ ಅರ್ಥವನ್ನು ಕೊಡುತ್ತದೆ. ಶಿವನು ನಿರ್ಗುಣ ಬ್ರಹ್ಮನಾದರೆ ಆತನ ಹೆಂಡತಿಯು ಸಗುಣ ಬ್ರಹ್ಮವಾಗಿದ್ದಾಳೆ. ದೇವಿಯು ಬ್ರಹ್ಮವಾಗಿದ್ದಾಳೆ ಏಕೆಂದರೆ ಬ್ರಹ್ಮದ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಉಂಟು ಮಾಡುವ ಶಕ್ತಿಗಳನ್ನು ಆಕೆಯು ಹೊಂದಿದ್ದಾಳೆ.

Saṃpradāyeśvarī संप्रदायेश्वरी (710)

೭೧೦. ಸಂಪ್ರದಾಯೇಶ್ವರೀ

           ಸಂಪ್ರದಾಯ ಎಂದರೆ ನಮ್ಮ ಪರಂಪರಾಗತ ಆಚರಣೆಗಳಿಂದ ಒದಗಿದ ಜ್ಞಾನ. ಈ ಜ್ಞಾನವು ಬಹುತೇಕ ಪೂಜಾಚರಣೆಗಳೊಂದಿಗೆ ಅನುಬಂಧಹೊಂದಿದ್ದು ಇದನ್ನು ಸಾಮಾನ್ಯವಾಗಿ ಗುರು-ಶಿಷ್ಯರ ಸಂಬಂಧಗಳ ಮೂಲಕ ಕಲಿಸಿ ಕೊಡಲಾಗುತ್ತದೆ. ಸಂಪ್ರದಾಯವೆಂದರೆ ಪವಿತ್ರವಾದ ಪರಂಪರಾಗತ ಆಚರಣೆಗಳೆಂದೂ ಹೇಳಬಹುದು. ಈ ನಾಮವು ದೇವಿಯು ಇಂತಹ ಎಲ್ಲಾ ಪವಿತ್ರವಾದ ಆಚರಣೆಗಳಿಗೆ ಈಶ್ವರೀ ಅಥವಾ ಮುಖ್ಯಸ್ಥಳಾಗಿದ್ದಾಳೆಂದು ಹೇಳುತ್ತದೆ.

          ಈ ನಾಮವು ದೇವಿಯ ಮಂತ್ರಗಳಾದ ಪಂಚದಶೀ ಮತ್ತು ಷೋಡಶೀ ಇವುಗಳನ್ನು ಗುರುಮುಖೇನ ಉಪದೇಶ ಹೊಂದಿದ ನಂತರವೇ ಉಚ್ಛರಿಸಬೇಕು ಎನ್ನುವುದನ್ನು ಸೂಚಿಸುತ್ತದೆ. ಇಲ್ಲಿ ಗುರುವೆಂದರೆ ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿ. ಶ್ರೀ ವಿದ್ಯಾ ಪೂಜಾ ವಿಧಾನದಲ್ಲಿ ಅತೀ ಹೆಚ್ಚು ಮಹತ್ವವನ್ನು ಆಚರಣೆಗಳಿಗೆ ಕೊಡಲಾಗಿದೆ ಮತ್ತು ಭಕ್ತರು ದೇವಿಯೊಂದಿಗೆ ಇರುವುಕ್ಕಿಂತ ಹೆಚ್ಚಾಗಿ ಆಕೆಯ ಪೂಜಾಚರಣೆಗಳಿಗೆ ಅಧಿಕ ಸಮಯವನ್ನು ವ್ಯಯಿಸುವಂತೆ ಮಾಡಲಾಗುತ್ತದೆ. ಕೇವಲ ಭಕ್ತಿ ಮಾತ್ರವೇ ಮತ್ತು ಅದೊಂದೇ ಆತ್ಮಸಾಕ್ಷಾತ್ಕಾರಕ್ಕೆ ದಾರಿ ಮಾಡಿ ಕೊಡುತ್ತದೆ.  ದೇವಿಯನ್ನು ಅರಿಯುವ ಪ್ರಯತ್ನದಲ್ಲಿನ ಆರಂಭಿಕ ಹಂತಗಳಲ್ಲಿ ಮಾತ್ರವೇ ಈ ವಿಧವಾದ ಆಚರಣೆಗಳ ಅವಶ್ಯಕತೆ ಇರುತ್ತದೆ. ಲಲಿತಾಂಬಿಕೆಯ ಪೂಜೆಯನ್ನು ಗೋಪ್ಯವಾಗಿ ಮಾಡಬೇಕು ಏಕೆಂದರೆ ಆಕೆಗೆ ಸಂಭಂದಿಸಿದ್ದೆಲ್ಲವೂ ರಹಸ್ಯಾತ್ಮಕವಾದುದ್ದಾಗಿದೆ (ಹೆಚ್ಚಿನ ವಿವರಗಳಿಗೆ ನಾಮ ೭೦೭ನ್ನು ನೋಡಿ). ಸಮಷ್ಟಿ ಅಥವಾ ಸಾಮೂಹಿಕ ಪೂಜೆಯು ಆಕೆಯನ್ನು ಅರಿತುಕೊಳ್ಳುವಲ್ಲಿ ಒಳ್ಳೆಯ ಉಪಾಯವಲ್ಲ.

          ಹಲವು ವೇಳೆ ಒಳ್ಳೆಯ ಗುರುವು ದೊರಕುವುದು ಕಷ್ಟಕರವಾದದ್ದು. ಅಂತಹ ಪ್ರಸಂಗಗಳಲ್ಲಿ ಒಬ್ಬನು ಸ್ವಯಂ ದೀಕ್ಷೆಯನ್ನು ಕೈಗೊಳ್ಳಬಹುದು. ಆದರೆ ಅವನು ಅವಶ್ಯವಾದ ಮಂತ್ರಾರ್ಥಗಳನ್ನು ಮತ್ತು ಅವುಗಳಿಗೆ ಸಂಭಂದಿಸಿದ ನ್ಯಾಸ ಮೊದಲಾದ ಆಚರಣೆಗಳನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಮಾತ್ರ ಹಾಗೆ ಮಾಡಬಹುದು. ಶ್ರೀ ವಿದ್ಯಾ ಉಪಾಸನೆಯಲ್ಲಿ ಶ್ರೀ ಗುರವಿನ ಅವಶ್ಯಕತೆ ಖಂಡಿತಾವಾಗಿಯೂ ಬೇಕು ಮತ್ತು ಒಂದು ವೇಳೆ ಸ್ವಯಂ ಆಗಿ ದೀಕ್ಷೆಯನ್ನು ಕೈಗೊಂಡರೆ ಆಗ ಶಿವ ಅಥವಾ ವಿಷ್ಣುವನ್ನು ಗುರುವಾಗಿ ಸ್ವೀಕರಿಸಿ ಅವರ ಮೇಲೆ ಧ್ಯಾನಿಸಬಹುದು. ಆದರೆ ಈ ನಿಯಮವು ಬಹಳ ವಿರಳವಾದ ಪ್ರಸಂಗಗಳಲ್ಲಿ ಮಾತ್ರವೇ ಅನ್ವಯವಾಗುತ್ತದೆ. ಯಾವಾಗಲೂ ಗುರುಮುಖೇನವೇ ವೈಯ್ಯಕ್ತಿಕ ದೀಕ್ಷೆಯನ್ನು ಪಡೆಯುವುದು ಉತ್ತಮ ಏಕೆಂದರೆ ಗುರುವಿಗೆ ಅನುಸರಿಸಬೇಕಾದ ಆಚರಣೆಗಳು ಮತ್ತು ಸಂಪ್ರದಾಯಗಳ ಕುರಿತ ಪೂರ್ಣ ಮಾಹಿತಿ ಇರುತ್ತದೆ.

          ಈ ನಾಮಕ್ಕೆ ಉನ್ನತ ಸ್ತರದ ವಿಶ್ಲೇಷಣೆಯೂ ಇದೆ. ವಾಸ್ತವವಾಗಿ, ಬ್ರಹ್ಮವು ಒಂದೇ. ಸಾಮಾನ್ಯವಾಗಿ ಬ್ರಹ್ಮವು ಶಿವ-ಶಕ್ತಿಯರೆಂದು ಎರಡು ವಿಭಿನ್ನ ಸ್ವರೂಪಗಳಾಗಿ ಧ್ಯಾನಿಸಲ್ಪಡುತ್ತದೆ. ಶಿವ ಮತ್ತು ಶಕ್ತಿಯರನ್ನು ಭಿನ್ನವೆಂದು ಪರಿಗಣಿಸಿ ಅದನ್ನೇ ಅನುಸರಿಸುವುದು ಸಾಂಪ್ರದಾಯಿಕವಾಗಿ ಆಚರಣೆಯಲ್ಲಿದೆ. ಅದೇ ಸಂಪ್ರದಾಯವು ಅವೆರಡೂ ಒಂದನ್ನು ಹೊರತು ಪಡಿಸಿ ಮತ್ತೊಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾರವೆಂದೂ ಮತ್ತು ಅವೆರಡೂ ಒಂದೇ ಎನ್ನುವುದನ್ನು ಪರೋಕ್ಷವಾಗಿ ತೋರಿಸುತ್ತವೆ. ಸಂಪ್ರದಾಯದವು ವೇದಗಳಲ್ಲಿ ಇಲ್ಲದ್ದನ್ನು ಹೇಳುವುದಿಲ್ಲ ಆದರೆ ಅವುಗಳು ಅದನ್ನು ತಮ್ಮದೇ ಆದ ಶೈಲಿಯಲ್ಲಿ ಹೇಳುತ್ತವಷ್ಟೇ. ಮೂಲತಃ ಈ ಆಚರಣೆಗಳು ಆರಂಭಿಕ ಹಂತದ ಸಾಧಕರಿಗಾಗಿ ಉದ್ದೇಶಿಸಲ್ಪಟ್ಟಿವೆ. ಸಂಪ್ರದಾಯವು ಅಂತಿಮ ಸತ್ಯವಾದ ಸತ್ಯಂ ಜ್ಞಾನಂ ಅನಂತಂ ಬ್ರಹ್ಮಮ್ (ತೈತ್ತರೀಯ ಉಪನಿಷತ್ತು ೨.೧.೧) ಎನ್ನುವುದಕ್ಕೆ ದಾರಿ ಮಾಡಿಕೊಡಬೇಕು,

         ದೇವಿಯು ಸಾಂಪ್ರದಾಯಿಕ ಜ್ಞಾನ ಅಥವಾ ಆಚರಣೆಗಳಿಗೆ ಆಡಳಿತಾಧಿಕಾರಿಣಿಯೆಂದು ಹೇಳಲಾಗುತ್ತದೆ.

Sādhu साधु (711)

೭೧೧. ಸಾಧು

           ಲಲಿತಾಸಹಸ್ರನಾಮದ ಕಾವ್ಯರೂಪದಲ್ಲಿ ೧೩೮ನೇ ಶ್ಲೋಕವು ಸಾಧ್ವೀ ಎಂದು ಹೇಳುತ್ತದೆ. ಈ ಸಾಧ್ವೀ ಶಬ್ದವನ್ನು ಎರಡು ನಾಮಗಳಾಗಿ ಸಾಧು (ನಾಮ ೭೧೧) + ಈ (ನಾಮ ೭೧೨) ಆಗಿ ವಿಭಜಿಸಲಾಗಿದೆ, ಏಕೆಂದರೆ ೧೨೮ನೇ ನಾಮವು ‘ಸಾಧ್ವೀ’ ಆಗಿದೆ. ಲಲಿತಾಸಹಸ್ರನಾಮವು ವಿಶಿಷ್ಠವಾದುದ್ದಾಗಿದೆ ಏಕೆಂದರೆ ಈ ಸಹಸ್ರನಾಮದಲ್ಲಿ  ಯಾವುದೇ ನಾಮವನ್ನು ಎರಡು ಬಾರಿ ಉಚ್ಛರಿಸಲಾಗಿಲ್ಲ. ಈ ರೀತಿ ಪುನರುಚ್ಛರಿಸುವುದರಿಂದ ಅದಕ್ಕೆ ಪುನರುಕ್ತಿ ದೋಷವುಂಟಾಗುತ್ತದೆಯಾದ್ದರಿಂದ ಅಂತಹವುಗಳನ್ನು ಈ ಸಹಸ್ರನಾಮದಲ್ಲಿ ಸಂಪೂರ್ಣವಾಗಿ ನಿವಾರಿಸಲಾಗಿದೆ.

          ಸಾಧು ಎನ್ನುವುದಕ್ಕೆ ಹಲವಾರು ಅರ್ಥಗಳಿವೆ ಅವುಗಳಲ್ಲಿ ಪೂರ್ಣಗೊಳಿಸು, ಸಾಧಿಸು, ಜಯಿಸು ಅಥವಾ ಸೋಲಿಸು, ಅರ್ಥಮಾಡಿಕೊಳ್ಳು ಹೀಗೆ ಹಲವಾರಿವೆ. ಶಕ್ತಿಯನ್ನು ಪರಾಹಂತ ಅಂದರೆ ’ಅಹಂ’ಕಾರದ ಅತ್ಯುನ್ನತ ರೂಪವೆಂದು ಕರೆಯಲಾಗಿದೆ. ಆಕೆಯ ಪರಾಹಂತ ರೂಪವು ಈ ಪ್ರಪಂಚವು ಸುಸ್ಥಿರತೆಯಲ್ಲಿರುವುದಕ್ಕೆ ಮೂಲ ಕಾರಣವಾಗಿದೆ. ಬುದ್ಧಿ ಮತ್ತು ಅಹಂಕಾರಗಳು ತ್ರಿಗುಣಗಳಾದ ಸತ್ವ, ರಜೋ ಮತ್ತು ತಮೋ ಗುಣಗಳಿಂದ ಉತ್ಪನ್ನವಾಗುತ್ತವೆ. ಬ್ರಹ್ಮವು ಅಹಂಕಾರದ ಕವಚದೊಳಗೆ ಅಡಕವಾಗಿಸಲ್ಪಟ್ಟಿರುತ್ತದೆ. ಅಹಂಕಾರ ಎನ್ನುವುದು ಕಾರ್ಯವೆಸಗುವ ಗುಣವಾಗಿರುವುದರಿಂದ ಶಕ್ತಿಯನ್ನು ಪರಾಹಂತ ಎಂದು ಕರೆಯಲಾಗಿದೆ. ಶಿವನ ಸ್ವಭಾವವು ಜಡವಾಗಿರುವುದಾದರೆ ಶಕ್ತಿಯ ಸ್ವಭಾವವು ಚಟುವಟಿಕೆಯಾಗಿದೆ. ಚಟುವಟಿಕೆಯು ಶಕ್ತಿಯ ಮೂಲಭೂತ ಗುಣವಾಗಿದೆ. ದೇವಿಯು ಅಜ್ಞಾನವನ್ನು ಹೋಗಲಾಡಿಸುವ ಮತ್ತು ಕಾರ್ಯಸಾಧನೆಯ ಕಾರಣವಾಗಿದ್ದಾಳೆ. ಆದ್ದರಿಂದ ಆಕೆಯು ಸಾಧುವೆಂದು ಕರೆಯಲ್ಪಟ್ಟಿದ್ದಾಳೆ. ಸಾಧು ಎಂದರೆ ಯಾರಿಗೂ ಕೆಡುಕುಂಟು ಮಾಡದೇ ಇತರರಿಗೆ ಒಳಿತುಂಟುಮಾಡುವ ಸ್ವಭಾವ ಹೊಂದಿದ ವ್ಯಕ್ತಿ. ಈ ವಿಶ್ಲೇಷಣೆಯೂ ಸಹ ದೇವಿಯ ಸ್ವಭಾವಕ್ಕೆ ಅನುಗುಣವಾಗಿದೆ.

                                                                                            ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 709 - 711http://www.manblunder.com/2010/05/lalitha-sahasranamam-709-711.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

ಸಾಧು ಎಂದರೆ ಯಾರಿಗೂ ಕೆಡುಕುಂಟು ಮಾಡದೇ ಇತರರಿಗೆ ಒಳಿತುಂಟುಮಾಡುವ ಸ್ವಭಾವ ಹೊಂದಿದ ವ್ಯಕ್ತಿ. ಅಂದರೆ ದೇವಿಯ ನಂತರ ನಮ್ಮಂತಹವರನ್ನು ಸಾಧು ಅನ್ನುವುದು ಸಾಧು.
-ಅಂ.ಭಂ.ಸ್ವಾಮಿ.

Submitted by nageshamysore Sun, 11/17/2013 - 06:43

ಶ್ರೀಧರರೆ, "೧೬೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯ ರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
.
ಲಲಿತಾ ಸಹಸ್ರನಾಮ ೭೦೯ - ೭೧೧
___________________________________________
.
೭೦೯. ಸದಾಶಿವ-ಪತಿವ್ರತಾ
ಬ್ರಹ್ಮವಿಷ್ಣುರುದ್ರಮಹದೇವ-ಸದಾಶಿವ, ಭೂಮಿಜಲಾಗ್ನಿವಾಯು-ಆಕಾಶ
ಶಿವನೆಲ್ಲಾ ರೂಪದಿ ಶ್ರೇಷ್ಠ ಸದಾಶಿವ, ಪ್ರಳಯೋತ್ತರ ಪುನಃಸೃಷ್ಟಿ ಸ್ಪರ್ಶ
ಅಂತಿಮ ಶಿವ ಶಕ್ತಿ ತತ್ವದ ಹಿಂದಿನ, ೩೪ನೇ ತತ್ವ 'ಅಹಂ ಇದಂ' ಪ್ರಜ್ಞೆ
ಶಿವಶಕ್ತಿಯಾವಾಹನೆ ಕಾದೆ, ಸಾಕ್ಷಾತ್ಕಾರಕೊಯ್ವ ಸದಾಶಿವ ಸತಿಯೆನೆ ||
.
೭೧೦. ಸಂಪ್ರದಾಯೇಶ್ವರೀ
ಪರಂಪರಾಗತ ಆಚರಣೆ ಜ್ಞಾನ, ಅನಾವರಣ ಗುರು-ಶಿಷ್ಯ ಮುಖೇನ
ಪವಿತ್ರಾಚರಣೆಗೊಡತಿ ಸಂಪ್ರದಾಯೇಶ್ವರೀ, ಲಲಿತಾ ಗುರು ಬ್ರಹ್ಮನ
ಅರಿವ ಮೊದಲ ಹಂತದೆ ಬಾಹ್ಯಾಚರಣೆ, ಶ್ರೀವಿದ್ಯಾ ಪೂಜೆ ಆಚರಣೆ
ದೇವಿಗಿರಬೇಕು ಗೋಪ್ಯ ಪೂಜೆ, ನಿಗೂಢತೆ ಜತೆಗೆ ಅಜ್ಞಾನ ನಿವಾರಣೆ ||
.
ಸಾಂಪ್ರದಾಯಿಕ ಜ್ಞಾನಾಚರಣೆಗಾಡಳಿತಾಧಿಕಾರಿಣಿ ದೇವಿ ಗುರು ಬ್ರಹ್ಮ
ಗುರುವಿಲ್ಲದ ಅನಿವಾರ್ಯ, ಸ್ವಯಂ ದೀಕ್ಷೆಗೆ ಗುರು ವಿಷ್ಣು ಶಿವರ ಆಗಮ
ಒಂದೆ ಬ್ರಹ್ಮದ ವಿಭಿನ್ನ ಸ್ವರೂಪ, ಶಿವ ಶಕ್ತಿ ರೂಪಕೆ ಧ್ಯಾನ ಸಂಪ್ರದಾಯ
ಪರೋಕ್ಷದೆ ತೋರಿ ಏಕತ್ವ ಸತ್ವ, ಅಂತಿಮ ಸತ್ಯದತ್ತ ನಡೆಸೊ ಉಪಾಯ ||
.
೭೧೧. ಸಾಧು
'ಅಹಂ'ಕಾರದತ್ಯುನ್ನತ ರೂಪ ಪರಾಹಂತ ಸುಸ್ಥಿರತೆಯಲಿಡೆ ಪ್ರಪಂಚ
ತ್ರಿಗುಣೋತ್ಪನ್ನ ಬುದ್ದಿ ಅಹಂಕಾರ, 'ಅಹಂ' ಬ್ರಹ್ಮವನಡಗಿಸಿದ ಕವಚ
ಕಾರ್ಯಕಾರಕ ಚಟುವಟಿಕೆ ಗುಣ ಪರಾಹಂತಶಕ್ತಿಗೆ, ಜಡತೆ ಶಿವನದು
ಹೋಗಲಾಡಿಸಿ ಅಜ್ಞಾನ ಕಾರ್ಯಸಾಧನೆ ಕಾರಣ, ಲಲಿತೆಯೇ ಸಾಧು ||
.
'ಸಾಧ್ವೀ' ನಾಮದಲಡಗಿ 'ಸಾಧು - ಈ' ಎರಡು ನಾಮಗಳಾಗಿ ಶ್ರೇಷ್ಠ
ಮರುಕಳಿಸದ ನಾಮಾವಳಿ ಲಲಿತಾಸಹಸ್ರನಾಮಾವಳಿಯ ವೈಶಿಷ್ಠ್ಯ
ಪುನರುಕ್ತಿ ದೋಷ ನಿವಾರಣೆ, ಪುನರುಚ್ಛರಿಸದ ನಾಮಾವಳಿ ಮಹಿಮೆ
ಸಂಪೂರ್ಣತೆ-ಸಾಧನೆ-ವಿಜೇತತೆ-ಸುಸ್ವಭಾವ-ಸಂಗತ ಸಾಧು ಅರಿಮೆ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು