ಕಣ್ಣೀರಜ್ಜ ಮತ್ತು ಇತರೆ ಕಥೆಗಳು

ಕಣ್ಣೀರಜ್ಜ ಮತ್ತು ಇತರೆ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗಿರೀಶ್ ಜಮದಗ್ನಿ
ಪ್ರಕಾಶಕರು
ಟೋಟಲ್ ಕನ್ನಡ
ಪುಸ್ತಕದ ಬೆಲೆ
ರೂ. 125 /-

ಇತ್ತೀಚೆಗೆ ಸಿಂಗಪುರದಲಿ ನಡೆದ 'ಭಾವ ಸುಧೆ ದೀಪೋತ್ಸವ - 2013' ಸಮಾರಂಭದಲ್ಲಿ ಶ್ರೀಯುತ ಗಿರೀಶ್ ಜಮದಗ್ನಿಯವರ ಮೊದಲ ಕಥಾ ಸಂಕಲನ "ಕಣ್ಣೀರಜ್ಜ ಮತ್ತು ಇತರ ಕಥೆಗಳು" ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಸಂಧರ್ಭದಲ್ಲೆ ಈ ಪುಸ್ತಕವನ್ನು ನೇರ ಕೊಳ್ಳುವ ಅವಕಾಶವಿದ್ದ ಕಾರಣ ಅಂದೆ ನಾನೂ ಒಂದು ಪ್ರತಿ ಖರೀದಿಸಿದ್ದೆನಾದರೂ, ಬಿಡುವಿಲ್ಲದ ಕಾರಣ ತಕ್ಷಣ ಓದಲಾಗಿರಲಿಲ್ಲ. ಈ ವಾರದ ಕೊನೆಯಲ್ಲಿ ತುಸು ಬಿಡುವಿನಲಿ ಓದಲು ಕುಳಿತದ್ದರ ಪ್ರತಿಫಲ ಈ ಕಿರು ವಿಮರ್ಶೆ. 

(ತಮ್ಮ ಕೃತಿಯ ಲೋಕಾರ್ಪಣೆಯ ಕುರಿತು ಶ್ರೀ ಗಿರೀಶರು ಸಂಪದದಲ್ಲೂ ಒಂದು ಕಿರು ಲೇಖನ ಪ್ರಕಟಿಸಿದ್ದರು. ಲೇಖನಕ್ಕೆ ಮತ್ತು ಪುಸ್ತಕ ಕುರಿತ ಇತರ ವಿವರಗಳಿಗೆ ಈ ಕೊಂಡಿ ನೋಡಿ )

ಇಲ್ಲಿರುವ ಒಟ್ಟು ಹದಿಮೂರು ಕಥೆಗಳು ಲೇಖಕರೆ ಹೇಳಿದಂತೆ, ಕಾಲಾಂತರದಲ್ಲಿ ಬರೆದು ಬ್ಲಾಗಿನ ಮುಖಾಂತರವೊ ಅಥವಾ ಆನ್ಲೈನ್ ಪತ್ರಿಕೆ , ಪೋರ್ಟಲ್ಲುಗಳ ಮುಖಾಂತರವೊ ಪ್ರಕಟಿತಗೊಂಡ ಕೃತಿಗಳು. ಹೀಗಾಗಿ ಅವರು ನಡೆದು ಬಂದ ಹಾಗೆ ಬೆಳೆಯುತ್ತಾ ಬಂದ ರೀತಿಯ ತುಣುಕುಗಳು ಕಥೆಗಳಲ್ಲಿ ಅಲ್ಲಲ್ಲಿ ಕಾಣುತ್ತವೆ. ಬೆನ್ನುಡಿಯಲ್ಲಿ ಹೆಸರಾಂತ ಕಥೆಗಾರ ಶ್ರೀಯುತ ವಸುಧೇಂದ್ರರು ಹೇಳಿರುವಂತೆ ಸಾಹಿತ್ಯಿಕ ನೆಲೆಗಟ್ಟಿನ ಹುಡುಕಾಟದ ಹೆಜ್ಜೆ ಗುರುತುಗಳು ಉದ್ದಕ್ಕೂ ಕಾಣ ಸಿಗುತ್ರವೆ. ಇದು ಒಂದೆಡೆ ಕಥೆಗಳಲ್ಲಿನ ವಸ್ತು ವಿಷಯದ ವೈವಿಧ್ಯತೆಯ ರೂಪದಲಿ ಅನುರಣಿಸಿದರೆ, ಮತ್ತೊಂದೆಡೆ ಪ್ರತಿ ಕಥೆಯಲ್ಲಿ ಬಳಸಿರುವ ನೇರ ಹಾಗೂ ಸರಳ ಭಾಷೆಯಲ್ಲಿ ಪ್ರತಿಬಿಂಬಿತವಾಗುತ್ತದೆ. 

ಈ ಸಂಕಲನದ ಮೊದಲ ಕಥೆಯೆ ನೋವು-ನಲಿವಿನ , ಕ್ರೌರ್ಯ-ಸುಕುಮಾರ್ಯಗಳ ದ್ವಂದ್ವ ಬಿಂಬಿಸುವ 'ಹೂ(ನೋ)ವಿನ ಕಥೆ'.  ಯಾಂತ್ರಿಕ ಹಾಗೂ ತೋರಿಕೆಯ ಬದುಕಿನ ಹೊಂದಾಣಿಕೆಗಳ ನಡುವೆ ಸಿಕ್ಕಿ ನಲುಗುವ ನವಿರಾದ ಎಳಸುತನ, ಸೌಂದರ್ಯ ಪ್ರಜ್ಞೆ, ಅದನ್ನು ತೀರಾ ಭಾವರಾಹಿತ್ಯತೆಯಿಂದ, ಸೂಕ್ಷ್ಮಜ್ಞತೆಯಿಲ್ಲದ ಉಡಾಫೆಯೊಂದಿಗೆ ನೋಡುವ ಆಧುನಿಕ ಜಗ ಇಲ್ಲಿನ ಕಥಾ ಹಂದರ. ಒಂದೆಡೆ ವ್ಯಾಪಾರ/ವಾಣಿಜ್ಯ ಮತ್ತೊಂದೆಡೆ ರಾಜಕೀಯ ಹಿತಾಸಕ್ತಿಗಳ ನಡುವಲಿ ಸಿಕ್ಕಿ ಧೂಳಿಪಟವಾಗುವ ಅನಾಥ ಪ್ರಜ್ಞೆ, ಇಲ್ಲಿ ಗುಲಾಬಿಯ ಸಾಂಕೇತಿಕ ರೂಪದಲಿ ಅರಳಿ ನಲುಗುತ್ತದೆ. 

ಇದೆ ಹಂದರದ ಮತ್ತೊಂದು ಮುಖವನ್ನು ಮಾನವ ಜಗತ್ತಿನ ದೈನಂದಿನ ಬದುಕಿನ ಪರಿಧಿಯಡಿಯಲ್ಲಿ ಕಟ್ಟಿಕೊಡುವ ಕಥೆ 'ವ್ಯೂಹ'. ಸಾಧಾರಣ ವ್ಯಕ್ತಿಗಳು ಸಹೋದ್ಯೋಗಿ ಅಥವ ಜತೆಗಾರರಾದಾಗ, ಆತ್ಮೀಯತೆಯ ಹೊದಿಕೆಯಡಿ ಅಡಗಿರಬಹುದಾದ ದೈನ್ಯಪ್ರೇರಿತ ಅನಿವಾರ್ಯ, ಅದು ಪ್ರೇರೇಪಿಸುವ ಕ್ರೌರ್ಯ, ಆ ಹುನ್ನಾರಕ್ಕೆಣಿಸದ ತೂಗುಯ್ಯಾಲೆಯ ಮನಸುಗಳನ್ನು ಪ್ರಚೋದಿಸಿ, ಪ್ರಲೋಭಿಸಿ ಲಾಭ ಮಾಡಿಕೊಳ್ಳುವ ತಣ್ಣನೆಯ ರಾಕ್ಷಸಿ ಪ್ರವೃತ್ತಿ, ಇದೆಲ್ಲದರ ನಡುವೆ ಹೆಣಗಾಡುವ ಸರಕಾಗಿ ಮುಗ್ದತೆಯ ಅಸಹಾಯಕ ರೂಪ - ಎಲ್ಲವು ಒಂದೊಂದು ಪಾತ್ರಗಳ ರೂಪದಲ್ಲಿ ಪ್ರತಿಬಿಂಬಿತವಾಗಿದೆ. ಯಾರೂ ತಾವಾಗೆ ಬಯಸದಿದ್ದರೂ ಬದುಕಿನ ಅನಿವಾರ್ಯಗಳ ದ್ವಂದ್ವ ಮುಗ್ದರನ್ನು ಎಳೆತಂದು ಅರಿಯದ ಚಕ್ರವ್ಯೂಹದಡಿ ಬಲಿಯಾಗಿಸುವ ವ್ಯವಸ್ಥೆಯ ಕ್ರೌರ್ಯ ಮುಗ್ದರ ನೆಲೆಯೂ ಹೌದು, ಆ ರೀತಿ ಶೋಷಿಸುವವರ ನೆಲೆಯೂ ಹೌದು ಎಂಬುದು ಇಲ್ಲಿ ಅಂತರ್ಗತವಾಗಿರುವ ಮತ್ತೊಂದು ಸತ್ವ. ಇದರ ನಡುವಲ್ಲೆ ಸಸ್ಪೆನ್ಸಿನ ಉಗುರು ಬೆಚ್ಚಗಿನ ಶಾಖ ಮುಟ್ಟಿಸುವ ಪುಟಾಣಿ ಕಥೆ 'ನಿರ್ಧಾರ'. ಸಂಭಾಷಣೆ-ವಾಗ್ಯುದ್ಧದ ರೂಪದಲ್ಲಿ ಆರಂಭವಾಗುವ ಕಥೆಯ ಅಂತ್ಯದಲ್ಲಷ್ಟೆ ನಿರ್ಧಾರದ ಹಿನ್ನಲೆ ಅರಿವಾಗಿ ತುಟಿಯಲ್ಲಿ ಮಂದಹಾಸ ಅರಳಿಸುತ್ತದೆ. 

ಈ ಕಥೆಗಳ ಓಘದಲ್ಲೆ ಇದ್ದಕ್ಕಿದ್ದಂತೆ ಟ್ರಾಕ್ ಬದಲಿಸಿ ಮನೋವೈಜ್ಞಾನಿಕ ಪತ್ತೇದಾರಿಯ ಜಾಡಿನಲ್ಲಿ ಸಾಗುವ ಕಥೆ 'ಧ್ರುವಾಂತರ'. ಈ ನೀಳ ಕಥೆಯಲ್ಲಿ ಭಯಂಕರ ಮಳೆಯಲ್ಲಿ ಏಕಾಂಗಿಯಾಗಿ ಮನೆಯಲಿರುವ ಒಬ್ಬಂಟಿ ಗೃಹಿಣಿಯೊಬ್ಬಳು ತನ್ನರಿವಿಲ್ಲದೆಯೆ ಕೊಲೆಯೊಂದರ ಬಲೆಯೊಳಗೆ ಸಿಕ್ಕಿಬಿದ್ದು ತೊಳಲುವ ಕಥಾನಕ, ಮನೋವೈಜ್ಞಾನಿಕತೆಯ ತಿರುವು ಪಡೆದುಕೊಳ್ಳುತ್ತದೆ. ಇಲ್ಲಿ ಬಳಸಿರುವ ಬೈ ಪೋಲಾರ್ ಮಾನಸಿಕ ಸ್ಥಿತಿಯ ಚಿತ್ರಣ ಬಹುಶಃ ಇನ್ನಷ್ಟು ಆಳವಾಗಿದ್ದರೆ, ಕಥೆಯ ಬಿಗಿ ಇನ್ನು ಹೆಚ್ಚಾಗುತ್ತಿತ್ತೆಂದು ಕಾಣುತ್ತದೆ. ಸಂಬಂಧಿತ ವಿವರಗಳು ಕಥಾನಕದ ಭಾಗವಾಗಿದ್ದರೂ, ಹಂದರದ ವಿಸ್ತಾರದ ಕೊರತೆಯಿಂದಾಗಿ ತುಸು ಜಾಳೆನಿಸಿ 'ಕನ್ವಿನ್ಸಿಂಗ್ ಥಿಯರಿ'ಯಾಗಬಹುದಾದ ಸಾಧ್ಯತೆಯಿಂದ ಹೊರಗೆ ನಿಂತುಬಿಡುತ್ತದೆ (ಬಹುಶಃ ಅದರರಿವಿದ್ದುದರಿಂದಲೋ ಏನೊ ಲೇಖಕರು 'ಬೈ ಪೋಲಾರಿನ' ಕುರಿತಾದ ಆಳದ ವಿಶ್ಲೇಷಣೆ ಕಥೆಯ ಉದ್ದೇಶವಲ್ಲವೆಂದು ಸೃಷ್ಟೀಕರಣ ನೀಡಿದ್ದಾರೆ).

ನಮ್ಮ ಬಾಲ್ಯದ ಅವಿಭಾಜ್ಯ ಅಂಗವೆಂದೆ ಹೇಳಬಹುದಾದ ಅನುಭವಗಳಲ್ಲೊಂದಾದ ಕ್ಷೌರ-ವೈಭವದ ಕಥೆ 'ಕ್ಷೌರ'. ಮಕ್ಕಳಲ್ಲಿ ಕ್ಷೌರದ ಕುರಿತಾದ ಕುತೂಹಲ, ಭೀತಿ, ಸಾಮಾಜಿಕ ನೆಲೆಗಟ್ಟಿನಲ್ಲಿ ಕ್ಷೌರ ಮತ್ತು ಕ್ಷೌರಿಕರು ವಹಿಸುತ್ತಿದ್ದ ಪಾತ್ರ ಕೌಶಲ್ಯ - ಎಲ್ಲವನ್ನು ಹುಡುಗನೊಬ್ಬನ ಅನುಭವದ ಹೂರಣದಲ್ಲಿ ಸೇರಿಸಿಟ್ಟ ಚಿತ್ರಣ, ಕಾಲ ಚಕ್ರದ ಗಾಲಿಯಲ್ಲಿ ಮರುಕಳಿಸುವ ಬಗೆಯನ್ನು ಎತ್ತಿ ತೋರಿಸುತ್ತದೆ.

'ಸೂರ್ಯ ಮುಳುಗುವ ಹೊತ್ತು' ಸಿನಿಮೀಯ ಮಾದರಿಯಲ್ಲಿ, ಕಳೆದು ಹೋದ ಹೊತ್ತು, ಆ ಗಳಿಗೆಯ ಅವಕಾಶಗಳು ಹೇಗೆ ಮತ್ತೆ ಬೇಕೆಂದು ಹಲುಬಿದರೂ ಸಿಗದೆ ಆಟವಾಡಿಸಬಲ್ಲುದೆಂಬುದರ ಕಿರು ಪ್ರಹಸನ. ವಾಸ್ತವದ ನಿರ್ಲಿಪ್ತತೆಯಲ್ಲಿ ಕಾಲ-ಪರಿಸ್ಥಿತಿ ಆಡಿಸುವ ದ್ವಂದ್ವ ಇಲ್ಲಿನ ಮುಖ್ಯ ಎಳೆ. ಕೊನೆಯಲ್ಲಿ ಕಥಾನಾಯಕಿಯಂತೆ ಓದುಗರಿಗೂ ನಿರಾಸೆಯ ಪಸೆ ಮೂಡಿಸುವುದು ಈ ಕಥೆಯ ವಿಶೇಷ.

ವಯಸು, ಪ್ರಾಯ, ಬೋಧನೆ, ಆದರ್ಶದ ಪ್ರಭಾವಳಿಯಡಿ ಸಮಾಜ ಸೇವಾ ನಿರತನಾಗಬೇಕೆಂಬ ಧ್ಯೇಯದಿಂದ ಈಗಷ್ಟೆ ಮದುವೆಯಾಗಿದ್ದ ಹೆಂಡತಿಯನ್ನು ಬಿಟ್ಟು ಸನ್ಯಾಸಿಯಾಗಲು ಹೊರಟವನ ಕಥೆ - 'ಸಂಕ್ರಮಣ'. ಸಾಂಪ್ರದಾಯಿಕ ವಾತಾವರಣದ ಕುಟುಂಬದ ಪ್ರತಿಷ್ಟೆ ಗೌರವದ ಹಿನ್ನಲೆಯಲ್ಲಿ ಆ ಕುಟುಂಬದ ಸದಸ್ಯರ ಯಾತನೆ, ತೊಳಲಾಟವನ್ನು ಓದುಗರೂ ಅನುಭವಿಸುತ್ತಾ ಸಾಗುತ್ತಾರೆ. ಕೊನೆಗೂ ಸಮಸ್ಯೆ ಪರಿಹಾರವಾಗುವ ಪರಿ ನಮ್ಮ ಸಾಂಸಾರಿಕ ವಾತಾವರಣದಲ್ಲಿ ಇಂತದ್ದೆ ಸಂದರ್ಭದಲ್ಲಿ ನಡೆಯುವ ಸಹಜ ಪ್ರಕ್ರಿಯೆಯಂತೆ ಕಾಣಿಸಿಕೊಳ್ಳುವ ರೀತಿಯಿಂದಾಗಿ ಆಪ್ತವಾಗುತ್ತದೆ.  

ಬಡತನ, ಗಂಡು ದಿಕ್ಕಿಲ್ಲದ ಸಂಸಾರದ ಸಾಧಾರಣ ಹೆಣ್ಣು ಮಕ್ಕಳ ತುಮುಲ, ಯಾತನೆ, ಸಂಕಟದ ಚಿತ್ರಣವನ್ನು ಪ್ರಸ್ತುತ ಪಡಿಸುವ 'ಅಮ್ಮನ ಸೀರೆ' ತನ್ನ ಮಾರ್ಮಿಕ ಅಂತ್ಯದಿಂದ ಸಾಮಾಜಿಕ ವ್ಯವಸ್ಥೆಯ ಕ್ರೌರ್ಯವನ್ನು ಪ್ರಸ್ತುತ ಪಡಿಸುವ ಪ್ರಯತ್ನ. ವೈಯಕ್ತಿಕ ಹೊಂದಾಣಿಕೆಯನ್ನು ಅನಿವಾರ್ಯವೆನಿಸುವ ಮಟ್ಟಕ್ಕೆ ತಂದಿಳಿಸುವ ಪರಿಸ್ಥಿತಿ ಎಷ್ಟೊ ಮನೆ, ಮನಗಳ ವಾಸ್ತವಿಕ ಚಿತ್ರಣವೂ ಹೌದೆಂದು ನೆನೆದಾಗ ಈ ಕಥೆ ಹೆಚ್ಚು ಮನ ತಟ್ಟುತ್ತದೆ.

ಎಷ್ಟೇ ಜ್ಞಾನ, ಸಿದ್ಧಿ, ಸಾಧನೆಯ ಬೆಂಬಲವಿದ್ದರೂ ಅದರ ಚಾಣಾಕ್ಷ್ಯ ಬಳಕೆಗೆ ಜಾಣ ರಾಜಕೀಯದ ಅಗತ್ಯವಿದೆಯೆಂದು ಸಾರುವ 'ಸರ್ಪ ಸಂಸಾರ' ; ಅಂತರ್ಜಾಲ ಬಿಚ್ಚಿಟ್ಟ ಸಂಪರ್ಕ, ಸಂವಹನಗಳ ಸುಲಲಿತತೆಯಿಂದಾಗುವ ಸಾಮೀಪ್ಯ, ಸಾಂಗತ್ಯಗಳ ಪ್ರಲೋಭನೆ ಬದುಕಿನ ಸ್ಥಿಮಿತದಲಿಟ್ಟ ಸೂತ್ರಗಳನ್ನು ಅಲುಗಾಡಿಸಿ, ಅಗ್ನಿ ಪರೀಕ್ಷೆಗೊಳಪಡಿಸಿ ಕಾಡುವ ಪರಿಯ 'ಅಂತರ್ಜಾಲ'; ತೀರಾ ಹತ್ತಿರದ ಸಂಗಾತಿಯ ಸಾವನ್ನು ಒಪ್ಪಿ ಸ್ವೀಕರಿಸಲಾಗದೆ ತೊಳಲಾಡಿ ಚಿತ ಭ್ರಮೆಯಡಿ ವಿಲಪಿಸಿಸುವ 'ಸ್ತಬ್ದ' ; ಮತ್ತು ಕಡೆಯದಾಗಿ ಈ ಸಂಕಲನದ ಮುಖ ಬರಹವಾಗಿ ಒಂದೆಡೆ ವಸ್ತು, ವಿಷಯದ ಪ್ರಬುದ್ದತೆ ಮತ್ತು ಇನ್ನೊಂದೆಡೆ ಬರಹಗಾರರಾಗಿ ಗಿರೀಶರ ಬರವಣಿಗೆ ವಿಕಸನದ ಹಾದಿಯಲ್ಲಿ ಅರಳಿ ಹೆಚ್ಚು ಪ್ರಬುದ್ಧವಾಗುತ್ತಾ ಬಂದಿರುವದರ ಸಾಕ್ಷೀಭೂತವಾಗಿ ನಿಲ್ಲುವ 'ಕಣ್ಣೀರಜ್ಜ' - ಎಲ್ಲವೂ ಮುಖ್ಯವಾಗಿ ಗಮನ ಸೆಳೆಯಲು ಕಾರಣ ವಸ್ತು ವೈವಿಧ್ಯತೆ. ಕಥೆಗಳ ಮೂಲಕ ತಮ್ಮತನವನ್ನು ಪ್ರಸ್ತುತಪಡಿಸುವ ಹಂಬಲ, ತಮ್ಮ ಸಾಹಿತ್ಯಿಕ ನೆಲೆಗಟ್ಟನ್ನು ಕಂಡುಕೊಳ್ಳುವ ಹುಡುಕಾಟ, ಎಚ್ಚರ, ಉತ್ಸಾಹ - ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಇಲ್ಲಿ ಕಾಣಿಸಿಕೊಂಡಿವೆ. ಹಾಗೆಯೆ ಕಥೆಗಾರನಾಗಿ ಶ್ರೀ ಗಿರೀಶ್ ರವರು ಬೆಳೆದು ಬಂದಿರುವ, ಬೆಳೆಯುತ್ತಿರುವ ಪರಿಯನ್ನು ಬಿಂಬಿಸುತ್ತದೆ. 

ಹೀಗಾಗಿ ಈ ಸಂಕಲನವನ್ನು ಪುಸ್ತಕ ರೂಪದಲ್ಲಿ ಹೊರತಂದಿರುವುದು - ಅದರಲ್ಲೂ ವಿದೇಶದಲ್ಲಿದ್ದುಕೊಂಡು ಕನ್ನಡ ನಾಡು ನುಡಿಗಾಗಿ ತುಡಿಯುವ ಹಂಬಲಕ್ಕೆ ಮೂರ್ತರೂಪ ಕೊಟ್ಟು ಈ ಪುಸ್ತಕವಾಗಿಸಿದ ಛಲ ಒಂದು ಗಮನೀಯ ಪ್ರಯತ್ನ, ಶ್ಲಾಘನೀಯ ಸಾಧನೆ ಎಂದೆ ಹೇಳಬೇಕು. ಶ್ರೀ ಗಿರೀಶ್ ಜಮದಗ್ನಿಯವರು ಹೀಗೇ ಬೆಳೆಯಲಿ, ಇನ್ನು ಹೆಚ್ಚು ಸತ್ವಯುತ ಕಾಣಿಕೆಗಳನ್ನು ಕನ್ನಡಮ್ಮನ ಮಡಿಲಿಗೆ ಸೇರಿಸಲಿ ಮತ್ತು ನಾಡಿನ ಹೊರಗಿಂದಲೆ ಕನ್ನಡ ಪತಾಕೆಯನ್ನು ಹಾರಿಸುತ್ತ, ಕಂಪನ್ನು ಜಗದೆಲ್ಲೆಡೆ ಪಸರಿಸುತ್ತಿರಲಿ ಎಂದು ಹಾರೈಸೋಣ.

ಧನ್ಯವಾದಗಳೊಂದಿಗೆ,
ವಿಮರ್ಶೆ : ನಾಗೇಶ ಮೈಸೂರು, ಸಿಂಗಪುರ