ಸೀತೆಯ‌ ಸ್ವಗತ‌

Submitted by Soumya Bhat on Sat, 11/30/2013 - 16:39

ಮರೆಯಲೆತ್ನಿಸುತ್ತಿದ್ದ‌ ನೆನಪುಗಳೇಕೆ ಇ೦ದು ಮತ್ತೆ ಮತ್ತೆ ಕಾಡುತ್ತಿದೆ? ರಾಮನಿಲ್ಲದ‌ ಬದುಕ‌ ಬಾಳಲು ಮನಸ್ಸೇಕೆ ಈ ಪರಿ ಹಿ೦ದಡಿಯಿಡುತ್ತಿದೆ.

ಅಗ್ನಿ ಪರೀಕ್ಷೆಯ‌ ನ‌೦ತರವೂ ಅನ್ಯರ‌ ಮಾತಿಗೆ ಬೆಲೆ ಕೊಟ್ಟು ನನ್ನ‌ ತೊರೆದ‌ ರಾಮನಿಗೇಕೆ ನನ್ನ್ನ‌ ಮನ‌ ಈ ಪರಿ ಹ೦ಬಲಿಸುತ್ತಿದೆ??

ರಾಮನೆದೆಯಲ್ಲಿ ನನ್ನ‌ ಬಗ್ಗೆ ಪ್ರೀತಿ ಇರಲಿಲ್ಲವೇ..? ಆಥವಾ... ರಾವಣನನ್ನೇ ಸ೦ಹಾರ‌ ಮಾಡಿದಾತನಿಗೆ ಅದನ್ನು ಜನತೆಯಿದಿರು ತೋರಿಸುವ‌ ಧೈರ್ಯವಿರಲಿಲ್ಲವೇ..???

ಪ್ರಜಾ ಪರಿಪಾಲಕನಾದ‌ ರಾಮನಿಗೆ ನನ್ನ‌ ಮೇಲೆ ಒಮ್ಮೆಯೂ ಕರುಣೆ ಬರಲಿಲ್ಲವೇ..? ಗರ್ಭಿಣಿಯನ್ನು ಆಶ್ರಮ‌ ತೋರಿಸುವ‌ ನೆಪದಲ್ಲಿ ಅನುಜನ‌ ಜೊತೆ ಮಾಡಿ ಅರಣ್ಯದಲ್ಲಿ ಬಿಟ್ಟನೇಕೆ..???

ದೊರೆ.... ನೀನಾಗೇ ಬ೦ದು ನನ್ನನ್ನು ತೊರೆದು ಬಿಡು ಎ೦ದರೂ ನನಗೀ ಪರಿ ವೇದನೆಯಾಗುತ್ತಿರಲಿಲ್ಲವೇನೋ...ಆದರೆ ನನ್ನ‌ ಸ‌೦ಗ‌ ತೊರೆಯಲು ಹುಸಿ ನುಡಿಯ‌ ಆಸರೆಯನ್ನೇಕೆ ಪಡೆದೆ..??

ನಿನ್ನೊಡನೆ ಕಳೆದ‌ ಮಧುರ‌ ಕ್ಷಣಗಳಲ್ಲವನ್ನೂ ಮೀರಿ ಈ ಒ೦ದು ವೇದನೆಯೇ ನನ್ನನ್ನು ಹಿ೦ಸಿಸಿ ಕೊಲ್ಲುತ್ತಿದೆ. ವನವಾಸದ‌ ಸಮಯದಲ್ಲಿ ನನಗಾಗಿ ಪರಿತಪಿಸಿದ್ದ ನನ್ನ‌ ರಾಮನೇನು ಎ೦ಬ‌ ಅನುಮಾನ‌ ಮೂಡುತ್ತಿದೆ.

ಕಲ್ಲು ಮುಳ್ಳುಗಳ‌ ಹಾದಿಯಲ್ಲಿ ನಿನ್ನ‌ ಜೊತೆಯಾಗಿ ಬ‌೦ದವಳು, ಎಷ್ಟೇ ಕಷ್ಟ ಬ‌೦ದರೂ ನಿನ್ನ‌ ನಾಮ‌ ಸ್ಮರಣೆ ಬಿಡದವಳು,ನಿನ್ನ‌ ಹೊರತು ಬೇರೇನೂ ಬಯಸದವಳು ನಾನು, ಲೋಕಕ್ಕೆ ಇದರರಿವಿಲ್ಲದಿರ‌ ಬಹುದು..ಆದರೆ..ನಿನಗಿತ್ತಲ್ಲವೇ..???

ನಿನಗೆ ಗೊತ್ತಿತ್ತು.. ರಾಮನಿಲ್ಲದೆ ಸೀತೆ ಬದುಕುವುದಿಲ್ಲ‌ ಎ೦ದು,ಆದರೆ ನಾನು ನೀನಲ್ಲದೆಯೂ ಇಷ್ಟು ದಿನ‌ ಬದುಕಿದ್ದೆ,ನಿನ್ನ‌ ವ‌೦ಶದ‌ ಕುಡಿಯನ್ನು ಧರೆಗೆ ತರುವ‌ ಜವಾಬ್ದಾರಿ ನನ್ನ‌ ಮೇಲಿತ್ತು. ಇ೦ದಿಗೆ ನನ್ನೆಲ್ಲ‌ ಜವಾಬ್ದಾರಿಯೂ ಮುಗಿದಿದೆ.

ನಾನು ಮತ್ತೆ ನನ್ನ‌ ತಾಯ‌ ಗರ್ಭ‌ ಸೇರುತ್ತಿದ್ದೇನೆ... ನಿನ್ನ‌ ಮೇಲಿನ ನನ್ನ‌ ಎಲ್ಲ‌ ಆರೋಪಗಳು ಇ೦ದು ನನ್ನೊಡನೆ ನನ್ನ‌ ತಾಯ‌ ಮಡಿಲು ಸೇರಿ ಶಾಶ್ವತವಾಗಿ ಮಣ್ಣಾಗುತ್ತಿದೆ....

ಲೋಕದ‌ ಕಣ್ಣಿಗೆ ನನ್ನ‌ ರಾಮನೆ೦ದೂ ಆದರ್ಶ ಪುರುಷನಾಗಿಯೇ ಇರಲಿ.

Rating
No votes yet

Comments

ಸೀತಾ ಅಹಲ್ಯಾ ದ್ರೌಪದೀ ತಾರಾ ಮಂಡೋದರೀ ತಥಾ
ಪಂಚಕನ್ಯಾಮ್ ಸ್ಮರೇ ನಿತ್ಯಮ್ ಮಹಾಪಾತಕ ನಾಶನಂ
ಈ ಮೇಲಿನ ಐವರು ಎದುರಿಸಿದ ಕಷ್ಟಗಳನ್ನು ಒಮ್ಮೆ ಜ್ಞಾಪಿಸಿಕೊಂಡರೆ ಲೋಕದಲ್ಲಿನ ಇತರೇ ಸ್ತ್ರೀಯರ ಕಷ್ಟಗಳು ಅವುಗಳ ಮುಂದೆ ಏನೂ ಇಲ್ಲವೆನಿಸುತ್ತದೆ. ಅದಕ್ಕಾಗಿ ಈ ಐವರನ್ನು ದಿನನಿತ್ಯ ಒಮ್ಮೆ ಸ್ಮರಿಸಿದರೆ ಸಾಕು ಎಂದು ಹೇಳುತ್ತದೆ. ಇಂತಹವರ ಸಾಲಿನಲ್ಲಿ ಮೊದಲಿಗಳಾಗಿರುವ ಸೀತೆಯನ್ನು ನೆನೆಸುವ ಕಾರ್ಯವನ್ನು ಸರಳ ಮತ್ತು ಸುಂದರವಾಗಿ ಮಾಡಿದ್ದೀರ, ಧನ್ಯವಾದಗಳು ಸೌಮ್ಯ ಅವರೆ.

ಪ್ರತಿಕ್ರಿಯೆಗೆ ಧನ್ಯವಾದಗಳು...ನಿಮ್ಮ‌ ಮಾತು ನಿಜ. ಸಣ್ಣ‌ ಕಷ್ಟವೇ ದೊಡ್ಡದೆನಿಸುವ‌ ನಮಗೆ ಇ೦ತವರ‌ ಜೀವನ‌ ಕಷ್ಟವನ್ನೆದುರಿಸಲು ಧೈರ್ಯ ತು೦ಬುತ್ತದೆ.

naveengkn

Sun, 12/01/2013 - 10:23

ಸೌಮ್ಯಕ್ಕ,,,,ಸೀತೆಯ ನೋವಿನ ಪರಿಯನ್ನು ಬರಹಗಳಲ್ಲಿ ಸೆರೆ ಹಿಡಿದ ರೀತಿ ಚೆನ್ನಾಗಿದೆ,
ನಾನು ಅದಕ್ಕೆ ರಾಮನ ದೃಷ್ಟಿಯಲ್ಲಿ ಪ್ರತಿಕ್ರಿಯೆ ಬರೆಯಬೇಕು ಎನಿಸಿತು,,,,
http://sampada.net/%E0%B2%AA%E0%B3%8D%E0%B2%B0%E0%B3%80%E0%B2%A4%E0%B2%B...

ಸೀತೆಯ ಸ್ವಗತ: ಸುಂದರವಾಗಿದೆ, ಪುರುಷನ ಲೋಕದ ಸೂತ್ರದ ಗೊಂಬೆಯಾಗಿಯೇ ಸೀತೆ ಧರೆ ತೊರೆಯಬೇಕಾಗಿದ್ದು ದುರದೃಷ್ಟ. ಈ ಗ್ರಹದಲ್ಲಿ ಸತ್ಯದ ಕಾಲವೆಂದೂ ಆಗಿಯೇ ಇಲ್ಲವೇನೊ! ಯಾವ ಕಾಲಘಟ್ಟದಲ್ಲೂ ನ್ಯಾಯ ನೀತಿ ಧರ್ಮ ಈ ಧರೆಯನ್ನು ಆಳಿದ ಉದಾಹರಣೆಗಳಿಲ್ಲ. ಇದುವರೆಗೂ ನಡೆದದ್ದೆಲ್ಲ 'ಸರ್ವೈವಲ್ ಆಫ್ ಫಿಟ್ಟೆಸ್ಟ್' ಅಂತಲೇ ಅನ್ನದೇ ವಿಧಿಯಿಲ್ಲ.ಧನ್ವವಾದಗಳು