ಅಂಕೋಲಾ ಬಸ್ ನಿಲ್ದಾಣದ ಒಂದಿಷ್ಟು ಸವಿ ನೆನಪುಗಳು!

ಅಂಕೋಲಾ ಬಸ್ ನಿಲ್ದಾಣದ ಒಂದಿಷ್ಟು ಸವಿ ನೆನಪುಗಳು!

ಇಂದಿಗೆ ಹನ್ನೆರಡು ವರ್ಷಗಳು ಕಳೆದು ಹೋದವು ನಾನು ನ್ನನ್ನೂರನ್ನ ಬಿಟ್ಟು, ಹಾಗಂತ ನಾನು ಸಂಪೂರ್ಣ ಊರು ಬಿಟ್ಟವನೇನಲ್ಲ. ಆಗಾಗ ರಜೆ ಇದ್ದಾಗ ಊರಿಗೆ ಹೋಗಿ ಬರ್ತಾ ಇದ್ದಿನಿ, ಇರ್ತಿನಿ ಕೂಡ. ಪ್ರತಿ ಬಾರಿ ಊರಿಗೆ ಹೋದಾಗಲು ಮೊದಲು ನೆನಪಾಗುವುದು ಅಂಕೋಲಾ ಬಸ್ ನಿಲ್ದಾಣ. ಊರಿಗೆ ಹೋದಾಗ ಒಮ್ಮೆಯಾದರೂ ಅಂಕೋಲಾ ಬಸ್ ನಿಲ್ದಾಣಕ್ಕೆ ಹೋಗಿ ಬರಲೇ ಬೇಕು. ಅಲ್ಲಿಗೆ ಹೋಗದೇ ತಿರುಗಿ ಬೆಂಗಳೂರಿಗೆ ಬಂದರೆ ಏನನ್ನೋ ಬಿಟ್ಟು ಬಂದ ಹಾಗೆ, ಅಂಕೋಲಾ ಬಸ್ ನಿಲ್ದಾಣದ ಮಹಿಮೆಯೇ ಹಾಗೆ. ಅಂಕೋಲಾ ಬಸ್ ನಿಲ್ದಾಣ ಅಂದ ತಕ್ಷಣ ನೆನಪಾಗುವುದು ಬಸ್ ನಿಲ್ದಾಣದ ಮುಂದಿರುವ ತೇಗದ ಮರ, ಅದರ ಅಕ್ಕ ಪಕ್ಕದಲ್ಲಿರುವ ಜೈಹಿಂದ ಹೈಸ್ಕೂಲ್ ಮೈದಾನ ಹಾಗೂ ಗಾಂದಿ ಮೈದಾನಗಳು, ಹಿಂಬಾಗದ ಕೋಟೆ ಬೇಣ, ಬಸ್ ನಿಲ್ದಾಣದ ಒಳಗಿದ್ದ ಪೈ ಬುಕ್ ಸ್ಟಾಲ್ ಇತ್ಯಾದಿ ಇತ್ಯಾದಿ.

 

ಬಸ್ ನಿಲ್ದಾಣದ ಬಲಭಾಗಲ್ಲಿ ಜೈಹಿಂದ್ ಹೈಸ್ಕೂಲ್ ಮೈದಾನ, ಇದೊಂದು ಐತಿಹಾಸಿಕ ಮೈದಾನ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಅಂಕೋಲೆಯಲ್ಲಿ ಉಪ್ಪಿನ ಸತ್ಯಾಗೃಹ ನಡೆದಿದ್ದು ಇದೇ ಮೈದಾನದಲ್ಲಿ. ಅಂಕೋಲೆಗೆ ಕರ್ನಾಟಕದ ಬಾರ್ಡೋಲಿ ಎನ್ನುವ ಹೆಸರು ಬರಲು ಈ ಮೈದಾನದಲ್ಲಿ ನಡೆದ ಅಂದಿನ ರಾಜಕೀಯ ಚಟುವಟಿಕೆಗಳೇ ಕಾರಣ ಎಂದರೆ ತಪ್ಪಾಗಲಾರದು. ಈ ಮೈದಾನದಲ್ಲಿ ಯಾವಾಗಲೂ ಒಂದಲ್ಲ, ಒಂದು ಕ್ರೀಡೆಗಳು ನಡೆಯುತ್ತಲೇ ಇರುತ್ತಿದ್ದವು. ಒಮ್ಮೊಮ್ಮೆ ರಾತ್ರಿ ಯಕ್ಷಗಾನ ಬಯಲಾಟಗಳು ನಡೆಯುತಿದ್ದವು. ಅಂಕೋಲಾದಲ್ಲಿ ಬಹುತೇಕ ಯಕ್ಷಗಾನಗಳು ನಡೆಯುವುದು ಇದೇ ಮೈದಾನದಲ್ಲಿ. ಅದರಲ್ಲೂ ಮೇಳದ ಆಟಗಳೇ ಜಾಸ್ತಿ.

ಬಸ್ ನಿಲ್ದಾಣದ ಎಡಬಾಗದಲ್ಲಿ ಗಾಂದಿ ಮೈದಾನ. ೨೮-ಪೆಬ್ರುವರಿ-೧೯೩೪ ರಲ್ಲಿ ಮಹಾತ್ಮಾ ಗಾಂದಿಯವರು ಅಂಕೋಲಾಕ್ಕೆ ಬೆಟ್ಟಿ ಕೊಟ್ಟಾಗ ಇದೇ ಸ್ಥಳದಲ್ಲಿ ಅಂಕೋಲಾ ಜನತೆಯನ್ನುದ್ದೇಸಿಸಿ ಮಾತನ್ನಾಡಿದ್ದರಿಂದ ಆ ಸ್ಥಳಕ್ಕೆ ಗಾಂದಿ ಮೈದಾನ ಎಂದು ಕರೆಯುತ್ತಾರೆ. ಇಂದು ಅಲ್ಲಿ ಮೈದಾನವಿಲ್ಲ, ಒಂದು ಕಾಲದಲ್ಲಿ ಪಾಳು ಬಿದ್ದಿದ್ದ  ಮೈದಾನದಲ್ಲಿ ಇವತ್ತು ಸುಂಧರ ಉದ್ಯಾನವನವಿದೆ, ಹಾಗೆ ಅದರ ಪಕ್ಕದಲ್ಲಿ ಗಾಂದಿ ಭವನವಿದೆ.

ಹಾಗೆ ಬಸ್ ನಿಲ್ದಾಣದ ಹಿಂದೆ, ಪಾಳು ಬಿದ್ದ ಕೋಟೆ ಇದೆ, ಸರ್ಪ ಮಲ್ಲಿಕನ ಅಥವಾ ಸರ್ಫ್-ಉಲ್-ಮಲ್ಲಿಕನ ಕಾಲದಲ್ಲಿ ಅಂದರೆ ೧೬೫೦-೧೬೭೨ ಇಸ್ವಿಯ ನಡುವಲ್ಲಿ ಕಟ್ಟಿದ ಕೋಟೆ ಎನ್ನುತ್ತಾರೆ. ಆದರೆ ಇಂದು ಕೋಟೆಯ ಬಹುಬಾಗ ಪಾಳು ಬಿದಿದ್ದು, ಅಲ್ಲಲ್ಲಿ ಅವುಗಳ ಅವಶೇಷಗಳನ್ನು ಕಾಣಬಹುದು.

ಇವೆಲ್ಲವುಗಳ ನಡುವಲ್ಲಿ ನಮ್ಮ ಪುಟ್ಟ ಅಂಕೋಲಾ ಬಸ್ ನಿಲ್ದಾಣ. ಬಸ್ ನಿಲ್ದಾಣದ ಮುಂಬಾಗ ಹಳ್ಳಿ ಕಡೆ ಹೋಗುವ ಲೋಕಲ್ ಬಸ್ಸುಗಳಿಗೂ , ಹಿಂಬಾಗ ದೂರದ ಊರಿಗೆ ಹೋಗಿ ಬರುವ ವೇಗದೂತ ಬಸ್ಸುಗಳಿಗೆ ಮೀಸಲಾಗಿತ್ತು. ಲೋಕಲ್ ಬಸ್ಸುಗಳು ನಿಲ್ಲುವ ಸ್ಥಳದಲ್ಲಿ ಒಂದು ತೇಗದ ಮರ, ಅದು ಎಷ್ಟು ವರ್ಷಗಳಿಂದ ಅಲ್ಲಿದೆ ಎನ್ನುವುದು ನನಗೂ ಸರಿಯಾಗಿ ತಿಳಿದಿಲ್ಲ. ಚಿಕ್ಕವರಿದ್ದಾಗ ನಮ್ಮ ತಂದೆಯವರ ಜೊತೆ ಅಂಕೋಲಾಕ್ಕೆ ಹೋದಾಗ ಅದೇ ತೇಗದ ಮರದ ಕೆಳಗೆ ನಿಂತು, ಊರಿಗೆ ಹೋಗುವ ಬಸ್ಸುಗಳಿಗಾಗಿ ಕಾಯ್ತಾ ನಿಲ್ಲುತ್ತಿದ್ದೆವು. ಬಸ್ ಏನಾದ್ರೂ ತಪ್ಪಿ ಹೋದರೆ ಇನ್ನೊಂದು ಬಸ್ಸಿಗಾಗಿ ಕಾಯುತ್ತಾ ಅಥವಾ ಹತ್ತಿರದ ಕಣಗಿಲ ಊರಿಗೆ ಹೋಗುವ ಬಸ್ಸಿಗೋ, ಇಲ್ಲಾ ನಮ್ಮ ಊರಿನ ಕ್ರಾಸ್ ವರೆಗೆ ಹೋಗುವ ಬಸ್ಸುಗಳಿಗೆ ಕಾಯುತ್ತಲೋ ನಿಲ್ಲುತಿದ್ದೆವು.

ಬಸ್ ನಿಲ್ದಾಣದ ಒಳಗೆ ಆಗಿರುವ ಪೈ ಬುಕ್ ಸ್ಟಾಲ್ ಅಂತೂ ಅಂದು ತುಂಭಾ ಪ್ರಸಿದ್ದವಾಗಿತ್ತು. ಅಂಕೋಲಾದ ಬಹುತೇಕ ಜನ ವೃತ್ತ ಪತ್ರಿಕೆಗಳನ್ನು, ವಾರ ಪತ್ರಿಕೆಗಳನ್ನು ಕೊಂಡು ತಂದು ಓದುತಿದ್ದುದು ಇದೇ ಬುಕ್ ಸ್ಟಾಲ್ನಿಂದ. ನಾವು ಕಾಲೇಜಿಗೆ ಹೋಗುವಾಗ ಆಗಾಗ ಬಂದು, ಇವತ್ತಿನ ಸುದ್ದಿಗಳೇನು? ಮುಖಪುಟದಲ್ಲಿ ಏನಿದೆ? ಎಂದು ಬುಕ್ ಸ್ಟಾಲ್ ಎದುರುಗಡೆ ನಿಂತು ಹೊರಗಿನಿಂದಲೇ ಕಣ್ಣಾಡಿಸುತಿದ್ದೆವು. ಹೀಗೆ ಕಣ್ಣಾಡಿಸುತ್ತಾ ನಿಂತಾಗ ಅದೆಷ್ಟೋ ಬಾರಿ ಪೈ ಮಾಮನಿಂದ (ಬುಕ ಸ್ಟಾಲ್ನ್ ಮಾಲಿಕ) ಬೈಸಿ ಕೊಂಡದ್ದು ಇದೆ.

ಕಾಲೇಜು ದಿನಗಳಲ್ಲಿ ಕಾಲೇಜು ಮುಗಿಸಿ, ಬೇಗ ಬೇಗನೇ ಬಂದು ಬಸ್ ನಿಲ್ದಾಣ ತಲುಪುತಿದ್ದೆವು. ಕಾಲೇಜಿನ ದಿನಗಳಲ್ಲಿ ಈ ಬಸ್ ನಿಲ್ದಾಣದಲ್ಲಿ ಸುತ್ತಾಡುವುದೆಂದರೆ ಎಲ್ಲಿಲ್ಲದ ಸಂತೋಷ. ಬಣ್ಣ ಬಣ್ಣದ ಬಟ್ಟೆ ಧರಿಸಿ ತಮ್ಮ ತಮ್ಮ ಊರಿಗೆ ಹೋಗುವ ಬಸ್ಸುಗಳನ್ನು ಕಾಯುತ್ತಾ ಒಂದು ಕಡೆ ಸಾಲಾಗಿ ನಿಂತಿರುವ ಹುಡುಗಿಯರನ್ನು ನೋಡುತ್ತಾ ನಿಂತರೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ನಮ್ಮೂರ ಬಸ್ಸು ಬಂದು ಬಿಟ್ಟರೆ ಈ ಹಾಳಾದ ಬಸ್ಸು ಇಷ್ಟು ಬೇಗ ಬರಬೇಕಿತ್ತೇ ಎಂದು ಹಲವು ಬಾರಿ ಅನ್ನಿಸಿದ್ದು ಉಂಟು. ಆಗ ಯಾವ ಹುಡುಗಿ ಯಾವ ಊರಿನವಳು, ಅವಳ ಊರಿನ ಬಸ್ಸು ಎಷ್ಟೊತ್ತಿಗೆ ಬರುತ್ತದೆ ಎನ್ನುವುದು ಆ ಬಸ್ ನಿಲ್ದಾಣದ ನಿರ್ವಾಹಕರಿಗಿಂತ ನಮಗೆ ಜಾಸ್ತಿ ತಿಳಿದಿತ್ತು ಅನ್ನುವುದು ತಪ್ಪಾಗಲಾರದು. ಅಷ್ಟರಮಟ್ಟಿಗೆ ನಮಗೆ ಬಸ್ಸುಗಳ ವೇಳೆ ತಿಳಿದಿತ್ತು. ಈಗಲೂ ಅಂಕೋಲಾ ಬಸ್ಸು ನಿಲ್ದಾಣಕ್ಕೆ ಹೋದಾಗ ಆಗಿನ ಈ ನೆನಪುಗಳು ಆಗಾಗ ಕಾಡುತ್ತಲೇ ಇರುತ್ತದೆ.

ಆಗಾಗ ಅಪರೂಪಕ್ಕೆ ಕುಳಿತು ತಿಂಡಿ ತಿಂದು ಹೊರಬರುತಿದ್ದ ಅಂಕೋಲಾ ಬಸ್ ನಿಲ್ದಾಣದ ಕ್ಯಾಂಟಿನ್. ಕಾಲೇಜು ವಿದ್ಯಾರ್ಥಿಗಳಿಂದಾಗಿ ತುಂಬಿ ಸಾಗುವ ಅವೆರ್ಸಾ, ತದಡಿ-ಗೋಕರ್ಣ, ಬೆಲೇಕೇರಿ ಬಸ್ಸುಗಳು. ಅಪರೂಪಕ್ಕೆ ನಮ್ಮ ಕೈಯಲ್ಲಿ ಇತರೆ ಸಾಮಾನುಗಳಿದ್ದರೆ, ಅದು ನಮ್ಮ ಸುತ್ತಾಟಕ್ಕೆ ತೊಂದರೆಯಾಗುತ್ತದೆ ಎಂದು ನಮ್ಮ ಸಾಮಾನುಗಳನ್ನು ಇಟ್ಟು ಹೋಗುತಿದ್ದ ಬಸ್ ನಿಲ್ದಾಣದ ಒಳಗಿನ ಸಂತೋಷನ ಅಂಗಡಿ ಇವೆಲ್ಲ ಮರೆಯುತ್ತೇನೆ ಎಂದರೂ ಹೇಗೆ ಮರೆಯಲು ಸಾದ್ಯ.

--ಮಂಜು ಹಿಚ್ಕಡ್

Rating
No votes yet