ಗಹಗಹಿಸಿದ ಮೌನ -ಲಕ್ಷ್ಮೀಕಾಂತ ಇಟ್ನಾಳ

ಗಹಗಹಿಸಿದ ಮೌನ -ಲಕ್ಷ್ಮೀಕಾಂತ ಇಟ್ನಾಳ

ಗಹಗಹಿಸಿದ ಮೌನ
        - ಲಕ್ಷ್ಮೀಕಾಂತ ಇಟ್ನಾಳ

ದುಡಿದು ಹಣ್ಣಾಗಿ, ಬಳಲಿತ್ತು ಬಸುರಿ,
ಸಂತೆಯ ಸಂದಣಿಯಲ್ಲಿ ಮುಖತೂರಿ,
ಕೇಳುತ್ತ ಪುಟ್ಟ ಅಂಗಿಯ ಧಾರಣಿ, 
ಉಡಿಸಲೊಂದು ತನ್ನೊಡಲ ಕುಡಿಗೆ,
ಇವಳ ಧಾರಣಿಗೆ,‘ಪದರಿಗೆ ಬಿದ್ದಿಲ್ಲ’ ಎಂದದ್ದು 
ಕೇಳಿಯೂ ಕೇಳದಂತೆ, ಸರಿದಿದ್ದಳು ಮುಂದೆ,
ಸುಮ್ಮನೆ ಯಾಕೋ ಫಸಗಿ ಬೀಳುವ ಭಯದಿಂದ,
ಫಸಾಸುವ ಜನವೇ ಹರಡಿಹರು ದುನಿಯಾ ತುಂಬ 
ಎಂಬ ಮಾತಿಗೆ ತುಂಬ ನಂಬುಗೆ ಅವಳಿಗೆ!

ಹೊಟ್ಟೆ ಬಟ್ಟೆಯ ಕಟ್ಟಿ ಕೊನೆಗೂ 
ಕುಡಿಯೊಡೆಯದ ಕುಡಿಗೆ, ಕೊಂಡ ಅಂಗಿಯ
ಮೆಲ್ಲಗೆ ನೇವರಿಸಿ, ಸ್ಪರ್ಶಕ್ಕೆ ಪುಳಕಾಗಿ, 
ಹಾಕುತ್ತ ರೋಮಾಂಚನದಿ, ಮನೆಯತ್ತ ಹೆಜ್ಜೆ!
 
ಉನ್ಮತ್ತ ಗಂಡಿನ ಕಾಡುವ ಬೇಡಿಕೆಗೆ,
ಬೆಂಕಿ ಕೆನ್ನಾಲಿಗೆಗೆ ಮೈಯೆಲ್ಲ ತತ್ತರ, 
ಬೆಳ್ಳಿ ಮೂಡುವ ಹೊತ್ತಿಗೆ, ಅಸಾಧ್ಯ ನೋವು, 
ಬಿಗಿಹಿಡಿದ ಉಸಿರಲ್ಲಿ, ಬಸಿದ ರಕ್ತ!

ಮೂಕಮೌನದ ರಾಗದಲಿ, ಒಡಲೆಲ್ಲ ಛಿದ್ರ, 
ಹಕ್ಕಿ ತೊರೆದ ಗೂಡು! ಶೂನ್ಯ ದೃಷ್ಟಿಯ ಹಾಡು!
ಗಹಗಹಿಸಿದ ಮೌನ. 
ಹೃದಯ ಮಮಕಾರದಿ, ತುಂಬುತ್ತಲೇ ಇದೆ ಎದೆಯನ್ನು,
ಬಿರಿದೆದೆಯ ತುಂಬ ಹಾಲು!
ಕೊಡುವುದಷ್ಟೆ ಗೊತ್ತು ಅದಕೆ, ಭುವಿಯ ಹಾಗೆ!
ಹಿಂಡಿ ಹೊರತೆಗೆಯ ಬೇಕಿದೆ, ನೋವು ನೀಡಿ!

ಫಸಾಸಿದ ಇರುಳು, ಉರುಳಾಯಿತು ಕಂದಗೆ, 
ಪುಟ್ಟ ಅಂಗಿ ಮಾತ್ರ  ದೃಷ್ಟಿ ನೆಟ್ಟು ನೋಡುತ್ತಿದೆ,
ಕಿಸಾಗೌತಮಿಯ ಸಾವಿಲ್ಲದ ಸಾಸಿವೆಯ
ಮನೆ ಮನೆಯ ಕಥೆಯ ವ್ಯಥೆಗೆ! 

Rating
No votes yet

Comments

Submitted by nageshamysore Thu, 11/21/2013 - 08:20

ಇಟ್ನಾಳರೆ ನಮಸ್ಕಾರ - ಬಹಳ ದಿನದ ನಂತರ ತಮ್ಮ ಬರಹ ಸಂಪದದಲ್ಲಿ :-)
.
ಕೂಸು ಹುಟ್ಟುವ ಮುಂಚಿನ ಕುಲಾವಿ ಅಂಗಿ - ನಿರೀಕ್ಷೆ, ಕಾತರ, ಅನಿವಾರ್ಯ, ದೌರ್ಜನ್ಯ, ಸಂಕಟಗಳೆಲ್ಲದರ ಒಟ್ಟಾರೆ ಪ್ರತೀಕವಾಗಿ ಬಿಂಬಿತವಾಗಿದೆ . ಗಹಿಗಹಿಸದ ಮೌನವೂ ಅನಾಥವಾಗುವ ಮೂಕಭಾವ ಚೆನ್ನಾಗಿದೆ.
.
- ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Submitted by lpitnal Thu, 11/21/2013 - 09:40

In reply to by nageshamysore

ನಾಗೇಶ್ ಜಿ, ನಮಸ್ಕಾರ. ಕೆಲಸದ ಒತ್ತಡದಲ್ಲಿ ಬರಹ ಕಡಿಮೆಯಾಗುತ್ತಿದೆ. ಆದರೂ ಪ್ರಯತ್ನಸುವೆ. ತಮ್ಮ ಸಾಹಿತ್ಯ ಸೇವೆ ಸದಾ ಮುಂದುವರೆಯಲಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

Submitted by H A Patil Thu, 11/21/2013 - 19:47

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
' ಗಹಿ ಗಹಿಸಿದ ಮೌನ ' ನಮ್ಮ ದೇಶದ ಕೋಟ್ಯಾಂತರ ತಾಯಂದಿರು ಭೂಮಿಯೆ ಹಾಸಿಗೆ ಆಕಾಶವೆ ಹೊದಿಕೆ ಎಂಬಂತೆ ಕನಿಷ್ಟ ಸವಲತ್ತುಗಳೂ ದೊರೆಯದ ಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದಾರೆ. ಸಮಾಜ ಸರ್ಕಾರಿ ವ್ಯವಸ್ಥೆಗಳು ಜಡ್ಡುಗಟ್ಟಿ ಕುಳಿತಿವೆ. ಇಂತಹ ಭಾವ ಸೂಕ್ಷ್ಮಗಳಿಗೆ ಮಿಡಿಯುವ ಸ್ಪಂದಿಸುವ ಸ್ಥಿತಿಯಲ್ಲಿ ಅವುಗಳು ಇಲ್ಲ. ಅಮಾಯಕ ಕೆಳಸ್ಥರದ ಬಡ ಮಹಿಳೆಯ ಬಗೆಗೆ ಮಿಡಿಯುವವರು ಯಾರು. ಆಕೆಯ ಸ್ಥಿತಿ ಮರುಕ ಹುಟ್ಟಿಸುತ್ತದೆ. ಗರ್ಭಿಣಿ ತಾಯಿ ತನ್ನ ಬರಲಿರುವ ಮಗುವಿನ ಬಗೆಗಿನ ಕನಸು, ಅದು ನನಸಾಗದ ಪರಿಸ್ಥಿತಿಯ ಕುರಿತು ಮನ ಕಲುಕುವ ರೀತಿಯಲ್ಲಿ ಕವನ ಮೂಡಿ ಬಂದಿದೆ. ಕವಿ ಗುಲ್ಜಾರರ ಕವನಗಳ ಅನುವಾದದ ಕೃತಿ ಹೊರ ತರುವ ವಿಚಾರ ಎಲ್ಲಿಗೆ ಬಂದು
ನಿಂತಿದೆ, ಅನ್ಯಥಾ ಭಾವಿಸಬಾರದು ಧನ್ಯವಾದಗಳು.

Submitted by lpitnal Fri, 11/22/2013 - 08:49

In reply to by H A Patil

ಹಿರಿಯರಾದ ಪಾಟೀಲರವರಿಗೆ ನಮಸ್ಕಾರ. ತಮ್ಮ ಕಾಳಜಿಗೆ ಧನ್ಯ. ವೃತ್ತಿಯ ಜಂಜಾಟದಲ್ಲಿ ಪ್ರವೃತ್ತಿಗೆ ಸ್ಥಾನ ಸಿಗಲೊಲ್ಲದಾಗಿದೆ. ಅತೀವ ಒತ್ತಡ ಬೇರೆ ಕೆಲಸಕ್ಕೆ ಅನುವು ಮಾಡುತ್ತಿಲ್ಲದುದು ನನಗೇ ಬೇಸರ. ಕವನಕ್ಕೆ ತಮ್ಮ ಮೆಚ್ಚುಗೆಗೆ ಋಣಿ. ಬಿಡುವಾದಾಗ ಖಂಡಿತ ಬರೆಯುವೆ. ತಾವು ಗುಲ್ಜಾರರ ಅನುವಾದಗಳ ಪ್ರಕಟಣೆಯ ಬಗ್ಗೆ ಕೇಳಿದಿರಿ. ಕರಡು ಪ್ರತಿ ಗುಲ್ಜಾರ ಜಿ ಯವರಿಗೆ ಕಳುಹಿಸಿದ್ದೇನೆ. ಫಾಲೋ ಅಪ್ ಮಾಡುವುದಾಗುತ್ತಿಲ್ಲ. ಇತ್ತೀಚೆಗೆ ಗುಲ್ಜಾರಜಿ ಯವರು ಆಸ್ಸಾಂ ಸಿಲ್ಚಾರ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತರುವುದು ಸರಿಯಷ್ಟೆ. ಹೀಗಾಗಿ ಅವರನ್ನು ಎಲ್ಲಿ , ಹೇಗೆ ಯಾವಾಗ ಸಂಪರ್ಕಿಸುವುದು ಯಾವುದೂ ಅರ್ಥವಾಗುತ್ತಿಲ್ಲ. ಈ ಫೀಲ್ಡಗೆ ನಾನು ತುಂಬ ಹೊಸಬ. ಕಾಯುವುದಷ್ಟೆ ನನ್ನ ಕೆಲಸ. ಅದೃಷ್ಟವಿದ್ದಲ್ಲಿ ಅನುಮತಿ ಸಿಗಬಹದು. ಮತ್ತೊಮ್ಮೆ ವಂದನೆಗಳು.