೧೭೧. ಲಲಿತಾ ಸಹಸ್ರನಾಮ ೭೭೧ರಿಂದ ೭೭೭ನೇ ನಾಮಗಳ ವಿವರಣೆ

೧೭೧. ಲಲಿತಾ ಸಹಸ್ರನಾಮ ೭೭೧ರಿಂದ ೭೭೭ನೇ ನಾಮಗಳ ವಿವರಣೆ

                                                                                   ಲಲಿತಾ ಸಹಸ್ರನಾಮ ೭೭೧-೭೭೭

Durārādhyā दुराराध्या (771)

೭೭೧. ದುರಾರಾಧ್ಯ

           ದೇವಿಯು ಹೊಂದಲು ಕಷ್ಟಸಾಧ್ಯಳು. ದೇವಿಯನ್ನು ಹೊಂದುವ ವಿಧಾನವು ಕಷ್ಟಕರವಾದುದು ಏಕೆಂದರೆ ಆಕೆಯ ಪೂಜೆಯಲ್ಲಿ ಮನೋ ನಿಯಂತ್ರಣವು ಅತ್ಯಂತ ಪ್ರಮುಖವಾದುದು. ದೇವಿಯನ್ನು ಪೂಜಿಸುವಾಗ ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊಳ್ಳಿದಿದ್ದರೆ ಆಶಿತ ಫಲಗಳು ದೊರೆಯುವುದಿಲ್ಲ. ಸೌಂದರ್ಯ ಲಹರಿಯು (ಶ್ಲೋಕ ೯೪) ಹೇಳುತ್ತದೆ, "ಯಾರು ತಮ್ಮ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾರರೋ ಅವರಿಗೆ ನಿನ್ನ ಪವಿತ್ರ ಪಾದಗಳ ಬಳಿ ಬಂದು ನಿನ್ನನ್ನು ಪೂಜಿಸುವುದು ಕಷ್ಟವಾಗುತ್ತದೆ". ಇದೇ ಸಂಗತಿಯನ್ನು ’ಬಹಿರ್ಮುಖಸುದುರ್ಲಭಾ’ - ೮೭೧ನೇ ನಾಮವು ಪುಷ್ಟೀಕರಿಸುತ್ತದೆ, ಅದನ್ನು ಮುಂದೆ ನೋಡೋಣ.

Durādharṣā दुराधर्षा (772)

೭೭೨. ದುರಾಧರ್ಷಾ

          ದೇವಿಯನ್ನು ನಿಯಂತ್ರಣದಲ್ಲಿಡಲಾಗುವುದಿಲ್ಲ, ಆಕೆಯನ್ನು ಕೇವಲ ನಿಷ್ಕಳಂಕ ಭಕ್ತಿಯಿಂದ ಮಾತ್ರವೇ ನಿಯಂತ್ರಿಸಬಹುದು. ತೋರಿಕೆಯ ಭಕ್ತಿಯನ್ನು ಆಕೆಯು ಇಷ್ಟ ಪಡುವುದಿಲ್ಲ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾನೆ (೯.೨೬), "ಯಾರು ನನಗೆ ಭಕ್ತಿಪೂರ್ವಕವಾಗಿ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ನೀರನ್ನು (ಪತ್ರಂ, ಪುಪ್ಷಂ, ಫಲಂ, ತೋಯಂ) ಅರ್ಪಿಸುತ್ತಾರೆಯೋ ಅಂತಹ ಪಾಪರಹಿತ ವೈರಾಗ್ಯ ಹೊಂದಿದ ಭಕ್ತನ ಮುಂದೆ ನಾನು ಪ್ರತ್ಯಕ್ಷನಾಗಿ ಅವರು ಪ್ರೇಮಪೂರ್ವಕವಾಗಿ ಅರ್ಪಿಸಿದ್ದನ್ನು ಸಂತೋಷವಾಗಿ ಸ್ವೀಕರಿಸುತ್ತೇನೆ".

         ದೇವಿಯನ್ನು ಏಕಾಂತದಲ್ಲಿ ಪೂಜಿಸಬೇಕು. ಈ ಅಂಶವನ್ನು ಹಲವಾರು ಬಾರಿ ಈ ಸಹಸ್ರನಾಮದ ಹಲವಾರು ನಾಮಗಳ ಮೂಲಕ ಮತ್ತು ಇತರೆಡೆಗಳಲ್ಲೂ ಒತ್ತು ಕೊಟ್ಟು ಹೇಳಲಾಗಿದೆ. ಭಾವನೋಪನಿಷತ್ತು (ಶ್ಲೋಕ ೨೯), "ಆತ್ಮದ ಪರಮಾನಂದವೇ ಲಲಿತೆ" ಎಂದು ಹೇಳುತ್ತದೆ. ದೂರ್ವಾಸ ಮುನಿಯು ತನ್ನ ‘ಶ್ರೀ ಶಕ್ತಿ ಮಹಿಮ್ನ ಸ್ತ್ರೋತ್ರ’ದಲ್ಲಿ (೫೩), "ಯಾರು ದೇವಿಯನ್ನು ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಪೂಜಿಸುತ್ತಾರೆಯೋ ಅವರು ಲಲಿತಾಂಬಿಕೆಯೊಂದಿಗೆ ಏಕವಾಗುತ್ತಾರೆ." ಎಂದು ಹೇಳಿದ್ದಾನೆ.

Pāṭalī-kusuma-priyā पाटली-कुसुम-प्रिया (773)

೭೭೩. ಪಾಟಲೀ-ಕುಸುಮ-ಪ್ರಿಯಾ

             ಪಾಟಲೀ ಹೂವು (Bignonia Suaveolens) ಕೆಂಪು ಮತ್ತು ಬಿಳಿ ಬಣ್ಣದ್ದಾಗಿರುತ್ತದೆ. ಕೆಂಪು ಶಕ್ತಿಯನ್ನು ಪ್ರತಿನಿಧಿಸಿದರೆ, ಬಿಳಿಯು ಶಿವನನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಈ ಹೂವು ಶಿವ ಹಾಗು ಶಕ್ತಿಯರಿಬ್ಬರನ್ನೂ ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.

             ಶಿವನು ಬಿಲ್ವವೃಕ್ಷ ಪ್ರಿಯನಾದರೆ ಶಕ್ತಿಯು ಪಾಟಲೀ ವೃಕ್ಷ ಪ್ರಿಯಳಾಗಿದ್ದಾಳೆ.

Mahatī महती (774)

೭೭೪. ಮಹತೀ

            ಈ ನಾಮವು ಬ್ರಹ್ಮದ ಒಂದು ಮಹತ್ವದ ಲಕ್ಷಣವನ್ನು ವ್ಯಕ್ತ ಮಾಡುತ್ತದೆ. ಮಹತ್ ಎನ್ನುವುದು ಪುರುಷ ಮತ್ತು ಪ್ರಕೃತಿಯರ ಸಂಯೋಗದಿಂದ ಉಂಟಾಗುತ್ತದೆ. ಸಾಂಖ್ಯ ದರ್ಶನದ ಪ್ರಕಾರ ಮಹತ್ ಎನ್ನುವುದು ಪ್ರಕೃತಿಯ ನಂತರದ ತತ್ವವಾಗಿದೆ. ಪುರುಷನು ಸ್ವಯಂ ಬುದ್ಧಿಯುಳ್ಳ ವಿಷಯವಾದರೆ, ಪ್ರಕೃತಿಯು ಈ ವಸ್ತು ಪ್ರಪಂಚಕ್ಕೆ ನಿರ್ಬುದ್ಧಿಯುಳ್ಳ ಸುಪ್ತ ಕಾರಣವಾಗಿದೆ. ಪುರುಷರು ಎಣೆಯಿಲ್ಲದಷ್ಟು ಸಂಖ್ಯೆಯಲ್ಲಿದ್ದರೆ, ಪ್ರಕೃತಿಯು ಕೇವಲ ಒಂದೇ ಇರುತ್ತದೆ. ಪ್ರಕೃತಿಯು ಮೂರು ಮೂಲಭೂತ ವಸ್ತುಗಳಾದ ಸತ್ವ, ರಜಸ್ ಮತ್ತು ತಮಸ್ ಇವುಗಳಿಂದ ಕೂಡಿದೆ ಅಂದರೆ ತ್ರಿಗುಣಾತ್ಮಕವಾಗಿದೆ. ಸಾಂಖ್ಯ ದರ್ಶನದ ಪ್ರಕಾರ ಎಲ್ಲಾ ವಸ್ತುಗಳು ಅವು ಭೌತಿಕವಾದವುಗಳಾಗಲಿ ಅಥವಾ ಮಾನಸಿಕವಾದವುಗಳಾಗಲಿ ಅವೆಲ್ಲಾ ಪ್ರಕೃತಿಯ ರೂಪಾಂತರದಿಂದ ಉಂಟಾಗಿರುವುವು, ಅವುಗಳಲ್ಲಿ ಮೊದಲನೆಯದೇ ಮಹತ್. ದೇವಿಯನ್ನು ವಾಗ್ದೇವಿಗಳು ಮಹತ್ ಎಂದು ಕರೆದಿದ್ದಾರೆ, ಏಕೆಂದರೆ ದೇವಿಯು ಎಲ್ಲಾ ಜೀವಿಗಳಲ್ಲಿ ರೂಪಾಂತರ ಹೊಂದಿದ್ದಾಳೆ ಮತ್ತು ಆಕೆಯನ್ನು ಪ್ರಕೃತಿ ಎಂದೂ  ಕರೆಯುತ್ತಾರೆ. ಮಹತ್ ಎನ್ನುವುದನ್ನು ಬುದ್ಧಿ ಎಂದೂ ಕರೆಯುತ್ತಾರೆ ಇದು ಮಹತ್ತರವಾದುದಾಗಿದೆ ಮತ್ತದು ಮಾನವರ ವಿಶಿಷ್ಠ ಗುಣವಾಗಿದೆ. ಬುದ್ಧಿಯು ಜ್ಞಾನವನ್ನು ಹೊಂದುವುದರಲ್ಲಿ ಅತ್ಯಂತ ಅವಶ್ಯವಾದುದ್ದಾಗಿದೆ.  

           ಮಹಾನಾರಾಯಣ ಉಪನಿಷತ್ತು (೧.೧.೧) ಹೇಳುತ್ತದೆ, "ಮಹತೋ ಮಹೀಯಾನ್" ಅಂದರೆ ಉನ್ನತವಾದುದಕ್ಕಿಂತ ಉನ್ನತವಾದುದು. ಈ ನಾಮವು ದೇವಿಯನ್ನು ಮಹತ್ ಎಂದು ಹೇಳುತ್ತದೆ. ಮಹತ್ (ಇದು ಬುದ್ಧಿ ಅಥವಾ ಸ್ವಯಂ ಪ್ರಜ್ಞೆಗೆ/ನಾನು ಎನ್ನುವ ಪ್ರಜ್ಞೆಗೆ/ಅಹಂಕಾರಕ್ಕೆ ಪ್ರಧಾನ ತತ್ವವಾಗಿದೆ) ಇಲ್ಲದಿದ್ದರೆ ಶಿವನ ಅರಿವುಂಟಾಗದು; ಆದ್ದರಿಂದ ಶಿವನ ಸಾಕ್ಷಾತ್ಕಾರವು ದೇವಿಯ ಆಶೀರ್ವಾದವಿದ್ದರೆ ಮಾತ್ರವೇ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

Meru-nilayā मेरु-निलया (775)

೭೭೫. ಮೇರು-ನಿಲಯಾ

             ದೇವಿಯು ಮೇರುವಿನ ತುತ್ತ ತುದಿಯಲ್ಲಿ ನಿವಸಿಸುತ್ತಾಳೆ. ಮೇರು ಎನ್ನುವುದನ್ನು ಹಿಂದೂ ಪುರಾಣಗಳಲ್ಲಿ ಅತ್ಯಂತ ಮಹೋನ್ನತ ಶಿಖರವೆಂದು ಪರಿಗಣಿಸಲಾಗಿದ್ದು ಇದು ಜಂಬೂದ್ವೀಪದ ಕೇಂದ್ರ ಬಿಂದುವಾಗಿದೆ ಎಂದು ಹೇಳಲಾಗುತ್ತದೆ. ಮೇರುವಿನ ಕುರಿತಾಗಿ ’ಸುಮೇರು ಮಧ್ಯ ಶೃಂಗಸ್ಥಾ’ - ನಾಮ ೫೫ರಲ್ಲಿ ಚರ್ಚಿಸಲಾಗಿದೆ. ಶ್ರೀ ಚಕ್ರದ ತ್ರಿವಿಸ್ತೃತ ರೂಪವನ್ನು (ಉದ್ದ, ಅಗಲ ಮತ್ತು ಎತ್ತರ - Three dimensional form) ಮೇರು ಅಥವಾ ಮಹಾ ಮೇರು ಎಂದು ಕರೆಯುತ್ತಾರೆ. ಪಂಚದಶೀ ಮಂತ್ರದ ಸಂಕ್ಷಿಪ್ತ ರೂಪವನ್ನೂ ಸಹ ಮೇರು ಎಂದು ಕರೆಯಲಾಗುತ್ತದೆ. ಪಂಚದಶೀ ಮಂತ್ರದ ಪುನರಾವೃತವಾದ ಬೀಜಾಕ್ಷರಗಳನ್ನು ತೆಗೆದು ಹಾಕಿದರೆ ಅಲ್ಲಿ ಕೇವಲ ಒಂಭತ್ತು ಅಕ್ಷರಗಳು ಉಳಿಯುತ್ತವೆ. ಈ ಒಂಭತ್ತು ಬೀಜಗಳೆಂದರೆ; ಎಂಟು ಅಕ್ಷರಗಳಾದ क, ए, ई, ल, स, ह, र, म (ಕ, ಏ, ಈ, ಲ, ಸ, ಹ, ರ, ಮ) ಮತ್ತು ಒಂದು ಬಿಂದು.

            ಮೆದುಳ ಬಳ್ಳಿಯನ್ನು (Spinal Cord) ಸಹ ಮೇರು ಎಂದು ಕರೆಯಲಾಗುತ್ತದೆ. ದೇವಿಯು ತನ್ನ ಸೂಕ್ಷ್ಮಾತಿಸೂಕ್ಷ್ಮ ಕುಂಡಲಿನೀ ರೂಪದಲ್ಲಿ ಈ ಮೆದುಳ ಬಳ್ಳಿಯ ಮೂಲಕ ಮೇಲೆ ಕೆಳಗೆ ಪಯಣಿಸುತ್ತಾಳೆ.  ಈ ನಾಮವು ಬಹುಶಃ ಮೇರುವಿನ ಮೂಲಕ ಈ ವಿಧವಾದ ದೇವಿಯ ಚಲನೆಯನ್ನೂ ಸಹ ಸೂಚಿಸಬಹುದು.

Mandāra-kusuma-priyā मन्दार-कुसुम-प्रिया (776)

೭೭೬. ಮಂದಾರ ಕುಸುಮ ಪ್ರಿಯಾ

            ದೇವಿಯು ಮಂದಾರ ಪುಪ್ಷಗಳನ್ನು ಇಷ್ಟ ಪಡುತ್ತಾಳೆ. ಮಂದಾರವು ಸ್ವರ್ಗದಲ್ಲಿ ಇರುವುದೆಂದು ನಂಬಲಾದ ಐದು ವೃಕ್ಷಗಳಲ್ಲಿ (ಮಂದಾರ, ಪಾರಿಜಾತ, ಸಂತಾನ, ಕಲ್ಪವೃಕ್ಷ, ಹರಿ ಚಂದನ) ಒಂದು.

            ಗಂಗೆಯ ತಟದಲ್ಲಿ ಮಂದಾರವೆನ್ನುವ ಹನ್ನೊಂದು ಪವಿತ್ರ ಪುಷ್ಕರಣಿಗಳಿರುವ ಋಷ್ಯಾಶ್ರಮವೊಂದಿದೆ. ದೇವಿಯು ಈ ಋಷ್ಯಾಶ್ರಮವನ್ನು ಬಹುವಾಗಿ ಇಷ್ಟಪಡುತ್ತಾಳೆ.

            ಮಂದಾರ ಪುಪ್ಷಗಳ ಕುರಿತಾಗಿ ಬೌದ್ಧ ಧರ್ಮದಲ್ಲಿಯೂ ಸಹ ಉಲ್ಲೇಖಗಳು ಸಿಗುತ್ತವೆ. ಬುದ್ಧನು ಉಪನ್ಯಾಸವನ್ನು ಕೊಡುತ್ತಿದ್ದಾಗ ಸ್ವರ್ಗದಿಂದ ಮಂದಾರ ಪುಷ್ಪಗಳ ಸುರಿಮಳೆಯಾಗುತ್ತಿತ್ತಂತೆ.

Vīrārādhyā वीराराध्या (777)

೭೭೭. ವೀರಾರಾಧ್ಯಾ

            ವೀರರೆಂದರೆ ಯೋಧರು. ವೀರನ ಲಕ್ಷಣಗಳೆಂದೆರೆ ಅವನು ಆತ್ಮ ಸಾಕ್ಷಾತ್ಕರವನ್ನು ಹೊಂದಿರಬೇಕು, ಅಹಂಕಾರರಹಿತನಾಗಿರಬೇಕು, ದ್ವಂದ್ವತೆಯಿರಬಾರದು ಮತ್ತು ಅವನು ಧೈರ್ಯವಂತನೂ ಆಗಿರಬೇಕು. ಈ ಸಂದರ್ಭದಲ್ಲಿ ವೀರಾ ಎಂದರೆ ಧೈರ್ಯವುಳ್ಳ ಭಕ್ತನೆಂದರ್ಥ. ಯಾವಾಗ ಒಬ್ಬನು ಆತ್ಮವನ್ನು ಅರಿಯುತ್ತಾನೆಯೋ ಆಗ ಅವನು ಯಾರಿಗೂ ಹೆದರಬೇಕಾದುದಿಲ್ಲ. ದೇವಿಯು ಅಂತಹ ಯೋಧರಿಂದ ಅರ್ಚಿಸಲ್ಪಡುತ್ತಾಳೆ.

           ಶಕ್ತಿ ಆರಾಧಕರನ್ನು ಶಿಷ್ಯನ ಯೋಗ್ಯತೆಯನುಸಾರ ಗುರುವು ಅವನಿಗೆ ಮೂರು ಆಚಾರಗಳಾದ ಪಶ್ವಾಚಾರ, ವೀರಾಚಾರ ಮತ್ತು ಸದಾಚಾರ ಇವುಗಳಲ್ಲೊಂದನ್ನು ಉಪದೇಶಿಸುತ್ತಾನೆ. ಸಾಮಾನ್ಯವಾಗಿ ತಾಮಸಿಕ ಗುಣವುಳ್ಳವರಿಗೆ ಪಶ್ವಾಚಾರವನ್ನು, ರಜೋ ಗುಣದವರಿಗೆ ವೀರಾಚಾರವನ್ನು ಮತ್ತು ಸಾತ್ವಿಕರಿಗೆ ಸದಾಚಾರವನ್ನು ಉಪದೇಶ ಮಾಡಲಾಗುತ್ತದೆ. ಹಾಗಾಗಿ ದೇವಿಯು ವೀರಾಚಾರ ಮಾರ್ಗವನ್ನು ಅನುಸರಿಸುವವರಿಂದ ಪೂಜಿಸಲ್ಪಡುತ್ತಾಳೆ ಎಂದು ಈ ನಾಮವನ್ನು ಅರ್ಥೈಸಬಹುದು. (ಇದರ ಕುರಿತ ಹೆಚ್ಚಿನ ವಿವರಣೆಗಳಿಗೆ ಈ ಕೊಂಡಿಯನ್ನು ನೋಡಿ http://sampada.net/blog/%E0%B2%A4%E0%B2%BE%E0%B2%82%E0%B2%A4%E0%B3%8D%E0...).

                                                                                                                        ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 771 - 777 http://www.manblunder.com/2010/05/lalitha-sahasranamam-771-777.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Fri, 11/29/2013 - 22:09

ಶ್ರೀಧರರೆ, "೧೭೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆ " ಯ ಕಾವ್ಯ ರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೭೧-೭೭೭
______________________________________
.
೭೭೧. ದುರಾರಾಧ್ಯ
ಇಂದ್ರಿಯ ನಿಯಂತ್ರಣವಿರದೆ, ದೇವಿಯ ಪೂಜಿಸಲ್ಹೇಗೆ ಸುಲಭದೆ
ನಿಗ್ರಹವಿರದಿಹ ಇಂದ್ರಿಯ ಮನಸ್ಸು, ಆಶಿತ ಫಲಗಳು ದೊರಕದೆ
ದೇವಿ ಪೂಜೆಗೆ ಮನೋನಿಯಂತ್ರಣ ಪ್ರಮುಖ, ಹೊಂದೆ ಕಷ್ಟ ಸಾಧ್ಯ
ಕಠಿಣ ದುರ್ಗಮ ಹಾದಿ ಹೊಂದೊ ವಿಧಾನದೆ, ಲಲಿತೆ ದುರಾರಾಧ್ಯ ||
.
೭೭೨. ದುರಾಧರ್ಷಾ
ಆತ್ಮದ ಪರಮಾನಂದ ಲಲಿತೆ, ಪ್ರಾಣಾಯಾಮಾ ಧ್ಯಾನ ಪೂಜೆಗದ್ವೈತ
ನಿಯಂತ್ರಿಸಲೆಲ್ಲಿ ದೇವಿಯ ನಿಷ್ಕಳಂಕ ಭಕ್ತಿಯ್ಹೊರತು, ಪೂಜೆಗೇಕಾಂತ
ಭಕ್ತಿಯಿಂದರ್ಪಿಸುವ ಎಲೆ-ಹೂವು-ಹಣ್ಣು-ನೀರಿಗೆ ಹರ್ಷದೆ ಆಗಿ ಪ್ರತ್ಯಕ್ಷ
ಪ್ರೇಮಪೂರ್ವಕವಾಗಿ ಸ್ವೀಕರಿಸಿ ಸಂತಸ ಪಡುವಳು ಲಲಿತೆ ದುರಧರ್ಷಾ ||
.
೭೭೩. ಪಾಟಲಿ-ಕುಸುಮ-ಪ್ರಿಯಾ 
ಬಿಲ್ವವೃಕ್ಷ ಪ್ರಿಯ ಶಿವನಂತೆ, ಪಾಟಲೀ ವೃಕ್ಷ ಪ್ರಿಯಳಾಗಿ ಶಕ್ತಿ
ರೋಹಿತ ಶ್ವೇತವರ್ಣದ ಪಾಟಲೀ ಹೂವ್ವಲಿ ಏಕತ್ವತೆ ಪ್ರವೃತ್ತಿ
ಕೆಂಪು ಪ್ರತಿನಿಧಿಸೆ ಶಕ್ತಿಯ, ಬಿಳಿ ಶಿವನ ಸಂಕೇತಿಸಿ ಸಕ್ರೀಯ
ಶಿವಶಕ್ತಿ ಸಂಗಮ ಪ್ರತಿನಿಧಿ, ಲಲಿತೆ ಪಾಟಲಿಕುಸುಮಪ್ರಿಯಾ ||
.
೭೭೪. ಮಹತೀ
ಪುರುಷ ಪ್ರಕೃತಿ ಸಂಯೋಗ ಫಲಿತ ಮಹತ್, ಮಹತ್ವದ ಬ್ರಹ್ಮ ಲಕ್ಷಣ
ಪುರುಷಾನೇಕ ಸ್ವಯಂಬುದ್ಧಿ ವಿಷಯ, ನಿರ್ಬುದ್ದಿಗೆ ಒಂಟಿ ಪ್ರಕೃತಿ ಕಾರಣ
ತ್ರಿಗುಣಾತ್ಮಕ ಪ್ರಕೃತಿ ರೂಪಾಂತರವೆಲ್ಲವು, ಜೀವಿ ರೂಪಾಂತರದೆ ಪ್ರಕೃತಿ
ಮಹತ್ತರ ಬುದ್ಧಿ, ಉನ್ನತೋನ್ನತ ಶಿವನರಿವು ಉಂಟಾಗಿಸಿ ಲಲಿತೆ ಮಹತೀ ||
.
೭೭೫. ಮೇರು-ನಿಲಯಾ
ಮೇರು ಮಹೋನ್ನತ ಶಿಖರ, ಜಂಬೂ ದ್ವೀಪದ ಬಿಂದು ಕೇಂದ್ರ
ಶ್ರೀ ಚಕ್ರದ ಘನರೂಪ ಮಹಾಮೇರು, ಮೇರು ಮೆದುಳ್ಬಳ್ಳಿತರ
ಸೂಕ್ಷ್ಮಾತಿಸೂಕ್ಷ್ಮ ಕುಂಡಲಿನೀ ಲಲಿತೆ, ಪಯಣಿಸೊ ಚಲನೆಯ
ಪಂಚದಶೀ ಪುನರಾವರ್ತಿಸದ, ನವಬೀಜದೆ ಮೇರುನಿಲಯಾ ||
.
೭೭೬. ಮಂದಾರ ಕುಸುಮ ಪ್ರಿಯಾ
ಬುದ್ಧನುಪನ್ಯಾಸಕೆ ಸುರಿಮಳೆಯೆ, ಸ್ವರ್ಗದಾ ಮಂದಾರ ಪುಷ್ಪ
ಗಂಗಾತಟ ಋಷ್ಯಾಶ್ರಮ ಮಂದಾರ, ಏಕದಶ ಪುಷ್ಕರಣಿ ತಲ್ಪ
ಸ್ವರ್ಗಪಂಚವೃಕ್ಷ ಪಾರಿಜಾತ-ಸಂತಾನ-ಕಲ್ಪವೃಕ್ಷ-ಹರಿ ಚಂದನ
ಮಂದಾರವ ಮೆಚ್ಚೊ ದೇವಿ, ಮಂದಾರ ಕುಸುಮಪ್ರಿಯಾ ಧ್ಯಾನ ||
.
೭೭೭. ವೀರಾರಾಧ್ಯಾ
ಧೈರ್ಯವುಳ್ಳ ಭಕ್ತನೆ ವೀರಾ, ಆತ್ಮವರಿತವನಿಗೆ ಯಾರ ಭಯ
ಆತ್ಮ ಸಾಕ್ಷಾತ್ಕಾರ ಹೊಂದಿದ ಯೋಧ, ಅರ್ಚಿಸಿರೆ ಲಲಿತೆಯ
ಅಹಂಕಾರ, ದ್ವಂದ್ವವಿರದ ಆರಾಧಕ ತಾಮಸವಿರೆ-ಪಶ್ವಾಚಾರ
ರಾಜೋ-ವೀರಾಚಾರ ಸಾತ್ವಿಕಗೆ-ಸದಾಚಾರ ಗುರು ಹಂಚೆ ವರ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು