ಗುಲಾಮ ಪರಂಪರೆಯ ಪ್ರತೀಕವೇ ವೈಷ್ಣವ ದೀಕ್ಷೆ
ವೈಷ್ಣವ ದೀಕ್ಷೆಯ ಪರಂಪರೆ ಮತ್ತು ಮತಾಂತರ ಇವತ್ತಿನ ಮಾತಲ್ಲ. ಅದು ಕ್ರಿ, ಶ. ೧೦೯೬-೧೧೧೬ ರ ಕಾಲಘಟ್ಟದಿಂದಲು, ವಿಶಿಷ್ಟಾದ್ವೈತ ಸಿದ್ದಾಂತ ನೀಡಿದ ರಮಾನುಜಚಾರ್ಯರಿಂದ ನಡೆದುಕೊಂಡು ಬರುತ್ತಿದೆ. ತಮಿಳುನಾಡಿನಲ್ಲಿ ಚೋಳರ ಅರಸ ಕುಲೋತ್ತುಂಗ ವೈಷ್ಣವ ಅನುಯಾಯಿಗಳಿಗೆ ಕಿರುಕುಳ ಕೊಡಲಾರಂಭಿಸಿದ್ದರಿಂದ, ರಮಾನುಜಚಾರ್ಯರು ಕರ್ನಾಟಕಕ್ಕೆ ಓಡಿಬರಬೇಕಾಯಿತು. ಹೊಯ್ಸಳರ ರಾಜ ವಿಷ್ಣುವರ್ಧನನ ಆಶ್ರಯ ಪಡೆದು ಕೊನೆಗೆ ಅವರಿಗೆ ವೈಷ್ಣ ದೀಕ್ಷೆ ನೀಡಿದ್ದು ಇತಿಹಾಸ. ಆ ಸಂಧರ್ಭದಲ್ಲಿ ವಿಷ್ಣುವರ್ಧನನು ಎಲ್ಲವನ್ನು ಬಿಟ್ಟು ವೈಷ್ಣವ ದೀಕ್ಷೆ ಪಡೆದ ಕಾರಣಕ್ಕಾಗಿಯೆ ಅವರಿಗೆ ಬಿಟ್ಟಿದೇವ ಎಂದು ಹೆಸರು ಬಂದಿದ್ದು. ತದನಂತರ ಮೇಲುಕೋಟೆಯಲ್ಲಿ ನಾರಾಯಣ ದೇವಾಲಯ ಮತ್ತು ವೈಷ್ಣವ ಮಠವನ್ನು ಸ್ಥಾಪಿಸಿ ಮತಾಂತರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸುತ್ತಾರೆ.
ನಮ್ಮ ಕರ್ನಾಟಕದಲ್ಲಿ ದಾಸ ಪರಂಪರೆಯ ಇತಿಹಾಸವನ್ನು ಕೆದಕಿದರೆ, ಇಡೀ ಮನುಕುಲವನ್ನೆ ಕಲಕಿ ಬಿಡುತ್ತದೆ. ವೈಷ್ಣವ ದೀಕ್ಷೆಯ ನೆಪದಲ್ಲಿ ತಳ ಸಮುದಾಯವನ್ನು ಗುಲಾಮರನ್ನಾಗಿ ಮಾಡಿಕೊಂಡವರು ಶ್ರೀಯುತ ರಮಾನುಜಚಾರ್ಯರು. ತಮ್ಮ ದೀಕ್ಷೆ ಬೆಳವಣಿಗೆಗೆ ಸರ್ವರಿಗೂ ದೀಕ್ಷೆ ನೀಡಲು ಪ್ರಾರಂಭಿಸಿ ಗುಲಾಮ ಪರಂಪರೆಯನ್ನು ಹುಟ್ಟು ಹಾಕಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ರಮಾನುಜಚಾರ್ಯರು ತಳ ಸಮುದಾಯದವರಿಗೊಂದು ಕರೆ ನೀಡಿದರು, ನೀವು ಕೀಳು ಜಾತಿಯಲ್ಲಿ ಬದುಕುತ್ತಿದ್ದೀರಿ, ನೀವೆಲ್ಲ ವೈಷ್ಣವ ದೀಕ್ಷೆ ಪಡೆಯಿರಿ ಉತ್ತಮರಾಗುತ್ತಿರಿ ಎಂದು ಉಯಿಲೆಬ್ಬೆಸಿದರು, ಕೀಳು ಜಾತಿಯಲ್ಲಿ ಹುಟ್ಟಿ ಜಾತಿಯ ತಾರತಮ್ಯಕ್ಕೆ ಒಳಗಾದ ಜಾತಿಗಳು, ಉನ್ನತ ಮಟ್ಟಕ್ಕೇರುತ್ತೇವೆ ಎಂಬ ಮಹದಾಸೆಯಿಂದ ದೀಕ್ಷೆ ಪಡೆಯಲು ಮುಂದಾದ ಸಂಧರ್ಭದಲ್ಲಿ, ಜಾತಿಯ ಒಳಗಡೆ ಪ್ರತಿರೋಧಗಳು ಹುಟ್ಟಿ ಕೊಳ್ಳುತ್ತವೆ. ಆದರೂ ಜಾತಿಯ ಪರಿಧಿಯನ್ನು ಮೀರಿ ದೀಕ್ಷೆ ಪಡೆದು ಕೆಲವೊಂದಷ್ಟು ಜನ ವೈಷ್ಣವರಾದರು. ತಳ ಸಮುದಾಯದವರು ವೈಷ್ಣವರಾದಾಕ್ಷಣ ಅವರು ಉನ್ನತ ಮಟ್ಟದವರಾಗಲು ಸಾಧ್ಯವಿಲ್ಲ, ಯಾಕೆಂದರೆ? ಜಾತಿಯ ಸೋಂಕು ಸುಮ್ಮನೆ ಬಿಡುತ್ತದೆಯೆ? ಅಲ್ಲು ಕೂಡ ಅಸ್ಪೃಶ್ಯತೆ ಪ್ರಾರಂಭವಾಯಿತು. ಸಮಸ್ಥಿತಿಯ ಮನಸ್ಸಿಲ್ಲ, ಸ್ವ- ಚಿಂತನೆಗೆ ಗೌರವವಿಲ್ಲ, ವಾಕ್ ಸ್ವಾತಂತ್ರವಿಲ್ಲದೆ ಬದುಕುವಂತಹ ಸ್ಥಿತಿ ಅಲ್ಲು ಕೂಡ ನಿರ್ಮಾಣವಾಯಿತು. ಅಲ್ಲಿದ್ದ ಬ್ರಾಹ್ಮಣರು ದೀಕ್ಷೆ ಪಡೆದ ತಳ ಸಮುದಾಯವನ್ನು ತಮ್ಮ ದಾಸರನ್ನಾಗಿ ಮಾಡಿಕೊಂಡರೆ ಹೊರತು, ಅವರಿಗೆ ಯಾವ ಸ್ಥಾನಮಾನವನ್ನು ನೀಡಲಿಲ್ಲ. ಆ ಕಾರಣಕ್ಕಾಗಿಯೆ ದೀಕ್ಷೆ ಪಡೆದಿದ್ದ ಎಲ್ಲರೂ ಮರಳಿ ಸ್ವಜಾತಿಯ ಸಂಸ್ಕ್ರುತಿ, ಆಚರಣೆ, ಸಂಪ್ರದಾಯಕ್ಕೆ ಹಿಂದಿರುಗಬೇಕಾಯಿತು. ಸ್ವಜಾತಿಗೆ ಮರಳಿ ಬಂದ ಮೇಲೆ ಜಾತಿಯ ಜನರು ಇವರಿಗೆ ಬಹಿಷ್ಕಾರ ಹಾಕಿದರು. ನೀವು ಜಾತಿಯ ಬಿಟ್ಟು ಹೋದವರು, ನಮ್ಮ ಜಾತಿಯಲ್ಲಿ ನಿಮಗೆ ಸ್ಥಳವಿಲ್ಲ ಎಂದು " ಅವರ ಮನೆಯಿಂದ ಹೆಣ್ಣು ತರುವಾಗಿಲ್ಲ ಹಾಗೂ ಕೊಡುವಾಗಿಲ್ಲ " ಯಾವುದೇ ವೈವಾಹಿಕ ಸಂಬಂಧ ಏರ್ಪಡುವಂತಿಲ್ಲ ಎಂದು ಬಹಿಷ್ಕಾರ ಹಾಕಿರುವುದು ಇಂದಿಗೂ ಚಾಲ್ತಿಯಲ್ಲಿದೆ. ದೀಕ್ಷೆ ಪಡೆದ ತಳ ಸಮುದಾಯದವರು ವೈಷ್ಣವರೂ ಆಗದೆ, ಇತ್ತ ಜಾತಿಯ ಸಂಪ್ರದಾಯದಲ್ಲು ಬದುಕಲಾಗದೆ, ಇಂದಿಗೂ ಶಂಖ, ಜಾಗಟೆಗಳನ್ನು ಹಿಡಿದು ಬೀದಿ-ಬೀದಿ ತಿರುಗುವಂತಹ ಸ್ಥಿತಿ ಉಂಟಾಗಿದೆ. ಇದು ಮೈಸೂರು, ಹಾಸನ,ಮಂಡ್ಯ ಭಾಗದಲ್ಲಿ ಇಂತಹ ದಾಸ ಪರಂಪರೆ ಪ್ರಸ್ತುತದಲ್ಲಿಯೂ ಸಾಗುತ್ತಿದೆ.
ರಮಾನುಜಚಾರ್ಯರ ನಂತರ ಮತ್ತೆ ತಳ ಸಮುದಾಯದವರಿಗೆ ವೈಷ್ಣವ ದೀಕ್ಷೆ ಕೊಡಬೇಕು ಎಂದು ತುದಿಗಾಲಿನಲ್ಲಿ ನಿಂತಿರುವವರು ಪೇಜಾವರಶ್ರೀಗಳು. ದಾಸ ಗುಲಾಮ ಪರಂಪರೆಯನ್ನು ಮತ್ತೆ ಕಟ್ಟಬೇಕೆಂದು ಹೊರಟಿರುವ ಇವರನ್ನು ಆಧುನಿಕ ರಮಾನುಜಚಾರ್ಯರು ಎಂದು ಕರೆಯಬೇಕಾಗುತ್ತದೆ. ಈಗಂತೂ ಪೇಜಾವರರು ದೀಕ್ಷೆ ಕೊಡುವುದರಲ್ಲಿ ಪ್ರಖ್ಯಾತರಾಗಿ ಹೋಗಿದ್ದಾರೆ. ಕ್ರಾಂತಿಕಾರಿ ಬಸವಣ್ಣನವರು ಲಿಂಗ ದೀಕ್ಷೆ ನೀಡಲಿಲ್ಲವೇ? ಆದ್ದರಿಂದ ನಾನು ದೀಕ್ಷೆ ಕೊಡುವುದರಲ್ಲಿ ತಪ್ಪೇನಿದೆ? ಎಂದು ವಾದಕ್ಕೆ ನಿಂತಿದ್ದಾರೆ. ಬಸವಣ್ಣನವರ ಲಿಂಗ ದೀಕ್ಷೆಗೂ, ಪೇಜಾವರರ ವೈಷ್ಣವ ದೀಕ್ಷೆಗೂ ತುಂಬಾ ವ್ಯತ್ಯಾಸಗಳಿವೆ. ಬಸವಣ್ಣನವರು ಲಿಂಗ ದೀಕ್ಷೆ ನೀಡುವುದರ ಮೂಲಕ ಸಮಾನತೆ ತರಲು ಹವಣಿಸಿದವರು. ಅವರ ಅನುಭವ ಮಂಟಪದಲ್ಲಿ ಪ್ರತಿಯೊಂದು ಜಾತಿಯವರಿಗೂ ಆದ್ಯತೆ ಇತ್ತು. ನಿಮ್ಮ ಮಠದಲ್ಲಿ ಎಷ್ಟು ಜಾತಿಯವರಿಗೆ ಆದ್ಯತೆ ನೀಡಿದ್ದೀರಿ? ಉಡುಪಿ ಮಠಕ್ಕೆ ಮಠಾದೀಶರಾಗಿ ಅಸ್ಪ್ರಶ್ಯರನ್ನು ನೇಮಿಸಲು ನಿಮ್ಮಿಂದ ಸಾಧ್ಯವೇ? ಇದಕ್ಕೆ ನೀವು ಒಪ್ಪುತ್ತೀರಾ? ಬ್ರಾಹ್ಮಣರೊಡನೆ ಸಹಬೋಜನ ಮಾಡುವುದಿಲ್ಲ ಎಂದು ಹೇಳುವ ನೀವು ಅಸ್ಪ್ರಶ್ಯರನ್ನು ಮಠಾಧಿಪತಿಯನ್ನಾಗಿ ಮಾಡುವುದುಂಟೆ? ಆದರೆ ಬಸವಣ್ಣನವರು ಕಟ್ಟಿದ ಶರಣ ಪರಂಪರೆಯಲ್ಲಿ ಪ್ರತಿಯೊಂದು ಸಮುದಾಯ ಗದ್ದುಗೆಯಲ್ಲಿತ್ತು. ಅಷ್ಟು ಸಾಲದೇ ಅಂತರ್ಜಾತಿ ವಿವಾಹಕ್ಕು ಕೈ ಹಾಕಿ ಯಶಸ್ವಿಯಾದ ಏಕೈಕ ವ್ಯಕ್ತಿ ಎಂದರೆ ಅದು ಬಸವಣ್ಣ. ಅಸ್ಪ್ರಶ್ಯ ಹರಳಯ್ಯನಿಗೂ ಮತ್ತು ಬ್ರಾಹ್ಮಣ ಮಧುವರಸನ ಮಗಳಿಗೂ ಅಂತರ್ಜಾತಿ ವಿವಾಹ ಮಾಡಿಸಿ ಸಮಾನತೆ ತರಲು ಹೊರಟಿದ್ದು ಬಸವ ಮಾರ್ಗ. ವೈಷ್ಣವ ದೀಕ್ಷೆ ಕೊಡುತ್ತೇನೆ ಎಂದು ಹೇಳಿಕೊಳ್ಳುತ್ತೀರಲ್ಲ, ಹಾಗಾದರೆ ನಿಮ್ಮದು ಯಾವ ಮಾರ್ಗ? ದಾಸ ಮಾರ್ಗ ಎಂದು ಕರೆಯಬೇಕೇ? ನಿಮ್ಮಿಂದ ಇಂತಹ ಒಂದು ಅಂತರ್ಜಾತಿ ವಿವಾಹ ಮಾಡಿಸಲು ಸಾಧ್ಯವೇ? ಅಸ್ಪ್ರಶ್ಯರಿಗೆ ಬ್ರಾಹ್ಮಣರ ಮಗಳನ್ನು ಕೊಟ್ಟು ಮದುವೆ ಮಾಡಿ ಕೊಡುವಿರಾ? ಹೋಗಲಿ ನಿಮ್ಮವರೊಡನೆ ಉಂಡುಟ್ಟು ಮಲಗಬಹುದೇ? ಸಹಪಂಕ್ತಿ ಭೋಜನ ಮಾಡಬಹುದೇ? ಇಷ್ಟೇಲ್ಲಾ ನಿಮ್ಮ ಕೈಯಲ್ಲಿ ಸಾದ್ಯವಾಗುತ್ತದೆಯೆ? ಇದು ಸಾಧ್ಯವಾಗಿಲ್ಲ ಎಂದರೆ ಯಾರಿಗೆ ಬೇಕು ನಿಮ್ಮ ದೀಕ್ಷೆ? ಬಸವಣ್ಣನವರು ಅಂದಿನ ಕಾಲಘಟ್ಟದಲ್ಲಿಯೇ ಅಸ್ಪ್ರಶ್ಯರಿಗೆ ಅಕ್ಷರ ಕೊಟ್ಟ ಮಹಾನ್ ಪುರುಷ. ನೀವು ದಲಿತರ ಉದ್ದಾರಕ್ಕಾಗಿ ಏನು ಮಾಡಿದ್ದೀರಿ? ಎಷ್ಟು ಜನರಿಗೆ ನಿಮ್ಮ ಮಠದಿಂದ ವಿಧ್ಯಾಧಾನ ಮಾಡಿದ್ದೀರಿ? ಲೋಕ ಕಲ್ಯಾಣಕ್ಕಾಗಿ ನಿಮ್ಮ ಕೊಡುಗೆ ಏನು? ಧರ್ಮಾಂಧಕಾರದಲ್ಲಿ ಮುಳುಗಿರುವ ನಿಮ್ಮ ಚಿಂತನೆ ಈ ಸಮಾಜಕ್ಕೆ ಮಾರಕವೇ ಹೊರತು ಪೂರಕವಲ್ಲ.
ಯಾವುದೇ ಒಂದು ಧರ್ಮ ಮಾನವೀಯ ಮೌಲ್ಯಗಳನ್ನು ಒಳಗೊಂಡಿರಬೇಕು. ನಿಮ್ಮ ಧರ್ಮದಲ್ಲಿ ಅಂತಹ ಯಾವ ಮೌಲ್ಯಗಳನ್ನು ನಾನು ಇದುವರೆವಿಗೂ ಕಾಣಲಿಕ್ಕಾಗಿಲ್ಲ. ಗುಡಿ, ಚರ್ಚು,ಮಸೀದಿ, ಮಥ ಮೌಡ್ಯಗಳ ಬಿಟ್ಟು ಹೊರಬನ್ನಿ ಎಂದು ವಿಶ್ವ ಮಾನವ ಸಂದೇಶ ಸಾರಿದ ಕುವೆಂಪುರವರಂತಹ ಮಾನವೀಯ ಗುನವನ್ನು ನಿಮ್ಮ ಧರ್ಮದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಒಂದು ಸಲ ಮಠಾಧಿಪತಿ ಸ್ಥಾನದಿಂದ ಕೆಳಗಿಳಿದು ಧರ್ಮಾಂಧಕಾರದ ಕಣ್ಣು ತೆರೆದು ನೋಡಿ ನಿಮಗೆ ಸಮಾಜ ಎಂದರೇನು? ಮಾನವೀಯ ಮೌಲ್ಯಗಳೇನು ಎಂದು ತಿಳಿಯುತ್ತದೆ. ಎಂಜಲು ಎಲೆಯ ಮೇಲೆ ಉರುಳುವ ಅನಿಷ್ಟ ಪದ್ದತಿಯನ್ನು ಸಮರ್ಥಿಸಿ ಕೊಳ್ಳುವ ನಿಮ್ಮಂಥವರಿಗೆ ಬಹುಶಃ ಮೌಲ್ಯಗಳ ಅರ್ಥವೇ ತಿಳಿದಿಲ್ಲವೆಂದೆನಿಸುತ್ತದೆ.
ಹಾರೋಹಳ್ಳಿ ರವೀಂದ್ರ
Comments
ಉ: ಗುಲಾಮ ಪರಂಪರೆಯ ಪ್ರತೀಕವೇ ವೈಷ್ಣವ ದೀಕ್ಷೆ
>>>. ಆ ಸಂಧರ್ಭದಲ್ಲಿ ವಿಷ್ಣುವರ್ಧನನು ಎಲ್ಲವನ್ನು ಬಿಟ್ಟು ವೈಷ್ಣವ ದೀಕ್ಷೆ ಪಡೆದ ಕಾರಣಕ್ಕಾಗಿಯೆ ಅವರಿಗೆ ಬಿಟ್ಟಿದೇವ ಎಂದು ಹೆಸರು ಬಂದಿದ್ದು.
ಕ್ಷಮಿಸಿ , ನೀವು ಬರೆದ ಈ ಮಾಹಿತಿ ತಪ್ಪಾಗಿದೆ.
In reply to ಉ: ಗುಲಾಮ ಪರಂಪರೆಯ ಪ್ರತೀಕವೇ ವೈಷ್ಣವ ದೀಕ್ಷೆ by hamsanandi
ಉ: ಗುಲಾಮ ಪರಂಪರೆಯ ಪ್ರತೀಕವೇ ವೈಷ್ಣವ ದೀಕ್ಷೆ
ಜೈನ ಪರಂಪರೆಯ ಅನುಯಾಯಿಯಾಗಿದ್ದ ಬಿಟ್ಟಿದೇವನು ವಿಷ್ಣುಭಕ್ತನಾಗಿ ವಿಷ್ಣುವರ್ಧನನಾದ ಎಂದು ಎಲ್ಲ ಕಡೆಯು ಓದಿರುವೆ!
ಉ: ಗುಲಾಮ ಪರಂಪರೆಯ ಪ್ರತೀಕವೇ ವೈಷ್ಣವ ದೀಕ್ಷೆ
ರವೀಂದ್ರ ಅವರೆ,
ನಿಮ್ಮ ಅವಗಾಹನೆಗೆ ಕೆಲವೊಂದು ವಿಷಯಗಳನ್ನು ತರುತ್ತಿದ್ದೇನೆ ಅದರ ಮೇಲೆ ರಾಮಾನುಜಾಚಾರ್ಯರ ಕುರಿತಾದ ವಿಶ್ಲೇಷಣೆ ನಿಮ್ಮ ವಿವೇಚನೆಗೆ ಬಿಟ್ಟದ್ದು.
ರಾಮಾನುಜಚಾರ್ಯರು ಸ್ನಾನಕ್ಕೆ ಹೊರಡುವಾಗ ಒಬ್ಬ ಬ್ರಾಹ್ಮಣ ಶಿಷ್ಯನ ಸಹಾಯ ಪಡೆಯುತ್ತಿದ್ದರಂತೆ; ಆಮೇಲೆ ಸ್ನಾನ ಮಾಡಿ ಹಿಂದಿರುಗುವಾಗ ಒಬ್ಬ ಶೂದ್ರ (ಬಹುಶಃ ನೀವು ಪ್ರಸ್ತಾಪಿಸಿರುವ ತಳ ಸಮುದಾಯದ) ಶಿಷ್ಯನ ಹೆಗಲಿನ ಮೇಲೆ ಆಶ್ರಯ ಪಡೆದು ಪೂಜೆಗೆ ನಡೆದು ಹೋಗುತ್ತಿದ್ದರಂತೆ. ಇದರ ಬಗೆಗೆ ಯಾರೋ ಒಬ್ಬರು ಆಕ್ಷೇಪಣೆ ಎತ್ತಿದಾಗ ಶ್ರೀ ರಾಮಾನುಜರು, ದೈಹಿಕ ಪರಿಶುದ್ಧತೆಗಾಗಿ ಮೊದಲು ಬ್ರಾಹ್ಮಣನನ್ನು ಅವಲಂಬಿಸುತ್ತೇನೆ ಆಮೇಲೆ ಮಾನಸಿಕ ಪರಿಶುದ್ಧತೆಗಾಗಿ ಒಬ್ಬ ಶೂದ್ರನ ಮೇಲೆ ಅವಲಂಬಿಸುತ್ತೇನೆ ಎಂದು ಹೇಳುತ್ತಾರೆ. ಖಂಡಿತವಾಗಿ ರಾಮಾನುಜರಿಗೆ ನೀವು ಹೇಳವಂತಹ ಕೀಳು ಮಟ್ಟದ ಆಲೋಚನೆ ಇರಲಿಲ್ಲ; ಆದರೆ ನೀವು ಪ್ರಸ್ತಾಪಿಸಿರುವ ಭೇದ ಭಾವಗಳು ಕಾಲಾನಂತರದಲ್ಲಿ ಹುಟ್ಟಿರಬೇಕು. ಅದೇ ರೀತಿ ಬಸವಣ್ಣನವರು ಎಲ್ಲಾ ವಿಧದ ಜಾತಿಗಳನ್ನು ಒಂದುಗೂಡಿಸಲು ಪ್ರಯತ್ನಿಸಿದರು. ಆದರೆ ಇಂದು ಲಿಂಗಾಯಿತ ಜಾತಿಯಲ್ಲಿ ಅವರ ಪ್ರಕಾರ ಧರ್ಮದಲ್ಲಿ ನೂರಾರು ಉಪಜಾತಿಗಳಿವೆ. ಹಳೇ ಮೈಸೂರು ಪ್ರಾಂತದವರಾದ ನಿಮಗೆ ಇದರ ಅರಿವಿಲ್ಲದೇ ಇರಬಹುದು. ಆದರೆ ಉತ್ತರ ಕರ್ನಾಟಕಕ್ಕೆ ಹೋಗಿ ನೋಡಿದರೆ ಅವರಲ್ಲಿರುವ ಉಪಜಾತಿಗಳು, ಉಪ-ಉಪಜಾತಿಗಳ ಅರಿವಾಗುತ್ತದೆ. ಅದನ್ನು ನೋಡಿ ಇದ್ದ ಕೆಲವೇ ಜಾತಿಗಳಿಂದ ಸಮಾಧಾನ ಹೊಂದದ ಬಸವಣ್ಣ ಸಾವಿರಾರು ಜಾತಿಗಳನ್ನು ಹುಟ್ಟಿಹಾಕಿದ ಎಂದರೆ ಹೇಗೆ ತಪ್ಪಾಗುತ್ತದೆಯೋ ಅದೇ ವಿಧವಾಗಿ ರಾಮಾನುಜಾಚಾರ್ಯರನ್ನು ದೂಷಿಸುವುದು ತಪ್ಪಾಗುತ್ತದೆ. ಅವರ ಮೂಲ ಉದ್ದೇಶ ಖಂಡಿತಾ ಕೆಳ ಜಾತಿಯವರನ್ನು ದಾಸರನ್ನಾಗಿ ಮಾಡಿಕೊಳ್ಳಬೇಕೆನ್ನುವುದಾಗಿರಲಿಲ್ಲ. ಶೂದ್ರನಾದ ಕಾಂಚೀಪೂರ್ಣನಿಂದಲೇ ಧರ್ಮೋಪದೇಶ ಪಡೆದ ರಾಮಾನುಜರು ಅವರನ್ನು ಕೀಳಾಗಿ ಕಂಡರೆಂದರೆ ಖಂಡಿತಾ ತಪ್ಪಾಗುತ್ತದೆ. ಆಗಿನ ಕಾಲದಲ್ಲಿ ಶೂದ್ರನಿಗೆ ಬಡಿಸಿ ಉಳಿದ ಆಹಾರವನ್ನು ಬ್ರಾಹ್ಮಣರೂ ಸೇವಿಸುವುದೂ ಸಹ ಘೋರ ಅಪಚಾರವೆಂದು ಪರಿಗಣಿತವಾಗಿದ್ದ ಕಾಲದಲ್ಲಿ ಅವರು ಆ ಶೂದ್ರ ಗುರುಗಳಿಗೆ ಬಡಿಸಿ ಉಳಿಸಿದ ಆಹಾರವನ್ನು ತಿನ್ನಲಪೇಕ್ಷಿಸುತ್ತಾರೆ. ಆದರೆ ಆ ಶೂದ್ರ ಗುರುಗಳೇ ಇವರ ಉಪಾಯವನ್ನರಿತು ಇದರಿಂದ ತಪ್ಪಿಸಿಕೊಳ್ಳುತ್ತಾರೆ, ಅದು ಬೇರೆ ವಿಷಯ. ಆಗಿನ ಕಾಲದಲ್ಲಿ ವೈಷ್ಣವ ದೀಕ್ಷೆ ಪಡೆದವರ ಸ್ಥಿತಿ ತ್ರಿಶಂಕು ಸ್ಥಿತಿ ಆಗಿರಬಹುದು, ಆದರೆ ಈಗಿನ ಕಾಲದಲ್ಲಿ ಜಾತಿ ನಿಯಮವನ್ನು ಅನುಸರಿಸುವವರು ಎಲ್ಲಿದ್ದಾರೆ ಒಂದು ವೇಳೆ ಅನುಸರಿಸಿದರೂ ಜಾತಿ ಬಹಿಷ್ಕಾರಕ್ಕೆ ಆಸ್ಪದವಿಲ್ಲ. ಹಾಗಿರುವಾಗ ಪೇಜಾವರ ಶ್ರೀಗಳಿಂದ ವೈಷ್ಣವ ದೀಕ್ಷೆಯನ್ನು ಪಡೆದಾಕ್ಷಣ ಅವರು ಜಾತಿಭ್ರಷ್ಟರಾಗುತ್ತಾರೆಂದು ಮತ್ತು ಅವರು ಅವರ ಗುಲಾಮರಾಗುತ್ತಾರೆಂದು ಏಕೆ ಭಾವಿಸಬೇಕು? ವೈಷ್ಣವ ಧರ್ಮವನ್ನು ಕುರಿತು ತಿಳಿದುಕೊಳ್ಳಲು ಶೂದ್ರರಿಗೆ ಇದೊಂದು ಒಳ್ಳೆಯ ಅವಕಾಶ, ಹೀಗೆ ಮಾತನಾಡಿ ಅವರನ್ನು ಅದರಿಂದ ಅವಕಾಶ ವಂಚಿತರಾಗಿ ಮಾಡಬೇಡಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ