೧೭೮. ಲಲಿತಾ ಸಹಸ್ರನಾಮ ೮೦೯ರಿಂದ ೮೧೮ನೇ ನಾಮಗಳ ವಿವರಣೆ

೧೭೮. ಲಲಿತಾ ಸಹಸ್ರನಾಮ ೮೦೯ರಿಂದ ೮೧೮ನೇ ನಾಮಗಳ ವಿವರಣೆ

                                                                                         ಲಲಿತಾ ಸಹಸ್ರನಾಮ ೮೦೯ - ೮೧೮

Parātparā परात्परा (809)

೮೦೯. ಪರಾತ್ಪರಾ

            ಪರಾ ಎಂದರೆ ಶ್ರೇಷ್ಠವಾದದ್ದು. ಪರಾತ್ಪರ ಎಂದರೆ ಅತ್ಯುನ್ನತವಾದ ಸರ್ವಶ್ರೇಷ್ಠತೆ. ಪರಾತ್ಪರಕ್ಕಿಂತ ಶ್ರೇಷ್ಠವಾದದ್ದು ಮತ್ಯಾವುದೂ ಇಲ್ಲ. ನವಾವರಣ ಪೂಜಾ ವಿಧಾನದಲ್ಲಿ ಒಂಭತ್ತನೇ ಆವರಣದಲ್ಲಿ ವಿಶೇಷವಾದ ನವಾವರಣ ಪೂಜೆಯಿರುತ್ತದೆ, ಅದನ್ನು ಕೇವಲ ಷೋಡಶೀ ಮಂತ್ರದ ದೀಕ್ಷೆಯನ್ನು ಪಡೆದವರು ಮಾತ್ರವೇ ಕೈಗೊಳ್ಳಲು ಅರ್ಹರಾಗಿರುತ್ತಾರೆ. ಅವರು ದೇವಿಯನ್ನು ಪರಯಾ (ನಾಮ ೩೬೬), ಅಪರಯಾ, ಪರಾಪರಯಾ (ನಾಮ ೭೯೦) ಎಂದು ಸಂಭೋದಿಸುತ್ತಾ ತ್ರಿಖಂಡ ಮುದ್ರೆಯನ್ನು ಬಳಸಿ ಪೂಜಿಸುತ್ತಾರೆ. ಈ ಮೂರೂ ಹಂತಗಳನ್ನು ನಾಮ ೭೯೦ರ ವಿವರಣೆಯಲ್ಲಿ ಚರ್ಚಿಸಲಾಗಿದೆ. ಈ ನಾಮವು ಪರಾತ್ಪರಾ, ಅಂದರೆ ಪರಾಕ್ಕಿಂತ ಶ್ರೇಷ್ಠವಾದ ಹಂತವಾಗಿದೆ. ಈ ಸ್ಥಿತಿಯನ್ನು ಶಬ್ದಗಳಿಂದ ವರ್ಣಿಸಲಾಗುವುದಿಲ್ಲ ಏಕೆಂದರೆ ಈ ಹಂತವು ಮಾನವನ ಬುದ್ಧಿಮತ್ತೆಗೆ ನಿಲುಕಲಾರದ ವಿಷಯವಾಗಿದೆ. ಇದು ಸೂಕ್ಷ್ಮಕ್ಕಿಂತ ಸೂಕ್ಷ್ಮವಾದುದಾಗಿದೆ. ದೇವಿಯ ಸೂಕ್ಷ್ಮಾತಿಸೂಕ್ಷ್ಮ ರೂಪವು ಕುಂಡಲಿನೀ ಆಗಿದ್ದರೆ ಪರಾತ್ಪರ ರೂಪವು ಕುಂಡಲಿನೀ ರೂಪಕ್ಕಿಂತ ಸೂಕ್ಷ್ಮವಾದದ್ದಾಗಿದೆ. ಲಲಿತಾ ತ್ರಿಶತಿಯ ೨೩೬ನೇ ನಾಮವು ಸಮಾನಾಧಿಕ ವರ್ಜಿತಾ ಅಂದರೆ ದೇವಿಯು ಹೋಲಿಕೆಗೆ ಅತೀತವಾಗಿದ್ದಾಳೆ ಎಂದು ಹೇಳುತ್ತದೆ. ಭಗವದ್ಗೀತೆಯೂ (೧೧.೪೩) ಸಹ ಹೀಗೆ ಹೇಳುತ್ತದೆ," ಎಣೆಯಿಲ್ಲದ ಸಾಮರ್ಥ್ಯವನ್ನು ಹೊಂದಿರುವ ದೇವನೇ, ಮೂಜಗಗಳಲ್ಲಿಯೂ ನಿನ್ನ ಸರಿಸಮಾನನಾದವರು ಸಹ ಯಾರೂ ಇಲ್ಲ. ಇನ್ನು ಅದಕ್ಕಿಂತ ಉತ್ತಮರು ಹೇಗಿರಬಲ್ಲರು?" ಈ ಸಹಸ್ರನಾಮದ ೧೯೮ನೇ ನಾಮ ‘ಸಮಾನಾಧಿಕ ವರ್ಜಿತಾ’ ಸಹ ಇದೇ ಅರ್ಥವನ್ನು ಹೊಮ್ಮಿಸುತ್ತದೆ.

          ದೇವಿಯು ಬ್ರಹ್ಮ, ವಿಷ್ಣು ಮತ್ತು ಶಿವರಿಗಿಂತ ಶ್ರೇಷ್ಠಳು ಎನ್ನುವ ವ್ಯಾಖ್ಯಾನವೂ ಇದೆ.

Pāśa hastā पाश हस्ता (810)

೮೧೦. ಪಾಶ ಹಸ್ತಾ

           ದೇವಿಯು ತನ್ನ ಕೈಯ್ಯಲ್ಲಿ ಪಾಶವನ್ನು ಧರಿಸಿದ್ದಾಳೆ, ಇದರ ಕುರಿತು ಇದುವರೆಗಾಗಲೇ ನಾಮ ೬ರಲ್ಲಿ ಚರ್ಚಿಸಲಾಗಿದೆ.

           ಪಾಶವೆಂದರೆ ಆತ್ಮವನ್ನು ಕಟ್ಟಿಹಾಕುವ ಯಾವುದೇ ವಸ್ತುವೂ ಆಗಬಹುದು. ಈ ನಾಮವು, ದೇವಿಯು ಸಾಕ್ಷಾತ್ಕಾರವನ್ನು ಹೊಂದಲು ಆತ್ಮವನ್ನು ಕರ್ಮಬಂಧನಗಳಿಂದ ಮುಕ್ತವಾಗಿಸುವುದಕ್ಕೆ ಸಹಾಯ ಮಾಡುತ್ತಾಳೆನ್ನುವ ಅರ್ಥವನ್ನೂ ಕೊಡುತ್ತದೆ. ಎಲ್ಲಿಯವರೆಗೆ ಕರ್ಮಶೇಷವು ಇರುತ್ತದೆಯೋ ಅಲ್ಲಿಯವರೆಗೆ ಆತ್ಮ ಸಾಕ್ಷಾತ್ಕಾರವು ಉಂಟಾಗದು.

Pāśa hantrī पाश हन्त्री (811)

೮೧೧. ಪಾಶ ಹಂತ್ರೀ

          ದೇವಿಯು ಪಾಶವನ್ನು ನಾಶಪಡಿಸುವವಳಾಗಿದ್ದಾಳೆ. ಪಾಶವೆಂದರೆ ಬಂಧನ, ಮೋಹಪರವಶತೆ ಮೊದಲಾದವುಗಳು. ಈ ಪಾಶಗಳು ಶಿವನನ್ನು ಅರಿಯುವಲ್ಲಿನ ಋಣಾತ್ಮಕ ಅಂಶಗಳಾಗಿವೆ. ದೇವಿಯು ಶಿವನನ್ನು ಅರಿಯುವ ಯೋಗ್ಯತೆಯುಳ್ಳವರ ಸರ್ವವಿಧವಾದ ಬಂಧನಗಳನ್ನು ವಿನಾಶ ಮಾಡುತ್ತಾಳೆ. ನಾಮ ೭೨೭ ಶಿವ ಜ್ಞಾನ ಪ್ರದಾಯಿನಿಯನ್ನು ಜ್ಞಾಪಿಸಿಕೊಳ್ಳಿ.

Paramantra-vibhedinī परमन्त्र-विभेदिनी (812)

೮೧೨. ಪರಮಂತ್ರ-ವಿಭೇದಿನೀ

            ಪರ ಎಂದರೆ ವ್ಯತಿರಿಕ್ತವಾದ ಅಥವಾ ಪರಕೀಯವಾದ ಎನ್ನುವ ಅರ್ಥವನ್ನು ಹೊಂದಿದೆ. ಪರ ಮತ್ತು ಪರಾ ಇವುಗಳು ಭಿನ್ನವಾಗಿವೆ ಎನ್ನುವುದನ್ನು ಗಮನಿಸಿ. ಪರ ಮಂತ್ರ ಎಂದರೆ ಶತ್ರುತ್ವವನ್ನು ಉಂಟು ಮಾಡುವ ಮಂತ್ರಗಳು. ಈ ವಿಧವಾದ ಮಂತ್ರಗಳನ್ನು ಅರಿ ಮಂತ್ರಗಳೆಂದು ಕರೆಯುತ್ತಾರೆ. ಈ ತರಹದ ಮಂತ್ರಗಳನ್ನು ಮಾಟ ಮಾಡುವವರು ಉಪಯೋಗಿಸುತ್ತಾರೆ. ವಿಭೇದಿನಿ ಅಂದರೆ ಒಡೆದು ಹಾಕುವವಳು. ದೇವಿಯು ಅಂತಹ ಮಂತ್ರಗಳನ್ನು ನಾಶ ಮಾಡುವುದರ ಮೂಲಕ ತನ್ನ ಭಕ್ತರನ್ನು ಕಾಪಾಡುತ್ತಾಳೆ. 

            ಈ ನಾಮವನ್ನು ಈ ವಿಧವಾಗಿಯೂ ವಿಭಜಿಸುತ್ತಾರೆ; ಪರ+ಮಂತ್ರ+ಅವಿ+ಭೇದಿನಿ. ಪರ ಎಂದರೆ ಮುಖ್ಯವಾದ ಅಥವಾ ಪ್ರಮುಖವಾದ ವಸ್ತು, ಮಂತ್ರ ಎಂದರೆ ಯಾರು ಮಂತ್ರಗಳನ್ನು ಪಠಿಸುತ್ತಾರೋ ಅವರು, ಅವಿ ಎಂದರೆ ಪಾಪಗಳು (ಈ ಅರ್ಥವನ್ನು ಲಿಂಗ ಪುರಾಣದ ೯೨ನೇ ಅಧ್ಯಾಯದ ೧೪೩ನೇ ಶ್ಲೋಕದ ಪ್ರಕಾರ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ನಿಘಂಟುಗಳು ಈ ಅರ್ಥವನ್ನು ಕೊಡುವುದಿಲ್ಲ). ಲಿಂಗ ಪುರಾಣದಲ್ಲಿ ಅವಿಮುಕ್ತ ಎನ್ನುವ ಒಂದು ಸ್ಥಳದ ಪ್ರಸ್ತಾಪವಿದೆ, ಈ ಸ್ಥಳವು ಈಗ ಅಳಿದುಹೋಗಿದ್ದು ಅದು ವಾರಣಾಸಿಗೆ (ವರಣಾ ಮತ್ತು ಅಸಿ ಎನ್ನವ ಎರಡು ನದಿಗಳ ಹೆಸರಿನಿಂದ ವಾರಣಾಸಿ ಎನ್ನುವ ಹೆಸರು ಬಂದಿದೆ. ಈ ಸ್ಥಳವನ್ನು ಬೆನಾರಸ್ ಎಂದೂ ಕರೆಯುತ್ತಾರೆ) ಸಮಾನವಾದ ಸ್ಥಳವಾಗಿದೆ. ವಾರಣಾಸಿಯು ಭಾರತದಲ್ಲಿನ ಒಂದು ಪವಿತ್ರ ಪುಣ್ಯ ಕ್ಷೇತ್ರವಾಗಿದ್ದು ಅದು ಎಲ್ಲಾ ವಿಧವಾದ ಪಾಪಗಳಿಂದ ಮುಕ್ತವಾದ ನಗರವಾಗಿದೆ ಎಂದು ಹೇಳಲಾಗುತ್ತದೆ. ಭೇದಿನೀ ಎಂದರೆ ನಾಶಪಡಿಸುವವಳು. ಆದ್ದರಿಂದ ಈ ನಾಮದ ಒಟ್ಟಾರೆ ಅರ್ಥವು, ಯಾರು ಶ್ರೇಷ್ಠವಾದ ಪಂಚದಶೀ ಅಥವಾ ಷೋಡಶೀ ಮಂತ್ರಗಳನ್ನು ಪಠಿಸುತ್ತಾರೆಯೋ ಅವರ ಪಾಪಗಳನ್ನು ದೇವಿಯು ನಾಶ ಮಾಡುತ್ತಾಳೆ ಎಂದಾಗುತ್ತದೆ.

Mūrtā मूर्ता (813)

೮೧೩. ಮೂರ್ತಾ

            ದೇವಿಯು ರೂಪಗಳನ್ನು ಹೊಂದಿದ್ದಾಳೆ. ಬೃಹದಾರಣ್ಯಕ ಉಪನಿಷತ್ತು (೨.೩.೧), ಬ್ರಹ್ಮಕ್ಕೆ ಎರಡು ಸ್ವರೂಪಗಳಿವೆ - ಒಂದು ಸ್ಥೂಲವಾದರೆ ಮತ್ತೊಂದು ಸೂಕ್ಷ್ಮವಾದದ್ದು, ಎಂದು ಹೇಳುತ್ತದೆ. ನಿರಾಕಾರ ಬ್ರಹ್ಮಕ್ಕೆ ಮಾಯೆ ಅಥವಾ ಅಜ್ಞಾನದಿಂದಾಗಿ ಮೂರ್ತ ರೂಪವನ್ನು ಕೊಡಲಾಗಿದೆ.

A-mūrtā अ-मूर्ता (814)

೮೧೪. ಅಮೂರ್ತಾ

          ದೇವಿಯು ಆಕಾರವಿಲ್ಲದವಳಾಗಿದ್ದಾಳೆ. ಇಲ್ಲಿ ಸೂಕ್ಷ್ಮ ಎನ್ನುವ ಶಬ್ದವನ್ನು ಬಳಸಿ ಈ ನಾಮವನ್ನು ವಿಶ್ಲೇಷಿಸುವುದು ಸಮಂಜಸವೆನಿಸುವುದಿಲ್ಲ. ದೇವಿಯು ತನ್ನ ಸೂಕ್ಷ್ಮಾತೀಸೂಕ್ಷ್ಮ ರೂಪವಾದ ಕುಂಡಲಿನೀ ರೂಪಕ್ಕೆ ಅತೀತಳಾಗಿದ್ದಾಳೆ. ಬೃಹದಾರಣ್ಯಕ ಉಪನಿಷತ್ತು (೨.೩.೩) ಈ ಆಕಾರ ರಹಿತ ಸ್ಥಿತಿಯನ್ನು ಹೀಗೆ ವಿವರಿಸುತ್ತದೆ, "ಅದು ಅಮೃತವಾಗಿದೆ, ಅಪರಿಚ್ಛಿನ್ನವಾಗಿದೆ ಮತ್ತು ವರ್ಣನೆಗೆ ನಿಲುಕದ್ದಾಗಿದೆ".

           ಬ್ರಹ್ಮಕ್ಕೆ ಎರಡು ಪ್ರತ್ಯೇಕವಾದ ಗುಣಗಳಿವೆ; ಅವೆಂದರೆ ಸಾಕಾರ ಮತ್ತು ನಿರಾಕಾರ. ನಿರಾಕಾರವು ಸ್ವಯಂ ಪ್ರಕಾಶವಾಗಿ ಅರಿವಿಗೆ ಬರುತ್ತದೆ (ನಾಮ ೮೦೬) ಮತ್ತು ಸಾಕಾರವು ಪೂಜಾ ಸ್ಥಳಗಳಲ್ಲಿನ ವಿಗ್ರಹಗಳ ಮೂಲಕ, ಶ್ರೀ ಚಕ್ರ ಮೊದಲಾವುಗಳ ಮೂಲಕ ಕಾಣಬರುತ್ತದೆ. ಒಬ್ಬ ಭಕ್ತನು ಆಧ್ಯಾತ್ಮಕ ಮಾರ್ಗದಲ್ಲಿ ಮುಂದುವರೆದಿದ್ದಾನೆಂದು ಹೇಳಬೇಕಾದರೆ ಅವನು ಸಾಕಾರದಿಂದ ನಿರಾಕಾರ ಹಂತದೆಡೆಗೆ ಸಾಗಬೇಕು.

           ಈ ಎರಡು ನಾಮಗಳನ್ನು ಈ ವಿಧವಾಗಿಯೂ ವಿಶ್ಲೇಷಿಸಬಹುದು. ಪಂಚಭೂತಗಳಲ್ಲಿ ಆಕಾಶ ಮತ್ತು ವಾಯು ಕಣ್ಣಿಗೆ ಕಾಣಿಸುವುದಿಲ್ಲ (ಅಮೂರ್ತ). ಭೂಮಿ, ಅಗ್ನಿ ಮತ್ತು ನೀರು ಇವುಗಳನ್ನು ಕಣ್ಣಿನಿಂದ ನೋಡಬಹುದು (ಮೂರ್ತ). ಆದ್ದರಿಂದ ದೇವಿಯು ಈ ಪಂಚಮಹಾಭೂತಗಳ ರೂಪದಲ್ಲಿದ್ದಾಳೆಂದು ಹೇಳಬಹುದು..

           ವಿಷ್ಣು ಸಹಸ್ರನಾಮದ ೭೨೦ನೇ ನಾಮವು ಅಮೂರ್ತಿಮಾನ್ ಆಗಿದೆ. ಕೃಷ್ಣನು ಭಗವದ್ಗೀತೆಯಲ್ಲಿ (೪.೬) ಹೀಗೆ ಹೇಳುತ್ತಾನೆ, "ನಾನು ಜನ್ಮರಹಿತನೂ ಮರಣರಹಿತನೂ ಆಗಿದ್ದರೂ ಸಹ, ಮತ್ತು ಎಲ್ಲಾ ಜೀವಿಗಳ ಒಡೆಯನಾಗಿದ್ದರೂ ಸಹ, ನಾನು ನನ್ನ ಯೋಗಮಾಯೆಯ (ದೈವೀ ಶಕ್ತಿಯಾಗಿರುವ ಮಾಯೆಯ) ಮೂಲಕ ಅವತಾರ ಹೊಂದುತ್ತೇನೆ, ನನ್ನ ಪ್ರಕೃತಿಯನ್ನು (ಸ್ವಭಾವವನ್ನು) ನಿಯಂತ್ರಣದಲ್ಲಿಟ್ಟುಕೊಂಡು". ಇದು ದಿವ್ಯ ಅವತಾರಗಳನ್ನು ಕುರಿತು ವಿವರಿಸುತ್ತದೆ. ರೂಪಗಳು ಕರ್ಮಫಲದಿಂದ ಉಂಟಾಗುತ್ತವೆ. ಆದರೆ ಬ್ರಹ್ಮವು ಕರ್ಮರಹಿತವಾಗಿರುವುದರಿಂದ, ಅವನು ರೂಪರಹಿತನಾಗಿದ್ದಾನೆ ಅಥವಾ ನಿರಾಕಾರನಾಗಿದ್ದಾನೆ.

Anitya-tṛptā अनित्य-तृप्ता (815)

೮೧೫. ಅನಿತ್ಯ-ತೃಪ್ತಾ

           ೫೫೬ನೇ ನಾಮವು ನಿತ್ಯ-ತೃಪ್ತಾ ಆಗಿದೆ. ಅ-ನಿತ್ಯ ಎಂದರೆ ನಾಶಹೊಂದುವ ವಸ್ತುಗಳು. ದೇವಿಯು ಅನಿತ್ಯ ವಸ್ತುಗಳ ಸಮರ್ಪಣೆಯಿಂದ ಸಂತುಷ್ಟಳಾಗುತ್ತಾಳೆ. ವಾಸ್ತವವಾಗಿ ದೇವಿಗೆ ನಿತ್ಯ ಅಥವಾ ಅನಿತ್ಯ ಯಾವುದೂ ಬೇಕಾಗಿಲ್ಲ; ಏಕೆಂದರೆ ಎಲ್ಲಾ ವಸ್ತುಗಳೂ ಆಕೆಯಿಂದಲೇ ಉದ್ಭವಿಸುತ್ತವೆ. ದೇವಿಗೆ ಬೇಕಾಗಿರುವುದು ನಿಷ್ಕಳಂಕ ಮತ್ತು ನಿಶ್ಚಲವಾದ ಭಕ್ತಿ. ಕೃಷ್ಣನು ಭಗವದ್ಗೀತೆಯಲ್ಲಿ (೯.೨೬) ಹೇಳುತ್ತಾನೆ, "ಯಾರು ನನಗೆ ಪ್ರೇಮದಿಂದ ಒಂದು ಎಲೆಯನ್ನಾಗಲಿ, ಹೂವನ್ನಾಗಲಿ, ಫಲವನ್ನಾಗಲಿ ಮತ್ತು ನೀರನ್ನಾಗಲಿ ಅರ್ಪಿಸುತ್ತಾರೆಯೋ ಅವರಿಗೆ ನಾನು ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುತ್ತೇನೆ".

           ಇನ್ನಷ್ಟು ವಿವರಗಳು: ಈ ನಾಮವನ್ನು ಅನಿತ್ಯ ವಸ್ತುಗಳಿಂದಲೂ ಸಹ ಎನ್ನುವುದಾಗಿ ವಿಶ್ಲೇಷಿಸಬೇಕು. ನಾಮ ೧೧೮ರ ವಿಶ್ಲೇಷಣೆಯಂತೆ, ಅನಿತ್ಯ ವಸ್ತುಗಳಿಗಿಂತಲೂ ದೇವಿಯು ನಿಷ್ಕಲ್ಮಶ ಅಥವಾ ಪರಿಶುದ್ಧವಾದ ಭಕ್ತಿಯನ್ನು ಇಷ್ಟಪಡುತ್ತಾಳೆ. ಒಬ್ಬರು ಪೂಜೆಗಿಂತ ಹೆಚ್ಚಿನ ಸಮಯವನ್ನು ದೇವಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ವಿನಿಯೋಗಿಸ ಬೇಕು. ಅದನ್ನೇ ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಪೂಜಾಚರಣೆಗಳಿಗೆ ಅಂಟಿಕೊಂಡಿರುವುದಕ್ಕಿಂತ ಹೆಚ್ಚಾಗಿ ದೇವಿಯನ್ನು ಕುರಿತು ಧ್ಯಾನಮಾಡಲಿಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕು. ಏನೇ ಆದರೂ, ಪೂಜಾಚರಣೆಗಳು ಉನ್ನತ ಆಧ್ಯಾತ್ಮಿಕ ಸಾಧನೆಗೆ ಭದ್ರವಾದ ಬುನಾದಿಯನ್ನು ಒದಗಿಸುತ್ತವೆ. ಆದರೆ ಆಚರಣೆಗಳಿಂದ ಧ್ಯಾನದ ಕಡೆಗಿನ ಮಾರ್ಪಾಟು ಆದಷ್ಟು ಶೀಘ್ರವಾಗಿ ಆಗಬೇಕು, ಇಲ್ಲದಿದ್ದರೆ ಒಬ್ಬನು ತನ್ನ ಅಮೂಲ್ಯವಾದ ಸಮಯವನ್ನು ಹಾಳುಮಾಡಿಕೊಳ್ಳುವ ಸಂಭವವಿರುತ್ತದೆ.

Muni-mānasa-haṃsikā मुनि-मानस-हंसिका (816)

೮೧೬. ಮುನಿ-ಮಾನಸ-ಹಂಸಿಕಾ

           ದೇವಿಯು ಋಷಿಗಳ ಮನಸ್ಸಿನಲ್ಲಿ ಹಂಸದಂತೆ ತೋರುತ್ತಾಳೆ. (ಮುನಿ ಎಂದರೆ ಋಷಿ, ಮಾನಸ ಎಂದರೆ ಮನಸ್ಸಿನಲ್ಲಿ ವ್ಯಕ್ತವಾದ ಮತ್ತು ಹಂಸಿಕಾ ಎಂದರೆ ಹಂಸ). ಭಕ್ತ ಮಾನಸ ಹಂಸಿಕಾ ಎಂದು ಇದೇ ಅರ್ಥವನ್ನು ಕೊಡುವ ನಾಮ ೩೭೨ನ್ನೂ ಸಹ ನೋಡಿ. ಇಲ್ಲಿ ಒಂದೇ ಶಬ್ದದ ವ್ಯತ್ಯಾಸವಿದೆ ಅದೆಂದರೆ ಮುನಿ ಮತ್ತು ಭಕ್ತ. ಋಷಿ (ಮುನಿ)ಗಳನ್ನು ಇಲ್ಲಿ ವಿಶೇಷವಾಗಿ ಏಕೆ ಉಲ್ಲೇಖಿಸಲಾಗಿದೆ ಎಂದರೆ ಅವರು ಸಾಕ್ಷಾತ್ಕಾರ ಹೊಂದಿದ ಮಹಾತ್ಮರು. ಆದರೆ ಭಕ್ತ ಎಂದಾಗ ದೇವಿಗೆ ನಿಷ್ಠರಾಗಿರುವ ಎಲ್ಲರನ್ನೂ ಅದು ಒಳಗೊಳ್ಳುತ್ತದೆ. ಎಲ್ಲಾ ಭಕ್ತರು ಸಾಕ್ಷಾತ್ಕಾರ ಹೊಂದಿದ ಮಹಾತ್ಮರಲ್ಲ. ಭಕ್ತನು ತನ್ನ ಮನೋ ಪರಿಧಿಯೊಳಗೆ ಮುನಿಯಾಗಿ ಪರಿವರ್ತನೆಗೊಳ್ಳುತ್ತಾನೆ ಮತ್ತು ಇದುವೇ ನಿಜವಾದ ಪರಿವರ್ತನೆ.

Satya-vratā सत्य-व्रता (817)

೮೧೭. ಸತ್ಯ-ವ್ರತಾ

           ಯಾವಾಗಲೂ ಸತ್ಯವನ್ನೇ ನುಡಿಯುವ ವ್ರತವನ್ನು ಪಾಲಿಸುವುದರಿಂದ ದೇವಿಯನ್ನು ಹೊಂದಬಹುದು. ಸ್ವಯಂ ದೇವಿಯೇ ಸತ್ಯದ ಮೂರ್ತರೂಪವಾಗಿದ್ದಾಳೆ (ಸತ್ಯಮೂರ್ತಿಃ - ನಾಮ ೬೯೩). ಸತ್ಯವೆಂದರೆ ಪರಬ್ರಹ್ಮವೆಂದೂ ಅರ್ಥ ಏಕೆಂದರೆ "ಸತ್ಯಂ ಜ್ಞಾನಂ ಅನಂತಂ ಬ್ರಹ್ಮಃ"

           ಶಿವ ಸೂತ್ರವು (೩.೨೬) ಹೀಗೆ ಹೇಳುತ್ತದೆ, ಶರೀರವೃತ್ತಿರ್ ವ್ರತಮ್ शरीरवृत्तिर् व्रतम् ಅಂದರೆ ಈ ಶರೀರದಲ್ಲಿ ಸ್ಥಿತವಾಗಿರುವುದು ಪುಣ್ಯ ಕಾರ್ಯಗಳ ವ್ರತ". ಶಿವ ಸೂತ್ರದ ಪ್ರಕಾರ ಇಂತಹ ವ್ರತಗಳ ಫಲವು ಶಿವ ಸಾಕ್ಷಾತ್ಕಾರವಾಗಿದೆ. ವ್ರತವೆನ್ನುವುದು ಮನಸ್ಸಿನ ಸಂಕಲ್ಪವಾಗಿದೆ. ಯಾರು ತೋರಿಕೆಯ ದೈವ ಭಕ್ತಿಯನ್ನು ಪ್ರದರ್ಶಿಸಿ (ಶಾರೀರಿಕವಾಗಿ) ಆಧ್ಯಾತ್ಮಿಕವಾಗಿ ದರಿದ್ರನಾಗಿರುತ್ತಾನೆಯೋ (ಮಾನಸಿಕವಾಗಿ) ಅವರು ಖಂಡಿತವಾಗಿಯೂ ಆಕೆಯನ್ನು ಪಡೆಯಲಾರರು. ಸತ್ಯವನ್ನು ನುಡಿಯುವುದರ ಮಹತ್ವವನ್ನು ಈ ನಾಮದಲ್ಲಿ ಒತ್ತುಕೊಟ್ಟು ಹೇಳಲಾಗಿದೆ.

          ವಾಲ್ಮೀಕಿ ರಾಮಾಯಣದಲ್ಲಿ (೬.೨೮.೩೩) ಶ್ರೀ ರಾಮನು ಹೀಗೆ ಹೇಳುತ್ತಾನೆ, "ಯಾರು ನನ್ನ ಬಳಿಗೆ ಕೇವಲ ಒಂದೇ ಒಂದು ಬಾರಿ ಬಂದು ’ನಾನು ನಿನ್ನವನೆಂದು’ ನನ್ನಿಂದ ರಕ್ಷಣೆಯನ್ನು ಅಪೇಕ್ಷಿಸುತ್ತಾರೆಯೋ ಅಂತಹ ಎಲ್ಲಾ ಜೀವಿಗಳನ್ನು ನಾನು ಕರುಣೆಯಿಂದ ಕಾಪಾಡುತ್ತೇನೆ; ನನ್ನ ವ್ರತವು ಈ ವಿಧವಾಗಿದೆ".

Satya rūpā सत्य रूपा (818)

೮೧೮. ಸತ್ಯ ರೂಪಾ

           ದೇವಿಯು ಸತ್ಯದ ಸ್ವರೂಪವಾಗಿದ್ದಾಳೆ. ಸತ್ಯವು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳಲ್ಲಿ ಉಳಿಯುತ್ತದೆ. ಋಗ್ವೇದವು (೭.೧೦೪.೧೨), "ವಿವೇಕಿಯಾದವನು ಸುಲಭವಾಗಿ ಸತ್ಯ ಮತ್ತು ಮಿಥ್ಯಗಳಲ್ಲಿನ ಯುಕ್ತಾಯುಕ್ತತೆಯನ್ನು ಅರಿಯುತ್ತಾನೆ, ಏಕೆಂದರೆ ಆ ಎರಡೂ ಶಬ್ದಗಳು ಪರಸ್ಪರ ಭಿನ್ನವಾಗಿವೆ. ಆ ಎರಡರಲ್ಲಿ ದೈವೀ ಪ್ರೇಮವು, ಸತ್ಯ ಮತ್ತು ಸದ್ಗುಣಗಳನ್ನು ಪೋಷಿಸುತ್ತದೆ. ಅವನು ಖಚಿತವಾಗಿ ಮಿಥ್ಯವನ್ನು ನಾಶಪಡಿಸುತ್ತಾನೆ ಎಂದು ಸಾರುತ್ತದೆ. ಅದರ ಮುಂದಿನ ಶ್ಲೋಕವು, "ಅಂತಹ ಎಲ್ಲಾ ವ್ಯಕ್ತಿಗಳು ಪ್ರಕಾಶಿತ ದೇವನ ಸಿಂಹಾಸನದಲ್ಲಿ ಬದ್ಧರಾಗಿರುತ್ತಾರೆ" ಎಂದು ಹೇಳುತ್ತದೆ.

           ಸತ್ಯವು ಆಧ್ಯಾತ್ಮಿಕ ಮಾರ್ಗದಲ್ಲಿ ಒಂದು ಪ್ರಮುಖವಾದ ಅಂಶವಾಗಿ ಪರಿಗಣಿಸಲ್ಪಟ್ಟಿದೆ. ಆದ್ದರಿಂದ ದೇವಿಯು ಯಾರು ಸತ್ಯವನ್ನು ನುಡಿಯುತ್ತಾರೆಯೋ ಅವರನ್ನು ಇಷ್ಟಪಡುತ್ತಾಳೆ. ಬ್ರಹ್ಮಕ್ಕೆ ಎರಡು ಅಂಶಗಳಿವೆ; ಸತ್ ಮತ್ತು ಅಸತ್. ಸತ್ ಅನ್ನು (ನಿಜವನ್ನು) ಪೋಷಿಸುತ್ತಾ, ಅಸತ್ (ಸುಳ್ಳನ್ನು) ನಾಶಗೊಳಿಸುತ್ತಾ, ಶಿವನು ಶಕ್ತಿಯೊಂದಿಗೆ ಈ ಪ್ರಪಂಚವನ್ನು ಪರಿಪಾಲಿಸುತ್ತಾನೆ.

                                                                                                 ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 809 - 818 http://www.manblunder.com/2010/06/lalitha-sahasranamam-809-817.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 12/04/2013 - 19:12

ಶ್ರೀಧರರೆ,"೧೭೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೮೦೯ - ೮೧೮
___________________________
.
೮೦೯. ಪರಾತ್ಪರಾ
ದೇವಿ ಸೂಕ್ಷ್ಮಾತಿಸೂಕ್ಷ್ಮ ಕುಂಡಲಿನೀ ರೂಪ, ಮೀರಿಸಿದ ಸೂಕ್ಷ್ಮ ಪರಾತ್ಪರಾ
ಪರಾ ಶ್ರೇಷ್ಠಕಿಂತ ಅಧಿಕ ಸರ್ವೋತ್ಕೃಷ್ಟ, ಶಬ್ದದೆ ಹಿಡಿಯಲಾಗದ ಅಪಾರ
ಹೋಲಿಕೆಗತೀತೆ ಸಮನಾಧಿಕ ವರ್ಜಿತಾ, ತ್ರಿಮೂರ್ತಿಗಿಂತಾ ಸರ್ವಶ್ರೇಷ್ಠತೆ
ನವಾವರಣಪೂಜೆ ತ್ರಿಖಂಡ ಮುದ್ರಾಹಂತಕು ಮಿಗಿಲಾದ ರೂಪದೆ ಲಲಿತೆ ||
.
೮೧೦. ಪಾಶ ಹಸ್ತಾ
ಕರ್ಮಶೇಷವಿರುವತನಕ ಆತ್ಮ ಸಾಕ್ಷಾತ್ಕಾರಕೆ ಸಶೇಷ
ನಡೆಯೆ ದೇವಿ ತೋರಿದ ದಾರಿ ಕರ್ಮಬಂಧನ ನಿಶ್ಯೇಷ
ಆತ್ಮನ ಬಂಧನಕೆ ತರತರದ ಮೋಹ ಕಾಮನೆ ಸಮಿತ್ತ
ಅಂಕೆಯಲಿಡಲೆ ಪಾಶವ ಕೈಲ್ಹಿಡಿದ ಲಲಿತ ಪಾಶ ಹಸ್ತಾ ||
.
೮೧೧. ಪಾಶ ಹಂತ್ರೀ
ಬ್ರಹ್ಮವರಿಯಲು ಬೇಕು ಯೋಗ್ಯತೆ, ಬಂಧಗಳಿಂದ ವಿಮುಕ್ತತೆ
ಮೋಹಪರವಶತೆ ಪಾಶವೆ ಬಂಧನ, ಅಜ್ಞಾನದ ಋಣಾತ್ಮಕತೆ
ಶಿವಜ್ಞಾನ ಪ್ರದಾಯಿನಿ ದೇವಿ, ತೊಲಗಿಸಿರೆ ಮಾಯೆಯ ಖಾತ್ರಿ
ಬೇಡದಾ ಬಂಧಗಳ ಮೆಟ್ಟುತ ಪಾಶನಾಶಿನಿ ಲಲಿತೆ ಪಾಶಹಂತ್ರೀ ||
.
೮೧೨. ಪರಮಂತ್ರ-ವಿಭೇಧಿನೀ 
ಮಾಟ ಮಂತ್ರ ದುಷ್ಟರ ಪರ, ಅರಿಮಂತ್ರ ಭೇಧಿನಿ ಭಕ್ತರ ಕಾಪಿಡೆ ಪರಾ
ಪರ-ಮಂತ್ರವೆ ಶ್ರೇಷ್ಠ ಪಂಚದಶೀ ಷೋಡಶೀ ಪಠನದೆ, ಅವಿಮುಕ್ತ ನಗರ
ಆವಿಯಾಗಿಸುತೆಲ್ಲ ಅವಿ - ಪಾಪಗಳ ತೊಡೆದೊಯ್ಯೆ ಲಲಿತೆ ಛವಿಯತ್ತ
ಪರಮಂತ್ರ ವಿಭೇಧಿನಿ ದೇವಿ, ವ್ಯತಿರಿಕ್ತ ಪರಕೀಯಗಳೆಲ್ಲವ ಮುರಿಯುತ್ತ ||
.
೮೧೩. ಮೂರ್ತಾ
ಸಾಕಾರ ನಿರಾಕಾರ ಬ್ರಹ್ಮದಸ್ಥಿತ್ವದ ಎರಡು ಸ್ವರೂಪ
ಸಗುಣಾ-ನಿರ್ಗುಣ ದ್ವೈತ, ಅದ್ವೈತದ ಬಿಡಿಸಿಟ್ಟ ರೂಪ
ಪಾಮರ ಮಾಯಾಮುಗ್ದ, ಅಜ್ಞಾನ ಪ್ರಬುದ್ಧಕಡ್ಡ ನಿಂತ
ತಡೆ ನಿವಾರಿಸೆ ದೇವಿ ಸ್ಥೂಲ-ಸೂಕ್ಷ್ಮರೂಪದಲಿ ಮೂರ್ತ ||
.
೮೧೪. ಅಮೂರ್ತಾ
ಅವರ್ಣನೀಯ ಆಕಾರರಾಹಿತ್ಯ ದೇವಿ, ಸಾಕಾರ ನಿರಾಕಾರ ಗುಣದ
ಸ್ವಯಂಪ್ರಕಾಶ ನಿರಾಕಾರದತ್ತ ಭಕ್ತ, ಭೌತಿಕ ಪ್ರಕಟ ಸಾಕಾರದಿಂದ
ಆಕಾಶ-ವಾಯು ಅಮೂರ್ತ ಭೂಮಿ-ಅಗ್ನಿ-ಜಲ ಮೂರ್ತ ಪಂಚಭೂತ
ರೂಪದಲಿಹ ದೇವಿ ಯೋಗಮಾಯೆ ಅವತರಿಸಿ ಬ್ರಹ್ಮ ರೂಪರಹಿತ ||
.
೮೧೫. ಅನಿತ್ಯ-ತೃಪ್ತಾ
ನಿಷ್ಕಳಂಕ ನಿಶ್ಚಲ ಭಕ್ತಿಯಿಂದರ್ಪಿಸೆ ದೇವಿಗೆ, ವಿನಾಶಿ ಅನಿತ್ಯಕೂ ಸಂತುಷ್ಟೆ
ಗಣನೆಯಲ್ಲ ಪರ್ಣ-ಫಲ-ಪುಷ್ಪ-ಜಲ, ಸಮರ್ಪಣಾ ಭಾವವಷ್ಟೆ ಪರಾಕಾಷ್ಟೆ
ನಿಷ್ಕಲ್ಮಷ ಪರಿಶುದ್ಧ ಭಕ್ತಿ ಬಾಹ್ಯ ಪೂಜೆಗು ಮಿಗಿಲು ಧ್ಯಾನ ಆಧ್ಯಾತ್ಮಿಕದತ್ತ
ಸಾಧನೆ ಹಾದಿಗೆ ಮೊದಲ ಮೆಟ್ಟಿಲೆ ಪೂಜೆ, ಬ್ರಹ್ಮಕೆ ನಡೆಸೊ ಅನಿತ್ಯ ತೃಪ್ತ ||
.
೮೧೬. ಮುನಿ-ಮಾನಸ-ಹಂಸಿಕಾ
ದೇವಿಗೆ ನಿಷ್ಠರಿಹರೆಲ್ಲ ಭಕ್ತರು, ಸಾಕ್ಷಾತ್ಕಾರ ಸಾಧಿಸಿ ಋಷಿಮಹಾತ್ಮರು
ನಿಜ ಪರಿವರ್ತನೆ ಭಕ್ತ ತಾನಾಗೆ, ಮನೋ ಪರಿಧಿಯಲಿ ಮುನಿ ಸ್ವಗುರು
ಋಷಿ ಮನ ಸ್ವಚ್ಛ ಕೊಳದಲಿಹ ಹಂಸದಂತೆ ದೇವಿ ರಾರಾಜಿಸೊ ಪುಳಕ
ಭಕ್ತ ಜನರನು ಮುನಿಯಾಗಿಸುವಳು ಲಲಿತೆ ಮುನಿ ಮಾನಸ ಹಂಸಿಕಾ ||
.
೮೧೭. ಸತ್ಯ-ವ್ರತಾ
ಸತ್ಯವೆ ಪರಬ್ರಹ್ಮ, ಸ್ವಯಂ ದೇವಿ ಲಲಿತೆ ಸತ್ಯದ ಮೂರ್ತ ರೂಪ
ಸದಾ ಸತ್ಯವ ನುಡಿವ ಸತ್ಯವ್ರತರಷ್ಟೆ ದೇವಿಯ ಹೊಂದೆ ಸಮೀಪ
ತೋರಿಕೆ ಭಕ್ತಿ, ಆಧ್ಯಾತ್ಮಿಕ ದಾರಿದ್ರ್ಯಕಲ್ಲ-ಪುಣ್ಯಕಾರ್ಯವಿರೆ ಹಿತ
ಶರಣಾಗತ ಜೀವಿ ರಕ್ಷಣಾ ವ್ರತವ, ಪಾಲಿಸಿ ಲಲಿತೆ ಸತ್ಯ ವ್ರತಾ ||
.
೮೧೮. ಸತ್ಯ ರೂಪಾ
ಆಧ್ಯಾತ್ಮಿಕ ಮಾರ್ಗದ ಪ್ರಮುಖ ಅಂಶ ಸತ್ಯ, ದೇವಿ ಸತ್ಯದ ಸ್ವರೂಪ
ಸತ್ ಪೋಷಿಸುತ ಅಸತ್ ವಿನಾಶಿಸುತ, ಶಿವಶಕ್ತಿ ಜಗಪಾಲಿಸುತಿಪ
ಭೂತ-ಪ್ರಸಕ್ತ-ಭವಿತದೆ ಪ್ರಸ್ತುತ ಸತ್ಯ, ವಿವೇಕಿ ಯುಕ್ತಾಯುಕ್ತತೆ ತಪ್ಪ
ಸತ್ಯ ಸದ್ಗುಣ ಪೋಷಿಸೆ ದೈವಿಪ್ರೇಮ, ಮಿಥ್ಯನಾಶಕದೇವಿ ಸತ್ಯರೂಪಾ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು