೧೭೬. ಲಲಿತಾ ಸಹಸ್ರನಾಮ ೭೯೩ರಿಂದ ೮೦೦ನೇ ನಾಮಗಳ ವಿವರಣೆ

೧೭೬. ಲಲಿತಾ ಸಹಸ್ರನಾಮ ೭೯೩ರಿಂದ ೮೦೦ನೇ ನಾಮಗಳ ವಿವರಣೆ

                                                                                                           ಲಲಿತಾ ಸಹಸ್ರನಾಮ ೭೯೩-೮೦೦

Kapardinī कपर्दिनी (793)

೭೯೩. ಕಪರ್ದಿನಿ

          ಶಿವನ ಕೇಶವನ್ನು ಕಪರ್ದ ಎನ್ನುತ್ತಾರೆ. ಕಪರ್ದ ಎಂದರೆ ಜಟಾಜೂಟ ಅಥವಾ ಹೆಣೆಯಲ್ಪಟ್ಟ ಗಂಟಾದ ಕೂದಲು (ಶ್ರೀ ರುದ್ರಮ್ ೫.೪). ಹಾಗಾಗಿ ಶಿವನ ಅರ್ಧಾಂಗಿಯು ಕಪರ್ದಿನಿಯಾಗಿದ್ದಾಳೆ. ಕಾಳಿದಾಸ ಲಘುಸತ್ವದಲ್ಲಿ (ಶ್ಲೋಕ ೧೧) ದೇವಿಯ ಜಟಾಜೂಟದ ಬಗೆಗೆ ಉಲ್ಲೇಖವಿದೆ; ಅದನ್ನು ದೇವಿಯ ಕಾಳಿಕಾ ರೂಪವನ್ನು ಉದ್ದೇಶಿಸಿ ಹೇಳಲಾಗಿದೆ.

Kalāmālā कलामाला (794)

೭೯೪. ಕಲಾಮಾಲಾ

          ದೇವಿಯು, ನಾಮ ೨೩೬ರಲ್ಲಿ ಹೆಸರಿಸಲ್ಪಟ್ಟಿರುವ ಅರವತ್ನಾಲ್ಕು ಕಲೆಗಳಿಂದ ಅಥವಾ ತಂತ್ರಗಳಿಂದ ರಚಿಸಲ್ಪಟ್ಟ ಹಾರವನ್ನು ಧರಿಸಿದ್ದಾಳೆ. ಕಲಾ ಮತ್ತು ತಂತ್ರಗಳು ಭಿನ್ನವಾದವು. ಕಲಾ ಎಂದರೆ ಲಲಿತ ಕಲೆಗಳು ಮತ್ತು ತಂತ್ರಗಳೆಂದರೆ ತಂತ್ರಕ್ಕೆ ಸಂಭಂದಿಸಿದ ಆಚರಣೆಗಳನ್ನೊಳಗೊಂಡ ಶಾಸ್ತ್ರಗಳು.

          ಕಲಾ ಶಬ್ದಕ್ಕೆ ಸೌಂದರ್ಯ ಎನ್ನುವ ಅರ್ಥವೂ ಇದೆ, ಮಾ ಎಂದರೆ ಪರಿಮಿತಿಯಿಲ್ಲದ್ದು (ಅನಂತವಾದದ್ದು) ಮತ್ತು ಲಾ ಎಂದರೆ ತೆಗೆದುಕೊಂಡು ಬರುವುದು. ಈ ಆಧಾರದ ಮೇಲೆ ಈ ನಾಮವನ್ನು ದೇವಿಯು ಅಪರಿಮಿತ ಸೌಂದರ್ಯದಿಂದ ಕೂಡಿದ್ದಾಳೆಂದು ವ್ಯಾಖ್ಯಾನಿಸಬಹುದು. ವಾಸ್ತವವಾಗಿ ಆಕೆಗೆ ಸಂಭಂದಿಸಿದ್ದು ಯಾವುದೇ ಆಗಿರಲಿ ಅದು ಅನಂತವಾಗಿರುವುದಾಗಿದೆ.

Kāmadhuk कामधुक् (795)

೭೯೫. ಕಾಮಧುಕ್

           ದೇವಿಯು ತನ್ನ ಭಕ್ತರು ಏನನ್ನು ಕೋರುತ್ತಾರೋ ಅದನ್ನು ದಯಪಾಲಿಸುತ್ತಾಳೆ. ಇದೇ ಅರ್ಥವನ್ನು ೬೩ನೇ ನಾಮವಾದ ಕಾಮದಾಯಿನೀ ಸಹ ಹೊರಹೊಮ್ಮಿಸುತ್ತದೆ.

           ಹೀಗೆ ಬೇಡಿದ್ದನ್ನು ಪಡೆಯುವುದಕ್ಕೆ ವಿಧಿಸಲಾಗಿರುವ ಕೆಲವೊಂದು ಪೂರ್ವನಿಯಮಗಳ ಕುರಿತು ಮುಂಡಕ ಉಪನಿಷತ್ತಿನಲ್ಲಿ(೩.೧.೧೦) ಹೇಳಲಾಗಿದೆ. ಅದು ಹೀಗೆ ಹೇಳುತ್ತದೆ, "ಯಾವ ವ್ಯಕ್ತಿಯು ಶುದ್ಧವಾದ ಮನಸ್ಸನ್ನು ಹೊಂದಿರುತ್ತಾನೆಯೋ ಅವನು ಬಯಸಿದ ಯಾವುದೇ ಲೋಕಗಳನ್ನು ಅಥವಾ ವಸ್ತುಗಳನ್ನು ಪಡೆಯಬಹುದಾಗಿದೆ".

ಸೌಂದರ್ಯ ಲಹಿರಿಯು (ಸ್ತೋತ್ರ ೪) ಹೀಗೆ ಹೇಳುತ್ತದೆ, "ದೇವಿಯು ಬಯಸಿದ್ದಕ್ಕಿಂತ ಹೆಚ್ಚಿನದನ್ನು ದಯಪಾಲಿಸುವುದರಲ್ಲಿ ಸಿದ್ಧಹಸ್ತಳು. ಆದರೆ ಆಕೆಯು ಅವನ್ನು ಇತರ ದೇವ-ದೇವಿಯರಂತೆ ತನ್ನ ಕೈಗಳಿಂದ ಕೊಡುವುದರ ಬದಲು ಅವುಗಳನ್ನು ತನ್ನ ಪಾದಪದ್ಮಗಳಿಂದ ಕೊಡಮಾಡುತ್ತಾಳೆ."

Kāmarūpiṇī कामरूपिणी (796)

೭೯೬. ಕಾಮರೂಪಿಣೀ

          ಕಾಮನೆಂದರೆ ಇಲ್ಲಿ ಶಿವ, ಆದ್ದರಿಂದ ಈ ನಾಮದ ಅರ್ಥವು ದೇವಿಯು ಶಿವನ ಸ್ವರೂಪದಲ್ಲಿದ್ದಾಳೆಂದು ಹೇಳುತ್ತದೆ; ಅವರಿಬ್ಬರೂ ಬೇರೆಯಲ್ಲ. ಅವರಿಗೆ ಸಂಭಂದಿಸಿದ್ದುದೆಲ್ಲವೂ ಒಂದೇ ತೆರನಾಗಿರುತ್ತವೆ; ಅವರಿಬ್ಬರ ಮೈಕಾಂತಿಗಳನ್ನು ಹೊರತು ಪಡಿಸಿ. ದೇವಿಯ ಮೈಬಣ್ಣವು ಗಾಢ ಕೆಂಪಾಗಿದ್ದರೆ, ಶಿವನದು ಸ್ಪಟಿಕದಂತೆ ಬಿಳಿಯಾಗಿರುತ್ತದೆ. ಶಿವ ಶಕ್ತಿಯರಿಬ್ಬರೂ ಒಟ್ಟಾಗಿ ಕುಳಿತಾಗ ಅವರು ಉದಯಿಸುವ ಸೂರ್ಯನಂತೆ ಕಾಣಿಸುತ್ತಾರೆ. ದೇವಿಯ ಮೈಕಾಂತಿಯು ಶಿವನ ವರ್ಣರಹಿತ ಮತ್ತು ಪಾರದರ್ಶಕವಾದ ಶಿವನ ಮೈಕಾಂತಿಯನ್ನು ಆವಾಹಿಸಿಕೊಂಡು ಅದು ಉದಯಿಸುವ ಸೂರ್ಯನಂತೆ ಕಾಣುತ್ತದೆ. ದೇವಿಯ ಗಾಢ ಕೆಂಪು ಬಣ್ಣವು ತಿಳಿಯಾಗಿ ಅದು ಕಿತ್ತಳೆ ಬಣ್ಣದಂತೆ ಕಾಣುತ್ತದೆ.

         ಪರಬ್ರಹ್ಮಕ್ಕೆ ಈ ಪ್ರಪಂಚವನ್ನು ಸೃಷ್ಟಿಸುವ ಅಭಿಲಾಷೆಯುಂಟಾಯಿತು (ಕಾಮವುಂಟಾಯಿತು). ತೈತ್ತರೀಯ ಉಪನಿಷತ್ತು (೨.೬.೩) ಹೀಗೆ ಹೇಳುತ್ತದೆ, "ಅವನು (ಬ್ರಹ್ಮನು) ನಾನು ಅನೇಕವಾಗಬೇಕು ಎಂದು ಬಯಸಿದನು". ಹೀಗೆ ದೇವಿಯು ಸೃಷ್ಟಿ ಕ್ರಿಯೆಯ ಆಸೆಯ ಮೂಲವಾಗಿದ್ದಾಳೆ.  

         ಈ ನಾಮವು ದೇವಿಯು ಅನೇಕ ರೂಪಗಳನ್ನು ಧರಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎನ್ನುವುದನ್ನು ಸಹ ಸೂಚಿಸಬಹುದು. ಕಾಮ ಎಂದರೆ ಆಸೆ ಮತ್ತು ರೂಪಿಣೀ ಎಂದರೆ ಸ್ವರೂಪವುಳ್ಳವಳು.

Kalānidhiḥ कलानिधिः (797)

೭೯೭. ಕಲಾನಿಧಿಃ

           ದೇವಿಯು ೭೯೪ನೇ ನಾಮದಲ್ಲಿ ಚರ್ಚಿಸಲಾಗಿರುವ ಎಲ್ಲಾ ಕಲೆಗಳ ಮೂಲವಾಗಿದ್ದಾಳೆ. ಶಿವ ಸೂತ್ರವು (೧.೩) ಹೀಗೆ ಹೇಳತ್ತದೆ, "ಕಲಾಶರೀರಂ ಅಂದರೆ ಯಾರ ಸ್ವರೂಪವು ಚಟುವಟಿಕಯಾಗಿದೆಯೋ". ಕೇವಲ ದೇವಿಯ ಚಟುವಟಿಕೆಗಳಿಂದಾಗಿ ಈ ಸಮಸ್ತ ಪ್ರಪಂಚದ ಪರಿಪಾಲನೆಯು ನಡೆಯುತ್ತದೆ. ಈ ಸಂದರ್ಭದಲ್ಲಿ, ಈ ನಾಮವು ದೇವಿಯು ಪರಬ್ರಹ್ಮದ ಎಲ್ಲಾ ವಿಧವಾದ ಚಟುವಟಿಕೆಗಳಿಗೆ ಮೂಲ ಕಾರಣಳಾಗಿದ್ದಾಳೆ ಎನ್ನುವುದನ್ನು ಸೂಚಿಸುತ್ತದೆ.

           ಕೃಷ್ಣನು ಭಗವದ್ಗೀತೆಯಲ್ಲಿ (೪.೩೩) ಹೀಗೆ ಹೇಳುತ್ತಾನೆ, "ಎಲ್ಲಾ ಕಾರ್ಯಗಳು ಯಾವುದೇ ಅಪವಾದವಿಲ್ಲದೆ ಜ್ಞಾನದಲ್ಲಿ (ಬ್ರಹ್ಮದಲ್ಲಿ) ಕೊನೆಗೊಳ್ಳುತ್ತವೆ".

Kāvyakalā काव्यकला (798)

೭೯೮. ಕಾವ್ಯಕಲಾ

         ಕಲೆಗಳಲ್ಲಿ ಕಾವ್ಯವೂ ಒಂದು. ಕಾವ್ಯ ಎಂದರೆ ಋಷಿ ಅಥವಾ ಕವಿಯ ಗುಣಗಳನ್ನು ಪಡೆದಿರುವುದು, ಋಷಿ, ಮುನಿ, ಭಾವಪ್ರಚೋದನೆ ಅಥವಾ ಕಾವ್ಯ ಪ್ರಚೋದನೆಯ ಮೂಲದಿಂದ ಬಂದದ್ದು, ಈ ನಾಮವು ದೇವಿಯು ಎಲ್ಲಾ ಕಾವ್ಯಗಳಿಗೆ ಮೂಲ ಸ್ಫೂರ್ತಿಯಾಗಿದ್ದಾಳೆ ಎನ್ನುವುದನ್ನು ಸೂಚಿಸುತ್ತದೆ.

         ಎಲ್ಲಾ ಕಾವ್ಯಗಳಲ್ಲೂ ದೇವಿಗೆ (ಸಾಮಾನ್ಯವಾಗಿ ಸ್ತ್ರೀಯರಿಗೆ, ಉದಾಹರಣೆಗೆ ರಾಮಾಯಣದಲ್ಲಿ ಸೀತೆಗೆ ಕೊಟ್ಟಂತೆ) ಉನ್ನತವಾದ ಸ್ಥಾನವನ್ನು ಕೊಟ್ಟು ಆಕೆಗೆ ಆ ಕೃತಿಗಳನ್ನು ಅರ್ಪಣೆಮಾಡಲಾಗುತ್ತದೆ.

ರಾಮಾಯಣದ ಕುರಿತು ಕೆಲವು ವಿವರಗಳು

          ಈ ಕೃತಿಯು ಅಸದೃಶವಾದುದಾಗಿದ್ದು ಇದು ಕಾವ್ಯ ರೂಪದಲ್ಲಿ ಮಹರ್ಷಿ ವಾಲ್ಮೀಕಿಯಿಂದ ರಚಿಸಲ್ಪಟ್ಟಿದೆ. ಈ ಕೃತಿಯು ಏಳು ಖಂಡಗಳೆಂದು ಕರೆಯಲ್ಪಡುವ ಏಳು ಪುಸ್ತಕಗಳಲ್ಲಿ ಸಂಸ್ಕೃತ ಭಾಷೆಯಲ್ಲಿ ೨೪,೦೦೦ ಶ್ಲೋಕಗಳನ್ನು ಹೊಂದಿದೆ. ಅವೆಂದರೆ, ೧) ಬಾಲ ಕಾಂಡ ಅಥವಾ ಆದಿ ಕಾಂಡ, ೨) ಅಯೋಧ್ಯಾ ಕಾಂಡ, ೩) ಅರಣ್ಯ-ಕಾಂಡ, ೪) ಕಿಷ್ಕಿಂದಾ ಕಾಂಡ, ೫) ಸುಂದರ ಕಾಂಡ, ೬) ಯುದ್ಧ ಕಾಂಡ ಮತ್ತು ೭) ಉತ್ತರ ಕಾಂಡ. ಮೊದಲನೇ ಕಾಂಡದ ಮತ್ತು ಏಳನೆಯ ಕಾಂಡದ ಕೆಲವೊಂದು ಭಾಗಗಳು ಇತ್ತೀಚೆಗೆ ಮೂಲ ರಾಮಾಯಣಕ್ಕೆ ಸೇರಿಸಲ್ಪಟ್ಟಿವೆ ಅಂದರೆ ಅವು ಪ್ರಕ್ಷಿಪ್ತ ಎನ್ನುವ ಅಭಿಪ್ರಾಯಗಳಿವೆ. ಅದೇನೆ ಇರಲಿ, ರಾಮಾಯಣದಲ್ಲಿ ಚಿತ್ರಿತವಾಗಿರುವ ರಾಮನದು ಆದರ್ಶ ಮಾನವನ ಚಿತ್ರಣ, ಅವನು ಎಲ್ಲಾ ವಿಧವಾದ ಕಷ್ಟ-ಕಾರ್ಪಣ್ಯಗಳನ್ನು ಮತ್ತು ಇಂದ್ರಿಯ ನಿಗ್ರಹವನ್ನು ಅತಿಮಾನವ ತಾಳ್ಮೆಯಿಂದ ಭರಿಸುತ್ತಾನೆ. ರಾಮನ ಹೆಂಡತಿಯು ಸೀತೆಯಾಗಿದ್ದಾಳೆ.

Rasajñā रसज्ञा (799)

೭೯೯. ರಸಜ್ಞಾ

          ರಸ ಎಂದರೆ ಸುವಾಸನೆಯ ಸಾರ ಎನ್ನುವುದು ಸಾಮಾನ್ಯ ಅರ್ಥ. ರಸ ಎಂದರೆ ಹೃದಯ ಅಥವಾ ಮನಸ್ಸಿನ ಭಾವನೆಗಳನ್ನು ಹಾಗು ಧಾರ್ಮಿಕ ಭಾವನೆಗಳನ್ನು ಹರಿಯಬಿಡುವುದು. ಭಕ್ತಿಯ ಐದು ವಿಧದ ಹಂತಗಳಿವೆ ಅವುಗಳನ್ನು ಭಕ್ತಿರಸ ಅಥವಾ ಭಕ್ತಿರತಿ ಎಂದು ಕರೆಯುತ್ತಾರೆ. ಅವುಗಳೆಂದರೆ ಸಾಂತ, ದಾಸ್ಯ, ಸಖ್ಯ, ವಾತ್ಸಲ್ಯ ಮತ್ತು ಮಧುರ. ಸಾಂತ ಭಾವದಲ್ಲಿ ನಾನು ಅಣು ನೀನು ವಿಭು ಎನ್ನುವ ಭಾವವಿರುತ್ತದೆ. ಇದಕ್ಕೆ ಉದಾಹರಣೆಯಾಗಿ ಪ್ರಹ್ಲಾದನ ವಿಷ್ಣು ಭಕ್ತಿಯನ್ನು ಕೊಡುತ್ತಾರೆ. ಅದೇ ವಿಧವಾಗಿ ಆಂಜನೇಯನಿಗೆ ರಾಮನಲ್ಲಿದ್ದದ್ದು ದಾಸ್ಯ ಭಾವವಾದರೆ, ಕೃಷ್ಣನೊಂದಿಗೆ ಅರ್ಜುನನಿಗಿದ್ದದ್ದು ಸಖ್ಯಭಾವ, ಯಶೋದೆಯದು ವಾತ್ಸಲ್ಯ ಭಾವ ಮತ್ತು ರಾಧೆ ಹಾಗೂ ಗೋಪಿಕೆಯರದು ಮಧುರಭಾವ. ದೇವಿಯು ಈ ವಿಧವಾದ ರಸಗಳ ರೂಪದಲ್ಲಿದ್ದಾಳೆ.

         ಸೌಂದರ್ಯ ಲಹರಿಯು (ಸ್ತೋತ್ರ ೫೧) ಎಂಟ ವಿಧವಾದ ರಸಗಳನ್ನು ಹೆಸರಿಸುತ್ತದೆ, ಅವುಗಳೆಂದರೆ ಪ್ರೇಮ, ಮುನಿಸು, ಸಿಟ್ಟು, ಆಶ್ಚರ್ಯ, ಭಯ, ಕೃಪೆ, ಮಂದಹಾಸ ಮತ್ತು ಕರುಣೆ. ಈ ಎಂಟು ರಸಗಳೊಂದಿಗೆ ಮತ್ತೆರಡು ರಸಗಳನ್ನು ಹೆಸರಿಸುತ್ತಾರೆ ಅವೆಂದರೆ ತೃಪ್ತಿ ಮತ್ತು ಮಮತೆ.

         ಈ ನಾಮವು ದೇವಿಯು ಈ ಎಲ್ಲಾ ರಸಗಳಲ್ಲಿ ಶ್ರೇಷ್ಠವಾದವಾಳಾಗಿದ್ದಾಳೆ ಎನ್ನುತ್ತದೆ.

Rasa-śevadhiḥ रस-शेवधिः (800)

೮೦೦. ರಸ-ಸೇವಧಿಃ

          ದೇವಿಯು ರಸಗಳನ್ನು ಸಂಗ್ರಹಿಸಿಡುವ ಭಾಂಡಾರವಾಗಿದ್ದಾಳೆ (ಕೋಶವಾಗಿದ್ದಾಳೆ). ತೈತ್ತರೀಯ ಉಪನಿಷತ್ತು (೨.೭.೨) ಸಹ ಹೀಗೆ ಹೇಳುತ್ತದೆ, "ರಸೋ ವೈ ಸಃ" ಅಂದರೆ ’ಎಲ್ಲಾ ವಸ್ತುಗಳಲ್ಲಿ ಯಾವುದು ಸಿಹಿ (ರಸ) ಎಂದು ಗುರುತಿಸಬೇಕಾಗಿರುವುದೋ ಅದು’. ಯಾರು ಈ ಸಿಹಿಯುಳ್ಳವನಾಗಿದ್ದಾನೆಯೋ ಅವನು ಆತ್ಮವನ್ನು (ಪರಬ್ರಹ್ಮ ಅಥವಾ ಪರಮಾನಂದವನ್ನು) ಅರಿಯುತ್ತಾನೆ. ಆನಂದದ ಮೂಲವು ಬ್ರಹ್ಮವಾಗಿದೆ. ಯಾವಾಗ ಮೂಲವು ಅರಿಯಲ್ಪಡುತ್ತದೆಯೋ ಆಗ ಸಂತೋಷವು ಪರಮಾನಂದವಾಗಿ ಮಾರ್ಪಡುತ್ತದೆ. 

                                                                              ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 793 - 800 http://www.manblunder.com/2010_05_01_archive.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Tue, 12/03/2013 - 02:51

ಶ್ರೀಧರರೆ, "೧೭೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-) 
.
ಲಲಿತಾ ಸಹಸ್ರನಾಮ ೭೯೩-೮೦೦
_____________________________________________
.
೭೯೩. ಕಪರ್ದಿನಿ
ಜಟಾಜೂಟಧಾರಿ ಶಿವನ ಕಪರ್ದವೆಂದರೆ ಕೇಶ
ಹೆಣೆದ ಗಂಟಾದ ಕೂದಲ ಜಟೆ ಸುತ್ತಿದಾ ಈಶ
ಕಪರ್ದ ಶಿವನರ್ಧಾಂಗಿನಿ ಕಪರ್ದಿನಿಯೆ ಲಲಿತೆ
ದೇವಿ ಕಾಳಿಕಾ ರೂಪದಿ ಜಟಾಜೂಟ ಧರಿಸುತೆ ||
.
೭೯೪. ಕಲಾಮಾಲಾ
ಅರವತ್ನಾಲ್ಕು ಕಲಾ ತಂತ್ರಗಳ ನಿಪುಣೆ ಲಲಿತೆ
ಹಾರವಾಗಿಸಿ ಕೊರಳಲಿ ಧರಿಸಿಹಳು ಶ್ರೀಮಾತೆ
ಕಲಾ ಆಗಿ ಸೌಂದರ್ಯ ಲಲಿತಕಲೆ ತಂತ್ರಶಾಸ್ತ್ರ
ಮಾ-ಅನಂತ ಲಾ-ತರುತ ಅದ್ಭುತ ರೂಪ ಗಾತ್ರ ||
.
೭೯೫. ಕಾಮಧುಕ್
ಬಯಸಿದ್ದೆಲ್ಲವ ಕೋರುವ ಭಕ್ತರು, ದಯಪಾಲಿಸುವ ದೇವಿ ಹಸು ಕರು
ಕಾಮದಾಯಿನೀ ಕರುಣೆ ಭರಿಸಲು, ಶುದ್ಧಮನ ಹೊಂದಿದ ಭಕ್ತ ಜನರು
ಬೇಡಿದ ಲೋಕ-ವಸ್ತುಗಳ ಕೊಡುವಳು, ಕೋರಿಕೆ ಮೀರೀ ಲಲಿತಾಂಬಿಕೆ
ವರದವಾಗಿ ಪಾದಪದ್ಮದಲೆ ಪ್ರದಾಯಿಸೊ ಕಾಮಧುಕ್ ಮಾತೆ ನಂಬಿಕೆ ||
.
೭೯೬. ಕಾಮರೂಪಿಣೀ
ಕಾಮನೆಂದರೆ ಶಿವ, ಶಕ್ತಿಯೆ ಶಿವನ ರೂಪದಲಿಹ ಉರವಣಿ
ಬೇರೆಯಲ್ಲದ ಒಂದಾದ ಏಕತ್ವ, ಅರ್ಧನಾರಿ ಕಾಮರೂಪಿಣೀ
ಮೈಕಾಂತಿ ಬೇರಾಗಿ ಗಾಢಕೆಂಪಿನ ದೇವಿ ಸ್ಪಟಿಕದಬಿಳಿ ಶಿವ
ಸಂಗಮದೆ ಅರುಣರಾಗ, ಸೃಷ್ಟಿ ಸರಾಗ ವಿವಿಧರೂಪ ಭಾವ ||
.
೭೯೭. ಕಲಾನಿಧಿಃ
ಸಕಲ ತಂತ್ರ ದೇವಿ, ಕಲಾಶಾಸ್ತ್ರಗಳೆಲ್ಲದರ ಮೂಲ ಲಲಿತೆ
ಸ್ವಯಂ ಸ್ವರೂಪವೆ, ಚಟುವಟಿಕೆಯ ಮೂರ್ತರೂಪವಾದಂತೆ
ಸಮಸ್ತ ಜಗ ಪಾಲಿಸಿ, ಸೃಷ್ಟಿಸ್ಥಿತಿಲಯವಾಗಿ ಕ್ರಮಬದ್ಧ ವಿಧಿ
ಸಕಲ ಕಾರ್ಯ ಮೂಲಕಾರಣ, ಜ್ಞಾನದಲಂತಿಮ ಕಲಾನಿಧಿಃ ||
.
೭೯೮. ಕಾವ್ಯಕಲಾ
ಕವಿ-ಋಷಿ ಗುಣಲಕ್ಷಣ ಪಡೆಯುತ ಕಾವ್ಯ, ಕಲೆಯೊಂದು ಪ್ರಕಾರ
ಋಷಿ ಮುನಿ ಭಾವ-ಕಾವ್ಯ ಪ್ರಚೋದನೆ ಮೂಲದಿಂದರಳಿದ ಸಾರ
ಪ್ರತಿ ಕಾವ್ಯದಲು ಕಾವ್ಯಕನ್ನಿಕೆ, ಸ್ತ್ರೀ ರೂಪದಿ ದೇವಿಗೆ ಉನ್ನತ ಸ್ಥಾನ
ಕಾವ್ಯದ ಮೂಲಸ್ಪೂರ್ತಿ ಕಾವ್ಯಕಲಾದೇವಿಗೆ, ಕೃತಿಯರ್ಪಿಸಿ ಧ್ಯಾನ ||
.
ರಾಮಾಯಣದ ಕುರಿತು ಕೆಲವು ವಿವರಗಳು
______________________________________
ವಾಲ್ಮೀಕಿ ವಿರಚಿತ ಮಹಾಕಾವ್ಯ, ಸಪ್ತ ಖಂಡ ೨೪,೦೦೦ ಶ್ಲೋಕ
ಅಸದೃಶ ಕಾವ್ಯ ರೂಪ, ರಾಮನಾದರ್ಶ ಮಾನವನಾಗಿ ಮರುಕ
ಬಾಲ-ಅಯೋಧ್ಯಾ-ಅರಣ್ಯ-ಕಿಷ್ಕಿಂದಾ-ಸುಂದರ-ಯುದ್ಧ-ಉತ್ತರ
ಅನುರಣಿಸಿ ಪ್ರತಿ ಖಂಡದೆ, ಇಂದ್ರಿಯನಿಗ್ರಹ ತಾಳ್ಮೆ ಸೀತಾಸ್ವರ ||
.
೭೯೯. ರಸಜ್ಞಾ
ರಸಗಳಲತಿ ಶ್ರೇಷ್ಠ ಲಲಿತೆ, ಸುವಾಸನೆಯ ಸಾರವಾಗಿ ರಸಜ್ಞಾ
ಹೃದಯಾ ಮನಸಿನ ಧಾರ್ಮಿಕ ಭಾವನೆ, ಹರಿವಾ ಭಕ್ತಿ ಮಜ್ಜನ
ಭಕ್ತಿರಸದಲೈದು ಹಂತ ಪ್ರಹ್ಲಾದನ ಸಾಂತ, ಹನುಮನ ದಾಸ್ಯ
ಕೃಷ್ಣಾರ್ಜುನ ಸಖ್ಯ, ಯಶೋಧಾ ವಾತ್ಸಲ್ಯ, ರಾಧಾ ಮಾಧುರ್ಯ ||
.
ಈ ಪಂಚ ಭಕ್ತಿರತಿಯಲಿಹಳು ದೇವಿ ರಸಗಳ ರೂಪದಿ ಪ್ರಸ್ತುತ
ಸ್ವತಃ ತಾನೆ ರಸವಾದವಳಿಗೆ ಸಕಲ ರಸವಧಿಗಮಿಸುವ ಸ್ವಗತ
ಸೌಂದರ್ಯಲಹರಿಯಷ್ಟಾರಸದೊಡತಿ, ಪ್ರೇಮ-ಮುನಿಸು-ಸಿಟ್ಟು
ಆಶ್ಚರ್ಯ-ಭಯ-ಕೃಪೆ-ಮಂದಹಾಸ-ಕರುಣೆ, ತೃಪ್ತಿ-ಮಮತೆ ಒಟ್ಟು ||
.
೮೦೦. ರಸ-ಸೇವಧಿಃ
ರಸ ಸಂಗ್ರಹಾಗಾರ ಕೋಶ ಭಂಡಾರವಾಗಿ ಲಲಿತೆ ರಸ ಸೇವಧಿಃ
ರಸಗಳೆಲ್ಲದರಲಿಹ ಸಿಹಿ, ಗುರುತಾಗಿ ದೇವಿಯ ಬ್ರಹ್ಮದ ಸನ್ನಿಧಿ
ಸಿಹಿಯುಳ್ಳವನರಿವ ತನ್ನಾತ್ಮ-ಪರಬ್ರಹ್ಮ-ಪರಮಾನಂದ ಭರದಲಿ
ಆನಂದೋಬ್ರಹ್ಮ-ಅದನರಿತ ಸಂತೋಷ ಪರಮಾನಂದವಾಗುತಲಿ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು