೧೬೫. ಲಲಿತಾ ಸಹಸ್ರನಾಮ ೭೩೫ರಿಂದ ೭೩೯ನೇ ನಾಮಗಳ ವಿವರಣೆ

೧೬೫. ಲಲಿತಾ ಸಹಸ್ರನಾಮ ೭೩೫ರಿಂದ ೭೩೯ನೇ ನಾಮಗಳ ವಿವರಣೆ

                                                                                      ಲಲಿತಾ ಸಹಸ್ರನಾಮ ೭೩೫ - ೭೩೯

Mithyā-jagadadhiṣṭānā मिथ्या-जगदधिष्टाना (735)

೭೩೫. ಮಿಥ್ಯಾ-ಜಗದಧಿಷ್ಠಾನಾ

            ದೇವಿಯು ಈ ಮಾಯಾಯಿಂದ ಉಂಟಾಗಿರುವ ಈ ಭ್ರಾಮಕ ಜಗತ್ತಿಗೆ ಕಾರಣಳಾಗಿದ್ದಾಳೆ. ಶ್ರೀಮದ್ ಭಾಗವತವು ಹೀಗೆ ಆರಂಭಗೊಳ್ಳುತ್ತದೆ, "ಯಾವುದರಿಂದ ಈ ಪ್ರಪಂಚವು ಆವಿರ್ಭವಿಸುತೋ ಆ ದುರ್ಗ್ರಾಹ್ಯವಾಗಿರುವ ಸತ್ಯವನ್ನು ಕುರಿತು ನಾವು ಧ್ಯಾನಿಸುತ್ತೇವೆ ..............ಯಾವುದರಲ್ಲಿ ತ್ರಿಗುಣಿತವಾಗಿರುವ (ಮೂರು ಗುಣಗಳಾದ ಸತ್ವ, ರಜೋ ಮತ್ತು ತಮೋ ಗುಣಗಳಿಂದ ಕೂಡಿರುವ) ಈ ಅಸತ್ಯವಾದ ಜಗತ್ತು ಸತ್ಯವೆಂದು ತೋರುತ್ತದೆಯೋ"

           ಈ ಮಾಯಾ ಪ್ರಪಂಚದ ಕಾರಣವನ್ನು ಬೃಹದಾರಣ್ಯಕ ಉಪನಿಷತ್ತು (೪.೪.೧೯) ಹೀಗೆ ವಿವರಿಸುತ್ತದೆ, "ಕೇವಲ ಮನಸ್ಸಿನಿಂದ ಮಾತ್ರವೇ ಅದನ್ನು (ಬ್ರಹ್ಮವನ್ನು) ಸಾಕ್ಷಾತ್ಕರಿಸಿಕೊಳ್ಳಬೇಕು. ಅದರಲ್ಲಿ ಯಾವುದೇ ವಿಧವಾದ ಅನೇಕತೆಯಿಲ್ಲ (ಭೇದವಿಲ್ಲ). ಯಾರು ಅದರಲ್ಲಿ ಅನೇಕತೆಯನ್ನು ಕಾಣುತ್ತಾನೆಯೋ ಅವನು ಮರಣದಿಂದ ಮರಣಕ್ಕೆ ಹೋಗುತ್ತಾನೆ.

           ಮಾಯೆ ಅಥವಾ ದ್ವೈತತೆಯು ಅಜ್ಞಾನದ ಅಧ್ಯಾರೋಪದಿಂದ ಉಂಟಾಗುತ್ತದೆ. ಮಿಥ್ಯಾ ಎಂದರೆ ತಪ್ಪಾದುದು ಅಥವಾ ಸರಿಯಲ್ಲದ್ದು, ಜಗತ್ ಎಂದರೆ ಪ್ರಪಂಚ ಮತ್ತು ಅಧಿಷ್ಠಾನ ಎಂದರೆ ಆಧಾರ. ಈ ನಾಮವು ದೇವಿಯು ಈ ಜಗತ್ತಿನ ತಪ್ಪಾದ ತೋರಿಕೆಗೆ ಆಧಾರವಾಗಿದ್ದಾಳೆ ಅಥವಾ ಆಕೆಯು ಈ ಭ್ರಾಮಕ ಜಗತ್ತಿಗೆ ತನ್ನ ಮಾಯಾ ಶಕ್ತಿಯ ಮೂಲಕ ಆಸರೆಯಾಗಿದ್ದಾಳೆ.

           ಈ ನಾಮಕ್ಕೆ ಮತ್ತೊಂದು ಸಿದ್ಧಾಂತವೂ ಇದೆ. ಈ ಪ್ರಪಂಚವು ಬ್ರಹ್ಮದ ರೂಪಾಂತರವಾಗಿದೆ. ಯಾವಾಗ ಬ್ರಹ್ಮವು ನಿಜವಾದುದೋ ಆಗ ಈ ಪ್ರಪಂಚವೂ ಸಹ ನಿಜವಾದುದೇ ಆಗಿರಬೇಕು. ಮಡಕೆಯು ಮಣ್ಣಿನಿಂದ ಮಾಡಲ್ಪಟ್ಟಿರುವುದರಿಂದ ಮಣ್ಣು ಮತ್ತು ಮಡಕೆಯು ಬೇರೆಯಲ್ಲ. ಇದೇ ವಿಧವಾಗಿ ಬ್ರಹ್ಮ ಮತ್ತು ಈ ಪ್ರಪಂಚವು ಬೇರೆಯಲ್ಲ, ಅವೆರಡೂ ಒಂದೇ.! ಅವೆರಡೂ ಒಂದೇ ಆಗಿದ್ದರೂ ಸಹ ಮಾಯೆಯ ಪ್ರಭಾವದಿಂದಾಗಿ ಅವೆರಡೂ ಬೇರೆಯಾಗಿ ತೋರುತ್ತವೆ. ಇಲ್ಲಿ ಭ್ರಮೆಯು ವಾಸ್ತವವಾಗುತ್ತದೆ. ಇದುವೇ ವೇದಾಂತದ ವಾದವಾಗಿದೆ.

           ಒಂದು ವೇಳೆ ಮಾಯೆಯನ್ನೇ ಭ್ರಮೆಯೆಂದು ಪರಿಗಣಿಸಿದರೆ ಆಗ ಈ ಪ್ರಪಂಚ ಮತ್ತು ಬ್ರಹ್ಮವು ಬೇರೆಯಾಗುತ್ತವೆ. ಈ ವಾದವು ವೇದಾಂತ ತತ್ವಕ್ಕೆ ವಿರುದ್ಧವಾಗಿದೆ. ಈ ಸಂದರ್ಭದಲ್ಲಿ ಸ್ವತಃ ಮಾಯೆಯೆನ್ನುವುದೇ ಮಾಯೆಯಾಗುತ್ತದೆ (ಭ್ರಮೆಯಾಗುತ್ತದೆ). ಇಲ್ಲಿ ಮಡಿಕೆ ಮತ್ತು ಮಣ್ಣುಗಳನ್ನು ಪ್ರತ್ಯೇಕವೆಂದು ಪರಿಗಣಿಸಲ್ಪಟ್ಟು ಆ ಮಡಕೆಯ ಮೂಲವಾದ ಮಣ್ಣನ್ನು ಕಡೆಗಣಿಸಲಾಗುತ್ತದೆ. ಈ ಪ್ರಪಂಚಕ್ಕೆ ಕಾರಣವಾದ ಬ್ರಹ್ಮವನ್ನು ಇಲ್ಲಿ ಕಡೆಗಣಿಸಲಾಗುತ್ತದೆ ಏಕೆಂದರೆ ಮಾಯೆಯು ಒಬ್ಬ ವ್ಯಕ್ತಿಯನ್ನು ಗೋಚರಿಸುವ ವಸ್ತುಗಳಿಂದ ಕಟ್ಟಿ ಹಾಕುತ್ತದೆ.

Muktidā मुक्तिदा (736)

೭೩೬. ಮುಕ್ತಿದಾ

          ಮುಕ್ತಿ ಎಂದರೆ ಬಿಡುಗಡೆ. ದೇವಿಯು ಯಾರು ಯೋಗ್ಯರೋ ಅವರಿಗೆ ಬಿಡುಗಡೆಯನ್ನು ದಯಪಾಲಿಸುತ್ತಾಳೆ. ಬಿಡುಗಡೆ ಎನ್ನುವುದು ಕರ್ಮ ನಿಯಮಕ್ಕೆ ಬದ್ಧವಾಗಿದೆ. ದೇವಿಯು ಕರ್ಮ ನಿಯಮವನ್ನು ಮೀರಿ ಮುಕ್ತಿಯನ್ನು ದಯಪಾಲಿಸುವುದಿಲ್ಲ. ಆದರೆ ಮುಕ್ತಿಯನ್ನು ಕೇವಲ ದೇವಿ ಮಾತ್ರಳೇ ಕರುಣಿಸಬಲ್ಲಳು, ಏಕೆಂದರೆ ಆಕೆ ಮಾತ್ರಳೇ ವ್ಯಕ್ತಿಯೊಬ್ಬನನ್ನು ಶಿವನ ಬಳಿಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದಾಳೆ (ವಿವರಗಳಿಗೆ ೭೨೭ನೇ ನಾಮವನ್ನು ನೋಡಿ). ಇದರ ಕುರಿತಾಗಿ ಮುಂದಿನ ನಾಮವು ಹೆಚ್ಚಿನ ವಿವರಣೆಗಳನ್ನು ಕೊಡುತ್ತದೆ.

Mukti-rūpiṇī मुक्ति-रूपिणी (737)

೭೩೭. ಮುಕ್ತಿ-ರೂಪಿಣೀ

            ದೇವಿಯು ಮುಕ್ತಿಯ ಸ್ವರೂಪವಾಗಿದ್ದಾಳೆ. ಮುಕ್ತಿಗೆ ಜ್ಞಾನವು ಪೂರ್ವಭಾವಿಯಾಗಿ ಅವಶ್ಯವಿದ್ದರೂ ಸಹ ಕೇವಲ ಜ್ಞಾನದಿಂದಲೇ ಮುಕ್ತಿಯನ್ನು ಪಡೆಯಲಾಗದು. ಜ್ಞಾನದಿಂದ ಹೊಂದಲ್ಪಟ್ಟ ಪರಮಾನಂದವು ಮುಕ್ತಿಯನ್ನು ಉಂಟು ಮಾಡುತ್ತದೆ. ಇದನ್ನೇ ಐದನೇ ಹಂತವಾದ ಕೈವಲ್ಯವೆನ್ನುತ್ತಾರೆ (ವಿವರಗಳಿಗೆ ೬೨೫ನೇ ನಾಮವಾದ ’ಕೈವಲ್ಯ-ಪದ- ದಾಯಿನೀ’ಯನ್ನು ನೋಡಿ). ಕೈವಲ್ಯವೆನ್ನುವ ಪದವನ್ನು ಸಾಂಖ್ಯ ಯೋಗದಲ್ಲಿ ಬಳಸಿದರೆ ಮೋಕ್ಷ ಅಥವಾ ಮುಕ್ತಿ ಎನ್ನುವ ಪದವನ್ನು ಅದ್ವೈತಿಗಳು ಬಳಸುತ್ತಾರೆ. ಯಾವಾಗ ಜ್ಞಾನವನ್ನು ಹೊಂದುವುದರಿಂದ ಅವಿದ್ಯೆಯು ಹೋಗಲಾಡಿಸಲ್ಪಡುತ್ತದೆಯೋ ಆಗ ಒಬ್ಬನು ಮೋಹದಿಂದ ಮುಕ್ತನಾಗುತ್ತಾನೆ. ಇದರರ್ಥ ಅವನು ಮುಕ್ತನಾಗಿದ್ದಾನೆಂದಲ್ಲ. ಮುಕ್ತಿಯು ನಿತ್ಯ ನಿರಂತರವಾದ ಪರಮಾನಂದವನ್ನು ಹೊಂದಿದಾಗ ಉಂಟಾಗುತ್ತದೆ ಇದಕ್ಕೆ ಒಬ್ಬನ ಕರ್ಮ ಶೇಷವು ಅನುಕೂಲಿಸಬೇಕು. ದೇವಿಯು ಮುಕ್ತಿಯನ್ನು ಕರುಣಿಸುತ್ತಾಳೆ (ಹಿಂದಿನ ನಾಮ) ಏಕೆಂದರೆ ದೇವಿಯು ಮುಕ್ತಿಯ ಮೂರ್ತರೂಪವಾಗಿದ್ದಾಳೆ. ಮುಕ್ತಿಯ ಆತ್ಮಸಾಕ್ಷಾತ್ಕಾರದ ಅಂತಿಮ ಹಂತವಾಗಿದೆ. ಮುಕ್ತಿ ಮತ್ತು ಮೋಕ್ಷವು ಬೇರೆ ಬೇರೆಯಾಗಿವೆ. ಮೋಕ್ಷವೆನ್ನುವುದು ಉನ್ನತ ಸ್ತರಗಳಲ್ಲಿನ ತಾತ್ಕಾಲಿಕ ಆಶ್ರಯವಾದರೆ, ಮುಕ್ತಿಯು ಬ್ರಹ್ಮದೊಂದಿಗೆ ಐಕ್ಯವಾಗಿ ಪುನರ್ಜನ್ಮವಿಲ್ಲದಿರುವುದಾಗಿದೆ. ಈ ಎರಡು ನಾಮಗಳನ್ನು ೭೩೦ ಮತ್ತು ೭೩೧ನೇ ನಾಮಗಳೊಂದಿಗೆ ಹೋಲಿಸಬಹುದಾಗಿದೆ.

Lāsya-priyā लास्य-प्रिया (738)

೭೩೮. ಲಾಸ್ಯ-ಪ್ರಿಯಾ

           ಲಾಸ್ಯವೆಂದರೆ ವಾದ್ಯ ಮತ್ತು ಗಾಯನದೊಂದಿಗೆ ಕೂಡಿದ ಸ್ತ್ರೀಯರ ನೃತ್ಯ. ದೇವಿಯು ಅಂತಹ ಮನೋರಂಜನೆಗಳನ್ನು ಇಷ್ಟ ಪಡುತ್ತಾಳೆ. ಲಲಿತಾ ತ್ರಿಶತಿಯ ೧೭೨ ಹಾಗು ೧೮೪ನೇ ನಾಮಗಳು ಲಲಿತಾಂಬಿಕೆಯ ಲಾಸ್ಯದಲ್ಲಿನ ಆಸಕ್ತಿಯನ್ನು ಕುರಿತಾಗಿ ಹೇಳುತ್ತವೆ.

Laya-karī लय-करी (739)

೭೩೯. ಲಯ-ಕರೀ

          ಸ್ವರವು ತಂದೆಯಾದರೆ ಲಯವು ತಾಯಿಯೆಂದು ಹೇಳಲಾಗುತ್ತದೆ. ಲಯವೆಂದರೆ ಮೂಲ ಸಂಗೀತ ಮತ್ತು ಅನುಬಂದ ಸಂಗೀತವನ್ನು ಸಮತೋಲನದಲ್ಲಿರಿಸುವ ಪ್ರಕ್ರಿಯೆ (ತಾಳ ಮತ್ತು ಮೇಳಗಳನ್ನು ಹೊಂದಿಸುವುದು?). ಈ ಸಂದರ್ಭದಲ್ಲಿ ದೇವಿಯು ಈ ಪ್ರಪಂಚವನ್ನು ಸುಸ್ಥಿತಿಯಲ್ಲಿಡುವ ಸಮತೋಲನದ ಪ್ರಕ್ರಿಯೆಗೆ ಕಾರಣಳಾಗಿದ್ದು ಜೀವನವು ಸುಗುಮವಾಗಿರುವಂತೆ ಮಾಡುತ್ತಾಳೆ.

          ಲಯವೆನ್ನುವುದು ಧ್ಯಾನದ ಹಂತಕ್ಕಿಂತ ಮುಂದಿನದು. ಅದನ್ನು ಪ್ರಜ್ಞೆಯನ್ನು ಅಂತರ್ಗತಗೊಳಿಸುವುದು ಎನ್ನುತ್ತಾರೆ; ಇದರಲ್ಲಿ ಪ್ರಜ್ಞೆಯ ಇಲ್ಲವಾಗುವಿಕೆಯು (ಕರಗುವಿಕೆಯು) ಉಂಟಾಗುತ್ತದೆ. ಹೀಗೊಂದು ಸ್ತುತಿಯಿದೆ, ಅದು, "ನಾವು ಶಂಕರನಿಗೆ ವಂದಿಸುತ್ತೇವೆ, ಯಾರ ಶಕ್ತಿಯ ವಿಕಸನ ಮತ್ತು ಸಂಕುಚನಗಳಿಂದ ಈ ಪ್ರಪಂಚವು ಉದ್ಭವಿಸುತ್ತವೆ ಮತ್ತು ಲಯವಾಗುತ್ತದೆಯೋ" ಎಂದು ಹೇಳುತ್ತದೆ.

          ಶಿವ ಸೂತ್ರವು (೩.೩೧), "ಸ್ಥಿತಿ-ಲಯೌ" ಅಂದರೆ ’ವಸ್ತುಗಳ ರೂಪದಲ್ಲಿ ಮೂಢಿರುವ ಈ ಪ್ರಪಂಚವು ಅವನ ಬಲದ (ಶಕ್ತಿಯ) ವಿಕಸನವಾಗಿದೆ ಮತ್ತು ಆ ವಸ್ತುಗಳ ರೂಪದ ಕರಗುವಿಕೆಯಾಗಿದೆ’ ಎಂದು ಹೇಳುತ್ತದೆ. ಆದ್ದರಿಂದ ಲಯವೆಂದರೆ ಮಾನಸಿಕ ಇಮಡುವಿಕೆ (ಲೀನವಾಗುವಿಕೆ) ಎನ್ನುವ ಅರ್ಥವನ್ನೂ ಹೊಂದಿದೆ. ಯಾವಾಗ ಸಂಪೂರ್ಣವಾಗಿ ಮಾನಸಿಕವಾಗಿ ಲೀನವಾಗುತ್ತೇವೆಯೋ ಆಗ ಬ್ರಹ್ಮವು ಅರಿಯಲ್ಪಡುತ್ತದೆ. ಈ ನಾಮವು ದೇವಿಯು ಅಂತಹ ಲೀನವಾಗುವಿಕೆಗೆ ಕಾರಣಳಾಗಿದ್ದಾಳೆ ಎಂದು ಹೇಳುತ್ತದೆ; ಕರೀ ಎಂದರೆ ಉಂಟುಮಾಡುವವಳು.

                                                                                                   ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 735 - 739 http://www.manblunder.com/2010/05/lalitha-sahasranamam-meaning-735-739.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
Average: 5 (1 vote)

Comments

Submitted by nageshamysore Sat, 11/23/2013 - 15:54

ಶ್ರೀಧರರೆ, "೧೬೫. ಶ್ರೀ ಲಲಿತಾ ಸಹಸ್ರನಾಮದ ವಿವರಣೆ "ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೩೫ - ೭೩೯
_____________________________________________
.
೭೩೫.  ಮಿಥ್ಯಾ-ಜಗದಧಿಷ್ಠಾನಾ
ಅಸತ್ಯದೀ ಜಗ ತ್ರಿಗುಣದೆ ಸತ್ಯವೆನಿಸೊ ಭ್ರಮೆ, ಮಾಯೆಗೆ ಕಾರಣ ಲಲಿತ
ಮನಸಿನೇಕತ್ವದಿಂದಷ್ಟೆ ಬ್ರಹ್ಮ ಸಾಕ್ಷಾತ್ಕಾರ ಮಿಥ್ಯಾ ಜಗ ಅಜ್ಞಾನದ ಮೊತ್ತ
ಭ್ರಾಮಕ ಜಗಕಾಧಾರ ದೇವಿ ಮಾಯಾ ಶಕ್ತಿ, ಮಣ್ಣಿದ್ದರೆ ಮಡಿಕೆಯಂತೆ ಬ್ರಹ್ಮ
ದ್ವೈತದೆ ಭ್ರಮೆಯೆ ವಾಸ್ತವ, ಭ್ರಮೆಯಲ್ಲ ಮಾಯೆ ಲೌಕಿಕದೆ ಬಂಧಿಸೊ ಕರ್ಮ ||
.
೭೩೬. ಮುಕ್ತಿದಾ
ಬಂಧನದಿಂದ ಬಿಡುಗಡೆ ಯೋಗ್ಯರಿಗೆ, ದಯಪಾಲಿಸೊ ನಿಯಮ
ಮುಕ್ತಿ ತಾನೆ ಬಿಡುಗಡೆ, ಕರ್ಮ ಬದ್ದತೆ ಮೀರದಂತೆ ನ್ಯಾಯ ಜಮ
ಕರುಣಿಸಬಲ್ಲವಳವಳೊಬ್ಬಳೆ ಮುಕ್ತಿ, ಶಿವನತ್ತ ಕೊಂಡೊಯ್ಯೊ ಶಕ್ತಿ
ಮುಕ್ತಿದಾ ದೇವಿಗಷ್ಟೆ ಇಹ ಸಾಮರ್ಥ್ಯ ಯೋಗ್ಯಾತಾನುಸಾರ ಭುಕ್ತಿ ||
.
೭೩೭. ಮುಕ್ತಿ-ರೂಪಿಣೀ
ಮುಕ್ತಿಯ ಮೂರ್ತರೂಪ ದೇವಿ, ಆತ್ಮ ಸಾಕ್ಷಾತ್ಕಾರದಂತಿಮ ಹಂತ
ಮೋಕ್ಷ ತಾತ್ಕಾಲಿಕ ತಾಣ, ಜನ್ಮವಿರದ ಬ್ರಹ್ಮೈಕ್ಯ ಮುಕ್ತಿಯಾಗುತ
ಜ್ಞಾನವಳಿಸೆ ಅಜ್ಞಾನ ಮೋಹಕಷ್ಟೆ ಮುಕ್ತಿ, ಕರ್ಮಶೇಷ ಕಹಿ ಭರಣಿ
ಕರುಣಿಸಿ ನಿತ್ಯ ಪರಮಾನಂದ, ಮುಕ್ತಿಯೀವ ಲಲಿತೆ ಮುಕ್ತಿರೂಪಿಣೀ ||
.
೭೩೮. ಲಾಸ್ಯ-ಪ್ರಿಯಾ
ಶಿವ ತಾಂಡವ ಪುರುಷ ನೃತ್ಯ, ರುದ್ರವಾಗುತ ಲಯ ಬದ್ದ
ಪ್ರಳಾಯವೇಶ ಪ್ರಣಯವಾಗೆ, ಲಲಿತಾ ನೃತ್ಯ ಸುಸಂಬದ್ಧ
ವಾದ್ಯ ಗಾಯನದೊಡಗೂಡಿದ ಹರ್ಷ, ಸ್ತ್ರೀ ನೃತ್ಯವೆ ಲಾಸ್ಯ
ಮನೋಲ್ಲಾಸ ಮನರಂಜನೆ ಆಸ್ವಾದಿಸಿ ದೇವಿ ಲಾಸ್ಯಪ್ರಿಯ ||
.
೭೩೯. ಲಯ-ಕರೀ
ಲಯ ಮಾನಸಿಕ ಲೀನತೆ, ವಿಲೀನ ಕರಗಿ ಪಸರಿಸುವಂತೆ
ಪರಿಪೂರ್ಣತೆ ಲಯದೆ, ಬ್ರಹ್ಮವರಿಸೆ ಲೀನವಾಗಿಸಿ ಲಲಿತೆ
ಧ್ಯಾನಾನಂತರ ಹಂತ ಲಯ, ಪ್ರಜ್ಞಾಂತರ್ಗತ ಇಲ್ಲದ ಪರಿ
ಮಾತಪಿತ ಲಯಸ್ವರ, ಜಗ ಸಂತುಲಿಸಿರೆ ದೇವಿ ಲಯಕರೀ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
 
ನಾಗೇಶರೆ,
ಲಲಿತಾ ಸಹಸ್ರನಾಮ ೭೩೫ - ೭೩೯ ಕಂತಿನ ಕೆಲವು ಪರಿಷ್ಕರಣೆಗಳು ತಮ್ಮ ಗಮನಕ್ಕೆ
೭೩೫. ಮಿಥ್ಯಾ-ಜಗದಧಿಷ್ಠಾನಾ
:
:
ಭ್ರಾಮಕ ಜಗಕಾಧಾರ ದೇವಿ ಮಾಯಾ ಶಕ್ತಿ, ಮಣ್ಣಿದ್ದರೆ ಮಡಿಕೆಯಂತೆ ಬ್ರಹ್ಮ
ಮಣ್ಣಿದ್ದರೆ ಮಡಿಕೆಯಂತೆ ಬ್ರಹ್ಮ=ಮಡಕೆಯ ಮಣ್ಣಿನಂತೆ
೭೩೬. ಮುಕ್ತಿದಾ
ಬಂಧನದಿಂದ ಬಿಡುಗಡೆ ಯೋಗ್ಯರಿಗೆ, ದಯಪಾಲಿಸೊ ನಿಯಮ
ಮುಕ್ತಿ ತಾನೆ ಬಿಡುಗಡೆ, ಕರ್ಮ ಬದ್ದತೆ ಮೀರದಂತೆ ನ್ಯಾಯ ಜಮ
ಕರುಣಿಸಬಲ್ಲವಳವಳೊಬ್ಬಳೆ ಮುಕ್ತಿ, ಶಿವನತ್ತ ಕೊಂಡೊಯ್ಯೊ ಶಕ್ತಿ
ಮುಕ್ತಿದಾ ದೇವಿಗಷ್ಟೆ ಇಹ ಸಾಮರ್ಥ್ಯ ಯೋಗ್ಯಾತಾನುಸಾರ ಭುಕ್ತಿ ||
ಈ ಕವನ ಸ್ವಲ್ಪ ಗೋಜಲೆನಿಸುತ್ತಿದೆ. ಎರಡನೇ ಸಾಲು ಮತ್ತು ನಾಲ್ಕನೇ ಸಾಲುಗಳನ್ನು ಸೂಕ್ತವಾಗಿ ಮಾರ್ಪಡಿಸಿ.
೭೩೭. ಮುಕ್ತಿ-ರೂಪಿಣೀ
:
:
ಜ್ಞಾನವಳಿಸೆ ಅಜ್ಞಾನ ಮೋಹಕಷ್ಟೆ ಮುಕ್ತಿ, ಕರ್ಮಶೇಷ ಕಹಿ ಭರಣಿ
ಜ್ಞಾನವಳಿಸೆ ಅಜ್ಞಾನ ಮೋಹಕಷ್ಟೆ ಮುಕ್ತಿ = ಮೋಹಾಜ್ಞಾನವಳಿಸೆ ಮುಕ್ತಿ ಅಥವಾ ಅಜ್ಞಾನ ಮೋಹವಳಿಸೆ ಮುಕ್ತಿ ಎಂದು ಮಾಡಿದರೆ ಸರಿಹೋಗಬಹುದು.
ಉಳಿದಂತೆ ಎಲ್ಲಾ ಚೆನ್ನಾಗಿವೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ೭೩೫.  ಮಿಥ್ಯಾ-ಜಗದಧಿಷ್ಠಾನಾ - ತಿದ್ದುಪಡಿಸಿದ ರೂಪ:-)
.
೭೩೫.  ಮಿಥ್ಯಾ-ಜಗದಧಿಷ್ಠಾನಾ
ಅಸತ್ಯದೀ ಜಗ ತ್ರಿಗುಣದೆ ಸತ್ಯವೆನಿಸೊ ಭ್ರಮೆ, ಮಾಯೆಗೆ ಕಾರಣ ಲಲಿತ
ಮನಸಿನೇಕತ್ವದಿಂದಷ್ಟೆ ಬ್ರಹ್ಮ ಸಾಕ್ಷಾತ್ಕಾರ ಮಿಥ್ಯಾ ಜಗ ಅಜ್ಞಾನದ ಮೊತ್ತ
ಭ್ರಾಮಕ ಜಗಕಾಧಾರ ದೇವಿ ಮಾಯಾ ಶಕ್ತಿ, ಮಡಕೆಯ ಮಣ್ಣಿನಂತೆ ಬ್ರಹ್ಮ
ದ್ವೈತದೆ ಭ್ರಮೆಯೆ ವಾಸ್ತವ, ಭ್ರಮೆಯಲ್ಲ ಮಾಯೆ ಲೌಕಿಕದೆ ಬಂಧಿಸೊ ಕರ್ಮ ||
.
ಮೊದಲಿಗೆ - "ಮಣ್ಣಿದ್ದರೆ ಮಡಿಕೆ, ಅಂತೆ ಬ್ರಹ್ಮ" ಎಂದು ಹೊಸೆದಿದ್ದೆ. ಪದ ಬಂಧದಲ್ಲಿ ಆ ಅರ್ಥ ಸ್ಪಷ್ಟತೆ ಕಳುವಾಗಿ ಹೋಗಿತ್ತು. ನಿಮ್ಮ ತಿದ್ದುಪಡಿಯಿಂದ ಅದು ಸರಿಯಾಯ್ತು. ಹಾಗೆ ತಿದ್ದುವಾಗ ಮಾತೊಂದು ಸಾಧ್ಯತೆಯೂ ಹೊಳೆಯಿತು. ಒಮ್ಮೆ ಅದನ್ನು ಗಮನಿಸಿ ಸೂಕ್ತ ಕಾಣುವುದೆ ನೋಡಿ :
.
೭೩೫.  ಮಿಥ್ಯಾ-ಜಗದಧಿಷ್ಠಾನಾ
ಅಸತ್ಯದೀ ಜಗ ತ್ರಿಗುಣದೆ ಸತ್ಯವೆನಿಸೊ ಭ್ರಮೆ, ಮಾಯೆಗೆ ಕಾರಣ ಲಲಿತ
ಮನಸಿನೇಕತ್ವದಿಂದಷ್ಟೆ ಬ್ರಹ್ಮ ಸಾಕ್ಷಾತ್ಕಾರ ಮಿಥ್ಯಾ ಜಗ ಅಜ್ಞಾನದ ಮೊತ್ತ
ಭ್ರಾಮಕ ಜಗಕಾಧಾರ ದೇವಿ ಮಾಯಾಶಕ್ತಿ, ಮಣ್ಣಿರೆ ಮಡಿಕೆ-ಬ್ರಹ್ಮವಿರೆ ಜಗ
ದ್ವೈತದೆ ಭ್ರಮೆಯೆ ವಾಸ್ತವ, ಭ್ರಮೆಯಲ್ಲ ಮಾಯೆ ಲೌಕಿಕದೆ ಬಂಧಿಸೆ ನೊಗ ||
.
_______________________________________________
.
ಶ್ರೀಧರರೆ, '೭೩೬. ಮುಕ್ತಿದಾ' - ಈ ತಿದ್ದಿದ ರೂಪ ಸರಿ ಕಾಣುವುದೆ ನೋಡಿ.
.
೭೩೬. ಮುಕ್ತಿದಾ
ಬಂಧನದಿಂದ ಬಿಡುಗಡೆ ಯೋಗ್ಯರಿಗೆ, ದಯಪಾಲಿಸೊ ನಿಯಮ
ಕರ್ಮ ನಿಯಮ ಮೀರದ ಬದ್ಧತೆ, ದೇವಿ ಪರಿಪಾಲಿಸುತಲಿ ಧರ್ಮ
ಕರುಣಿಸಬಲ್ಲವಳವಳೊಬ್ಬಳೆ ಮುಕ್ತಿ, ಶಿವನತ್ತ ಕೊಂಡೊಯ್ಯೊ ಶಕ್ತಿ
ಮುಕ್ತಿದಾ ಲಲಿತೆಗಷ್ಟೇ ಇಹ ಸಾಮರ್ಥ್ಯ, ದೇವಿ ಕೃಪೆಯಿಂದ ಮುಕ್ತಿ ||
.
_______________________________________________
.
ಶ್ರೀಧರರೆ, ನಿಮ್ಮ ಸಲಹೆಯಂತೆ ತಿದ್ದಿದರೆ ಈ ರೂಪ ಬರುತ್ತದೆ. ಜತೆಗೆ ಮತ್ತೊಂದು ಅವೃತ್ತಿಯನ್ನು ಹೊಸೆದಿದ್ದೇನೆ. ಅದೇನಾದರೂ ಸೂಕ್ತ ಕಂಡರೆ, ಅದನೆ ಉಳಿಸಿಕೊಳ್ಳೋಣ :-)
.
೭೩೭. ಮುಕ್ತಿ-ರೂಪಿಣೀ
ಮುಕ್ತಿಯ ಮೂರ್ತರೂಪ ದೇವಿ, ಆತ್ಮ ಸಾಕ್ಷಾತ್ಕಾರದಂತಿಮ ಹಂತ
ಮೋಕ್ಷ ತಾತ್ಕಾಲಿಕ ತಾಣ, ಜನ್ಮವಿರದ ಬ್ರಹ್ಮೈಕ್ಯ ಮುಕ್ತಿಯಾಗುತ
ಅಜ್ಞಾನ ಮೋಹವಳಿಸೆ ಮುಕ್ತಿ, ಕರ್ಮಶೇಷ ಕಹಿ ಭರಣಿ
ಕರುಣಿಸಿ ನಿತ್ಯ ಪರಮಾನಂದ, ಮುಕ್ತಿಯೀವ ಲಲಿತೆ ಮುಕ್ತಿರೂಪಿಣೀ ||
.
'೭೩೭. ಮುಕ್ತಿ-ರೂಪಿಣೀ' ಮತ್ತೊಂದು ಅವೃತ್ತಿ:
೭೩೭. ಮುಕ್ತಿ-ರೂಪಿಣೀ
ಮುಕ್ತಿಯ ಮೂರ್ತರೂಪ ದೇವಿ, ಆತ್ಮ ಸಾಕ್ಷಾತ್ಕಾರದಂತಿಮ ಹಂತ
ಮೋಕ್ಷ ತಾತ್ಕಾಲಿಕ ತಾಣ, ಜನ್ಮವಿರದ ಬ್ರಹ್ಮೈಕ್ಯ ಮುಕ್ತಿಯಾಗುತ
ಅಜ್ಞಾನ,ಮೋಹಕೆ ಮುಕ್ತಿ ಜ್ಞಾನದಿಂದ, ಕೈವಲ್ಯಕೆ ಕರ್ಮಶೇಷ ಏಣಿ
ಕರುಣಿಸಿ ನಿತ್ಯ ಪರಮಾನಂದ, ಮುಕ್ತಿಯೀವ ಲಲಿತೆ ಮುಕ್ತಿರೂಪಿಣೀ ||
.
_______________________________________________
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಾಗೇಶರೆ,
೭೩೫. ಮಿಥ್ಯಾ-ಜಗದಧಿಷ್ಠಾನಾ - ತಿದ್ದುಪಡಿಸಿದ ಕೆಳಗಿನ ರೂಪವನ್ನೇ ಉಳಿಸಿಕೊಳ್ಳಿ. ನೀವು ಕೊಟ್ಟಿರುವ ಎರಡನೇ ಕವನವೂ ತಾರ್ಕಿಕವಾಗಿ ಸರಿಯಾಗಿದೆ; ಆದರೆ ಈ ನಾಮದ ವಿವರಣೆಯ ಆಶಯಕ್ಕೆ ಸ್ವಲ್ಪ ಭಂಗ ಬರುತ್ತದೆನಿಸುತ್ತಿದೆ ಹಾಗಾಗಿ ಇದನ್ನೇ ಉಳಿಸುವುದೊಳಿತು. ಮಣ್ಣಿನಿಂದ ಮಡಕೆಯಾಗುವಂತೆ ಬ್ರಹ್ಮದಿಂದ ಈ ಜಗತ್ತು ಉಂಟಾಗಿದೆ ಹಾಗಾಗಿ ಮಣ್ಣಿದ್ದರೆ ಮಡಕೆ - ಬ್ರಹ್ಮವಿದ್ದರೆ ಜಗ ಎನ್ನುವುದ ಅಷ್ಟು ಸೂಕ್ತವೆನಿಸದು.
.
೭೩೫. ಮಿಥ್ಯಾ-ಜಗದಧಿಷ್ಠಾನಾ
ಅಸತ್ಯದೀ ಜಗ ತ್ರಿಗುಣದೆ ಸತ್ಯವೆನಿಸೊ ಭ್ರಮೆ, ಮಾಯೆಗೆ ಕಾರಣ ಲಲಿತ
ಮನಸಿನೇಕತ್ವದಿಂದಷ್ಟೆ ಬ್ರಹ್ಮ ಸಾಕ್ಷಾತ್ಕಾರ ಮಿಥ್ಯಾ ಜಗ ಅಜ್ಞಾನದ ಮೊತ್ತ
ಭ್ರಾಮಕ ಜಗಕಾಧಾರ ದೇವಿ ಮಾಯಾ ಶಕ್ತಿ, ಮಡಕೆಯ ಮಣ್ಣಿನಂತೆ ಬ್ರಹ್ಮ
ದ್ವೈತದೆ ಭ್ರಮೆಯೆ ವಾಸ್ತವ, ಭ್ರಮೆಯಲ್ಲ ಮಾಯೆ ಲೌಕಿಕದೆ ಬಂಧಿಸೊ ಕರ್ಮ ||
.
ಈ ಕೆಳಗಿನ ರೂಪವೇ :) ಅತ್ಯಂತ ಸಮಂಜಸವಾಗಿ ವಿವರಣೆಯನ್ನು ಪ್ರತಿಬಿಂಬಿಸುತ್ತದೆ; ಹಾಗಾಗಿ ಇದನ್ನೇ ಅಂತಿಮವಾಗಿ ಉಳಿಸುವುದು ಒಳಿತು.
೭೩೭. ಮುಕ್ತಿ-ರೂಪಿಣೀ' ಮತ್ತೊಂದು ಅವೃತ್ತಿ:
ಮುಕ್ತಿಯ ಮೂರ್ತರೂಪ ದೇವಿ, ಆತ್ಮ ಸಾಕ್ಷಾತ್ಕಾರದಂತಿಮ ಹಂತ
ಮೋಕ್ಷ ತಾತ್ಕಾಲಿಕ ತಾಣ, ಜನ್ಮವಿರದ ಬ್ರಹ್ಮೈಕ್ಯ ಮುಕ್ತಿಯಾಗುತ
ಅಜ್ಞಾನ,ಮೋಹಕೆ ಮುಕ್ತಿ ಜ್ಞಾನದಿಂದ, ಕೈವಲ್ಯಕೆ ಕರ್ಮಶೇಷ ಏಣಿ
ಕರುಣಿಸಿ ನಿತ್ಯ ಪರಮಾನಂದ, ಮುಕ್ತಿಯೀವ ಲಲಿತೆ ಮುಕ್ತಿರೂಪಿಣೀ ||
_______________________________________________
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಈ ತಿದ್ದುಪಡಿಗಳೊಡನೆ ಅಂತಿಮಗೊಳಿಸುತ್ತಿದ್ದೇನೆ - ಕೆಳಗಿನ ಕೊಂಡಿಯಲ್ಲಿ (ಈ ಬಾರಿ ಕೆಲ ಮಾಡುವುದೊ ಇಲ್ಲವೊ ನೋಡೋಣ)
.
೭೩೫. ಮಿಥ್ಯಾ-ಜಗದಧಿಷ್ಠಾನಾ
.
ಅಸತ್ಯದೀ ಜಗ ತ್ರಿಗುಣದೆ ಸತ್ಯವೆನಿಸೊ ಭ್ರಮೆ, ಮಾಯೆಗೆ ಕಾರಣ ಲಲಿತ
ಮನಸಿನೇಕತ್ವದಿಂದಷ್ಟೆ ಬ್ರಹ್ಮ ಸಾಕ್ಷಾತ್ಕಾರ ಮಿಥ್ಯಾ ಜಗ ಅಜ್ಞಾನದ ಮೊತ್ತ
ಭ್ರಾಮಕ ಜಗಕಾಧಾರ ದೇವಿ ಮಾಯಾ ಶಕ್ತಿ, ಮಡಕೆಯ ಮಣ್ಣಿನಂತೆ ಬ್ರಹ್ಮ
ದ್ವೈತದೆ ಭ್ರಮೆಯೆ ವಾಸ್ತವ, ಭ್ರಮೆಯಲ್ಲ ಮಾಯೆ ಲೌಕಿಕದೆ ಬಂಧಿಸೊ ಕರ್ಮ ||
.
೭೩೬. ಮುಕ್ತಿದಾ
ಬಂಧನದಿಂದ ಬಿಡುಗಡೆ ಯೋಗ್ಯರಿಗೆ, ದಯಪಾಲಿಸೊ ನಿಯಮ
ಕರ್ಮ ನಿಯಮ ಮೀರದ ಬದ್ಧತೆ, ದೇವಿ ಪರಿಪಾಲಿಸುತಲಿ ಧರ್ಮ
ಕರುಣಿಸಬಲ್ಲವಳವಳೊಬ್ಬಳೆ ಮುಕ್ತಿ, ಶಿವನತ್ತ ಕೊಂಡೊಯ್ಯೊ ಶಕ್ತಿ
ಮುಕ್ತಿದಾ ಲಲಿತೆಗಷ್ಟೇ ಇಹ ಸಾಮರ್ಥ್ಯ, ದೇವಿ ಕೃಪೆಯಿಂದ ಮುಕ್ತಿ ||
.
೭೩೭. ಮುಕ್ತಿ-ರೂಪಿಣೀ
ಮುಕ್ತಿಯ ಮೂರ್ತರೂಪ ದೇವಿ, ಆತ್ಮ ಸಾಕ್ಷಾತ್ಕಾರದಂತಿಮ ಹಂತ
ಮೋಕ್ಷ ತಾತ್ಕಾಲಿಕ ತಾಣ, ಜನ್ಮವಿರದ ಬ್ರಹ್ಮೈಕ್ಯ ಮುಕ್ತಿಯಾಗುತ
ಅಜ್ಞಾನ,ಮೋಹಕೆ ಮುಕ್ತಿ ಜ್ಞಾನದಿಂದ, ಕೈವಲ್ಯಕೆ ಕರ್ಮಶೇಷ ಏಣಿ
ಕರುಣಿಸಿ ನಿತ್ಯ ಪರಮಾನಂದ, ಮುಕ್ತಿಯೀವ ಲಲಿತೆ ಮುಕ್ತಿರೂಪಿಣೀ ||
.https://ardharaatriaalaapagalu.wordpress.com/%e0%b3%ad%e0%b3%a9%e0%b3%ab...
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು