೧೬೨. ಲಲಿತಾ ಸಹಸ್ರನಾಮ ೭೧೬ರಿಂದ ೭೨೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೧೬ - ೭೨೦
Māyā माया (716)
೭೧೬. ಮಾಯಾ
ದೇವಿಯು ಮಾಯೆ ಅಥವಾ ಭ್ರಮೆಯಾಗಿದ್ದಾಳೆ. ಮಾಯಾ ಶಬ್ದವು ಮಾ ಎಂದರೆ ಅಳೆ ಎನ್ನುವ ಮೂಲ ಧಾತುವಿನಿಂದ ನಿಷ್ಪತ್ತಿಗೊಂಡಿದೆ. ಮಾಯಾ ಎಂದರೆ ’ಭ್ರಮೆ ಅಥವಾ ಭ್ರಾಂತಿ ಎನ್ನುವುದರೆಡೆಗೆ ಕೊಂಡೊಯ್ಯುವುದು’ ಎನ್ನುವ ಅರ್ಥವನ್ನೂ ಹೊಂದಿದೆ. ಬ್ರಹ್ಮವು ಅಳತೆಗೆ ನಿಲುಕದ್ದಾಗಿದೆ ಆದರೆ ಮಾಯೆಯ ಪ್ರಭಾವದಿಂದಾಗಿ ಬ್ರಹ್ಮವು ಅಳೆಯಬಹುದಾದ್ದೆನ್ನುವಂತೆ ಬಿಂಬಿತವಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ ಬ್ರಹ್ಮವು ದೇಶ ಮತ್ತು ಕಾಲಗಳಿಗೆ ಅತೀತವಾಗಿದೆ ಆದರೆ ಮಾಯೆಯ ಪ್ರಭಾವದಿಂದಾಗಿ ಅದು ದೇಶಕಾಲಗಳ ಪರಿಮಿತಿಗೆ ಒಳಪಟ್ಟಂತೆ ಗೋಚರಿಸುತ್ತದೆ. ಇದನ್ನೇ ಸುಲಭವಾಗಿ ಅರ್ಥಮಾಡಿಕೊಳ್ಳುವುದಕ್ಕೋಸ್ಕರ; ಬ್ರಹ್ಮವನ್ನು ಎರಡಾಗಿ ವಿಭಜಿಸಲಾಗಿದೆ - ಸಗುಣ (ಗುಣಗಳಿಂದ ಕೂಡಿರುವುದು) ಮತ್ತು ನಿರ್ಗುಣ (ಗುಣಗಳಿಲ್ಲದೇ ಇರುವುದು). ನಿರ್ಗುಣ ಬ್ರಹ್ಮವು ಮಾಯೆಯ ಸಾಂಗತ್ಯದಿಂದಾಗಿ ಸಗುಣ ಬ್ರಹ್ಮವಾಗುತ್ತದೆ. ಈ ಪ್ರಪಂಚದ ಗೋಚರಿಸುವಿಕೆಯು ಮಾಯೆಯ ಪ್ರಕ್ಷೇಪಣ(projection)ದಿಂದ ಉಂಟಾಗುತ್ತದೆ.
ವೇದಾಂತದ ದೃಷ್ಟಿಯಿಂದ ಅಸ್ತಿತ್ವದಲ್ಲಿರುವ ಎಲ್ಲಾ ವಸ್ತುಗಳಲ್ಲಿ ಪ್ರಜ್ಞೆಯು ಅತ್ಯಂತ ಸೂಕ್ಷ್ಮವಾದದ್ದು. ಶುದ್ಧ ಪ್ರಜ್ಞೆ ಅಥವಾ ಚೈತನ್ಯವು ಈ ಪ್ರಪಂಚದ ವಿಭಿನ್ನ ಅಸ್ತಿತ್ವಕ್ಕೆ ಮೂಲ ಕಾರಣವಾಗಿದೆ. ಈ ಎಲ್ಲಾ ವೈವಿಧ್ಯತೆಗಳು ಮಾಯೆಯು ನಾಮ ರೂಪಗಳನ್ನು ಒಂದರ ಮೇಲೆ ಮತ್ತೊಂದನ್ನು ಅದ್ಯಾರೋಪಿಸುವುದರಿಂದ (superimposition) ಉಂಟಾಗುತ್ತವೆ; ಇದು ಗೋಚರಿಸುವಿಕೆಯ ಮುಖ್ಯ ತತ್ವವಾಗಿದ್ದು ಇದು ವಾಸ್ತವವೂ ಅಲ್ಲ ಅಥವಾ ಅವಾಸ್ತವವೂ ಅಲ್ಲ. ಆ ಸ್ವಯಂಪ್ರಕಾಶಕ ಬ್ರಹ್ಮವು ಪರಿಶುದ್ಧವಾದ ಮತ್ತು ಅಪರಿಮಿತವಾದ ಪ್ರಜ್ಞೆಯಾಗಿದ್ದು ಅದು ಜೀವಿಗಳಲ್ಲಿ ಅನೇಕವಾದ ಆತ್ಮಗಳಾಗಿ ಆವಿರ್ಭವಿಸುತ್ತದೆ. ಬ್ರಹ್ಮದ ಹಲವು ವಿಧದ ಆವಿರ್ಭಾವವು ಕೇವಲ ಜೀವಿಗಳಲ್ಲಿ ಮಾತ್ರವೇ ಗಮನಕ್ಕೆ ಬರುತ್ತದೆ ಅದೇ ನಿರ್ಜೀವ ವಸ್ತುಗಳಲ್ಲಿ ಅದು ಅಗೋಚರವಾಗಿರುತ್ತದೆ. ಮಾನವ ಜೀವಿಗಳಲ್ಲಿ, ಪರಿಶುದ್ಧವಾದ ಮತ್ತು ಅಪರಿಮಿತವಾದ ಚೈತನ್ಯವು ಸ್ವತಂತ್ರವಾದ ಮನಸ್ಸನ್ನು ಹೊಂದಿದ ಆತ್ಮವಾಗಿ ಆವಿರ್ಭಾವವಾಗುತ್ತದೆ. ಮಾಯೆಯು ಸರ್ವಾಂತರಯಾಮಿಯಾಗಿರುವ ನಿಗೂಢ ಶಕ್ತಿಯಾಗಿದ್ದು ಅದು ಸ್ವಯಂ ವಿಕಸನ ಹೊಂದುವ ಸರ್ವೋನ್ನತವಾದ ಸಹಜ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಅದು ಕೇವಲ ಭ್ರಮೆಯನ್ನಂಟು ಮಾಡುವ ಮೋಸಗೊಳಿಸುವ ಮುಖವಾಡಗಳಂತೆ ಪ್ರಕಟವಾಗುತ್ತದೆ. ಮಾಯೆಯು ಈ ವಿಶ್ವದ ಸಮಸ್ತ ಜೀವಿಗಳಲ್ಲಿರುವ ಬ್ರಹ್ಮವನ್ನು ಮರೆಮಾಚುತ್ತದೆ. ಈ ಮರೆಮಾಚುವಿಕೆಯು ಒಂದು ಕವಚ ಅಥವಾ ಮುಸುಗಿನಂತೆ ಇರುತ್ತದೆ. ಎಲ್ಲಿಯವರೆಗೆ ಈ ಮುಸುಗನ್ನು ತೆಗೆಯಲಾಗುವುದಿಲ್ಲವೋ ಅಲ್ಲಿಯವರೆಗೆ ಬ್ರಹ್ಮಸಾಕ್ಷಾತ್ಕಾರವು ಉಂಟಾಗುವುದಿಲ್ಲ. ಈ ಮುಸುಗನ್ನು ಸರಿಸಲು ಜ್ಞಾನದ ಅವಶ್ಯಕತೆಯಿದೆ. ಎಲ್ಲಿಯವರೆಗೆ ಮಾಯೆಯ ಮುಸುಗು ಇರುತ್ತದೆಯೋ ಅಲ್ಲಿಯವರೆಗೆ ಒಬ್ಬನು ಅವಿದ್ಯೆಯಿಂದ ಅಥವಾ ಅಜ್ಞಾನದಿಂದ ಕೂಡಿರುತ್ತಾನೆ. ಬ್ರಹ್ಮದ ಬ್ರಹ್ಮಾಂಡ ಪ್ರತಿಫಲನವೇ ಮಾಯೆಯಾಗಿದೆ.
ಶಿವನು ಬ್ರಹ್ಮವಾದರೆ ಶಕ್ತಿಯು ಮಾಯೆಯಾಗಿದ್ದಾಳೆ. ಎಲ್ಲಿಯವರೆಗೆ ಶಕ್ತಿಯು ಮಾರ್ಗವನ್ನು ಸುಗುಮಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಶಿವನನ್ನು ಅರಿಯಲಾಗುವುದಿಲ್ಲ ಮತ್ತು ಕೇವಲ ಶಕ್ತಿ ಮಾತ್ರಳಿಗೇ ಶಿವನನ್ನು ತೋರಿಸುವ ಸಾಮರ್ಥ್ಯವಿದೆ. ಭೌತಿಕ ಶರೀರದ, ಸೂಕ್ಷ್ಮ ಶರೀರದ ಮತ್ತು ಕಾರಣ ಶರೀರದ ಎಲ್ಲಾ ವಿಧವಾದ ಸಂಪೂರ್ಣ ಮಲಿನತೆಗಳನ್ನು ಇಲ್ಲವಾಗಿಸಿಕೊಂಡ ನಂತರವಷ್ಟೇ ದೇವಿಯು ನಮಗೆ ಶಿವನನ್ನು ತೋರುತ್ತಾಳೆ. ಆದ್ದರಿಂದ ಶಕ್ತಿ ಆರಾಧನೆಯನ್ನು ಮಹತ್ವದ್ದೆಂದು ಪರಿಗಣಿಸಲಾಗಿದೆ.
ಕೃಷ್ಣನು ಭಗವದ್ಗೀತೆಯಲ್ಲಿ (೭.೧೪), "ತ್ರಿಗುಣಗಳಿಂದ ಕೂಡಿದ ನನ್ನ ಈ ಅತ್ಯಂತ ಸೋಜಿಗದ ಮಾಯೆಯನ್ನು ಅಧಿಗಮಿಸುವುದು ಅತ್ಯಂತ ಕಷ್ಟಕರವಾದದ್ದು. ಯಾರು ನನ್ನನ್ನು ನಿರಂತರವಾಗಿ ಹೊಂದಲು ಬಯಸುತ್ತಾರೋ ಅಂತವರು ಮಾತ್ರ ಅದನ್ನು ದಾಟಲು ಸಾಧ್ಯ" ಎಂದು ಹೇಳುತ್ತಾನೆ. [ಲಲಿತಾಂಬಿಕೆ ಮತ್ತು ವಿಷ್ಣು ಇವರುಗಳ ಸಂಭಂದವನ್ನು ಈ ಸಹಸ್ರನಾಮದ ಹಲವಾರು ನಾಮಗಳಲ್ಲಿ ನಿರೂಪಿಸಲಾಗಿದೆ (ನಾಮ ೨೮೦, ೩೩೯ ಮತ್ತು ೮೯೩)]
Madhumatī मधुमती (717)
೭೧೭. ಮಧುಮತೀ
ಮಧು ಎಂದರೆ ಜೇನು ತುಪ್ಪ ಮತ್ತು ಮತಿ ಎಂದರೆ ಬುದ್ಧಿ, ಜ್ಞಾನ, ನಿರ್ಣಯ ಮುಂತಾದವು. ಛಾಂದೋಗ್ಯ ಉಪನಿಷತ್ತು (೩.೧.೧) ಹೇಳುತ್ತದೆ, "ಅಸೌ ವಾ ಆದಿತ್ಯೋ ದೇವಮಧು” ಅಂದರೆ ಅಲ್ಲಿ ಕಾಣಿಸುವ ಆದಿತ್ಯನು ದೇವತೆಗಳಿಗೆ ಮಧುವಾಗಿದ್ದಾನೆ". ಛಾಂದೋಗ್ಯ ಉಪನಿಷತ್ತಿನ ಈ ಅಧ್ಯಾಯವನ್ನು ’ಮಧು ವಿದ್ಯಾ’ ಎಂದು ಕರೆಯಲಾಗಿದೆ. ಜೇನು ತುಪ್ಪ ಮತ್ತು ಸೂರ್ಯರ ನಡುವೆ ಹೋಲಿಕೆಯನ್ನು ಮಾಡುತ್ತಾ ಛಾಂದೋಗ್ಯ ಉಪನಿಷತ್ತು ಆತ್ಮಸಾಕ್ಷಾತ್ಕಾರವನ್ನು ಭೋದಿಸುತ್ತದೆ. ಸಮಸ್ತ ಮಾನವರು ಮಾಡುವ ಶುಭಕರವಾದ ಕೆಲಸಗಳ ಒಟ್ಟು ಮೊತ್ತವನ್ನು ಸೂರ್ಯನು ಪ್ರತಿನಿಧಿಸುತ್ತಾನೆ ಎಂದು ಈ ಉಪನಿಷತ್ತು ಹೇಳುತ್ತದೆ. ಆದ್ದರಿಂದ ಎಲ್ಲಾ ದೇವತೆಗಳು ಸೂರ್ಯನನ್ನು ಇಷ್ಟಪಡುತ್ತಾರೆ. ಜೇನು ತುಪ್ಪ ಎನ್ನುವುದು ಜೇನುಗೂಡಿನಿಂದ ಸಂಗ್ರಹಿಸಿದ ಸಾರವಾಗಿದೆ. ಇಲ್ಲಿ ಜೇನು ತುಪ್ಪವನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿದ ಪರಮೋನ್ನತ ಜ್ಞಾನಕ್ಕೆ ಹೋಲಿಸಲಾಗಿದೆ. ಜೇನುಗೂಡಿನಲ್ಲಿ ಸಂಗ್ರಹಿಸಲ್ಪಟ್ಟ ಜೇನು ತುಪ್ಪವು ಲೆಕ್ಕವಿಲ್ಲದಷ್ಟು ಹೂವುಗಳಿಂದ ಲೆಕ್ಕವಿಲ್ಲದಷ್ಟು ಜೇನು ಹುಳುಗಳಿಂದ ಸಂಗ್ರಹಿಸಲ್ಪಟ್ಟಿರುತ್ತದೆ. ಜೇನುಗೂಡಿನಲ್ಲಿರುವ ಜೇನುತುಪ್ಪವು ಸ್ಥೂಲ ಜ್ಞಾನವಾದರೆ ಶುದ್ಧಗೊಳಿಸಿದ ಜೇನುತುಪ್ಪವು ಸಂಸ್ಕರಿತ ಜ್ಞಾನವಾಗಿದೆ.
ಪತಂಜಲಿಯು ತನ್ನ ಯೋಗ ಸೂತ್ರದ ಸಾಧನಾಪಾದದಲ್ಲಿ (೨.೨೭), ’ತಸ್ಯ ಸಪ್ತದಾ ಪ್ರಾಂತಭೂಮಿಃ ಪ್ರಜ್ಞಾ’ ಅಂದರೆ ’ಅವನ ಪ್ರಜ್ಞೆಯು ಏಳು ವಿಧವಾದ ಪ್ರಕೃಷ್ಟ ಫಲಗಳನ್ನುಳ್ಳ ಅವಸ್ಥೆಯುಳ್ಳದ್ದಾಗಿದೆ’ ಎಂದು ಹೇಳಿದ್ದಾನೆ. (ಪತಂಜಲಿಯು ಇದೇ ಯೋಗಸೂತ್ರದ ೨.೨೯ನೇ ಸೂತ್ರದಲ್ಲಿ ಅಷ್ಠಾಂಗ ಯೋಗ ಅಂದರೆ ಎಂಟು ಅಂಗವುಳ್ಳ ಯೋಗದ ಕುರಿತಾಗಿ ಹೇಳುತ್ತಾನೆ. ಅವುಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಎಂಟನೆಯ ಅಂಗವೇ ಸಮಾಧಿ ಅಥವಾ ಮುಕ್ತಿಯಾಗಿದೆ. ಈ ಅಷ್ಠಾಂಗಗಳು ಇಲ್ಲಿ ಪ್ರಸ್ತಾಪಿಸಿರುವ ಏಳು ವಿಧದ ಪ್ರಜ್ಞೆಗಳಿಗಿಂತ ಭಿನ್ನವಾದವುಗಳೆನ್ನುವುದನ್ನು ಗಮನಿಸಿ). ಏಳನೆಯ ಅವಸ್ಥೆಯನ್ನು ಮಧುಮತಿ ಎನ್ನುತ್ತಾರೆ ಮತ್ತು ಈ ಹಂತದಲ್ಲಿ ಒಬ್ಬನು ಪರಿಪೂರ್ಣವಾದ ಜ್ಞಾನ ಮತ್ತು ಅದರಿಂದುಂಟಾಗುವ ಮಾನಸಿಕ ತೃಪ್ತಿಯನ್ನು ಹೊಂದುತ್ತಾನೆ. ಯೋಗ ವಾಶಿಷ್ಠದಲ್ಲಿ ಈ ಏಳು ಅವಸ್ಥೆ ಅಥವಾ ಹಂತಗಳನ್ನು ಭೂಮಿಕಾ ಎಂದು ಕರೆಯಲಾಗಿದೆ.
Mahī मही (718)
೭೧೮. ಮಹೀ
ಮಹೀ ಎಂದರೆ ಭೂಮಿ. ಈ ನಾಮವು ದೇವಿಯ ಗೋಚರತೆಯನ್ನು ಸೂಚಿಸುತ್ತದೆ. ಇದುವರೆಗೆ ವಾಗ್ದೇವಿಗಳು ದೇವಿಯ ಸೂಕ್ಷ್ಮ ರೂಪದ ಕುರಿತಾಗಿ ಹೇಳುತ್ತಿದ್ದಾರೆ. ಭೂಮಿಯು ನಮ್ಮ ಕಣ್ಣುಗಳಿಗೆ ಕಾಣಿಸುತ್ತದೆ, ಆದ್ದರಿಂದ ದೇವಿಯನ್ನು ಭೂತಾಯಿಯೆಂದು ಹೊಗಳಲಾಗಿದೆ. ಎರಡು ಮುಖ್ಯವಾದ ತತ್ವಗಳಲ್ಲಿ ಒಂದು ಪ್ರಕೃತಿಯಾದರೆ ಮತ್ತೊಂದು ಪುರುಷವಾಗಿದೆ. ಪ್ರಕೃತಿಯು ಚೈತನ್ಯರಹಿತವಾಗಿದ್ದು (ಜಡವಾಗಿದ್ದು) ಮೂಲ ಸ್ವರೂಪದ ವಸ್ತುವಾಗಿದೆ ಅದನ್ನೇ ಗ್ರಹವಾಗಿರುವ ಭೂಮಿಯೆಂದು ವ್ಯಾಖ್ಯಾನಿಸಬಹುದು. ದೇವಿಯು ಈ ಭೂಗ್ರಹದ ರೂಪದಲ್ಲಿ ಆವಿರ್ಭಾವ ಹೊಂದುತ್ತಾಳೆ. ಈ ನಾಮವು ಯಾರು ದೇವಿಯ ಸೂಕ್ಷ್ಮರೂಪವನ್ನು ಗ್ರಹಿಸಲಾರರೋ ಅವರು ಆಕೆಯನ್ನು ಸ್ಥೂಲ ರೂಪದಲ್ಲಿ ಕಾಣಬಹುದು ಎನ್ನುವುದನ್ನು ಒತ್ತಿ ಹೇಳುತ್ತದೆ. ದೇವಿಯ ಸೂಕ್ಷ್ಮರೂಪದ ಮೇಲೆ ಧ್ಯಾನಿಸಲು ಅತ್ಯುನ್ನತ ಸ್ತರದ ಪ್ರಜ್ಞೆಯ ಅವಶ್ಯಕತೆಯಿದೆ ಮತ್ತದಕ್ಕೆ ಏಕೈಕ ಕಾರಣವಾಗಿರುವುದು ಮನಸ್ಸು.
Gaṇāmbā गणाम्बा (719)
೭೧೯. ಗಣಾಂಬಾ
ಶಿವನ ಸೈನಿಕರನ್ನು ಗಣಗಳೆಂದು ಕರೆಯುತ್ತಾರೆ. ಗಣ ಎಂದರೆ ಉಪದೇವತೆಗಳ ಕೆಲವೊಂದು ದಳಗಳಾಗಿದ್ದು ಅವರನ್ನು ಭಗವಾನ್ ಗಣೇಶನ ವಿಶೇಷ ಮೇಲ್ವಿಚಾರಣೆಯಲ್ಲಿರುವ ಶಿವನ ಪರಿಚಾರಕರೆಂದು ಪರಿಗಣಿಸಲಾಗಿದೆ. ದೇವಿಯು ಈ ಗಣಗಳಿಗೆ ಮಾತೆಯೆಂದು ಹೇಳಲಾಗುತ್ತದೆ. ಗಣ ಎಂದರೆ ಗಣೇಶ ಎನ್ನುವುದನ್ನೂ ಸೂಚಿಸುತ್ತದೆ. ದೇವಿಯು, ದೇವತೆಗಳ ಅಧಿನಾಯಕನಾಗಿರುವ ಗಣೇಶನ ತಾಯಿಯಾಗಿರುವುದರಿಂದ ಅವಳು ಸಹಜವಾಗಿಯೇ ಗಣಾಂಬಾ ಆಗಿದ್ದಾಳೆ (ಅಂಬಾ = ತಾಯಿ). ಗಣಗಳ ಸಮೂಹಕ್ಕೆ ಅಧಿಪತಿಯಾಗಿರುವುದರಿಂದ ಗಣೇಶನು ಗಣಪತಿ ಎಂದು ಕರೆಯಲ್ಪಟ್ಟಿದ್ದಾನೆ.
Guhyakārādhyā गुह्यकाराध्या (720)
೭೨೦. ಗುಹ್ಯಕಾರಾಧ್ಯಾ
ಗುಹ್ಯಕರೆಂದರೆ ಐಶ್ವರ್ಯಕ್ಕೆ ಅಧಿಪತಿಯಾದ ಮತ್ತು ದೇವಿಯ ಪರಮ ಭಕ್ತರಲ್ಲಿ ಒಬ್ಬನಾಗಿರುವ ಕುಬೇರನ ಸೈನಿಕರು. ಕುಬೇರನ ಹೆಸರಿನಲ್ಲಿಯೂ ಒಂದು ಪಂಚದಶೀ ಮಂತ್ರವಿದೆ. ಪಂಚದಶೀ ಮಂತ್ರಕ್ಕೆ ಇರುವ ಹನ್ನೆರಡು ಋಷಿಗಳಲ್ಲಿ ಕುಬೇರನೂ ಒಬ್ಬ (ಹೆಚ್ಚಿನ ವಿವರಗಳಿಗೆ ೨೩೮ನೇ ನಾಮವನ್ನು ನೋಡಿ).
ಈ ನಾಮಕ್ಕೆ ಮತ್ತೊಂದು ವಿಶ್ಲೇಷಣೆಯೂ ಇದೆ. ಗುಹ್ಯ ಎಂದರೆ ರಹಸ್ಯವಾದದ್ದು ಮತ್ತು ಆರಾಧ್ಯ ಎಂದರೆ ಪೂಜಿಸಲ್ಪಡುವ. ಈ ಸಂದರ್ಭದಲ್ಲಿ ಈ ನಾಮಕ್ಕೆ ದೇವಿಯು ರಹಸ್ಯ ಸ್ಥಳವಾದ ಮೂಲಾಧಾರದಲ್ಲಿ ಆಕೆಯ ಸೂಕ್ಷ್ಮಾತಿಸೂಕ್ಷ್ಮ ರೂಪವಾದ ಕುಂಡಲಿನೀ ರೂಪದಲ್ಲಿ ಪೂಜಿಸಲ್ಪಡುತ್ತಾಳೆ ಎಂದು ಅರ್ಥೈಸಬಹುದು.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 716 - 720 http://www.manblunder.com/2010/05/lalitha-sahasranamam-716-720.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.