೧೬೯. ಲಲಿತಾ ಸಹಸ್ರನಾಮ ೭೫೭ರಿಂದ ೭೬೩ನೇ ನಾಮಗಳ ವಿವರಣೆ

೧೬೯. ಲಲಿತಾ ಸಹಸ್ರನಾಮ ೭೫೭ರಿಂದ ೭೬೩ನೇ ನಾಮಗಳ ವಿವರಣೆ

                                                                                                          ಲಲಿತಾ ಸಹಸ್ರನಾಮ ೭೫೭-೭೬೩

Kṣarākṣarātmikā क्षराक्षरात्मिका (757)

೭೫೭. ಕ್ಷರಾಕ್ಷರಾತ್ಮಿಕಾ

           ಈ ನಾಮಕ್ಕೆ ಎರಡು ವಿಧವಾದ ವ್ಯಾಖ್ಯಾನಗಳಿವೆ.

           ಕ್ಷರ ಎಂದರೆ ಒಂದು ಬಾರಿ ಉಚ್ಛರಿಸಬಹುದಾದ ಪದದ ಒಂದು ಭಾಗ ಮತ್ತು ಅಕ್ಷರವೆಂದರೆ ವರ್ಣಗಳು. ಒಂದು ಕ್ಷರವು ಅನೇಕ ಅಕ್ಷರಗಳನ್ನು ಒಳಗೊಂಡಿರುತ್ತದೆ, ಹಾಗಾಗಿ ಈ ನಾಮದ ಅರ್ಥವು ದೇವಿಯು ಒಂದೇ ಕ್ಷರವುಳ್ಳವಳು ಮತ್ತು ಅನೇಕ ಕ್ಷರವುಳ್ಳವಳು ಅಂದರೆ ಆಕೆಯು ಏಕ ಮತ್ತು ಅನೇಕವಾಗಿದ್ದಾಳೆ ಎಂದಾಗುತ್ತದೆ. ಇದಕ್ಕೆ ಪೂರಕವಾಗಿ ನಾಮ ೫೭೭ ಮಾತೃಕಾ ವರ್ಣ ರೂಪಿಣೀ ಆಗಿದೆ ಎನ್ನುವುದನ್ನು ನೆನಪಿಡಿ. ದೇವಿಯು ಎಲ್ಲಾ ಅಕ್ಷರಗಳ ರೂಪದಲ್ಲಿ ಮತ್ತು ಎಲ್ಲಾ ಶಬ್ದಗಳ ರೂಪದಲ್ಲಿ ಇದ್ದಾಳೆ ಮತ್ತು ಆಕೆಯೇ ಶಬ್ದ ಬ್ರಹ್ಮವಾಗಿದ್ದಾಳೆ. ದೈವೀ ಪ್ರಜ್ಞೆಯು ಪರಾ-ವಾಕ್ ಎನ್ನುವ ಪರಮೋನ್ನತವಾದ ಶಬ್ದಕ್ಕೆ ಸಮನಾಗಿದೆ. ಎಲ್ಲಾ ಅಕ್ಷರಗಳು ಮತ್ತು ಶಬ್ದಗಳು ಈ ಪರಾ-ವಾಕ್‌ನಿಂದ ಉತ್ಪನ್ನವಾಗಿವೆ. ೩೬೬ನೇ ನಾಮವಾದ ’ಪರಾ’ವು ಇದರ ಕುರಿತಾಗಿ ಹೆಚ್ಚಿನ ವಿವರಗಳನ್ನು ಒದಗಿಸುತ್ತದೆ. ದೇವಿ ಉಪನಿಷತ್ತು (೯.೬) ಹೀಗೆ ಹೇಳುತ್ತದೆ, "ಮಂತ್ರಾಣಾಂ ಮಾತೃಕಾ ದೇವೀ ಶಬ್ದಾನಾಮ್ ಜ್ಞಾನ ರೂಪಿಣೀ" (मन्त्राणां मतृकादेवी शब्दानां ज्ञान रूपिणी) ಅಂದರೆ ಆಕೆಯು ಮಂತ್ರಗಳಲ್ಲಿ ಮಾತೃಕೆಗಳ ರೂಪದಲ್ಲಿ ಮತ್ತು ಜ್ಞಾನದಲ್ಲಿ ಶಬ್ದದ ರೂಪದಲ್ಲಿರುತ್ತಾಳೆ. ಮಾತೃಕಾ ಎಂದರೆ ಉತ್ಪತ್ತಿಯ ಮೂಲ. ಈ ಸಂದರ್ಭದಲ್ಲಿ ಅದು ಅಕ್ಷರವನ್ನು ಸೂಚಿಸುತ್ತದೆ. ಜೀವಿಯು ಮಾತೃಕಾವನ್ನು ಅರಿಯುವುದೆಂದರೆ ಅದು ಆತ್ಮಸಾಕ್ಷಾತ್ಕಾರವೆಂದರ್ಥ. ಜೀವಿಯು ಮಾತೃಕೆಯನ್ನು ಮಂತ್ರಗಳ ಮೂಲಕ ಅರಿಯುತ್ತಾನೆ, ಮತ್ತು ಈ ಮಂತ್ರಗಳ ಮೂಲವು ಮಾತೃಕಾ ಅಥವಾ ಸಂಸ್ಕೃತದ ’ಅ’ದಿಂದ ಪ್ರಾರಂಭವಾಗಿ ’ಕ್ಷ’ವರೆಗಿನ ಅಕ್ಷರಗಳು. ಏಕ ಕ್ಷರ ಎಂದರೆ ಒಂದೇ ಅಕ್ಷರವುಳ್ಳದ್ದಾಗಿದ್ದು ಅದು ಮಾಯೆಯನ್ನು ಪ್ರತಿಬಿಂಭಿಸುತ್ತದೆ ಮತ್ತು ಬಹು ಕ್ಷರವೆಂದರೆ ಜೀವಿಗಳು ಅಥವಾ ಆತ್ಮಗಳು. ಲಲಿತಾ ತ್ರಿಶತಿಯ ೨೨ ಮತ್ತು ೨೩ನೇ ನಾಮಗಳು ಈ ಅಂಶವನ್ನು ವಿವರಿಸುತ್ತವೆ. ಭಗವದ್ಗೀತೆಯು (೮.೧೩), "ಓಂ (ॐ) ಎನ್ನುವುದು ಏಕಾಕ್ಷರವಾಗಿದೆ" ಎಂದು ಹೇಳುತ್ತದೆ. ಕಠೋಪನಿಷತ್ತು (೧.೨.೧೬) ಸಹ, "ಈ ಅಕ್ಷರವು (ॐ) ಸಗುಣ ಬ್ರಹ್ಮವಾಗಿದೆ ಮತ್ತು ಈ ಅಕ್ಷರವು ನಿರ್ಗುಣ ಬ್ರಹ್ಮವಾಗಿದೆ" ಎಂದು ಹೇಳುತ್ತದೆ. ಯಾವ ರೀತಿಯಿಂದ ನೋಡಿದರೂ ಸಹ ಈ ನಾಮವು ದೇವಿಯು ಪರಬ್ರಹ್ಮವಾಗಿದ್ದಾಳೆ ಎಂದು ಹೇಳುತ್ತದೆ.

           ವಿಷ್ಣು ಸಹಸ್ರನಾಮದ ನಾಮ ೪೮೦ ಕ್ಷರವಾಗಿದ್ದರೆ ೪೮೧ನೇ ನಾಮವು ಅಕ್ಷರವಾಗಿದೆ. ’ಕ್ಷರ’ ಎಂದರೆ ನಾಶಹೊಂದುವಂತಹದ್ದು ಮತ್ತು ‘ಅಕ್ಷರ’ ಎಂದರೆ ನಾಶವಿಲ್ಲದ್ದು ಎನ್ನುವ ಅರ್ಥವಿದೆ. ಭಗವದ್ಗೀತೆಯು (೮.೪), "ಕ್ಷರೋ ಭಾವಃ" ಅಂದರೆ ಎಲ್ಲಾ ನಶ್ವರವಾದ ವಸ್ತುಗಳು ಎಂದು ಹೇಳುತ್ತದೆ. ಶ್ರೀಕೃಷ್ಣನು ಮುಂದುವರೆಯುತ್ತಾ ಹೇಳುತ್ತಾನೆ (ಭಗವದ್ಗೀತೆ ೧೫.೧೬), "ನಶ್ವರವೆಂದರೆ ದೇಹವಾಗಿದೆ ಮತ್ತು ಶಾಶ್ವತವೆಂದರೆ ಆತ್ಮವಾಗಿದೆ." ಈ ವಿಧದಲ್ಲಿ ಈ ನಾಮವು ದೇವಿಯು ಈ ಶರೀರ ಮತ್ತು ಆತ್ಮ ಎರಡಕ್ಕೂ ಕಾರಣಳಾಗಿದ್ದಾಳೆ ಅಥವಾ ಪರಮ ಸೃಷ್ಟಿಕರ್ತಳಾಗಿದ್ದಾಳೆ. (ಶರೀರ ಮತ್ತು ಆತ್ಮ ಎರಡೂ ಕರ್ಮ ಪರಿಮಾಣಗಳನ್ನು ಅನಾವರಣಗೊಳಿಸಲು ಅವಶ್ಯಕ).

Sarva-lokeśī सर्व-लोकेशी (758)

೭೫೮. ಸರ್ವ-ಲೋಕೇಶೀ

          ದೇವಿಯು ಸಕಲ ಲೋಕಗಳಿಗೆ ಈಶ್ವರೀ ಆಗಿದ್ದಾಳೆ, ಆದ್ದರಿಂದ ಆಕೆಯು ಎಲ್ಲಾ ಲೋಕಗಳನ್ನು ಪಾಲಿಸುತ್ತಾಳೆ. ಗಾಯತ್ರೀ ಮಂತ್ರವು ಏಳು ಲೋಕಗಳನ್ನು ಉಲ್ಲೇಖಿಸುತ್ತದೆ ಮತ್ತು ಪ್ರತಿಯೊಂದು ಲೋಕವನ್ನೂ ಒಂದೊಂದು ವ್ಯಾಹೃತಿಯು ಪ್ರತಿನಿಧಿಸುತ್ತದೆ. ಭೂರ್, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ - ಈ ಏಳು ಲೋಕಗಳು ಪ್ರಜ್ಞೆಯ ಸ್ತರಗಳನ್ನು ಸೂಚಿಸುತ್ತವೆ ಮತ್ತು ದೇವಿಯು ಈ ಎಲ್ಲಾ ಮಾನಸಿಕ ಹಂತಗಳನ್ನು ಪರಿಪಾಲಿಸುತ್ತಾಳೆ. ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ ದೇವಿಯು ಸಮಸ್ತ ಪ್ರಪಂಚವನ್ನು ಪಾಲಿಸುತ್ತಾಳೆ. ಸತ್ಯ ಎನ್ನುವುದು ಅತ್ಯುನ್ನತ ಸ್ತರದ ಪ್ರಜ್ಞೆಯಾಗಿದೆ. ಸತ್ಯ ಎನ್ನುವುದು ಏಳು ಲೋಕಗಳಲ್ಲಿ ಅತ್ಯುನ್ನತವಾದದ್ದನ್ನು ಸೂಚಿಸುತ್ತದೆ; ಇದು ಬ್ರಹ್ಮನ ಆವಾಸ ಸ್ಥಾನವಾಗಿದ್ದು ಅದುವೇ ಸತ್ಯದ ಸ್ವರ್ಗವಾಗಿದೆ.

Viśva-dhāriṇī विश्व-धारिणी (759)

೭೫೯. ವಿಶ್ವ-ಧಾರಿಣೀ

          ದೇವಿಯು ಸಮಸ್ತ ಪ್ರಪಂಚವನ್ನು ಧರಿಸಿದವಳಾಗಿದ್ದಾಳೆ ಅಥವಾ ಎತ್ತಿ ಹಿಡಿದಿದ್ದಾಳೆ.

Tri-varga-dātrī त्रि-वर्ग-दात्री (760) 

೭೬೦. ತ್ರಿ-ವರ್ಗ-ದಾತ್ರೀ

            ತ್ರಿ-ವರ್ಗ ಎಂದರೆ ಪುರಷಾರ್ಥಗಳು. ದೇವಿಯು ಪುರುಷಾರ್ಥಗಳನ್ನು ಕರುಣಿಸುವವಳಾಗಿದ್ದಾಳೆ. ಪುರುಷಾರ್ಥಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಕೊನೆಯದಾದ ಮೋಕ್ಷವನ್ನು ಇಲ್ಲಿ ಸೇರಿಸಲಾಗಿಲ್ಲ ಆದ್ದರಿಂದ ಇಲ್ಲಿ ಪುರಷಾರ್ಥಗಳೆಂದು ಹೇಳದೇ ಈ ನಾಮವು ಕೇವಲ ತ್ರಿವರ್ಗ ಎನ್ನುತ್ತದೆ. ದೇವಿಯು ಜೀವಿಯನ್ನು ಮುಕ್ತಿಗೊಳಿಸುವುದನ್ನು ಈಗಾಗಲೇ ೭೩೬ನೇ ನಾಮದಲ್ಲಿ ಚರ್ಚಿಸಲಾಗಿದೆ. ಎಲ್ಲಾ ನಾಲ್ಕು ಪುರುಷಾರ್ಥಗಳನ್ನು - ಪುರಷಾರ್ಥ ಪ್ರದಾ ಎನ್ನುವ ೨೯೧ ನಾಮದಲ್ಲಿ ಚರ್ಚಿಸಲಾಗಿದೆ.

            ತ್ರಿ-ವರ್ಗ ಎನ್ನುವುದನ್ನು ತ್ರಯೀಮಯ ಎಂದು ಕರೆಯಲಾಗುತ್ತದೆ ಅವು ಮಾನವನ ಮೂರು ಉದ್ದೇಶಗಳಾದ ಧರ್ಮ, ಅರ್ಥ ಮತ್ತು ಕಾಮವನ್ನು ಮಾತ್ರವೇ ಸೂಚಿಸುತ್ತವೆ. 

Subhagā सुभगा (761)

೭೬೧. ಸುಭಗಾ

           ಐದು ವರ್ಷದ ಹುಡುಗಿಯನ್ನು ಸುಭಗಾ ಎಂದು ಕರೆಯಲಾಗುತ್ತದೆ.

          ಉಳಿದಂತೆ, ಭಗ ಎಂದರೆ ಸೂರ್ಯ, ಸಾವಿತ್ರೀ ದೇವಿ, ಶುಭಪ್ರದವಾದದ್ದು, ಮಂಗಳಕರವಾದದ್ದು, ಯೋಗಕ್ಷೇಮ, ಸಂಪದಭಿವೃದ್ಧಿ, ಘನತೆ ಮೊದಲಾದ ಅರ್ಥಗಳಿವೆ. ಸು ಎನ್ನುವುದನ್ನು ಭಗ ಶಬ್ದಕ್ಕೆ ಪೂರ್ವ ಪ್ರತ್ಯಯವಾಗಿ ಉಪಯೋಗಿಸಲಾಗಿದೆ. ಇದರರ್ಥ ದೇವಿಯು ಪರಮ ಮಂಗಳೆಯಾಗಿದ್ದಾಳೆ. ಅವಳು ಪರಮೋನ್ನತವಾದ ಘನತೆಯನ್ನೂ ಹೊಂದಿದವಳಾಗಿದ್ದಾಳೆ.

          ಒಂದು ವೇಳೆ ಭಗ ಎನ್ನುವುದನ್ನು ಸೂರ್ಯ ಎಂದು ಅರ್ಥೈಸಿದರೆ, ಅದರರ್ಥ ಸೂರ್ಯನು ಅವಳ ಕೃಪೆಯಿಂದ ಬೆಳಗುತ್ತಾನೆಂದಾಗುತ್ತದೆ. ಸೂರ್ಯನು ಬೆಳಗಲು ಮತ್ತು ಈ ಪ್ರಪಂಚವನ್ನು ಸುಸ್ಥಿತಿಯಲ್ಲಿಡಲು ದೇವಿಯಿಂದ ಶಕ್ತಿಯನ್ನು ಪಡೆಯುತ್ತಾನೆ. ಇದರ ಕುರಿತ ಹೆಚ್ಚಿನ ವಿವರಗಳಿಗಾಗಿ ನಾಮ ೨೭೫ ಮತ್ತು ನಾಮ ೭೧೫ ಇವುಗಳನ್ನು ನೋಡಿ. ಸುಭಗಾ ಎಂದರೆ ಮಂಗಳಕರವಾದ ಅಥವಾ ಶುಭಕರವಾದವುಗಳನ್ನು ಹೊಂದಿರುವುದು, ಅತ್ಯಂತ ಅದೃಷ್ಟವಂತರು, ಭಾಗ್ಯಶಾಲಿಗಳು, ಸಂತೋಷಿಗಳು, ಕೃಪೆಯುಳ್ಳವರು, ಪ್ರೀತಿಪಾತ್ರರು, ಸುಂದರವಾಗಿರುವುದು, ಅಂದವಾಗಿರುವುದು, ಚಂದವಾಗಿರುವುದು, ಆಕರ್ಷಣೆಯಿರುವುದು ಹೀಗೆ ಮೊದಲಾದ ಅರ್ಥಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ ದೇವಿಯು ಸಕಲ ಮಂಗಳಕರ ಗುಣಗಳನ್ನು ಹೊಂದಿದವಳು ಎಂದಾಗುತ್ತದೆ. ವಾಸ್ತವವಾಗಿ, ಕೇವಲ ಆಕೆಯ ಸ್ಮರಣೆಯೊಂದೇ ಎಲ್ಲಾ ವಿಧವಾದ ಮಂಗಳವನ್ನುಂಟು ಮಾಡಲು ಸಮರ್ಥವಾಗಿದೆ.

Tryambakā त्र्यम्बका (762)

೭೬೨. ತ್ರ್ಯಂಬಕಾ

           ದೇವಿಯು ಮೂರು ಕಣ್ಣುಗಳುಳ್ಳವಳಾಗಿದ್ದಾಳೆ. ಸೂರ್ಯ, ಚಂದ್ರ ಮತ್ತು ಅಗ್ನಿ ಇವು ಆಕೆಯ ಮೂರು ಕಣ್ಣುಗಳಾಗಿವೆ. (ಇಡಾ, ಪಿಂಗಳ ಮತ್ತು ಸುಷುಮ್ನಾ ನಾಡಿಗಳನ್ನು ಜ್ಞಾಪಿಸಿಕೊಳ್ಳಿ). ಈ ನಾಮವು ದೇವಿಯು ಬ್ರಹ್ಮ, ವಿಷ್ಣು ಮತ್ತು ರುದ್ರ ಇವರ ತಾಯಿಯಾಗಿದ್ದಾಳೆಂದು ಹೇಳುತ್ತದೆ. ನಾಮ ೪೫೩ ತ್ರಿನಯನಾ ಮತ್ತು ನಾಮ ೪೭೭ ತ್ರಿಲೋಚನಾ ಇವುಗಳನ್ನು ಸಹ ನೋಡಿ.

Triguṇātmikā त्रिगुणात्मिका (763)

೭೬೩. ತ್ರಿಗುಣಾತ್ಮಿಕಾ

           ಗುಣಗಳು ಮೂರು ವಿಧಗಳಾಗಿವೆ, ಅವೆಂದರೆ ಸತ್ವ, ರಜೋ ಮತ್ತು ತಮೋ ಗುಣಗಳಾಗಿವೆ. ನಾಮ ೯೮೪ ತ್ರಿಗುಣಾ ಆಗಿದೆ; ಅದರಲ್ಲಿ ಇನ್ನಷ್ಟು ವಿವರಗಳನ್ನು ನೋಡೋಣ. ಗುಣಗಳು ಪ್ರಕೃತಿಗೆ ಸಂಭಂದಿಸಿದ್ದು ಅದು ವಿರೋಧಾಭಾಸಗಳಿಗೆ ಕಾರಣವಾಗಿದೆ. ಪುರಷ (ಆತ್ಮ ಅಥವಾ ಜೀವಿ) ತ್ರಿಗುಣಾತ್ಮಕವಾದ ಪ್ರಕೃತಿಯೊಂದಿಗೆ ಸಂಯೋಗ ಹೊಂದಿ ಸೃಷ್ಟಿಯನ್ನು ಉಂಟು ಮಾಡುತ್ತಾರೆ. ಯಾವಾಗ ದೇವಿಯು ಸಗುಣ ಬ್ರಹ್ಮವಾಗಿ ಪಾತ್ರವಹಿಸುತ್ತಾಳೆಯೋ ಆಗ ಗುಣಗಳು ಅವಳಿಗೆ ಸೇರುತ್ತವೆ. ಯಾವಾಗ ಅವಳು ನಿರ್ಗುಣ ಬ್ರಹ್ಮದ ರೂಪವನ್ನು ಧರಿಸುತ್ತಾಳೆಯೋ ಆಗ ಆಕೆಯು ನಿರ್ಗುಣಾ (ನಾಮ ೧೩೯) ಮತ್ತು ಗುಣಾತೀತ (ನಾಮ ೯೩೧) ಆಗುತ್ತಾಳೆ. 

                                                                                            ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 757 - 763 http://www.manblunder.com/2010/05/lalitha-sahasranamam-meaning-757-763.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Tue, 11/26/2013 - 19:13

ಶ್ರೀಧರರೆ, "೧೬೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ :-)
.
ಲಲಿತಾ ಸಹಸ್ರನಾಮ ೭೫೭-೭೬೩
______________________________
.
೭೫೭. ಕ್ಷರಾಕ್ಷರಾತ್ಮಿಕಾ
ಕ್ಷರದಲನೇಕ ಅಕ್ಷರ, ದೇವಿ ಏಕದಲನೇಕವಿಹ ವಿವಿಧ ರೂಪಾವತಾರ
ಸರ್ವಾಕ್ಷರಿ ಶಬ್ದಬ್ರಹ್ಮ ಲಲಿತೆ ಜ್ಞಾನದಲಿ ಶಬ್ದ, ಮಂತ್ರಗಳಲಿಹ ಅಕ್ಷರ
ಏಕ ಕ್ಷರ ಮಾಯೆ ಬಹುಕ್ಷರ ಜೀವಾತ್ಮ, ಮಾತೃಕಾ ಅರಿವೆ ಸಾಕ್ಷಾತ್ಕಾರ
ದೇಹ ನಶ್ವರ ಆತ್ಮ ಶಾಶ್ವತ, ಕಾರಣಕರ್ತೆ ಲಲಿತೆ, ಕ್ಷರಾಕ್ಷರಾತ್ಮಿಕ ಸಾರ ||
.
೭೫೮. ಸರ್ವ-ಲೋಕೇಶೀ
ಸಮಸ್ತ ಚರಾಚರ ಪ್ರಪಂಚ ಪರಿಪಾಲಿಸುತ ಲಲಿತೆ ಸರ್ವ ಲೋಕೇಶೀ
ಪ್ರಜ್ಞಾಸ್ತರದ ಸಪ್ತಲೋಕ ಪ್ರತಿನಿಧಿಸೊ, ಪ್ರತಿ ವ್ಯಾಹೃತಿ ಪರಿಪಾಲಿಸಿ
ಭೂರ್-ಭುವಃ-ಸ್ವಃ-ಮಹಃ-ಜನಃ-ತಪಃ-ಸತ್ಯಲೋಕ ಮಾನಸಿಕ ಹಂತ
ಬ್ರಹ್ಮನ ಆವಾಸ ಸ್ಥಾನ, ಅತುನ್ನತ ಸ್ತರ ಪ್ರಜ್ಞೆ ಸತ್ಯಲೋಕದ ಮಹತ್ತ ||
.
೭೫೯. ವಿಶ್ವ-ಧಾರಿಣೀ
ಜಗನ್ಮಾತೆ ಜನ್ಮವಿತ್ತ ಸೃಷ್ಟಿ ಮುಕುಟವೀ ವಿಶ್ವ, ಬ್ರಹ್ಮದಿಚ್ಛೆಯ ದನಿ
ಹೆತ್ತ ಮಗುವನು ಜತನದಲಿ, ಎತ್ತಿ ಹಿಡಿದಿಹ ಲಲಿತೆ ವಿಶ್ವಧಾರಿಣೀ
ಅವಳನುಟ್ಟಾ ಪ್ರಪಂಚ, ಪ್ರಪಂಚವನುಟ್ಟಾ ದೇವಿಯ ಸಿರಿ ಮುಕುಟ
ಗಂಢ ಭೇರುಂಡದಂತೆ ಏಕತ್ವದಲಿಹ, ವಿಶ್ವ ಸಮಷ್ಟಿಯ ಬ್ರಹ್ಮಕೂಟ ||
.
೭೬೦. ತ್ರಿ-ವರ್ಗ-ದಾತ್ರೀ
ಧರ್ಮ-ಅರ್ಥ-ಕಾಮ ಪುರುಷಾರ್ಥ ತ್ರಿವರ್ಗ ತ್ರಯೀಮಯ
ಅರ್ಹರಿಗೆ ನಿಜಭಕ್ತರಿಗೆ ಕರುಣಿಸುವ ದೇವೀ ಮೃದುಹೃದಯ
ಮಾನವ ಜೀವನೋದ್ದೇಶ ಧರ್ಮ-ಅರ್ಥ-ಕಾಮಗಳಲಿ ಖಾತ್ರಿ
ನೀಡುತಲೆ ಮೋಕ್ಷದ ಹಾದಿ ತೋರಿ ಲಲಿತೆ ತ್ರಿ-ವರ್ಗ-ದಾತ್ರೀ ||
.
೭೬೧. ಸುಭಗಾ
ಐದು ವಯಸಿನ ಬಾಲೆ-ರವಿ-ಸಾವಿತ್ರಿ-ಶುಭ-ಕ್ಷೇಮ-ಸಂಪದ-ಘನತೆ
ಪರಮ ಮಂಗಳೆ ಪರಮೋನ್ನತ ಘನತೆ ಹೊಂದಿಹ ಸುಭಗಾ ಲಲಿತೆ
ರವಿ ಬೆಳಗುವ ಶಕ್ತಿ ಜಗ ಸುಸ್ಥಿತಿಯಲಿಡೆ ಯುಕ್ತಿ ಪ್ರದಾಯಿಸಿ ದೇವಿ
ಸಕಲ ಮಂಗಳಕರ ಗುಣ, ಸ್ಮರಣೆಯೆ ಶುಭ ಕರಣ ಸೌಭಾಗ್ಯದಾಯಿ ||
.
೭೬೨. ತ್ರ್ಯಂಬಕಾ
ತ್ರಿನಯನಾ ತ್ರಿಲೋಚನಾ ತ್ರ್ಯಂಬಕಾ ದೇವಿ ಲಲಿತೆ
ಸೂರ್ಯ-ಚಂದ್ರ-ಅಗ್ನಿಗಳ ಕಣ್ಣಾಗಿಸಿಕೊಂಡು ಘನತೆ
ಇಡಾ-ಪಿಂಗಳ-ಸುಷುಮ್ನಾ ನಾಡಿತ್ರಯಗಳ ಸಹಜ
ಬ್ರಹ್ಮ-ವಿಷ್ಣು-ರುದ್ರರ ತಾಯಾಗಿ ದೇವಿಗೆಲ್ಲ ಪೂಜಾ ||
.
೭೬೩. ತ್ರಿಗುಣಾತ್ಮಿಕಾ
ಸತ್ವ-ರ ಜೋ-ತಮೋ ಗುಣಗಳೆ ತ್ರಿಗುಣ, ಪ್ರಕೃತಿ ಸಂಬಂಧಿ
ವಿರೋಧಾಭಾಸ ಕಾರಣ ತ್ರಿಗುಣ, ಸೃಷ್ಟಿಯುಂಟಾಗಿಸೆ ವೃದ್ಧಿ
ಪುರುಷ ಪ್ರಕೃತಿ ಮಿಲನಕೆ, ಪಾತ್ರ ಸಗುಣವಿರೆ ತ್ರಿಗುಣಾತ್ಮಿಕ
ನಿರ್ಗುಣ ಬ್ರಹ್ಮ ರೂಪವಿರೆ, ದೇವಿ ಗುಣಾತೀತತೆಯೆ ಪ್ರಮುಖ ||
.
.
- ಧನ್ಯವಾದಗಳೊಂದಿಗೆ 
  ನಾಗೇಶ ಮೈಸೂರು