ರಾಜರತ್ನಂ ನೆನಪಿಗೆ...
ರಾಜರತ್ನಂ ನೆನಪಿಗೆ...
______________
.
ನಾಳೆ (೦೫ ನೆ ಡಿಸೆಂಬರ) ಅಭಿಮಾನಿ ಬಳಗದಲ್ಲಿ ಪ್ರೀತಿಯಿಂದ ಗುಂಡು ಪಂಡಿತರೆಂದೆ ಕರೆಸಿಕೊಳ್ಳುವ ಕನ್ನಡದ ಹಿರಿಯ ಪ್ರಖ್ಯಾತ ಕವಿ ಜಿ.ಪಿ.ರಾಜರತ್ನಂರವರ ಜನ್ಮದಿನ. ಎಷ್ಟೋ ಸಾಮಾನ್ಯ ಜನರಿಗೆ ಅವರ ಹೆಸರು ಗೊತ್ತಿರದಿದ್ದರೂ, ಅವರ ಗುಂಡಿನ ಪದ್ಯಗಳು ಚೆನ್ನಾಗಿ ತಿಳಿದಿರುತ್ತವೆ - ಅಷ್ಟರಮಟ್ಟಿಗೆ ಪ್ರಸಿದ್ದವಾದ ಕುಡಿತದ ಹಾಡುಗಳು ಶ್ರೀ ರಾಜರತ್ನಂ ರವರದು. 'ರತ್ನನ ಪದಗಳು' ಕವಿಯಾಗಿ ಇವರ ಹೆಸರನ್ನು ಅಜರಾಮರಗೊಳಿಸಿದರೆ, ಉತ್ಕೃಷ್ಟ ಹಾಗೂ ಅಡಂಬರವಿಲ್ಲದ ಜನಪದದ ಯಥಾವತ್ ದಾಖಲೆಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಗಟ್ಟಿಯಾಗಿ ನೆಲೆಯೂರಿಬಿಟ್ಟಿದೆ. ಭೂಮಿನ್ ತಬ್ಬಿದ್ ಮೋಡ್ ಇದ್ದಂಗೆ, ಬ್ರಹ್ಮ ನಿಂಗೆ ಜೋಡಿಸ್ತೀನಿ, ಯಂಡ ಯಡ್ತಿ ಕನ್ನಡ್ ಪದಗಳ್ ಅಂದ್ರೆ ರತ್ನಂಗ್ ಪ್ರಾಣ, ಬೇವರ್ಸಿ ನನ್ ಪುಟ್ನಂಜಿ, ನೀನ್ ನನ್ ಅಟ್ಟಿ ಬೆಳಕ್ ಇದ್ದಂಗೆ - ಹೀಗೆ ಕುಡುಕ ರತ್ನನ ಲೋಕದ ಹಾಡುಗಳೆಲ್ಲ ಅಚ್ಚೊತ್ತಿದಂತೆ ನಿಂತುಬಿಟ್ಟಿವೆ ಕನ್ನಡಿಗರ ಮನದಲ್ಲಿ. ಅದನ್ನು ಇನ್ನು ಆಳದಲ್ಲಿ ಅಳ್ಳಾಡದಂತೆ ಬೇರೂರಿಸುವ ಕಾರ್ಯ ಮಾಡಿದವರು ನಮ್ಮ ಭಾವಲೋಕದ ಗಾನ ಗಂಧರ್ವರು. ಈ ಪದಗಳಿಗೆ ಮಧುರವಾದ ರಾಗ ಹಾಕಿ ಹಾಡಿನ ಮುಖಾಂತರ ಪಂಡಿತರಿಂದ ಪಾಮರರತನಕ ಈ ಸೊಗಡಿನ ಸಾಹಿತ್ಯವನ್ನು ನಿರರ್ಗಳವಾಗಿ ಹರಿಯುವಂತೆ ಮಾಡಿದರು. ಹೀಗಾಗಿ ರಾಜರತ್ನಂರ ಹೆಸರು ಕನ್ನಡ ಸಾಹಿತ್ಯಾಭಿಮಾನಿಗಳ ಮನದಲ್ಲಿ ಒಂದು ವಿಶಿಷ್ಟ ಸ್ಥಾನ ಗಳಿಸಿ ಶಾಶ್ವತವಾಗಿ ನಿಂತುಬಿಟ್ಟಿದೆ. ಅದರಲ್ಲೂ ಸ್ವತಃ ತಾವೆ ಕುಡಿಯದ ರಾಜರತ್ನಂ ಅದು ಹೇಗೆ ಅಷ್ಟು ಚೆನ್ನಾಗಿ ಅನುಭಾವಿಸಿ , ಸತ್ವಯುತವಾಗಿ, ಪ್ರಭಾವಶಾಲಿಯಾಗಿ ಬರೆಯಲು ಸಾಧ್ಯವಾಯಿತೆಂಬುದು ಈ ವ್ಯಕ್ತಿತ್ವದ ಪ್ರತಿಭೆ, ಹಿರಿಮೆಯ ಮತ್ತೊಂದು ದ್ಯೋತಕ.
.
ಬರಿ ಕುಡುಕ ರತ್ನನ ಹಾಡುಗಳಿಗೆ ಮಾತ್ರವಲ್ಲದೆ ರಾಜರತ್ನಂ ಮಕ್ಕಳ ಪದ್ಯದಿಂದಲೂ ಅಷ್ಟೆ ಹೆಸರಾದವರು. ಬಣ್ಣದ ತಗಡಿನ ತುತ್ತೂರಿ, ನಾಯಿಮರಿ ನಾಯಿಮರಿ ತಿಂಡಿ ಬೇಕೆ, ನಮ್ಮ ಮನೆಯಲೊಂದು ಸಣ್ಣ ಪಾಪ - ಹೀಗೆ ಇನ್ನೂ ಅನೇಕ ಪ್ರಖ್ಯಾತ ಶಿಶು ಗೀತೆಗಳ ಜನಕರಾಗಿ ತಮ್ಮದೆ ಆದ ಛಾಪು ಮೂಡಿಸಿದವರು. ಅವರ ಜನ್ಮದಿನದ ಹೊತ್ತಿನಲ್ಲಿ, ಅವರ ನೆನಪಿಗಾಗಿ ಈ ಎರಡು ಕವನಗಳ ಕಿರು ಕಾಣಿಕೆ, ಅರ್ಪಣೆ ವಿನಮ್ರತೆಯಿಂದ
.
01. ಕುಡೀದಿದ್ರೂ ಒಂದೇ ಒಂತೊಟ್ಟು
02. ಗುಂಡು ಪಂಡಿತ ರಾಜರತ್ನಂ
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
.
.
ಕುಡೀದಿದ್ರು ಒಂದೇ ಒಂತೊಟ್ಟು ...
___________________________
(ರಾಜರತ್ನಂ ನೆನಪಿಗೆ - 01)
.
ವತ್ತಾರೆ ಹೊತ್ನಲ್ಲಿ ರಾತ್ರಿ ಕತ್ಲಲ್ಲಿ
ಮೂರೊತ್ತು ಇದ್ದಂಗೆ ಹೆಂಡದ್ಮತ್ನಲಿ
ಕುಡೀದಿದ್ರು ರಾಜ ಒಂದೇ ಒಂತೊಟ್ಟು
ಕುಡ್ದವ್ರ ಪದ-ರತ್ನ ಉದುರಿ ಕಟ್ಕಟ್ಟು || 01 ||
.
ನರ್ಕ ನಾಲ್ಗೆ ಎದ್ ಬಿದ್ದಾಯ್ತು
ಕೊಚ್ಚೆಲದ್ದಿ ಮೇಲುಕ್ಕೆದ್ದಾಯ್ತು
ಮೂಗಷ್ಟೆ ಸಾಲ್ದು ಬಿಚ್ಬೇಕು ಹೊಲ್ಗೆ
ಜೋರಾಗ್ಬೇಕೀಗ 'ಸಿರಿಗನ್ನಡಂ ಗೆಲ್ಗೆ' || 02 ||
.
ಕುಡ್ದವರೆ ವಾಸಿ ನಮ್ಕನ್ನಡದಾ ಆಸ್ತಿ
ಬೈಯೋದುಗಿಯೋದೆಲ್ಲ ಕನ್ನಡ್ದಲ್ಲೆ ಜಾಸ್ತಿ
ಕುಡುಕ್ರಲ್ಲದ್ಮರ್ವಾದಸ್ತ್ರು ಆಡಿದ್ದೆ ಕಮ್ಮಿ
ಬುಟ್ಟಾಕಿ ಕನ್ನಡಾನೆ ಆಡ್ತಾರಿಂಗ್ಲಿಷ್ ರಮ್ಮಿ || 03 ||
.
ಯಾಕ್ರಣ್ಣ ನಾಚ್ತೀರ ತಾಯ್ಭಾಷೆ ಮಸ್ತ
ಆಡ್ಕೊಂಡು ಹಾಡಾಡ್ತ ಬೆಳ್ಸೋಕೇನ್ ಕಸ್ಟ
ಒಂದೊಪ್ಪತ್ತು ತಿಂದ್ರೂನು ಕನ್ನಡ್ದಲ್ ಅಳ್ತಾ
ಬಾಯ್ಬಿಕ್ತಾನೆ ಬದ್ಕಿಲ್ವಾ, ಆಗ್ದಂಗೆ ಸಸ್ತಾ? || 04 ||
.
ಪುಟ್ನಂಜ ಪುಟ್ನಂಜಿ ರಾಜ್ರತ್ನಂ ಮೊಕ್ತ
ಬಂದ್ ಹೋಗ್ರಪ್ಪ ಸ್ವಲ್ಪ ಮಾತಲ್ಲೆ ಇಕ್ತಾ
ಹಂಗಾದ್ರೂ ಮೇಲೇಳ್ಲಿ ಕನ್ನಡದ ಗಾಳಿ
ಧೂಳೀಪಟ ಮಾಡ್ತಾ ನುಗ್ದಂಗೆ ಗೂಳಿ || 05 ||
.
------------------------------------------------------------------------------------
ನಾಗೇಶ ಮೈಸೂರು, ೦೪. ಡಿಸೆಂಬರ. ೨೦೧೩, ಸಿಂಗಾಪುರ
-------------------------------------------------------------------------------------
.
.
ಗುಂಡು ಪಂಡಿತ ರಾಜರತ್ನಂ
_________________________
(ರಾಜರತ್ನಂ ನೆನಪಿಗೆ - 02)
.
ಕುಡ್ಕುರ ಕಿರೀಟ ರಾಜರತ್ನ
ಪುಟ್ನಂಜ ನಂಜಿ ಗ್ಯೆಪ್ತಿ ಯತ್ನ
ಕುಡ್ದಿದ್ದೆ ಕನ್ನಡ್ಸಾರಾಯಿ ಹೆಸರು
ಬಾಯ್ವಾಸನೆ ಬರಿ ಕನ್ನಡದುಸ್ರು || 01 ||
.
ಅದೇನಪ್ಪಾ ಇಲ್ಲೆಡವಟ್ಟು
ಪಾಠನ್ ಮಾಡ್ದಂಗೆ ಗಟ್ಟು
ವದರೊಕಾಗುತ್ತಾ ಪುನುಗು
ಯಾರ್ದೊ ಅನುಭವ ಬರ್ದು || 02 ||
.
ಗುನುಗಲ್ಲೆ ಗುಂಡು ಹಾಕ್ತ
ರತ್ನನ ಪರ್ಪಂಚನೆ ಸಾಕ್ತಾ
ನೋಡ್ನೋಡ್ತಾನೆನೆ ಪರಿಣಿತ
ರಾಜರತ್ನಂ ಗುಂಡು ಪಂಡಿತ || 03 ||
.
ಕುಡ್ದು ಬಿದ್ದೋರ ಕಥನ
ನೋಡ್ತಾ ಕೇಳ್ತಾನೆ ಮಥನ
ಹೇಗ್ಬಂತೊ ಸರಸರ ಕವನ
ಜನ ಜೀವ್ನಾನೆ ಪದ್ಯಾನ? || 04 ||
.
ಕುಡ್ದು ಹಾಳಾಗೊರ್ ಬಾಳಾಟ
ಬಿದ್ದು ತೂರಾಡ್ಸೊ ಹಾರಾಟ
ತೊದಲೊ ಮಕ್ಕಳ್ ಸಾವಾಸ
ಕನ್ನಡಕ್ಕೊಸ್ಕರ ಏನೇನ್ ವೇಸ || 05 ||
.
------------------------------------------------------------------------------------
ನಾಗೇಶ ಮೈಸೂರು, ೦೪. ಡಿಸೆಂಬರ. ೨೦೧೩, ಸಿಂಗಾಪುರ
-------------------------------------------------------------------------------------
Comments
ಉ: ರಾಜರತ್ನಂ ನೆನಪಿಗೆ...
ರಾಜರತ್ನಂ ಅವರನ್ನು ವಿಶಿಷ್ಠವಾಗಿ ಪರಿಚಯಿಸಿದ್ದೀರ, ಅದೂ ಗುಂಡು ಹಾಕುವ ಹೊತ್ನಲ್ಲಿ ಗುಂಡು ಹಾಕುವುದು ಬಿಟ್ಟು :)
ಅವರ ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿ ಅವರನ್ನು ಸ್ಮರಿಸುವ ಸಕಾಲಿಕ ಬರಹಕ್ಕಾಗಿ ಅಭಿನಂದನೆಗಳು ನಾಗೇಶರೆ. ಇತ್ತೀಚೆಗಷ್ಟೇ ಅವರು ಮಕ್ಕಳಿಗಾಗಿ ಮತ್ತು ಜನಸಾಮಾನ್ಯರಿಗಾಗಿ ಬರೆದ ಆಳ್ವಾರರ ಕಥೆಗಳು ಪುಸ್ತಕವನ್ನು ಓದುತ್ತಿದ್ದೆ. ಅವರನ್ನು ಮತ್ತೊಮ್ಮೆ ಜ್ಞಾಪಿಸಿ ಅವರ ನೆನಪು ಮಾಸದಂತೆ ಮಾಡಿದ್ದೀರ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ರಾಜರತ್ನಂ ನೆನಪಿಗೆ... by makara
ಉ: ರಾಜರತ್ನಂ ನೆನಪಿಗೆ...
ಶ್ರೀಧರರೆ, ಗುಂಡು ಪಂಡಿತರ ನೆನಪೆ ಮತ್ತೇರಿಸಿ ಮೂರ್ನಾಲ್ಕು ಗುಂಡಿನ ಹಾಡುಗಳನ್ನು (ಮತ್ತೊಂದು ಶಿಶುಗೀತೆಯನ್ನು ಸಹ) ಬರೆಸಿಬಿಟ್ಟಿತು. ಇನ್ನು ಬೇರೆ 'ಗುಂಡಿನ' ಅಗತ್ಯ ಕಾಣಲಿಲ್ಲ:-)
ಉ: ರಾಜರತ್ನಂ ನೆನಪಿಗೆ...
ನಾಗೇಶಜಿ, ಜಿ ಪಿ ರವರ ಜನ್ಮದಿನದ ಸಂದರ್ಭದಲ್ಲಿ ಅವರನ್ನು ನೆನೆದು, ತಮ್ಮ ಕಾಣಿಕೆಗೂ ಕೂಡ ಸುಂದರವಾಗಿ ಮೂಡಿವೆ. ಉತ್ತಮ ಪ್ರಯತ್ನಕ್ಕೆ ಅಭಿನಂದನೆಗಳು
In reply to ಉ: ರಾಜರತ್ನಂ ನೆನಪಿಗೆ... by lpitnal
ಉ: ರಾಜರತ್ನಂ ನೆನಪಿಗೆ...
ಇಟ್ನಾಳರೆ ನಮಸ್ಕಾರ. ರಾಜರತ್ನಂರವರ ಹೆಸರು ಕವನಗಳೆ ಅಷ್ಟು ಸ್ಪೂರ್ತಿಕಾರಕ. ತಮ್ಮ ಅಭಿನಂದನೆಗೆ ಧನ್ಯವಾದಗಳು :-)
ಉ: ರಾಜರತ್ನಂ ನೆನಪಿಗೆ...
"ಬರಿ ಕುಡುಕ ರತ್ನನ ಹಾಡುಗಳಿಗೆ ಮಾತ್ರವಲ್ಲದೆ ರಾಜರತ್ನಂ ಮಕ್ಕಳ ಪದ್ಯದಿಂದಲೂ ಅಷ್ಟೆ ಹೆಸರಾದವರು.
ಬಣ್ಣದ ತಗಡಿನ ತುತ್ತೂರಿ,
ನಾಯಿಮರಿ ನಾಯಿಮರಿ ತಿಂಡಿ ಬೇಕೆ,
ನಮ್ಮ ಮನೆಯಲೊಂದು ಸಣ್ಣ ಪಾಪ "
>>>>ಸಾರ್ ನಿಜ ಹೇಳಲೇ ....? ನಿಮ್ಮನ್ನು ನೋಡ್ತಿದ್ರೇ , ಅಲ್ಲಲ್ಲ, ನೀವ್ ಬರೆಯೋದು ಓದ್ತಿದ್ರೆ, ನಂಗೆ ಹೊಟ್ಟೆಕಿಚ್ಹ್ಹಾಗ್ತಿದೆ ..
ಅಲ್ದೇ ನಿಮ್ಮ ಮೇಲೆ ಕೋಪವೂ ಇದೆ, ಕಾರಣ
ನೀವ್ ಸಧ್ಯಕ್ಕೆ ಎಲೆ ಮರೆ ಕಾಯಿ ತರಹ ಇದ್ದು ಕೆಲವೇ ಕೆಲವು ಸಂಪದ ಸದಸ್ಯರು ಮತ್ತು ಅತಿಥಿ ಓದುಗರಿಗೆ ಮಾತ್ರ ನಿಮ್ಮ ಈ ಬರ್ಹಗಳ ಸವಿ ಉಣಬಡಿಸುತ್ತಿರುವಿರಿ.. ಹಲವು ಜನ ನಿಮ್ಮ ಈ ಉತ್ಕ್ರುಸ್ಟ ಬರಹಗಳನ್ನು ಮಿಸ್ ಮಾಡಿಕೊಳುತ್ತಿರ್ವರು..
ಅವರಿಗಾಗಿ ನೀವು ದಿನ ವಾರ ಮಾಸಿಕ ಪತ್ರಿಕೆಗಳಲ್ಲಿ ಮತು ವಿಶ್ಹೇಷಾಂಕಗಳಲ್ಲಿ ನಿಮ್ಮ ಬರಹಗಳನ್ನು ಸೇರಿಸಿ ಕಳಿಸಿ.
ನೀವ್ ದಿನ ನಿತ್ಯ ನಿಯಮಿತವಾಗಿ ಬರೆಯುತ್ತಿರುವ ಈ ಎಲ್ಲ ಬರಹ್ಗಳನ್ನು ನೋಡಿ ಓದುವಾಗ ನಿಮ್ಮ ಪ್ರತಿಭೆ ಪರಿಚ್ಜಯ ಅಸ್ಟಾಗಿ ಬೆಳಕಿಗೆ ಬಂದಿಲ್ಲ ಎನಿಸುತ್ತಿದೆ.
ನಿಮ್ಮಲಿ ಒಳ್ಳೆ ಪ್ರತಿಭೆ ಇದೆ ,ಮತ್ತು ಅದಕ್ಕೆ ಸೂಕ್ತ ಪ್ರೋತ್ಸಾಹ ಅಗತ್ಯ ಇದೆ .
ನಿಮ್ಮ ವಯುಕ್ತಿಕ ಬ್ಲಾಗ್ ಸಹಾ ನೋಡುತ್ತಿರುವೆ ಓದುತ್ತಿರುವೆ..
ರಾಜರತ್ನಂ ಅವ್ರ ಬರಹಗಳನ್ನು ಓದಿರುವೆ,ಅವರ ಬರಹ್ಗಳ ಶ್ಹೈಲಿಯೇ ವಿಶ್ಹೇಷವಾಗಿದೆ ಮತ್ತು ಇಸ್ಟ ಆಗುತ್ತೆ ಮುದುಕರಿಂದ ಮಕ್ಕಳವರ್ಗೆ ಎಲ್ಲರಿಗೂ ..
ಕನ್ನಡ ಸಾಹಿತ್ಯದ ಧ್ರುವ ತಾರೆಗಳನ್ನು ನೆನಪಿಸುತ್ತ ನಿಮ್ಮ ಬರಹಗಳ ಸವಿ ಊಣಿಸುತ್ತಿರುವ ನಿಮಗೆ ಅನಂತ
ನನ್ನಿ
ಶ್ಹುಭವಾಗಲಿ..
\|/
In reply to ಉ: ರಾಜರತ್ನಂ ನೆನಪಿಗೆ... by venkatb83
ಉ: ರಾಜರತ್ನಂ ನೆನಪಿಗೆ...
ಸಪ್ತಗಿರಿಗಳೆ,
ಈಗ ತಾನೆ ಮಂಡೋದರಿ ಬರಹದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದೆ. ಇಲ್ಲಿ ಮತ್ತೆ ಪುನರಾವರ್ತಿಸುವ ಅಗತ್ಯವಿಲ್ಲವೆನ್ನಲೆ :-)
ಈವರೆಗೆ ನನ್ನನ್ನು ಬರೆಯಲು ಹುರಿದುಂಬಿಸುತ್ತಿರುವುದು ಎರಡು ಮುಖ್ಯ ಅಂಶಗಳು - ಮೊದಲನೆಯದು ಬರೆಯಬೇಕೆಂಬ ತಪನೆ, ತುಡಿತ, ಹಂಬಲ. ಎರಡನೆಯದು ಅದನ್ನು ಓದಿ, ಆಸ್ವಾದಿಸಿ, ಮೆಚ್ಚಿ, ತಿದ್ದುವ ಸಂಪದ ಮತ್ತು ಆತ್ಮೀಯ ಮಿತ್ರರ ಸದ್ಬಳಗ ಮತ್ತಿತರ ಸಹೃದಯಿ ಓದುಗ ಬಳಗ ಇದೆಯಲ್ಲ ಎಂಬ ಅದಮ್ಯ ಉತ್ಸಾಹ. ಈ ಚಿಲುಮೆ ಎಷ್ಟು ದಿನ ಚಿಮ್ಮುತ್ತಿರುವುದೊ ಗೊತ್ತಿಲ್ಲ. ಚಿಮ್ಮುತ್ತಿರುವಾಗ ಬರೆದಿಟ್ಟುಬಿಡುವ ಕೆಲಸವನ್ನಂತೂ ಮಾಡುತಿದ್ದೇನೆ.
ನಿಮ್ಮ ಸಲಹೆಯಂತೆ ಬೇರೆ ಕಡೆ ಕಳಿಸಲು ಯತ್ನಿಸುತ್ತೇನೆ - ಪ್ರಕಟವಾಗಲಿ ಬಿಡಲಿ, ಬೇಸರವೇನೂ ಇಲ್ಲ :-)
In reply to ಉ: ರಾಜರತ್ನಂ ನೆನಪಿಗೆ... by nageshamysore
ಉ: ರಾಜರತ್ನಂ ನೆನಪಿಗೆ...
ನಾಗೇಶರೆ, ಎರಡೂ ಕವನಗಳು ಸೂಪರ್..
ಸಪ್ತಗಿರಿವಾಸಿಯವರೆ, ಸಾಪ್ತಾಹಿಕಗಳದ್ದು ಸಪ್ತದಿನದ ಮೆರೆದಾಟ. ಸಂಪದ ಹಾಗಲ್ಲ.. ನೀವು ಹೇಳಿದ ಮಾಸಿಕ ಇತ್ಯಾದಿಗಳಿಗೆ ಕವನ..ಬರೆದರು ಅಂತಿಟ್ಟುಕೊಳ್ಳಿ. ಶಬರಿಯ ತರಹ ಕಾಯುತ್ತಿರಬೇಕು. ಪ್ರಕಟವಾದರೂ ಅದು ನಿಮ್ಮ +ಸಂಪಾದಕರ ( ಒಂದೆರಡು ಶಬ್ದವಾದರೂ ತಿದ್ದದಿದ್ದರೆ ಹೇಗೆ..) ಜಂಟಿ ಕವನವಾಗುವುದು. ನಂತರ "ಪ್ರತಿಕ್ರಿಯೆ"ಗೆ ಇನ್ನೆರಡು ವಾರ ಕಾಯಬೇಕು. ಪ್ರತಿಕ್ರಿಯೆಗೂ ಹೆಚ್ಚಂದರೆ ಎರಡು ಪುಟ ಮೀಸಲು. ನಿಮ್ಮ ಕವನದ ಪ್ರತಿಕ್ರಿಯೆ ಪ್ರಕಟವಾಗುವುದು, ಸ್ಥಳ ಹಾಗೂ ಮಾಸಿಕದ ಸಂಪಾದಕರ ಮರ್ಜಿಯನ್ನನುಸರಿಸಿ. ನಿಮ್ಮ ಅಡ್ರಸ್ ಕವನದ ಜತೆಗೆ ಹಾಕಿದರೆ ಮಾತ್ರ ಕೂಡಲೇ ಪ್ರತಿಕ್ರಿಯೆಗಳು ಬರುವವು!-"...ಈ ಪತ್ರವನ್ನು ೩೦ ಪ್ರತಿ ಮಾಡಿ ಹಂಚಿದರೆ ಧರ್ಮಸ್ಥಳ ಮಂಜುನಾಥ ಒಲಿಯುವನು. ಇಲ್ಲದಿದ್ದರೆ....."
ಸಂಪದ ಹಾಗಲ್ಲವಲ್ಲ.. ವಿಶ್ವದೆಲ್ಲೆಡೆಯಿಂದ ನಿಮ್ಮ ಕವನ ಪ್ರಕಟವಾದ ಕೆಲ ಗಳಿಗೆಯಲ್ಲಿ "ಪ್ರತಿಕ್ರಿಯೆ" ಬರುವುದು. ಒಂದು ವಾರ ಕಳೆದ ಬಳಿಕ ವಾರ ಪತ್ರಿಕೆ ತಿರುವಿ ಹಾಕುವ ಜನ ಬಹಳ ಕಮ್ಮಿ. ಸಂಪದ ಹಾಗಲ್ಲ..ವರ್ಷಗಳ ನಂತರವೂ ಅನೇಕ ಬರಹಗಳನ್ನು ಮೆಚ್ಚಿ ಪ್ರತಿಕ್ರಿಯೆಗಳು ಬರುವುದು. ಹಂಸಾನಂದಿ, ಮಿಶ್ರಿಕೋಟಿ, ಶ್ರೀಕರ್, ಶ್ರೀಧರ್, ನಾಡಿಗ್, ಭಲ್ಲೆ, ಪಾಟೀಲ್, ಪಾರ್ಥ, ಕವಿನಾಗರಾಜ್, ಸತೀಶ್...ಹೀಗೇ ಘಟಾನುಘಟಿ ಲೇಖಕರ ದಂಡೇ ಇಲ್ಲಿದೆ. ಇಲ್ಲಿ ಏನಿದೆ..ಏನಿಲ್ಲ.. ವಾರಪತ್ರಿಕೆಗಳವರಿಗೆ ಉತ್ತಮ ಲೇಖನಕ್ಕಾಗಿ ಸಂಪದ ನೋಡಲು ತಿಳಿಸಿ..
ಕೊಳೆತು ನಾರುವ ಹಣ್ಣಲ್ಲೂ, ಒಳ್ಳೆಯ ಭಾಗವಿದ್ದರೆ ಅದನ್ನು ಮಾತ್ರ ಕತ್ತರಿಸಿ ಅರಗಿಸಿ "...ತಾವು ಕೊನೆಗೆ ಬರೆದ ಆಶಯ ಚೆನ್ನಾಗಿದೆ ಅದು ನನಗೆ ಹಿಡಿಸಿತು, ಕಟುವಾಸ್ತವದ ದರ್ಶನ ಮಾಡಿಸುವ ಲೇಖನ ನೀಡಿದ್ದೀರಿ ಧನ್ಯವಾಗಳು." ಅಂದು ಮೆಚ್ಚುವ ವಿಶಾಲ ಹೃದಯಿಗಳು ಸಂಪದದಲ್ಲೇ ಸಿಗುವುದು!
ನಾಗೇಶರೆ, ಪತ್ರಿಕೆಗಳವರೇ "ತಮ್ಮ ಕವನ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಕಳುಹಿಸಿ" ಎಂದು ಕೇಳುವ ದಿನ ಬರುವುದು. ಯೋಚಿಸಬೇಡಿ. ಸದ್ಯಕ್ಕೆ ಸಂಪದದಲ್ಲೇ ಕವನ/ಲೇಖನಗಳನ್ನು ಬರೆಯುತ್ತಿರಿ.
-ಗಣೇಶ.
In reply to ಉ: ರಾಜರತ್ನಂ ನೆನಪಿಗೆ... by ಗಣೇಶ
ಉ: ರಾಜರತ್ನಂ ನೆನಪಿಗೆ...
ಗಣೇಶ್ ಜಿ,
ನಿಮ್ಮ ಇಷ್ಟು ಧೀರ್ಘವಾದ ಪ್ರತಿಕ್ರಿಯೆಯೆ, ಸಂಪದಿಗರ ವಿಶಿಷ್ಠತೆಯ ಉದಾಹರಣೆ. ನಾನು ಈ ಮೊದಲೊಮ್ಮೆ ಹೇಳಿದ್ದಂತೆ, ಸಂಪದ ಒಂದು ವಿನೂತನ ಪ್ರಯೋಗ - ಹೆಚ್ಚೆಚ್ಚು ಜನರು ಆನ್ಲೈನಿನ ಮೊರೆಹೊಕ್ಕ ಹಾಗೆ, ಈ ಮಾದರಿಗೆ ಅಷ್ಟಷ್ಟು ಹೆಚ್ಚಿನ ಸಂಪದಿಗರು ಸೇರ್ಪಡೆಯಾಗುತ್ತಲೆ ಇರುತ್ತಾರೆ. ಇದೊಂದು ಮುಕ್ತ ಮಾದರಿಯ ವಿನೂತನ ಪತ್ರಿಕೋದ್ಯಮಕ್ಕೆ ಹಾಕಿದ ಬುನಾದಿ. ಹೀಗಾಗಿ ಸಂಪದದಲ್ಲಿ ನನ್ನ ಬರಹಗಳಂತೂ ನಿಲ್ಲುವುದಿಲ್ಲ. ನೀವು ಹೇಳಿದ ಹಾಗೆ ಇನ್ನೆಲ್ಲಿ ತಾನೆ ಈ ರೀತಿಯ ಜಾಗತಿಕ ಮಟ್ಟದ ಚರ್ಚೆ, ಸಂವಾದ ಸಾಧ್ಯವಿದೆ ಹೇಳಿ? ಬರೆಯಲಾಗಲಿ, ಪ್ರಕಟಿಸಲಾಗಲಿ, ಪ್ರತಿಕ್ರಿಯಿಸಲಾಗಲಿ, ತಪ್ಪನ್ನು ಬೇಗನೆ ಅರಿತು ತಿದ್ದಿಕೊಂಡು ಕಲಿಕೆಯನ್ನು ನಿರಂತರವಾಗಿಸಲಿಕ್ಕಾಗಲಿ - ಈ ವೇಗ ಮತ್ತು ವೇಗೋತ್ಕರ್ಷಗಳು ಸಂಪದದಲ್ಲಿ ಮಾತ್ರವೆ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ :-)
ಈ ಪ್ರಕ್ರಿಯೆಗೊಂದು ಒಳ್ಳೆಯ ಉದಾಹಾರಣೆ, ಸಂಪದದಲ್ಲಿ ಪ್ರಕಟಿಸಿದ 'ಧೂಮ ಸಾಹಿತ್ಯ' ಕವನ. ತೀರಾ ಈಚಿನವರೆಗು ಇದನ್ನು ಪ್ರತಿದಿನ ಹದಿನೈದು ಇಪ್ಪತ್ತು ಜನೆ ಓದುತ್ತಲೆ ಇದ್ದಾರೆ. ಕೆಲವೊಮ್ಮೆ ಓದಲು ಸುಮಾರು ನೂರು ಪುಟ ದಾಟಬೇಕು; ಆದರೂ ಹೇಗೊ ಒಬ್ಬರಿಂದೊಬ್ಬರಿಗೆ ಸಾಗುತ್ತಲೆ ಇತ್ತೆಂದು ಕಾಣುತ್ತದೆ. ಇದು ತೀರಾ ಈಚೆಗೆ 2500 ದಾಟುವವರೆಗೆ. ಸಾಮಾನ್ಯ ಮುದ್ರಣ ಮಾಧ್ಯಮದಲ್ಲಿ ಇದು ಕನಸೆ ಸರಿ!
ಸಂಪದ ಸಂಪದವೆ. ಆ ವಿಶಿಷ್ಟ ಸ್ಥಾನ ಸಂಪದಕ್ಕೆ ಮೀಸಲು. ಕನ್ನಡ ಸಾಹಿತ್ಯ ಲೋಕದಲ್ಲಿ ಯಾರೂ ಅಲ್ಲದ ನನ್ನಂತಹ ಸಾಮಾನ್ಯ ಬರೆವವನಿಗು ಇಷ್ಟೊಂದು ಪ್ರೋತ್ಸಾಹ, ಉತ್ತೇಜನ ಕೊಡುವ ವೇದಿಕೆ ಬೇರೆ ಮತ್ತಾವುದಿದೆ ಹೇಳಿ? ತಮ್ಮ ಮತ್ತು ಅನೇಕ ಹಿರಿಯ ಸಂಪದಿಗರ ನಿರಂತರ ಪ್ರೋತ್ಸಾಹ ಬೆಂಬಲಕ್ಕೆ ನಾನು ನಿಜಕ್ಕೂ ಕೃತಜ್ಞ!
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ರಾಜರತ್ನಂ ನೆನಪಿಗೆ... by nageshamysore
ಉ: ರಾಜರತ್ನಂ ನೆನಪಿಗೆ...
ಸಂಪದದ ಆರಂಭದಿಂದಲೂ ಚಲಾವಣೆಯಲ್ಲಿರುವ ಒಬ್ಬರಿದ್ದಾರೆ. ಅವರು ಎಲ್ಲಾ ಲೇಖನಗಳನ್ನೂ ಖಂಡಿತಾ ಓದಿ, ಅರಗಿಸಿಕೊಂಡು ಮತ್ತು ಬಹಳಷ್ಟು ಲೇಖನಗಳಿಗೆ ಖಂಡಿತಾ ಪ್ರತಿಕ್ರಿಯೆ ಬರೆಯುತ್ತಾರೆ ಮತ್ತು ಅವರು ಬರೆಯುವ ವಿಮರ್ಶಾತ್ಮಕ ಪ್ರತಿಕ್ರಿಯೆಗಳು ಬೇರೆ ಓದುಗರಿಗಿಂತಲೂ ಖಂಡಿತಾ ಭಿನ್ನವಾಗಿರುತ್ತವೆ. ಅವರು ದೇವರಂತೆ ಕಾಣದ ಊರಿನಲ್ಲಿ ಕುಳಿತುಕೊಂಡು ಯಾರಿಗೂ ತಮ್ಮ ನಿಜ ಸ್ವರೂಪವನ್ನು ಬಯಲು ಮಾಡುವುದಿಲ್ಲ. ನಿಮಗೆ ಸಂಪದಿಗರಲ್ಲಿ ದೇವರನ್ನು ಕಂಡವರು ಸಿಕ್ಕರೂ ಸಿಗಬಹುದು ಆದರೆ ಇವರನ್ನು ಕಂಡವರಂತೂ ಖಂಡಿತ ಯಾರೂ ಇಲ್ಲ; ಯಾರವರು ಹೇಳಿ ನಾಗೇಶರೆ. ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಮತ್ತು ಕವಿ ಕಾಣದ್ದನ್ನು ಇವರು ಕಾಣುತ್ತಾರೆ ಯಾರ ಕಣ್ಣಿಗೂ ಬೀಳದಂತೆ ಅದೇ ಅವರ ವಿಶೇಷ.
In reply to ಉ: ರಾಜರತ್ನಂ ನೆನಪಿಗೆ... by makara
ಉ: ರಾಜರತ್ನಂ ನೆನಪಿಗೆ...
ನನ್ನ ಊಹೆ ಸರಿಯಿದ್ದರೆ, ಸಪ್ತಗಿರಿಯವರು ಇವರ ನಿರಂತರ ಶೋಧನೆಯಲ್ಲಿ ನಿರತರಾಗಿದ್ದಾರೆ. ಕ್ಲೂ ಕೊಟ್ಟು 'ಹುಡುಕಿ ನೋಡೋಣ' ಅನ್ನುವ ಜೂಟಾಟ ಇನ್ನು ನಡೆಯುತ್ತಲೆ ಇದೆ. ಸರಿಯೆ, ಶ್ರೀಧರರೆ? ನನ್ನ ಊಹೆ ಸರಿಯಾಗಿದ್ದರೆ ಹೆಸರು ಬಯಲಾಗಿಸುವುದು ಬೇಡ - ಸೀಕ್ರೇಟಾಗೆ ಇರಲಿ !
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ರಾಜರತ್ನಂ ನೆನಪಿಗೆ... by nageshamysore
ಉ: ರಾಜರತ್ನಂ ನೆನಪಿಗೆ...
ಗಣೇಶ್ ಅಣ್ಣ ಅವರನ್ನು ಸಂಧಿಸೋದು ಈಗ ಅಸ್ಟು ಕಷ್ಟದ ಕೆಲಸ ಅಲ್ಲ ...!!
ಅವರೇ -ಅವರೆಲ್ಲಿಹರು ಎಂದು ಸುಳಿವು ಕೊಟ್ಟರು. ಇದಕ್ಕೆ ಆ ಲೇಖನ ಸೇರಿದ ದಿನವೇ ಪ್ರತಿಕ್ರಿಯಿಸಬೇಕಿತ್ತು -ಆದರೆ ಲಾಗ್ ಇನ್ ಆಗಲು ಆಗಲಿಲ್ಲ , ಆ ಮಧ್ಯೆ ಉಡುಪಿಗೆ ಹೋಗಿ ಬಂದಿದ್ದು ಆಯ್ತು. ಪ್ರತಿಕ್ರಿಯೆಗೆ ಸಮಯವೂ ಸಿಕ್ಕಿತು.
ಪಾರಿವಾಳಗಳು ಗೂಡು ಕಟ್ಟಿದ್ದು ಅದರ ಸಾಲು ಸಾಲು ಚಿತ್ರಗಳನ್ನು ಹಾಕಿದ ಅವರೇ ಅಲ್ಲಿ ಸುಳಿವು ಬಿಟ್ಟು ಕೊಟ್ಟಿರುವರು ..
ದಿನ ನಿತ್ಯ ನಾ ಆ ಅಪಾರ್ಟ್ ಮೆಂಟ್ ಮುಂದೆಯೇ ಅಡ್ಡಾಡೋದು ... !
ಹಾಗೆಯೇ ಕಣ್ಣೆತ್ತಿ ಅದರತ್ತ ನೋಡೋದು .. ಈ ಚಿತ್ರಗಳನ್ನು ಗಮನಿಸಿದಾಗ -ಈ ಬಿಲ್ಡಿಂಗ್ ಎಲ್ಲೋ ನೋಡಿದೆ ಅನಿಸಿತು. ಇದು ಅದೇನೇ ...!!
ಪ್ರೆ ......
ವೆ ..... ನ್
...ಕ್
......!!
ಈಗ್ಗೆ ಸುಮಾರು ವರ್ಷದ ಹಿಂದೆ ಗಣೇಶ್ ಅಣ್ಣ ಅವರು ಮನೆ ಬದಲಿಸಿದಾಗ ಒಂದು ಸುಳಿವು ಕೊಟ್ಟಿದ್ದರು -ಆಮೇಲೆ ಅಲ್ಲಲ್ಲಿ ಕೆಲವು - ಆದರೆ ಇದು ಪಕ್ಕಾ ವಿಳಾಸ ಪುರಾವೆ ..!!
ಆಪರೇಶನ್ ಗಣೇಶ್ ಹಂಟ್ -- ಮುಕ್ತಾಯ ...!!
ಶುಭವಾಗಲಿ
\।/
In reply to ಉ: ರಾಜರತ್ನಂ ನೆನಪಿಗೆ... by venkatb83
ಉ: ರಾಜರತ್ನಂ ನೆನಪಿಗೆ...
ಶ್ರೀಧರ್‌ಜಿ,ನಾಗೇಶರೆ, ಸಪ್ತಗಿರಿವಾಸಿಯವರೆ,
ನಾಪತ್ತೆ ಕೇಸ್ ಅಂತ ಗಣೇಶರನ್ನು ಹುಡುಕಾಟದ ಫೈಲ್ ಕ್ಲೋಸ್ ಮಾಡಿದಿರಿ ಅಂದುಕೊಂಡಿದ್ದೆ...! ಪುನಃ ತೆರೆದಿರಲ್ಲಾ...
ಸಪ್ತಗಿರಿವಾಸಿಯವರೆ,
ನೀವು ಹೇಳಿದ ಫ್ಲಾಟ್- ಪ್ರೆ ......ವೆ ..... ನ್ ...ಕ್ !!!
ಇನ್ನು ಗಣೇಶರನ್ನು ಪತ್ತೆ ಹಚ್ಚುವುದು ಕಷ್ಟವಿಲ್ಲ ಬಿಡಿ!
ನಮ್ಮಲ್ಲಿಂದ ಅಲ್ಲಿಗೆ ಕೇವಲ ಒಂದೆರಡು ಗಂಟೆ ದಾರಿ..ಅಷ್ಟೆ :)
In reply to ಉ: ರಾಜರತ್ನಂ ನೆನಪಿಗೆ... by makara
ಉ: ರಾಜರತ್ನಂ ನೆನಪಿಗೆ...
ಜೀ -ಈಗ ಅವರು ಪತ್ತೆ ಆಗಿರುವರು ..
ಅವರ ನನ್ನ ಜೊತೆಗಿನ ಫೋಟೋ ನಿರೀಕ್ಷಿಸಿ - ಶೀಘ್ರದಲ್ಲಿ ...
ಶುಭವಾಗಲಿ
\।/
>>>ಆಪರೇಶನ್ ಗಣೇಶ್ ಹಂಟ್ -- ಮುಕ್ತಾಯ ...!!
In reply to ಉ: ರಾಜರತ್ನಂ ನೆನಪಿಗೆ... by venkatb83
ಉ: ರಾಜರತ್ನಂ ನೆನಪಿಗೆ...
ಆಪರೇಶನ್ ಗಣೇಶ್ ಹಂಟ್---ಭಾಗ ೨..? ಶೀಘ್ರದಲ್ಲೇ..:)
In reply to ಉ: ರಾಜರತ್ನಂ ನೆನಪಿಗೆ... by ಗಣೇಶ
ಉ: ರಾಜರತ್ನಂ ನೆನಪಿಗೆ...
ಇದೇನೊ ಟ್ರೆಷರ ಹಂಟ್ ಮುಗಿಯಿತೆಂದರೆ ಮತ್ತೊಂದು ಶುರುವಾದಂತಿದೆಯಲ್ಲ? - 'ಆಪರೇಷನ್ ಡೈಮೆಂಡ್ ರಾಕೆಟ್' ಆದಮೇಲೆ ' ಆಪರೇಷನ್ ಗೋಲ್ಡನ್ ಗ್ಯಾಂಗ್' ಬರಬೇಕಿತ್ತು, ಆದರೆ ಬರಲೆ ಇಲ್ಲ. ಈ ಹಂಟ್ ಕಥೆಯೂ ಹಾಗೆಯೆ ಆದೀತಾ?
In reply to ಉ: ರಾಜರತ್ನಂ ನೆನಪಿಗೆ... by ಗಣೇಶ
ಉ: ರಾಜರತ್ನಂ ನೆನಪಿಗೆ...
ಆಪರೇಷನ್ ಗಣೇಶ್ ಹಂಟ್ -2 .... .ಅಲ್ಲ
ಬಹುಶ: ....!!
ಆಪರೇಷನ್ ಗಣೇಶ್ ಹಂಟ್ -ಅಂತ್ಯ ...!!
ನಮ್ಮ ಈ ಕೆಲ್ಸ ನೋಡ್ತಿದ್ರೆ ಪತ್ತೆಧಾರಿ ಪು ...... ಮ ಆಗುವ ಸಂಭವ ಇದೆ ... ಅನಿಸುತ್ತಿದೆ ..!!
ಹಾಗೆ ಈ ಸೆನ್ಸೇಷನಲ್ ಸುದ್ಧಿ (ಗಣೇಶ್ ಅಣ್ಣಾ ಅವರ ಹುಡುಕಾಟದ ಕೊನೆ -) ಈ ವರ್ಷದ ಅಂತ್ಯದ ಮಹತ್ವದ ಸುದ್ಧಿ ಆಗಲಿದೆ ...
ಈ ವರ್ಷದ ಮಹತ್ವದ ಸುದ್ಧಿಗಳು -
ಆಪ್ ಪಾರ್ಟಿ ವಿಜಯ ,
ಲೋಕ್ಪಾಲ್ ಪಾಸ್ ,
ಗಣೇಶ್ ಅಣ್ಣ ಪ್ರತ್ಯಕ್ಷ ... !!
ಶುಭವಾಗಲಿ
\|/
ಉ: ರಾಜರತ್ನಂ ನೆನಪಿಗೆ...
ವರ್ಷಾಂತ್ಯದ ಸುಪರ ಹಿಟ್ ಸುದ್ದಿಗೆ ಕಾಯುವಂತಾಗಿದೆ ಈಗ. ಏನಿಲ್ಲವೆಂದರು ಕನಿಷ್ಠ ಅರ್ಧರ್ಧ ಚಿತ್ರ ಆದರೂ ಸರಿ - :-)