ಈ ಕೆಮ್ಮೊಣಕೆಮ್ಮು...

ಈ ಕೆಮ್ಮೊಣಕೆಮ್ಮು...

ಚಳಿ, ಮಳೆ, ಗಾಳಿಯಿರಲಿ, ಬಿರುಸಿನ ಬಿಸಿಲಿರಲಿ ಯಾವುದಾದರೂ ನೆಪದಿಂದ ಬಂದು ಎಲ್ಲರನ್ನು ಒಂದಲ್ಲ ಒಂದು ತರ ಬಂದು ಕಾಡುವ ನೆಂಟರು - ಜ್ವರ, ಕೆಮ್ಮು, ನೆಗಡಿ, ಶೀತಗಳ ಸರದಾರರು. ಆಧುನಿಕವೊ, ಸಾಂಪ್ರದಾಯಿಕವೊ - ಯಾವ ಔಷದಿ ತೆಗೆದುಕೊಂಡರೂ ತಮಗೆ ಸಾಕೆನಿಸುವಷ್ಟು ಕಾಡಿದ್ದಷ್ಟೆ ಅಲ್ಲದೆ, ಹೋದ ಮೇಲೂ ಒಣ ಕೆಮ್ಮಿನಂತಹ ಕುರುಹನ್ನು ಹಿಂದೆ ಬಿಟ್ಟು, ಮತ್ತೆ ಬರುವ ಗುರುತು ಹಾಕಿ ಹೋಗುವ ಮಹಾನ್ ಕಪಿ ಶ್ರೇಷ್ಠರು. 

ಬಲಹೀನರಿಂದ ಹಿಡಿದು ಬಲಾಢ್ಯರಿಗು ಅಲುಗಾಡಿಸಿ ಹೋಗುವ ಈ ಆಯಾಚಿತ ಬಂಧುಗಳನ್ನು ಬರದಂತೆ ತಡೆಯುವುದೆ ಕ್ಷೇಮಕರವಾದರೂ, ನಮ್ಮ ಮನೆಗೆ ಬಂದಷ್ಟೆ ಸಲೀಸಾಗಿ ನೆರೆಹೊರೆಯವರನ್ನು ಆರಾಮವಾಗಿ ತಗಲಿಕೊಳ್ಳುವ ಸಂತ ಗುಣದಿಂದಾಗಿ ನಮ್ಮೆಲ್ಲ ರಕ್ಷಣಾ ಕೋಟೆಯಲ್ಲಿ ಹೇಗೊ ಒಂದು ತೂತು ಕೊರೆದು ಒಳನುಗ್ಗಿಬಿಡುತ್ತವೆ. ಬಂದ ಮೇಲೆ, ಕನಿಷ್ಠ ಒಂದು ಸಣ್ಣ ಗುರುತಾದರೂ ಮಾಡದೆ ಹೋದರೆ ಅವಕ್ಕೆಲ್ಲಿ ಸಮಾಧಾನ? ಅದರಲ್ಲಿಯೂ ಅವಕ್ಕೆ ಬೇಕಾದ ಸೂಕ್ತ ವಾತಾವರಣವಿದ್ದರಂತೂ ವೈದ್ಯರ ಅಂಗಡಿಯ ಮುಂದೆ ಸಾಲಾಗದೆ ವಿಧಿಯಿಲ್ಲ. ಆ ದಿನಗಳಲ್ಲಿ ಕಾಡುವ ಕೆಮ್ಮು - ಒಣಕೆಮ್ಮಿನ ಸಣ್ಣ 'ವಿಶ್ವ ರೂಪ' ಈ ಪುಟ್ಟ 'ಕೆಮ್ಮಮ್ಮ..' ಕವನ. ಈಗಲೂ ಕೆಮ್ಮುತ್ತಿದ್ದವರಿಗೆ ಸಂತಾಪ ಸೂಚಕವಾಗಿ ಹಾಗೂ ಕೆಮ್ಮದೆ ಆರಾಮವಾಗಿರುವವರಿಗೆ ಹುಷಾರಾಗಿರುವಂತೆ ಎಚ್ಚರಿಕೆಯ ಗಂಟೆಯಾಗಿಸಲು...'ಆಲ್ ದಿ ಬೆಸ್ಟ್ ಆಫ್ ಕೆಮ್..' :-)
.
ಈ ಕೆಮ್ಮೊಣಕೆಮ್ಮು...
________________
.
ಗಂಟಲೊಳಗೆ ಸೇರಿ ಹೆಗ್ಗಣ
ಗೂರಲೊ ದಮ್ಮೆಲ್ಲ ಮಿಶ್ರಣ
ಉಸಿರೆಳೆಸೆಳೆಸಿ ಗಂಟಲೆಬ್ಬಿ
ಉಸಿರಾಡಲೆ ತ್ರಾಸವೆ ದಬ್ಬಿ ||
.
ಗೊರಗೊರ ನಳಿಗೆಯ ರೂಪ
ಒಣಗಿ ಒರಟಾದ ಗತಿ ಶಾಪ
ನೀರ್ಕುಡಿ ಕುಡಿದು ದಿನವಿಡಿ
ನೀರಾಗಿದ್ದರು ತಪ್ಪ ಗಡಿಬಿಡಿ ||
.
ಹತ್ತಿರ ನೆಂಟ ನೆಗಡಿ ತುಂಟ
ಸೋರುತ ಜಾರುತಾ ಭಂಟ
ಕರವಸ್ತ್ರ ಪರವಸ್ತ್ರ ಮಲೀನ
ಕಟ್ಟಿದ ಮೂಗಲ್ಲೆಲ್ಲ ವಿಲೀನ ||
.
ತಿನ್ನಲು ಬಿಡದಾ ಧಾಂಧಲೆ
ಚಿಕಿತ್ಸೆಗಳೆಲ್ಲ ಬರಿ ಸವಕಲೆ
ಜೀವನಾಶಕ ಪ್ರತಾಪ ಭಲೆ
ಆಮೇಲೊಣಕೆಮ್ಮೆ ನರಳಲೆ ||
.
ಜ್ವರನೆಗಡಿ ಕೆಮ್ಮಾಗಿಸೌಷಧಿ
ಕೆಮ್ಮು ಬದಲಾಯಿಸಿ ನೆಗಡಿ
ಹೇಗೊ ಹೋಗುವ ಪರಿವಿಡಿ
ಅರಿಶಿನ ಮೆಣಸಿನ್ಹಾಲ ಕುಡಿ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Comments

Submitted by nageshamysore Mon, 11/18/2013 - 02:43

In reply to by ಗಣೇಶ

ಗಣೇಶ್ ಜಿ, ದೊಡ್ಡ ಪತ್ರೆ ಎಲೆ ಮಹಿಮೆ ಗೊತ್ತಿರಲಿಲ್ಲ - ನಿಮ್ಮ ಬರಹದಿಂದ ತಿಳಿಯಿತು. ಮೊದಲೆ ಗೊತ್ತಿದ್ದಿದ್ರೆ ಕಷಾಯದ ರೆಸಿಪಿಯನ್ನು ಕವನದಲಿ ಸೇರಿಸಿಬಿಡಬಹುದಾಗಿತ್ತು :-)

Submitted by makara Mon, 11/18/2013 - 07:10

ನಾಗೇಶರೆ,
ಕಾಕತಾಳೀಯವೆಂದರೆ ಇದೆ ಏನೋ. ನಾನೂ ಹಾಗು ನನ್ನ ಮಕ್ಕಳೂ ಸಹ ಈ ಕೋಲ್ಡ್ ಅಲರ್ಜಿಯಿಂದ ಮೂರ‍್ನಾಲ್ಕು ದಿನಗಳಿಂದ ಪಜೀತಿ ಅನುಭವಿಸುತ್ತಿದ್ದೇವೆ. ಇದೇ ಕಾಲಕ್ಕೆ ನಿಮ್ಮ ಈ ಕವನ ಮತ್ತು ಅದಕ್ಕೆ ಗಣೇಶರು ಕೊಟ್ಟ ಕಷಾಯದ ಲಿಂಕ್ ನೋಡಿದ ಮೇಲೆ ಈ ಎರಡೂ ಮನೆಮದ್ದುಗಳನ್ನು ಪ್ರಯೋಗ ಮಾಡಿಕೊಳ್ಳೋಣವೆಂದುಕೊಂಡಿದ್ದೇನೆ. ಸಧ್ಯಕ್ಕೆ ನಮ್ಮ ಮನೆಯ ಕುಂಡಗಳಲ್ಲಿ ದೊಡ್ಡ ಪತ್ರೆ (ಅಜ್ವಾನದ ಎಲೆ ಇದೆ).

Submitted by nageshamysore Tue, 11/19/2013 - 18:06

In reply to by makara

ಶ್ರೀಧರರೆ, ಈ ಪದ್ಯ ಬರೆದದ್ದೆ ಕೆಮ್ಮುತ್ತಾ ಇದ್ದ ಹೊತ್ತಿನಲ್ಲಿ! ಗಣೇಶರ ಉತ್ತರದಿಂದ ಖುಷಿಯಾಗಿ ನಿನ್ನೆಯೆಲ್ಲ ದೊಡ್ಡ ಪತ್ರೆಗಾಗಿ ಚಿಕ್ಕಿಂಡಿಯಾದಲ್ಲಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಎಲ್ಲೂ ಸಿಗಲಿಲ್ಲ. ನೀವು ಪ್ರಯೋಗ ಮಾಡಿ ಫಲಿತಾಂಶ ತಿಳಿಸಿ. ನಾನು ನನ್ನ ಹುಡುಕಾಟ ಮುಂದುವರೆಸುತ್ತೆನೆ :-) 

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Submitted by ಗಣೇಶ Tue, 11/19/2013 - 23:43

In reply to by nageshamysore

ನಾಗೇಶರೆ, ನಾನೂ ನಿಮ್ಮ ಸಿಂಗಾಪುರ್ / ಲಿಟ್ಲ್ ಇಂಡಿಯಾ ಎಲ್ಲಾ ಸುತ್ತಿ ಹುಡುಕಾಡಿದೆ (ಗೂಗ್‌ಲ್ ನಲ್ಲಿ). ನೀವು ಪಾರ್ಥರ ಉಪ್ಪಿನ ಕಾಯಿಗೆ ಬೆಂಗಳೂರಿಗೆ ಬಂದಾಗಲೇ ಇದನ್ನೂ ತೆಗೆದುಕೊಂಡು ಹೋದರಾಯಿತು. ಅಲ್ಲೀವರೆಗೆ ಕೆಮ್ಮೋಣ ಕೆಮ್ಮು...
http://gardeningwithwilson.com/tag/indian-borage/

Submitted by nageshamysore Wed, 11/20/2013 - 02:49

In reply to by ಗಣೇಶ

ಗಣೇಶ್ ಜೀ,

ದೊಡ್ಡ ಪತ್ರೆಗೆ ಇಲ್ಲಿ ತಮಿಳಿನಲ್ಲಿ 'ಓಮಮ್ ಎಲೆ' ಅನ್ನುತ್ತಾರೆ. ತುಳಸಿ ಗಿಡ ಮಾರುವವರ ಹತ್ತಿರ ಸಿಗುತ್ತೆ ಅಂತ ಯಾರೊ ಹೇಳಿದರು. ಆದರೂ ಕಾಣಲಿಲ್ಲ, ವೀಕೇಂಡಿಗೆ ಮತ್ತೊಂದು ಬಾರಿ ಯತ್ನಿಸಬೇಕು. ಹಾಗೆ ಹುಡುಕುತ್ತ ಓಮಮ್ ವಾಟರ್ ಅಂತ ಕಣ್ಣಿಗೆ ಬಿತ್ತು - ನಿನ್ನೆ ರಾತ್ರಿಯಿಂದ ಅದರ ಪ್ರಯೋಗ ಮಾಡುತ್ತಿದ್ದೇನೆ. ಫಲಕಾರಿಯಾದೀತಾ ನೋಡೋಣ :-)

Submitted by nageshamysore Wed, 11/20/2013 - 19:46

In reply to by nageshamysore

ಗಣೇಶ್ ಜಿ, ಶ್ರೀಧರರೆ - ಒಂದು ತಾಜಾ ಸುದ್ದಿ! ನಿನ್ನೆ ರಾತ್ರಿ 'ಓಮಮ್ ವಾಟರ' ಸೇವಿಸಿದಾಗಿನಿಂದ (ಸುಮಾರು ಅರ್ಧ ಚಮಚೆಯಷ್ಟು ರಾತ್ರಿಗೊಮ್ಮೆ ಮತ್ತು ಬೆಳಿಗ್ಗೆಗೊಮ್ಮೆ) - ಇಲ್ಲಿಯತನಕ ಕೆಮ್ಮೊಣಕೆಮ್ಮು ಮಂಗಮಾಯ! ಕಾಕತಾಳಿಯವೆಂದು ಹೇಳಲಾಗದಷ್ಟು ಸುಧಾರಣೆ - ಆಫೀಸಿನಲ್ಲಿ ಸುಮಾರು ಗಂಟೆಗಟ್ಟಲೆ ಪೋನಿನಲ್ಲಿ ಮಾತಾಡಿದ್ದರೂ ಸಹ ಏನೂ ತೊಂದರೆಯಾಗಿಲ್ಲ - ಇಲ್ಲಿಯವರೆಗೆ :-)

ಕುಡಿದದ್ದು ತುಸುವೆ ಆದರೂ ಒಂದು ರೀತಿ ಹಸಿ ಕರ್ಪೂರವನೆತ್ತಿ ಗಂಟಲಿಗಿಟ್ಟುಕೊಂಡ ಅನುಭವ ಒಂದರೆಗಳಿಗೆಯತನಕ ಮಾತ್ರ. ಮುಂದಿನ ಹತ್ತೆ ನಿಮಿಷದಲ್ಲಿ ಒಣ ಕೆಮ್ಮೆಲ್ಲಾ ನಿರಾಳ (ಮುಂದಿನ ಬಾರಿ ಘನ ಕೆಮ್ಮಿಗೂ ಕೆಲಸ ಮಾಡುತ್ತದೆಯೆ ಪರೀಕ್ಷಿಸಿ ನೋಡಬೇಕು !). ನಾನು ನೇರ ಕುಡಿದೆ, ಆದರೆ ಸಾಧಾರಣ ನೀರಿಗೆ ಮಿಶ್ರ ಮಾಡಿ ಕುಡಿಯುತ್ತಾರಂತೆ. (omum water)

Submitted by H A Patil Mon, 11/18/2013 - 20:02

ನಾಗೇಶ ಮೈಸೂರು ರವರಿಗೆ ವಂಧನೆಗಳು
' ಈ ಕೆಮ್ಮೊಣಕೆಮ್ಮು' ಈ ಕಾಯಿಲೆ ಸಣ್ಣದಾದರೂ ಯಾರೂ ಇದರ ಬಾಧೆಯಿಂದ ತಪ್ಪಿಸಿಕೊಳ್ಳಲಾರರು, ಅದಕ್ಕೆ ಮನೆಯ ಔಷಧಿಯ ಪರಿಹಾರ ಸೂಚಿಸಿದ ನಿಮಗೆ ಧನ್ಯವಾದಗಳು.

Submitted by nageshamysore Tue, 11/19/2013 - 18:11

In reply to by H A Patil

ಪಾಟೀಲರೆ ನಮಸ್ಕಾರ. ನಿಮ್ಮ ಮಾತು ನಿಜ - ಯಾರನ್ನು ಬಿಡದೆ ಕಾಡುವ ಗತ್ತು ಈ ಜ್ವರ ಕೆಮ್ಮು ನೆಗಡಿಗಳದು. ಮದ್ದು ಸೂಚಿಸಿದ ಗಣೇಶರೆ ಸ್ವಾನುಭವದಲ್ಲಿ ಕನ್ಫರ್ಮ್ ಮಾಡಿರುವುದರಿಂದ - ದೊಡ್ಡಪತ್ರೆ ಕಷಾಯದ ಮೂಲಕ ಒಂದು ಕೈ ನೋಡಿಬಿಡಲು ಅಡ್ಡಿಯಿಲ್ಲ. ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು :-)

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು