ನೂರು ಶತಕಗಳ ಸರದಾರ

ನೂರು ಶತಕಗಳ ಸರದಾರ

ಕ್ರಿಕೆಟ್ಟಿನಲ್ಲಿ ಪ್ರತಿ ಬಾರಿಯೂ ಚೆಂಡಿಗೆ ವಿಕೆಟ್ಟು ಉರುಳಿದ್ದು ನೋಡಿ ಅಭ್ಯಾಸ. ಆದರೆ ಈ ಬಾರಿ ಒಂದು ವಿಶಿಷ್ಠ ವೈಚಿತ್ರ ನಡೆದು ಹೋಯ್ತು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ. ಕೈಯಲ್ಲಿ ಚೆಂಡಿಲ್ಲದೆ, ಬರಿ ಮಾತಿನ ಮೂಲಕವೆ ಇಡಿ ಭಾರತದ ಹಾಗೂ ವಿಶ್ವದ ಮೂಲೆ ಮೂಲೆಯ ಅಸಂಖ್ಯಾತ ಅಭಿಮಾನಿಗಳೆಲ್ಲರ ವಿಕೆಟ್ಟನ್ನು ಒಂದೆ ಬಾರಿಗೆ ಉರುಳಿಸಿಬಿಟ್ಟರು, ಅಂದು ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿ ವಿದಾಯ ಹೇಳಿದ ಸಚಿನ್ ರಮೇಶ್ ತೆಂಡೂಲ್ಕರ. ಆಯುಧಗಳಿಲ್ಲದೆ, ರಕ್ತಪಾತವಿಲ್ಲದೆ ಯುದ್ಧ ಗೆಲ್ಲುವುದೆನ್ನುತ್ತಾರಲ್ಲ, ಬಹುಶಃ ಅದು ಈ ರೀತಿಯ ಗೆಲುವಿಗೆ ಇರಬೇಕು. ತಮ್ಮ ವೈಯಕ್ತಿಕ ನಿವೃತ್ತಿಯನ್ನು ಇಡೀ ದೇಶವೊಂದರ ಹಬ್ಬವಾಗಿಸಿ, ಒಂದು ದಿನ ಸಾಲದಂತೆ ನವರಾತ್ರಿಯ ಹಾಗೆ ಆಚರಿಸುವಂತೆ ಮೋಡಿ ಮಾಡಿದ ಈ ಜಾದುಗಾರನ ರೀತಿಯೆ ಅನನ್ಯ.
.
ನೆನಪಿಡಿ, ಇದುವರೆವಿಗೂ ಇಡೀ ಪ್ರಪಂಚದಲ್ಲಿ ಯಾವ ಕ್ರಿಕೆಟಿಗನಿಗೂ ಇಂತಹ ಅಭೂತಪೂರ್ವ ಬೀಳ್ಕೊಡುಗೆ ಸಿಕ್ಕಿರಲಿಲ್ಲ; ಪ್ರಾಯಶಃ ಇನ್ಯಾರಿಗೂ ಸಿಗುವುದೂ ಇಲ್ಲ. ಇಡೀ ದೇಶದೆಲ್ಲ ಅಭಿಮಾನಿಗಳು ಏಕಸ್ವರದಿಂದ ಪ್ರತ್ಯಕ್ಷವಾಗಿಯೊ, ಪರೋಕ್ಷವಾಗಿಯೊ ಪಾಲ್ಗೊಂಡು ಇಡಿ ವಿದಾಯದ ಪ್ರಕ್ರಿಯೆಯನ್ನೆ 'ನ ಭೂತೋ, ನ ಭವಿಷ್ಯತೇ..' ಎನಿಸುವಂತೆ ದಿಗ್ಭ್ರಮೆ ಹುಟ್ಟಿಸುವ ಮಟ್ಟದಲ್ಲಿ ಆಚರಿಸಿದ್ದು ಭಾರತವಿರಲಿ, ಹೊರಗಿನ ಪ್ರಪಂಚಕ್ಕೂ ಸೋಜಿಗ ಹುಟ್ಟಿಸಿರಲಿಕ್ಕೆ ಸಾಕು. ಇದೇನು ನಿವೃತ್ತಿಯಾಗುವ ವಿಷಾದ, ಖೇದದ ಬದಲು ಉತ್ಸವ, ಮೆರವಣಿಗೆಯ ಉರವಣಿ ಸಾಗುತ್ತಿದೆಯಲ್ಲ ಎಂದು ಅಚ್ಚರಿಪಟ್ಟಿರಲೂಬಹುದು. ಆದೆ ಗಳಿಗೆಯಲ್ಲಿ ಪ್ರತಿಯೊಬ್ಬ ಕ್ರಿಕೆಟ್ಟಿಗನ ಮನದಲ್ಲಿ ಈರ್ಷೆಯ ಕುಡಿಯನ್ನು ಹುಟ್ಟು ಹಾಕಿರಲೂಬಹುದು - ತಾವಾರೂ ಸಾಧಿಸಲಾಗದ ಅಪೂರ್ವ, ಅಪರೂಪದ ಸಾಧನೆಗಳ ಸರದಾರನಿಗೆ ಸಿಗುತ್ತಿರುವ ಪ್ರೀತಿ, ವಿಶ್ವಾಸ, ಆದರಗಳ ಪ್ರವಾಹವನ್ನು ಕಂಡು. ಅಷ್ಟೇಕೆ, ಎಷ್ಟೋ ಜನ ರಾಜಕಾರಣಿಗಳಿಗನಿಸಿರಬಹುದು - ತಾವೆಂದಾದರೂ ಈ ರೀತಿಯ ವಿವಾದಾತೀತ ವಾತಾವರಣದಲ್ಲಿ ಈ ರೀತಿಯ ಏಕಧ್ವನಿಯ , ಅವಿರೋಧಿ ಬೆಂಬಲಿಗರ ನಡುವೆ ಇಂತಹ ಸಭೆ ನಡೆಸಲು ಸಾಧ್ಯವೆ ಎಂದು. ಸಚಿನ್ ಹೇಳಿದಂತೆ ಅದೊಂದು ಅದ್ಭುತ ಕನಸು - ನನಸಾದ ಕನಸು. ಮಾತ್ರವಲ್ಲ, ಅದನ್ನು ನೋಡುತ್ತಿದ್ದ ಲಕ್ಷಾಂತರ ಕಣ್ಣುಗಳಲ್ಲಿ ಆ ಸಾಧನೆಯ ಹಾದಿಯಲ್ಲಿ ತಾವೂ ಒಂದೂ ಕೈ ನೋಡಿ, ಹೆಮ್ಮರವಾಗಲ್ಲದಿದ್ದರೂ , ಗರಿಕೆ ಹುಲ್ಲಾದರೂ ಆಗಬೇಕೆಂಬ ಹಂಬಲ, ಛಲ ಹುಟ್ಟಿಸಿರಬಹುದಾದ ಗಳಿಗೆ. ಆ ಗಳಿಗೆಯಿಂದ ಇನ್ನು ಅದೆಷ್ಟು ತೆಂಡೂಲ್ಕರರು ಹುಟ್ಟಿ ಬರಲಿದ್ದಾರೊ, ಕಾಲವೆ ಹೇಳಬೇಕು.
.
ಆ ಕಡೆಯ ನಿಮಿಷಗಳಲ್ಲಿ ಅಷ್ಟೆಲ್ಲ ಮಾನಸಿಕ ಸಿದ್ದತೆಯ ನಡುವೆಯೂ, ತಾನಿಷ್ಟು ಪ್ರೀತಿಸಿದ ಜೀವಕ್ಕೆ ಜೀವವಾದ ಆಟದಿಂದ ತಾನು ನಿವೃತ್ತನಾಗಬೇಕಲ್ಲ, ದೇಶವನ್ನು ಪ್ರತಿನಿಧಿಸುವ ಕಾಯಕದಿಂದ ಹೊರತಾಗಿಸಿಕೊಳ್ಳಬೇಕಲ್ಲಾ ಎಂಬ ನೋವು ಭಾವಾತ್ಮಕ ಕಂಬನಿಯ ರೂಪ ತಾಳಿ, ಪದಗಳಾಗಿ ಹೊಮ್ಮಿದ್ದರಲ್ಲಿ ಅತಿಶಯವೇನೂ ಇಲ್ಲ. ನಿಜ ಹೇಳುವುದಾದರೆ, ಈಗ ಸಚಿನ್ ಸ್ಥಾನ ತುಂಬಲು ಸಾಲುಸಾಲು ಯುವಕರ ದಂಡೆ ಇದೆ. ಆ ದೃಷ್ಟಿಯಿಂದ ಸ್ವತಃ ಸಚಿನ್ ಕೂಡ ನಿರಾಳವಾಗಿ ಸರಿದು, ಆರಾಮವಾಗಿ ವೀಕ್ಷಿಸಬಹುದು ಮುಂದಿನ ಪೀಳಿಗೆಯ ಕಾಣಿಕೆ, ಕಾರ್ಯ ಚಟುವಟಿಕೆಯನ್ನ. ಆದರೆ ನಲವತ್ತಕ್ಕೆ ನಿವೃತ್ತಿಯಾದ ಸಚಿನ್ ಅದು ಹೇಗೆ ಕ್ರಿಕೆಟ್ ರಹಿತ ಜೀವನಕ್ಕೆ ಹೊಂದಿಕೊಳ್ಳಬಲ್ಲ, ಮತ್ತು ಹಾಸು ಬಿದ್ದಿರುವ ಉಳಿದ ಸಮಯವನ್ನು ಹೇಗೆ ದೂಡಬಲ್ಲ ಎಂಬುದು ಕುತೂಹಲಕಾರಿ ವಿಷಯ - ಯಾಕೆಂದರೆ ನಮ್ಮಲ್ಲೆಷ್ಟೊ ಜನರ ಸ್ವತಂತ್ರ ಜೀವನ ನಿಜವಾದ ಅರ್ಥದಲ್ಲಿ ಆರಂಭವಾಗುವುದೆ ನಲವತ್ತರ ನಂತರ. ಸದ್ಯಕ್ಕೆ ಆತ್ಮ ಕಥನದ ಕುರಿತು ಮಾತಾಡಿರುವ ಸಚಿನ್, ಪ್ರಾಯಶಃ ಅದರತ್ತ ಮೊದಲು ಗಮನ ಹರಿಸಿ ಬ್ಯಾಟು, ಬಾಲು, ಮೈದಾನಗಳಿಲ್ಲದ ದಿನಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಬಹುದು.
.
ಅದು ಹೇಗಾದರೂ ಸರಿ - ಇಪ್ಪತ್ನಾಲ್ಕು ವರ್ಷದ ಸುಧೀರ್ಘ ಕ್ರಿಕೆಟ್ ಒಡನಾಟದಲ್ಲಿ ಸಚಿನ್ ಈ ದೇಶದ ಕ್ರಿಕೆಟ್ಟಿಗೆ ಕೊಟ್ಟ ಕಾಣಿಕೆ ಅಪಾರ. ಬಹುಶಃ ಮುಂದೆ ಯಾರೂ ಅಷ್ಟು ಧೀರ್ಘಕಾಲ ಆಡಲು ಸಾಧ್ಯವೆ ಆಗದಿರಬಹುದು. ಅಂತೆಯೆ, ನಮ್ಮ ದೇಶದ ಎಷ್ಟೊ ಒಡಕಲು ದನಿ, ಸುದ್ಧಿಗಳ ನಡುವೆ ಆಶಾಕಿರಣದಂತೆ ಕಾಣಿಸಿಕೊಂಡು, ಜಗತ್ತಿನ ಭೂಪಠದಲ್ಲಿ ನಾವು ತಲೆಯೆತ್ತಿ ನಿಲ್ಲಲು ಮತ್ತೊಂದು ಕಾರಣವಾದವನು. ಆ ಸಾಧನೆಯ ನೆನಪು ಮತ್ತು ಕೃತಜ್ಞತೆಯ ಕುರುಹಾಗಿ ಆ ಕೊನೆಯ ಗಳಿಗೆಗಳನ್ನು ಸೆರೆಹಿಡಿಯಲೆತ್ನಿಸಿದ ಯತ್ನ ಈ ಕವನ - ಸಚಿನ್ ಸಾಧನೆಗೆ ಸಮರ್ಪಿತ.
.
ಮರೆತೆ ಒಂದೆ ಹೆಸರು, ಅದು ನಿನ್ನದೆ!
_______________________
.
ನೂರು ಶತಕಗಳಾ ಸರದಾರ
ಪಕ್ಕ ಸರಿದೆ, ಮತ್ತೆ ಪರಿಹಾರ?
ನಿವೃತ್ತಿ ನಿನಗೆ ಹಾಕಿತೆ ಹಾರ
ನಲವತ್ತಕ್ಕೆ ನೀ ಗಳಿಸಿ ಅಪಾರ ||
.
ಎಳೆಯನಿಗಿರಲಿಲ್ಲ ಭಾರತರತ್ನ
ನಿವಾರಿಸೀ ಕೊರತೆ ನಿನ್ನ ಯತ್ನ
ನಿನ್ನಿಂದಲೆ ಯುವ ಜಗಕೆ ಹೆಮ್ಮೆ
ಸಾಧಿಸಲುಳಿದಿದ್ದೇ ಬರಿ ಸೊನ್ನೆ ||
.
ಬೀಳ್ಕೊಡುಗೆ ನಡೆದು ನವರಾತ್ರಿ
ಹಬ್ಬದಂತೆ ಆಚರಿಸಿದರೆ ಖಾತ್ರಿ
ಇಡೀ ದೇಶಾ ಅತ್ತಿದ್ದು ಯಾವತ್ತು?
ಒಬ್ಬನಿಗಾಗಿ ಮಿಡಿದಾ ಈ ಹೊತ್ತು ||
.
ಕುಹುಕವಿಲ್ಲದ ವಿದಾಯ ಯಾತ್ರೆ
ಹೊಗಳಿಕೆಯಷ್ಟೆ ಬೇರಿಲ್ಲದ ಜಾತ್ರೆ
ಯಾವ ನೇತಾರಗೆ ಕಂಡ ನೆನಪಿಲ್ಲ
ಇಡೀ ನಾಡಿನ ಜನರೇ ಸೇರಿದ್ದರಲ್ಲ ||
.
ತಂಡದ ನಡುವಿನಲಿ ಗೌರವ ರಕ್ಷೆ
ನಿವೃತ್ತಿ ರನ್ನಲು ಗೌರವಾನ್ವಿತ ಕಕ್ಷೆ
ತಲೆಯೆತ್ತಿ ಆಟ ಆಡಿದ ಮೈದಾನ
ತಲೆ ತಗ್ಗಿ ಕಂಬನಿ, ನಡೆದೆ ನಿಧಾನ ||
.
ನಿನ ರಣರಂಗ ಪಿಚ್ಚು, ಅಚ್ಚುಮೆಚ್ಚು
ಕಣ್ಣಿಗೊತ್ತಿಕೊಂಡಾಗ ಜನಕು ಹುಚ್ಚು
ಅಳದಿದ್ದವರೆಲ್ಲ ಅತ್ತರಲ್ಲವೆ ಅಂದು
ಅರಿವಾಯ್ತೆ ಆಗ ನೀನಿಲ್ಲಾ ಮುಂದು ||
.
ಮೊದಲೆ ನುಡಿದೆ ನಿವೃತ್ತಿ ವಿಷಯ
ಹಬ್ಬದ ನೆಪದಲಿ ಮರೆಸೇ ಕಹಿಯ
ಕಿಲಾಡಿ ನೀನು ಮೈಮರೆಸಿಟ್ಟೆ ಬಿಟ್ಟೆ
ಆಚರಣೆ ಸಂಭ್ರಮದೆ ಕೈಕೊಟ್ಟೆಬಿಟ್ಟೆ ||
.
ಮಾತಾಡಿದೆ ಏನು, ಭಾಷಣ ಜೇನು
ಮಾತರಿಯ ನಾಚಿ ಮಾತಾಡಿದ್ದೇನು!
ಬಿಚ್ಚಿಟ್ಟಾ ಹೃದಯ ಒಳಗಿತ್ತೆ ಸಂಕಟ
ಧನ್ಯ ಕಡೆವರೆಗು, ಬಿಡಲಿಲ್ಲ ವೆಂಕಟ ||
.
ಮಾತಾ ಪಿತರೆಂದೆ, ಸತಿ ಸುತರೆಂದೆ
ಸಹಜಾತ ಕೆಳೆ ಗುರುಗೆಲ್ಲ ನಮಿಸಿದೆ
ಯಾರ ಬಿಟ್ಟಿಲ್ಲ ಎಲ್ಲರ ಹೆಸರು ಇದೆ
ಮರೆತೆ ಒಂದೆ ಹೆಸರು, ಅದು ನಿನ್ನದೆ ||
.
ಹಿಂದಿನವರೆಲ್ಲ ಬರೆದದ್ದು ಇತಿಹಾಸ
ನಿನ್ನ ಬರೆಯುತಲೆ ಚರಿತ್ರೆಗೆ ಸೊಗಸ
ಬೇಕಿರಲಿ ಬಿಡಲಿ ಕುರಿತಾಡುತ ನಿನ್ನ
ಭವಿತದಲೆಲ್ಲ ಪ್ರಸ್ತುತವಾಗಿ ಸ್ಪಂದನ ||
.
.
ಧನ್ಯವಾದಗಳೊಂದಿಗೆ

ನಾಗೇಶ ಮೈಸೂರು

Comments

Submitted by H A Patil Tue, 11/19/2013 - 18:54

ನಾಗೇಶ ಮೈಸೂರು ರವರಿಗೆ ವಂದನೆಗಳು
' ನೂರು ಶತಕಗಳ ಸರದಾರ ' ಒಂದು ಭಾವಪೂರ್ಣ ಬರಹ ಆತನ ನಿವೃತ್ತಿಯ ಬದುಕು ಯಶಸ್ಸಿನದಾಗಲಿ, ನಿಮ್ಮ ತುಂಬು ಹೃದಯದ ಭಾವ ಪೂರ್ಣ ಅನಿಸಿಕೆಗೆ ಧನ್ಯವಾದಗಳು.

Submitted by nageshamysore Wed, 11/20/2013 - 03:01

In reply to by H A Patil

ಪಾಟೀಲರೆ ನಮಸ್ಕಾರ, ಅವನ ವೃತ್ತಿ ಜೀವನವನ್ನು ನಿಭಾಯಿಸಿದ ಪರಿ ಗಮನಿಸಿದರೆ ನಿವೃತ್ತಿ ಜೀವನವನ್ನು ಅಷ್ಟೆ ಕುಶಲತೆಯಿಂದ ನಿಭಾಯಿಸಬಲ್ಲನೆನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವನಿಗಿಂತ ವಯಸಿನಲಿ ಹಿರಿಯಳಾದ ಪತ್ನಿಯ ಮಾರ್ಗದರ್ಶನವೂ ಜತೆ ಸೇರಿ ಸುಗಮ ನಿವೃತ್ತಿ ಜೀವನವಾಗಲೆಂದು ಹಾರೈಸೋಣ.

Submitted by ಗಣೇಶ Wed, 11/20/2013 - 00:00

ನಾಗೇಶರೆ,
-"...ತಮ್ಮ ವೈಯಕ್ತಿಕ ನಿವೃತ್ತಿಯನ್ನು ಇಡೀ ದೇಶವೊಂದರ ಹಬ್ಬವಾಗಿಸಿ, ಒಂದು ದಿನ ಸಾಲದಂತೆ ನವರಾತ್ರಿಯ ಹಾಗೆ ಆಚರಿಸುವಂತೆ ಮೋಡಿ ಮಾಡಿದ ಈ ಜಾದುಗಾರನ ರೀತಿಯೆ ಅನನ್ಯ." ಸಚಿನ್ ನಿವೃತ್ತಿ ಇಡೀ ದೇಶದ ಹಬ್ಬವಾಗಿತ್ತು. ಆ ದಿನದ ಪ್ರತಿ ಕ್ಷಣವನ್ನು ನಿಮ್ಮ ಕವನದಲ್ಲಿ ಸೆರೆಹಿಡಿದಿದ್ದೀರಿ.
ಪತ್ರಿಕೆಗಳು / ಟಿ.ವಿ ಚಾನಲ್‌ಗಳು ಈಗ ಪೇಜ್‌ಗಟ್ಟಲೆ/ಗಂಟೆಗಟ್ಟಲೆ ಒಂದನ್ನು ಮೀರಿಸುವಂತೆ ಮತ್ತೊಂದು ಸಚಿನ್‌ನ ಹೊಗಳುತ್ತಿವೆ.೩-೪ ವರ್ಷಗಳಿಂದ ಇದೇ ಚಾನಲ್‌ಗಳು, ಪತ್ರಿಕೆಗಳು ಸಚಿನ್ ನಿವೃತ್ತನಾಗಬೇಕು ಎಂದು ಬರೆಯುತ್ತಿದ್ದವು. ಆಗ ಎಲ್ಲಾದರೂ ನಿವೃತ್ತನಾಗುತ್ತಿದ್ದರೆ...
ನಾನೂ ಸಚಿನ್ ಬಗ್ಗೆ ಒಮ್ಮೆ ಬರೆದಿದ್ದೆ- http://sampada.net/blog/%E0%B2%97%E0%B2%A3%E0%B3%87%E0%B2%B6/08/01/2009/...

Submitted by nageshamysore Wed, 11/20/2013 - 03:01

In reply to by ಗಣೇಶ

ಗಣೇಶ್ ಜೀ,

ನನ್ನ ಸಚಿನ್ಗಿಂತ ನಿಮ್ಮ ಸಚ್ಚಿನ್ ಸೂಪರ್ ! ನೀವು ಸಚ್ಚಿನ್ ಪರವಾಗಿ 2009 ರಿಂದಲೆ ಬ್ಯಾಟು ಮಾಡುತ್ತಿದ್ದೀರಾ :-) ಅಂದಹಾಗೆ, ಈ ಇಡಿ ವಿದಾಯ ಸಂಭ್ರಮ ಕೂಡ ಮತ್ತೊಂದು ದಾಖಲೆಯೆಂದು ಕಾಣುತ್ತದೆ - ಬಹುಶಃ ಯಾರು ಮುರಿಯಲಾಗದೆ ಇರುವ ದಾಖಲೆಯೊ ಏನೊ! ದಾಖಲೆಗಳ ರಾಜನಿಗೆ ಆ ಸಮಾರಂಭ ಸಂಭ್ರಮವೂ ದಾಖಲೆಯಾಗಿದ್ದು ಸಮರ್ಪಕವೆ ಬಿಡಿ.

Submitted by H A Patil Wed, 11/20/2013 - 18:12

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ನೀವು ಕೊಟ್ಟ ಲಿಂಕ್ ತೆಗೆದು ನೋಡಿದೆ, 2009 ರಲ್ಲಿ ಬರೆದ ಲೇಖನವಾದರೂ ಅದರ ಆಶಯ ಮತ್ತು ಧೋರಣೆ ಇಷ್ಟವಾಯ್ತು. ಈ ಟೆಲಿವಿಜನ್ ಜಾಲಗಳ ಪ್ರಸಾರದ ಉತ್ಸಾಹ ನೋಡಿ ಒಂದು ಸಂದೇಹ ಉಂಟಾಗಿತ್ತು ಎಲ್ಲಿ ಈ ಜನ ಬಾತ್ ರೂಮ್ ವರೆಗೂ ಕ್ಯಾಮರಾ ಕೊಂಡೊಯ್ದು ತಮ್ಮ ಧನ್ಯತೆ ಮೆರೆಯುತ್ತಾರೋ ಎಂದು ದಿಗಿಲಾಗಿತ್ತು, ಅಲ್ಲಿಯ ವರೆಗೆ ಅವರ ಉತ್ಸಾಹ ಹೋಗಲಿಲ್ಲ ವೀಕ್ಷಕರಾದ ನಮ್ಮ ಪುಣ್ಯ. ನನಗೂ ಒಂದು ದೂರದ ಆಶೆಯಿತ್ತು ಸಚಿನ್, ಅರ್ಜುನ ಮತ್ತು ರಮೇಶ ( ಸಚಿನ ಮೊಮ್ಮಗ ) ಎಲ್ಲರೂ ಒಂದೇ ತಂಡದಲ್ಲಿ ಮೊದಲ ಮೂರು ಕ್ರಮಾಂಕಗಳಲ್ಲಿ ಆಡಬೇಕು, ದಾಖಲೆಗಳ ಮೇಲೆ ದಾಖಲೆ ಪೇರಿಸುತ್ತ ಹೋಗಬೇಕು. ಕಾಮೇಂಟೇಟರುಗಳಾದ ಗವಾಸ್ಕರ, ಶಾಸ್ತ್ರೀ, ಕಪಿಲ,, ಹರ್ಷ ಬೋಗಲೆ, ಸಿಧ್ದು, ಅಲೆನ್ ವಿಲ್ಕಿನ್ಸನ್, ಮ್ಯಾಥ್ಯೂ ಹೇಡನ್ ( ಹಿಂದೆ ಈತನೆ ಭಾರತೀಯ ಉಪ ಖಂಢಧ ಆಟಗಾರರು ದಾಖಲೆಗಾಗಿ ಆಡುತ್ತಾರೆ ಎಂದಿದ್ದ ಎಲ್ಲ ಐಪಿಎಲ್ ಮಹಿಮೆ ) ಎಲ್ಲ ಮಾಜಿ ಮತ್ತು ಹಾಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆಟಗಾರರು ಬಹು ಪರಾಕ ಹೇಳುತ್ತ ನ ಭೂತೋ ನ ಭವಿಷ್ಟಯತಿ ಎಂಬಂತೆ ಟಿವಿ ಚಾನಲ್ಗಳನ್ನು ಆಕ್ರಮಿಸಿಕೊಂಡು ತವಡು ಕುಟ್ಟುವುದು ಎಷ್ಟು ಸುಂದರ ವಾಗಿರುತ್ತಿತ್ತು, ಅದೆಲ್ಲ ತಪ್ಪಿ ಹೋಯಿತು ಎಂಬುದಕ್ಕೆ ವಿಷಾದವಿದೆ. ಚಿಂತೆ ಬೇಡ ಏನೇ ಆಗಲಿ ಹದಿನಾರು ವರ್ಷ ತುಂಬುವುದರೊಳಗೆ ಅರ್ಜುನ್ ಬರುತ್ತಾನೆ ಸಚಿನ್ ನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸುತ್ತಾನೆ, ಅದನ್ನು ಕಂಡು ಕೇಳಿ ಸವಿಯುವ ಸೌಭಾಗ್ಯ ನಮ್ಮೆಲ್ಲರದಾಗಲಿ, ಧನ್ಯವಾದಗಳು.