ಶಿಕ್ಷಣ: ದಾರಿ ತಪ್ಪುತ್ತಿದೆಯೇ?
ಮಾನವ ಜೀವನದಲ್ಲಿ ೧೬ ಸಂಸ್ಕಾರಗಳು ಒಬ್ಬ ಆದರ್ಶವ್ಯಕ್ತಿಯಾಗಿ ರೂಪುಗೊಳ್ಳಲು ಅವಶ್ಯಕವೆಂದು ಹೇಳುತ್ತಾರೆ. ಅವೆಂದರೆ, ೧. ಗರ್ಭಾದಾನ, ೨. ಪುಂಸವನ, ೩. ಸೀಮಂತೋನ್ನಯನ, ೪. ಜಾತಕರ್ಮ, ೫. ನಾಮಕರಣ, ೬. ನಿಷ್ಕ್ರಮಣ, ೭. ಅನ್ನಪ್ರಾಶನ, ೮. ಮುಂಡನ, ೯. ಕರ್ಣವೇಧ, ೧೦. ಉಪನಯನ, ೧೧. ವೇದಾರಂಭ, ೧೨. ಸಮಾವರ್ತನ, ೧೩. ವಿವಾಹ, ೧೪. ವಾನಪ್ರಸ್ಥ, ೧೫. ಸಂನ್ಯಾಸ, ೧೬. ಅಂತ್ಯೇಷ್ಟಿ. ಇವುಗಳಲ್ಲಿ ಮೊದಲ ಮೂರು ಸಂಸ್ಕಾರಗಳು ಹುಟ್ಟುವ ಮುನ್ನದ ಸಂಸ್ಕಾರಗಳಾಗಿದ್ದು, ಇವನ್ನು ಉತ್ತಮ ಸಂತಾನವನ್ನು ಪಡೆಯುವ ಸಲುವಾಗಿ ಆಚರಿಸುತ್ತಾರೆ. ಇನ್ನು ಮೂರು ಸಂಸ್ಕಾರಗಳಾದ ವಿವಾಹ, ವಾನಪ್ರಸ್ಥ ಮತ್ತು ಸಂನ್ಯಾಸ ಇವುಗಳು ಎಲ್ಲರಿಗೂ ಕಡ್ಡಾಯವಲ್ಲ. ಈ ಸಂಸ್ಕಾರಗಳು ಅರ್ಹತೆ ಮತ್ತು ಆಸಕ್ತಿಯಿರುವರಿಗೆ ಮಾತ್ರ. ಅಂತ್ಯೇಷ್ಟಿ ಸಂಸ್ಕಾರ ಮೃತರಾದ ನಂತರ ಮಾಡುವಂತಹದು. ಇವುಗಳನ್ನು ಹೊರತುಪಡಿಸಿ ಉಳಿಯುವ ೯ ಸಂಸ್ಕಾರಗಳು ಮಕ್ಕಳಿಗೆ ಸಂಬಂಧಿಸಿದವು. ಮಕ್ಕಳನ್ನು ಸತ್ಪ್ರಜೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಈ ಸಂಸ್ಕಾರಗಳಿಗೆ ಹಿಂದೆ ಎಷ್ಟು ಪ್ರಾಧಾನ್ಯತೆಯಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಇಂದಿನ ಅವಸರದ ಪ್ರಪಂಚದಲ್ಲಿ ಮಕ್ಕಳ ಬೆಳವಣಿಗೆಗೆ ಕೊಡಬೇಕಾದಷ್ಟು ಗಮನವನ್ನು ಕೊಡುತ್ತಿದ್ದೇವೆಯೇ ನೋಡೋಣ.
ಹಿಂದಿನ ಕಾಲದಲ್ಲಿ ಹೆರಿಗೆಗಳನ್ನು ಮನೆಗಳಲ್ಲೇ ಮಾಡುತ್ತಿದ್ದು ಸೂಲಗಿತ್ತಿಯರೆಂದು ಕರೆಯುವ ನಿಪುಣ ಸ್ತ್ರೀಯರು ಈ ಕೆಲಸ ಮಾಡುತ್ತಿದ್ದರು. ಈಗ ಸಾಮಾನ್ಯವಾಗಿ ಆಸ್ಪತ್ರೆಗಳಲ್ಲೇ ನುರಿತ ವೈದ್ಯರು, ದಾದಿಯರು ಮಾಡುತ್ತಾರೆ. ಮಗುವಿಗೆ ಹೆಸರಿಡುವಾಗ ಒಳ್ಳೆಯ ಅರ್ಥ ಕೊಡುವ, ಒಳ್ಳೆಯದನ್ನು ಸೂಚಿಸುವ ಹೆಸರುಗಳನ್ನು ಇಟ್ಟರೆ ಆ ಹೆಸರುಗಳನ್ನು ಕರೆಯುವವರಿಗೆ ಮತ್ತು ಕರೆಸಿಕೊಳ್ಳುವವರಿಗೆ ಹೆಸರಿಗೆ ತಕ್ಕಂತೆ ಇರಲು ಪ್ರೇರಿಸಿದಂತಾಗುತ್ತದೆ. ಕೆಲವರು ಅರ್ಥವೇ ತಿಳಿಯದ ಹೆಸರುಗಳನ್ನೂ ಇಡುವುದನ್ನು ಕಾಣುತ್ತಿದ್ದೇವೆ. ಮಗುವನ್ನು ಮೊದಲ ಸಲ ಹೊರಗೆ ಕರೆದೊಯ್ಯುವಾಗ ನಿಷ್ಕ್ರಮಣ, ತಾಯ ಹಾಲಿನ ಜೊತೆಗೆ ಬೇರೆ ಆಹಾರದ ಅಭ್ಯಾಸ ಪ್ರಾರಂಭದ ಸಮಯದಲ್ಲಿ ಅನ್ನಪ್ರಾಶನ (ಸಾಮಾನ್ಯವಾಗಿ ಹಲ್ಲು ಬರುವ ಸಮಯದಲ್ಲಿ), ಮಗುವಿಗೆ ಸುಮಾರು ಮೂರು ವರ್ಷವಾದಾಗ, ಅಂದರೆ ಮೃದುವಾಗಿದ್ದ ತಲೆಬುರುಡೆ ಸ್ವಲ್ಪ ಗಟ್ಟಿಯಾದಾಗ, ಚೂಡಾಕರ್ಮ, ಕಿವಿ ಚುಚ್ಚುವುದು (ಕಿವಿ ಚುಚ್ಚುವುದರಿಂದ ಹರ್ನಿಯಾ ಸಮಸ್ಯೆ ನಿವೃತ್ತಿಯಾಗುವುದೆಂದು ಶಲ್ಯತಂತ್ರ(ಸರ್ಜರಿ)ದಲ್ಲಿ ಸುಪ್ರಸಿದ್ಧನಾದ ಸುಶ್ರುತನ ಅಭಿಪ್ರಾಯ), ಮುಂತಾದವು ಮಗುವಿಗೆ ಮಾಡಲಾಗುವ ಪ್ರಾರಂಭಿಕ ಸಂಸ್ಕಾರಗಳು.
ಮುಂದಿನ ಹಂತ ಮಗುವಿನ ವಿದ್ಯಾಭ್ಯಾಸಕ್ಕೆ ಅನುವು ಮಾಡುವುದು. ಇಲ್ಲೇ ನಾವು ದಾರಿ ತಪ್ಪುತ್ತಿದ್ದೇವೇನೋ ಅನ್ನಿಸುತ್ತದೆ. ಮೆಕಾಲೆಯ ಶಿಕ್ಷಣನೀತಿಯ ಬಲಿಪಶುಗಳಾಗಿ ವಿಷವರ್ತುಲದಿಂದ ಹೊರಬರಲಾರದೆ ಇದ್ದೇವೆ. ಹಿಂದಿನ ಗುರುಕುಲ ಪದ್ಧತಿಯ ವ್ಯವಸ್ಥೆಯಲ್ಲಿ ಮಗುವಿಗೆ ಸಾಮಾನ್ಯವಾಗಿ ೭-೮ ವರ್ಷಗಳಾದಾಗ ಮಗುವಿಗೆ ಉಪನಯನ ಸಂಸ್ಕಾರ ಮಾಡಿ ತಮಗೆ ಅನುಕೂಲವೆನ್ನಿಸುವ ಗುರುಕುಲಕ್ಕೆ ಮಕ್ಕಳನ್ನು ಬಿಡುತ್ತಿದ್ದರು. ಉಪನಯನದ ಜೊತೆಗೇ ವೇದಾರಂಭ ಸಂಸ್ಕಾರವನ್ನೂ ಮಾಡುತ್ತಿದ್ದರು. ಉಪ ಎಂದರೆ ಹತ್ತಿರಕ್ಕೆ, ನಯನವೆಂದರೆ ಕರೆದೊಯ್ಯುವುದು ಎಂದರ್ಥ. ಮಗುವನ್ನು ವಿದ್ಯಾಭ್ಯಾಸದ ಸಲುವಾಗಿ ಗುರುಗಳ ಬಳಿಗೆ ಕರೆದೊಯ್ಯುವುದೇ ಉಪನಯನ. ಆಗ ಸಂಕಲ್ಪದ ರೂಪದಲ್ಲಿ ಧರಿಸಲಾಗುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಋಷಿಋಣ, ಪಿತೃಋಣಗಳನ್ನು ಸಂಕೇತಿಸುತ್ತವೆ. ಇದು ಬಹು ಹಿಂದೆ ಜಾತಿಸೂಚಕವಾದ ಚಿಹ್ನೆಯಾಗಿರಲಿಲ್ಲ. ವೇದಾರಂಭವೆಂದರೆ ಕೇವಲ ವೇದಮಂತ್ರಗಳನ್ನು ಕಲಿಯುವುದಲ್ಲ, ಇನ್ನಿತರ ವಿದ್ಯೆಗಳನ್ನೂ-ಗಣಿತ, ವಿಜ್ಞಾನ, ಶಸ್ತ್ರವಿದ್ಯೆ, ತರ್ಕ, ಮುಂತಾದ- ಕಲಿಯುವುದಾಗಿತ್ತು. ವೇದ ಎಂಬ ಪದದ ಅರ್ಥ ಜ್ಞಾನ ಎಂದೇ ಹೊರತು ಬೇರೆಯಲ್ಲ. ಗುರುಕುಲಗಳಲ್ಲಿ ಸಕಲವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು. ರಾಮ, ಕೃಷ್ಣ, ಪಾಂಡವರೇ ಮೊದಲಾದವರು ಗುರುಕುಲಗಳಲ್ಲಿ ಶಸ್ತ್ರ-ಶಾಸ್ತ್ರ ಪ್ರವೀಣರಾದ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಗುರುಕುಲಗಳಲ್ಲಿ ಜಾತಿಭೇದವಿರಲಿಲ್ಲ, ಉಚ್ಛ-ನೀಚ ಭಾವನೆಗಳಿರಲಿಲ್ಲ. ರಾಜರ ಮಕ್ಕಳೂ, ಸಾಮಾನ್ಯರ ಮಕ್ಕಳೂ ಒಟ್ಟಿಗೇ ಗುರುಕುಲಗಳಲ್ಲಿ ವಾಸವಿದ್ದು ಸಮಾನಭಾವದಲ್ಲಿ ಅಲ್ಲಿ ವಿದ್ಯೆ ಕಲಿಯಬೇಕಿತ್ತು. ಸಮಾಜದ ಋಣದಲ್ಲಿ ನಡೆಯುತ್ತಿದ್ದ ಗುರುಕುಲಗಳಿಗೆ ಶಿಕ್ಷಾರ್ಥಿಗಳು ಭಿಕ್ಷೆ ಸಂಗ್ರಹಿಸಿ ಆಚಾರ್ಯರಿಗೆ ನೀಡುತ್ತಿದ್ದರು. ಶಿಕ್ಷಾರ್ಥಿಗಳು ಅವರ ಶಕ್ತ್ಯಾನುಸಾರ ಮತ್ತು ಆಸಕ್ತಿಗಳಿಗನುಸಾರವಾಗಿ ಶಿಕ್ಷಣ ಪಡೆದು ಪ್ರವೀಣರೆನಿಸಿದ ನಂತರ ಸಮಾವರ್ತನ (ಬೀಳ್ಕೊಡುಗೆ ಕಾರ್ಯಕ್ರಮವೆಂದರೆ ಅರ್ಥವಾದೀತು) ಸಂಸ್ಕಾರ ನಡೆಯುತ್ತದೆ. ಈ ಸಮಯದಲ್ಲಿ ಗುರುವು ತನ್ನ ಶಿಷ್ಯರಿಗೆ ವಿಶೇಷವಾದ ಉಪದೇಶ ನೀಡಿ ಸತ್ಪ್ರಜೆಗಳಾಗಲು ಹರಸಿ ಬೀಳ್ಕೊಡುತ್ತಾರೆ. ಗುರುಕುಲದಲ್ಲಿದ್ದಷ್ಟು ಕಾಲವೂ ಗುರುವು ನೀಡಿದ್ದು ಉಪದೇಶವೇ ಆಗಿದ್ದರೂ, ಸಮಾವರ್ತನ ಕಾಲದಲ್ಲಿ ಅವೆಲ್ಲವನ್ನೂ ಸಾರರೂಪದಲ್ಲಿ ಸಂಗ್ರಹವಾಗಿ ತಿಳಿಸುತ್ತಾರೆ. ಹಾಗೆ ಸ್ನಾತಕರೆನಿಸಿಕೊಂಡ ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿದಾಗ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ, ಸ್ವಸಾಮರ್ಥ್ಯದಲ್ಲಿ ಬದುಕುವ, ಸಮಾಜಕ್ಕೆ ಒದಗುವ ಯಾವುದೇ ಅಪಾಯದ ವಿರುದ್ಧ ಸೆಟೆದುನಿಲ್ಲುವ, ರಕ್ಷಿಸುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ, ಗುರು-ಹಿರಿಯರಿಗೆ ಗೌರವ ತೋರಿಸುವವರಾಗಿರುತ್ತಾರೆ.
ಮೇಲಿನದು ಬಹಳ ಹಿಂದಿನ ಕಾಲದ ಮಾತಾಯಿತು. ಹಲವು ದಶಕಗಳ ಹಿಂದಿನ ಸ್ಥಿತಿ ಗಮನಿಸಿದರೆ ಆಗ ಪ್ರತಿ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿರುತ್ತಿದ್ದವು, ಅವಿಭಕ್ತ ಕುಟುಂಬಗಳಿದ್ದವು, ಟಿವಿ ಇರಲಿಲ್ಲ, ಮನೆಯಲ್ಲಿ ಒಟ್ಟಾಗಿ ಬಾಳುವ ಮನೋಭಾವವಿರುತ್ತಿತ್ತು, ಸಂಬಂಧಗಳಿಗೆ ಮಾನ್ಯತೆಯಿತ್ತು, ನೈತಿಕ ಮೌಲ್ಯಗಳು ಅಷ್ಟಾದರೂ ಇದ್ದವು. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಒಟ್ಟಾಗಿ ಭಜನೆ, ಪ್ರಾರ್ಥನೆ ಮಾಡುವ ಪರಿಪಾಠವಿತ್ತು. ಒಟ್ಟಾರೆಯಾಗಿ ಸಂತೋಷಕ್ಕೆ ಕೊರತೆಯಿರಲಿಲ್ಲ. ಕುಟುಂಬದ ಸದಸ್ಯರು ಯಾರೊಬ್ಬರು ದುರ್ಬಲರಾಗಿದ್ದರೂ ಉಳಿದವರು ಅವರನ್ನು ಕೈಹಿಡಿದು ಎತ್ತುತ್ತಿದ್ದರು. ಹಣದಲ್ಲಿ ಬಡತನವಿದ್ದರೂ ಆತ್ಮಸ್ಥೈರ್ಯಕ್ಕೆ ಬಡತನವಿರಲಿಲ್ಲ.
ಈಗ ಇಂದಿನ ಕಾಲದ ಶಿಕ್ಷಣದ ಬಗ್ಗೆ ನೋಡೋಣ. ಇಂದಿನ ಮಕ್ಕಳ ಪರಿಸ್ಥಿತಿ ನೋಡಿದರೆ ಮರುಕವಾಗುತ್ತದೆ. ವೈವಾಹಿಕ ಸಂಬಂಧಗಳೇ ಮಹತ್ವ ಕಳೆದುಕೊಳ್ಳುತ್ತಿರುವ, ಇಂದು ಮದುವೆ ಮತ್ತು ನಾಳೆ ವಿಚ್ಛೇದನ ಎಂಬಂತಹದು ಸಾಮಾನ್ಯವಾಗುತ್ತಿರುವ, ಒಪ್ಪಂದ ಆಧಾರದ ಸಂಬಂಧಗಳು ಹೆಚ್ಚುತ್ತಿರುವಾಗ, ವಿಚ್ಛೇದನದ ಕಾರಣದಿಂದ ಮತ್ತು ಪತಿ-ಪತ್ನಿಯರ ನಡುವಣ ಸಾಮರಸ್ಯದ ಕೊರತೆಯಿಂದ ಅನಾಥಪ್ರಜ್ಞೆಯಿಂದ ನರಳುವ ಮಕ್ಕಳನ್ನು ಕಂಡರೆ ದಿಗಿಲಾಗುತ್ತದೆ. ಮಕ್ಕಳಿಗೆ ಸುಮಾರು ೬ ವರ್ಷಗಳಾಗುವವರೆಗೆ, ಮೆದುಳು ಇನ್ನೂ ಬಲಿಯಬೇಕಾಗಿರುವುದರಿಂದ, ಅವರಿಗೆ ಕಲಿಕೆಯ ಶ್ರಮ ಕೊಡಬಾರದೆಂದು ಮನೋಶಾಸ್ತ್ರಜ್ಞರು ಮತ್ತು ಶಿಕ್ಷಣತಜ್ಞರು ಹೇಳುತ್ತಾರೆ. ಆದರೆ, ನಗರಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ದುಡಿಯಲು ಹೋಗುವವರಾದರೆ ಇನ್ನೂ ತಾಯ ಮಡಿಲಿನಲ್ಲೇ ಪಿಳಿಪಿಳಿ ಕಣ್ಣು ಬಿಟ್ಟು ಆಟವಾಡಬೇಕಾದ ಮಕ್ಕಳನ್ನೂ ಶಿಶುಕೇಂದ್ರ(ಬೇಬಿ ಕೇರ್)ಗಳಲ್ಲಿ ಬಿಟ್ಟುಹೋಗುತ್ತಾರೆ. ಅಲ್ಲಿ ಮಕ್ಕಳನ್ನು ಸುಧಾರಿಸಲಾಗದೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸುತ್ತಾರೆಂದೂ ದೂರುಗಳಿವೆ. ಒಂದು ಶಿಶುಕೇಂದ್ರದಲ್ಲಂತೂ ಮಕ್ಕಳಿಗೆ ಹರಕುಬಟ್ಟೆ ಹಾಕಿ ಭಿಕ್ಷಾಟನೆಗೆ ಕರೆದೊಯ್ಯಲು ಬಾಡಿಗೆಗೆ ಒದಗಿಸುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದಿತ್ತು. ಹುಟ್ಟುತ್ತಲೇ ಬೇಬಿ ಸಿಟ್ಟಿಂಗ್, ೨-೩ ವರ್ಷವಾಗುತ್ತಲೇ ಎಲ್.ಕೆ.ಜಿ., ನಂತರ ಯು.ಕೆ.ಜಿ., ನಂತರ ಒಂದನೆಯ ತರಗತಿಗೆ ಮಕ್ಕಳನ್ನು ದಾಖಲಿಸುವುದು (ಅದೂ ಆಂಗ್ಲ ಮಾಧ್ಯಮದ ಶಾಲೆಗಳಿಗೆ) ಕಾಣುತ್ತಿದ್ದೇವೆ. ಶಾಲೆಗಳಲ್ಲೂ 'ಡೇ ಕೇರ್' ಸೌಲಭ್ಯವಿದ್ದು ತಂದೆ/ತಾಯಿ ಕೆಲಸ ಮುಗಿಸಿಕೊಂಡು ಬರುವವರೆಗೂ ಶಾಲೆ ಮುಗಿದ ನಂತರವೂ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ನಗರಗಳಲ್ಲಿದೆ. ಮೊದಲ ಪಾಠಶಾಲೆಯಾಗಬೇಕಾಗಿದ್ದ ಮನೆಯೇ ಮಕ್ಕಳನ್ನು ಮನೆಯಿಂದ ಹೊರಗೆ ಹಾಕುವ ಪ್ರಕ್ರಿಯೆಗೆ ಹುಟ್ಟುತ್ತಲೇ ಚಾಲನೆ ಕೊಡುತ್ತಿದೆ. ಮೊದಲ ಪಾಠಶಾಲೆಯೇ ಇಂದಿನ ಮಕ್ಕಳಿಗೆ ಇಲ್ಲ. ಮೊದಲ ಶಿಕ್ಷಕರಾದ ತಾಯಿ-ತಂದೆಯರಿಗೆ ಪುರುಸೊತ್ತೇ ಇಲ್ಲ.
ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳನ್ನು ಸೇರಿಸಿಕೊಳ್ಳುವ ಪರಿಪಾಠವಿದೆ. ಇಷ್ಟಾಗಿಯೂ ಅಲ್ಲಿ ಹೇಳಿಕೊಡುವುದೇನು? ಪಾಶ್ಚಾತ್ಯ ಮಾದರಿಯ ಅಣಕು ಶಿಕ್ಷಣ, ಭಾರತೀಯ ಸಂಸ್ಕೃತಿಯ ಅವಹೇಳನ ಮತ್ತು ತಿರುಚಿದ ಇತಿಹಾಸದ ಕಲಿಕೆ! ನೈತಿಕ ಶಿಕ್ಷಣ, ಮೌಲ್ಯಗಳಿಗೆ ಅಲ್ಲಿ ಅವಕಾಶವೇ ಇಲ್ಲ, ಎಲ್ಲವೂ ವ್ಯವಹಾರ, ಹಣವೇ ಅಳತೆಗೋಲು! ಭಾರತೀಯರು ಮೆಕಾಲೆ ಹಿಂದೆ ನುಡಿದಿದ್ದ ಭವಿಷ್ಯದಂತೆ ಕರಿಚರ್ಮದ ಪಾಶ್ಚಾತ್ಯರಾಗಿದ್ದಾರೆ! ಇಷ್ಟಾಗಿಯೂ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಪ್ರತಿಷ್ಟಿತ ಶಾಲೆಗಳಿಗೆ ಸೇರಿಸುವ ಉದ್ದೇಶವೆಂದರೆ ಮುಂದೆ ತಮ್ಮ ಮಕ್ಕಳು ಡಾಕ್ಟರೋ, ಇಂಜನಿಯರೋ ಆಗಿ ಲಕ್ಷ ಲಕ್ಷ ಸಂಪಾದಿಸಲಿ ಎಂದು! ಶಿಕ್ಷಣವಿಂದು ವ್ಯಾಪಾರವಾಗಿದೆ, ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಕೇಂದ್ರಗಳಾಗಿವೆ. ಶಿಕ್ಷಣದ ಮೂಲ ಉದ್ದೇಶವೇ ನಾಶವಾಗಿದೆ. ಸೂಕ್ತ ಸೌಲಭ್ಯಗಳಿಲ್ಲದ, ಶಿಕ್ಷಕರ ಕೊರತೆಯಿರುವ, ವಿಶ್ವಾಸ ಕಳೆದುಕೊಳ್ಳುತ್ತಿರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಲಿನಾಲಿ ಮಾಡುವವರೂ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ.
ನೈತಿಕ ಶಿಕ್ಷಣವಿಲ್ಲದಿರುವುದರಿಂದ ಮತ್ತು ಎಲ್ಲೆಲ್ಲೂ ಸ್ಪರ್ಧಾತ್ಮಕ ಮನೋಭಾವವಿರುವುದರಿಂದ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಕಡಿಮೆ ಅಂಕ ಬಂದರೆ ಬಯಸಿದ ಶಿಕ್ಷಣ ಪಡೆಯಲು ಅವಕಾಶವೇ ಇಲ್ಲದ ಸ್ಥಿತಿ ಇದೆ. ಇಷ್ಟೆಲ್ಲಾ ಕಷ್ಟಪಟ್ಟು ಓದಿದರೂ ಮುಂದೆ ನೌಕರಿ ಸಿಗುವ ಸಾಧ್ಯತೆ ಕಡಿಮೆ. ಶ್ರೀಮಂತರು ಮಾತ್ರ ತಮ್ಮ ಮಕ್ಕಳಿಗೆ ಬಯಸಿದ ಶಿಕ್ಷಣ ಕೊಡಿಸಬಹುದು, ಬಡವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಿರುವುದು ಅನುಮಾನ. ಹೀಗೆ ಶಿಕ್ಷಣದ ಮೂಲ ಉದ್ದೇಶವೇ ಅರ್ಥ ಕಳೆದುಕೊಂಡಿದೆ. ಮಕ್ಕಳು ಇಂದು ಎಷ್ಟು ಒತ್ತಡದಲ್ಲಿರುತ್ತಾರೆಂದರೆ, ಪರೀಕ್ಷೆಗೆ ಮುನ್ನವೇ ಅಥವ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ಬರುವ ಮುನ್ನವೇ ಅಥವ ನಿರೀಕ್ಷಿತ ಫಲಿತಾಂಶ ಬಾರದಿದ್ದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಆತ್ಮಸ್ಥೈರ್ಯವನ್ನೇ ಕಲಿಸದ ಶಿಕ್ಷಣವನ್ನು ಶಿಕ್ಷಣವೆನ್ನಬಹುದೇ? ಇದು ಒಂದು ಮಗ್ಗುಲಾದರೆ ಇನ್ನೊಂದು ಕರಾಳ ಮುಖವೂ ಇದೆ. ಅದೆಂದರೆ ಮಕ್ಕಳು ನೈತಿಕವಾಗಿ ಹಾದಿ ತಪ್ಪುತ್ತಿರುವುದು. ಚಿಕ್ಕ ವಯಸ್ಸಿನಲ್ಲೇ ಸಿಗರೇಟು ಸೇದುವುದು, ಮಾದಕದ್ರವ್ಯಗಳ ಸೇವನೆ, ಡ್ರಗ್ಸ್ ಸೇವನೆ, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಪೋಷಕರ ನಿರ್ಲಕ್ಷ್ಯವೂ ಇವುಗಳಿಗೆ ಕೊಡುಗೆ ನೀಡಿದೆಯೆಂದರೆ ತಪ್ಪಲ್ಲ. ಹಣ ಕೊಟ್ಟು ಪದವಿ, ಡಾಕ್ಟರೇಟ್ ಕೊಂಡುಕೊಳ್ಳಬಹುದೆನ್ನುತ್ತಾರೆ. ನೈತಿಕತೆ ಕೊಡದ ಶಿಕ್ಷಣ ಒಂದು ಶಿಕ್ಷಣವೇ?
ಹಾಗಾದರೆ ಇದಕ್ಕೆ ಪರಿಹಾರವೇನು? ಶಿಕ್ಷಣಪದ್ಧತಿಯಲ್ಲಿ ಸೂಕ್ತ ಪರಿವರ್ತನೆಯಾಗದೆ, ಪೋಷಕರ ಮನೋಭಾವ ಬದಲಾಗದೆ ಪರಿಹಾರ ಕಷ್ಟಸಾಧ್ಯ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಭಾರತ ಮೂಲತಃ ಆಧ್ಯಾತ್ಮಿಕ ಪ್ರಧಾನ ದೇಶವಾಗಿದ್ದು, ಆಧ್ಯಾತ್ಮಿಕತೆಗೆ ಬಲ ಬಂದರೆ ಪುನಃ ಪರಿಸ್ಥಿತಿ ಬದಲಾಗಬಹುದು. ವಿವೇಕಾನಂದರು ಹೇಳಿದಂತೆ 'ಕೆಲವೊಮ್ಮೆ ಆಧ್ಯಾತ್ಮಿಕತೆ ಮೇಲುಗೈ ಪಡೆದರೆ, ಕೆಲವೊಮ್ಮೆ ಭೋಗವಾದ ಮೇಲುಗೈ ಪಡೆಯುತ್ತದೆ. ಸಮುದ್ರದ ಅಲೆಗಳಂತೆ ಒಂದನ್ನೊಂದು ಹಿಂಬಾಲಿಸುತ್ತವೆ.' ಹೀಗಾಗಲೆಂದು ಹಾರೈಸೋಣ. ನೈತಿಕತೆಯನ್ನು ಬಲಪಡಿಸುವ, ಆತ್ಮಸ್ಥೈರ್ಯವನ್ನು ಕೊಡುವಂತಹ, ದೇಶ ಹಾಗೂ ಸಮಾಜದ ಹಿತ ಬಯಸುವ ಸತ್ಪ್ರಜೆಗಳನ್ನು ನಿರ್ಮಿಸುವಂತಹ ಶಿಕ್ಷಣದ ಅವಶ್ಯಕತೆ ಇಂದು ಇದೆ. ಆ ನಿಟ್ಟಿನಲ್ಲಿ ಜನನಾಯಕರು, ಪೋಷಕರು, ಮನೋಶಾಸ್ತ್ರಜ್ಞರು, ಶಿಕ್ಷಣತಜ್ಞರು ಚಿಂತಿಸಿ ಕಾರ್ಯಪ್ರವೃತ್ತರಾಗಲೇಬೇಕಾದ ಕಾಲವೀಗ ಬಂದಿದೆ.
ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣ ಕಾರಣ|
ಆವರಣ ಹೂರಣ ಚೆಂದವಿರೆ ಲಕ್ಷಣ
ಬದುಕು ಸುಂದರ ಪಯಣ ಮೂಢ||
-ಕ.ವೆಂ.ನಾಗರಾಜ್
Comments
ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ?
ಕವಿ ನಾಗರಾಜ ರವರಿಗೆ ವಂದನೆಗಳು
' ಶಿಕ್ಷಣ ದಾರಿ ತಪ್ಪುತ್ತಿದೆಯೆ ' ಒಂದು ವೈಚಾರಿಕ ಮತ್ತು ಚರ್ಚಾರ್ಹ ಲೇಖನ. ನಮ್ಮ ದೇಶದ ಪರಂಪರೆ ಸಾಶಗಿ ಬಂದ ದಾರಿಯನ್ನು ಅವಲೋಕಿಸಿದರೆ ಬಹುತೇಕ ಸರ್ವ ಸಾಮಾನ್ಯವಾಗಿ ಭೋಗ ಆಧ್ಯಾತ್ಮಗಳು ಹದವಾಗಿ ಬೆರೆತುಕೊಂಡು ಸಾಗಿ ಬಂದ ಜೀವನ ಧರ್ಮ, ನಮ್ಮ ಕಳೆದ ದಿನಮಾನಗಳಲ್ಲಿ ತನ್ನಂತೆ ಪರರು ಎಂಬ ಜನಪರ ಜೀವಪರ ಧೋರಣೆ ಸಾಮಾಜಿಕ ಜೀವನದಲ್ಲಿ ಬಹುತೇಕವಾಗಿ ಇತ್ತು. ಆದರೆ ಈಗ ಬದುಕಿನ ರೀತಿ ಬದಲಾಗಿದೆ ಅಂದರೆ ನಾನು ನನ್ನಿಂದ ಮತ್ತು ನನಗೋಸ್ಕರ ಮಾತ್ರ ಎಂಬ ನೆಲೆಗಟ್ಟನ ಮೇಲೆ ನಿಂತಿದೆ, ಇಲ್ಲಿ ಭೋಗ ಪ್ರಧಾನವಾಗಿ ಆಧ್ಯಾತ್ಮ ಹಿನ್ನಡೆಗೆ ಸರಿದಿದೆ, ಅದು ವರ್ತಮಾನ ಸಮಸ್ಯೆ ಜೊತಗೆ ಕೊರತೆ ಕೂಡ, ಒಳ್ಳೆಯ ಚರ್ಚಾಸ್ಪದ ವಿಷಯದ ಲೇಖನ ಧನ್ಯವಾದಗಳು.
In reply to ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ? by H A Patil
ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ?
ದನ್ಯವಾದಗಳು, ಪಾಟೀಲರೇ. ಈ ಲೇಖನ ಹಾಸನ ಜಿಲ್ಲಾ ಪತ್ರಿಕೆ 'ಜನಮಿತ್ರ'ದಲ್ಲಿ ನಿನ್ನೆ ಪ್ರಕಟವಾಗಿದೆ. ಬರೆಯುವುದು ಬಹಳವಿದ್ದರೂ ವಿಸ್ತಾರದ ದೃಷ್ಟಿಯಿಂದ ಸಂಕ್ಷಿಪ್ತಗೊಳಿಸಿದೆ. ನಿಜಕ್ಕೂ ಇದು ಪ್ರಜ್ಞಾವಂತರು ಕರ್ಯಪ್ರವೃತ್ತರಾಗಬೇಕಾದ ಸಂಗತಿಯಾಗಿದೆ.
ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ?
ಕವಿಗಳೆ, ಚಿಂತನಪೂರ್ಣ ಲೇಖನ. ನಿಜವಾದ ಅರ್ಥದಲ್ಲಿ ಶಿಕ್ಷಣವೆಂದರೆ ಏನು ಎಂಬುದನ್ನು ಅರಿತುಕೊಳ್ಳದೆ ಕಾಲಮಾನದ ಒತ್ತಡಕ್ಕೊಳಗಾಗಿ ಅಂಧಾನುಕರಣೆ ಮಾಡುವ ಜಗ ಈಗಿನ ಪ್ರಸ್ತುತ. ಇದರ ನಡುವೆ ಓದು ಜ್ಞಾನಾರ್ಜನೆಗೆ ಎಂಬುದೆ ಮರೆತುಹೋಗಿದೆ. ಜತೆಗೆ ಆಸಕ್ತಿಯಿರುವ ವಸ್ತು, ವಿಷಯದಲ್ಲಿ ಓದಿ ಮುನ್ನಡೆಯುವ ಸ್ವಾತ್ಯಂತ್ರವೂ ಇರುವುದಿಲ್ಲ - ಮೊದಲೆ ನಿರ್ಧರಿಸಿದ ಮೂಸೆಯಲ್ಲೆ ತಿದಿ ಒತ್ತಿಸಿಕೊಂಡು ಸಾಗುವ ಅನಿವಾರ್ಯ. ಈಗಿನ ಶಿಕ್ಷಣದ ದುರಂತಗಳಿಗೆ ಚೆನ್ನಾಗಿ ಕನ್ನಡಿ ಹಿಡಿದ ಲೇಖನ.
In reply to ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ? by nageshamysore
ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ?
ಧನ್ಯವಾದ, ನಾಗೇಶರೇ. ಶಿಕ್ಷಣ ಸಾಗುತ್ತಿರುವ ರೀತಿ ನಿಜಕ್ಕೂ ದುರಂತವೇ ಸರಿ.
ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ?
ಕವಿಗಳೆ,
ಡೋನೇಷನ್ ಹಾವಳಿ ಒಂದು ಕಡೆಯಾದರೆ, ಶಿಕ್ಷಣ ಸಂಸ್ಥೆಗಳೂ ಜಾಹೀರಾತು ಕೊಡುತ್ತಿವೆ, ತಮ್ಮ ತಮ್ಮ ಶಾಲೆಗಳ ಬಗೆಗೆ. ಇಲ್ಲಿ ಹೈದರಾಬಾದಿನಲ್ಲಿ ಶಿಕ್ಷಣವೆನ್ನುವುದು ಎಷ್ಟರ ಮಟ್ಟಿಗೆ ವ್ಯಾಪರವಾಗಿದೆ ಎಂದರೆ ಪ್ರತಿಯೊಂದು ಶಾಲೆಯವರೂ ತಮ್ಮ ಶಾಲೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಯ ಫೋಟೋ ಹಾಗೂ ಅವನು ಗಳಿಸಿದ ಅಂಕಗಳನ್ನು ಬ್ಯಾನರ್‌ಗಳ/ಪೋಸ್ಟರ್‌ಗಳು ಹಾಗೂ ಕರಪತ್ರಗಳ ಮೇಲೆ ಮುದ್ರಿಸಿ ವಿವಿಧ ಪ್ರಾಂತ್ಯಗಳಲ್ಲಿ ಕಟ್ಟುತ್ತಾರೆ/ಅಂಟಿಸುತ್ತಾರೆ ಮತ್ತು ಹಂಚುತ್ತಾರೆ. ಅವರ ಶಾಲೆಯ ಎಲ್ಲಾ ಟೀಚರುಗಳನ್ನು ರಜಾ ದಿನಗಳಲ್ಲಿ ಮನೆಮನೆಗೂ ಸರಕು ಮಾರುವ ಏಟಂತರಂತೆ ಕಳುಹಿಸಿ ಕೊಡುತ್ತಾರೆ ಮತ್ತು ನಿಮ್ಮೊಂದಿಗೆ ಇನ್ನೊಂದಿಷ್ಟು ವಿದ್ಯಾರ್ಥಿಗಳನ್ನು ನಮ್ಮ ಶಾಲೆಯಲ್ಲಿ ಸೇರಿಸಿದರೆ ನಿಮ್ಮ ಮಗನ ಶುಲ್ಕದಲ್ಲಿ ರಿಯಾಯತಿ ಕೊಡುತ್ತೇವೆ ಇತ್ಯಾದಿ ಆಮಿಷಗಳನ್ನು ಒಡ್ಡುತ್ತಾರೆ. ಹೆಚ್ಚು ಅನುಕೂಲವುಳ್ಳ ಶಾಲೆಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿ F.M. ರೇಡಿಯೋ ಹಾಗು ಟಿ.ವಿ. ಚಾನಲ್ಲುಗಳಲ್ಲಿ ಜಾಹೀರಾತು ಕೊಡುತ್ತಾರೆ.
ಮತ್ತು ಆಂಧ್ರದಲ್ಲಿರುವ ಒಂದು ಪ್ರತ್ಯೇಕತೆ ಏನೆಂದರೆ ಪ್ರತಿಯೊಂದು ಸಂಸ್ಥೆಗೂ ಒಂದು Registration Number ರೀತಿಯ ಕಾಲೇಜ್ ಕೋಡ್ ಇರುತ್ತದೆ. ವಿಶೇಷವಾಗಿ ಇದನ್ನು ವಿದ್ಯಾರ್ಥಿಗಳು ತಾಂತ್ರಿಕ ಕೋರ್ಸ್‌ಗಳಿಗೆ ಸೇರುವ ಸಮಯದಲ್ಲಿ ಬಸ್ಸುಗಳು ಹಾಗೂ ಟಿ.ವಿ.ಗಳಲ್ಲಿ ಎದ್ದು ಕಾಣುವಂತೆ ಜಾಹೀರಾತು ಮಾಡುತ್ತಾರೆ. ಇದಕ್ಕಿಂತ ಆಂಧ್ರದಲ್ಲಿನ ವ್ಯಾಪಾರೀಕರಣಕ್ಕೆ ಉದಾಹರಣೆ ಬೇಕಾ?
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ? by makara
ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ?
ಹೌದು, ಶ್ರೀಧರರೇ. ನೀವು ಹೇಳಿದ ಪರಿಸ್ಥಿತಿ ಸಾಮಾನ್ಯವಾಗಿ ಎಲ್ಲಡೆ ಇದೆ, ಹಾಸನದಂತಹ ನಗರಗಳಲ್ಲೂ ಕೂಡ! ದೇಶ ನಿಜಕ್ಕೂ ಅಧಃಪತನದತ್ತ ಜಾರುತ್ತಿದೆ.
ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ?
ಸತ್ಯ, ನಾಗರಾಜ್ ಸಾರ್, ಆದರೆ ಸಮೂಹಕ್ಕೆ ಅರ್ಥವಾಗುತ್ತಲ್ಲ ಎನ್ನುವುದು ನೋವಿನ ಸಂಗತಿ........??
ರಾಮೋ.
In reply to ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ? by RAMAMOHANA
ಉ: ಶಿಕ್ಷಣ: ದಾರಿ ತಪ್ಪುತ್ತಿದೆಯೇ?
ನಮಸ್ತೆ ರಾಮೋರವರೇ. ಇದು ಒಂದು ರೀತಿಯ ಸಮೂಹ ಸನ್ನಿ! ಬಲವಾದ ವೈದ್ಯರು ಮಾತ್ರ ಚಿಕಿತ್ಸೆ ನೀಡಬಲ್ಲರು!