ಓಟ
ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ
ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ
ಸದ್ಯಕ್ಕೆ ನಾನೊಂದು ಟ್ರ್ಯಾಕಿನ ಮೇಲಿದ್ದೆ
ಎಲ್ಲರೂ ಓಡುತ್ತಿರಲು ನಾನೂ ಓಡಿದೆ
ದಾರಿಯಲ್ಲಿ ಒಬ್ಬೊಬ್ಬರೆ ಕುಸಿದು ಬಿದ್ದರು
ಹಾಗೇ ಹೊಸಬರು ಹುಟ್ಟಿಕೊಂಡರು
ನೋಡುತ್ತಲೇ ಓಡತೊಡಗಿದರು
ನಾನೂ ಓಡಿದೆ ಜೀವನವೆಲ್ಲ ಓಡಿದೆ
ಕೊನೆಗೆ ನಾನೂ ಕುಸಿದುಬಿದ್ದೆ
ಗುರಿ ಗರಿಗೇರಲಿಲ್ಲ ಓಡಿದಕಾರಣವೂ ತಿಳಿಯಲಿಲ್ಲ.
ಅದೊಂದು ಗುಡ್ಡಗಾಡು ಓಟ.
ಸುತ್ತಲ ಸೌಂಧರ್ಯ ನಾನು ಸವಿಯಲಿಲ್ಲ.
ಬದಿಗೆ ಇದ್ದವರೊಡನೆ ಮಾತನಾಡಲು
ನನಗೆ ಸಮಯವೂ ಇರಲಿಲ್ಲ.
ನೋಡುತ್ತಲೆ ಕುಸಿದಳು ನನ್ನ ಹೆತ್ತವಳು.
ಓಡುತ್ತಲೆ ಕಣ್ಮರೆಯಾದರು ಒಡನಾಡಿಗಳು.
ಹುಟ್ಟುತಿದ್ದರು ಹೊಸಬರು ಕುಸಿಯುತಿದ್ದರು ಹಳಬರು.
ನಾನು ಓಡುತ್ತಲೇ ಇದ್ದೆ ಎಲ್ಲರೂ ಓಡುತ್ತಿರಲು.
ಅಂದು ನಾಹಾದ ದಾರಿಯಲ್ಲಿ
ಹಸಿರು ತುಂಬಿತ್ತು.
ತುಂತುರು ಉದುರುತಿತ್ತು.
ನಿಂತು ವಿಶ್ರಮಿಸಲಿಲ್ಲ.
ಹಣ್ಣು ಬಿದ್ದಿತ್ತು ಹೆಕ್ಕಿತಿನ್ನಲಿಲ್ಲ.
ಎಲ್ಲರೂ ನನ್ನೊಡನೆ ಇದ್ದರು
ಓಡುವುದ ಬಿಟ್ಟು ನಡೆಯ ಬಹುದಿತ್ತು
ನಡೆಯುತ್ತ ಹರಟ ಬಹುದಿತ್ತು.
ಅರಿವಿಗೇ ಬರಲಿಲ್ಲ.
ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ
ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ
ಸದ್ಯಕ್ಕೆ ನನ್ನವರು ನನ್ನ ಜೊತೆಗಿದ್ದರು
ಓಟನಿಲ್ಲಿಸಿ ನಡೆದು ಬರಬಹುದಿತ್ತು.
ನಾನೂ ಓಡಿದೆ ಜೀವನವೆಲ್ಲ ಓಡಿದೆ
ಕೊನೆಗೆ ನಾನೂ ಕುಸಿದುಬಿದ್ದೆ
ಗುರಿ ಗರಿಗೇರಲಿಲ್ಲ ಓಡಿದಕಾರಣವೂ ತಿಳಿಯಲಿಲ್ಲ.
[ಆಧುನಿಕ ಜಗತ್ತಿನಲ್ಲಿ ಯಶಸ್ಸಿನ ಬೆನ್ನಹತ್ತಿರುವ ನಮಗೆ ಆಪ್ತರ ಪ್ರೀತಿ ವಾತ್ಸಲ್ಯ ಎಷ್ಟೋಬಾರಿ ಗೋಚರಿಸುವುದಿಲ್ಲ.
ಅಮ್ಮ ಅಪ್ಪ ಅಜ್ಜಿ ಅಜ್ಜ ಗೆಳೆಯ ಗೆಳತಿಯರೊಡನೆ ಪ್ರೀತಿಯಿಂದ ಸಮಯ ಕಳೆಯಲು ನಮಗೆ ಸಾದ್ಯವಾಗುವುದಿಲ್ಲ.
ಕೊನೆಗೆ ಯಶಸ್ಸು ದಕ್ಕಿದರೂ, ಸಂತಸ ಹಂಚಿಕೊಳ್ಳಲು ಎಷ್ಟೋಬಾರಿ ಕಾರಣಕರ್ತರೆ ಬದುಕಿರುವುದಿಲ್ಲ.
ಈ ಗಳಿಗೆ ನೀವು ಟ್ರ್ಯಾಕಿನಲ್ಲಿ ಇದ್ದ ಪಕ್ಷ ಓಟನಿಲ್ಲಿಸಿ ನಿಮ್ಮವರೊಡನೆ ನೆಡೆಯುವುದು ಉತ್ತಮ.]
Comments
ಉ: ಓಟ
ನಮಸ್ಕಾರ ವಿದ್ಯಾಕುಮಾರರೆ, ಓಟದ ಅನಿವಾರ್ಯವೊ, ಅನಿವಾರ್ಯದ ಓಟವೊ ಒಟ್ಟಾರೆ ಓಡಿಸುತ್ತಲೆ ಇರುತ್ತದೆ ಈ ಜಗ - ಮಸಲ ಏಕೆ ಓಡುತ್ತಿದ್ದೆವೆಂದು ಗೊತ್ತು ಗುರಿ ಸರಿಯಾಗಿ ಅರಿವಾಗದಿದ್ದರೂ ಕೂಡ. ನಿಲ್ಲಿಸಬೇಕೆಂದರೂ ಆಗದಷ್ಟು ವೇಗ - ಯಾಕೆಂದರೆ ನಿಂತಾಗ ಅವಘಡವಾಗುವ ಭಯ; ಓಟ ನಿಂತರೆ ಹಿಂದೆ ಬೀಳುವ ಭೀತಿ !
ಉ: ಓಟ
ವಿದ್ಯಾಕುಮಾರ ಜಿ ರವರೆ, ಬದುಕಿನ ಓಟ ಚನ್ನಾಗಿ ಮೂಡಿಬಂದಿದೆ, ಯಾವುದಕ್ಕೂ ವ್ಯವಧಾನವಿಲ್ಲದೆ, ಬದುಕನ್ನು ನಾವು ಅನುಭವಿಸಲು, ಆಸ್ವಾದಿಸಲು ಕೂಡ ಆಧುನಿಕ ಜಗತ್ತು ಬಿಡದಿರುವುದು ಕವನದುದ್ದಕ್ಕೂ ಗೋಚರಿಸುತ್ತದೆ, ಓಡದಿದ್ದರೂ ವಿಧಿಯಿಲ್ಲವೆನ್ನುವುದು ನಾವು ಮಾಡಿಕೊಂಡ ತಪ್ಪು ಜೀವನ ಪದ್ಧತಿಯೂ ಕಾರಣವಾಗುತ್ತೆ, ವಂದನೆಗಳು.
ಉ: ಓಟ
ಪ್ರತಿಕ್ರಿಯೆ ನೀಡಿದ ನಾಗೇಶರಿಗೆ ಮತ್ತು ಇಟ್ನಾಳರಿಗೆ ನನ್ನ ಧನ್ಯವಾದಗಳು. ನಗುತರಿಸುವ ವಿಚಾರ ಅಂದ್ರೆ.. ನಮ್ಮವರನ್ನ ಬದಲಿಸಲಾಗದ ನಮ್ಮೊಳಗಿನ ಅಶಕ್ತತೆ ಕೊನೆಗೆ ನಾವೇ ಬದಲಾಗುವ ಪರಿ. ಇದೊಂತರ ಬೆಂಗ್ಳೂರ್ ಬಿ ಎಮ್ ಟಿ ಸಿ ಕತೆ. ಎಲ್ಲ್ರೂ ಕ್ಯೂ ನಲ್ಲೇ ಬಸ್ ಹತ್ತಿ ಅಂತ ಕಾನೂನ್ ಏನೊ ಮಾಡಿದ್ರಂತೆ. ಆದ್ರೆ ಬಸ್ಸು ಬರುವಾಗ್ಲೆ ಲೋಡ್ ಅಗಿದ್ರೆ? ಕ್ಯೂನಲ್ಲಿ ಯಾರು ತಾನೆ ನಿಲ್ಲ್ತಾರೆ ಅಲ್ವಾ! ಅದ್ನೆ ನಮ್ಮ್ ಜನಾನು ಮಾಡಿದ್ದು!! ಆದ್ರೂನು ಒಮ್ಮತವಿದ್ರೆ ಇತಂವು ಸಾಧ್ಯ ಎನ್ನುವುದು ಆಶಾವಾದ.