ವ್ಯಕ್ತಿಯ ವ್ಯಕ್ತಿತ್ವ ವಿಕಾಸ
ಅದೇ ದಿನ-ಅದೇ ರಾತ್ರಿ, ಅದೇ ಜನ-ಅದೇ ಮನೆ, ಅದೇ ವೃತ್ತಿ-ಅದೇ ಊರು... ಒಂದು ಚೂರೂ ಬದಲಾವಣೆ ಇಲ್ಲ ಎಂದೆಲ್ಲಾ ಯೋಚಿಸದೆ, ಒಂದು ಬಾರಿ ಕ್ಯಾಲೆಂಡರ್ ನೋಡಿ-ಅಲ್ಲಿ ದಿನ-ತಿಂಗಳು-ವರ್ಷ ಬದಲಾಗುತ್ತಿರುತ್ತವೆ. ನಾವು ವಯಸ್ಸಿನಲ್ಲಿ ಬೆಳೆಯುತ್ತಿರುತ್ತೇವೆ. ಕೇವಲ ವಯಸ್ಸಿನಲ್ಲಿ ಮಾತ್ರ ಬೆಳೆಯಬೇಕೆ? ಸ್ಥಾನದಲ್ಲಿ ಬೆಳವಣಿಗೆ ಬೇಡವೇ? ಸ್ಥಾನ ಎಂದರೆ ಮಗಳು ತಂಗಿಯಿಂದ ಹೆಂಡತಿ-ತಾಯಿ-ಅತ್ತೆ-ಅಜ್ಜಿ (ಹೀಗೆ ಗಂಡಸರ ಪಾತ್ರದಲ್ಲಿಯೂ), ಇದು ಪ್ರತಿಯೊಬ್ಬ ಮನುಷ್ಯನ ಸಾಂಸಾರಿಕ ಬೆಳವಣಿಗೆ, ಇದು ತನ್ನಿಂದ ತಾನೇ ಆಗುತ್ತಿರುತ್ತದೆ. ಸಾಮಾಜಿಕ-ಔದ್ಯೋಗಿಕ ಬೆಳವಣಿಗೆ ವ್ಯಕ್ತಿಯ ವ್ಯಕ್ತಿತ್ವ ವಿಕಾಸದಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ.
ಬೆಳಿಗ್ಗೆ ಏಳುವುದು, ಯೋಗಾಭ್ಯಾಸ, ದಿನಪತ್ರಿಕೆ ಓದುವುದು (ಕೆಲವರು ಮಾತ್ರ), ಸ್ನಾನ-ಪೂಜೆ, ತಿಂಡಿ ಮುಗಿಸಿ ಕಚೇರಿಗೆ ತೆರಳುವುದು, ಅಲ್ಲಿ ದಿನದ ಕೆಲಸ ಮುಗಿಸಿ ಮನೆಗೆ ಬರುವುದು, ದೂರದರ್ಶನ ವೀಕ್ಷಿಸುವುದು, ಮನೆಯ ಕೆಲಸ ರಾತ್ರಿಯ ಊಟ ನಂತರ ನಿದ್ರೆ.......ದಿನದ ಮುಕ್ತಾಯ, ಆದರೆ ಬದಲಾವಣೆ ಎಲ್ಲಿ? ನಾವು ಎಲ್ಲಿ ಬೆಳೆದೆವು? ಎಲ್ಲಿಯೂ ಇಲ್ಲ. "ಬದಲಾವಣೆಗೆ ಸಮಯ ಎಲ್ಲಿ ಸಿಗುವುದು?" ಇದೇ ಪ್ರತಿಯೊಬ್ಬರ ಉತ್ತರ. ಇದರಿಂದ ನಮ್ಮ ಒಂದು ದಿನದ ವಯಸ್ಸು ಮಾತ್ರ ಬೆಳೆಯಿತು. ಆದರೆ ಪ್ರತಿಯೊಬ್ಬರಿಗೂ "ದಿನಾ ಇದೇ ಆಯ್ತು, ನಾವು ಬದಲಾಗಬೇಕು" ಎನ್ನುವ ಚಿಂತನೆ ಎಲ್ಲರಲ್ಲೂ ಮೂಡಿರುತ್ತದೆ. ಎಲ್ಲ ಬದಲಾಯಿಸಬೇಕು? ಹೇಗೆ ಬದಲಾಗಬೇಕು ಎನ್ನುವುದೇ ತಿಳಿಯದ ಸಮಸ್ಯೆಯಾಗಿದೆ.
ಮೊದಲು ಔದ್ಯೋಗಿಕವಾಗಿ ನೋಡುವುದಾದರೆ ನಮ್ಮ ಬದಲಾವಣೆ ಕಚೇರಿಯಲ್ಲಿ ಆಗಬೇಕು. ನಾವು ಎಲ್ಲರೊಂದಿಗೆ ಸ್ನೇಹದಿಂದಿದ್ದರೂ, ನಮ್ಮ ಕಾಲೆಳೆಯುವ ಜನ ನಮ್ಮ ಪಕ್ಕದಲ್ಲಿಯೇ ಇರುತ್ತಾರೆ. ಮೊದಲು ಅಂತಹವರನ್ನು ಗುರುತಿಸಿ ಅವರೊಡನೆ ಎಚ್ಚರದಿಂದಿರಬೇಕು. ಇದು ಮೊದಲ ಬೆಳವಣಿಗೆ. ನಮ್ಮಿಂದ ಕೆಲಸ ತೆಗೆದುಕೊಂಡು ತಾವು ಒಳ್ಳೆಯ ಹೆಸರು ತೆಗೆದುಕೊಳ್ಳುವ ಜನರು ಹೆಚ್ಚು. ಇಂತಹವರಿಂದ ನಿಧಾನವಾಗಿ ಬಿಡುಗಡೆ ಪಡೆದು ಹಂತ-ಹಂತವಾಗಿ ಮೇಲೇರಬೇಕು. ನಮ್ಮ ಪ್ರಗತಿಯನ್ನು ಕಂಡು ಅಸೂಯೆಪಡುವವರು ದಾರಿಯಲ್ಲಿ ಮುಳ್ಳೆಸೆಯುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ, ಇಂತಹವರಿಗೆ ಬಲಿಯಾಗದೇ ತಿರುಗುಬಾಣ ಎಸೆಯುತ್ತಾ ನಮ್ಮ ಹೆಜ್ಜೆಯನ್ನು ಮುಂದಿರಿಸಬೇಕು. ಈ ಹಂತದಲ್ಲಿಯೇ ನಾವು ಎಡುವುತ್ತೇವೆ. ಇಂತಹವರು ಸಾಮಾನ್ಯವಾಗಿ ನಾವು ಮಾಡದ ತಪ್ಪನ್ನು ನಮ್ಮ ಮೇಲೆ ಹಾಕುವುದು ಅಥವಾ ನಮ್ಮ ನೇರವಾದ ಮಾತನ್ನು ದ್ವಿಗುಣಗೊಳಿಸಿ ಮೇಲಧಿಕಾರಿಗಳಿಗೆ ಹೇಳುವುದು, ಇಂತಹ ವೇಳೆಯಲ್ಲಿಯೇ ನಮಗೆ ದಿಕ್ಕು ತೋಚದಂತಾಗುವುದು. ಇವರನ್ನೆದುರಿಸುವುದಕ್ಕೆ ನಾವು ಅವರ ಮಟ್ಟಕ್ಕೆ ಇಳಿಯದೆ ನಮ್ಮ ಕೆಲಸದಲ್ಲಿನ ಗುಣಮಟ್ಟವನ್ನು ಹೆಚ್ಚು-ಹೆಚ್ಚು ಉತ್ತಮಗೊಳಿಸುತ್ತಿರಬೇಕು. ನಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಿ ನಮ್ಮ ಕೆಲಸದಲ್ಲಿ ತಪ್ಪು ಮಾಡಿಸಬೇಕು ಎಂಬ ಅವರ ಉದ್ದೇಶ ವಿಫಲಗೊಳಿಸಬೇಕು. ಹಾಗೆ ಮಾಡಬೇಕೆಂದರೆ ನಾವು ನಮ್ಮ ವಿದ್ಯಾರ್ಹತೆ, ಸಾಮಾನ್ಯ ಜ್ಞಾನ, ಕೆಲಸಕ್ಕೆ ಸಂಬಂಧಪಟ್ಟ ವಿಷಯದ ಬಗ್ಗೆ ಹೊಸ ತಿಳುವಳಿಕೆ, ಇವೆಲ್ಲದರ ಕಡೆಗೆ ಗಮನ ನೀಡುತ್ತಾ ಅದನ್ನು ನಮ್ಮ ವೃತ್ತಿ ಜೀವನದಲ್ಲಿ ಅಳವಡಿಸುವ ಪ್ರಯತ್ನ ಮಾಡಬೇಕು. ಹೀಗಾದಾಗ ಮಾತ್ರವೇ ನಾವು ವಿಷಮುಳ್ಳುಗಳನ್ನು ಬೇರು ಸಮೇತ ಕೀಳಲು ಸಾಧ್ಯವಾಗುತ್ತದೆ. ನಾವು ನಮ್ಮ ನೌಕರಿಯಲ್ಲಿ-ಸಂಬಳದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ.
ಇನ್ನು ಸಾಮಾಜಿಕವಾಗಿ ಬೆಳೆಯಬೇಕು ಎಂದರೆ ನಾಲ್ಕು ಜನರಿಗೆ ಒಳ್ಳಯವನಾಗಿ ಬದುಕಲು ಪ್ರಯತ್ನಿಸಬೇಕು. ನಾವು ವಾರಕ್ಕೊಮ್ಮೆಯಾದರೂ ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆಂದರೆ ಅದರ ಜೊತೆಜೊತೆಗೆ ಯಾವುದಾದರೂ ಅನಾಥಾಶ್ರಮಕ್ಕೆ ಭೇಟಿ ನೀಡುವುದು ರೂಢಿಸಿಕೊಳ್ಳಬೇಕು. ನಮಗೆ 100 ರೂಪಾಯಿಯ ಸಹಾಯ ಮಾಡಲು ಕಷ್ಟವಿರಬಹುದು 10 ರೂಪಾಯಿಯ ಸಹಾಯ ಮಾಡಬಹುದಲ್ಲವೇ? ಅವರಲ್ಲಿನ ಅನಾಥ ಭಾವವನ್ನು ಹೋಗಲಾಡಿಸಲು ನಾವು ಯಾವುದೇ ಹಣ ವ್ಯಯ ಮಾಡಬೇಕಿಲ್ಲ, ಅವರೊಡನೆ ನಮ್ಮ ಕುಟುಂಬ ಭಾವನಾತ್ಮಕವಾಗಿ ಸ್ಪಂದಿಸಿದರೆ ಅವರ ಮುಖದಲ್ಲಿ ಕಾಣುವ ನೆಮ್ಮದಿ, ಕಣ್ಣುಗಳಲ್ಲಿ ಕಾಣುವ ತೃಪ್ತಿ ನಮಗೆ ಎಂತಹ ಅವಿನಾಭಾವ ತೃಪ್ತಿ ನೀಡುವುದೆಂದರೆ ಅದನ್ನು ಅನುಭವಿಸಿಯೇ ನೋಡಬೇಕು. ಇದರಿಂದ ನಾವು ನಮ್ಮ ಮಕ್ಕಳಿಗೂ ಒಳ್ಳೆಯ ಪಾಯ ಹಾಕಿದಂತಾಗುತ್ತದೆ.
ಕೊನೆಯದಾಗಿ ಒಂದು ಮಾತು:
ಬೆಕ್ಕು ಇಲಿಯನ್ನು ಹೇಗೆ ಹಿಡಿಯುವುದು ಎಂದು ಯೋಚಿಸಿದರೆ, ಇಲಿಯು ಬೆಕ್ಕಿನಿಂದ ಹೇಗೆ ತಪ್ಪಿಸಿಕೊಳ್ಳಲಿ ಎಂದು ಯೋಚಿಸುತ್ತಿರುತ್ತದೆ. ಇಲ್ಲಿ ಯಾರು ಇಲಿ? ಯಾರು ಬೆಕ್ಕು ಎನ್ನುವುದಕ್ಕಿಂತಲೂ, ಎರಡೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ ಎನ್ನುವುದು ಮುಖ್ಯವಾಗುತ್ತದೆ. ಅಂದರೆ ಈಗ ಮೊದಲಿನ ಹಾಗೆ ಸ್ಪಧರ್ಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ನೌಕರಿ ಹಿಡಿದರೆ ಸಾಕು ಎನ್ನುವಲ್ಲಿಗೆ ಪೂರ್ಣವಿರಾಮ ಹಾಕುವಂತಿಲ್ಲ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸ್ಪಧರ್ಾತ್ಮಕ ಜೀವನವನ್ನು ನಾವು ಹೇಗೆ ಎದುರಿಸಬೇಕು, ನಾವು ನಮ್ಮ ಕಾರ್ಯಕ್ಷಮತೆಯನ್ನು ಪ್ರತಿದಿನವೂ ಹೇಗೆ ತೋರಿಸಬೇಕು ಎಂದು ಆಲೋಚಿಸಬೇಕು. ಇಲ್ಲಿ ನಾವು "ಗೆಲ್ಲಲೇಬೇಕು ಎನ್ನುವ ಪ್ರಯತ್ನ ತಡವಾಗಿ ಪ್ರಾರಂಭಿಸಿದರೂ ಗೆಲ್ಲಬಹುದು" ಎನ್ನುವ ಧನಾತ್ಮಕ ಚಿಂತನೆ ಇಟ್ಟುಕೊಳ್ಳುವಲ್ಲಿ ಆಮೆ-ಮೊಲದ ಕಥೆ ಪ್ರೇರಣೆಯಾಗಬಹುದಲ್ಲವೇ?
Comments
ಉ: ವ್ಯಕ್ತಿಯ ವ್ಯಕ್ತಿತ್ವ ವಿಕಾಸ
ಸಂಪದಿಗರಿಗೆ ಆತ್ಮೀಯ ವಂದನೆಗಳು, ಈ ಲೇಖನ ಹೇಗೆ ಬಂದಿದೆ? ತಮ್ಮ ಅಮೂಲ್ಯವಾದ ಅಭಿಪ್ರಾಯವನ್ನು ತಿಳಿಸುತ್ತೀರಿ ಎಂದು ಭಾವಿಸುತ್ತೇನೆ, ಏನಾದರೂ ತಪ್ಪುಗಳಿದ್ದರೆ ತಿದ್ದುವಿರಿ ಎಂದು ಅಪೇಕ್ಷಿಸುತ್ತೇನೆ. ತಮ್ಮ ಪ್ರತಿಕ್ರಿಯೆಗಳನ್ನು ಆತ್ಮೀಯವಾಗಿ ಗೌರವಿಸುತ್ತೇನೆ.
In reply to ಉ: ವ್ಯಕ್ತಿಯ ವ್ಯಕ್ತಿತ್ವ ವಿಕಾಸ by suma kulkarni
ಉ: ವ್ಯಕ್ತಿಯ ವ್ಯಕ್ತಿತ್ವ ವಿಕಾಸ
ಸುಮ ಕುಲ್ಕರ್ಣಿ ಅವರೆ ನಿಮ್ಮ ಲೇಖನ ತು೦ಬಾ ಅದ್ಭುತ, ಪ್ರಸಕ್ತ ವರ್ತಮಾನಕ್ಕೆ ನಾವುಗಳು ಹೇಗೆ ಈಗ ಬದುಕುತ್ತಿದ್ದೇವೆ ಎ೦ದು ಅದರ ಸಮಸ್ಯೆ ಮತ್ತು ಅದಕ್ಕೆ ಪರಿಹಾರವನ್ನೂ ಸರಳವಾಗಿ ಬಿಡಿ ಬಿಡಿಯಾಗಿ ತಿಳಿಸಿದ್ದೀರ. ಇದು ಎಲ್ಲಾ ನೌಕರಿದಾರರಿಗೆ ಒನ್ದು ತರಹದ ದಾರಿದೀಪವಾಗಿದೆ ಎ೦ದು ನನ್ನ ಅನಿಸಿಕೆ. ಕೊನೆಯಲ್ಲಿ ನೀವು ಅಸ್ತಿತ್ವ ಉಳಿಯಲು ಕೊಟ್ಟಾ ಮಾತುಗಳೂ ಕೂಡಾ ತು೦
ಬ ಶ್ಲಘನೀಯ.
ಉ: ವ್ಯಕ್ತಿಯ ವ್ಯಕ್ತಿತ್ವ ವಿಕಾಸ
ಸುಮಾ ಅವರೆ,
ವ್ಯಕ್ತಿಯೊಬ್ಬನು ಸರ್ವತೋಮುಖವಾಗಿ ಅಂದರೆ ಕೇವಲ ದೈಹಿಕವಾಗಿ ಅಲ್ಲದೇ ಮಾನಸಿಕವಾಗಿಯೂ ಅಭಿವೃದ್ಧಿ ಹೊಂದಬೇಕೆನ್ನುವುದನ್ನು ಸರಳವಾಗಿ ಬರಹರೂಪದಲ್ಲಿಳಿಸಿದ್ದೀರ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ವ್ಯಕ್ತಿಯ ವ್ಯಕ್ತಿತ್ವ ವಿಕಾಸ
ಚಿಂತನೆಯನ್ನು ಹೊಂದಿದ ಶುದ್ಧ, ಹಾಗು ಸರಳ ಬರಹ, "ಇದರಿಂದ ನಮ್ಮ ಒಂದು ದಿನದ ವಯಸ್ಸು ಮಾತ್ರ ಬೆಳೆಯಿತು" ಈ ಮಾತು ಬದುಕಿನ ಚಿತ್ರಣಕ್ಕೆ ಹಿಡಿದ ಕನ್ನಡಿ,
ನವೀನ್ ಜೀ ಕೇ,
ಉ: ವ್ಯಕ್ತಿಯ ವ್ಯಕ್ತಿತ್ವ ವಿಕಾಸ
ಮೇಡಂ ವಂದನೆಗಳು
' ವ್ಯಕ್ತಿಯ ವ್ಯಕ್ತಿತ್ವ ವಿಕಸನ ' ಒಂದು ಒಳ್ಳೆಯ ಲೇಖನ, ನಿಮ್ಮ ಲೇಖನಿಯಿಂದ ಒಳ್ಳೆಯ ಬರವಣಿಗೆ ಹೊರ ಹೊಮ್ಮಲಿ ಎಂಬ ಆಶಯ ಎಲ್ಲ ಸಂಪದಿಗರದು, ಧನ್ಯವಾದಗಳು.
ಉ: ವ್ಯಕ್ತಿಯ ವ್ಯಕ್ತಿತ್ವ ವಿಕಾಸ
ಸುಮ ಅವರೇ, ನಿಮ್ಮ ಲೇಖನ "ರಿಯಲಿಸ್ಟಿಕ್" ಹಾಗಿ ಮೂಡಿಬಂದಿದೆ. ಧನ್ಯವಾದಗಳು