ಸ್ಪರ್ಶತೆಯೊಳಗು ಅಸ್ಪೃಶ್ಯತೆ...

ಸ್ಪರ್ಶತೆಯೊಳಗು ಅಸ್ಪೃಶ್ಯತೆ...

ಚಿತ್ರ

ಅಸ್ಪೃಶ್ಯತೆಯು ಭಾರತದಲ್ಲಿ ಸಾಂಕ್ರಾಮಿಕ ರೋಗವಿದ್ದಂತೆ,ಅದು ಒಂದು ಕಾಲಘಟ್ಟದಿಂದ ಮತ್ತೋಂದು ಕಾಲಘಟ್ಟಕ್ಕೆ, ಮತ್ತೋಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಶೋಷಣೆಯ ಶೈಲಿಯನ್ನೆ ಬದಲಾಯಿಸಿ ಕೊಳ್ಳುತ್ತಿದೆ. ಈ ದೇಶದಲ್ಲಿ ಅಂಬೇಡ್ಕರ್‍ ಪೂರ್ವ ಅಸ್ಪೃಶ್ಯತೆಗೂ, ಅಂಬೇಡ್ಕರ್‍ ಹೋರಾಟದ ನಂತರದ ಅಸ್ಪೃಶ್ಯತೆಗೂ, ಇವತ್ತಿನ ಸಮಕಾಲೀನ ಸಮಾಜದ ಸ್ಪೃಶ್ಯತೆಗೂ ತುಂಬಾ ವ್ಯತ್ಯಾಸಗಳಿವೆ. ನಾವು ರಾಜಕೀಯವಾಗಿ, ಸಾಂಸ್ಕ್ರುತಿಕವಾಗಿ, ‌ವೈಜ್ಞಾನಿಕವಾಗಿ ಹಾಗೂ ವ್ಯಾಪಾರ ವಹಿವಾಟು ಮುಂತಾದವು ಸೇರಿದಂತೆ ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಳ್ಳುವುದರ ಜೊತೆಗೆ ಜಾತೀಯತೆಯನ್ನು ಕೊಂಡೊಯ್ಯುತಿದ್ದೇವೆ. ಮಾನವ ತಾನೆಷ್ಟೆ ನಾಗರೀಕ ಪ್ರಜ್ಞೆಯನ್ನು ಬೆಳಸಿಕೊಳ್ಳುತಿದ್ದರು, ವೈಚಾರಿಕ ಬೆಳವಣಿಗೆಯನ್ನು ಹೊಂದುತಿದ್ದರು, ಮಾನಸಿಕವಾಗಿ ಎಲ್ಲೋ ಒಂದು ಕಡೆ ಜಾತಿಯ ಅಂತರ ಹೆಚ್ಚುತ್ತಿದೆಯೆ ಹೊರತು ಕಡಿಮಡಯಾಗಿಲ್ಲ. ಶೋಷಿತ ಸಮುದಾಯಗಳು ಸಾರ್ವತ್ರಿಕವಾಗಿ ಪ್ರತಿನಿಧಿಸುತ್ತಿದ್ದರು ಕೂಡ ಅಸ್ಪೃಶ್ಯತಾ ಪರಂಪರೆ ಮತ್ತೊಂದು ಕಡೆ ಬೇರೊಂದು ಮಗ್ಗಲಿನ ಮೂಲಕ ಕಂಡರು ಕಾಣದಂಗೆ ಹೊರಳಾಡುತ್ತಿದೆ. ಬಹಳ ಹಿಂದಿನ ಕಾಲದಲ್ಲಿ ಅಂದರೆ ಹಳೆ ತಲಮಾರಿಲ್ಲಿ ಅನ್ನಕ್ಕೆ ಕೈಚಾಚುವ, ಮೇಲ್ಜಾತಿಯವರಿಗೆ ನಮಸ್ಕರಿಸುವ, ಮನೆಯ ಒಳಗೆ ಹೋಗದೆ ಹೊರಗೆ ನಿಲ್ಲುವ ಹಾಗೂ ದೇವಾಲಯದ ಪ್ರವೇಶ ಮಾಡದೆ ಹೊರಗುಳಿಯುವ ಮತ್ತು ಮುಟ್ಟಿಸಿಕೊಂಡರೆ ಬಹಿಷ್ಕಾರಕ್ಕೆ ಒಳಗಾಗುವ ಅನೇಕ ರೀತಿಯ ಆಚರಣೆ, ಕಟ್ಟುಪಾಡುಗಳಿಗೆ ಒಳಗಾಗಿ ಬದುಕುತಿದ್ದುದ್ದು ಉಂಟು. ಆದರೆ ಅದು ಇವತ್ತಿನ ದಿನದಲ್ಲಿಯೂ ಕೆಲವೂಂದು ಕಡೆ ಇನ್ನೂ ಚಾಲ್ತಿಯಲ್ಲಿದೆ, ಕೆಲವೂಂದು ಕಡೆ ಸುಧಾರಣೆಯಾಗಿದೆ. ಅದು ಎಷ್ಟರ ಮಟ್ಟಿಗೆ ಸುಧಾರಣೆಯಾಗಿದೆ ಎಂದರೆ, ಯಾವುದೇ ಒಬ್ಬ ಮೇಲ್ಜಾತಿಯವರ ಮನೆಯಲ್ಲಿ ಅಥವಾ ಹೋಟೆಲ್ಲುಗಳಲ್ಲಿ ಊಟ, ತಿಂಡಿ ಅಥವಾ ಕಾಫಿ ಸೇವಿಸಬೇಕಾದರೆ ಇವರಿಗೆ ಪ್ರತ್ಯೆಕವಾಗಿ ಮೀಸಲಿಡುತ್ತಿದ್ದ ತಟ್ಟೆ ಅಥವಾ ಲೋಟವ‌ನ್ನು ತಾವೇ ತೊಳೆದುಕೊಂಡು ಸ್ವೀಕರಿಸಬೇಕಿತ್ತು. ಸೇವಿಸಿದ ತದನಂತರ ಮತ್ತೆ ಅದನ್ನು ತೊಳೆದು ಪ್ರತ್ಯೇಕ ಜಾಗದಲ್ಲಿಯೇ ಇರಿಸಬೇಕಿತ್ತು. ಆಬರೆ ಇದು ಪ್ರಸ್ತುತದಲ್ಲಿ ಈ ರೀತಿಯ ಆಚರಣೆಗಳು ನಡೆಯದಿದ್ದರೂ ಇದರ ಬದಲಾಗಿ ಪ್ಲಾಸ್ಟಿಕ್ ಲೋಟ, ತಟ್ಟೆಗಳು ಚಾಲ್ತಿಗೆ ಬಂದಿವೆ . ಆಗಾಗಿ ಇದನ್ನು ಅಸ್ಪೃಶ್ಯತೆಯ ಹೊಸ ಆಯಾಮ ಕರೆಯಲೇಬೇಕು.

ಇಡೀ ಸಮಾಜವನ್ನು ಸೂಕ್ಷವಾಗಿ ಗಮನಿಸಿದರೆ ಹಿಂದೆ ಇದ್ದಂತಹ ಅಸ್ಪೃಶ್ಯತೆ ಹೀಗಿಲ್ಲ ಎಂದೆನಿಸುತ್ತದೆ. ಆದರೆ ಇತ್ತೀಚಿಗೆ ಜಾತಿಯಿಂದ ಗುರುತಿಸುವ ಪರಿಪಾಠಗಳು ಉಂಟಾಗಿವೆ. ಆದ್ದರಿಂದ ಇದ‌ನ್ನು ಅಸ್ಪೃಶ್ಯತೆಯ ಮಾರ್ಗ ಬದಲಾಗಿದೆ ಎಂದು ಹೇಳಬಹುದೆ ಹೊರತು ಪೂರ್ಣ ನಿಂತಿದೆ ಎಂದು ಹೆಳಲು ಸಾಧ್ಯವಿಲ್ಲ. ಪ್ರಸ್ತುತದಲ್ಲಿ ನಾವು ಕಂಪ್ಯೂಟರ್‍ ಯುಗದಲ್ಲಿ ಬದುಕುತಿದ್ದೇವೆ, ಮನುಷ್ಯ ತನೆಷ್ಟು  ಬದಾಲವಣೆಯಾಗಿದ್ದಾನೆ ಎಂದರೆ ಗ್ರಹದಿಂದ ಗ್ರಹಕ್ಕೆ ಹೋಗುವ ಹೊಸ ಆವಿಷ್ಕಾರಗಳನ್ನು ನಡೆಸಿತ್ತಿದ್ದಾನೆ. ಇಷ್ಟು ಸುಧೀರ್ಘವಾಗಿ ಮುಂದುವರಿದಾಗಿಯೂ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಬಾಡಿಗೆಯ ಮನೆ ಕೊಡುವಾಗ ಜಾತಿ ಕೇಳುವುದನ್ನು ಬಿಟ್ಟಿಲ್ಲ, ಆಗಾಗಿ ಕೆಲವೂಂದು ಸಾರಿ ಅನಿಸಿ ಬಿಡುತ್ತದೆ ಈ ಸಮಾಜದಲ್ಲಿ ಮನುಷ್ಯ ತಾನೆಷ್ಟು ಕುಬ್ಜ ಎಂದು. 

ಅಸ್ಪೃಶ್ಯತೆ, ಜಾತೀಯತೆ, ಧರ್ಮಾಂಧತೆ ಮುಂತಾದವುಗಳನ್ನು ಅವಿದ್ಯಾವಮತರಲ್ಲಿ, ಅನಾಗರೀಕರಲ್ಲಿ ಕಾಣುತಿದ್ದೆವು. ಆದರೆ ಸಮಾಜ ಮುಂದುವರಿದಷ್ಟು ಅಸ್ಪೃಶ್ಯತೆ, ಜಾತೀಯತೆ ನಾಗರೀಕರು ಮತ್ತು ವಿದ್ಯಾವಂತರ ಮೂಲಕವೆ ಅತಿ ಹೆಚ್ಚು ನಡೆಯುತ್ತಿವೆ. ಒಬ್ಬ ಅಸ್ಪೃಶ್ಯ ತಾನು ವಿದ್ಯಾವಂತನಾಗಿದ್ದರು, ಸರ್ಕಾರಿ ಉದ್ಯೋಗಿಯಾಗಿದ್ದರು ಹಾಗೂ ರಾಜಕೀಯವಾಗಿ, ಆರ್ಥಿಕವಾಗಿ ಇತರೆ ಜಾತಿಯವರಿಗಿಂತ ಮುಂದುವರಿದಾಗಿಯು ಕೂಡ ಎಲ್ಲೋ ಒಂದು ಕಡೆ ಸಾಮಾಜಿಕವಾಗಿ ಶೋಷಣೆಗೊಳಗಾಗುವ ಹಾಗೂ ಒಳಗಾಗುತ್ತಿರುವ ಅನೇಕ ಉದಾಹರಣೆಗಳಿವೆ. ಅಸ್ಪೃಶ್ಯರಲ್ಲೊಬ್ಬ ರಾಜಕಾರಣಿಯಾಗಿದ್ದರೆ ಅಲ್ಲಿಯೂ ಕೂಡ ಜಾತಿಯ ದಬ್ಬಾಳಿಕೆಗೊಲಗಾಗುತ್ತಾನೆ. ಅಸ್ಪೃಶ್ಯರಲ್ಲೊಬ್ಬ ಸರ್ಕಾರಿ ಅಧಿಕಾರಿಯಾಗಿದ್ದರೆ ಅಲ್ಲಿಯೂ ಕೂಡ ಜಾತಿಯ ದಬ್ಬಾಳಿಕೆಗೊಳಗಾಗುತ್ತಾನೆ. ದಬ್ಬಾಳಿಕೆಯೆಂಬುಂದು ನಿರಂತರವಾಗಿ ನಡೆಯುತ್ತಿದೆ ಆದರೆ ಅದು ತಲೆಮಾರಿನಿಂದ ತಲೆಮಾರಿಗೆ ಬೇರೆ ಬೇರೆ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಇಂದು ನಿಮಾರ್ಣವಾಗಿರುವುದು ನವ ಸಮಾಜ, ಬಹಳ ಹಿಂದಿನ ಸಮಾಜಕ್ಕು ಇವತ್ತಿನ ಸಮಾಜಕ್ಕು ಗಂಭೀರವಾದಂತಹ ಭಿನ್ನತೆಗಳಿವೆ. ಹಳೆ ತಲೆಮಾರಿನಲ್ಲಿ ಜಾತಿಯನ್ನು ನೇರವಾಗಿ ಕೇಳುತ್ತಿದ್ದರು. ಆದರೆ ಅದು ಈಗ ನಡೆಯುತ್ತಿಲ್ಲ ಅದರ ಬದಲಾಗಿ ಅವ ಯಾವ ಜಾತಿಯವನೆಂಬುದನ್ನು ಹಿಂದಲ ಬಾಗಿಲಿನಿಂದ ಪರಿಶೀಲಿಸುವ ಹೊಸತೊಂದು ವ್ಯವಸ್ಥೆ ಸೃಷ್ಟಿಯಾಗಿದೆ. ಮಾಡುವ ಕ್ರಿಯೆಯಿಂದ, ಸಾಂಸ್ಕ್ರುತಿಕ ಚಟುವಟಿಕೆಗಳಿಂದ ಜಾತಿಯನ್ನು ಅಳೆದು ತೂಗುವ ಮತ್ತೋಂದು ಸ್ಕೇಲ್ ಬಂದಿದೆ. ಈಗಿನ ಕಾರ್ಪೊರೇಟ್ ಸಮಾಜದಲ್ಲಿಯೂ ಕೂಡ ಸಾಕಷ್ಟು ಜಾತಿಯತೆಯ ಹುನ್ನಾರಗಳು ಪ್ರಾರಂಭವಾಗಿವೆ. ಅಸ್ಪೃಶ್ಯರು ಕಾರ್ಪೊರೇಟ್ ಒಳಗೆ ಪ್ರವೇಶ ಮಾಡಲಾಗದಂತಹ ದುಸ್ಥರ ಉಂಟಾಗಿದೆ. ಹಾಗೊಂದು ವೇಳೆ ಪ್ರವೇಶ ದೊರೆತರೆ ನಾನಾ ರೀತಿಯ ಮಾನಸಿಕ ಚಿತ್ರಹಿಂಸೆಗೆ ಗುರಿಯಾಗಬೇಕಾಗುತ್ತದೆ. ಪ್ರಾಜೆಕ್ಟ ವಿಚಾರದಲ್ಲಿ, ಹುದ್ದೆಯ ಉನ್ನತೀಕರಣ ಹಾಗೂ ಮುಂತಾದ ರೀತಿಯಲ್ಲಿ ಹೊಸಬಗೆಯ ಜಾತಿಯ ಶೋಷಣೆಗಳು ಬುಗಿಲೇಳುತ್ತಿವೆ. ಅಂಬೇಡ್ಕರ್‍ ಒಂದು ಕಡೆ ಹೇಳುತ್ತಾರೆ ಅಸ್ಪೃಶ್ಯತೆ ಎಂಬುದು ಜೀವಂತ, ಅದು ಪ್ರತಿಯೊಂದು ಕಾಲಘಟ್ಟದಲ್ಲಿಯೂ ಚಾಲ್ತಿಯಲ್ಲಿರುತ್ತದೆ ಎಂದು ಹೇಳಿದ ಮಾತು ನಿಜವೆನಿಸುತ್ತಿದೆ. 

ಶಿಕ್ಷಣದಿಂದಲೆ ಈ ಸಮಾಜ ಬದಾಲಾವಣೆ ಸಾಧ್ಯ ಎಂದು ತಿಳಿದ ನಾವು ಇಂದು ಮೂರ್ಖರಾಗುತ್ತಿದ್ದೇವೆ. ಶಿಕ್ಷಣ ಇಲಾಖೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳು ಜಾತೀಯತೆಯನ್ನು ಸೃಷ್ಟಿಸುವ ದೊಡ್ಡ ದೊಡ್ಡ ಕಾರ್ಖಾನೆಗಲಾಗಿವೆ. ಮೌಲ್ಯ ಶಿಕ್ಷಣ ಹಾಗೂ ಮಾನವೀಯ ಶಿಕ್ಷಣ ನೀಡಬೇಕಾಗಿರುವಂತಹುಗಳು ಇಂದು ಜಾತಿಯ ವಿಷಭೀಜ ಭಿತ್ತುವಂತಹ ತಾಣಗಳಾಗಿವೆ. ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಪಿಎಚ್,ಡಿ ಮಾಡಲು ಹಾಗೂ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಜಾತಿಯೇ ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿರುವುದು ದೊಡ್ಡ ದುರಂತವಾಗಿದೆ. ಇಂತಹ ಅಸಹ್ಯ ಪರಿಪಾಠಗಳು ದಿನೇ ದಿನೇ ನವಬಗೆಯ ಜಾತೀಯತೆಯನ್ನು ಸೃಷ್ಟಿಸುತ್ತಿರುವುದರಿಂದ ಇದನ್ನು ಜಾಗತಿಕಮಟ್ಟದಲ್ಲಿ ಅಡಗಿಕೊಂಡಿರುವ  ಸ್ಪರ್ಶತೆಯೊಳಗೆ  ಅಸ್ಪೃಶ್ಯತೆ ನಡೆಯುತ್ತಿದೆ ಎಂಬುದನ್ನು ಬಿಟ್ಟು ಬೇರೇನು ಹೇಳಲು ಸಾಧ್ಯವಿಲ್ಲ.

 

Rating
No votes yet