೧೭೭. ಲಲಿತಾ ಸಹಸ್ರನಾಮ ೮೦೧ರಿಂದ ೮೦೮ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೮೦೧ - ೮೦೮
Puṣṭā पुष्टा (801)
೮೦೧. ಪುಷ್ಟಾ
ಪುಷ್ಟಿ ಎಂದರೆ ಪೋಷಣೆ ಅಥವಾ ಆರೈಕೆ ಮಾಡುವುದು. ದೇವಿಯ ಸ್ವರೂಪವು ೩೬ ಅಥವಾ ಅದಕ್ಕಿಂತ ಅಧಿಕವಾದ ತತ್ವಗಳಿಂದ ಮಾಡಲ್ಪಟ್ಟಿದೆ. ದೇವಿಗೆ ಯಾವುದೇ ವಿಧವಾದ ಪೋಷಣೆಯ ಅವಶ್ಯಕತೆಯಿಲ್ಲ. ಸರ್ವಪೋಷಣೆಯೂ ಅವಳಿಂದಲೇ ಉದ್ಭವಿಸುತ್ತದೆ ಅಥವಾ ಈ ಸಮಸ್ತ ವಿಶ್ವವು ದೇವಿಯಿಂದ ಅವಳ ಮೂವತ್ತಾರು ತತ್ವಗಳ ಮೂಲಕ ಪೋಷಿಸಲ್ಪಡುತ್ತದೆ. ದೇವಿಯು ತನ್ನ ಭಕ್ತರ ಪ್ರೀತಿಯಿಂದ ಪೋಷಿಸಲ್ಪಡುತ್ತಾಳೆ ಎಂದೂ ಸಹ ಹೇಳಬಹುದು. ಅಥವಾ ದೇವಿಯು ಹಿಂದಿನ ನಾಮದಲ್ಲಿ ಚರ್ಚಿಸಲ್ಪಟ್ಟ ರಸ ಅಥವಾ ಸಾರದ ಮೂಲಕ ಪೋಷಿಸಲ್ಪಡುತ್ತಾಳೆ ಎಂದು ವಿವರಿಸಬಹುದು.
Purātanā पुरातना (802)
೮೦೨. ಪುರಾತನಾ
ಪುರಾತನವೆಂದರೆ ಅತ್ಯಂತ ಹಳೆಯದಾದದ್ದು. ದೇವಿಯನ್ನು ಹಾಗೆ ಸಂಭೋದಿಸಲಾಗಿದೆ ಏಕೆಂದರೆ ಆಕೆಯು ಪ್ರಥಮವಾಗಿ ಸೃಷ್ಟಿಸಲ್ಪಟ್ಟವಳು. ಶಿವನು ಮೊದಲು ಆಕೆಯನ್ನು ಸೃಷ್ಟಿಸಿದನು ತದನಂತರ ಸಮಸ್ತ ಸೃಷ್ಟಿಯು ಆಕೆಯಿಂದ ಹೊರಹೊಮ್ಮಿತು.
Pūjyā पूज्या (803)
೮೦೩. ಪೂಜ್ಯಾ
ಪೂಜ್ಯಾ ಎಂದರೆ ಪೂಜನೀಯಳು. ದೇವಿಯು ಎಲ್ಲದರಲ್ಲಿಯೂ ಪರಿಪೂರ್ಣಳಾಗಿರುವುದರಿಂದ ಆಕೆಯು ಪೂಜನೀಯಳು. ಸಾಮಾನ್ಯವಾಗಿ ಒಬ್ಬನ ರೂಪ ಮತ್ತು ಸ್ವಭಾವ ಜನ್ಯ ಗುಣಗಳು ಅವನನ್ನು ಪೂಜಾರ್ಹಗೊಳಿಸುತ್ತವೆ. ಇದು ಏಕೆಂದರೆ ಅಂತಹ ವ್ಯಕ್ತಿಗಳು ಧನಾತ್ಮಕ ಶಕ್ತಿಗಳಿಂದ ತುಂಬಿ ತುಳುಕುತ್ತಿರುತ್ತಾರೆ (ತಮ್ಮ ಧನಾತ್ಮಕ ಚಿಂತನೆ ಮತ್ತು ಸತ್ಕಾರ್ಯಗಳಿಂದಾಗಿ) ಮತ್ತದು ಅವರ ದೇಹದ ಮೂಲಕ ಪಸರಿಸುತ್ತಿರುತ್ತದೆ. ಎಷ್ಟೇ ಆದರೂ ದೇವಿಯು ವಿಶ್ವದ ಸಮಸ್ತ ಶಕ್ತಿಯ ಮೂರ್ತರೂಪಳಲ್ಲವೇ? ಹಾಗಾಗಿ ಅವಳು ಸಹಜವಾಗಿಯೇ ಪೂಜ್ಯಳಾಗಿದ್ದಾಳೆ. ನಾಮ ೨೧೩ ಮಹಾಪೂಜ್ಯ ಎನ್ನುವುದನ್ನು ಗಮನಿಸಿ.
ಇನ್ನಷ್ಟು ವಿವರಣೆಗಳು: ಒಳ್ಳೆಯ ಧ್ಯಾನವು ಧನಾತ್ಮಕ ಪ್ರಭಾವಳಿಯನ್ನುಂಟು ಮಾಡುತ್ತದೆ. ಧ್ಯಾನವನ್ನು ಹೊರತು ಪಡಿಸಿ, ಸಹಜೀವಿಗಳ ಕುರಿತಾದ ಪ್ರೇಮ ಭಾವನೆಯು ಅತ್ಯಂತ ಉನ್ನತವಾದ ಧನಾತ್ಮಕ ಶಕ್ತಿಯ ಮೂಲವಾಗಿದೆ. ನಿಜವಾದ ಪ್ರೇಮವು ಒಬ್ಬ ವ್ಯಕ್ತಿಯು ಗಿಡ ಮತ್ತು ಪ್ರಾಣಿಗಳೊಂದಿಗೂ ಸಹ ಸಂಪರ್ಕವೇರ್ಪಡುವಂತೆ ಮಾಡುತ್ತದೆ. ಒಂದುವೇಳೆ ಒಬ್ಬನು ಒಂದು ಗಿಡದಿಂದ ಹೂವೊಂದನ್ನು ಕಿತ್ತರೆ, ಅದಕ್ಕಾಗಿ ಅವನು ಆ ಗಿಡಕ್ಕೆ ಕ್ಷಮಾಪಣೆಯನ್ನು ಅರಹುವ ಗುಣವನ್ನು ರೂಢಿಸಿಕೊಳ್ಳಬೇಕು. ಆ ಹೂವು ಗಿಡಕ್ಕೆ ಸೇರಿದ್ದು. ಹೂವು ಮತ್ತು ಹಣ್ಣುಗಳು ಸಸ್ಯಸಾಮ್ರಾಜ್ಯದಲ್ಲಿ ಅವುಗಳ ಮಕ್ಕಳಿದ್ದಂತೆ. ಇಂತಹ ಸಣ್ಣಪುಟ್ಟ ವಿಚಾರಗಳು ಉನ್ನತವಾದ ಆಧ್ಯಾತ್ಮಿಕ ಸ್ತರಗಳನ್ನು ಹೊಂದುವುಕ್ಕೆ ಮಾರ್ಗಗಳಾಗಿವೆ.
Puṣkarā पुष्करा (804)
೮೦೪. ಪುಷ್ಕರಾ
ದೇವಿಯು ತನ್ನೆಲ್ಲಾ ಭಕ್ತರಿಗೆ ಪುಷ್ಟಿಯನ್ನು ಕೊಡುತ್ತಾಳೆ ಎಂದು ಈ ನಾಮವು ಹೇಳುತ್ತದೆ. ನಾಮ ೮೦೧ ’ಪುಷ್ಟಿ’ಯಲ್ಲಿ ದೇವಿಯು ಪೋಷಿಸಲ್ಪಡುತ್ತಾಳೆ ಎಂದರೆ ಈ ನಾಮವು ಆಕೆಯು ಪೋಷಿಸುತ್ತಾಳೆ ಎಂದು ಹೇಳುತ್ತದೆ. ಇದೇ ವಿಧವಾದ ಅರ್ಥ ಸರಣಿಯಿರುವ ೧೫೮ ಮತ್ತು ೧೫೯ ಹಾಗು ೧೬೨ ಮತ್ತು ೧೬೩ನೇ ನಾಮಗಳನ್ನು ಹೋಲಿಕೆ ಮಾಡಿ.
ರ ಮತ್ತು ಲ ಇವುಗಳಲ್ಲಿ ವ್ಯತ್ಯಾಸವಿಲ್ಲವೆಂದು ಹೇಳಲಾಗುತ್ತದೆ. ಈ ನಾಮದ ಕಡೆಯ ಅಕ್ಷರವಾದ ರಾ ಎನ್ನುವುದರ ಜಾಗದಲ್ಲಿ ಲಾ ಇರಿಸಿದರೆ ಆಗ ಪುಷ್ಕರಾದ ಬದಲಾಗಿ ನಮಗೆ ಪುಷ್ಕಲಾ ಸಿಗುತ್ತದೆ. ಪುಷ್ಕಲ ಎಂದರೆ ವಿಪುಲವಾದ, ಹೇರಳವಾದ, ತುಂಬಿದ, ಪರಿಪೂರ್ಣವಾದ, ಸಮೃದ್ಧವಾದ, ಯಥೇಚ್ಛವಾದ ಮೊದಲಾದ ಅರ್ಥಗಳಿವೆ. ಪುಷ್ಕಲ ಎನ್ನುವುದು ಶಿವನ ಒಂದು ಬಿರುದಾಗಿದೆ. ಪುಷ್ಕಲಂ ಎಂದರೆ ಅದು ದೇವಿಯ ನಿವಾಸ ಸ್ಥಾನವಾಗಿರುವ ಮೇರು ಪರ್ವತವಾಗಿರಬಹುದು. ಈ ಸಂದರ್ಭದಲ್ಲಿ ಈ ನಾಮವು ದೇವಿಯ ಗುಣವಾದ ತುಂಬಿದ, ಪರಿಪೂರ್ಣವಾದ ಮೊದಲಾದವುಗಳನ್ನು ಸೂಚಿಸಬಹುದು. ಶಿವನು ಸರ್ವವ್ಯಾಪಕನಾಗಿದ್ದಾನೆ ಮತ್ತು ಅವನ ಸತಿಯಾದ ಶಕ್ತಿಯೂ ಸಹ ಸರ್ವವ್ಯಾಪಕವಾಗಿದ್ದಾಳೆ. ಅಥವಾ ಇದು ಅವಳ ಆವಾಸ ಸ್ಥಾನವಾದ ಶ್ರೀ ಚಕ್ರದಲ್ಲಿ ಸೂಚಿಸಿರುವ ಮಹಾ ಮೇರು ಸಹ ಆಗಿರಬಹುದು.
Puṣkarekṣaṇā पुष्करेक्षणा (805)
೮೦೫. ಪುಷ್ಕರೇಕ್ಷಣಾ
ಪುಷ್ಕರ ಎನ್ನುವುದಕ್ಕೆ ಹಲವಾರು ಅರ್ಥಗಳಿವೆ, ಉದಾಹರಣೆಗೆ ಕಮಲದಂತಹ ಕಣ್ಣುಗಳು, ನೀಲಿ ವರ್ಣದ ಕಮಲದ ಹೂವು, ಸ್ವರ್ಗ, ಆಕಾಶ, ಭೂಮಿ, ಆನೆಯ ಸೊಂಡಿಲಿನ ತುದಿ ಭಾಗ, ಮೊದಲಾದವು. ಸೋಮ, ಮಂಗಳ ಅಥವಾ ಶನಿವಾರಗಳಂದು ಹುಣ್ಣಿಮೆಯಿದ್ದರೆ ಅಂತಹ ರಾತ್ರಿಗಳನ್ನು ಪುಷ್ಕರ ರಾತ್ರಿಗಳೆಂದು ಕರೆಯುತ್ತಾರೆ. ನೃತ್ಯ ಮಾಡುವ ಕಲೆ, ಮತ್ತಿನಿಂದ ಕೂಡಿರುವುದು ಮೊದಲಾದವಕ್ಕೂ ಸಹ ಪುಷ್ಕರ ಎಂದು ಕರೆಯುತ್ತಾರೆ. ಶಿವನನ್ನು ಪುಷ್ಕರನೆಂದು ಕರೆಯುತ್ತಾರೆ. ಇಲ್ಲಿ ಈ ನಾಮವನ್ನು ವಾಗ್ದೇವಿಗಳು ಇಲ್ಲಿ ಏಕೆ ಇರಿಸಿದ್ದಾರೆಂದು ಹೇಳುವುದು ಕಷ್ಟಕರವಾಗಿದೆ. ಒಂದು ವೇಳೆ ಈ ನಾಮವನ್ನು ದೇವಿಯ ಕಣ್ಣುಗಳ ವರ್ಣನೆಯಾಗಿ ತೆಗೆದುಕೊಂಡರೆ ಇಂತಹ ಹಲವಾರು ನಾಮಗಳಿವೆ ಉದಾಹರಣೆಗೆ ಕಾಮಾಕ್ಷೀ (ನಾಮ ೬೨), ಮೃಗಾಕ್ಷೀ (ನಾಮ ೫೬೧) ಇವು ದೇವಿಯ ಕಣ್ಣುಗಳ ಅಲೌಕಿಕ ಸೌಂದರ್ಯವನ್ನು ವರ್ಣಿಸುತ್ತವೆ.
ಪುಷ್ಕರ ಎಂದರೆ ಭೂಮಿಯಲ್ಲಿ ಜಲಪ್ರಳಯವನ್ನುಂಟು ಮಾಡಿದ ನೀರನ್ನೂ ಸಹ ಸೂಚಿಸುತ್ತದೆ. ಮಹಾಪ್ರಳಯದ ಕಾಲದಲ್ಲಿ ಭೂಮಿಯು ನೀರಿನಿಂದ ಸುತ್ತಲೂ ಆವರಿಸಲ್ಪಟ್ಟು ಅದು ಸರ್ವನಾಶಕ್ಕೆ ಕಾರಣವಾಯಿತು. ಈಕ್ಷಣ ಎಂದರೆ ದೃಷ್ಟಿ. ಈ ಸಂದರ್ಭದಲ್ಲಿ ಪುಷ್ಕರೇಕ್ಷಣ ಎಂದರೆ ಪ್ರಳಯ ಕಾಲದಲ್ಲಿ ದೇವಿಯು ತನ್ನ ತಾಯ್ತತನದ ದೃಷ್ಟಿಯಿಂದ ಪುನಸ್ಸೃಷ್ಟಿಯೆಡೆಗೆ ನೋಡುವುದೇ ಆಗಿದೆ. ಸಂದರ್ಭಕ್ಕನುಗುಣವಾಗಿಯೂ ಸಹ ಈ ವಿವರಣೆಯು ಸಮಂಜಸವೆನಿಸುತ್ತದೆ. ಅಥವಾ ಪುಷ್ಕರಾ ನಂತರ ಪುಷ್ಕರೇಕ್ಷಣಾ ಎಂದು ಬಂದಿರುವುದರಿಂದ ದೇವಿಯು ಎಲ್ಲವನ್ನೂ ಪುಷ್ಕಳವಾಗಿ ಹೊಂದಿರುವುದಲ್ಲದೇ ಆಕೆಯು ಎಲ್ಲವನ್ನೂ ಪರಿಪೂರ್ಣ ದೃಷ್ಟಿಯಿಂದ ನೋಡುತ್ತಾಳೆ ಎಂದೂ ಈ ನಾಮವನ್ನು ವಿಶ್ಲೇಷಿಸಬಹುದು.
Paraṃjyotiḥ परंज्योतिः (806)
806. ಪರಂಜ್ಯೋತಿಃ
ಪರಾ ಎಂದರೆ ಶ್ರೇಷ್ಠವಾದ, ಜ್ಯೋತಿ ಎಂದರೆ ಬೆಳಕು ಮತ್ತು ಪರಂಜ್ಯೋತಿಃ ಎಂದರೆ ಶ್ರೇಷ್ಠವಾದ ಬೆಳಕು. ಶ್ರೇಷ್ಠವಾದ ಬೆಳಕು ಎನ್ನುವುದು ಪರಬ್ರಹ್ಮವನ್ನು ಸೂಚಿಸುತ್ತದೆ. ಈ ಶ್ರೇಷ್ಠವಾದ ಬೆಳಕು ಸ್ವಯಂ ಪ್ರಕಾಶಕವಾಗಿದ್ದು ಅದು ಬ್ರಹ್ಮದ ಪ್ರಕಾಶ ರೂಪವಾಗಿದೆ. ಈ ಪರಮ ಜ್ಯೋತಿಯಿಂದಲೇ, ಸೂರ್ಯನೂ ಸಹ ಬೆಳಕನ್ನು ಹೊಂದಿ ಅವನು ನಮಗೆ ತಿಳಿದಿರುವ ವಿಶ್ವವನ್ನೆಲ್ಲಾ ಬೆಳಗುತ್ತಾನೆ.
ಹಲವಾರು ಉಪನಿಷತ್ತುಗಳು ಈ ಜ್ಯೋತಿಯನ್ನು ಕುರಿತು ಹೇಳುತ್ತವೆ.
ಬೃಹದಾರಣ್ಯಕ ಉಪನಿಷತ್ತು (೪.೪.೧೬) ಹೇಳುತ್ತದೆ, "ಎಲ್ಲಾ ಬೆಳಕುಗಳ ಬೆಳಕಾಗಿರುವ ಆ ಅಮೃತದ ಬೆಳಕನ್ನು ಕುರಿತು ಎಲ್ಲಾ ದೇವತೆಗಳು ದೀರ್ಘಾಯುಸ್ಸಿಗಾಗಿ ಧ್ಯಾನಿಸುತ್ತಾರೆ". ಇದರ ಅರ್ಥವೇನೆಂದರೆ ದೇವತೆಗಳು ಈ ಪರಂಜ್ಯೋತಿಯನ್ನು ತಮ್ಮ ಅಮೃತತ್ವಕ್ಕಾಗಿ ಧ್ಯಾನಿಸುತ್ತಾರೆ.
ಕಠೋಪನಿಷತ್ತು (೨.೨.೧೫) ಈ ವಿಷಯವನ್ನು ಮತ್ತಷ್ಟು ವಿವರಿಸುತ್ತದೆ, "ಅಲ್ಲಿ ಸೂರ್ಯನಾಗಲಿ, ಚಂದ್ರನಾಗಲಿ, ನಕ್ಷತ್ರಗಳಾಗಲಿ ಪ್ರಕಾಶಿಸುವುದಿಲ್ಲ, ಮಿಂಚುಗಳೂ ಪ್ರಕಾಶಿಸುವುದಿಲ್ಲ, ಈ ಅಗ್ನಿಯು ಪ್ರಕಾಶಿಸುವುದಿನ್ನೆಲ್ಲಿ? ಪ್ರಕಾಶಿಸುತ್ತಿರುವ ಅವನನ್ನೇ (ಬ್ರಹ್ಮವನ್ನೇ) ಅನುಸರಿಸಿ ಎಲ್ಲವೂ ಪ್ರಕಾಶಿಸುತ್ತಿರುವುದು. ಅವನ ಪ್ರಕಾಶದಿಂದಲೆ ಇದೆಲ್ಲವೂ ಪ್ರಕಾಶಿಸುತ್ತಿರುವುದು. ಈ ಮಂತ್ರವು ಮುಂಡಕೋಪನಿಷತ್ತಿನಲ್ಲಿಯೂ (೨.೨.೧೧) ಬರುತ್ತದೆ. ಇದುವೇ ಪ್ರಸಿದ್ಧವಾದ ದೀಪಾರಾಧನ ಮಂತ್ರವಾಗಿದೆ.
ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ
ನೇಮಾ ವಿದ್ಯುತೋ ಭಾಂತಿ ಕುತೋsಯಮಗ್ನಿಃ|
ತಮೇವ ಭಾಂತಮನುಭಾತಿ ಸರ್ವಂ
ತಸ್ಯ ಭಾಸಾ ಸರ್ವಮಿದಂ ವಿಭಾತಿ||
न तत्र सूर्यो भाति न चन्द्रतारकं
नेमा विद्युतो भान्ति कुतोsयमग्निः।
तमेव भान्तमनुभाति सर्वं
तस्य भासा सर्वमिदं विभाति॥
ಛಾಂದೋಗ್ಯ ಉಪನಿಷತ್ತು (೮.೩.೪) ಹೇಳುತ್ತದೆ, "ಪರಂ ಜ್ಯೋತಿರುಪಸಂಪದ್ಯ" ಅಂದರೆ ಪರಮೋನ್ನತವಾದ ಬೆಳಕನ್ನು ಸೇರುವುದು. ಉಪನಿಷತ್ತಿನ ಆ ಶ್ಲೋಕದ ಪೂರ್ಣ ಸಾರ ಹೀಗಿದೆ, "ಯಾರು ಜ್ಞಾನಿಯೋ ಅವನು ಈ ಶರೀರಿದಿಂದ ಎದ್ದು ಪರಮ ಜ್ಯೋತಿಯನ್ನು ಸೇರಿ ತನ್ನ ನಿಜ ಸ್ವರೂಪವನ್ನು ತೋರುತ್ತಾನೆ. ಆ ಸ್ವರೂಪವೇ ಆತ್ಮವಾಗಿದೆ, ಅದುವೇ ಅಮೃತವು, ಅದುವೇ ಅಭಯವು, ಅದುವೇ ಬ್ರಹ್ಮ, ಆ ಬ್ರಹ್ಮವೇ ಸತ್ಯವಾಗಿದೆ".
ಯಾವಾಗ ಒಬ್ಬ ವ್ಯಕ್ತಿಯು ಅತ್ಯುನ್ನತವಾದ ಪ್ರಜ್ಞೆಯ ಸ್ತರದಲ್ಲಿ ಇರುತ್ತಾನೆಯೇ ಅವನಲ್ಲಿ ಸಾಕ್ಷಾತ್ಕಾರವು ಅರೆಕ್ಷಣದಲ್ಲಿ ಉಂಟಾಗುತ್ತದೆ, ಅವನೊಳಗೆ ಮಿಂಚಿನಂತಹ ಬೆಳಕುಗಳು ಕಾಣಿಸಿಕೊಳ್ಳುತ್ತವೆ. ದೇವಿಯು ಈ ವಿಧವಾದ ಸ್ವಯಂ ಪ್ರಕಾಶಕ ಬೆಳಕಿನಂತಿದ್ದಾಳೆ (ಪರಬ್ರಹ್ಮ). ಈ ಹಂತವನ್ನು ತಲುಪಲು ಯಾವುದೇ ವಿಧವಾದ ಜಪ ಅಥವಾ ತಪದ ಅವಶ್ಯಕತೆಯಿಲ್ಲ. ಕೇವಲ ಒಬ್ಬನ ಆಲೋಚನೆಯ ವಿಧಾನವೇ ಇಲ್ಲಿ ಗಣನೆಗೆ ಬರುತ್ತದೆ. ಆದ್ದರಿಂದ ಬೃಹದಾರಣ್ಯಕ ಉಪನಿಷತ್ತು (೩.೯.೧೦), "ಮನೋಜ್ಯೋತಿಃ" ಅಂದರೆ "ಮನಸ್ಸೇ ಬೆಳಕು" ಎಂದು ಹೇಳುತ್ತದೆ.
Paraṃdhāma परंधाम (807)
೮೦೭. ಪರಂಧಾಮ
ಪರಮ+ಧಾಮ=ಪರಂಧಾಮ. ಪರಮವೆಂದರೆ ಅತ್ಯಂತ ಶ್ರೇಷ್ಠವಾದ ಮತ್ತು ಧಾಮ ಎಂದರೆ ಪ್ರಭೆ (ತೇಜಸ್ಸು) ಅಥವಾ ಅತಿಮಾನವರ ಒಂದು ವರ್ಗ ಅಥವಾ ಆವಾಸಸ್ಥಾನ ಎನ್ನುವ ಅರ್ಥಗಳನ್ನು ಹೊಂದಿದೆ. ಭಗವದ್ಗೀತ (೧೫.೬) ಹೇಳುತ್ತದೆ, "ಸೂರ್ಯನಾಗಲಿ, ಚಂದ್ರನಾಗಲಿ ಅಥವಾ ಅಗ್ನಿಯಾಗಲಿ ಆ ಪರಮೋನ್ನತ ಸ್ವಯಂಪ್ರಕಾಶದ ಹಂತವನ್ನು ಬೆಳಗಿಸಲಾರರು, ಅದನ್ನು ಹೊಂದಿದವರು ಈ ಲೋಕಕ್ಕೆ ಮತ್ತೆ ಹಿಂತಿರುಗಿ ಬರುವುದಿಲ್ಲ. ಅದುವೇ ನನ್ನ ಶ್ರೇಷ್ಠವಾದ ನಿವಾಸಸ್ಥಾನವಾಗಿದೆ”. ಇಲ್ಲಿ ಕೃಷ್ಣನು ಶ್ರೇಷ್ಠವಾದ ನಿವಾಸಸ್ಥಾನಕ್ಕೆ ಪರಂಧಾಮ ಎನ್ನುವ ಪದವನ್ನು ಬಳಸುತ್ತಾನೆ.
ಹಿಂದಿನ ನಾಮವು ದೇವಿಯು ಸ್ವಯಂ ಪ್ರಕಾಶಕಳು ಎಂದು ಹೇಳಿದರೆ, ಈ ನಾಮವು ಆ ಪ್ರಕಾಶದ ಸ್ವರೂಪದ ಕುರಿತಾಗಿ ಹೇಳುತ್ತದೆ. ಆ ಪರಮೋನ್ನತ ಬೆಳಕಿನಿಂದ ಪರಮೋನ್ನತ ಪ್ರಭೆಯು ಹೊರಡುತ್ತದೆ. ಆ ಪರಮ ಬೆಳಕು ಮತ್ತು ಅದರ ತೇಜಸ್ಸು (ಪ್ರಭೆ) ಜೊತೆಯಾಗಿ ಇರುತ್ತವೆ.
ಅತ್ಯುನ್ನತ ಸ್ತರದ ಪ್ರಜ್ಞೆಯಲ್ಲಿ, ಒಬ್ಬ ವ್ಯಕ್ತಿಯು ಮೊದಲು ಆಲೋಚನೆಯ ಮೂಲಕ ಪರಂಧಾಮವನ್ನು ನಿರ್ಮಿಸಿಕೊಳ್ಳುತ್ತಾನೆ, ಆಮೇಲೆ ಪರಂಧಾಮದೆಡೆಗೆ ಧಾವಿಸುತ್ತಾನೆ ಮತ್ತು ಪರಂಧಾಮವನ್ನು ಅಧಿಗಮಿಸಿದ ನಂತರ ಅವನು ಪರಂಜ್ಯೋತಿಯನ್ನು ಸೇರುತ್ತಾನೆ. ಇದು ಬ್ರಹ್ಮದೊಂದಿಗೆ ಐಕ್ಯವಾಗುವ ವಿಧಾನವಾಗಿದೆ. ಯಾವಾಗ ಅವನು ತೇಜಸ್ಸಿನ ಪ್ರಭೆಯನ್ನು (ಪರಂಧಾಮವನ್ನು) ಪ್ರವೇಶಿಸುತ್ತಾನೆಯೋ ಅವನಿಗೆ ಪರಮಾನಂದದ ಸುರಿಮಳೆಯಾಗುತ್ತದೆ ಮತ್ತು ಅವನು ಇನ್ನಷ್ಟು ಮುಂದುವರೆದಾಗ, ಅವನು ಸ್ವಯಂ ಪ್ರಕಾಶಕ ಬ್ರಹ್ಮದೊಳಗೆ (ಪರಂಜ್ಯೋತಿಯೊಳಗೆ) ಐಕ್ಯನಾಗುತ್ತಾನೆ.
ಕಠೋಪನಿಷತ್ತಿನ (೧.೩.೯), "ತದ್ವಿಷ್ಣೋಃ ಪರಮಂ ಪದಮ್" ಅಂದರೆ "ಆ ಅತ್ಯುನ್ನತ ಸ್ತರದಲ್ಲಿ ಜೀವಾತ್ಮವು ಪರಮಾತ್ಮದಲ್ಲಿ ಲೀನವಾಗುತ್ತದೆಯೋ" ಎನ್ನುವ ವಾಕ್ಯವನ್ನು ಜ್ಞಾಪಿಸಿಕೊಳ್ಳುವುದಕ್ಕೆ ಇದು ಅತ್ಯಂತ ಸೂಕ್ತ ಸಂದರ್ಭವಾಗಿದೆ. (ವಿಷ್ಣುವನ್ನು ಪರಂಧಾಮ ಎಂದೂ ಕರೆಯುತ್ತಾರೆ).
ಪ್ರಭೆಯ ಕುರಿತು ಯೋಗಿಯೊಬ್ಬನ ಅನುಭವಗಳ ಬಗೆಗೆ ಕೆಲವೊಂದು ವಿವರಣೆಗಳು:
ಒಬ್ಬ ವ್ಯಕ್ತಿಯು ಬುದ್ಧ ಅಥವಾ ಸಾಕಷ್ಟು ಜಾಗೃತ ಚೇತನವಾಗಿಲ್ಲದಿದ್ದರೆ, ಅವನು ಬ್ರಹ್ಮದ ಪ್ರಭೆಯನ್ನು ತಡೆಹಿಡಿಯಬಲ್ಲ ಶಕ್ತಿಯನ್ನು ಹೊಂದಿರಲಾರ. ಜೀವರಸದ ಫಿರಂಗಿ ಸಿಡಿಸಲ್ಪಟ್ಟಂತೆ ಒಬ್ಬನಿಗೆ ಅನುಭವವಾಗುತ್ತದೆ. ಅಂದರೆ ಒಂದು ಪ್ರಭಲವಾದ ಅಸ್ತ್ರದಿಂದ ಹೊಡೆದುರುಳಿಸಲ್ಪಟ್ಟಂತೆ ಅನಿಸುತ್ತದೆ. ಬ್ರಹ್ಮದ ಪ್ರಭೆಯು ಕ್ಷಿಪ್ರವಾದ ಆದರೆ ನಿರಂತರವಾದ ಶಕ್ತಿಯ ತರಂಗಗಳಿಂದ ನಿಮ್ಮನ್ನು ಸಿಡಿಯುವಂತೆ ಮಾಡುತ್ತದೆ. ಇದು ವಿದ್ಯುದಾಘಾತದಂತೆ, ಯಾರು ಈ ವಿಧವಾದ ಅನುಭವ ಹೊಂದಲು ಸರಿಯಾಗಿ ತರಬೇತುಗೊಳಿಸಲ್ಪಟ್ಟಿರುವುದಿಲ್ಲವೋ ಅವರು ಪ್ರಜ್ಞಾಹೀನರಾಗದೆ ಅದನ್ನು ತಡೆದುಕೊಳ್ಳಲಾರರು. ಆದ್ದರಿಂದ ದೇವರು ಅವರಿಗೆ ನೇರವಾಗಿ ಇದ್ದಕ್ಕಿದ್ದಂತೆ ಅವರ ಮುಂದೆ ಪ್ರತ್ಯಕ್ಷನಾಗುವುದಿಲ್ಲ. ಒಂದು ವೇಳೆ ಅವನು ಹಾಗೆ ಪ್ರತ್ಯಕ್ಷನಾದರೆ ಅವರು ದೀರ್ಘಮೂರ್ಚಾವಸ್ಥೆಗೆ ಹೋಗಲ್ಪಟ್ಟಿದ್ದಾರೆಂದು ಅಥವಾ ಮತ್ತೇನೋ ಆಗಿದೆ ಎಂದು ಪರಿಭಾವಿಸಬಹದು. ಆದ್ದರಿಂದ ಪ್ರತಿಯೊಂದೂ ಯಾವ ರೀತಿ ಆಗಬೇಕೋ ಆ ವಿಧವಾಗಿ ಕಾರ್ಯನಿರತವಾಗಿದೆ ಮತ್ತು ಸೂಕ್ತ ಸಮಯದಲ್ಲಿ ಪ್ರಕಟವಾಗುತ್ತದೆ.
ಯಾವಾಗ ಬ್ರಹ್ಮದ ದಿವ್ಯ ಪ್ರಭೆಯ ಈ ವಿಧವಾಗಿ ತರಂಗಗಳಾಗಿ ತೋರುತ್ತದೆಯೋ, ಆಗ ನೀವು ಸಾಕಷ್ಟು ಜಾಗೃತ ಸ್ಥಿತಿಯಲ್ಲಿದ್ದರೆ, ನೀವು ಅದನ್ನು ತಡೆದುಕೊಳ್ಳಬಲ್ಲಿರಿ ಅಷ್ಟೇ ಅಲ್ಲ ಅದನ್ನು ಹಾಗೆಯೇ ಆನಂದಿಸಬಲ್ಲಿರಿ. ಯಾವಾಗ ಆ ಪ್ರಭೆಯ ನಿರಂತರ ಆಕ್ರಮಣದ ಪ್ರಭಾವವು ನಿಮ್ಮ ಮೇಲೆ ಉಂಟಾಗುತ್ತದೆಯೋ, ಆಗ ಹೇಳಬೇಕೆಂದರೆ, ನೀವು ನಿಮ್ಮ ಬಾಯಿಯನ್ನು ಅಗಲವಾಗಿ ತೆರೆಯುವುದಷ್ಟೇ ಅಲ್ಲದೆ (ವಿಸ್ಮಯ ಮುದ್ರೆಯನ್ನು ಹೊಂದುವುದಲ್ಲದೆ) ನಿಮ್ಮ ಕಣ್ಣುಗಳು ಆನಂದ ಬಾಷ್ಟಗಳಿಂದ ಕೂಡಿರುತ್ತವೆ. ಅದು ಒಂದು ಅಭೂತಪೂರ್ವ ಅನುಭವ! ಆ ವಿಧವಾದ ಅನುಭವವಾದ ಮೇಲೆ ಒಬ್ಬನು ಇಷ್ಟು ಕಾಲ ಏನು ಮಾಡುತ್ತಿದ್ದೆ ಎನ್ನುವ ಆಲೋಚನೆಗೆ ಬೀಳುತ್ತಾನೆ. ಆ ವಿಧವಾದ ಅನುಭವವನ್ನು ಹೊಂದದೇ ಇದ್ದು ಜೀವಿಸುವುದು ಬದುಕಿದ್ದರೂ ಸತ್ತಂತೆಯೇ, ಇದನ್ನು ಒಬ್ಬನು ಆ ದಿವ್ಯ ಪ್ರಭೆಯ ಅನುಭವವನ್ನು ಪಡೆಯುವುವವರೆಗೆ ಅರಿತುಕೊಳ್ಳಲಾರ. ಆದರೆ ಅದನ್ನು ತಡೆದುಕೊಳ್ಳುವುದಲ್ಲದೇ ಅದನ್ನು ಸಂತೋಷದಿಂದ ಅನುಭವಿಸ ಬೇಕೆಂದರೆ ಒಬ್ಬನು ಸಾಕಷ್ಟು ಜಾಗೃತ ಪ್ರಜ್ಞೆಯನ್ನು ಹೊಂದಿರಬೇಕು ಇಲ್ಲದಿದ್ದರೆ ಮನಸ್ಸು ಕಿತ್ತುಹೋದ ವಿದ್ಯುತ್ ಫ್ಯೂಸಿನಂತೆ ತಟಸ್ಥವಾಗುತ್ತದೆ. ಒಂದು ವೇಳೆ ಈ ರೀತಿಯಾಗಿ ಮನಸ್ಸು ಸ್ಥಬ್ದವಾಗದೇ ಹೋದರೆ ಅಂತಹ ತೀವ್ರತರವಾದ ಅನುಭವಕ್ಕೆ ಸಾಮಾನ್ಯವಾದ ಮನಸ್ಸುಗಳು ಜ್ವಲಿಸಿ ಹೋಗುತ್ತವೆ, ಎನ್ನುವುದು ನನ್ನ ಅನಿಸಿಕೆ (ಹೀಗೆಂದು ಮೂಲ ಲೇಖಕರು ಅಭಿಪ್ರಾಯ ಪಡುತ್ತಾರೆ). ಆದ್ದರಿಂದ ಪ್ರತಿಯೊಂದೂ ತನ್ನಷ್ಟಕ್ಕೆ ತಾನೇ ಸಹಜವಾಗಿ ಜರಗುತ್ತದೆ. ಒಬ್ಬನು ವೇಗವಾಗಿ ಸಾಗಬೇಕೆಂದುಕೊಳ್ಳುತ್ತಾನೆ ಆದರೆ ಅದು ಸಾಧ್ಯವಾಗದು, ಏಕೆಂದರೆ ಒಬ್ಬನ ಶರೀರ ಪ್ರಕೃತಿಯು ಅಂತಹ ಅನುಭವವನ್ನು ಹೊಂದಲು ಆಸ್ಪದ ಕೊಡುವುದಿಲ್ಲ. ಈ ವಿಧವಾದ ಅನುಭೂತಿಯನ್ನು ಹೊಂದಲು ಒಬ್ಬನು ಸೂಕ್ತವಾದ ಸಾಧನೆಯನ್ನು ಮತ್ತು ಯೋಗ್ಯತೆಯನ್ನು ಸಂಪಾದಿಸಿರ ಬೇಕು.
Paramāṇuḥ परमाणुः (808)
೮೦೮. ಪರಮಾಣುಃ
ದೇವಿಯು ಪರಮೋನ್ನತವಾದ ಅಣುವಾಗಿದ್ದಾಳೆ (ಮೂಲ ಕಣವಾಗಿದ್ದಾಳೆ). ಪರಮ ಅಣುವೆಂದರೆ ಅಣುವಿಗಿಂತಲೂ ಚಿಕ್ಕದಾಗಿರುವುದು ಅಂದರೆ ಚಿಕ್ಕದಕ್ಕಿಂತ ಚಿಕ್ಕ ಕಣವಾಗಿರುವುದು. ಇಂದಿನ ಸಂದರ್ಭದಲ್ಲಿ ಈ ಚಿಕ್ಕ ಕಣವನ್ನು ಪರಮಾಣುವಿನ ಭಾಗವಾದ ನ್ಯೂಟ್ರಾನಿಗೆ ಅಥವಾ ಅದಕ್ಕಿಂತಲೂ ಸೂಕ್ಮವಾದ ದೇವ ಕಣಕ್ಕೆ (God Particle) ಹೋಲಿಸಬಹುದು. ಈ ವಿಷಯವನ್ನು ಕಠೋಪನಿಷತ್ತು (೧.೨.೨೦) ವಿವರಿಸುತ್ತದೆ, "ಅಣೋಃ ಅಣಿಯಾನ್" ಅಂದರೆ ಅತೀ ಸಣ್ಣದಕ್ಕಿಂತ ಸಣ್ಣದು. ಸಣ್ಣದಕ್ಕಿಂತ ಅತೀ ಸಣ್ಣದು, ದೊಡ್ಡದಕ್ಕಿಂತ ಅತೀ ದೊಡ್ಡದನ್ನು ಕೊಡಮಾಡುತ್ತದೆ. ಸಮಸ್ತ ಸೃಷ್ಟಿಯು ಈ ಪರಮಾಣು ಅಥವಾ ಅಣೋಃ ಅಣಿಯಾನ್ (ನ್ಯೂಟ್ರಾನ್ ಕಣದಿಂದ) ಉದ್ಭವವಾಗುತ್ತದೆ.
ಅಣು ಎಂದರೆ ಮಂತ್ರವೆನ್ನುವ ಅರ್ಥವೂ ಇದೆ. ಆ ಅರ್ಥವನ್ನು ತೆಗೆದುಕೊಂಡಾಗ ಈ ಮಂತ್ರವು ದೇವಿಯ ಪಂಚದಶೀ ಮಂತ್ರವನ್ನು ಸೂಚಿಸುತ್ತದೆ. ಪರಾ ಎಂದರೆ ಶ್ರೇಷ್ಠ ಮತ್ತು ಅಣು ಎಂದರೆ ಮಂತ್ರ. ಪರಮ ಶ್ರೇಷ್ಠವಾದ ಮಂತ್ರವೆಂದರೆ ಅದು ಯಾವಾಗಲೂ ಪಂಚದಶೀ ಮಂತ್ರವಾಗಿರುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 801 - 808 http://www.manblunder.com/2010/06/lalitha-sahasranamam-meaning-801-808.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೭೭. ಲಲಿತಾ ಸಹಸ್ರನಾಮ ೮೦೧ರಿಂದ ೮೦೮ನೇ ನಾಮಗಳ ವಿವರಣೆ
ಶಿವನು ಮೊದಲು ಆಕೆಯನ್ನು ಸೃಷ್ಟಿಸಿದನು ತದನಂತರ ಸಮಸ್ತ ಸೃಷ್ಟಿಯು ಆಕೆಯಿಂದ ಹೊರಹೊಮ್ಮಿತು..........
ಆದರೆ ದೇವಿ ಪುರಾಣ ಮೊದಲು ಆಕೆಯೊಬ್ಬಳೆ ಇದ್ದಳು ನಂತರ ಆಕೆ ಎಲ್ಲವನ್ನು ಬ್ರಹ್ಮ ವಿಷ್ಣು ಶಿವ ನಂತರ ಸೃಷ್ಟಿಯನ್ನೆಲ್ಲ ಸೃಷ್ಟಿಸಿದಳು ಎನ್ನುತ್ತದೆ.....
In reply to ಉ: ೧೭೭. ಲಲಿತಾ ಸಹಸ್ರನಾಮ ೮೦೧ರಿಂದ ೮೦೮ನೇ ನಾಮಗಳ ವಿವರಣೆ by partha1059
ಉ: ೧೭೭. ಲಲಿತಾ ಸಹಸ್ರನಾಮ ೮೦೧ರಿಂದ ೮೦೮ನೇ ನಾಮಗಳ ವಿವರಣೆ
ನಿಮ್ಮ ಮಾತು ನಿಜ ಪಾರ್ಥರೆ, ಅದಕ್ಕೇ ಪ್ರಾರಂಭದ ಕಂತುಗಳಲ್ಲಿ ಪೌರಾಣಿಕ ಶಿವ ಮತ್ತು ಈ ಶಿವ ಬೇರೆ ಬೇರೆ ಎಂದು ಹೇಳಲಾಗಿತ್ತು. ನೀವು ಪ್ರಸ್ತಾಪಿಸಿರುವ ಶಿವನನ್ನು ಈ ಸಹಸ್ರನಾಮದುದ್ದಕ್ಕೂ ಗೊಂದಲವನ್ನು ನಿವಾರಿಸುವುದಕ್ಕೋಸ್ಕರ ರುದ್ರನೆಂದೇ ಪ್ರಯೋಗಿಸಲಾಗಿದೆ. ಇಲ್ಲಿ ಶಿವನೆಂದರೆ ಅವನು ಪರಬ್ರಹ್ಮದಿಂದ ಬೇರ್ಪಟ್ಟ ನಿರಾಕಾರ ರೂಪ ಮತ್ತು ದೇವಿಯು ಸಾಕಾರ ರೂಪ. ಅದಕ್ಕೇ ಈ ಸಹಸ್ರನಾಮದುದ್ದಕ್ಕೂ ಅವರನ್ನು ಪ್ರಕಾಶ ಮತ್ತು ವಿಮರ್ಶ ಎಂದು ಕರೆಯುತ್ತಾ ಸಾಗಿರುವುದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ೧೭೭. ಲಲಿತಾ ಸಹಸ್ರನಾಮ ೮೦೧ರಿಂದ ೮೦೮ನೇ ನಾಮಗಳ ವಿವರಣೆ
ಶ್ರೀಧರರೆ, "೧೭೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ವಿವರಣೆಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ಧ :-)
.
ಲಲಿತಾ ಸಹಸ್ರನಾಮ ೮೦೧ - ೮೦೮
_______________________________
.
೮೦೧. ಪುಷ್ಟಾ
ಮುವ್ವತ್ತಾರಕು ಹೆಚ್ಚು ತತ್ವಗಳಿಂದ ದೇವಿ ಸ್ವರೂಪ ಸೃಷ್ಟಿ
ಯಾವ ಪೋಷಣೆಯನು ಬೇಡದೆ, ದೇವಿಯೆಲ್ಲರಾ ಪುಷ್ಟಿ
ಸಮಸ್ತ ವಿಶ್ವ ಪೋಷಣೆ ಆರೈಕೆಯೆ ತತ್ವ ಮುಖೇನ ಸ್ಪಷ್ಟ
ಭಕ್ತರ ಪ್ರೀತಿಯಲೆಗೆ ತೋಯ್ದು ಪೋಷಿಸಲ್ಪಡುವ ಪುಷ್ಟಾ ||
.
೮೦೨. ಪುರಾತನಾ
ಪರಬ್ರಹ್ಮ ಪುರುಷ ಜಡಚೇತನ-ಶಿವದಿಂದ, ಪ್ರಕೃತಿ-ಶಕ್ತಿಯ ಸೃಷ್ಟಿ
ಅಣತಿ ಸ್ವೇಚ್ಛೆಯನಿತ್ತು ಲಲಿತಾಬ್ರಹ್ಮಕ್ಕೆ, ಹೊರ ಹೊಮ್ಮಿಸೆ ಸಮಷ್ಟಿ
ಸಮಸ್ತ ಸೃಷ್ಟಿ ಕೈಗೊಂಡವಳಲ್ಲವೆ ದೇವಿ, ಲೀಲಾಜಾಲಾ ಸಂತಾನ
ಸೃಷ್ಟಿಯ ಮೊದಲಿಗಳಾಗಿ ಅರ್ಧನಾರೀಶ್ವರಿ, ಸೃಷ್ಟಿಯ ಪುರಾತನ ||
.
೮೦೩. ಪೂಜ್ಯಾ
ಧ್ಯಾನ-ಸಹಜೀವಿಗೆ ಪ್ರೇಮದಿಂದ ಉನ್ನತ ಧನಾತ್ಮಕ ಪ್ರಭಾವಳಿ ಶಕ್ತಿ
ಗಿಡ ಪ್ರಾಣಿಗಳಲು ಸಂವಹನ, ಹೂಹಣ್ಣು ಗಿಡದ ಮಕ್ಕಳೆಂಬ ಆಸಕ್ತಿ
ಸಕಲ ಪರಿಪೂರ್ಣಳು ದೇವಿ ಪೂಜನೀಯಳು,ಸಹಜರೂಪ ಸ್ವಭಾವ
ವಿಶ್ವ ಮೂರ್ತ ರೂಪಿಣಿ, ಧನಾತ್ಮಕ ಶಕ್ತಿ ಚಿಂತನೆಗೆ ಪೂಜ್ಯಾ ಪ್ರಭಾವ ||
.
೮೦೪. ಪುಷ್ಕರಾ
ಪೋಷಿಸಲ್ಪಟ್ಟಾದಂತೆ ಪುಷ್ಟಿ, ಭಕ್ತರ ಪೋಷಿಸುತ ದೇವಿ ಪುಷ್ಕರಾ
ಪುಷ್ಕರವೆ ಪುಷ್ಕಲ ಶಿವನಾ ಬಿರುದು, ವಿಪುಲ-ಹೇರಳವಿಹ ಸಾರ
ಸಮೃದ್ಧ-ಯಥೇಚ್ಛ-ತುಂಬಿದ ದೇವಿ ಗುಣ ಪರಿಪೂರ್ಣತೆ ಸಂಕೇತಿಸಿ
ಸರ್ವವ್ಯಾಪಿ ಶಿವಶಕ್ತಿ ನಿವಾಸ ಸ್ಥಾನ ಮೇರು ಮಹಾಮೇರು ಸೂಚಿಸಿ ||
.
೮೦೫. ಪುಷ್ಕರೇಕ್ಷಣಾ
ಪುಷ್ಕರಾರ್ಥ ಪುಷ್ಕಲ-ಕಮಲನಯನ-ನೀಲಕಮಲ-ಸ್ವರ್ಗ-ಆಕಾಶ-ಇಳೆ
ಸೊಂಡಿಲತುದಿ-ಹುಣ್ಣಿಮೆರಾತ್ರಿ-ನೃತ್ಯ-ಮತ್ತಿನಗುಣ-ಶಿವಪುಷ್ಕರನಾಗಿರಲೆ
ಜಲಪ್ರಳಯ ತೊಳೆದ ನೀರತ್ತ, ಕರುಣಾ ಕಟಾಕ್ಷ ಬೀರಿ ಮರುಸೃಷ್ಟಿಗೆ ಕ್ಷಣ
ಪರಿಪೂರ್ಣ ಪುಷ್ಕಳತೆಯಲಿ ನೊಡುತೆಲ್ಲ, ಲಲಿತಾಸಂಪದ ಪುಷ್ಕರೇಕ್ಷಣಾ||
.
೮೦೬. ಪರಂಜ್ಯೋತಿಃ
ಪರಾ-ಶ್ರೇಷ್ಠ ಜ್ಯೋತಿ-ಬೆಳಕು ಪರಂಜ್ಯೋತಿಃ ಪರಬ್ರಹ್ಮ ಸ್ವಯಂಪ್ರಕಾಶ
ಸೂರ್ಯನಲಿ ಪ್ರತಿಫಲಿತ, ಅಮರತ್ವಕೆ ದೇವತೆ ಸಹಿತ ಬ್ರಹ್ಮ ವಿಶೇಷ
ರವಿ-ಶಶಿ-ತಾರೆ-ಮಿಂಚು-ಅಗ್ನಿ ಮಂಕಾಗಿಸೊ ಬ್ರಹ್ಮ, ಜ್ಞಾನಿಗೆ ಪರಮಗುರಿ
ನಿಜ ಸ್ವರೂಪಾತ್ಮಕೆ, ಮಿಂಚಂತೆ ಸತ್ಯ ಸಾಕ್ಷಾತ್ಕಾರ ಮನೋ ಜ್ಯೋತಿ ಏರಿ ||
.
೮೦೭. ಪರಂಧಾಮ
ಪರಮವೆ-ಶ್ರೇಷ್ಟ,ಧಾಮವೆ-ಪ್ರಭೆ,ತೇಜಸ್ಸು ಅತಿಮಾನವ ವಾಸ ಪರಂಧಾಮ
ಸೂರ್ಯಾಗ್ನಿಚಂದ್ರಾದಿಗೆ ಬೆಳಗಲತೀತ ಹಂತ, ಹಿಂತಿರುಗಿ ಬರದಾ ಪರಮ
ಸ್ವಯಂಪ್ರಕಾಶಕ ದೇವಿ ಲಲಿತಾಬ್ರಹ್ಮ, ಪರಮೋನ್ನತ ಪ್ರಭೆಯಾಗಿ ಪ್ರಕಾಶ
ಪರಮ ಬೆಳಕು ತೇಜಸ್ಸಿನ ಪ್ರಭೆ ಸಹಿತ ಶ್ರೇಷ್ಠ, ದೇವಿ ನಿವಾಸ ಮುಕ್ತಿಗೆ ದರ್ಶ ||
.
ಅತ್ಯುನ್ನತ ಪ್ರಜ್ಞಾ ಸ್ತರದಲಿ, ವ್ಯಕ್ತಿಯಾಲೋಚನೆ ನಿರ್ಮಿಸಿ ಪರಂಧಾಮ
ಧಾವಿಸಿ ಪರಂಧಾಮವಧಿಗಮಿಸಿ ಸೇರೆ ಪರಂಜ್ಯೋತಿ, ಬ್ರಹ್ಮೈಕ್ಯಕೆಸಮ
ಪರಂಧಾಮದ ತೇಜೋಪ್ರಭೆಯಲಿ ಪರಮಾನಂದ ವರ್ಷಧಾರೆ ಹರಿದ
ಮುಳುಗೆದ್ದು ನಡೆದು ಜೀವಾತ್ಮ ಪರಮಾತ್ಮದೆ ಲೀನ ಪರಂಜ್ಯೋತಿಪದ ||
.
ಜಾಗೃತವಿರದಿರೆ ಚೇತನ, ಭರಿಸಲಾಗದು ತೇಜೋ ಬ್ರಹ್ಮನ ಶಕ್ತಿ ಘನ
ಸಾಧನೆ ಯೋಗ್ಯತೆ ಸಿದ್ದತೆ ವಿನಃ, ವಿದ್ಯುತ್ತಿನ ಸತತ ತರಂಗಾಲಿಂಗನ
ಸರಿಸೂಕ್ತ ಸಾವಕಾಶ ಪ್ರಕಟವಾಗೆ ತೇಜೋಪ್ರಭೆ ವಿಸ್ಮಯಾನಂದಬಾಷ್ಪ
ಜಾಗೃತ ಪ್ರಜ್ಞಾವಂತನಿಗನುಭೂತಿ ದಿವ್ಯಪ್ರಭೆ ಆಯಾಚಿತ ಭರಿಸೆ ತಾಪ ||
.
೮೦೮. ಪರಮಾಣುಃ
ಸೂಕ್ಷ್ಮದತಿಸೂಕ್ಷ್ಮ ಸೂಕ್ಷ್ಮಾತಿಸೂಕ್ಷ್ಮ ಪರಮಾಣು ದೇವಕಣವಾಗಿ ದೇವಿ
ಮೂಲ ಕಣ ರೂಪಿಣಿಯಾಗಿ ಸಮಸ್ತ ಸೃಷ್ಟಿಯ ಉದ್ಘಾಟಿಸುವ ಪದವಿ
ಅಣುವೆನೆ ಮಂತ್ರ, ಪರಮ ಅಣು ಪಂಚದಶೀಮಂತ್ರ ಜೇಷ್ಟ ಶ್ರೇಷ್ಠವಿಹ
ಬೃಹತ್ತಿನ ಬೃಹತ್ತಾದಂತೆ ಮಹತ್ತು, ಕಣಾತಿಕಣರೂಪಿಣಿ ಪರಮಾಣುಃ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು