೧೬೩. ಲಲಿತಾ ಸಹಸ್ರನಾಮ ೭೨೧ರಿಂದ ೭೨೭ನೇ ನಾಮಗಳ ವಿವರಣೆ

೧೬೩. ಲಲಿತಾ ಸಹಸ್ರನಾಮ ೭೨೧ರಿಂದ ೭೨೭ನೇ ನಾಮಗಳ ವಿವರಣೆ

                                                                                                       ಲಲಿತಾ ಸಹಸ್ರನಾಮ ೭೨೧ - ೭೨೭

Komalāṅgī कोमलाङ्गी (721)

೭೨೧. ಕೋಮಲಾಂಗೀ

          ದೇವಿಯು ಮೃದು ಮತ್ತು ಕೋಮಲವಾದ ಶರೀರವನ್ನು ಹೊಂದಿದ್ದಾಳೆ (೪೬೦ನೇ ನಾಮ ನಳಿನಿಯನ್ನು ಜ್ಞಾಪಿಸಿಕೊಳ್ಳಿ). ದೇವಿಯು ಸಗುಣ ಬ್ರಹ್ಮದ ಮೂರು ಮೂಲಭೂತ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಕೈಗೊಳ್ಳುತ್ತಾಳೆ. ದೇವಿಯು ಲೆಕ್ಕವಿಲ್ಲದಷ್ಟು ದಾನವರ ಮೇಲೆ ವಿಜಯವನ್ನು ಸಾಧಿಸಿದ್ದಾಳೆ. ಇಂತಹ ಹಲವು ಕಠಿಣತಮವಾದ ಕಾರ್ಯಗಳ (ಈ ಕಾರ್ಯಗಳನ್ನು ಆ ಪರಮಶಿವನು ದೇವಿಗೆ ವಹಿಸಿದ್ದಾನೆ) ನಂತರವೂ ಆಕೆಯ ದೇಹವು ಮೃದು ಹಾಗೂ ಕೋಮಲವಾಗಿದೆ. ದೇವಿಯು ಕೇವಲ ಶಾರೀರಿಕವಾಗಿ ಮಾತ್ರವೇ ಕೋಮಲವಾಗಿಲ್ಲ ಅದರೊಂದಿಗೆ ಆಕೆಯು ಮಾನಸಿಕವಾಗಿಯೂ ಮೃದು ಧೋರಣೆಯನ್ನು ಹೊಂದಿದ್ದಾಳೆ. ದೇವಿಯು ಮೃದು ಹಾಗೂ ಕೋಮಲಳಾಗಿರುವುದರಿಂದ ಆಕೆಯ ಭಕ್ತರಿಗೆ ಅವಳು ಸುಲಭವಾಗಿ ಎಟುಕುತ್ತಾಳೆ. ಬಹುಶಃ ಈ ನಾಮವು ದೇವಿಯ ಸೂಕ್ಷ್ಮಾತಿಸೂಕ್ಷ್ಮ ರೂಪವಾದ ಕುಂಡಲಿನೀ ರೂಪವನ್ನು ಸಹ ಸೂಚಿಸಬಹುದು.

Guru-priyā गुरु-प्रिया (722)

೭೨೨. ಗುರುಪ್ರಿಯಾ

            ಇಲ್ಲಿ ಗುರುವೆಂದರೆ ಶಿವನೆಂದು ಅರ್ಥ. ದೇವಿಯು ಶಿವನನ್ನು ಇಷ್ಟಪಡುತ್ತಾಳೆ. ಶಿವನು ಗುರುವಾದರೆ, ದೇವಿಯನ್ನು ಗುರುಪತ್ನಿಯೆನ್ನುತ್ತಾರೆ. ಗುರುವಿನ ಪತ್ನಿಗೂ ಸಹ ಗುರುವಿಗಿಂತ ಹೆಚ್ಚಿನದಲ್ಲದಿದ್ದರೂ ಸಹ ಅವನ ಸಮಾನವಾದ ಸ್ಥಾನಮಾನವನ್ನು ಕೊಡಬೇಕು. ಶಿವನನ್ನು ಗುರುವೆನ್ನುತ್ತಾರೆ ಏಕೆಂದರೆ ಶಿವನು ದೇವಿಗೆ ಸಂಪೂರ್ಣ ತಂತ್ರ ಶಾಸ್ತ್ರಗಳನ್ನು ಕಲಿಸಿಕೊಟ್ಟಿದ್ದಾನೆ.

           ಶ್ರೀ ವಿದ್ಯಾ ಪದ್ಧತಿಯನ್ನು ದೇವಿಯ ಪ್ರಸಿದ್ಧವಾದ ಪಂಚದಶೀ ಮತ್ತು ಷೋಡಶೀ ಮಂತ್ರಗಳ ಮೂಲಕ ಯಾರು ಪ್ರಸಾರ ಮಾಡುತ್ತಾರೋ ಅಂತಹ ಗುರುಗಳ ಬಗೆಗೆ ದೇವಿಯು ವಿಶೇಷ ಒಲವುಳ್ಳವಳಾಗಿದ್ದಾಳೆ ಎಂದೂ ಈ ನಾಮವು ಸೂಚಿಸುತ್ತದೆ.

           ಗುರುಗ್ರಹವನ್ನೂ ಸಹ ಗುರು ಎಂದು ಕರೆಯಲಾಗುತ್ತದೆ. ಗ್ರಹವಾದ ಶುಕ್ರನು ದಾನವರಿಗೆ ಗುರುವಾಗಿದ್ದರೆ ಅದಕ್ಕೆ ಪ್ರತಿಯಾಗಿ ಗುರುಗ್ರಹವು ದೇವತೆಗಳಿಗೆ ಗುರುವಾಗಿದ್ದಾನೆ. ದೇವಿಯು ಇಂತಹ ಗುರುಗಳ ಬಗೆಗೆ ಅಕ್ಕರೆಯುಳ್ಳವಳಾಗಿದ್ದಾಳೆ. ನಾಮ ೬೦೩ ಗುರುಮೂರ್ತಿಃ ದೇವಿಯೇ ಗುರುವಾಗಿದ್ದಾಳೆ ಎಂದು ಹೇಳಿದರೆ; ನಾಮ ೭೧೩ ಗುರುಮಂಡಲ ರೂಪಿಣೀ ಎಂದು ಹೇಳುತ್ತದೆ.

Svatantrā स्वतन्त्रा (723)

೭೨೩. ಸ್ವತಂತ್ರಾ

          'ಸ್ವ' ಶಬ್ದವು ತಾನು ಎನ್ನುವುದರೊಂದಿಗೆ ಪರಮೋನ್ನತ ಅಧಿಕಾರಿಯಾದ ಶಿವ ಎನ್ನುವ ಅರ್ಥವನ್ನೂ ಹೊಂದಿದೆ. ಆದ್ದರಿಂದ ಈ ನಾಮವು ದೇವಿಯು, ಚತುಷ್ಷಷ್ಟಿಕಲಾಮಯೀ ಎಂದು ಹೇಳುವ ನಾಮ ೨೩೬ರಲ್ಲಿ ಪ್ರಸ್ತಾವಿತವಾಗಿರುವ ೬೪ ತಂತ್ರಗಳ ಮೂರ್ತ ರೂಪವಾಗಿದ್ದಾಳೆ ಎಂದು ಹೇಳುತ್ತದೆ. ದೇವಿಯನ್ನು ಪ್ರಾರ್ಥಿಸದ ಹೊರತು ತಂತ್ರ ಶಾಸ್ತ್ರಗಳು ಒಲಿಯುವುದಿಲ್ಲ. ತಂತ್ರ ಎಂದರೆ ಅವಲಂಬನೆ ಎನ್ನುವ ಅರ್ಥವನ್ನೂ ಹೊಂದಿದೆ. ಸ್ವ(ಶಿವ)+ತಂತ್ರ(ಅವಲಂಬನೆ) = ಶಿವನ ಮೇಲೆ ಅವಲಂಬಿತ. ಇದು ಶಿವ ಮತ್ತು ಶಕ್ತಿಯರ ಪರಸ್ಪರ ಅವಲಂಬನೆಯನ್ನು ಕುರಿತು ಹೇಳುತ್ತದೆ. ಕಾಳಿಕಾ ಪುರಾಣವು,  "ಶಿವನು ಆ ಸ್ಥಳದಲ್ಲಿ (ಜಗತ್ತಿನಲ್ಲಿ) ಶಕ್ತಿಯೊಂದಿಗೆ ನಿರಂತರವಾಗಿ ಆಟವಾಡುತ್ತಾ ಇರುತ್ತಾನೆ" ಎಂದು ಹೇಳುತ್ತದೆ. ಈ ನಾಮವನ್ನು ೨೨೬ನೇ ನಾಮವಾದ ’ಮಹಾತಂತ್ರಾ’ದ ಪುನರ್ ದೃಢೀಕರಣವೆಂದು ಸಹ ಪರಿಗಣಿಸಬಹುದು.

         ಸ್ವತಂತ್ರ ಎಂದರೆ ಪರಮೋನ್ನತ ಶಕ್ತಿಯ ಅಡಚಣೆಯಿಲ್ಲದ ಇಚ್ಛೆ ಎನ್ನುವ ಅರ್ಥವನ್ನೂ ಹೊಂದಿದೆ. ಇದು ಶಿವನ ಇಚ್ಛಾ ಶಕ್ತಿಯಾಗಿದ್ದು ಅದು ಬ್ರಹ್ಮದ ಪ್ರಕಾಶ ರೂಪವಾಗಿದೆ. ಶಿವನು ತನ್ನ ಪರಮೋನ್ನತವಾದ ಮತ್ತು ಅಡಚಣೆಯಿಲ್ಲದ ಇಚ್ಛಾ ಶಕ್ತಿ ಅಥವಾ ಸ್ವತಂತ್ರ ಶಕ್ತಿಯ ಪರಮಾಧಿಕಾರವನ್ನು ಶಕ್ತಿಗೆ (ದೇವಿಗೆ) ಹಸ್ತಾಂತರಿಸಿದ್ದಾನೆ. ದೇವಿಯು ಈ ಶಕ್ತಿಯನ್ನು ಹೊಂದಿದ್ದಾಗ ಅದನ್ನು ಬ್ರಹ್ಮದ ವಿಮರ್ಶ ರೂಪವೆನ್ನುತ್ತಾರೆ. 

Sarva-tantreśī सर्व-तन्त्रेशी (724)

೭೨೪. ಸರ್ವ-ತಂತ್ರೇಶೀ

           ಸರ್ವ+ತಂತ್ರ+ಈಶೀ = ಆಕೆಯ ಎಲ್ಲಾ ತಂತ್ರಗಳ ಅಧಿದೇವತೆಯಾಗಿದ್ದಾಳೆ. ಈ ನಾಮವು ಹಿಂದಿನ ನಾಮದ ಮುಂದುವರಿಕೆಯಾಗಿದೆ. ಈ ನಾಮವು ಆಕೆಯು ಎಲ್ಲಾ ತಂತ್ರಗಳ ಸ್ವರೂಪದಲ್ಲಿದ್ದಾಳೆ ಎಂದು ಹೇಳುತ್ತದೆ. ಹಿಂದಿನ ನಾಮದಲ್ಲಿ ಹೇಳಿದಂತೆ ಯಾವುದೇ ತಂತ್ರವು ಸಿದ್ಧಿಸಬೇಕಾದರೆ ದೇವಿಯನ್ನು ಅವಶ್ಯಕವಾಗಿ ಪ್ರಾರ್ಥಿಸಬೇಕು; ಏಕೆಂದರೆ ದೇವಿಯು ಎಲ್ಲಾ ತಂತ್ರಗಳಿಗೆ ಮೂಲಾಧಾರವಾಗಿದ್ದಾಳೆ. ಶ್ರೀ ವಿದ್ಯಾ ಆಚರಣೆಯ ವಿಧಾನಗಳನ್ನು ವೈದಿಕ ಮತ್ತು ತಾಂತ್ರಿಕ ವಿಧಾನಗಳೆಂದೂ ಸಹ ವಿಂಗಡಿಸಬಹುದು.

Dakṣiṇāmūrti-rūpiṇī दक्षिणामूर्ति-रूपिणी (725)

೭೨೫. ದಕ್ಷಿಣಾಮೂರ್ತಿ-ರೂಪಿಣೀ

          ಶಿವನ ಗುರುವಿನ ಸ್ವರೂಪವಾದ ದಕ್ಷಿಣಾಮೂರ್ತಿ ರೂಪದಲ್ಲಿ ದೇವಿಯು ಇದ್ದಾಳೆ. ಈ ಸ್ವರೂಪದಲ್ಲಿ ಶಿವನು ದಕ್ಷಿಣ ದಿಕ್ಕನೆಡೆಗೆ ಮುಖ ಮಾಡಿ ಕುಳಿತಿರುವುದರಿಂದ ಅವನನ್ನು ದಕ್ಷಿಣಾಮೂರ್ತಿ ಎಂದು ಕರೆಯಲಾಗುತ್ತದೆ. ಶಿವನ ಈ ರೂಪವು ಬ್ರಹ್ಮ ಮತ್ತು ವಿಷ್ಣು ಇವರುಗಳಿಗೂ ಸಹ ಗುರುವೆಂದು ಪರಿಗಣಿತವಾಗಿದೆ. ರಮಣ ಮಹರ್ಷಿಗಳು ದಕ್ಷಿಣಾಮೂರ್ತಿಯನ್ನು ಹೀಗೆ ವಿವರಿಸುತ್ತಾರೆ. ದಕ್ಷಿಣ (ದಕ್ಷನಾದ)+ಅಮೂರ್ತಿ(ರೂಪರಹಿತ) = ದಕ್ಷಿಣಾಮೂರ್ತಿ ಅಂದರೆ ರೂಪರಹಿತ ಜ್ಞಾನದ ಬೋಧಕ; ಇದು ಬ್ರಹ್ಮವನ್ನು ಸೂಚಿಸುತ್ತದೆ. ದಕ್ಷಿಣಾಮೂರ್ತಿಯ ಮಂತ್ರಗಳು ನಮಗೆ ತಂತ್ರ ಶಾಸ್ತ್ರಗಳಲ್ಲಿ ವಿಪುಲವಾಗಿ ದೊರೆಯುತ್ತವೆ. ಮಹಾಷೋಡಶೀ ಮಂತ್ರಕ್ಕೆ ದಕ್ಷಿಣಾಮೂರ್ತಿಯೇ ಋಷಿಯಾಗಿದ್ದಾನೆ. ಮುಂದಿನ ಎರಡು ನಾಮಗಳೂ ಸಹ ಈ ನಾಮದ ಮುಂದುವರಿಕೆಯಾಗಿವೆ.

        ಕೇವಲ ಶಿವನ ದಕ್ಷಿಣಾಮೂರ್ತಿ ರೂಪವೊಂದೇ ಆತ್ಮಸಾಕ್ಷಾತ್ಕಾರವನ್ನು ಬೋಧಿಸುತ್ತದೆ. ತನ್ನ ಸಂಗಾತಿಯು ಸ್ವತಃ ತಾನೇ ಆತ್ಮಾಗ್ನಿಯಲ್ಲಿ ಭಸ್ಮವಾದಾಗ ಶಿವನು ದಕ್ಷಿಣಾಮೂರ್ತಿ ರೂಪವನ್ನು ತಾಳುತ್ತಾನೆ. ಅವನು ತನ್ನ ಪತ್ನಿಯನ್ನು ಕಳೆದುಕೊಂಡ ನಂತರ ತನ್ನನ್ನು (ಬ್ರಹ್ಮವನ್ನು) ಕುರಿತು ತಪಸ್ಸು ಮಾಡಲು ದಕ್ಷಿಣಾಭಿಮುಖವಾಗಿ ಕುಳಿತನು. ಆ ಸಮಯದಲ್ಲಿ ಸನಕಾದಿ ಋಷಿಗಳು ತಮಗೆ ಆತ್ಮ ಸಾಕ್ಷಾತ್ಕಾರ ಕುರಿತಾದ ಬೋಧನೆಯನ್ನು ಮಾಡಬೇಕಾಗಿ ಅವನನ್ನು ಕೋರಿಕೊಂಡರು. ದಕ್ಷಿಣಾಮೂರ್ತಿಯು ಆ ಸಮಯದಲ್ಲಿ ಮೌನವನ್ನಾಚರಿಸುತ್ತಿದ್ದನು. ಸನಕ, ಸನ, ಸನತ್ಕುಮಾರ ಮತ್ತು ಸನಂದನ (ಬ್ರಹ್ಮನ ಮಾನಸ ಪುತ್ರರು) ಇವರುಗಳ ಬ್ರಹ್ಮದ ಕುರಿತಾದ ಜಿಜ್ಞಾಸೆಯನ್ನು ಅರಿತ ಶಿವನು ತನ್ನ ಮೌನವನ್ನು ಮುರಿಯದೇ ಅವರಿಗೆ ಆತ್ಮಸಾಕ್ಷಾತ್ಕಾರದ ಕುರಿತಾಗಿ ಉಪದೇಶಿಸಿದನು. ಅವನ ಬೋಧನೆಯು ಚಿನ್ಮುದ್ರೆಯ ಮೂಲಕ ಮಾಡಲ್ಪಟ್ಟಿತು. ಹೆಬ್ಬೆರಳು ಮತ್ತು ತೋರು ಬೆರಳನ್ನು ಜೋಡಿಸಿದಾಗ ಉಂಟಾಗುವುದೇ ಚಿನ್ಮುದ್ರೆ. ಈ ಎರಡು ಬೆರಳುಗಳು ಪರಬ್ರಹ್ಮ ಮತ್ತು ಜೀವಿಯನ್ನು ಪ್ರತಿನಿಧಿಸುತ್ತವೆ. ಯಾವಾಗ ಈ ಎರಡೂ ಬೆರಳುಗಳು ಜೋಡಿಸಲ್ಪಡುತ್ತವೆಯೋ ಆಗ ಅದು ಜೀವ ಮತ್ತು ಬ್ರಹ್ಮದ ಸಂಯೋಗವನ್ನು ಸೂಚಿಸುತ್ತದೆ. ದಕ್ಷಿಣಾಮೂರ್ತಿ ಸ್ತೋತ್ರವು ಆದಿ ಶಂಕರರಿಂದ ರಚಿಸಲ್ಪಟ್ಟಿದ್ದು, ಇದು ಕೇವಲ ಕಾವ್ಯ ರಚನೆಯಾಗಿರದೆ ಆತ್ಮಸಾಕ್ಷಾತ್ಕಾರದ ತತ್ವಗಳನ್ನೂ ತಿಳಿಸಿಕೊಡುತ್ತದೆ.

Sanakādi-samārādhyā सनकादि-समाराध्या (726)

೭೨೬. ಸನಕಾದಿ-ಸಮಾರಾಧ್ಯಾ

          ಸನಕ, ಸನ, ಸನತ್ಕುಮಾರ ಮತ್ತು ಸನಂದನ ಇವರುಗಳು ನಾಲ್ಕು ಮಹಾನ್ ಋಷಿಗಳಾಗಿದ್ದು ಇವರು ದಕ್ಷಿಣಾಮೂರ್ತಿಯಿಂದ ದೀಕ್ಷೆಯನ್ನು ಪಡೆದವರು. ಒಂದು ಬೃಹತ್ ಆಲದ ಮರದ ಕೆಳಗೆ ಯುವಕನಾದ ದಕ್ಷಿಣಾಮೂರ್ತಿಯು ಮೇಲೆ ಹೆಸರಿಸಿರುವ ತನ್ನ ವಯಸ್ಸಾದ ಶಿಷ್ಯರೊಂದಿಗೆ ಆಸೀನನಾಗಿರುತ್ತಾನೆ. ಆಲದ ಮರವು ಸಾಂಕೇತಿಕವಾಗಿ ಸ್ಥೂಲ ಹಾಗೂ ಸೂಕ್ಷ್ಮ ಜಗತ್ತಿನ ಆವಿರ್ಭಾವವನ್ನು (ವಿಕಸನವನ್ನು) ಪ್ರತಿನಿಧಿಸುತ್ತದೆ. ಬಹು ಚಿಕ್ಕದಾದ ಒಂದು ಆಲದ ಮರದ ಬೀಜದಿಂದ ಒಂದು ಬೃಹತ್ತಾದ ಆಲದ ಮರವು ಬೆಳೆಯುತ್ತದೆ. ಇದನ್ನು ಸೂಕ್ಷ್ಮದಿಂದ ಉಂಟಾಗುವ ಸ್ಥೂಲ ವಸ್ತುವಿನೊಂದಿಗೆ ಹೋಲಿಕೆ ಮಾಡಲಾಗಿದೆ. ಇಲ್ಲಿ ದೀಕ್ಷೆಯು ಯಾವುದೇ ವಿಧವಾದ ಮಾತಿನ ವಿನಿಮಯವಿಲ್ಲದೆ ನಡೆಯುತ್ತದೆ. ಈ ಸನಕಾದಿಗಳು ಲಲಿತಾಂಬಿಕೆಯ ಮಹಾನ್ ಭಕ್ತರು. 

         ಛಾಂದೋಗ್ಯ ಉಪನಿಷತ್ತಿನಲ್ಲಿ (೭.೨೬.೨) ಸನತ್ಕುಮಾರನ ಕುರಿತಾದ ಉಲ್ಲೇಖವಿದೆ, ಅದು ಹೀಗೆ ಹೇಳುತ್ತದೆ, "ಪೂಜ್ಯನಾದ ಸನತ್ಕುಮಾರನು ದೇವ ಋಷಿಯಾದ ನಾರದನನ್ನು ರಾಗದ್ವೇಷಗಳಿಂದ ಮುಕ್ತಗೊಳಿಸಿ ಅವನನ್ನು ತಮಸ್ಸಿನ ಆಚೆಯ ದಡಕ್ಕೆ ತಲುಪಿಸಿದನು. ವಿವೇಕಿಗಳು ಸನತ್ಕುಮಾರನನ್ನು ಪೂರ್ಣ ಜ್ಞಾನಿ ಎಂದು ಹೇಳುತ್ತಾರೆ".

Śiva-jñāna-pradāyinī शिव-ज्ञान-प्रदायिनी (727)

೭೨೭. ಶಿವ-ಜ್ಞಾನ-ಪ್ರದಾಯಿನೀ

          ದೇವಿಯು ಅಂತಿಮನಾದ ಶಿವನ ಜ್ಞಾನವನ್ನು ಪ್ರಸಾದಿಸುತ್ತಾಳೆ. ಶಿವ ಜ್ಞಾನವೆಂದರೆ ಬ್ರಹ್ಮದ ಕುರಿತಾದ ಜ್ಞಾನ ಇದನ್ನೇ ಪರಮೋನ್ನತ ಜ್ಞಾನವೆನ್ನುತ್ತಾರೆ. ಶಿವನನ್ನು ಅರಿಯುವ ಮೊದಲು ಒಬ್ಬರು ಅವನ ಶಕ್ತಿಯ ಕುರಿತು ತಿಳಿದುಕೊಳ್ಳಬೇಕು; ಅವಳು ಮಾತ್ರವೇ ಒಬ್ಬನನ್ನು ಬ್ರಹ್ಮದೆಡೆಗೆ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ರಾಮಾಯಣವು, "ಗಾಳಿಯನ್ನು ಚಲನೆಯ ಮೂಲಕ ತಿಳಿಯಬಹುದು, ಬೆಂಕಿಯನ್ನು ಉಷ್ಣದ ಮೂಲಕ ಅರಿಯಬಹುದು ಮತ್ತು ಶಿವನನ್ನು ಕೇವಲ ಶಕ್ತಿಯ ಮೂಲಕವಷ್ಟೇ ಅರಿಯಬಹುದು" ಎಂದು ಹೇಳುತ್ತದೆ. ಶಿವನು ದೇವಿಯ ಜ್ಞಾನದ ಮೂಲವಾಗಿದ್ದಾನೆ ಎಂದೂ ಹೇಳಬಹುದು.

         ‘ಶಂಕರಂ ಚೈತನ್ಯಂ’ ಎಂದು ಹೇಳಲಾಗುತ್ತದೆ; ಇದರರ್ಥ ಶಿವನು ಜ್ಞಾನ ಮತ್ತು ಕ್ರಿಯೆ ಎರಡೂ ಆಗಿದ್ದಾನೆ ಎನ್ನುವುದಾಗಿದೆ. ಶಿವನು ಜ್ಞಾನ ಮತ್ತು ಕ್ರಿಯೆಗಳಲ್ಲಿ ಸಂಪೂರ್ಣ ಸ್ವತಂತ್ರವಾದ ಇಚ್ಛೆಯುಳ್ಳ ಪರಮಾಧಿಕಾರಿಯಾಗಿದ್ದಾನೆ. ಈ ತತ್ವದ ಆಧಾರದ ಮೇಲೆ ಶಿವ ಸೂತ್ರಗಳು ‘ಚೈತನ್ಯಮಾತ್ಮ’ ಎನ್ನುವುದರೊಂದಿಗೆ ಆರಂಭವಾಗುತ್ತವೆ. ಚೈತನ್ಯ ಎಂದರೆ ಅತ್ಯಂತ ಪರಿಶುದ್ಧತೆ ಹಾಗು ಜ್ಞಾನವುಳ್ಳ ಪ್ರಜ್ಞೆಯಾಗಿದೆ. ಬ್ರಹ್ಮಕ್ಕೂ ಮತ್ತು ಅತ್ಯುನ್ನತವಾದ ಪ್ರಜ್ಞೆಯ ರೂಪಕ್ಕೂ ಭೇದವಿಲ್ಲ. ಹಾಗಾದರೆ, ಅದು ಹೇಗೆ ಕೇವಲ ಶಕ್ತಿ ಮಾತ್ರಳೇ ಶಿವನನ್ನು ಅನಾವರಣಗೊಳಿಸಲು ಶಕ್ಯಳಾಗಿದ್ದಾಳೆ? ಇದಕ್ಕೆ ಉತ್ತರವನ್ನು ಅದೇ ಶಿವ ಸೂತ್ರಗಳು (೧.೬) ಒದಗಿಸುತ್ತವೆ, ಹೀಗೆ ಹೇಳುವ ಮೂಲಕ, "ಶಕ್ತಿಯನ್ನು ಧ್ಯಾನಿಸುವುದರ ಮೂಲಕ ಪ್ರಪಂಚವು ಪ್ರತ್ಯೇಕವಾದ ಅಸ್ತಿತ್ವವನ್ನು ಕಳೆದುಕೊಂಡು ತನ್ಮೂಲಕ ಅದು ಶಿವನ ಸ್ವಯಂಪ್ರಕಾಶಕ ರೂಪವನ್ನು ಅನಾವರಣಗೊಳಿಸುತ್ತದೆ”. ಇಂತಹ ವಿಧಾನಗಳ ಮೂಲಕ ನಡೆಯುವ ಸಂಗತಿಗಳನ್ನು ಸ್ಪಂದ ಕಾರಿಕಾದಲ್ಲಿ (೧.೮) ವಿವರಿಸಲಾಗಿದೆ. ಸ್ಪಂದ ಕಾರಿಕವು ಕಾಶ್ಮೀರ ಶೈವ ಸಿದ್ಧಾಂತ ಕುರಿತಾದ ಗ್ರಂಥವಾಗಿದ್ದು ಅದು ಹೀಗೆ ಹೇಳುತ್ತದೆ, "ನೈಜ ವ್ಯಕ್ತಿಯು ತನ್ನ ಮನೋವಾಂಛಿತ ಕಾಮನೆಗಳನ್ನು ಹತ್ತಿಕ್ಕಲಾರ; ಆದರೆ ಅವನು ಆತ್ಮದ (ಶಿವನ) ಶಕ್ತಿಯ ಪರಧಿಯೊಳಗೆ ಪ್ರವೇಶಿಸಿದಾಗ ಅವನು ಆ ಆತ್ಮನಿಗೆ (ಶಿವನಿಗೆ) ಸಮಾನನಾಗುತ್ತಾನೆ". ಶಿವನನ್ನು ಬಯಸುವವನು ಸ್ವಯಂ ಶಿವನೇ ಆಗುತ್ತಾನೆ. ಇದನ್ನೇ ಶಿವಜ್ಞಾನವೆನ್ನುತ್ತಾರೆ ಮತ್ತು ದೇವಿಯು ಇಂತಹ ಪರಮೋನ್ನತ ಜ್ಞಾನವನ್ನು ಕರುಣಿಸುತ್ತಾಳೆ”.

        ಶಿವನ ಶಕ್ತಿಯನ್ನು ತಿಳಿಯುವ ಮೊದಲು ಅವನನ್ನು ಹೊಂದಲಾಗದು ಎಂದು ಹೇಳಲಾಗುತ್ತದೆ. ಕೇವಲ ದೇವಿ ಮಾತ್ರಳೇ ಒಬ್ಬನನ್ನು ಶಿವನೆಡೆಗೆ ಕೊಂಡೊಯ್ಯಬಲ್ಲಳು. ಶಿವನು ನೇರವಾಗಿ ಹೊಂದಲ್ಪಡುವುದಿಲ್ಲ. ದೇವಿಯು ಅವಶ್ಯವಿರುವ ಪರಮೋನ್ನತ ಜ್ಞಾನವನ್ನು ಕರುಣಿಸದ ಹೊರತು ಯಾರೂ ಶಿವನನ್ನು ಅರಿಯಲಾರರು. ಆದ್ದರಿಂದ ದೇವಿಯನ್ನು ಶಿವ ಜ್ಞಾನ ಪ್ರದಾಯಿನೀ ಎಂದು ಕರೆಯಲಾಗಿದೆ.

                                                                                                                   ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 721 - 727 http://www.manblunder.com/2010/05/lalitha-sahasranamam-721-727.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Thu, 11/21/2013 - 05:18

ಶ್ರೀಧರರೆ, "೧೬೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೨೧ - ೭೨೭
_____________________________
.
೭೨೧. ಕೋಮಲಾಂಗೀ
ಕೋಮಲತೆ ಮೃದುತ್ವದಲಿ ಲಲಿತೆ, ಭಕ್ತರಿಗೆ ಕೈಗೆಟುಕುವ ಭಂಗಿ
ತನುಮನ ಮೃದು ಧೋರಣೆ, ಸೂಕ್ಷ್ಮ ಕುಂಡಲಿನೀ ಕೋಮಲಾಂಗೀ
ಹಣಿದೆ ಕಡು ದಾನವರ, ಕೈಗೊಳ್ಳುತಲೆ ಸೃಷ್ಟಿ ಸ್ಥಿತಿ ಲಯ ಕಠಿಣ
ಕಾಠೀಣ್ಯದ ಹೊದಿಕೆ ದೇವಿ, ಮೃದು ಕೋಮಲ ಶರೀರ ಸಂಪೂರ್ಣ ||
.
೭೨೨. ಗುರುಪ್ರಿಯಾ
ದಾನವರಿಗಿದ್ದಂತೆ ಗುರು ಶುಕ್ರ, ದೇವತೆಗಳಿಗೆ ಗುರುಗ್ರಹ ಗುರು
ಪಂಚದಶೀ ಷೋಡಶೀ ಮಂತ್ರಮುಖೇನ ಶ್ರೀವಿದ್ಯಾ ಪದ್ದತಿ ಸಾರು
ಪರಮಗುರು ಶಿವನ ಮೇಲಮಿತ ಅಕ್ಕರೆ, ಗುರುಪತ್ನಿಯ ಕಾರ್ಯ
ತಂತ್ರಶಾಸ್ತ್ರ ಸಕಲ ಕಲಿಸಿ ಗುರು ಆಪ್ತ, ದೇವಿ ತಾ ಗುರುಪ್ರಿಯಾ ||
.
೭೨೩. ಸ್ವತಂತ್ರಾ
ಪರಮೋನ್ನತ ಅಡಚಣೆ ವಿಮುಕ್ತ ಇಚ್ಛಾಶಕ್ತಿ ಲಲಿತೆಗೆ ಹಸ್ತಾಂತರ
ಬ್ರಹ್ಮದ ಪ್ರಕಾಶ ರೂಪ ದೇವಿಯ ವಿಮರ್ಶ ರೂಪವಾಗಿ ಸ್ವತಂತ್ರಾ
'ಸ್ವ' ಪರಮೋನ್ನತಾಧಿಕಾರಿ ಶಿವ, ೬೪ ತಂತ್ರ ಮೂರ್ತರೂಪ ಶಕ್ತಿ
ತಂತ್ರವೆನೆ ಅವಲಂಬನೆ, ಶಿವಶಕ್ತಿಯ ಪೂರಕತೆಯಲಿ ಜಗ ಮುಕ್ತಿ ||
.
೭೨೪. ಸರ್ವ-ತಂತ್ರೇಶೀ
ಸರ್ವ-ತಂತ್ರ-ಈಶೀ ಸಕಲ ತಂತ್ರಕೆ ಅಧಿದೇವತೆಯಾಗಿಹ ಲಲಿತೆ
ತಂತ್ರ ಮೂಲಾಧಾರ ಸ್ವರೂಪಿಣೀ, ಓಲೈಕೆ ಧ್ಯಾನಕೆ ಸಿದ್ಧಿ ಕೊಡುತೆ
ವೈದಿಕ-ತಾಂತ್ರಿಕ ವಿಧಾನದಲಿಹ ಶ್ರೀ ವಿದ್ಯಾ ಆಚರಣೆ ಅನುಕರಿಸಿ
ಸಕಲ ತಂತ್ರ ಸ್ವರೂಪಕೆ ಆರಾಧನೆ, ಲಲಿತೆಯಾಗಿ ಸರ್ವ ತಂತ್ರೇಶೀ ||
.
೭೨೫. ದಕ್ಷಿಣಾಮೂರ್ತಿ-ರೂಪಿಣೀ
ರೂಪರಹಿತ ಜ್ಞಾನಭೋಧಕ, ಮಹಾಷೋಡಶಿಗೆ ಋಷಿ ದಕ್ಷಿಣಾಮೂರ್ತಿ
ಬ್ರಹ್ಮದೀ ರೂಪದಲಿ ಬ್ರಹ್ಮ ವಿಷ್ಣುವಿಗು ಗುರುವಾಗಿ ಪರಿಗಣಿತ ಸಮಷ್ಟಿ
ದಕ್ಷಿಣಾಮುಖಿ ಆಸೀನನಾಗಿಹ ಸ್ವರೂಪ, ವಿಪುಲ ಮಂತ್ರಗಳಾ ಭರಣಿ
ತಂತ್ರ ಶಾಸ್ತ್ರ ನಿಪುಣ ಗುರು ಸ್ವರೂಪದಲಿಹ ದಕ್ಷಿಣಾಮೂರ್ತಿ ರೂಪಿಣೀ ||
.
ಆತ್ಮಾಗ್ನಿಯಲಿ ಭಸ್ಮ ದಾಕ್ಷಾಯಣಿ, ದಕ್ಷಿಣಾಭಿಮುಖವಾಗಿ ಶಿವನ ತಪ
ಸನಕ-ಸನ-ಸನತ್ಕುಮಾರ-ಸನಂದನ ಬ್ರಹ್ಮ ಮಾನಸ ಪುತ್ರ ಸ್ವರೂಪ
ಆತ್ಮ ಸಾಕ್ಷಾತ್ಕಾರ ಭೋಧೆ ಬೇಡೆ, ಮೌನ ವ್ರತದೆ ಚಿನ್ಮುದ್ರೆಯಲಿ ನೀಡಿ
ಬ್ರಹ್ಮ ಜೀವದ ಸಂಯೋಗ ಸೂಚಿ, ತೋರು ಹೆಬ್ಬೆರಳುಂಗುರದ ಜೋಡಿ ||
.
೭೨೬. ಸನಕಾದಿ-ಸಮಾರಾಧ್ಯಾ
ಲಲಿತಾಂಬಿಕೆಯ ಪರಮಭಕ್ತರು ಬ್ರಹ್ಮಮಾನಸಪುತ್ರರ ಇಚ್ಛೆ
ಸನಕಾದಿ ಮಹಾಋಷಿಗಳಿಗಿತ್ತು ಗುರು ದಕ್ಷಿಣಾಮೂರ್ತಿ ದೀಕ್ಷೆ
ಸೂಕ್ಷ್ಮ ಬೀಜದಿ ಸ್ಥೂಲ, ವಿಕಸನ ಪ್ರತಿನಿಧಿಸಿದ ಬೃಹತ್ ಆಲ
ಮಾತಿಲ್ಲದ ದೀಕ್ಷೆ ವಿನಿಮಯಿಸಿ, ದೇವಿ ಸನಕಾದಿಸಮಾರಾಧ್ಯ ||
.
೭೨೭. ಶಿವ-ಜ್ಞಾನ-ಪ್ರದಾಯಿನೀ
ಚಲನೆಯಿಂದ ಗಾಳಿ ಉಷ್ಣದಿಂದ ಬೆಂಕಿ ಅರಿವಂತೆ, ಶಕ್ತಿಯಿಂದ ಶಿವ
ದೇವಿಯ ಜ್ಞಾನ ಮೂಲ ಶಿವ, ಶಕ್ತಿ ಮೂಲಕಾ ಭಕ್ತ ಬ್ರಹ್ಮವರಿಯುವ
ಬ್ರಹ್ಮ ಪರಮೋನ್ನತ ಅಂತಿಮ ಜ್ಞಾನ, ಸೂಕ್ತರಿಗೆ ಲಲಿತೆ ಪ್ರಸಾದಿನಿ
ಬೇರಾರಿಗಿಲ್ಲದ ಸಾಮರ್ಥ್ಯ, ಬ್ರಹ್ಮದತ್ತೊಯ್ವ ಶಿವಜ್ಞಾನಪ್ರದಾಯಿನೀ ||
.
ಶಿವನ ಬಯಸಿ ಸ್ವಯಂಶಿವನಾಗೊ, ಶಿವಜ್ಞಾನ ಕರುಣಿಸೊ ಲಲಿತೆ
ಹತ್ತಿಕ್ಕಿಸಿ ಕಾಮನೆ ಮನೋವಾಂಛೆ, ಆತ್ಮ ಪರಿಧಿಯೊಳಗೆಳೆಸುತೆ
ಶಕ್ತಿಧ್ಯಾನದೆ ಕಳಚಿ ಪ್ರತ್ಯೇಕ ಅಸ್ಥಿತ್ವ, ಅನಾವರಣ ಸ್ವಯಂಪ್ರಕಾಶ
ಜ್ಞಾನ-ಕ್ರಿಯೆ ಶಂಕರಂ ಚೈತನ್ಯಂ, ಶಿವನಿಚ್ಛೆ ಪರಮ ನೇರ ಪರೋಕ್ಷ ||
.
.
ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು