ಪಾಪ..ಮಗುವಿಗೆ ಕೋಪ ಬರದೇ ಇರುತ್ತಾ?

ಪಾಪ..ಮಗುವಿಗೆ ಕೋಪ ಬರದೇ ಇರುತ್ತಾ?

"ಸುರ್ ನಾ ಸಜೆ ಕ್ಯಾ ಗಾವೂಂ ಮೈ.. ಸುರ್ ಕೆ ಬಿನಾ ಜೀವನ್ ಸೂನಾ.."
ಬಾಲ್ಯದಿಂದಲೇ ನನಗೆ ಶಾಸ್ತ್ರೀಯ ಸಂಗೀತದ ಕಡೆ ಒಲವು ಜಾಸ್ತಿ. ಯಾವಾಗ ಭೀಮ್ ಸೇನ್ ಜೋಷಿ "ಮಿಲೇ ಸುರ್ ಮೇರಾ ತುಮ್ಹಾರ.."ಎಂದರೋ, ಅವರ ಜತೆ ಸುರ್ ಮಿಲಾಯಿಸಿಯೇ ಬಿಟ್ಟೆ.
 ನಾನೂ ಶಾಸ್ತ್ರೀಯ ಸಂಗೀತವನ್ನು ಎಷ್ಟು ಸಾಧ್ಯವೋ ಅಷ್ಟು ಅಶಾಸ್ತ್ರೀಯವಾಗಿ ಹಾಡಲು ಪ್ರಾರಂಭಿಸಿದೆ. ಒಲವು, ಆಸಕ್ತಿ, ಸಾಧನೆ ಇದ್ದರೆ ಯಾವ ರಾಗವನ್ನೂ ಸುಲಲಿತವಾಗಿ ಕೆಡಿಸಬಹುದು. ತಾನ್‌ಸೇನ್ "ದೀಪಕ್ ರಾಗ" ಹಾಡಿ ದೀಪ ಹೊತ್ತಿಸಿದ ಹಾಗೆ, ನಾನು ಸಹ!- ಯಾವುದೇ ಸುರ್ ಹಾಡಲಿ, ಮನೆಯವರೆಲ್ಲಾ ಅಳಲು  ಸುರು ಮಾಡುವರು. ಅವರ ದುಃಖವನ್ನು ನೋಡಲಾಗದೇ, ನಾನು ಸಂಗೀತಾಭ್ಯಾಸವನ್ನು ಬಾತ್ ರೂಮ್‌ಗೆ ಶಿಫ್ಟ್ ಮಾಡಿದೆ. ಗಡ್ಡ ಶೇವ್ ಮಾಡುವಾಗ, ಸ್ನಾನ ಮಾಡುವಾಗ ರಾಗಗಳನ್ನೂ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದೆ.
 ಒಂದು ದಿನ ಬಾತ್ ರೂಮಲ್ಲಿ "ಭೀಮ್ ಕಲಾಸ್" ರಾಗದಲ್ಲಿ, " ಬೋಲಿ ರೆ ಪಪೀ ಹರಾss ಆ..ಆ.." ಹಾಡುತ್ತಿದ್ದೆ. ನಾನು ಹಾಡುವುದನ್ನು ಮ್ಯೂಸಿಕ್ ಗ್ಯಾಪ್‌ಗೆ ನಿಲ್ಲಿಸಿದರೂ, "ಆಆಆ...ಆಆ..." ಮುಂದುವರೆದಿತ್ತು!  ಪುನಃ ಒಮ್ಮೆ ಹಾಡಿ " ಬೋಲಿ ರೆ ಪಪೀ ಹರಾss ಆ..ಆ.." ನಿಲ್ಲಿಸಿದೆ. ಪುನಃ  "ಆಆಆ...ಆಆ..." ! ಗಮನಕೊಟ್ಟು ಕೇಳಿದಾಗ ಗೊತ್ತಾಯಿತು- ಹೆಣ್ಣಿನ ದನಿ! ಹಾಡುವುದಲ್ಲಾ..ಅಳುವುದು. ಪಕ್ಕದ ಫ್ಲಾಟ್‌ನಿಂದ "ತಪ್ಪಾಯ್ತು, ಇನ್ಮೇಲೆ ಮಾಡುವುದಿಲ್ಲ.." ಎಂದರೂ ಶಿಕ್ಷಿಸುತ್ತಿರುವವ ಬಹುಷಃ ಆಕೆಯ ಗಂಡನೇ ಇರಬಹುದು. ಛೇ..ಒಂದು ಹೆಣ್ಣಿನ ಮೇಲೆ ದೌರ್ಜನ್ಯವಾಗುವಾಗ ಕೇಳುತ್ತಾ ಸುಮ್ಮನಿರುವುದು ಸರಿಯಲ್ಲ. ನೇರ ಬಾತ್ ರೂಮಿಂದ ಹೊರಬಂದು, "ಫಸ್ಟ್ ಎಯ್ಡ್" ಬಾಕ್ಸ್ ತೆರೆದು, ಹತ್ತಿ ತೆಗೆದುಕೊಂಡು ಕಿವಿಗೆ ಇಟ್ಟುಕೊಂಡು, ಶೇವ್-ಸ್ನಾನ ಮುಗಿಸಿ ಬಂದೆನು.
 ಮಾರನೇ ದಿನವೂ ಇದೇ ಕತೆ. ಆ ಹೆಣ್ಣಿನ ಕಿರುಚಾಟಕ್ಕೆ ನನ್ನ ಸಂಗೀತ ಹೇಗೋ ನಿಂತುಹೋಗುತ್ತಿತ್ತು, ಜತೆಗೆ ಶೇವ್ ಮಾಡುತ್ತಿದ್ದ ಕೈ ಅಲುಗಿ ಕೆನ್ನೆ ಮೇಲೆ ಗಾಯ.. ಲೆಕ್ಕ ಹಾಕಿದಾಗ ಒಂದೇ ವಾರದಲ್ಲಿ ಹನ್ನೆರಡನೇ ಗಾಯ! ಈ ದಿನ ಸಂಡೇ ಆದರೂ ಕದನವಿರಾಮವಿಲ್ಲ. ವಿಶ್ವಸಂಸ್ಥೆ ತರಹ  ಸುಮ್ಮನಿರುವುದು ಇನ್ನು ಸಾಧ್ಯವಿಲ್ಲ. ಬಾಕ್ಸ್‌ನಲ್ಲಿದ್ದ ಹತ್ತಿಯೂ ಮುಗಿದಿದೆ. ಕಿವಿಯಿಂದ ಹತ್ತಿ ತೆಗೆದು ಗಾಯಕ್ಕೆ ಒತ್ತಿಕೊಂಡು ನೇರ ಯುದ್ಧಭೂಮಿ ಕಡೆ ನಡೆದೆ.
 ಬಾಗಿಲು ತೆಗೆದ ಹೆಣ್ಣು, ಅಳು ಒರೆಸಿಕೊಂಡು, ದೂರು ನೀಡಿದರು " ಅಂಕ್‌ಲ್, ಸಾಕಾಯಿತು. ನೀವಾದರೂ ಬುದ್ಧಿ ಹೇಳಿ.." ಎಂದಾಗ, ಯಾರಿಗೆ ಬುದ್ಧಿ ಹೇಳಬೇಕೆಂದು ಮನೆ ಒಳಗೆ ನೋಡಿದೆ. ೬-೭ ವರ್ಷದ ಪೋರ ಕಣ್ಣುಗಳಲ್ಲಿ ಕೆಂಡ ಕಾರುತ್ತಾ, ಬುಸುಗುಡುತ್ತಾ ನಿಂತಿದ್ದ! ಇದು ಡೇಂಜರ್ ಪಾರ್ಟಿ...ಇದರ ಬದಲು ತಾಯಿಗೇ ಬುದ್ಧಿ ಹೇಳುವುದು ವಾಸಿ ಅಂತ ಅನಿಸಿ, ಬೇಗನೆ ದೃಷ್ಟಿ ಹೊರಳಿಸಿ ಹುಡುಗನ ತಂದೆ ಎಲ್ಲಿರುವನೆಂದು ನೋಡಿದರೆ- ಸಿನೆಮಾ ಸೌಂಡ್‌ಗೆ ಪುಷ್ಪಕ ವಿಮಾನ ಸಿನೆಮಾದಲ್ಲಿ ಕಮಲ ಹಾಸನ್ ಹಾಯಾಗಿ ಮಲಗಿದಂತೆ, ದಿಂಬಿನಡಿಯಲ್ಲಿ ತಲೆಯಿಟ್ಟುಕೊಂಡು ಕೋಣೆಯಲ್ಲಿ ಹಾಯಾಗಿ ಮಲಗಿದ್ದ!
 ನಾನು ಇದನ್ನೆಲ್ಲಾ ಗಮನಿಸುತ್ತಿದ್ದಾಗ ತಾಯಿ ನನ್ನ ಬಳಿ ಮಗನ ಬಗ್ಗೆ ದೂರು ಹೇಳುತ್ತಾ ಇರಲಿಲ್ಲಾ! ಹಾವಿನಂತೆ ಬುಸುಗುಡುತ್ತಿದ್ದ ಮಗನನ್ನು ಹೊಗಳುತ್ತಾ ಇದ್ದಳು! -ಅವನಂತಹ ಮಗ ಜಗತ್ತಿನಲ್ಲೇ ಇಲ್ಲ... ಕ್ಲಾಸಲ್ಲಿ ಫಸ್ಟ್...ಎಲ್ಲಾ ಸಬ್ಜೆಕ್ಟ್‌ನಲ್ಲಿ A++....ಒಟ್ಟಿನಲ್ಲಿ ಹೇಳಬೇಕೆಂದರೆ ಜಗತ್ತಿನ ಉದ್ಧಾರಕ್ಕೆ ಹುಟ್ಟಿದ ಅವತಾರ ಪುರುಷ!
"ಅಲ್ಲಮ್ಮಾ..ಹಾಗಿದ್ದರೆ ಈ ಯುದ್ಧ ಅಲ್ಲಲ್ಲಾ ಜೋರು ಕೂಗಾಟ ದಿನಾ ಯಾಕೆ ಕೇಳಿ ಬರುತ್ತಲಿದೆ?" ಅಂದೆ.
"ಅದಾ..ಅವನಿಗೆ ಬೇಕಾದ್ದು ಕೊಡದಿದ್ದರೆ ಕೈಗೆ ಸಿಕ್ಕಿದ್ದನ್ನು ಎಸೆಯುತ್ತಾನೆ. ಇವರೇ ಕಾರಣ- ಅದು ಕೊಡುತ್ತೇನೆ, ಇದು ತರುತ್ತೇನೆ ಎಂದು ಆಸೆ ಹುಟ್ಟಿಸುತ್ತಾರೆ. ಬೆಳಗ್ಗೆದ್ದು ನೋಡಿದಾಗ ಇರದಿದ್ದಾಗ ಪಾಪ ಮಗುವಿಗೆ ಕೋಪ ಬರದಿರುತ್ತಾ.. ಈಗ ನೋಡಿ..ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ..... ....(ಅದೇನೆಂದು ನನಗೆ ಅರ್ಥವಾಗಲಿಲ್ಲ) ತರುತ್ತೇನೆ ಎಂದವರು ಇನ್ನೂ ಎದ್ದಿಲ್ಲ ನೋಡಿ..."
 ಓ......ತಪ್ಪೆಲ್ಲಾ ಅಪ್ಪನದ್ದು! ಪಾಪ ವಾರಪೂರ್ತಿ ಕೆಲಸಮಾಡಿ ದಣಿದಿರುತ್ತಾರೆ, ರೆಸ್ಟ್ ತೆಗೆದುಕೊಳ್ಳಲಿ ಬಿಡಿ...ಎಂದು ಹೇಳಲು ಹೊರಟವನು, ಹುಡುಗನನ್ನು ನೋಡಿದವನೇ ರೂಟು ಬದಲಾಯಿಸಿ, " ಏ..ಏಳೋ ಮೇಲೆ, ಪಾಪ ಮಗು ಕೇಳಿದ್ದನ್ನು ತಂದುಕೊಟ್ಟು ಬೇಕಿದ್ದರೆ ಪುನಃ ಮಲಗಿಕೋ" ಎಂದು ಅಪ್ಪನಿಗೇ (ನಿದ್ರೆಯಲ್ಲಿದ್ದವನಿಗೆ ಕೇಳಿಸದು ಅಂತಾಲೋಚಿಸಿ) ದಬಾಯಿಸಿದೆ.
 ಆತ ದಿಂಬಿನಡಿಯಿಂದ ತಲೆ ಹೊರಗೆ ತೆಗೆದು, " ಓ ಅಂಕ್‌ಲ್ ನೀವಾ.. ನಿಮ್ಮ ಫ್ಲೋರ್‌ಗೂ ಕೇಳಿಸ್ತಾ? ಇದು ನಮ್ಮಲ್ಲಿ ದಿನಾ ಇರುವುದೇ.. ಇವಳ ಚಿತ್ರಾನ್ನ, ಪುಳಿಯೋಗರೆ, ಇಡ್ಲಿ ಅವನಿಗಾಗುವುದಿಲ್ಲ...ಅವನಿಗೆ ಬೇಕಾದ್ದು ಇವಳಿಗೆ ಬರುವುದಿಲ್ಲ. ಅವರು ಕೇಳಿದ್ದನ್ನು ನಿನ್ನೆ ರಾತ್ರಿಯೇ ತಂದು ಫ್ರಿಡ್ಜಲ್ಲಿಟ್ಟಿರುವೆನು..." ಮಾತು ಮುಗಿಸುವ ಮೊದಲೇ ತಾಯಿ-ಮಗ ಫ್ರಿಡ್ಜ್ ಕಡೆ ಓಡಿದರು.
 ಪ್ರಕರಣ ಸದ್ಯಕ್ಕೆ ಸುಖಾಂತ್ಯವಾದ್ದರಿಂದ, "ನಾನು ಬರುತ್ತೇನೆ" ಅಂತ ಹೇಳಿ ಹೊರಟೆನು. "ನಿಲ್ಲಿ ಅಂಕ್‌ಲ್ ನೀವೂ ನಮ್ಮ ಜತೆ ನಾಸ್ಟಾ ಮಾಡಿ ಹೋಗಿ.." ಪ್ರಿಡ್ಜ್‌ನಿಂದ ಐಟಮ್ ತೆಗೆಯುತ್ತಾ ಹೇಳಿದಳು. "ಥೂ..ಇದಲ್ಲಾ ನಾನು ಹೇಳಿದ್ದು..."ಎಂದು ಮಗ ಎಸೆದದ್ದು ತಿರುಗಿ ನಿಂತ ನನ್ನ ಮುಖಕ್ಕೇ.. "ಅಂಕ್‌ಲ್, ಹೀಗೇ..ಇವನಿಗೆ ಕೋಪ ಬಂದರೆ ಸಿಕ್ಕಿದ್ದು ಎಸೆಯುತ್ತಾನೆ, ನೀವು ಪಕ್ಕಕ್ಕೆ ಸರಿಯಬೇಕಿತ್ತು.."
""ಆಆಆ...ಆಆ..." ತಾಳ ಹಾಕಬೇಡಿ. ಇದು ಶಾಸ್ತ್ರೀಯ ಸಂಗೀತವಲ್ಲಾ..ಆಆಆಆಆಆಆ....
 

Rating
No votes yet

Comments

Submitted by nageshamysore Mon, 11/18/2013 - 03:00

ಗಣೇಶ್ ಜಿ, ಹಠದ ಮರಿ ರಾಕ್ಷಸರ ಅವತಾರವನ್ನು ಸಂಗೀತದ ಕರ್ಕಶೆಯ ಜತೆ ಸಮೀಕರಿಸಿ ಬರೆದಿದ್ದೀರಾ. ಪುಣ್ಯಕ್ಕೆ ಕೋಪದಲ್ಲಿ ನಿಮ್ಮ ಹುಡುಗ ಎಸೆದದು ಫುಡ್ ಐಟಂ. ನಮ್ಮ ಹುಡುಗ ಅಮ್ಮನ ಮೇಲಿನ ಕೋಪಕ್ಕೆ ತನ್ನ ಅತ್ಯಂತ ಪ್ರೀತಿಪಾತ್ರ 'ಪೀಎಸ್ಪಿ ಗೇಮ್' ಪ್ಲೇಯೆರನ್ನೆ ಎತ್ತೆಸೆದು ಬಿಟ್ಟಿದ್ದ - ಸದ್ಯಕ್ಕೆ ನೆಲಕ್ಕೆ , ಮುಖಕ್ಕಲ್ಲ! ಆಮೇಲೆ ರಿಪೇರಿಗೆ ಬೇರೆ ದಂಡ - ಸರಿಯಾಗಿ ಬೈಗುಳದ ಪೂಜೆಯೆಲ್ಲ ಆದಮೇಲೆ ಅನ್ನಿ ( = ಅದಕೊಂದು ಕವನ (ಮುರಿದುಬಿದ್ದ 'ಪಿಎಸ್ಪಿ' ) ಬರೆದು ಎಲ್ಲ ಶಾಂತಿಯಾದ ಮೇಲೆ, ಅನ್ನಿ) :-)

Submitted by ಗಣೇಶ Wed, 11/20/2013 - 00:05

In reply to by nageshamysore

ಇಂತಹ ಸಮಯದಲ್ಲಿ ನಾನಾಗಿರುತ್ತಿದ್ದರೆ-"ಬೆತ್ತ ಎಲ್ಲಿ?" ಎಂದು ಹುಡುಕಿ ನಾಲ್ಕು ಬಾರಿಸುತ್ತಿದ್ದೆ. ಅದೇ ನಾಗೇಶರು "ಪೆನ್ನು ಎಲ್ಲಿ?" ಎಂದು ಹುಡುಕಿ ನಾಲ್ಕು ಕವನ ಬರೆಯುವರು:)
ಎಲ್ಲಿ ನಾಗೇಶರೆ..ಮುರಿದುಬಿದ್ದ 'ಪಿಎಸ್ಪಿ' ಕವನ ಸಂಪದದಲ್ಲಿ ಹಾಕೇ ಇಲ್ಲಾ?

Submitted by nageshamysore Wed, 11/20/2013 - 02:43

In reply to by ಗಣೇಶ

ಗಣೇಶ್ ಜೀ,
ಕವನ ಬರೆಯೋಕೆ ಮುಂಚೆ 'ಬೆತ್ತರಹಿತ' ಪೂಜೆಯಂತೂ ಚೆನ್ನಾಗಿ ಆಗಿತ್ತು :-) ಇಲ್ಲಿ ಮಕ್ಕಳಿಗೆ, ಹೊಡೆದರೂ ಕಷ್ಟ, ಮಗನಿಗಂತೂ ನನ್ನ ನಂಬರಿಗಿಂತ ಚೆನ್ನಾಗಿ ನೆನಪಿನಲ್ಲಿರುವುದು  ಪೋಲೀಸು, ಅಂಬ್ಯುಲೆನ್ಸು, ಫೈರ ಡಿಪಾರ್ಟ್ಮೆಂಟುಗಳದ್ದು (ಸ್ಕೂಲಲ್ಲಿ ಚೆನ್ನಾಗಿ ಕಲಿಸಿಬಿಡುತ್ತಾರೆ). ಕೆಟ್ಟುಹೋದ ಪೀಎಸ್ಪಿಯಂತೂ ಅನಾಥವಾಗಿ ಹಾಗೆ ಬಿದ್ದಿತ್ತು. ಮೊನ್ನೆ ಶನಿವಾರವಷ್ಟೆ 'ಸಿಮ್ ಲಿಮ್ ಸ್ಕೈಯರ್' ನ ಅಂಗಡಿಯೊಂದರಲ್ಲಿ ರಿಪೇರಿ ಮಾಡಿಸಿಕೊಟ್ಟೆ - ಸದ್ಯಕ್ಕೆ ಮತ್ತೆ ಉಸಿರಾಡುತ್ತಿದೆ!
ಮುರಿದುಬಿದ್ದ ಪಿಎಸ್ಪಿ -(ಪ್ರಾಸರಹಿತ) ಕಥನ ಸ್ವಲ್ಪ ಉದ್ದವಾಯಿತೇನೊ ಅಂತ ಹಾಕಿರಲಿಲ್ಲ. ತುಸು ಟಿಪ್ಪಣಿ ಸೇರಿಸಿ ಎಡಿಟ್ ಮಾಡಿ ಹಾಕುತ್ತೇನೆ. ಈಗಾಗಲೆ ಎರಡು ಸಾವಿರ ದಾಟಿ ಓಡುತ್ತಿರುವ ಕಾರಣ - ಯಾವುದು ಹಾಕುವುದು ಯಾವುದು ಬಿಡುವುದು ಅನ್ನುವ ಗೊಂದಲ. ಸಂ'ಪದ' ಹೋಗಿ 'ನನ್ಪದ' ಆಗೋದು ಬೇಡಾಂತ :-)

Submitted by nageshamysore Wed, 11/20/2013 - 19:52

In reply to by nageshamysore

ಗಣೇಶ್ ಜಿ, 
'ಮುರಿದುಬಿದ್ದ ಪಿಎಸ್ಪಿ' ಸಂಪದ ಥಿಯೇಟರಿನಲ್ಲಿ ರಿಲೀಸ್ ಆಗಿದೆ ನೋಡಿ. ಪೀಎಸ್ಪಿಯ ಹಾಗೆ ಪ್ಲಾಫ್ ಶೋ ಆಗುವುದೊ, ಇಲ್ಲಾ ಸ್ವಲ್ಪ ಸದ್ದು ಮಾಡುವಂತಿರುವುದೊ ಕಾದು ನೋಡೋಣ :-)
ಲಿಂಕು ಈ ಕೆಳಗೆ : 
http://sampada.net/%E0%B2%AE%E0%B3%81%E0%B2%B0%E0%B2%BF%E0%B2%A6%E0%B3%8...
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by partha1059 Mon, 11/18/2013 - 10:57

ಉತ್ತಮ‌ ಹಾಸ್ಯ ಪ್ರಹಸನ‌. ಮಗುವಿನ‌ ಕೈ ಎಸೆತದಿಂದ ಪಾರಾಗಲು ಸ್ವಲ್ಪ ಚುರುಕಾಗಿ, ಮುಂದಿನ‌ ಸಾರಿ ಅಲ್ಲಿಗೆ ಹೋಗುವಾಗ‌ ಎಚ್ಚರ‌ ವಹಿಸಿ.
ಚಿಕ್ಕ ವಯಸಿನಲ್ಲಿ ನಮ್ಮ ಮನೆಯಲ್ಲಿ ಸಹ‌ ನನ್ನ ತಮ್ಮ ನೀವು ಹೇಳಿದ‌ ರೀತಿಯೆ ಹಟ‌ ಅಳು ಎಲ್ಲ ಮಾಡೋನು. ಹಾಗೆ ಎಸೆತದಲ್ಲಿ ಸಹ‌ expert. ಒಮ್ಮೆ ಊರಿನಿಂದ‌ ಸೋದರತ್ತೆ ಬಂದಿದ್ದರು ಇವನು ಹಟ‌ ಹಿಡಿದು ಅಳುತ್ತ ಚಪ್ಪಲಿ ಗೂಡಿನ‌ ಹತ್ತಿರ‌ ಕುಳಿತಿದ್ದ. ಅತ್ತೆ ಪಾಪ‌ ಅವನಿಗೆ ಏನೋ ಸಮಾಧಾನ‌ ಹೇಳಲು ನೋಡಿದರು ನೋಡಿ ಅವನ‌ ಕೋಪ‌ ಉಗ್ರ ರೂಪ‌ ತಾಳಿತು. ಸರಿ ಒಂದರ‌ ನಂತರ‌ ಒಂದು ಚಪ್ಪಲ್ಲಿ ಅವರತ್ತ 'ಥ್ರೋ....' .
'ಎಂತಹ‌ ಹುಡುಗ‌ ಇವನು ನನಗೆ ಅವಮಾನವಾಯಿತು, ನಾನು ಇನ್ನು ಇರಲ್ಲ ಹೊರಡುತ್ತೇನೆ, ' ಎಂದು ಲಗೇಜ್ ಹಿಡಿದು ಹೊರಟರು ಊರಿಗೆ ಅಂದುಕೊಂಡಿರಾ?
ಪಾಪ ಇಲ್ಲ
'ಹುಡುಗ‌ ಪಾಪ‌ ಅವನಿಗೆ ಏನು ಗೊತ್ತಾಗುತ್ತೆ" ಎಂದು ಅವರಿಗೆ ಅವರೆ ಸಮಾದಾನಮಾಡಿಕೊಂಡು ಸುಮ್ಮನಾದರು ಅನ್ನಿ.
ಏಕೆಂದರೆ ಆಗ‌ ಬೆಂಗಳೂರಿಗೆ ಹೋಗಲು ಬರುತ್ತಿದ್ದ ಬಸ್ ಎಂದರೆ ಒಂದೇ ಒಂದು , ದರ್ಮಸ್ಥಳ‌ ಬೆಂಗಳೂರು ಎಕ್ಸ್ ಪ್ರೆಸ್ ದಿನಕ್ಕೆ ಒಂದೇ ಒಂದು ಬಾರಿ ! :‍)

Submitted by ಗಣೇಶ Wed, 11/20/2013 - 00:19

In reply to by partha1059

ತುಂಬಾ ಥ್ಯಾಂಕ್ಸ್ ಪಾರ್ಥರೆ, -ಈಗಿನ ಮಕ್ಕಳೇ ಹೀಗೆ, ಹಿಂದೆ ನಮ್ಮ ಕಾಲದಲ್ಲಿ ಹೀಗಿರಲಿಲ್ಲ- ಅಂತ ಒಬ್ಬರು ನನಗೆ ಹೇಳಿದರು.
"ಮಕ್ಕಳು ಎಲ್ಲಾ ಕಾಲದಲ್ಲೂ ಒಂದೇ. ಅತೀ ಮುದ್ದು ಮಕ್ಕಳನ್ನು ಹೀಗೆ ಮಾಡುವುದು. ಹಿಂದೆ ೩-೪ ಮಕ್ಕಳು ಇದ್ದಾಗ ಸಣ್ಣ ಮಗುವನ್ನು ಜಾಸ್ತಿ ಮುದ್ದು ಮಾಡುತ್ತಿದ್ದರು. ಆ ಮಗು ಇಂತಹ ಅವಾಂತರ ಮಾಡುತ್ತಿದ್ದವು" ಎಂದಿದ್ದೆ. ಅದಕ್ಕೆ ಸರಿಯಾದ ಉದಾಹರಣೆ ಕೊಟ್ಟಿರಿ.

Submitted by RAMAMOHANA Wed, 11/20/2013 - 14:40

In reply to by ಗಣೇಶ

ಎಲ್ಲ‌ ಬರಿ ಮಕ್ಕಳಿಗೆ ಬಯ್ಯೋರೆ ಆಗೋದ್ರು, ಆದ್ರೆ ಆ ಮಗುವಿನ‌ ಮನಸ್ಸಿನಲ್ಲಿ ಏನಿದೆ ಅಂತ‌ ತಿಳ್ಕೊಳಕ್ಕೆ ಯಾರೂ ಪ್ರಯತ್ನ‌ ಪಡಲ್ಲ‌.... ಛೇ...
ರಾಮೋ.

Submitted by ಗಣೇಶ Wed, 11/20/2013 - 00:22

In reply to by kavinagaraj

ಅಂತಹ ಸಮಯದಲ್ಲೂ ನಾನು ಟೇಸ್ಟ್ ನೋಡದೇ ಬಿಡುವುದಿಲ್ಲ ಅಂತ ಕವಿನಾಗರಾಜರಿಗೆ ಗ್ಯಾರಂಟಿ ಇತ್ತು! ಚೆನ್ನಾಗಿತ್ತು. :) ಆಆಆಆಆ ದ ಕೊನೆಯಲ್ಲಿ "ಹಾ" ಸೇರಿಸಲು ಮರೆತುಹೋಯಿತು.

Submitted by ಗಣೇಶ Wed, 11/20/2013 - 00:25

In reply to by bhalle

:))) ಭಲ್ಲೇಜಿ, ನೀವು ಭಯಂಕರ ಮಾರಾಯ್ರೆ! ಪಿಜ್ಜಾದ ಬದಲು ಏನಾದರೂ ವಜ್ಜಾದ್ದು ಆಗಿರುತ್ತಿದ್ದರೆ ನನ್ನ "ದಂತ"ದ ಕತೆ....

Submitted by H A Patil Mon, 11/18/2013 - 19:16

ಗಣೇಸ ರವರಿಗೆ ವಂದನೆಗಳು
ಈ ಲೇಖನ ಚೆನ್ನಾಗಿ ಮೂಡಿ ಬಂದಿದೆ, ಇದರ ಪ್ರಾರಂಭಿಕ ಸಾಲುಗಳನ್ನು ನೋಡಿ ಇದು ಒಂದು ರೀತಿಯ ವಿಭಿನ್ನ ಲೇಖನ ಎಂದೆನಿಸಿತ್ತು. ಆದರೆ ಇದೊಂದು ಬೇರೆಯ ತರಹದ ಲೇಖನ ಜೊತೆಗೆ ಮನಕ್ಕೆ ಮುದ ನೀಡುವಂತಹುದು ಓದಿ ಖುಷಿಯಾಯಿತು ಧನ್ಯವಾದಗಳು.

Submitted by ಗಣೇಶ Wed, 11/20/2013 - 00:32

In reply to by H A Patil

ಪಾಟೀಲರೆ, ನಾನು ಲೇಖಕ/ಕವಿ....ಯಾರೂ ಅಲ್ಲ. ಸಂಪದ ಓದಿ ಸ್ವಲ್ಪ ಸ್ವಲ್ಪ ಬರೆಯಲು ಕಲಿತವ. ಎಲ್ಲೋ ಶುರುವಾಗಿ ಎಲ್ಲೋ ಎಂಡ್ ಆಗುವ ಬರಹಗಳು. ನನ್ನ ಈ ಕೆಲ ಸಂಪದಮಿತ್ರರು ಕಷ್ಟಪಟ್ಟು ಓದಿ ಆರ್ಥಮಾಡಿಕೊಂಡು ಹೊಗಳುತ್ತಿದ್ದಾರೆ. ಅದು ಸಂಪದಿಗ ಮಿತ್ರರ ದೊಡ್ಡಗುಣ. ನೀವೂ ಓದುತ್ತಿದ್ದೀರಿ ಅಂದರೆ ನನಗೂ ಖುಷಿ.