೧೮೦. ಲಲಿತಾ ಸಹಸ್ರನಾಮ ೮೨೩ರಿಂದ ೮೨೭ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೮೨೩ - ೮೨೭
Jananī जननी (823)
೮೨೩. ಜನನೀ
ಜನನೀ ಎಂದರೆ ತಾಯಿ ಅಥವಾ ಶ್ರೀ ಮಾತಾ (ನಾಮ ೧). ಈ ನಾಮವು ದೇವಿಯು ಜಗತ್ತಿನ ಸೃಷ್ಟಿಕರ್ತಳೆನ್ನುವ ಅರ್ಥವನ್ನೂ ಕೊಡುತ್ತದೆ. ೨೬೪ನೇ ನಾಮವು ಸೃಷ್ಟಿ-ಕರ್ತ್ರೀ ಆಗಿದೆ. ನಾಮ ೨೯೫, ೩೩೭, ೪೫೭, ೮೨೬ ಮತ್ತು ೯೩೪ನೇ ನಾಮಗಳು ಸಹ ದೇವಿಯ ಬ್ರಹ್ಮಾಂಡ ಮಾತೃತ್ವದ ಕುರಿತಾಗಿ ಹೇಳುತ್ತವೆ.
ಈ ನಾಮವನ್ನು ಹಿಂದಿನ ನಾಮದೊಂದಿಗೆ ಕೂಡಿಸಿಕೊಂಡು ಬ್ರಹ್ಮ-ಜನನೀ ಎಂದು ಉಚ್ಛರಿಸುವ ಪರಿಪಾಠವಿದೆ.
Bahu-rūpā बहु-रूपा (824)
೮೨೪. ಬಹು-ರೂಪಾ
ದೇವಿಗೆ ಬಹು ವಿಧದ ರೂಪಗಳಿವೆ. ಈ ಅಂಶವು ಹಲವು ನಾಮಗಳಲ್ಲಿ ಚರ್ಚಿಸಲ್ಪಟ್ಟಿದೆ. ಈ ಸಮಸ್ತ ಬ್ರಹ್ಮಾಂಡದಲ್ಲಿರುವುದೆಲ್ಲವೂ ಬ್ರಹ್ಮವೇ ಆಗಿದೆ. ಮಾಯೆಯ ಪ್ರಭಾವದಿಂದಾಗಿ ಇಂದ್ರಿಯಗಳ ಮೂಲಕ ಬ್ರಹ್ಮವು ಅನೇಕ ರೂಪ ಮತ್ತು ಆಕಾರಗಳನ್ನು ಹೊಂದಿದೆ ಎಂದು ಭಾವಿಸುತ್ತೇವೆ. ಯಾವಾಗ ಆಲೋಚನೆಯ ಮೂಲಕ ಬಹುವಿಧ ರೂಪಗಳ ಅನುಭವರಾಹಿತ್ಯತೆಯು ಉಂಟಾಗುತ್ತದೆಯೋ ಅದನ್ನೇ ಆತ್ಮಸಾಕ್ಷಾತ್ಕಾರವೆನ್ನುತ್ತಾರೆ.
ದೇವಿಯು ಬಹುರೂಪಳಾಗಿದ್ದಾಳೆ, ಏಕೆಂದರೆ ಆಕೆಯು ಕೇವಲ ಜೀವಿಗಳ ರೂಪದಲ್ಲಿ ಅಸ್ತಿತ್ವದಲ್ಲಿರುವುದಲ್ಲದೇ ಆಕೆಯು ಶಬ್ದ (ಶಬ್ದ ಬ್ರಹ್ಮದ) ರೂಪದಲ್ಲಿಯೂ ಇರುತ್ತಾಳೆ. ಭಂಡಾಸುರನನ್ನು ವಧಿಸುವಾಗ ದೇವಿಯು ತಾಳುವ ವಿವಧ ರೂಪಗಳನ್ನು ‘ಶ್ರೀ ದೇವಿ ಮಹಾತ್ಮ್ಯಂ’ ಕೃತಿಯು ಉಲ್ಲೇಖಿಸುತ್ತದೆ.
‘ಸೂತ ಸಂಹಿತೆ’ಯಲ್ಲಿ ಹೀಗೆ ಹೇಳಲಾಗಿದೆ, "ಆಕೆಯು ಪರಮೋನ್ನತರಲ್ಲಿ ಪರಮೋನ್ನತಳು; ಯಾರು ಒಬ್ಬರೋ ಮತ್ತು ಇಬ್ಬರು ಮತ್ತು ಹದಿನಾರು ಮತ್ತು ಮೂವತ್ತೆರಡಾಗಿದ್ದಾರೋ." ಇಲ್ಲಿ ಒಂದು ಎಂದರೆ ಪರಬ್ರಹ್ಮವಾಗಿದೆ. ಎರಡು ಎಂದರೆ ಸ್ವರಗಳು ಮತ್ತು ವ್ಯಂಜನಗಳು. ಹದಿನಾರು ಎನ್ನುವುದು ಹದಿನಾರು ಸ್ವರಗಳನ್ನು ಸೂಚಿಸುತ್ತದೆ. ಮೂವತ್ತೆರಡು ಎನ್ನುವುದು ವ್ಯಂಜನಗಳನ್ನು ಸೂಚಿಸುತ್ತದೆ. ವಾಸ್ತವವಾಗಿ ಮೂವತ್ತೈದು ವ್ಯಂಜನಗಳು ಇವೆ. ನಾಮ ೮೦೪ರ ಪ್ರಕಾರ ’ರ’ ಮತ್ತು ’ಲ’ಗಳು ಒಂದೇ, ಆಗ ವ್ಯಂಜನಗಳು ೩೪ ಆಗುತ್ತವೆ ಮತ್ತು ಸಾಮಾನ್ಯವಾಗಿ ‘ಕ್ಷ’ವನ್ನು ವ್ಯಂಜನವಾಗಿ ಮಾನ್ಯ ಮಾಡುವುದಿಲ್ಲ ಏಕೆಂದರೆ ಅದು ಸಂಯುಕ್ತಾಕ್ಷರವಾಗಿದೆ (ಅದು ಕ ಮತ್ತು ಷಗಳನ್ನು ಒಳಗೊಂಡಿದೆ; ಕ+ಷ=ಕ್ಷ ಆಗಿದೆ). ಆಗ ವ್ಯಂಜನಗಳು ಮೂವತ್ತಮೂರು ಆಗುತ್ತವೆ. ‘ಹ’ ಅಕ್ಷರವು ಎಲ್ಲಾ ಅಕ್ಷರಗಳ ಮೂಲವೆಂದು ಪರಿಗಣಿಸಲಾಗಿರುವುದರಿಂದ ಅದನ್ನೂ ಸಹ ವ್ಯಂಜನವಾಗಿ ಗುರುತಿಸುವುದಿಲ್ಲ; ಆಗ ಅಂತಿಮವಾಗಿ ೩೨ ವ್ಯಂಜನಗಳು ಉಳಿಯುತ್ತವೆ. ಈ ಮೂವತ್ತೆರಡು ಅಕ್ಷರಗಳಿಗೆ ಮತ್ತು ಈ ಸಹಸ್ರನಾಮಕ್ಕೆ ಸಂಬಂಧವಿದೆ, ಅದೇನೆಂದರೆ ಕೇವಲ ಈ ಮೂವತ್ತೆರಡು ವ್ಯಂಜನಾಕ್ಷರಗಳನ್ನು ಮಾತ್ರವೇ ಬಳಸಿ ಈ ಸಹಸ್ರನಾಮದ ಪ್ರತಿಯೊಂದು ನಾಮವನ್ನೂ ರಚಿಸಲಾಗಿದೆ.
ಶ್ರೀ ರುದ್ರಂ (೧೧.೧), "ಸಹಸ್ರಾಣಿ ಸಹಸ್ರಾರಃ” ಅಂದರೆ ಸಾವಿರಾರು ರುದ್ರರು ಸಹಸ್ರಾರು ರೂಪಗಳಲ್ಲಿ, ಎಂದು ಹೇಳುತ್ತದೆ. ಅವರ ಪತ್ನಿಯರು ರುದ್ರಾಣಿಯರೆಂದು ಕರೆಯಲ್ಪಟ್ಟಿದ್ದಾರೆ. ದೇವಿಯು ಈ ಎಲ್ಲಾ ರುದ್ರಾಣಿಯರ ರೂಪದಲ್ಲಿರುತ್ತಾಳೆ ಮತ್ತು ಶಿವನು ಈ ಎಲ್ಲಾ ರುದ್ರರ ರೂಪದಲ್ಲಿರುತ್ತಾನೆ” ಎಂದು ಹೇಳುತ್ತದೆ.
ಇನ್ನಷ್ಟು ವಿವರಗಳು:
ಸ್ವರಗಳನ್ನು ಬೀಜ (ಶಿವ) ಎಂದು ಮತ್ತು ವ್ಯಂಜನಗಳನ್ನು ಯೋನಿ (ಶಕ್ತಿ) ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಸ್ವರಗಳನ್ನು ಮತ್ತು ವ್ಯಂಜನಗಳನ್ನು ಸೇರಿಸಿ ಎಂಟು ಗುಂಪುಗಳಾಗಿ ವಿಭಜಿಸಿದ್ದಾರೆ ಮತ್ತು ಈ ಪ್ರತಿಯೊಂದು ವಿಭಾಗವೂ ಒಬ್ಬೊಬ್ಬ ಅಷ್ಟಮಾತೆಯರ ಉದ್ಭವಕ್ಕೆ ಕಾರಣವಾಗುತ್ತದೆ. ಈ ಅಷ್ಟಮಾತೆಯರೊಂದಿಗೆ ದೇವಿಯ ಮೂಲ ಸ್ವರೂಪವೂ ಸೇರಿ ಒಟ್ಟು ಒಂಬತ್ತು ರೂಪಗಳಾಗುತ್ತವೆ. ಮತ್ತು ಈ ಒಂಬತ್ತು ರೂಪಗಳು ನವರಸಗಳನ್ನು ಪ್ರತಿನಿಧಿಸುತ್ತವೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ ಎಂಬುವವೇ ಆ ಒಂಬತ್ತು ರಸಗಳು. ಒಂದು ವೇಳೆ ಎಲ್ಲಾ ಐವತ್ತು ಅಕ್ಷರಗಳನ್ನೂ ಗಣನೆಗೆ ತೆಗೆದುಕೊಂಡರೆ, ಆಗ ಪ್ರತಿಯೊಂದು ಅಕ್ಷರವೂ ಒಬ್ಬೊಬ್ಬ ರುದ್ರನಂತೆ ಪ್ರಕಾಶಿಸಿ ಅವು ಐವತ್ತು ರುದ್ರರಿಗೆ ಕಾರಣವಾಗುತ್ತವೆ. ರುದ್ರರ ಸಂಖ್ಯೆಯು ಗ್ರಂಥದಿಂದ ಗ್ರಂಥಕ್ಕೆ ಭಿನ್ನವಾಗಿದೆ.
ವಿಷ್ಣು ಸಹಸ್ರನಾಮದ ೭೨೧ನೇ ನಾಮವು ಅನೇಕ-ಮೂರ್ತಿ ಆಗಿದೆ.
ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ ಮತ್ತು ಪ್ರತಿಯೊಂದು ರೂಪಕ್ಕೂ ಒಂದು ಪ್ರತ್ಯೇಕವಾದ ಗುಣ-ಲಕ್ಷಣವಿರುತ್ತದೆ. ಉದಾಹರಣೆಗೆ ಸರಸ್ವತಿಯನ್ನು ಜ್ಞಾನಕ್ಕಾಗಿ ಪೂಜಿಸಿದರೆ, ಲಕ್ಷ್ಮಿಯನ್ನು ಐಶ್ವರ್ಯಕ್ಕಾಗಿ ಪೂಜಿಸುತ್ತಾರೆ. ದೇವಿಯು ಅನೇಕವಾಗುತ್ತಾಳೆ (ಸೃಷ್ಟಿಯಲ್ಲಿ) ಮತ್ತು ಈ ಅನೇಕಗಳು ಒಂದಾಗುತ್ತದೆ (ತಿರೋಧಾನದಲ್ಲಿ).
Budhārcitā बुधार्चिता (825)
೮೨೫. ಬುಧಾರ್ಚಿತಾ
ದೇವಿಯು ಜ್ಞಾನಿಗಳಿಂದ ಪೂಜಿಸಲ್ಪಡುತ್ತಾಳೆ. ಜ್ಞಾನಿಗಳೆಂದರೆ ಆತ್ಮಸಾಕ್ಷಾತ್ಕಾರ ಹೊಂದಿದವರು. ಆತ್ಮಸಾಕ್ಷಾತ್ಕಾರ ಹೊಂದಿದರೂ ಸಹ ಅವರು ಕಾರ್ಯ ನಿರತರಾಗಿರುತ್ತಾರೆ ತಮ್ಮ ಕರ್ಮಶೇಷಗಳನ್ನು ಕಳೆದುಕೊಳ್ಳಲು.
ಭಗವದ್ಗೀತೆಯಲ್ಲಿ (೬.೧೬) ಶ್ರೀ ಕೃಷ್ಣನು ಹೀಗೆ ಹೇಳಿದ್ದಾನೆ, "ನಾಲ್ಕು ವಿಧವಾದ ಭಕ್ತರು ನನ್ನನ್ನು ಆರಾಧಿಸುತ್ತಾರೆ, ಐಹಿಕ ಸುಖಭೋಗಗಳನ್ನು ಹೊಂದಬಯಸುವವರು, ದುಃಖಿಗಳು, ಜ್ಞಾನವನ್ನು ಅರಸಿ ಹೊರಟವರು ಮತ್ತು ವಿವೇಕವಂತರು".
Prasavitrī प्रसवित्री (826)
೮೨೬. ಪ್ರಸವಿತ್ರೀ
ದೇವಿಯು ಈ ವಿಶ್ವಕ್ಕೆ ಜನ್ಮ ನೀಡುತ್ತಾಳೆ ಎನ್ನುವುದು ಈ ನಾಮದ ಶಬ್ದಶಃ ಅರ್ಥ. ಈ ವಿಶ್ವವು ಶಿವ-ಶಕ್ತಿಯರ ಐಕ್ಯತೆಯ ಪರಮಾನಂದದಿಂದ ಉಂಟಾಗುತ್ತದೆ.
ಈ ನಾಮವನ್ನು ಆಕೆಯ ಪರಾ-ದೇವಿ ಸ್ವರೂಪಕ್ಕೆ ಆರೋಪಿಸಬಹುದು. ಹೀಗೆ ಹೇಳಲಾಗುತ್ತದೆ, "ತನ್ನಷ್ಟಕ್ಕೆ ತಾನೇ ಆಗಲಿ ಅಥವಾ ಪರಮಾನಂದದ ಸ್ಥಿತಿಯಲ್ಲಿ ಪ್ರಾಣವಾಯುವಿನ ಮೂಲಕ ನಿಧಾನವಾಗಿಯಾಗಲಿ ಒಬ್ಬನು ಪ್ರಫುಲ್ಲವಾದ ಮನಸ್ಸಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಬೇಕು, ಅದು ಹೃದಯದ ಪೂಜೆಯನ್ನು ಕೈಗೊಳ್ಳುವುದಾಗಿದೆ ಮತ್ತದು ಪರಾದೇವಿಯ ಪ್ರತ್ಯೇಕ ಲಕ್ಷಣವಾಗಿದ್ದು ಧನ್ಯತಾಭಾವದಿಂದ ಕೂಡಿದೆ". ಲಲಿತಾಂಬಿಕೆಯ ಕ್ರಿಯಾ ಶಕ್ತಿಯು ಶಿವನ ಜ್ಞಾನ ಶಕ್ತಿಯೊಂದಿಗೆ ಒಂದುಗೂಡಿದಾಗ ಸೃಷ್ಟಿಯುಂಟಾಗುತ್ತದೆ. ನೇತ್ರ ತಂತ್ರವು (೭.೪೦) ಹೀಗೆ ಹೇಳುತ್ತದೆ, "ಪರಾ ಶಕ್ತಿಯು ಎಲ್ಲಾ ದೇವಾನುದೇವತೆಗಳ ಶಕ್ತಿಯ ಮೂಲವಾಗಿದ್ದಾಳೆ. ಎಲ್ಲವೂ ಆಕೆಯಿಂದಲೇ ಹೊರಹೊಮ್ಮುತ್ತದೆ".
Pracaṇḍā प्रचण्डा (827)
೮೨೭. ಪ್ರಚಂಡಾ
ದೇವಿಯು ಕೋಪಿಷ್ಠಳು ಅಥವಾ ಆಗ್ರಹವುಳ್ಳವಳಾಗಿದ್ದಾಳೆ. ಪರಬ್ರಹ್ಮವೂ ಸಹ ಶಿಸ್ತನ್ನು ಅನುಷ್ಠಾನಗೊಳಿಸಲು ಆಗ್ರಹವನ್ನು ಹೊಂದಿರುತ್ತದೆ.
ತೈತ್ತರೀಯ ಉಪನಿಷತ್ತು (೨.೮.೧) ಮತ್ತು ಕಠೋಪನಿಷತ್ತು (೨.೩.೩) ಎರಡೂ ಹೀಗೆ ಹೇಳುತ್ತವೆ, "ಇವನ (ಬ್ರಹ್ಮದ) ಭಯದಿಂದ ವಾಯುವು ಬೀಸುತ್ತಾನೆ, ಸೂರ್ಯನು ಉದಯಿಸುತ್ತಾನೆ; ಇವನ ಭಯದಿಂದ ಅಗ್ನಿ, ಇಂದ್ರ ಮತ್ತು ಮೃತ್ಯುವೂ ಸಹ ತಮ್ಮ ಕರ್ತವ್ಯಗಳಲ್ಲಿ ಪ್ರವೃತ್ತರಾಗಲು ಧಾವಿಸುತ್ತಾರೆ".
ಬ್ರಹ್ಮ ಸೂತ್ರವು (೧.೩.೩೯) ಹೀಗೆ ಹೇಳುತ್ತದೆ, "ಈ ವಿಶ್ವದ ಉಗಮವಾಗುತ್ತದೆ ಮತ್ತು ಅದರಲ್ಲಿ ಸ್ಪಂದನವುಂಟಾಗುತ್ತದೆ ಏಕೆಂದರೆ ಅದರೊಳಗೆ ಮಿಂಚಿನಂತಹ ಮಹಾ ಭಯಂಕರವಾದ ಪ್ರಾಣವಿದೆ."
ವಿಷ್ಣು ಸಹಸ್ರನಾಮ ೩೧೫ನೇ ನಾಮವಾದ ಕ್ರೋಧಕೃತ್ಕರ್ತಾ ಸಹ ಇದೇ ಅರ್ಥವನ್ನು ಹೊಂದಿದೆ.
ಅರ್ಜುನನು ಭಗವದ್ಗೀತೆಯಲ್ಲಿ (೧೧.೨೦) ಕೃಷ್ಣನನ್ನು ಉದ್ದೇಶಿಸಿ ಹೀಗೆ ಹೇಳುತ್ತಾನೆ, "ಓಹ್ಞ್! ನಿನ್ನ ಸರ್ವಾಂತರಯಾಮಿಯಾದ ಭಯಾನಕ ರೂಪವನ್ನು ನೋಡಿದ ನಂತರ, ಈ ಜಗತ್ತಿನ ಆತ್ಮವಾಗಿರುವವನೇ; ತ್ರಿಲೋಕಗಳೂ ಸಹ ಮಹಾನ್ ಭೀತಿಗೊಳಗಾಗುತ್ತವೆ"
ಚಂಡಿ (ದುರ್ಗ, ಲಕ್ಷ್ಮೀ ಮತ್ತು ಸರಸ್ವತೀ ಇವರ ಸಂಯುಕ್ತ ರೂಪ) ಶಬ್ದವು ಚಂಡಿಮಾನ್ ಎಂದರೆ ಆಜ್ಞಾಪಿಸು, ಕ್ರೋಧವುಂಟು ಮಾಡು, ಘೋರವಾಗಿರು ಎನ್ನುವ ಅರ್ಥಹೊಂದಿರುವ ಮೂಲ ಶಬ್ದದಿಂದ ನಿಷ್ಪತ್ತಿಗೊಳಿಸಲಾಗಿದೆ.
ಶ್ರೀ ರುದ್ರಂನ ಸೂಕ್ತಿಯು ರುದ್ರನ ಕೋಪಕ್ಕೆ ವಂದನೆಗಳನ್ನರ್ಪಿಸುವುದರೊಂದಿಗೆ ಆರಂಭವಾಗುತ್ತದೆ [ನಾಮಸ್ತೇ ರುದ್ರಮನ್ಯವ ಉಧೋತ ಈಶ್ವಯೇ ನಮಃ नामस्ते रुद्रमन्यव उधोत इश्वए नमः].
ಈ ನಾಮವು ಬ್ರಹ್ಮದ ಗುಣಲಕ್ಷಣಗಳಲ್ಲಿ ಒಂದನ್ನು ಚರ್ಚಿಸುತ್ತದೆ. ಕೋಪವು ಶಿಸ್ತನ್ನು ಅನುಷ್ಠಾನಗೊಳಿಸಿ ಪ್ರಪಂಚವನ್ನು ಸುಸ್ಥಿತಿಯಲ್ಲಿಡಲು ಬೇಕಾಗಿರುವ ಸಗುಣ ಬ್ರಹ್ಮದ ಒಂದು ಗುಣವಾಗಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 823 - 827 http://www.manblunder.com/2010/06/lalitha-sahasranamam-823-827.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೮೦. ಲಲಿತಾ ಸಹಸ್ರನಾಮ ೮೨೩ರಿಂದ ೮೨೭ನೇ ನಾಮಗಳ ವಿವರಣೆ
ಶ್ರೀಧರರೆ,"೧೮೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೮೨೩ - ೮೨೭
__________________________________________
.
೮೨೩. ಜನನೀ
ಬ್ರಹ್ಮಾಂಡವ ಹೆತ್ತವಳು ಮಾತೃತ್ವದ ಮಹಾ ಛಾಯೆ
ಜಗತ್ತಿನ ಸೃಷ್ಟಿಕರ್ತೆ ಸ್ಥಿತಿ ಲಯ ನಿಭಾಯಿಸೆ ಮಾಯೆ
ಕರುಣಾಸಾಗರ ಶ್ರೀ ಮಾತಾ ಲಲಿತೆ ಪ್ರೀತಿ ಮಾರ್ದನಿ
ವಿಶ್ವದೆಲ್ಲ ಜೀವಿಗು ಹಂಚುತ ಸಲಹುವ ಬ್ರಹ್ಮ ಜನನೀ ||
.
೮೨೪. ಬಹು-ರೂಪಾ
ಬಹುರೂಪಿಣಿ ದೇವಿ ಜೀವಿ-ಶಬ್ದಾದಿ ಚರಾಚರ ಆಕಾರ ನಿರಾಕಾರ
ಭಂಡಾಸುರ ವಧಾ ವಿವಿಧ ರೂಪ, ಆಲೋಚನೆಗಾತ್ಮ ಸಾಕ್ಷಾತ್ಕಾರ
ರುದ್ರರೆಲ್ಲ ಶಿವರೂಪ, ಸತಿ ರುದ್ರಾಣಿ ರೂಪದೆ ದೇವಿ ನಾನಾಕಾರದೆ
ಐಶ್ವರ್ಯಲಕ್ಷ್ಮಿ ಜ್ಞಾನಸರಸ್ವತಿ ರೂಪ ಪೂಜಿತೆ ವಿವಿಧ ಗುಣಲಕ್ಷಣದೆ ||
.
ಅನೇಕವಾಗಿ ದೇವಿ ಸೃಷ್ಟಿಯಲಿ, ಏಕವಾಗುತ ಮತ್ತೆ ತಿರೋದಾನದಲಿ
ಪರಮೋನ್ನತರಲಿ ಪರಮೋನ್ನತೆ ಏಕ ಬ್ರಹ್ಮ ದ್ವೈತ ಸ್ವರ ವ್ಯಂಜನದಲಿ
'ರ ಸಮ ಲ', ಗಣಿಸದೆ ಸಂಯುಕ್ತಾಕ್ಷರ 'ಕ್ಷ', ಮೂಲಾಕ್ಷರ 'ಹ'ವರ್ಜಿತ
ಅಂತಿಮದಲುಳಿವ ಮುವ್ವತ್ತೆರಡು ವ್ಯಂಜನಾಕ್ಷರದೆ ನಾಮಾವಳಿ ರಚಿತ ||
.
ಅಕ್ಷರ ಸ್ವರಗಳೆ ಶಿವ-ಬೀಜ, ವ್ಯಂಜನವೆ ಶಕ್ತಿ-ಯೋನಿ ಒಟ್ಟಾಗೆ ಅಷ್ಟಗಣ
ಅಷ್ಟ ಮಾತೆಯರುದ್ಭವ ಕಾರಣ, ಲಲಿತೆ ಸೇರಿ ಒಂಭತ್ತು ರೂಪ ಧಾರಣ
ಪ್ರತಿರೂಪ ಪ್ರತಿನಿಧಿಸುತ ನವರಸ, ಪ್ರತಿ ಅಕ್ಷರವಾಗುತ ಕಾರಣ ರುದ್ರ
ಐವತ್ತು ರುದ್ರರಾಗಿ ಅನೇಕ ರೂಪ, ರೂಪಬಹುರೂಪದೆ ಲಲಿತಾ ಪ್ರವರ ||
.
೮೨೫. ಬುಧಾರ್ಚಿತಾ
ಆತ್ಮ ಸಾಕ್ಷಾತ್ಕಾರ ಹೊಂದಿದಾ ಜ್ಞಾನಿಗಳ ಜಗ
ಅವಿರತ ಲಲಿತೆಯ ಪೂಜಿಸಿಹ ಸಾಧಕ ಬಳಗ
ವಿರಮಿಸದೆ ಆಗಿಹರು ಸರ್ವದಾ ಕಾರ್ಯನಿರತ
ಕರ್ಮಶೇಷ ಕಳಚಿ ಹರಸಿ ಲಲಿತೆ ಬುಧಾರ್ಚಿತಾ ||
.
೮೨೬. ಪ್ರಸವಿತ್ರೀ
ಶಿವ ಶಕ್ತಿ ಐಕ್ಯತೆಯ ಪರಮಾನಂದ ಫಲಿತ
ದೇವಿ ಲಲಿತಾಬ್ರಹ್ಮ ವಿಶ್ವಕೆ ಜನ್ಮವೀಯುತ
ದೇವಿ ಕ್ರಿಯಾಶಕ್ತಿ ಬೆರೆತ ಶಿವಜ್ಞಾನಕೆ ಖಾತ್ರಿ
ಸೃಷ್ಟಿಯಾಗಿಸಿ ಪರಾದೇವಿ ಲಲಿತೆ ಪ್ರಸವಿತ್ರೀ ||
.
೮೨೭. ಪ್ರಚಂಡಾ
ಶಿಸ್ತಿನನುಷ್ಠಾನಕೆ ಬ್ರಹ್ಮದ ಅಗ್ರಹ, ಧಾರಣೆ ರೂಪವೆ ಕೋಪ
ಇಂದ್ರಾಗ್ನಿ ಮೃತ್ಯು ವಾಯು ಸೂರ್ಯ, ಭೀತಿ ಕರ್ತವ್ಯ ತಾಪ
ಜಗದುಗಮ ಸ್ಪಂದನ, ವಿಶ್ವರೂಪ, ಚಂಡಿಯ ಘೋರ ನೋಡ
ದುರ್ಗ-ಲಕ್ಷ್ಮಿ-ಸರಸ್ವತಿ ಸಂಯುಕ್ತ, ರೌದ್ರಗುಣದೇವಿ ಪ್ರಚಂಡಾ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು