ದ್ರ್ಯಾವ್ರೇ ಬರೆದ ಖೈದಿಗಳ ಹಣೆಬರಹ..!

ದ್ರ್ಯಾವ್ರೇ ಬರೆದ ಖೈದಿಗಳ ಹಣೆಬರಹ..!

ನೆರಳು ಹೇಳಿದ ಮಾತು ಕೇಳಿ ಲಾಟೀನು ನಾಚತಾವೋ...ತನಂತಾನೇ ಬಿಗಿದ ಎರಡೂ ತೋಳು. ಜಾಮೀನು ಬೇಡುತಾವೋ. ಗಂಟೆಗೆ 60 ಕಿಮೀ. ನಾವು ಎತ್ಲಾಗೆ ಹೋಗೋದು ಸ್ವಾಮಿ.  ಈ ನಾಲ್ಕು ಸಾಲು ಸಾಕು. ಬದುಕಿನ ಒಳ ಅರ್ಥ ಹೇಳೊಕೆ. ಮಾತಿನ ರೂಪದಲ್ಲಿ ಹೇಳಿದ್ರೆ, ಕೇಳೋರು ಯಾರು. ಸಾಹಿತ್ಯ ಸ್ಪರ್ಶ ಕೊಟ್ಟು. ಅದಕ್ಕೊಂದು ಸಂಗೀತ ಭಾವ ತುಂಬಿದ್ರೆ, ಕೇಳೋ ಕಿವಿಗೂ ಇಂಪು. ಮನಸ್ಸಿಗೂ ನೇರವಾಗಿ ಇಳಿಯೋಕೆ ಸಾಧ್ಯ. ಪರಿಣಾಮಕಾರಿ ಈ ಸಂಗೀತ ಮಾಧ್ಯಮದ ಮೂಲಕ ಯೋಗರಾಜ್ ಭಟ್ ಬರೆಯುತ್ತಲೇ ಇದ್ದಾರೆ. ಈಗೀನ ಹುಡುಗರಿಗೆ ಆಗೀನ ಫಿಲಾಸಫಿ ಹೇಳುತ್ತಲೇ ಬಂದಿದ್ದಾರೆ. ದ್ಯಾವ್ರೇ ಸಿನಿಮಾದಲ್ಲಿ ಭಟ್ಟರ ಭಾವಪೂರ್ಣ, ಹೊಸ ಬರಹಗಳು ಹಾಡುಗಳಾಗಿ ಮೂಡಿವೆ. ಮೋಡಿ ಮಾಡುತ್ತಿವೆ. ಆದ್ರೆ, ಎಲ್ಲವೂ ಫಿಲಾಸಫಿಕಲ್ ಚೌಕಟ್ಟಿನಲ್ಲಿಯೇ ಒರಟು ರೂಪದಲ್ಲಿವೆ....

ದ್ಯಾವ್ರೇ ಚಿತ್ರದ ವಿಶೇಷತೆಗಳಲ್ಲಿ ಹಾಡುಗಳು ಈಗ ಪ್ರಮುಖ ಅನಿಸುತ್ತವೆ. ಚಿತ್ರದ ನಿರ್ದೇಶಕ ಗಡ್ಡ ವಿಜಿ ಇಲ್ಲಿವರೆಗೆ ಎಲ್ಲೂ ಚಿತ್ರದ ಬಗ್ಗೆ ಹೆಚ್ಚು ಬಿಟ್ಟುಕೊಟ್ಟಿಲ್ಲ. ಮೊದಲ ನಿರ್ದೇಶನದ ಚಿತ್ರ ನೋಡಿ. ಎಲ್ಲವನ್ನೂ ತೆರೆ ಮೇಲೆ ತೋರಿಸೋ ಆಸೆ.ವಿಜಿಯ ಈ ಪ್ರಯತ್ನಕ್ಕೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಹಾಗಂತ ವಿಜಿಗೋಸ್ಕರವಷ್ಟೇ ಪ್ರೇಕ್ಷಕರು ಬರ್ತಾಯಿದ್ದಾರೆ ಅನ್ಕೋಬೇಡಿ. ಯೋಗರಾಜ್ ಭಟ್ಟ ಇಲ್ಲಿ ಅಭಿನಯವನ್ನ ಟ್ರೈ ಮಾಡಿದ್ದಾರೆ. ಯಶ್ ಹಾಗೂ ಸುದೀಪ್ ರಿಂದ ಅಭಿನಯದ ಟಿಪ್ಸ್ ತೆಗೆದುಕೊಂಡಿದ್ದಾರೆ. ಭಟ್ಟರ ಇಷ್ಟೆಲ್ಲ ತಯಾರಿಯ ಈ ಕ್ಯಾರೆಕ್ಟರ್  ಒಬ್ಬ ಪೊಲೀಸ್ ಅಧಿಕಾರಿಯ ರೂಪದಲ್ಲಿ ಬರುತ್ತದೆ. ಸೀದಾ ಸಾದಾ ಕರೆಪ್ಟ್ ಪೊಲೀಸ್ ಅಧಿಕಾರಿಯಾಗದೇ, ಜೈಲವೊಂದರ ಜೈಲರ್ ಆಗಿಯೇ ಭಟ್ಟರು ದ್ಯಾವ್ರೇ ಚಿತ್ರದಲ್ಲಿ ಬರ್ತಾಯಿದ್ದಾರೆ. ಇವರಿಗೆ ತಮ್ಮ ಖೈದಿಗಳ ಬಗ್ಗೆ ಅಪಾರ ಪ್ರೀತಿ. ಇವರ ಜೀವನದ ಕಟ್ಟ ಕಡೆಯ ಒಂದೇ ಒಂದು ಗುರಿ ಏನಪ್ಪ ಅಂದ್ರೆ, ಒಬ್ಬೇ ಒಬ್ಬ ಖೈದಿ ತಪ್ಪಿಸಿಕೊಂಡು ಜೈಲಿನಿಂದ ಹೋಗಬೇಕೆಂಬುವುದು. ಆ ಕೊನೆಯ ಆಸೇನೂ ಇಲ್ಲಿ ಈಡೇರುತ್ತದೆ ಎಂದು ಹೇಳೋಕೆ ಸ್ವತ: ಭಟ್ಟರೇ ಒಂದು ಹಾಡು ಬರೆದಿದ್ದಾರೆ. ಜೈಲಿನಿಂದ ಖೈದಿಗಳೂ ತಪ್ಪಿಸಿಕೊಂಡು ಹೋಗುವಾಗ ಹಿನ್ನೆಲೆಯಾಗಿ ಬರುತ್ತದೆ ಆ ಹಾಡು. ಈಗಾಗಲೇ ಓದಿದಂತೆ, ಗಂಟೆಗೆ 60 ಕೀಮಿ. ನಾವು ಎತ್ಲಾಗೆ ಹೋಗೋದು ಸ್ವಾಮಿ ಅನ್ನೋ  ಈ ಹಾಡನ್ನ ಚಿತ್ರದಲ್ಲಿ ಒಬ್ಬ ಡೊಂಬರಾಟದ ಮನುಷ್ಯನ ಮೇಲೆ ಚಿತ್ರೀಕರಿಸಲಾಗಿದೆ. ಆ ಕ್ಯಾರೆಕ್ಟರೋ. ಹುಟ್ಟಾ ಟಿಪಿಕಲ್ ಅನಿಸುತ್ತದೆ. 

ಭಟ್ಟರ ಬತ್ತಳಿಕೆಯ ಸಾಹಿತ್ಯದ ಆಳ ತುಂಬಾ ಇದೆ. ತಿಳಿದುಕೊಂಡವ್ರಿಗೆ ದಾರಿ. ತಿಳಿಯದೇ ಇರೋರಿಗೆ ಒಂದು ಹೊಸ ಭಾವ. ನೆರಳು ಹೇಳಿದ ಮಾತು ಕೇಳಿ, ಲಾಟೀನು ನಾಚತಾವೋ. ತಂತಾನೇ ಬಿಗಿದ ಎರಡೂ ತೋಳು ಜಾಮೀನು ಬೇಡುತಾವೋ. ಭಟ್ಟರು ತಮ್ಮ ಅದ್ಯಾವ ಕ್ರಿಯಾಶೀಲ ಮನಸ್ಸಿನಿಂದ ಬರೆದರೋ. ಗೊತ್ತಿಲ್ಲ. ದ್ಯಾವ್ರೇ ಚಿತ್ರದ ಯಾವುದೇ ಹಾಡು ಕೇಳಿದ್ರು ಇದೇ ಭಾವ ಹೊರಹೊಮ್ಮುತ್ತದೆ.ಇವುಗಳ ಮಧ್ಯೆ ಒಂದು ಮಧುರವಾದ ಗೀತೆನೂ ಇದೆ.ಅದನ್ನ ಎಂದಿನಂತೆ, ಜಯಂತ್ ಕಾಯ್ಕಿಣಿ ಬರೆದ್ದಾರೆ. ಆ ಸಾಲು ಸಾಗೋದು ಹೀಗೆ..

ಏನನು ಹೇಳಲೆಂದೆ..

ಬಳಿಗೆ ಬಂದೆ ನೀನು..

ಆದ್ರೂ ಹೇಳದೇನೆ..

ನಗುತ ನಿಂತೆ ನೀನು...

ಕನಸಿನ ಬೀದಿಯಲ್ಲಿ ಕಂಡೇಯಾ

ನನ್ನ ನೀನು..

ವಿಶೇಷವೆಂದ್ರೆ,  ಇದೇ ಮಧುರ ಹಾಡಿಗೆ ಯೋಗರಾಜ್ ಭಟ್ ಅಭಿನಯಿಸಿದ್ದಾರೆ. ಇಂತಿ ನಿನ್ನ ಪ್ರೀತಿಯ ಸೋನು, ಭಟ್ಟರಿಗೆ ಜೊತೆಯಾಗಿದ್ದಾರೆ. ಅದು ಹೇಗೆ...ಇವರ ಮಧ್ಯೆನೂ ಲವ್ವಾ ಅಂತ ಕೇಳಬೇಡಿ. ನಿರ್ದೇಶದಶಕ ಗಡ್ಡ ವಿಜಯ್ ಈ ಬಗ್ಗೆ ಹೆಚ್ಚೇನೂ ಹೇಳಿಲ್ಲ. ಆದ್ರೆ, ಹಾಡಿನ ಒಟ್ಟು ಭಾವದ ಚಿತ್ರೀಕರಣದಲ್ಲಿ ಚಿತ್ರದ ಪ್ರಮುಖ ಕ್ಯಾರೆಕ್ಟರ್ ಗಳ ಪ್ರೇಮದ ಎಳೆಯನ್ನ ಇದು ತುಂಬಾ ಕಟ್ಟಿಕೊಡುತ್ತದೆ.

ದ್ಯಾವ್ರೇ ಕನ್ನಡದ ಮಟ್ಟಿಗೆ ಬೇರೆ ಥರದ ಸಿನಿಮಾ ಅನಿಸೋಕೆ ಶುರುವಾಗಿದೆ. ಹಾಗಂತ ಅದ್ಯಾರೋ ಹೇಳ್ತಿಲ್ಲ. ರಿಲೀಸ್ ಆಗಿರೋ ಪ್ರಮೋಗಳು, ಹಾಡುಗಳು ಹೇಳ್ತಾನೆ ಇವೆ. ಒಬ್ಬರಿಲ್ಲ..ಇಬ್ಬರಿಲ್ಲ.ಸುಮಾರು ಕಲಾವಿದರಿರೋ ಈ ದ್ಯಾವ್ರೇ ಇದೇ ಡಿಸೆಂಬರ್ 6 ಕ್ಕೆ ತೆರೆಗೆ ಬರ್ತಿದೆ. ವೀರ್ ಸಮರ್ಥ್ ಸಂಗೀತದಲ್ಲಿ ಹಾಡುಗಳು ಪ್ರೇಕ್ಷಕರನ್ನ ಆಹ್ವಾನಿಸುತ್ತಿವೆ..ಆದ್ರೂ, ಚಿತ್ರದ ಪ್ರಮೋಗಳು 1957 ರಲ್ಲಿ ತೆರೆಗೆ ಬಂದಿದ್ದ, ದೋ ಆಂಕೇ ಬಾರಾ ಹಾತ್ ಸಿನಿಮಾ ನೆನಪಿಸುತ್ತದೆ. ನಿರ್ದೇಶಕ ವಿ.ಶಾಂತಾರಾಮ್ ಅವ್ರು ಖೈದಿಗಳ ಮೇಲೆನೇ ದೋ ಆಂಕೆ ಬಾರಾ ಹಾತ್ ಚಿತ್ರ ಮಾಡಿದ್ದರು. ಅಲ್ಲೂ ಜೈಲರ್ ತುಂಬಾ ಒಳ್ಳಯವನು. ಇಲ್ಲೂ ಜೈಲರ್ ಆಗಿರೋ ಯೋಗರಾಜ್ ಭಟ್ಟರು ಒಳ್ಳೆಯವ್ರು..

-ರೇವನ್ ಪಿ.ಜೇವೂರ್

Comments

Submitted by makara Tue, 12/03/2013 - 07:10

ರೇವನ್ ಜೇವೂರ್ ಅವರೇ,
ಯೋಗರಾಜ ಭಟ್ಟರೊಬ್ಬರೇ ವಿಭಿನ್ನರಲ್ಲ ಕನ್ನಡ ಚಿತ್ರರಂಗಕ್ಕೆ; ನೀವೂ ಸಹ ವಿಭಿನ್ನರಾಗಿದ್ದೀರ ನಿಮ್ಮ ಶೈಲಿಯಿಂದಾಗಿ. ಮುಂದುವರೆಯಲಿ ನಿಮ್ಮ ಕನ್ನಡ ಚಿತ್ರ ವಿಮರ್ಶೆಗಳು, ನೀವು ಇದುವರೆಗೆ ಬರೆದ ಬಹತೇಕ ವಿಮರ್ಶೆಗಳೂ ಸಹ ವೈಶಿಷ್ಠ್ಯವಾಗಿವೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ