೧೭೩. ಲಲಿತಾ ಸಹಸ್ರನಾಮ ೭೮೨ರಿಂದ ೭೮೫ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೮೨-೭೮೫
Parākāśā पराकाशा (782)
೭೮೨. ಪರಾಕಾಶಾ
ದೇವಿಯು ಪರಮೋನ್ನತವಾದ ಆಕಾಶವಾಗಿದ್ದಾಳೆ. ಪರಾಕಾಶವನ್ನು ಹಲವು ವೇಳೆ ಬ್ರಹ್ಮವನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದಾಗಿ ಆಕಾಶದ ಮೇರೆಯಿಲ್ಲದ ವಿಸ್ತಾರ; ಎರಡನೆಯದಾಗಿ ಅದರ ಪರಿಶುದ್ಧತೆ; ಮತ್ತು ಮೂರನೆಯದಾಗಿ ಅದರ ಗ್ರಹಣಾತೀತತೆ ಹಾಗೂ ಅಂತಿಮವಾಗಿ ಅದರ ಸೂಕ್ಷ್ಮ ಸ್ವಭಾವ. ಬೆಳಕು ಮತ್ತು ಮಳೆ ಎರಡೂ ಆಕಾಶದಿಂದ ಬರುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ಆಕಾಶವನ್ನು ಬ್ರಹ್ಮದೊಂದಿಗೆ ಹೋಲಿಸಲಾಗುತ್ತದೆ. ದೇವಿಯು ಬ್ರಹ್ಮವಾಗಿರುವುದರಿಂದ ಆಕೆಯನ್ನು ಆಕಾಶದೊಂದಿಗೆ ಹೋಲಿಸಲಾಗಿದೆ. ಯಾವಾಗ ಕೆಲವೊಂದು ಸೂಕ್ಷ್ಮ ವಿಷಯಗಳನ್ನು ಕಲ್ಪಿಸಿಕೊಳ್ಳಲಾಗದೋ ಆಗ ಸಹಜವಾಗಿಯೇ ಗೊತ್ತಿದ್ದಂತಹ ವಸ್ತುಗಳಿಗೆ ಹೋಲಿಕೆ ಮಾಡಲಾಗುತ್ತದೆ. ಬ್ರಹ್ಮವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದನ್ನು ಆಕಾಶಕ್ಕೆ ಹೋಲಿಸಲಾಗಿದೆ.
ಬ್ರಹ್ಮಸೂತ್ರವು (೧.೧.೨೨) ಹೇಳುತ್ತದೆ, "ಆಕಾಶಸ್ತಲ್ಲಿಂಗಾತ್ " ಇದರರ್ಥ ಆಕಾಶವೇ ಬ್ರಹ್ಮವಾಗಿದೆ. ಅದನ್ನು(ಬ್ರಹ್ಮವನ್ನು) ಸಂಕೇತಿಸುವ ಅದರ (ಆಕಾಶದ) ಗುಣದಿಂದಾಗಿ. ಈ ಸಾಂಕೇತಿಕ ಗುರುತನ್ನು ಛಾಂದೋಗ್ಯ ಉಪನಿಷತ್ತು (೧.೯.೧) ಹೀಗೆ ವಿವರಿಸುತ್ತದೆ. ಅದು ಹೇಳುತ್ತದೆ, "ಈ ಭೂಮಿಯ ಕೊನೆಯು ಆಕಾಶವಾಗಿದೆ, ಏಕೆಂದರೆ ಎಲ್ಲವೂ ಆಕಾಶದಿಂದ ಉದ್ಭವವಾಗಿ ಮತ್ತಲ್ಲಿಗೇ ಎಲ್ಲವೂ ಹಿಂದಿರುಗುತ್ತವೆ. ಆಕಾಶವು ಎಲ್ಲದಕ್ಕಿಂತಲೂ ಶ್ರೇಷ್ಠವಾದುದು. ಆಕಾಶವು ಅತ್ಯುನ್ನತವಾದ ಗುರಿಯಾಗಿದೆ". ಛಾಂದೋಗ್ಯ ಉಪನಿಷತ್ತು (೮.೧೪.೧) ಮುಂದುವರೆಯುತ್ತಾ ಹೇಳುತ್ತದೆ, "ಯಾವುದು ಆಕಾಶವೆಂದು ಹೇಳಲ್ಪಟ್ಟಿದೆಯೋ ಅದು ನಾಮ ರೂಪಗಳಾಗಿ ಆವಿರ್ಭವಿಸುತ್ತದೆ. ಈ ನಾಮರೂಪಗಳು ಬ್ರಹ್ಮದೊಳಗೆ ಇವೆ".
ತೈತ್ತರೀಯ ಉಪನಿಷತ್ತು ಹೀಗೆ ಹೇಳುತ್ತದೆ, ಆ ಬ್ರಹ್ಮವು ಆನಂದವಾಗಿದೆ (ಪ್ರಪಾಠಕ ೩, ಅನುವಾಕ ೬), "ಭೃಗುವು ಆ ಆನಂದವು ಬ್ರಹ್ಮವೆಂದು ಅರಿತನು, ಆ ಆನಂದದಿಂದಲೇ ಈ ಎಲ್ಲಾ ವಸ್ತುಗಳು ಉದ್ಭವಿಸುತ್ತವೆ. ಹುಟ್ಟಿದ ನಂತರ ಅವುಗಳಿಗೆ ಆನಂದವು ಆಸರೆಯಾಗಿದೆ ಮತ್ತು ಅವುಗಳು ವಿನಾಶವಾದಾಗ ಅವು ಆನಂದಕ್ಕೆ ಹಿಂದಿರುಗುತ್ತವೆ". ಈ ಸತ್ಯವನ್ನು ಭೃಗು ಮಹರ್ಷಿಗೆ ತಿಳಿಸಿಕೊಟ್ಟವನು ವರುಣನು ಆದ್ದರಿಂದ ಇದನ್ನು ವಾರುಣೀ ವಿದ್ಯಾ ಎಂದೂ ಹೇಳುತ್ತಾರೆ. ಈ ಸತ್ಯವು ಹೃದಯಾಕಾಶದ (ಹಾರ್ದಾಕಾಶದ) ಗುಹೆಯಲ್ಲಿದೆ.
ಉಪನಿಷತ್ತುಗಳ ಒಟ್ಟು ಸಾರವೆಂದರೆ ಬ್ರಹ್ಮವು ಪರಮವ್ಯೋಮವಾಗಿದೆ (ವಿಶಾಲವಾದ ಖಾಲಿ ಸ್ಥಳವಾಗಿದೆ). ಕಠೋಪನಿಷತ್ತು (೨.೨.೨) ಸಹ ಈ ಅಂಶವನ್ನು ದೃಢ ಪಡಿಸುತ್ತದೆ, ಅದು ಹೀಗೆ ಹೇಳುತ್ತದೆ, "ಆತ್ಮವು(ಬ್ರಹ್ಮವು) ಎಲ್ಲಾ ಕಡೆ ಇದೆ.......ಅದು ಎಲ್ಲದಕ್ಕೂ ಆಧಾರವಾಗಿದೆ ಮತ್ತದು ಗಾಳಿಯಲ್ಲಿ ಭೂಮಿ ಮತ್ತು ಸ್ವರ್ಗದ ನಡುವೆ ಇರುವ ಸ್ಥಳದಲ್ಲಿ ಇದೆ."
‘ಪರಾಕಾಶಾ’ ಎನ್ನುವ ಈ ನಾಮವು ಒಂದೇ ಶಬ್ದದಲ್ಲಿ ಉಪನಿಷತ್ತುಗಳ ಬೋಧನೆಯನ್ನು ತಿಳಿಸುತ್ತದೆ. ಲಲಿತಾ ಸಹಸ್ರನಾಮವು ಮಂತ್ರರೂಪದಲ್ಲಿದೆ. ಆದ್ದರಿಂದ ಅದನ್ನು ಸಂಗೀತದ ಸ್ವರಗಳಂತೆ ರಾಗಬದ್ಧವಾಗಿ ಹಾಡಬಾರದು ಅಥವಾ ಯಾವುದೇ ವಿಧವಾದ ಸಂಗೀತ ಸಾಧನಗಳನ್ನು ಉಪಯೋಗಿಸಬಾರದು. ವೇದಗಳನ್ನು ಎಂದಿಗೂ ರಾಗಬದ್ಧವಾಗಿ ಅಥವಾ ಸಂಗೀತ ಸಾಧನಗಳೊಂದಿಗೆ ಪಠಿಸಬಾರದು.
Prāṇadā प्राणदा (783)
೭೮೩. ಪ್ರಾಣದಾ
ದೇವಿಯು ಜೀವ ವಾಯುವಾದ ಪ್ರಾಣವನ್ನು ದಯಪಾಲಿಸುವವಳಾಗಿದ್ದಾಳೆ. ಈ ನಾಮದಲ್ಲಿ ದೇವಿಯ ಸೂಕ್ಷ್ಮ ರೂಪದ ಚರ್ಚೆಯು ಮುಂದುವರೆಸಲ್ಪಟ್ಟಿದೆ. ಏಕೆಂದರೆ ಆಕಾಶದಂತೆ ಪ್ರಾಣವೂ ಸಹ ಸೂಕ್ಷ್ಮವಾದದ್ದು ಮತ್ತು ಆಕಾಶದಂತೆ ಪ್ರಾಣವೂ ಸಹ ಜೀವವನ್ನು ಉಂಟು ಮಾಡುವಂತಹದ್ದು. ದೇವಿಯ ನಿಯಂತ್ರಣದಲ್ಲಿರುವ ಸೂರ್ಯ ಮತ್ತು ಮಳೆಗಳು ಸಹ ಆಕಾಶದಿಂದ ಬರುತ್ತವೆ. ಅದೇ ವಿಧವಾಗಿ ಪ್ರಾಣವನ್ನು ಸಹ ದೇವಿಯು ನಿಯಂತ್ರಿಸುತ್ತಾಳೆ. ಬ್ರಹ್ಮದ ಸರ್ವವ್ಯಾಪಕತ್ವದ ಗುಣವನ್ನು ವಾಗ್ದೇವಿಗಳು ಇಲ್ಲಿ ವಿವರಿಸುತ್ತಿದ್ದಾರೆ. ಬ್ರಹ್ಮಸೂತ್ರವೂ (೧.೧.೨೩) ಕೂಡಾ ಹೀಗೆ ಹೇಳುತ್ತದೆ, "ಆ ಒಂದು ಕಾರಣದಿಂದಲೇ ಪ್ರಾಣವು ಬ್ರಹ್ಮವಾಗಿದೆ". ಛಾಂದೋಗ್ಯ ಉಪನಿಷತ್ತೂ (೧.೧೧.೫) ಸಹ ಹೀಗೆ ಹೇಳುತ್ತದೆ, "ಎಲ್ಲಾ ಭೂತಗಳೂ (ಪ್ರಳಯ ಕಾಲದಲ್ಲಿ) ಪ್ರಾಣವನ್ನೇ ಪ್ರವೇಶಿಸುತ್ತವೆ ಮತ್ತು (ಉತ್ಪತ್ತಿಕಾಲದಲ್ಲಿ) ಪ್ರಾಣನಿಂದಲೇ ಹೊರಬರುತ್ತವೆ”. ಬೃಹದಾರಣ್ಯಕ ಉಪನಿಷತ್ತು (೪.೪.೧೮) ಹೇಳುತ್ತದೆ, "ಯಾರು ಪ್ರಾಣದ ಪ್ರಾಣವಾಗಿರುವವರನ್ನು ಅರಿತಿದ್ದಾರೆಯೋ" ಅಂದರೆ ಸೂಕ್ಷ್ಮಗಳಲ್ಲಿ ಸೂಕ್ಷ್ಮವಾದುದು - ಬ್ರಹ್ಮವನ್ನು ಅರಿತಿದ್ದಾರೆಯೋ; ಏಕೆಂದರೆ "ಆತ್ಮವು ನಿಷ್ಕಳಂಕವಾಗಿದ್ದು ಅದು ಆಕಾಶಕ್ಕಿಂತ ಸೂಕ್ಷ್ಮವಾದುದಾಗಿದೆ" (ಬ್ರಹ್ಮಸೂತ್ರ ೪.೪.೨೦).
Prāṇa-rūpiṇī प्राण-रूपिणी (784)
೭೮೪. ಪ್ರಾಣ-ರೂಪಿಣೀ
ಇದು ಹಿಂದಿನ ನಾಮದ ದೃಢಪಡಿಸುವಿಕೆಯಾಗಿದೆ. ಹಿಂದಿನ ನಾಮವು ದೇವಿಯು ಪ್ರಾಣದಾತೆಯಾಗಿದ್ದಾಳೆಂದು ಹೇಳಿದರೆ ಈ ನಾಮವು ದೇವಿಯೇ ಪ್ರಾಣದ ಮೂರ್ತರೂಪವಾಗಿದ್ದಾಳೆ ಎಂದು ಹೇಳುತ್ತದೆ. ಯಾವುದಾದರೂ ಒಂದು ವಸ್ತುವು ತುಂಬಿ ತುಳುಕದ ಹೊರತು ಅದನ್ನು ಹಂಚಿಕೊಳ್ಳಲಾಗದು. ಪ್ರಾಣವು ದೇವಿಯಲ್ಲಿ ತುಂಬಿ ತುಳುಕುತ್ತಿದೆ, ಒಂದು ವೇಳೆ ದೇವಿಯು ಪ್ರಾಣದಿಂದ ತುಂಬಿ ತುಳುಕದೇ ಇದ್ದಿದ್ದರೆ ಆಕೆಯು ಪ್ರಾಣದಾತೆಯಾಗಿರಲು ಸಾಧ್ಯವಿರುತ್ತಿರಲಿಲ್ಲ. ಈ ವಿಧವಾದ ಅನೇಕ ನಾಮಗಳು ಈ ಸಹಸ್ರನಾಮದಲ್ಲಿ ಲಭ್ಯವಿವೆ. ಉದಾಹರಣೆಗೆ, ನಾಮ ೭೩೬ ಮುಕ್ತಿದಾ ಆಗಿದ್ದರೆ ೭೩೭ನೇ ನಾಮವು ಮುಕ್ತಿ-ರೂಪಿಣೀ ಆಗಿದೆ.
ಛಾಂದೋಗ್ಯ ಉಪನಿಷತ್ತು (೪.೧೦.೫) ಈ ನಾಮಗಳನ್ನು (೭೮೨-೭೮೪) ವಿವರಿಸುತ್ತದೆ. "ನನಗೆ ಪ್ರಾಣವು ಬ್ರಹ್ಮವೆಂದು ತಿಳಿದಿದೆ. ಆದರೆ ನನಗೆ ಆ ಕ (क) ಮತ್ತು ಖ (ख)ಗಳು ಬ್ರಹ್ಮವೆಂದು ತಿಳಿದಿಲ್ಲ". ಅಗ್ನಿಯು ಪ್ರತ್ಯುತ್ತರಿಸುತ್ತಾ ಹೇಳುತ್ತದೆ, "ಕ (क)ವು ಖ(ख) ಆಗಿದೆ ಮತ್ತು ಖ (ख)ವು ಕ (क) ಆಗಿದೆ (ಅಂದರೆ ಎರಡರ ಅರ್ಥವೂ ಒಂದೇ) ಮತ್ತು ಅವನಿಗೆ ಬ್ರಹ್ಮವು ಪ್ರಾಣ ಮತ್ತು ಆಕಾಶ ಎರಡೂ ಆಗಿದೆ ಎಂದು ತಿಳಿಸಿಕೊಡುತ್ತದೆ". ಅಗ್ನಿಯ ಈ ಬೋಧನೆಯು ಸರ್ವವೂ ಬ್ರಹ್ಮವೇ ಆಗಿದೆ ಎನ್ನುವುದನ್ನು ನಿರೂಪಿಸಲು ಪ್ರಯತ್ನಿಸುತ್ತದೆ. ಕ ಮತ್ತು ಖ ಇವುಗಳನ್ನು ಕೇವಲ ಉದಾಹರಣೆಗಳಾಗಿ ತೆಗೆದುಕೊಳ್ಳಲಾಗಿದೆ. ಉದಾಹರಣೆಗೆ ’ಅ’ ಮತ್ತು ’ಬ’ ಇಬ್ಬರೂ ಒಂದೇ, ಅವರಿಬ್ಬರೂ ಬ್ರಹ್ಮವೇ. ಒಂದು ವೇಳೆ ’ಅ’ ಎನ್ನುವವನು ಈ ಅಂಶವನ್ನು ಅರಿತರೆ ಅವನನ್ನು ಜ್ಞಾನಿಯೆನ್ನುತ್ತಾರೆ ಮತ್ತು ಅವನು ಆತ್ಮ ಸಾಕ್ಷಾತ್ಕಾರ ಹೊಂದಿದವನಾಗುತ್ತಾನೆ. ಒಂದು ವೇಳೆ ’ಬ’ ಎನ್ನುವವನು ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಅವನನ್ನು ಅಜ್ಞಾನಿ ಅಥವಾ ತಿಳುವಳಿಕೆಯಿಲ್ಲದವನು ಎನ್ನುತ್ತಾರೆ.
Mārtāṇḍa-bhairavārādhyā मार्ताण्ड-भैरवाराध्या (785)
೭೮೫. ಮಾರ್ತಾಂಡ-ಭೈರವಾರಾಧ್ಯಾ
ದೇವಿಯು ಮಾರ್ತಾಂಡ-ಭೈರವನಿಂದ ಪೂಜಿಸಲ್ಪಡುತ್ತಾಳೆ. ಮಾರ್ತಾಂಡ ಭೈರವನು ಶ್ರೀ ಪುರದ ೨೪ನೇ ಕೋಟೆಗೋಡೆಯ ಒಳಗೆ ಆಸೀನನಾಗಿರುತ್ತಾನೆ. ಶ್ರೀ ಚಕ್ರವು ಶ್ರೀ ಪುರದ ಮಧ್ಯದಲ್ಲಿದೆ. ದೇವಿಗೆ ಸಂಭಂದಿಸಿದ ಯಾವುದೇ ವಸ್ತುವಿರಲಿ ಅವೆಲ್ಲಕ್ಕೂ ಶ್ರೀ ಎನ್ನುವುದನ್ನು ಪೂರ್ವ ಪ್ರತ್ಯಯವಾಗಿ ಬಳಸಲಾಗುತ್ತದೆ; ಶ್ರೀ ಎನ್ನುವುದು ಪವಿತ್ರತೆಯ ಸಂಕೇತವಾಗಿದೆ. ಮಾರ್ತಾಂಡ-ಭೈರವನೆಂದರೆ ಸೂರ್ಯ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ದೂರ್ವಾಸ ಮಹರ್ಷಿಯು, ಸೂರ್ಯನು ತನ್ನ ಹೆಂಡತಿಯಾದ ಛಾಯಾ ದೇವಿಯೊಂದಿಗೆ ಲಲಿತಾಂಬಿಕೆಯನ್ನು ಪೂಜಿಸುತ್ತಾನೆ ಎಂದು ಹೇಳುತ್ತಾನೆ. ಆಗ ಈ ನಾಮದ ಅರ್ಥವು ದೇವಿಯು ಸೂರ್ಯನಿಂದ ಪೂಜಿಸಲ್ಪಡುತ್ತಾಳೆ ಎಂದಾಗುತ್ತದೆ.
ಇನ್ನು ಕೆಲವರ ಅಭಿಪ್ರಾಯದಂತೆ ಇಲ್ಲಿ ಭೈರವನೆಂದರೆ ಅದು ವಟುಕ ಭೈರವರನ್ನು ಸೂಚಿಸುತ್ತದೆ; ಅವರೂ ಸಹ ದೇವಿಯ ಅನನ್ಯ ಭಕ್ತರಾಗಿದ್ದು ಅವರೂ ಸಹ ಶ್ರೀ ಪುರದಲ್ಲಿ ನಿವಾಸವಿದ್ದು ನಿರಂತರವಾಗಿ ದೇವಿಯನ್ನು ಧ್ಯಾನಿಸುತ್ತಾರೆ.
ಒಟ್ಟು ಅರವತ್ತನಾಲ್ಕು ಭೈರವರಿದ್ದು ಅವರಲ್ಲಿ ಮಾರ್ತಾಂಡ ಭೈರವನೂ ಒಬ್ಬನಾಗಿದ್ದಾನೆ. ಈ ೬೪ ಭೈರವರನ್ನು ಎಂಟು ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿದ್ದು ಪ್ರತಿಯೊಂದು ಗುಂಪಿಗೂ ಒಬ್ಬೊಬ್ಬ ಭೈರವನು ನಾಯಕನಾಗಿರುತ್ತಾನೆ; ಹೀಗೆ ಎಂಟು ಭೈರವ ನಾಯಕರಿರುತ್ತಾರೆ. ಅವರನ್ನೆಲ್ಲಾ ಒಟ್ಟಾಗಿ ಅಷ್ಟಾಂಗ ಭೈರವರೆಂದು ಕರೆಯಲಾಗುತ್ತದೆ. ಮಾರ್ತಾಂಡ-ಭೈರವನು ಅಸಿತಂಗ ಭೈರವನೆನ್ನುವವನು ನಾಯಕತ್ವ ವಹಿಸಿರುವ ಗುಂಪಿಗೆ ಸೇರಿದವನಾಗಿದ್ದಾನೆ.
ಭೈರವ ಎಂದರೆ ಶಿವ. ಶಿವ ಸೂತ್ರ (೧.೫) ಹೀಗೆ ಹೇಳುತ್ತದೆ,"ಉದ್ಯಮೋ ಭೈರವಃ" ಅಂದರೆ ’ಮಿಂಚಿನಂತೆ ತಿಳುವಳಿಕೆಯುಂಟಾಗುವುದೇ ಶಿವ’. ಸಾಕ್ಷಾತ್ಕಾರವು ಯಾವಾಗಲೂ ಇದ್ದಕ್ಕಿದ್ದಂತೆ ಆಗುತ್ತದೆ, ಅದು ಬೆಳಕಿನ ಮಿಂಚಿನಂತಿರುತ್ತದೆ. ಎಲ್ಲಿಯವರೆಗೆ ಬೆಳಕಿನ ಗುಂಡಿಯು ಒತ್ತಲ್ಪಡುವುದಿಲ್ಲವೋ ಅಲ್ಲಿಯವರೆಗೆ ಆ ಸ್ಥಳವು ಕತ್ತಲಿನಿಂದಾವರಿಸಿರುತ್ತದೆ; ಯಾವಾಗ ಬೆಳಕಿನ ಗುಂಡಿಯನ್ನು ಅದುಮುತ್ತೇವೆಯೋ ಆಗ ಇದ್ದಕ್ಕಿದ್ದಂತೆ ಆ ಸ್ಥಳವೆಲ್ಲಾ ಬೆಳಕಿನಿಂದ ತುಂಬಿ ತುಳುಕುತ್ತದೆ. ಸಾಕ್ಷಾತ್ಕಾರವೂ ಸಹ ಇದೇ ವಿಧವಾಗಿ ಆಗುತ್ತದೆ. ನಾವು ಜ್ಞಾನವನ್ನು ಪಡೆಯುತ್ತಾ ಸಾಗುತ್ತೇವೆ ಮತ್ತು ನಮಗೆ ಬ್ರಹ್ಮವು ಎಲ್ಲೆಡೆ ಇದೆ ಎನ್ನುವುದು ಗೊತ್ತಿದೆ. ಇದು ಕೇವಲ ಒಂದು ಊಹೆ/ಕಲ್ಪನೆ ಮತ್ತು ನಂಬಿಕೆಯಾಗಿದೆ. ಆದರೆ ಸಾಕ್ಷಾತ್ಕಾರವೆನ್ನುವುದು ಭಿನ್ನವಾಗಿದೆ. ಸಾಕ್ಷಾತ್ಕಾರವೆಂದರೆ ಸತ್ಯವನ್ನು ಅರಿಯುವುದು ಮತ್ತು ಅದನ್ನು ಪ್ರತ್ಯಕ್ಷವಾಗಿ ಅನುಭವಿಸುವುದು. ಸತ್ಯವೆಂದರೆ ಎಲ್ಲವೂ ಬ್ರಹ್ಮವೆಂದರ್ಥ. ಈ ನಾಮದಲ್ಲಿ ಮಾರ್ತಾಂಡ ಎನ್ನುವುದು ಮಿಂಚುವ ಬೆಳಕಾಗಿದೆ. ಆದ್ದರಿಂದ ಈ ಸಂದರ್ಭದಲ್ಲಿ ಮಾರ್ತಾಂಡ-ಭೈರವ ಎನ್ನುವುದು ಶಿವನನ್ನು ಸೂಚಿಸುತ್ತದೆ. ಯಾರು ಶಿವನನ್ನು ಸಾಕ್ಷಾತ್ಕರಿಸಿಕೊಂಡು ಅವನಲ್ಲಿಯೇ ಐಕ್ಯವಾಗುತ್ತಾರೆಯೋ ಅವರನ್ನೂ ಸಹ ಶಿವ ಎಂದು ಕರೆಯಲಾಗುತ್ತದೆ. ದೇವಿಯು ಅಂತಹ ಭಕ್ತರಿಂದ ಪೂಜಿಸಲ್ಪಡುತ್ತಾಳೆ.
ಭೈರವನ ಕುರಿತು ಇನ್ನಷ್ಟು ವಿವರಗಳು
ಭೈರವನ ಕುರಿತಾದ ವಿವಿಧ ರೀತಿಯ ವಿಶ್ಲೇಷಣೆಗಳು ಇವೆ. ಆಗಮ ಶಾಸ್ತ್ರದ ಪ್ರಕಾರ ಶಿವನನ್ನು ಇಪ್ಪತ್ತೈದು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳು ಲಿಂಗೋದ್ಭವ, ಅರ್ಧನಾರೀಶ್ವರ, ಸೋಮಸ್ಕಂದ, ದಕ್ಷಿಣಾಮೂರ್ತಿ, ಕಾಲಸಂಹಾರ, ಶರಭೇಶ್ವರ, ನೀಲಕಂಠ, ಭೈರವ, ವೃಷಭಾರೂಡ, ಚಂದ್ರಶೇಖರ, ನಟರಾಜ ಮತ್ತು ಗಂಗಾಧರ. ಶಿವನ ಇಪ್ಪತ್ತೈದು ರೂಪಗಳಲ್ಲಿ ಭೈರವ ರೂಪವು ಮಹತ್ವದ್ದೆಂದು ಪರಿಗಣಿತವಾಗಿದೆ. ಆಭಥ್ಯುತ್ತಾರಣ (Ābhatuthtārana), ವಡುಗ (Vaduga), ಕ್ಷೇತ್ರಪಾಲ, ಬ್ರಹ್ಮಶಿರಚ್ಛೇದ ಇವುಗಳು ಭೈರವನ ಇತರ ಹೆಸರುಗಳಾಗಿವೆ. ಇನ್ನೊಂದು ವಿಧವಾದ ತತ್ವಾನುಯಾಯಿಗಳ ಗುಂಪಿನ ಪ್ರಕಾರ ಸ್ವಯಂ ಶಿವನೇ ಭೈರವನನ್ನು ಸೃಷ್ಟಿಸಿದನೆಂದು ಹೇಳಲಾಗುತ್ತದೆ. ದಹುರಾಸುರನೆನ್ನುವ ಒಬ್ಬ ರಾಕ್ಷಸನಿದ್ದ. ಅವನು ತಾನು ಕೇವಲ ಸ್ತ್ರೀಯರಿಂದ ಮಾತ್ರವೇ ಕೊಲ್ಲಲ್ಪಡಬೇಕು ಎನ್ನುವ ವರವನ್ನು ಪಡೆದಿದ್ದ. ಶಕ್ತಿ ದೇವಿಯು ಕಾಳಿಯನ್ನು ಅವನನ್ನು ಸಂಹರಿಸಲು ಸೃಷ್ಟಿಸಿದಳು. ಕಾಳಿಯ ಶಾಪದಿಂದಾಗಿ ಆ ರಾಕ್ಷಸನು ಹತನಾದನು. ಆ ರಾಕ್ಷಸನ ಸಂಹಾರವಾದ ನಂತರ ದೇವಿಯ ಶಾಪವು ಒಂದು ಶಿಶುವಾಗಿ ಅವತಾರ ತಾಳಿತು. ಕಾಳಿಯು ಆ ಮಗುವಿಗೆ ತನ್ನ ಎದೆ ಹಾಲನ್ನು ಕೊಟ್ಟು ಪೋಷಿಸಿದಳು. ಶಿವನು ಕಾಳಿಯನ್ನು ಮತ್ತು ಆ ಶಿಶುವನ್ನು ತನ್ನೊಳಗೆ ಐಕ್ಯವಾಗುವಂತೆ ಮಾಡಿದನು. ಈ ವಿಧವಾಗಿ ಐಕ್ಯವಾದ ಶಿವನಿಂದ ಭೈರವನು ತನ್ನ ಎಂಟು ವಿಧವಾದ ರೂಪಗಳಿಂದ (ಅಷ್ಟ ಭೈರವ ರೂಪಗಳಿಂದ) ಅವತರಿಸಿದನು. ಈ ವಿಧವಾಗಿ ಭೈರವನು ಶಿವನಿಂದ ಸೃಷ್ಟಿಸಲ್ಪಟ್ಟಿದ್ದರಿಂದ ಅವನನ್ನು ಶಿವನ ಒಬ್ಬ ಮಗನೆಂದು ಕರೆಯಲಾಗುತ್ತದೆ ಮತ್ತು ಅವನ ಉಳಿದ ಪುತ್ರರೆಂದರೆ ಗಣೇಶ, ಕಾರ್ತಿಕೇಯ, ಅಯ್ಯನಾರ್ (ಗ್ರಾಮ ದೇವತೆ -ಇದು ತಮಿಳು ನಾಡಿನ ಕೆಲವು ಹಳ್ಳಿಗಳಲ್ಲಿರುತ್ತದೆ) ಮತ್ತು ವೀರಭದ್ರ.
ಭೈರವ ರೂಪವು ಪರಿಶುದ್ಧ ಚೈತನ್ಯವಾದ ’ಅಹಂ’ನ ಅಂತಿಮ ರೂಪವಾಗಿದೆ. ಈ ರೂಪವನ್ನೇ ಶಿವ ಅಥವಾ ಮಹಾ ಭೈರವ, ಅತ್ಯುನ್ನತವಾದವನು ಎನ್ನಲಾಗುತ್ತದೆ. ಉಳಿದವರು ಅವನಿಗೆ ಭಯಾನಕ ರೂಪಗಳನ್ನು ಕೊಡುತ್ತಾರೆ.
ಭೈರವ ಶಬ್ದವು ’ಭೀರು’ ಎಂದರೆ ಭಯಾನಕವಾದ ಎನ್ನುವ ಮೂಲ ಶಬ್ದದಿಂದ ನಿಷ್ಪತ್ತಿಗೊಂಡಿದೆ. ಇದರ ಸರಿಯಾದ ವ್ಯಾಖ್ಯಾನವೆಂದರೆ ಅವನು ತನ್ನ ಭಕ್ತರನ್ನು ಭಯಂಕರವಾದ ಶತ್ರುಗಳಾದ, ದುರಾಸೆ, ಕಾಮ ಮತ್ತು ಕ್ರೋಧಗಳಿಂದ ರಕ್ಷಿಸುತ್ತಾನೆ. ಭೈರವನು ತನ್ನ ಭಕ್ತರನ್ನು ಇಂತಹ ಶತ್ರುಗಳಿಂದ ಕಾಪಾಡುತ್ತಾನೆ. ಈ ಶತ್ರುಗಳು ಬಹಳ ಅಪಾಯಕಾರಿಗಳು ಏಕೆಂದರೆ ಅವರು ಒಳಗಿರುವ ಶಿವನನ್ನು ಅರಿಯಲು ಬಿಡರು. ಇನ್ನೊಂದು ವಿಧವಾದ ವಿಶ್ಲೇಷಣೆಯೂ ಇದೆ. ಅದರ ಪ್ರಕಾರ ಭ ಎಂದರೆ ಸೃಷ್ಟಿ, ರ ಎಂದರೆ ಸುಸ್ಥಿತಿ (ಪಾಲನೆ) ಮತ್ತು ವ ಎಂದರೆ ವಿನಾಶ. ಆದ್ದರಿಂದ ಭೈರವನೆಂದರೆ ಜೀವದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನುಂಟು ಮಾಡುವವನು. ಆದ್ದರಿಂದ ಅವನು ಪರಮೋನ್ನತನು ಅಥವಾ ಸರ್ವಶ್ರೇಷ್ಠನಾಗುತ್ತಾನೆ.
ಭೈರವನನ್ನು ರಕ್ಷಕನೆಂದೂ ಕರೆಯುತ್ತಾರೆ. ಭೈರವನು ಶಿವನ ಒಂದು ಅವತಾರವಾದರೆ ಅವನು ಈ ವಿಶ್ವದ ರಕ್ಷಕನಾಗುತ್ತಾನೆ. ಎಲ್ಲಾ ಗುಡಿಗಳಲ್ಲಿಯೂ ಭೈರವನ ಮೂರ್ತಿ ಇರುತ್ತದೆ, ಈ ಭೈರವನು ಗುಡಿಗಳ ರಕ್ಷಕನಾಗಿದ್ದಾನೆ (ಬಹುಶಃ ಈ ಪದ್ಧತಿಯು ತಮಿಳುನಾಡಿನಲ್ಲಿ ಇದ್ದಂತಿದೆ?) ಶಿವನ ಗುಡಿಗಳಲ್ಲಿ ಗುಡಿಯ ಬಾಗಿಲನ್ನು ಹಾಕಿದ ನಂತರ ಬೀಗದ ಕೈಗಳನ್ನು ಭೈರವನ ಎದುರಿನಲ್ಲಿ ಇಡುತ್ತಾರೆ. ಕೆಲವೊಂದು ಪುರಾತನ ಗ್ರಂಥಗಳಲ್ಲಿ ಭೈರವನನ್ನು ಸ್ತ್ರೀಯರ ರಕ್ಷಕ ಎಂಬುದಾಗಿ ಚಿತ್ರಿಸಿದ್ದಾರೆ. ಸಾಮಾನ್ಯವಾಗಿ ಅವನನ್ನು ದುರ್ಬಲರ ಅಥವಾ ಪುಕ್ಕಲರ ರಕ್ಷಕನೆಂದು ಕರೆಯುತ್ತಾರೆ. ಸಾಮಾನ್ಯವಾಗಿ ಸ್ತ್ರೀಯರು ದುರ್ಬಲರಾಗಿರುವುದರಿಂದ ಭೈರವನಿಗೆ ಈ ವಿಧವಾದ ವರ್ಣನೆಯನ್ನು ಕೊಟ್ಟಿರಬಹುದು.
ಪುರಾಣಗಳು ಸಹ ಭೈರವನ ಕುರಿತಾದ ವಿಭಿನ್ನ ವ್ಯಾಖ್ಯೆಗಳನ್ನು ಕೊಡುತ್ತವೆ. ಬ್ರಹ್ಮನು ಸೃಷ್ಟಿಯ ಅಧಿದೇವತೆಯಾಗಿರುವುದರಿಂದ ತಾನೇ ಸರ್ವಶ್ರೇಷ್ಠನೆಂದು ಗರ್ವಪಟ್ಟುಕೊಂಡು ಶಿವನನ್ನು ಹೀಯಾಳಿಸಿದನು. ಆಗ ಶಿವನು ಭೈರವನನ್ನು ಸೃಷ್ಟಿಸಿದಾಗ ಅವನು ಪಂಚಮುಖ ಬ್ರಹ್ಮನ ಒಂದು ತಲೆಯನ್ನು ಕಡಿದು ಅದರಿಂದ ಕಪಾಲವನ್ನು ಬೇರ್ಪಡಿಸಿದನು. ಇನ್ನೊಂದು ರೀತಿಯ ಕಥೆಯೂ ಇದೆ. ದೇವ-ದಾನವರು ಯುದ್ಧ ಮಾಡುತ್ತಿದ್ದರು. ಆಗ ದಾನವರನ್ನು ನಾಶಮಾಡಲು ಶಿವನು ಮತ್ತೊಬ್ಬ ಶಿವನನ್ನು ಸೃಷ್ಟಿಸಿದನು ಮತ್ತು ಆ ಎರಡನೇ ಶಿವನು ಅಷ್ಟ ಭೈರವರನ್ನು ಸೃಷ್ಟಿಸಿದನು. ಈ ಅಷ್ಟ ಭೈರವರು ಅಷ್ಟ ಮಾತೆಯರೊಂದಿಗೆ ವಿವಾಹ ಮಾಡಿಕೊಂಡರು. ಈ ಅಷ್ಟ ಮಾತೆಯರಿಗೆ ಹಾಗೂ ಈ ಅಷ್ಟ ಭೈರವರಿಗೆ ಭಯಂಕರವಾದ ರೂಪಗಳಿರುತ್ತವೆ. ಈ ಅಷ್ಟ ಭೈರವರು ಮತ್ತು ಮಾತೆಯರಿಂದ ೬೪ ಭೈರವರು ಮತ್ತು ೬೪ ಯೋಗಿನಿಯರು ಸೃಷ್ಟಿಸಲ್ಪಟ್ಟರು.
ಎಂಟು ವಿಧವಾದ ಭೈರವರಿದ್ದು ಅವರನ್ನು ಅಷ್ಟ ಭೈರವರೆನ್ನುತ್ತಾರೆ; ಅವರೆಂದರೆ - ಮಹಾಭೈರವ, ಸಂಹಾರ ಭೈರವ, ಅಸಿತಾಂಗ ಭೈರವ, ರುರು-ಭೈರವ, ಕಾಲಭೈರವ, ಕ್ರೋಧ ಭೈರವ, ತಾಮ್ರಚೂಡ ಭೈರವ ಅಥವಾ ಕಪಾಲ ಭೈರವ, ಚಂದ್ರಚೂಡ ಭೈರವ ಅಥವಾ ರುದ್ರ ಭೈರವ. ಈ ಎಂಟು ರೂಪಗಳಲ್ಲದೆ ಇನ್ನೊಂದು ಭೈರವ ರೂಪವೂ ಇದೆ ಅದನ್ನು ’ಸ್ವರ್ಣಾಕರ್ಷಣ ಭೈರವ’ ಎನ್ನುತ್ತಾರೆ. ಮಹಾಭೈರವನು ಸ್ವಯಂ ಶಿವನೇ ಆಗಿದ್ದಾನೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ಭೈರವನ ಮೂರ್ತಿಯನ್ನು ದಕ್ಷಿಣ ದಿಕ್ಕಿನಲ್ಲಿ ಉತ್ತರಕ್ಕೆ ಅಭಿಮುಖವಾಗಿ ಇರಿಸಲಾಗಿರುತ್ತದೆ. ಇವನನ್ನು ಕ್ಷೇತ್ರಪಾಲ ಎಂದೂ ಕರೆಯಲಾಗುತ್ತದೆ. ಅವನು ನಾಲ್ಕು ಕೈಗಳನ್ನು ಹೊಂದಿ ನಿಂತಿರುವ ಭಂಗಿಯಲ್ಲಿರುತ್ತಾನೆ. ಅವನ ಆಯುಧಗಳು, ಡಮರುಗ, ಪಾಶ, ತ್ರಿಶೂಲ ಮತ್ತು ಕಪಾಲಗಳಾಗಿವೆ. ಭೈರವನ ಕೆಲವೊಂದು ರೂಪಗಳಲ್ಲಿ ನಾಲ್ಕಕ್ಕಿಂತ ಹೆಚ್ಚಿನ ಕೈಗಳು ಇರುತ್ತವೆ. ಅವನು ದಿಗಂಬರನಾಗಿ ನಾಯಿಯೊಂದಿಗೆ ಕಾಣಿಸಿಕೊಳ್ಳುತ್ತಾನೆ. ಅವನ ಆಯುಧಗಳು, ನಾಯಿ, ಮುಂಚಾಚಿರುವ ಕೋರೆ ಹಲ್ಲುಗಳು, ಭಯಾನಕ ದೃಷ್ಟಿ, ಕೆಂಪು ಹೂವಿನ ಮಾಲೆ ಇವೆಲ್ಲವೂ ಅವನ ರೂಪವನ್ನು ನೋಡಿದಾಕ್ಷಣ ಗಾಬರಿ ಉಂಟು ಮಾಡುತ್ತವೆ.
ಎಲ್ಲಾ ಶಿವ ದೇಗುಲಗಳಲ್ಲಿ, ನಿತ್ಯ ಪೂಜಾ ಕೈಂಕರ್ಯಗಳು ಸೂರ್ಯನ ಪೂಜೆಯೊಂದಿಗೆ ಪ್ರಾರಂಭವಾಗಿ ಭೈರವನ ಅರ್ಚನೆಯೊಂದಿಗೆ ಕೊನೆಗೊಳ್ಳುತ್ತವೆ. ಭೈರವನಿಗೆ ತುಪ್ಪದ ಅಭಿಷೇಕ (ಘೃತಾಭಿಷೇಕ), ಕೆಂಪು ಹೂವುಗಳು, ತುಪ್ಪದ ದೀಪ, ಇಡೀ ತೆಂಗಿನಕಾಯಿ (ಇಡುಗಾಯಿ), ಜೇನುತುಪ್ಪ, ಕುಚ್ಚಿದ ಆಹಾರ, ನಾರಿನಿಂದ ಕೂಡಿದ ಹಣ್ಣುಗಳು ಮೊದಲಾದವು ಪ್ರಿಯವಾದ ವಸ್ತುಗಳಾಗಿವೆ. ಭೈರವನ ಮೂರ್ತಿಯು ಪಶ್ಚಿಮಕ್ಕೆ ಅಭಿಮುಖವಾಗಿದ್ದರೆ ಒಳ್ಳೆಯದು, ದಕ್ಷಿಣಕ್ಕಿದ್ದರೆ ಮಧ್ಯಮ ಮತ್ತು ಪೂರ್ವಾಭಿಮುಖವಾಗಿದ್ದರೆ ಒಳ್ಳೆಯದಲ್ಲ. ಭೈರವನನ್ನು ಪೂಜಿಸಲು ಮಧ್ಯರಾತ್ರಿಯು ಸೂಕ್ತವಾದ ಸಮಯ. ಮಧ್ಯರಾತ್ರಿಯ ವೇಳೆಯಲ್ಲಿ ಭೈರವನು ತನ್ನ ಸಂಗಾತಿಯಾದ ಭೈರವೀ (ನಾಮ ೨೭೬) ಜೊತೆಗಿದ್ದು ಅವರಿಬ್ಬರೂ ತಮ್ಮ ಭಕ್ತರಿಗೆ ದರ್ಶನವನ್ನೀಯುತ್ತಾರೆಂದು ಹೇಳಲಾಗುತ್ತದೆ. ಅತ್ಯಂತ ಪ್ರಶಸ್ತವಾದ ಸಮಯವೆಂದರೆ ಶುಕ್ರವಾರದ ಮಧ್ಯರಾತ್ರಿ. ಎಂಟು ವಿಧವಾದ ಪುಷ್ಟ ಮತ್ತು ಪತ್ರೆಗಳನ್ನು ಭೈರವನ ಅರ್ಚನೆಗೆ ಉಪಯೋಗಿಸಲಾಗುತ್ತದೆ.
ಈ ಅಷ್ಟ ಭೈರವರು ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನಿರುತ್ ಮತ್ತು ಭೂಮಿಯೊಂದಿಗೆ ಸೂರ್ಯ, ಚಂದ್ರ ಮತ್ತು ಆತ್ಮನನ್ನು ಪ್ರತಿನಿಧಿಸುತ್ತಾರೆಂದು ಹೇಳಲಾಗುತ್ತದೆ. ಪ್ರತಿಯೊಬ್ಬ ಅಷ್ಟ ಭೈರವನಿಗೂ ಭಿನ್ನವಾದ ರೂಪಗಳಿದ್ದು, ಅವರು ವಿಭಿನ್ನವಾದ ಆಯುಧಗಳು ಮತ್ತು ವಾಹನಗಳನ್ನು ಹೊಂದಿದ್ದು ತಮ್ಮ ಭಕ್ತರಿಗೆ ಅಷ್ಟ ಲಕ್ಷ್ಮಿಯರನ್ನು ಪ್ರತಿನಿಧಿಸುವ ಅಷ್ಟೈಶ್ವರ್ಯಗಳನ್ನು ಪ್ರಸಾದಿಸುತ್ತಾರೆ. ಭೈರವನ ನಿರಂತರ ಪೂಜೆಯು ಒಬ್ಬನನ್ನು ನಿಜವಾದ ಗುರುವಿನೆಡೆಗೆ ಕರೆದೊಯ್ಯುತ್ತವೆ. ಪ್ರತಿಯೊಬ್ಬ ಅಷ್ಟ ಭೈರವನಿಗೂ ಪ್ರತ್ಯೇಕವಾದ ಮೂಲ ಮಂತ್ರಗಳು ಮತ್ತು ಧ್ಯಾನ ಶ್ಲೋಕಗಳು ಇವೆ.
ಈ ಅಷ್ಟ ಭೈರವರನ್ನು ಹೊರತು ಪಡಿಸಿ ಇನ್ನೊಂದು ಪ್ರಮುಖವಾದ ಭೈರವ ರೂಪವಿದೆ ಅದನ್ನು ಸ್ವರ್ಣಾಕರ್ಷಣ ಭೈರವನೆಂದು ಕರೆಯುತ್ತಾರೆ. ಅವನಿಗೆ ಕೆಂಪು ಮೈಬಣ್ಣವಿದ್ದು ಅವನು ಬಂಗಾರದ ದಿರುಸನ್ನು ತೊಟ್ಟಿರುತ್ತಾನೆ. ಅವನು ತಲೆಯಲ್ಲಿ ಚಂದ್ರನನ್ನು ಹೊಂದಿರುತ್ತಾನೆ, ಅವನಿಗೆ ನಾಲ್ಕು ಕೈಗಳಿದ್ದು ಒಂದು ಕೈಯ್ಯಲ್ಲಿ ಸ್ವರ್ಣಪಾತ್ರೆಯನ್ನು ಹಿಡಿದಿರುತ್ತಾನೆ. ಈ ಸ್ವರ್ಣಾಕರ್ಷಣ ಭೈರವನು ನಮಗೆ ಸಿರಿ ಸಂಪದಗಳನ್ನು ಕರುಣಿಸುತ್ತಾನೆ. ಇವನ ಪೂಜೆಯನ್ನು ಮಂಗಳವಾರದಂದು ಕೈಗೊಂಡರೆ ಶೀಘ್ರ ಫಲವುಂಟಾಗುತ್ತದೆ.
ಆಕಾಶ ಭೈರವನನ್ನು ಶರಭೇಶ್ವರ ಎಂದೂ ಕರೆಯಲಾಗುತ್ತದೆ. ಕೆಲವು ಪುರಾತನ ಗ್ರಂಥಗಳು, ಅವನಿಗೆ ೩೨ ಕೈಗಳನ್ನು, ಪಕ್ಷಿಯ ಆಕಾರವನ್ನು, ಬಂಗಾರದ ಮೈ ಬಣ್ಣವನ್ನು, ಉಗ್ರವಾದ ಹಲ್ಲುಗಳನ್ನು ಮತ್ತು ಸೊಂಟದಿಂದ ಮೇಲ್ಭಾಗವು ಮಾನವಾಕಾರದಲ್ಲಿರುವಂತೆ ಚಿತ್ರಿಸುತ್ತವೆ. ಇವನನ್ನು ಪೂಜಿಸುವುದರಿಂದ ಶತ್ರುಗಳು ನಾಶವಾಗುತ್ತಾರೆ.
ಭೈರವನ ಪೂಜೆಯು ಸಕಲೈಶ್ವರ್ಯಗಳು, ಯಶಸ್ಸು, ಮತ್ತು ಒಳ್ಳೆಯ ಸಂತಾನವನ್ನು ಕರುಣಿಸುವುದಲ್ಲದೇ, ಅಕಾಲ ಮೃತ್ಯುವಿನಿಂದ ಸಹ ಕಾಪಾಡುತ್ತದೆ ಮತ್ತು ಸಾಲ-ಸೋಲಗಳಿಗೆ ಪರಿಹಾರೋಪಾಯಗಳು ದೊರೆಯುವಂತೆ ಮಾಡುತ್ತದೆ. ಭೈರವನ ವಿವಿಧ ರೂಪಗಳು ಕೇವಲ ಮಹಾಭೈರವನಾದ ಶಿವನಿಂದಲೇ ಉಂಟಾಗುತ್ತವೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 782 - 785 http://www.manblunder.com/2010/05/lalitha-sahasranamam-782-785.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೭೩. ಲಲಿತಾ ಸಹಸ್ರನಾಮ ೭೮೨ರಿಂದ ೭೮೫ನೇ ನಾಮಗಳ ವಿವರಣೆ
ಶ್ರೀಧರರೆ, "೧೭೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೮೨-೭೮೫
________________________________
.
೭೮೨. ಪರಾಕಾಶಾ
ಉಪನಿಷತ್ತು ಭೋಧನೆ ಸಾರ ಪರಾಕಾಶಾ, ಪರಮೋನ್ನತಾಕಾಶಾ ಲಲಿತ
ಅನಂತವಿಹ ವಿಸ್ತಾರ, ಪರಿಶುದ್ಧತೆ ಪೂರಾ, ಸೂಕ್ಷ್ಮ ಸ್ವಭಾವ ಗ್ರಹಣಾತೀತ
ಕಲ್ಪಿಸಲಾಗದ ಬ್ರಹ್ಮ ಕಲ್ಪನೆಯಲ್ಹಿಡಿಯೆ, ಹೋಲಿಸುತ ಅಗಾಧಾ ಆಕಾಶ
ಬೆಳಕು ಮಳೆ ಮೂಲ, ಬ್ರಹ್ಮದಂತೆ ಆರಿಯಲಾಗದಾಳ ದೇವಿ ಪರಾಕಾಶಾ ||
.
ಬ್ರಹ್ಮದ ಸಂಕೇತ, ಉಗಮಾಂತಿಮ ಶ್ರೇಷ್ಠ ವಸುಧಾಂತ ಆಕಾಶ
ನಾಮರೂಪವಾಗಾವಿರ್ಭವಿಸಿ ಪ್ರಕಟ, ಆನಂದೋಬ್ರಹ್ಮ ಪರುಷ
ಆನಂದದಿ ಜನ್ಮ, ಆನಂದದಾಸರೆ ಕರ್ಮ, ವಿನಾಶದೆ ಆನಂದಕೆ
ಪರಮವ್ಯೋಮಬ್ರಹ್ಮ-ಸರ್ವಾಧಾರವ್ಯಾಪಿ ಹಾರ್ದಾಕಾಶ ಸತ್ಯಕೆ ||
.
೭೮೩. ಪ್ರಾಣದಾ
ಜೀವ ವಾಯುವೆ ಪ್ರಾಣ, ದಯಪಾಲಿಸುತ ಲಲಿತೆ ಪ್ರಾಣದಾ
ಆಕಾಶದಂತೆ ಅಗಣಿತ ಸೂಕ್ಷ್ಮ, ಜೀವೋದ್ಭವಕೆ ಪ್ರಾಣವೆ ಕದ
ಸರ್ವವ್ಯಾಪಿ ಬ್ರಹ್ಮ ಆಕಾಶಾದಿ ಪ್ರಾಣ ನಿಯಂತ್ರಿಸುತ ಲಲಿತ
ಪ್ರಳಯಾನುಗ್ರಹದೆ ಭೂತಗಳಿಗಾಶ್ರಯ ಪ್ರಾಣದಪ್ರಾಣ ಸ್ವತಃ ||
.
೭೮೪. ಪ್ರಾಣ-ರೂಪಿಣೀ
ಪ್ರಾಣದಾ ಪ್ರಾಣದಾತೆ, ಅಂತೆ ಪ್ರಾಣದ ಮೂರ್ತರೂಪ ಲಲಿತೆ
ತುಂಬಿ ತುಳುಕುವ ಪ್ರಾಣವ, ಜಗಜೀವಕೆ ಹಂಚೊ ಪ್ರಾಣದಾತೆ
ಪ್ರಾಣವೆ ಬ್ರಹ್ಮ, ಆಕಾಶವೂ ಬ್ರಹ್ಮ, ಪ್ರಾಣವೆ ಆಕಾಶದ ಸ್ವಗತ
ಅರಿತಜ್ಞಾನಿ ಅರಿಯದಜ್ಞಾನಿ, ಸರ್ವಕು ಪ್ರಾಣರೂಪಿಣೀ ಲಲಿತ ||
.
೭೮೫. ಮಾರ್ತಾಂಡ-ಭೈರವಾರಾಧ್ಯಾ
ಅಷ್ಟಾಂಗ ಭೈರವ ನಾಯಕರೆಂಟು, ಗಣನೆ ಅರವತ್ನಾಲ್ಕು ಭೈರವರುಂಟು
ಅಸಿತಂಗ ಭೈರವ ಗಣದೆ, ದೇವಿಯಾ ಭಕ್ತ ಮಾರ್ತಾಂಡ ಭೈರವನುಂಟು
ಶ್ರೀಪುರದ ನಡುವಲಿ ಶ್ರೀ ಚಕ್ರ, ಇಪ್ಪತ್ನಾಲ್ಕನೆ ಕೋಟೆ ಗೋಡೆಯಲಾಸೀನ
ಸೂರ್ಯವಟುಕಾದಿ ಪೂಜಿತೆ ದೇವಿ, ಮಾರ್ತಾಂಡಭೈರವಾರಾಧ್ಯಾ ಧ್ಯಾನ ||
.
ಸಾಕ್ಷಾತ್ಕಾರ ಸ್ವಾನುಭವ, ಸತ್ಯ ಪ್ರತ್ಯಕ್ಷವಾಗರಿತು ಅನುಭವಿಸುವ
ಸತ್ಯವೆನೆ ಬ್ರಹ್ಮ, ಮಿಂಚುವ ಬೆಳಕಾಗಿ ಮಾರ್ತಾಂಡ, ಭೈರವ ಶಿವ
ಕತ್ತಲನು ಬೆಳಗುವ ಮಿಂಚಿನ ಬೆಳಕಂತೆ ಸಾಕ್ಷಾತ್ಕಾರವಾಗೊ ಭವ್ಯ
ಸರ್ವಾಂತರ್ಯಾಮಿ ಬ್ರಹ್ಮದ ಕಲ್ಪನೆ, ಸಾಕಾರವಾಗಿ ನೈಜ್ಯತೆ ದಿವ್ಯ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ೧೭೩. ಲಲಿತಾ ಸಹಸ್ರನಾಮ ೭೮೨ರಿಂದ ೭೮೫ನೇ ನಾಮಗಳ ವಿವರಣೆ
Pranamam,
Kindly update the link : http://www.manblunder.com/2010/05/lalitha-sahasranamam-782-785.html is not working now.
Right URL is http://www.manblunder.com/articlesview/lalitha-sahasranamam-782-785
Please update the URL for "Lalitha Sahasranama" keyword.
In reply to ಉ: ೧೭೩. ಲಲಿತಾ ಸಹಸ್ರನಾಮ ೭೮೨ರಿಂದ ೭೮೫ನೇ ನಾಮಗಳ ವಿವರಣೆ by Ravi V
ಉ: ೧೭೩. ಲಲಿತಾ ಸಹಸ್ರನಾಮ ೭೮೨ರಿಂದ ೭೮೫ನೇ ನಾಮಗಳ ವಿವರಣೆ
https://drive.google.com/open?id=0B3rJIFVCq-wZal9PQkFXRTdkNW8
Sir, you can see this google document link for details
(ಇಂಗ್ಲೀಷಿನಲ್ಲಿ ಪ್ರತಿಕ್ರಿಯಿಸಿರುವುದಕ್ಕೆ ಕ್ಷಮೆಯಿರಲಿ. ಅವರಿಗೆ ಕನ್ನಡ ತಿಳಿಯದು).