೧೭೯. ಲಲಿತಾ ಸಹಸ್ರನಾಮ ೮೧೯ರಿಂದ ೮೨೨ನೇ ನಾಮಗಳ ವಿವರಣೆ

೧೭೯. ಲಲಿತಾ ಸಹಸ್ರನಾಮ ೮೧೯ರಿಂದ ೮೨೨ನೇ ನಾಮಗಳ ವಿವರಣೆ

                                                                                                   ಲಲಿತಾ ಸಹಸ್ರನಾಮ ೮೧೯ - ೮೨೨

Sarvāṃtaryāminī सर्वांतर्यामिनी (819)

೮೧೯. ಸರ್ವಾಂತರ್ಯಾಮಿನೀ

            ದೇವಿಯು ಒಳಗಡೆ ಇರುವ ಆತ್ಮದೊಳಗೆ ನಿವಸಿಸುತ್ತಾಳೆ ಅಥವಾ ಆಕೆಯು ಒಳಗಿರುವ ಅಂತರಾತ್ಮವಾಗಿ ಇದ್ದಾಳೆ. ದೇವಿಯನ್ನು ಕೇವಲ ಆಂತರಿಕ ಶೋಧನೆಯಿಂದ ಮಾತ್ರವೇ ಹೊಂದಬಹುದು. ದೇವಿಯನ್ನು ಆಕೆಯಿರುವ ಸ್ಥಳವನ್ನು ಹೊರತು ಪಡಿಸಿ ಉಳಿದೆಡೆಯೆಲ್ಲೆಲ್ಲಾ ಹುಡುಕುವೆವು. ಆಕೆಯನ್ನು ಬೇರೆಡೆ ವಿಹ್ವಲವಾಗಿ ಹುಡುಕುವುದಕ್ಕೆ ಕೇವಲ ಅಜ್ಞಾನವೊಂದೇ ಕಾರಣ. ಎಲ್ಲಾ ಉಪನಿಷತ್ತುಗಳೂ ಬ್ರಹ್ಮವು ಅಂತಾರಾಳದೊಳಗಿದೆ ಎನ್ನುವುದನ್ನು ಏಕಧಾಟಿಯಲ್ಲಿ ಒಪ್ಪುತ್ತವೆ.

            ಮಾಂಡೂಕ್ಯ ಉಪನಿಷತ್ತು (ಆಗಮ ಪ್ರಕರಣ - ಶ್ಲೋಕ ೬) ಅಂತರ್ಯಾಮಿ ಎನ್ನುವ ಶಬ್ದವನ್ನು ಉಪಯೋಗಿಸುತ್ತದೆ. ಆ ಉಪನಿಷತ್ತು ಹೇಳುತ್ತದೆ, "ಅವನು (ಬ್ರಹ್ಮವು) ಎಲ್ಲವನ್ನೂ ತಿಳಿದವನು. ಅವನು ಎಲ್ಲರ ಅಂತರಂಗದಲ್ಲಿರುವವನು (ಅಂತರ್ಯಾಮಿ). ಎಲ್ಲಾ ವಸ್ತುಗಳು ಅವನಿಂದಲೇ ಉದ್ಭವಿಸಿ ಎಲ್ಲವೂ ಅವನೊಳಗೇ ಐಕ್ಯವಾಗುತ್ತವೆ".

            ಬೃಹದಾರಣ್ಯಕ ಉಪನಿಷತ್ತು (೩.೭.೩), "........... ಯಾರು ಒಳಗಿನಿಂದ ಭೂಮಿಯನ್ನು ನಿಯಂತ್ರಿಸುತ್ತಿದ್ದಾನೆಯೋ, ಅವನು ಅಂತರಂಗದ ನಿಯಂತ್ರಕ, ನಿನ್ನ ಸ್ವಂತ ಅವಿನಾಶಿ ಆತ್ಮ", ಎಂದು ಹೇಳುತ್ತದೆ.

            ತೈತ್ತರೀಯ ಉಪನಿಷತ್ತು (೨.೬) ಹೇಳುತ್ತದೆ, "ಅವನು ಅವುಗಳನ್ನು ಸೃಷ್ಟಿಸಿದ ಮತ್ತು ಅವುಗಳೊಳಗೆ ಪ್ರವೇಶಿಸಿದ. ಹಾಗೆ ಅವರೊಳಗೆ ಪ್ರವೇಶಿಸಿದ ಅವನು ಕೆಲವೊಮ್ಮೆ ರೂಪಗಳನ್ನು ತಾಳಿದ ಮತ್ತು ಕೆಲವೊಮ್ಮೆ ರೂಪರಹಿತನಾಗಿ ಉಳಿದ”.

           ಎಲ್ಲಾ ಉಪನಿಷತ್ತುಗಳು ಆತ್ಮಸಾಕ್ಷಾತ್ಕಾರಕ್ಕಾಗಿ ಅಂತರಂಗದೊಳಗೆ ದೃಷ್ಟಿಸಾರಿಸುವಂತೆ ಉಪದೇಶಿಸುತ್ತವೆ. ದೇವಿಯು ನಾವು ಹುಟ್ಟುವುದಕ್ಕೆ ಮುಂಚೆಯೇ ಆಕೆಯು ಅದಾಗಲೇ ನಮ್ಮ ದೇಹದೊಳಗೆ ಉಪಸ್ಥಿತಳಾಗಿದ್ದಾಳೆ.

Satī सती (820)

೮೨೦. ಸತೀ

           ದೇವಿಯು ದಕ್ಷನಿಗೆ ಸತಿ ಎನ್ನುವ ಮಗಳಾಗಿ ಜನ್ಮಿಸಿದಳು. ಲಿಂಗ ಪುರಾಣವು (೫.೨೭), "ದೇವರ ಮನೋ ಸೃಷ್ಟಿಯಾದ ಸತಿಯನ್ನು ತನ್ನ ಮಗಳಾಗಿ ದಕ್ಷನು ಸ್ವೀಕರಿಸಿದನು" ಎಂದು ಹೇಳುತ್ತದೆ.

           ಸತಿಯು ತನ್ನ ತಂದೆಯು ಯಜ್ಞಕ್ಕೆ ಶಿವನನ್ನು ಆಹ್ವಾನಿಸದೇ ಇದ್ದುದಕ್ಕೆ ಅವನನ್ನು ದೂಷಿಸಿದಳು ನಂತರ ತನ್ನ ತಂದೆಯಿಂದ ಜರುಗಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ತನ್ನನ್ನು ತಾನೇ ಅಗ್ನಿಗೆ ಸಮರ್ಪಿಸಿಕೊಂಡಳು. ಈ ಪ್ರಸಂಗವು ಶ್ರೀಮದ್ ಭಾಗವತದಲ್ಲಿಯೂ (೪.೪.೧೫ - ೧೮) ಬರುತ್ತದೆ. ಸತಿಯು ತನ್ನ ತಂದೆಯನ್ನು ಈ ವಿಧವಾಗಿ ಸಂಭೋದಿಸಿದಳು, " ನೀನು ಯಾರ ಆಜ್ಞೆಯು ಮೀರಲ್ಪಡಲಾಗದೋ ಅಂತಹ ಪರಮಪ್ರಸಿದ್ಧವಾದ ಶಿವನನ್ನು ದ್ವೇಷಿಸುತ್ತಿರುವೆ, ನಿನಗೆ ತಿಳಿದಿರಲಿ, ಎರಡಕ್ಷರಗಳುಳ್ಳ (ಶಿ, ವ) ಯಾರ ಪವಿತ್ರ ನಾಮವು ಕೇವಲ ಒಂದು ಬಾರಿ ಉಚ್ಛರಿಸಲ್ಪಟ್ಟು ಅದೂ ಸಹ ಸಹಜವಾಗಿ; ಅದು ತ್ವರಿತವಾಗಿಯೇ ಅದನ್ನು ಹೇಳಿದ ಮಾನವರ ಪಾಪಗಳನ್ನು ನಾಶಪಡಿಸುತ್ತದೆ. ಆದ್ದರಿಂದ ನೀನು ಶಾಪಗ್ರಸ್ತನೇ ಸರಿ. ಯಾರ ಪಾದಪದ್ಮಗಳನ್ನು ಬ್ರಹ್ಮೈಕ್ಯವಾಗ ಬಯಸುವ ಮಹಾತ್ಮರ ಮನಸ್ಸುಗಳು ಮಕರಂದವನ್ನು ಹೀರಲು ಕಾತುರರಾಗಿರುವ ದುಂಬಿಗಳಂತೆ ಹೊಂದಲು ಬಯಸುತ್ತವೆಯೋ ಮತ್ತು ಆ ಮಕರಂದವನ್ನು ಹೀರಿ ಬ್ರಹ್ಮೈಕ್ಯದ ಪರಮಾನಂದದಲ್ಲಿ ಮುಳುಗತ್ತವೆಯೋ; ಬೇಡಿದವರಿಗೆ ಆಶೀರ್ವಾದವನ್ನು ನೀಡುವ ಮತ್ತು ಯಾರು ಪ್ರಪಂಚದೊಂದಿಗೆ ಸ್ನೇಹಭಾವದಿಂದರಬಲ್ಲನೋ ಅವನ ಶತ್ರುತ್ವವನ್ನು ನೀನು ಕಟ್ಟಿಕೊಂಡಿದ್ದೀಯ. ನಿನ್ನನ್ನು ಹೊರತು ಪಡಿಸಿ ಇತರೇ ಜನರು; ಸೃಷ್ಟಿಕರ್ತನಾದ ಬ್ರಹ್ಮ ಮೊದಲಾದವರು ಶಿವನ ಪಾದಗಳಿಂದ ಕೆಳಗೆ ಬಿದ್ದ ಹೂವು ಮೊದಲಾದವುಗಳನ್ನು ತಮ್ಮ ತಲೆಯ ಮೇಲಿರಿಸಿಕೊಳ್ಳುತ್ತಾರೆ, ಅವನು ಶಿವನೆನ್ನುವ (ಮಂಗಳಕರನೆನ್ನುವ) ಉನ್ನತ ಹೆಸರನ್ನು ಹೊಂದಿದ್ದರೂ ಅಮಂಗಳಕರನೆಂದು ಅರಿತಿದ್ದಾರೆ - ಏಕೆಂದರೆ ಅವನು ಸ್ಮಶಾನವಾಸಿಗಳ ಸ್ನೇಹಿತನಾಗಿ ತನ್ನ ಬಿಚ್ಚಿದ ಜಡೆಗಳಲ್ಲಿ ಹೆಣದ ಮೇಲಿರಿಸಿದ ಪುಷ್ಪಗುಚ್ಛಗಳಿಂದ ಅಲಂಕರಿಸಿಕೊಂಡು, ಶವಸಂಸ್ಕಾರ ಮಾಡಿದ ಬೂದಿಯನ್ನು ಬಳಿದುಕೊಳ್ಳುವುದಲ್ಲದೆ ಮಾನವ ತಲೆಬುರುಡೆಗಳ ಹಾರವನ್ನು (ರುಂಡ ಮಾಲೆಯನ್ನು) ಧರಿಸಿರುತ್ತಾನಲ್ಲವೇ? ಎಲ್ಲಿ ತನ್ನ ಧರ್ಮಭೀರುವಾದ ಯಜಮಾನನು ಬಾಯಿಗೆ ಕಡಿವಾಣವಿಲ್ಲದ ವ್ಯಕ್ತಿಯಿಂದ ನಿಂದಿಸಲ್ಪಡುತ್ತಾನೆಯೋ, ಆಗ ಒಬ್ಬ ವ್ಯಕ್ತಿಯು ಅಶಕ್ತನಾಗಿದ್ದರೆ (ಹಾಗೆ ನಿಂದನೆಯನ್ನು ಮಾಡಿದ ಮನಷ್ಯನ ಜೀವವನ್ನು ತೆಗೆಯಲು ತನ್ನ ಪ್ರಾಣವನ್ನೇ ಅರ್ಪಿಸಬೇಕಾಗಿದ್ದರೆ); ಅಥವಾ, ಅವನಿಗೆ ಶಕ್ತಿಯಿದ್ದರೆ ಅವನು ದೈವದೂಷಣೆಗೆ ಸಮಾನವಾದ ನಿಂದನೆ ಮಾಡಿದ ನಾಲಗೆಯನ್ನೇ ಕತ್ತರಿಸಿ ಹಾಕಬೇಕು ಮತ್ತು ಆ ಕಾರ್ಯದಲ್ಲಿ ಅವಶ್ಯಬಿದ್ದರೆ ತನ್ನ ಪ್ರಾಣವನ್ನೂ ತ್ಯಾಗಮಾಡಲು ಸಿದ್ಧನಿರಬೇಕು. ಇದು ಅವನ ಕರ್ತವ್ಯವಾಗಿದೆ. ಆದ್ದರಿಂದ ನಾನು, ಶಿವ ದ್ವೇಷಿಯಾದ ನಿನ್ನಿಂದ ಪಡೆದ ಈ ಶರೀರವನ್ನು ಉಳಿಸಿಕೊಳ್ಳು ಇಚ್ಛಿಸುವುದಿಲ್ಲ. ಏಕೆಂದರೆ, ಒಬ್ಬನು ಅಶುದ್ಧವಾದ ಆಹಾರವನ್ನು ಅಜ್ಞಾನದಿಂದ ಸೇವಿಸಿದ್ದರೆ ಅದನ್ನು ವಾಂತಿ ಮಾಡಿಕೊಳ್ಳುವುದರ ಮೂಲಕ ಶುದ್ಧನಾಗುತ್ತಾನೆಂದು ಜ್ಞಾನಿಗಳು ಹೇಳುತ್ತಾರೆ".

           ದೇವಿಯು ದಕ್ಷ ಯಜ್ಞವನ್ನು ನಾಶಗೊಳಿಸಿದಳು (ನಾಮ ೬೦೦) ಮತ್ತು ಆಮೇಲೆ ಆತ್ಮಾಹುತಿ ಮಾಡಿಕೊಂಡು ಪುನಃ ಆಕೆಯು ಹಿಮವಂತನ ಪುತ್ರಿಯಾದ ಉಮೆಯಾಗಿ (ನಾಮ ೬೩೩) ಜನ್ಮತಾಳಿದಳು.

           ಸೌಂದರ್ಯಲಹರಿಯಲ್ಲಿ (ಶ್ಲೋಕ ೯೭), ಆದಿ ಶಂಕರರು ದೇವಿಯನ್ನು ಸತೀ ಎಂದು ಸಂಭೋದಿಸುತ್ತಾರೆ. ಆ ಸಂದರ್ಭದಲ್ಲಿ ಸತೀ ಎಂದರೆ ಪತಿವ್ರತೆಯಾದ ಸ್ತ್ರೀ. ಅವರು ದೇವಿಯನ್ನು “ಸತೀನಾಮ್ ಚರಮೇ” ಅಂದರೆ ‘ಪತಿವ್ರತೆಯರ ಸಾಲಿನಲ್ಲಿ ಪ್ರಥಮ’ಳೆಂದು ಕರೆದಿದ್ದಾರೆ.

Brahmāṇī ब्रह्माणी (821)

೮೨೧. ಬ್ರಹ್ಮಾಣೀ

           ದೇವಿಯು ಬ್ರಹ್ಮದ (ಶಿವನ) ಶಕ್ತಿಯಾಗಿದ್ದಾಳೆ. ಶಿವನು ಪ್ರಕಾಶ ರೂಪವಾದರೆ ಶಕ್ತಿಯು ವಿಮರ್ಶ ರೂಪವಾಗಿದ್ದಾಳೆ. ಅಂತಿಮ ಸತ್ಯವು ಶಿವನಾಗಿದ್ದಾರೆ ಸರ್ವಕಾಲಿಕ ಕ್ರಿಯೆಯು ಶಕ್ತಿಯಾಗಿದ್ದಾಳೆ. ಒಂದು ಇನ್ನೊಂದರ ಹೊರತು ಕಾರ್ಯವೆಸಗಲಾರದು.

           ಅಣಿ ಎಂದರೆ ಬಂಡಿಯ ಕೀಲು (ಕಡಾಣಿ) ಎನ್ನುವ ಅರ್ಥವೂ ಇದೆ. ಈ ಕೀಲು ಇಲ್ಲದಿದ್ದರೆ ಬಂಡಿಯು ಓಡಲಾಗದು. ಈ ಹಿನ್ನಲೆಯಲ್ಲಿ, ಬ್ರಹ್ಮವು (ಶಿವನು) ಶಕ್ತಿಯಿಲ್ಲದೇ (ಅಣಿಯಿಲ್ಲದೇ) ಕಾರ್ಯಶೀಲನಾಗಲಾರ.

           ಬ್ರಹ್ಮವು ಶಿವನಾದರೆ ಬ್ರಹ್ಮಾಣಿಯು ಅವನ ಪತ್ನಿಯಾದ ಶಕ್ತಿಯಾಗಿದ್ದಾಳೆ. ಇದು ಭೈರವ ಮತ್ತು ಭೈರವೀ ಇದ್ದಂತೆ.

Brahma ब्रह्म (822)

೮೨೨. ಬ್ರಹ್ಮ

          ದೇವಿಯೇ ಪರಬ್ರಹ್ಮವಾಗಿದ್ದಾಳೆ. ಶಿವ ಮತ್ತು ಶಕ್ತಿಯರೊಳಗೆ ಭೇದವಿಲ್ಲದೇ ಇರುವುದರಿಂದ ಇಲ್ಲಿ ದೇವಿಯನ್ನು ಬ್ರಹ್ಮ ಎಂದು ಸಂಭೋದಿಸಲಾಗಿದೆ. ಈ ಸಹಸ್ರನಾಮದಲ್ಲಿನ ಅನೇಕ ನಾಮಗಳು ದೇವಿಯ ಪರಬ್ರಹ್ಮಸ್ವರೂಪವನ್ನು ದೃಢಪಡಿಸುತ್ತವೆ. ಒಬ್ಬನು ಮುಕ್ತಿ ಹೊಂದುವ ಸಮಯದಲ್ಲಿ ಬ್ರಹ್ಮದೊಂದಿಗೆ ಐಕ್ಯವಾಗಿ ಪುನಃ ಹುಟ್ಟನ್ನು ಪಡೆಯುವುದಿಲ್ಲ.

          ಈ ಸಹಸ್ರನಾಮ, ಉಪನಿಷತ್ತುಗಳು, ಭಗವದ್ಗೀತೆ ಎಲ್ಲವೂ ಪರಬ್ರಹ್ಮವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸಲು ಪ್ರಯತ್ನಿಸಿವೆ. ಬ್ರಹ್ಮವನ್ನು ಕೇವಲ ವಿವರಿಸಬಹುದೇ ಹೊರತು ಅದನ್ನು ತೋರಿಸಲಾಗದು. ಬ್ರಹ್ಮಕ್ಕೆ ಸ್ವರೂಪವಿಲ್ಲದೇ ಇರುವುದರಿಂದ ಸಾಕ್ಷಾತ್ಕಾರವನ್ನು ಹೊಂದಿದ ವ್ಯಕ್ತಿಗಳ ಅನುಭವವು ಭಿನ್ನವಾಗಿರುತ್ತದೆ (ಬ್ರಹ್ಮ ಸೂತ್ರ ೩.೨.೨೫).

          ಶಂಕರಾಚಾರ್ಯರ ಅದ್ವೈತ ಸಿದ್ಧಾಂತವು ಆತ್ಮವೊಂದೇ ಸತ್ಯ ಉಳಿದುದೆಲ್ಲವೂ ಮಿಥ್ಯ ಎಂದು ಹೇಳುತ್ತದೆ. ಆತ್ಮವು ಶುದ್ಧವಾದ ಜ್ಞಾನದಿಂದ ಕೂಡಿದ್ದು ಅದು ಅಂತಿಮವಾಗಿ ಶುದ್ಧ ಚೈತನ್ಯದೆಡೆಗೆ (ಚಿತ್‌ನೆಡೆಗೆ) ಕರೆದೊಯ್ಯುತ್ತದೆ. ಸತ್ಯವು ಯಾವುದೇ ವಿಧವಾದ ಬದಲಾವಣೆಯನ್ನು ಹೊಂದದೇ ಇರುವುದರಿಂದ ಅದು ನಿತ್ಯವಾಗುತ್ತದೆ. ಆತ್ಮದ (ಬ್ರಹ್ಮದ) ಲಕ್ಷಣಗಳೇನೆಂದರೆ ಅದು ನಿರ್ವಿಶೇಷಾ (ವಿಶೇಷವಿಲ್ಲದ್ದು ಅಥವಾ ಗುಣಗಳಿಂದ ವರ್ಗೀಕರಿಸಲಾಗದ್ದು), ನಿರ್ಗುಣ (ಗುಣರಹಿತ), ನಿರ್ವಿಕಾರ (ಯಾವುದೇ ವಿಧವಾದ ಆಕಾರಗಳನ್ನು ಹೊಂದದೇ ಇರುವುದು), ಶುದ್ಧ (ಸಂಪೂರ್ಣ ಶುಭ್ರವಾದದ್ದು ಅಥವಾ ಪರಿಶುಭ್ರವಾದದ್ದು) ಮತ್ತು ಸತ್-ಚಿತ್-ಆನಂದ (ಅಸ್ತಿತ್ವ, ಪ್ರಜ್ಞೆ ಮತ್ತು ಪರಮಾನಂದ) ಆಗಿದೆ. ಅಂತಿಮ ಹಂತದಲ್ಲಿ, ಪರಮಾನಂದದ ಸ್ಥಿತಿಯಲ್ಲಿ ಸಾಧಕನು ಪರಮೋನ್ನತ ಪ್ರಜ್ಞೆಯುಳ್ಳವನಾಗಿ ಏಕಾಕಿಯಾಗಿರುತ್ತಾನೆ. ಈ ಹಂತದಲ್ಲಿ ಶಕ್ತಿಯೂ ಸಹ ಇರಲಾರಳು. ಈ ಹಂತದಲ್ಲಿ ಶಕ್ತಿಯೂ ಸಹ ಶಿವನೊಳಗೆ ಲೀನವಾಗಿ ಕೇವಲ ಅವನು ಮಾತ್ರವೇ ಆ ಪರಮೋನ್ನತ ಪ್ರಜ್ಞೆಯಾಗಿ ಉಳಿದಿರುತ್ತಾನೆ. ಈ ಪರಮೋನ್ನತ ಪ್ರಜ್ಞೆಯನ್ನೇ ಬ್ರಹ್ಮವೆನ್ನುತ್ತಾರೆ.

           ಈ ನಾಮವು ದೇವಿಯು ಅದೇ (ಬ್ರಹ್ಮವೇ) ಆಗಿದ್ದಾಳೆ ಎಂದು ಹೇಳುತ್ತದೆ. ಆಧ್ಯಾತ್ಮಿಕ ಪ್ರಜ್ಜೆಯು ಅತ್ಯುನ್ನತ ಸಾಂದ್ರತೆಯ ರೂಪದಲ್ಲಿ ಮೊಳಕೆಯೊಡೆಯುತ್ತದೆ ಮತ್ತು ಬೆಳೆಯುತ್ತದೆ; ಅದನ್ನು ಸೂಕ್ತವಾದ ನೆಲದಲ್ಲಿ ಬಿತ್ತಿ ಧ್ಯಾನದಿಂದ ಪೋಷಿಸಿದಾಗ. ಪರಬ್ರಹ್ಮವಾಗಿರುವ ದೇವಿಯು ಅಂತಿಮ ಹಂತದಲ್ಲಿ ಹೊಂದಲ್ಪಡುತ್ತಾಳೆ. ಯಾವಾಗ ದೇವಿಯು ನಿರ್ಗುಣ ಬ್ರಹ್ಮವಾಗುತ್ತಾಳೆಯೋ, ಆಗ ಅವಳು ಶಿವನೊಳಗೆ ಲೀನವಾಗುತ್ತಾಳೆ (ಶಿವ-ಶಕ್ತಿಯರ ಐಕ್ಯತೆ) ಮತ್ತು ಐಕ್ಯಹೊಂದಿದ ಶಿವ ಮಾತ್ರನೇ ಉಳಿಯುತ್ತಾನೆ. ಯಾವಾಗ ದೇವಿಯು ಸಗುಣ ಬ್ರಹ್ಮವಾಗುತ್ತಾಳೆಯೋ, ಕೇವಲ ಆಕೆ ಮಾತ್ರಳೇ ಶಿವನಿಲ್ಲದೇ ಅಸ್ತಿತ್ವದಲ್ಲಿರುತ್ತಾಳೆ.

                                                                                    ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 819 - 822 http://www.manblunder.com/2010/06/lalitha-sahasranamam-meaning-819-822.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Thu, 12/05/2013 - 18:26

ಶ್ರೀಧರರೆ, "೧೭೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
ಲಲಿತಾ ಸಹಸ್ರನಾಮ ೮೧೯ - ೮೨೨
_____________________________________
೮೧೯. ಸರ್ವಾಂತರ್ಯಾಮಿನೀ
ಅಂತರಾಳದಲಡಗಿದ ಬ್ರಹ್ಮ, ಅಜ್ಞಾನದೆ ಹುಡುಕಲೆಲ್ಲೆಡೆ ವಿಹ್ವಲ ಕರ್ಮ
ಆತ್ಮದೆ ಅಂತರಾತ್ಮ ದೇವಿ, ಅಂತರ್ಯಾಮಿಯಲೆಲ್ಲ ಸೃಷ್ಟಿಲಯ ಮರ್ಮ
ನಿಯಂತ್ರಿಸುತ ಅಂತರಂಗ ಬಾಹ್ಯ ಜಗ, ಸಾಕಾರ ನಿರಾಕಾರ ಅವತಾರ
ಸರ್ವಾಂತರ್ಯಾಮಿನಿ ಲಲಿತೆ ಜನ್ಮಪೂರ್ವ, ಆಂತರ್ಯದೆ ಸಾಕ್ಷಾತ್ಕಾರ ||
೮೨೦. ಸತೀ
ಪತಿವ್ರತೆಯರ ಸಾಲಲಿ ಪ್ರಥಮಳು ದೇವಿ, ಶಿವನ ಸತಿಯಾದ ದಕ್ಷ ಕುವರಿ
ದೈವ ಮನೋಸೃಷ್ಟಿಯ ಪಿತನಾಗಿಹ ಭಾಗ್ಯ, ಶಿವ ನಿಂದೆಯಲಿ ಕಳೆದು ಕುರಿ
ಮಂಗಳಾಮಂಗಳ ಅದ್ವೈತ, ಬ್ರಹ್ಮನಾಗಿ ಸಕಲ ಜಗವಂದಿತನ ದೂಷಣೆ ಗತಿ
ದಕ್ಷಯಜ್ಞ ಕೆಡಿಸಿ ಅವನಿತ್ತ ದೇಹವ ತ್ಯಜಿಸಿ, ಶುದ್ಧ ಉಮೆಯಾಗಿ ಶಿವನ ಸತೀ ||
೮೨೧. ಬ್ರಹ್ಮಾಣೀ
ಭೈರವನಿಗಿದ್ದಂತೆ ಭೈರವೀ, ಬ್ರಹ್ಮ ಶಿವನಾಗಿರೆ ಸತಿ ಬ್ರಹ್ಮಾಣಿ ಶಕ್ತಿ
ಕೀಲು-ಕಡಾಣಿಯಿಲ್ಲದ ಬಂಡಿ, ಶಕ್ತಿ ಅಣಿಯಿರೆ ಶಿವ ಚಲಿಸುವ ರೀತಿ
ಕಾರ್ಯಶೀಲನಾಗೆ ಶಿವ ಅಂತಿಮಸತ್ಯ, ಸಾರ್ವಕಾಲಿಕ ಕ್ರಿಯೆಗೆ ಶಕ್ತಿ
ಪ್ರಕಾಶರೂಪಿ-ಶಿವ ಶಕ್ತಿಯಾಗಿ-ಬ್ರಹ್ಮಾಣಿ, ವಿಮರ್ಶಾರೂಪಲಿ ಪ್ರಸ್ತುತಿ ||
೮೨೨. ಬ್ರಹ್ಮ
ಶಿವ ಶಕ್ತಿಯರಿಗೆಲ್ಲಿದೆ ಭೇದ-ಅರ್ಧನಾರೀಶ್ವರಿ, ದೇವಿಯಾಗಿ ಪರಬ್ರಹ್ಮ
ರೂಪರಹಿತ ಬ್ರಹ್ಮನ ನೋಡಲೆಲ್ಲಿ, ವರ್ಣನೆ ಮಾತಲಷ್ಟೆ ಕಾಣೊ ಜಗ
ಶುದ್ಧ ಜ್ಞಾನಾತ್ಮ ಸತ್ಯ ಮಿಕ್ಕೆಲ್ಲ ಮಿಥ್ಯ, ಚಿತ್ ಕಡೆಗೆ ಯಾನ, ಸತ್ಯ ನಿತ್ಯ
ನಿರ್ವಿಶೇಷಾ ನಿರ್ಗುಣಾ ನಿರ್ವಿಕಾರ ಸತ್-ಚಿತ್-ಆನಂದಕಂತಿಮ ಬ್ರಹ್ಮೈಕ್ಯ ||
ಅಂತಿಮ ಹಂತ ಪರಮಾನಂದ ಸ್ಥಿತಿ, ಸಾಧಕ ಪರಮೋನ್ನತ ಪ್ರಜ್ಞೆ ಏಕಾಕಿ
ಶಕ್ತಿಯೂ ಶಿವನಲಿ ಲೀನ ಮಿಕ್ಕು ಬರಿ ಪರಮೋನ್ನತ ಪ್ರಜ್ಞೆಯೆ ಬ್ರಹ್ಮ ಬಾಕಿ
ದೇವಿ ಲಲಿತೆಯೆ ಬ್ರಹ್ಮ, ಆಧ್ಯಾತ್ಮಿಕಪ್ರಜ್ಞೆ ಮೊಳಕೆ, ಅತ್ಯುನ್ನತ ಸಾಂದ್ರ ಬೆಳೆ
ಬ್ರಹ್ಮೈಕ್ಯದೆ-ನಿರ್ಗುಣ, ಶಕ್ತಿಯಿರೆ-ಸಗುಣ, ಬಿತ್ತಿ ಪೋಷಿಸೆ ಸೂಕ್ತ ನೆಲ ಫಸಲೆ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು