೧೮೧. ಲಲಿತಾ ಸಹಸ್ರನಾಮ ೮೨೮ರಿಂದ ೮೩೨ನೇ ನಾಮಗಳ ವಿವರಣೆ

೧೮೧. ಲಲಿತಾ ಸಹಸ್ರನಾಮ ೮೨೮ರಿಂದ ೮೩೨ನೇ ನಾಮಗಳ ವಿವರಣೆ

                                                                                 ಲಲಿತಾ ಸಹಸ್ರನಾಮ ೮೨೮ - ೮೩೨

Ājñā आज्ञा (828)

೮೨೮. ಆಜ್ಞಾ

          ಆಜ್ಞಾ ಎಂದರೆ ಅಪ್ಪಣೆ ಮಾಡುವುದು, ದೇವಿಯು ಆಣತಿಯನ್ನು ಮಾಡುತ್ತಾಳೆ. ಒಂದು ವೇಳೆ ದೇವಿಯ ಆಜ್ಞೆಯನ್ನು ಉಲ್ಲಂಘಿಸಿದರೆ ಆಕೆಯು ಹಿಂದಿನ ನಾಮದಲ್ಲಿ ವಿವರಿಸಿದಂತೆ ಆಗ್ರಹಗೊಳ್ಳುತ್ತಾಳೆ.

          ಲಿಂಗಪುರಾಣದಲ್ಲಿ(೧.೮೭.೯-೧೧) ಶಿವನು ಹೀಗೆ ಹೇಳುತ್ತಾನೆ, "ದೇವಿಯು ಶ್ರುತಿ ಮತ್ತು ಸ್ಮೃತಿಗಳಾಗಿದ್ದಾಳೆ. ದೇವಿಯು ನನ್ನಿಂದ ಸ್ಥಿರಗೊಳಿಸಲ್ಪಟ್ಟ ಗಟ್ಟಿಮನಸ್ಸುಳ್ಳವಳಾಗಿದ್ದಾಳೆ. ಅವಳು ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಯಾಗಿದ್ದಾಳೆ. ದೇವಿಯು ಆಜ್ಞೆಯಾಗಿದ್ದರೆ. ಅನುಮಾನಕ್ಕೆಡೆಯಿಲ್ಲದಂತೆ ನಾವುಗಳೇ ವಿದ್ಯೆಗಳಾಗಿದ್ದೇವೆ. ಪ್ರಕೃತಿ (ಕಾರಣವು) ಜೀವಕ್ಕೆ (ಬದ್ಧ ಆತ್ಮಕ್ಕೆ) ಸಂಭಂದಪಟ್ಟಿಲ್ಲ ಅಥವಾ ಆಕೆಯು ವಿಕೃತಿಯೂ ಅಲ್ಲ (ಕಾರ್ಯದ ಪರಿಣಾಮವಲ್ಲ). ಆಕೆಯು ಮಾಯೆಯಾಗಿದ್ದಾಳೆ, ಆಕೆಯು ವಿಕಾರವೂ ಅಲ್ಲ. ಮೂಲದಲ್ಲಿ ದೇವಿಯು ನನ್ನ ಇಚ್ಛೆಯ ಮೇರೆಗೆ ನನ್ನ ಬಾಯಿಯಿಂದ ಉದ್ಭವಿಸಿದಳು. ಆಕೆಯು ಐದು ಮುಖವುಳ್ಳ (ಬಹುಶಃ ಗಾಯತ್ರೀ ದೇವಿಯಿರಬಹುದು) ನಿತ್ಯ ದೇವತೆಯಾಗಿದ್ದಾಳೆ. ಆಕೆಯು ಅತ್ಯಂತ ಧನ್ಯಳಾದವಳಾಗಿದ್ದು ಆಕೆಯು ಲೋಕಗಳಿಗೆ ಅಭಯವನ್ನೀಯುತ್ತಾಳೆ. ಆಕೆಯ ಆಜ್ಞೆಗನುಸಾರವಾಗಿ ನಾನು ಈ ಪ್ರಪಂಚದ ಏಳಿಗೆಯ ಕುರಿತಾಗಿ ಚಿಂತಿಸುತ್ತೇನೆ. ನಾನು ಶಿವ".

        ಆಜ್ಞಾ ಬದಲಾಗಿ ಈ ನಾಮವನ್ನು ಪರ್ಯಾಯವಾಗಿ ಜ್ಞ ಎಂದೂ ಉಲ್ಲೇಖಿಸಲ್ಪಡುತ್ತದೆ. ಜ್ಞ ಎಂದರೆ  ತಿಳಿದುಕೊಳ್ಳು, ಜ್ಞಾನವನ್ನು ಹೊಂದಿದ.

       ಶ್ವೇತಾಶ್ವತರ ಉಪನಿಷತ್ (೬.೨) ಹೀಗೆ ಹೇಳುತ್ತದೆ, "ಯೇನಾವೃತಂ ನಿತ್ಯಮಿದಂ ಹಿ ಸರ್ವಂ ಜ್ಞಃ ಕಾಲಕಾರೋ ಗುಣೀ ಸರ್ವವಿದ್ಯಃ येनावृतं नित्यमिदं हि सर्वं ज्ञः कालकारो गुणी सर्वविद्यः" ಇದರ ಅರ್ಥವು ಈ ವಿಶ್ವವು ಅವನಿಂದ ಆವರಿಸಲ್ಪಟ್ಟಿದೆ. ಕೇವಲ ಅವನಿಗೆ ಮಾತ್ರವೇ ಎಲ್ಲವೂ ತಿಳಿದಿದೆ ಎಂದು ಗೊತ್ತಿದೆ. ಅವನು ಕಾಲವನ್ನು ಸೃಷ್ಟಿಸುತ್ತಾನೆ. ಅವನು ಪರಿಪೂರ್ಣನಾಗಿದ್ದಾನೆ. ಜ್ಞಾನವನ್ನು ಬ್ರಹ್ಮದ ಮೂಲಗುಣವೆಂದು ಪರಿಗಣಿಸಲಾಗಿದೆ. ಆದ್ದರಿಂದ ಅವನನ್ನು ಅರಿಯಲು ಅತ್ಯುನ್ನತ ಗುಣಮಟ್ಟದ (ಅತ್ಯಂತ ಶ್ರೇಷ್ಠವಾದ) ಜ್ಞಾನವನ್ನು ಪಡೆಯಲು ಪ್ರಾಮುಖ್ಯತೆ ಕೊಡಲಾಗುತ್ತದೆ. ಈ ಸಂದರ್ಭದಲ್ಲಿ, ಈ ನಾಮವು ದೇವಿಯು ಪರಮೋನ್ನತವಾದ ಜ್ಞಾನದ ಮೂಲವಾಗಿದ್ದಾಳೆ ಅಥವಾ ಆಕೆಯು ಜ್ಞಾನದ ಮೂರ್ತರೂಪವಾಗಿದ್ದಾಳೆ ಎಂದು ಸಂಭೋದಿಸಲಾಗಿದೆ.

Pratiṣṭā प्रतिष्टा (829)

೮೨೯. ಪ್ರತಿಷ್ಠಾ

         ದೇವಿಯು ಎಲ್ಲದಕ್ಕೂ ಮೂಲಾಧಾರವಾಗಿದ್ದಾಳೆ. ಮಹಾನಾರಾಯಣ ಉಪನಿಷತ್ತು (೭೯.೭) ಹೀಗೆ ಹೇಳುತ್ತದೆ, "ಧರ್ಮವೇ ಅಥವಾ ಧಾರ್ಮಿಕ ನ್ಯಾಯವು ಈ ಪ್ರಪಂಚದ ಆಧಾರವಾಗಿದೆ. ಎಲ್ಲವೂ ಧರ್ಮದ ಆಧಾರವನ್ನು ಹೊಂದಿವೆ".

         ಈ ನಾಮದ ಅರ್ಥವು ದೇವಿಯು ಈ ವಿಶ್ವಕ್ಕೆ ಅಡಿಪಾಯ ಅಥವಾ ಮೂಲಾಧಾರವಾಗಿದ್ದಾಳೆ ಎನ್ನುವುದಾಗಿದೆ. ಈ ಅಡಿಪಾಯವು ಧರ್ಮ ಮತ್ತು ನ್ಯಾಯವನ್ನು ಹೊಂದಿದೆ. (ಧರ್ಮವನ್ನು ಸಿಮೆಂಟಿಗೆ ಹೋಲಿಸಿದರೆ, ನ್ಯಾಯವನ್ನು ಉಸುಕಿಗೆ(ಮರುಳಿಗೆ) ಹೋಲಿಸಬಹುದು. ಒಂದಿಲ್ಲದೆ ಮತ್ತೊಂದು ಭದ್ರ ಬುನಾದಿಯನ್ನುಂಟು ಮಾಡಲಾರದು. ಈ ಪ್ರಪಂಚದ ಸೃಷ್ಟಿ ಮತ್ತು ಸುಸ್ಥಿರತೆಯು ಪರಸ್ಪರ ಅವಲಂಬನೆಯ ತತ್ವದ ಮೇಲೆ ಆಧಾರಿತವಾಗಿದೆ. ಪರಮಾಧಿಕಾರಿಗಳಾದ ಶಿವ ಮತ್ತು ಶಕ್ತಿಯರೂ ಸಹ ಪರಸ್ಪರಾವಲಂಬಿಗಳಾಗಿದ್ದಾರೆ. ವ್ಯಕ್ತಿಗತ ಆತ್ಮ ಮತ್ತು ಶರೀರಗಳು ಕರ್ಮದ ಅನಾವರಣಕ್ಕೆ ಪರಸ್ಪರ ಅವಲಂಬಿಗಳಾಗಿವೆ).

         ಹದಿನಾರು ಅಕ್ಷರಗಳ ಛಂದಸ್ಸನ್ನೂ ಸಹ ಪ್ರತಿಷ್ಠಾ ಎಂದು ಕರೆಯಲಾಗುತ್ತದೆ.

        ಲಿಂಗ ಪುರಾಣವು (೨.೨೧.೬೬) ಹೀಗೆ ಹೇಳುತ್ತದೆ, "ವಿನಾಶ ಕ್ರಮದಲ್ಲಿನ ಕಲಾಗಳ ಸಂಯೋಗವು ಈ ವಿಧವಾಗಿ ಇದೆ; ಸಂಶಯಾತೀತ, ಶಾಂತಿ, ವಿದ್ಯಾ, ಅಮಲಾ, ಪ್ರತಿಷ್ಠಾ ಮತ್ತು ನಿವೃತ್ತಿ".

       ನೀರಿನ ತತ್ವ ಅಥವಾ ಜಲತತ್ವವನ್ನು ಸಹ ಪ್ರತಿಷ್ಠ ಕಲಾ ಎಂದು ಕರೆಯಲಾಗುತ್ತದೆ.

       ಮಹಾನಾರಾಯಣ ಉಪನಿಷತ್ತು (೨೯.೧) ಹೀಗೆ ಹೇಳುತ್ತದೆ, "ಖಂಡಿತವಾಗಿಯೂ ಇದು ಎಲ್ಲವೂ ನೀರಾಗಿದೆ. ಸೃಷ್ಟಿಸಲ್ಪಟ್ಟ ಎಲ್ಲಾ ಜೀವಿಗಳು ನೀರಾಗಿವೆ. ದೇಹದಲ್ಲಿರುವ ಎಲ್ಲಾ ಮುಖ್ಯ ಪ್ರಾಣಗಳು ನೀರೇ ಆಗಿವೆ". ಹೀಗೆ ಈ ಉಪನಿಷತ್ತು ಎಲ್ಲವೂ ನೀರೇ ಎಂದು ಹೇಳಲು ಉಪಕ್ರಮಿಸುತ್ತದೆ. ಒಂದು ವೇಳೆ ಈ ನಾಮದ ವ್ಯಾಖ್ಯಾನವನ್ನು ಈ ವಿಧವಾಗಿ ಮಾಡಿದರೆ; ಆಗ ಆಕೆಯು ಎಲ್ಲಾ ಪವಿತ್ರ ಜಲಗಳ (ನದಿಗಳ) ರೂಪದಲ್ಲಿದ್ದಾಳೆ ಎಂದಾಗುತ್ತದೆ. ಈ ಹಿನ್ನಲೆಯಲ್ಲಿ ಈ ನಾಮವು ದೇವಿಯು ಈ ಪ್ರಪಂಚಕ್ಕೆ ನೀರಿನ ರೂಪದಲ್ಲಿ ವ್ಯಕ್ತವಾಗುತ್ತಾಳೆ ಎಂದು ಹೇಳುತ್ತದೆ. 

Prakaṭākṛtiḥ प्रकटाकृतिः (830)

೮೩೦. ಪ್ರಕಟಾಕೃತಿಃ

          ಪ್ರಕಟ ಎಂದರೆ ಪ್ರತ್ಯಕ್ಷವಾಗಿ ಕಾಣಲ್ಪಡುವ, ವ್ಯಕ್ತವಾದ, ಸ್ಪಷ್ಟವಾದ, ಬಹಿರಂಗವಾದ ಮತ್ತು ಆಕೃತಿಯೆಂದರೆ ಆಕಾರ ಅಥವಾ ರೂಪಗಳಾಗಿವೆ. ಈ ನಾಮದ ಅರ್ಥವೇನೆಂದರೆ ದೇವಿಯ ರೂಪ ಅಥವಾ ಲಕ್ಷಣವನ್ನು ಎಲ್ಲರಿಗೂ ಪರಿಚಿತವಾಗುವಂತೆ ಮಾಡಲಾಗಿದೆ. ಬ್ರಹ್ಮವು ಸಕಲ ಜೀವಿಗಳಲ್ಲೂ ಉಪಸ್ಥಿತವಾಗಿದೆ. ಆದರೆ ಮಾಯೆಯ ಪ್ರಭಾವದಿಂದಾಗಿ ಒಬ್ಬ ವ್ಯಕ್ತಿಯು ತನ್ನನ್ನು ತಾನು ಬ್ರಹ್ಮಕ್ಕಿಂತ ಭಿನ್ನವಾದ ಶರೀರವೆಂದು ಗುರುತಿಸಿಕೊಳ್ಳುತ್ತಾನೆ. ಅವನು ತನ್ನನ್ನು ಕೇವಲ ತನ್ನ ಶರೀರದಿಂದ ಗುರುತಿಸುತ್ತಾನೆ ಮತ್ತು ಇತರರೂ ಸಹ ಅವನನ್ನು ಅವನ ಸ್ಥೂಲ ಶರೀರದಿಂದ ಗುರುತಿಸುತ್ತಾರೆ. ಇಲ್ಲಿ ’ನಾನು’ ಪ್ರಜ್ಞೆಯು ಅಸ್ತಿತ್ವದಲ್ಲಿರುತ್ತದೆ. ಆದರೆ ಇಲ್ಲಿ ಒಬ್ಬರು ತಿಳಿದುಕೊಳ್ಳಲು ವಿಫಲರಾಗುವುದೇನೆಂದರೆ ಅದು ’ನಾನೇ ಶಿವ’ ಎನ್ನುವುದನ್ನು.

         ಶ್ರೀ ಚಕ್ರದ ಪೂಜೆಯಲ್ಲಿ ಪ್ರಥಮ ಆವರಣದಲ್ಲಿನ ದೇವತೆಗಳನ್ನು ಪ್ರಕಟ ಯೋಗಿನಿಯರೆಂದು ಕರೆಯಲಾಗುತ್ತದೆ. ಬಹುಶಃ ಈ ಪ್ರಕಟ ಯೋಗಿನಿಯರು ದೇವಿಯ ಸ್ವರೂಪವಾಗಿದ್ದಾರೆ ಅಥವಾ ಈ ಯೋಗಿನಿಯರು ದೇವಿಯ ನಿಜ ಸ್ವರೂಪವನ್ನು ತೋರಿಸಿ ಕೊಡುತ್ತಾರೆ.

        ಯೋಗಿನಿ ಎಂದರೆ ಸ್ತ್ರೀ ದೇವತೆ, ಮಾಟಗಾತಿ, ಮಾಂತ್ರಿಕ ಸ್ತ್ರೀ ಮೊದಲಾದ ಅರ್ಥಗಳಿವೆ. ಯೋಗಿನಿಯರು ಎಂಟರ ಸಂಖ್ಯೆಯಲ್ಲಿದ್ದು ಅವರು ದುರ್ಗಾ ದೇವಿಯಿಂದ ಸೃಷ್ಟಿಸಲ್ಪಟ್ಟರು ಮತ್ತು ಅವರು ದೇವಿ ಅಥವಾ ಶಿವನಿಗೆ ಪರಿಚಾರಿಕೆಯರಾಗಿದ್ದಾರೆ.

Prāṇeśvarī प्राणेश्वरी (831)

೮೩೧. ಪ್ರಾಣೇಶ್ವರೀ

           ದೇವಿಯು ಪ್ರಾಣ ಅಥವಾ ಪ್ರಾಣಗಳಿಗೆ ಮುಖ್ಯಸ್ಥಳಾಗಿದ್ದಾಳೆ. ಬ್ರಹ್ಮಸೂತ್ರವು (೧.೧.೨೮) ಹೀಗೆ ಹೇಳುತ್ತದೆ, “ಪ್ರಾಣಸ್ತಥಾಽನುಗಮಾತ್ प्राणस्तथाऽनुगमात्” ಅಂದರೆ ಬ್ರಹ್ಮವು ಪ್ರಾಣವಾಗಿದೆ ಏಕೆಂದರೆ ಅದು ಹಾಗೆ ಶ್ರುತಿ ವಾಕ್ಯದಿಂದ ಅರಿಯಲ್ಪಟ್ಟಿದೆ". ಪ್ರಾಣವು ಪ್ರಜ್ಞೆಯೊಂದಿಗೆ ಗುರುತಿಸಲ್ಪಡುತ್ತದೆ ಎಂದು ಹೇಳಲಾಗುತ್ತದೆ ಮತ್ತು ಪ್ರಜ್ಞೆಯ ಪರಿಶುದ್ಧರೂಪವು ಬ್ರಹ್ಮವಾಗಿದೆ.

          ಛಾಂದೋಗ್ಯ ಉಪನಿಷತ್ತು (೧.೧೧.೫) ಸಹ ಹೀಗೆ ಹೇಳುತ್ತದೆ, "ಪ್ರಾಣದಲ್ಲಿ ಎಲ್ಲಾ ವಸ್ತುಗಳು ಗೋಚರಿಸುತ್ತವೆ ಮತ್ತು ಇಲ್ಲವಾಗುತ್ತದೆ". ಸೃಷ್ಟಿ ಮತ್ತು ಲಯಗಳು ಬ್ರಹ್ಮದ ವಿಶಿಷ್ಠ ಲಕ್ಷಣಗಳಾಗಿವೆ. ಆದ್ದರಿಂದ ಪ್ರಾಣವನ್ನು ಬ್ರಹ್ಮವೆಂದು ಕರೆಯಲಾಗಿದೆ.

          ಕಠೋಪನಿಷತ್ತು (೧.೨.೧೫) ಹೀಗೆ ಹೇಳುತ್ತದೆ, " ಸರ್ವೇ ವೇದಾ ಯತ್ ಪದಮ್ ಆಮನಂತಿ सर्वे वेदा यत् पदम् आमनन्ति". ಎಲ್ಲಾ ವೇದಗಳು ಲಕ್ಷ್ಯವನ್ನು ಹೊಗಳುತ್ತವೆ; ಲಕ್ಷ್ಯವೆಂದರೆ ಅತ್ಯುನ್ನತವಾದದ್ದು ಅಂದರೆ ಪರಬ್ರಹ್ಮ. ಈ ವ್ಯಾಖ್ಯಾನವು ಪ್ರ ಎಂದರೆ ಉನ್ನತವಾದ ಮತ್ತು ಅಣ ಎಂದರೆ ವೇದಗಳು ಎನ್ನುವ ಅರ್ಥಗಳ ಮೇಲೆ ಆಧರಿಸಿದೆ. ವ್ಯಕ್ತಿಗತ ಪ್ರಜ್ಞೆಯು ಅಹಂಕಾರದಲ್ಲಿ ಬಂಧಿತವಾಗಿ ಪ್ರಾಣ ಮತ್ತು ಇಂದ್ರಿಯಗಳ ಸಹಯೋಗದಿಂದ ಶರೀರವಾಗಿ ಆವಿರ್ಭವಿಸುತ್ತದೆ. ಹೀಗೆ ಪ್ರಾಣವು ಸೃಷ್ಟಿಯಲ್ಲಿನ ಮುಖ್ಯವಾದ ವಸ್ತುವಾಗಿರುವುದರಿಂದ ಇಲ್ಲಿ ದೇವಿಯನ್ನು ಪ್ರಾಣಗಳಿಗೆ ಮುಖ್ಯಸ್ಥಳೆಂದು ಸಂಭೋದಿಸಲಾಗಿದೆ.

Prāṇadātrī प्राणदात्री (832)

೮೩೨. ಪ್ರಾಣದಾತ್ರೀ

           ಪ್ರಾಣವು ಇಂದ್ರಿಯಗಳನ್ನು ಪೋಷಿಸುತ್ತದೆ. ಪ್ರಾಣವಿಲ್ಲದೆ, ಇಂದ್ರಿಯ ಹಾಗು ಮನಸ್ಸುಗಳು ಕಾರ್ಯನಿರ್ವಹಿಸಲಾರವು. ಹಿಂದಿನ ನಾಮವು ದೇವಿಯು ಪ್ರಾಣಗಳ ಮುಖ್ಯಸ್ಥೆ (ಪ್ರಾಣಗಳ ಮೂರ್ತರೂಪ) ಎಂದು ಹೇಳಿದರೆ ಈ ನಾಮವು ದೇವಿಯು ಪ್ರಾಣವನ್ನು ದಯಪಾಲಿಸುವವಳು ಎಂದು ಹೇಳುತ್ತದೆ. ಬ್ರಹ್ಮಸೂತ್ರವು (೨.೪.೪) ಹೀಗೆ ಹೇಳುತ್ತದೆ, "ತತ್ಪೂರ್ವಕತ್ವಾದ್ವಾಚಃ तत्पूर्वकत्वाद्वाचः" ಅಂದರೆ “ಪ್ರಾಣಗಳು ಬ್ರಹ್ಮದಿಂದ ಉತ್ಪನ್ನವಾಗಿರಬೇಕು ಏಕೆಂದರೆ ವಾಕ್ಕು ಅವುಗಳಿಗೆ ಮುಂಚೆ ಬರುತ್ತದೆ”.

           ಮುಂಡಕ ಉಪನಿಷತ್ತು (೨.೧.೮) ಹೀಗೆ ಹೇಳುತ್ತದೆ, "ತಸ್ಮಾತ್ ಸಪ್ತ ಪ್ರಾಣಃ ಪ್ರಭವಂತಿ" ಅಂದರೆ ಅದರಿಂದ  (ಬ್ರಹ್ಮದಿಂದ) ಏಳು ಪ್ರಾಣಗಳು ಬಂದಿವೆ. ಇಲ್ಲಿ ಏಳು ಪ್ರಾಣಗಳೆಂದರೆ, ಏಳು ಅಂಗಗಳಾದ ಎರಡು ಕಣ್ಣುಗಳು, ಮೂಗಿನ ಎರಡು ಹೊಳ್ಳೆಗಳು, ಎರಡು ಕಿವಿಗಳು ಮತ್ತು ಒಂದು ಬಾಯಿ ಆಗಿವೆ. ಈ ಉಪನಿಷತ್ತು ಹಿಂದಿನ ನಾಮದಲ್ಲಿ ಚರ್ಚಿಸಿದ ಕಠೋಪನಿಷತ್ತಿನ ವಾಕ್ಯವನ್ನು ದೃಢಪಡಿಸುತ್ತದೆ.

           ತೈತ್ತರೀಯ ಉಪನಿಷತ್ತು (೧.೭) ಇದನ್ನು ಇನ್ನಷ್ಟು ವಿವರಿಸುತ್ತದೆ. ಅದು ಪ್ರಾಣ, ವ್ಯಾನ, ಉಪಾನ, ಉದಾನ ಮತ್ತು ಸಮಾನ ಎಂಬ ಐದು ವಿಧವಾದ ಪ್ರಾಣಗಳನ್ನು (ಪಂಚ ಪ್ರಾಣಗಳನ್ನು) ಕುರಿತಾಗಿ ಉಲ್ಲೇಖಿಸುತ್ತದೆ. ಈ ಉಪನಿಷತ್ತು ಅವುಗಳನ್ನು ಪ್ರಾಣ ಪಾಂಕ್ತ (ಪಾಂಕ್ತ ಎಂದರೆ ಐದು ಪಟ್ಟು) ಅಂದರೆ ಪ್ರಾಣದ ಗುಂಪು ಎಂದು ಕರೆಯುತ್ತವೆ. ಈ ಪ್ರಾಣ ಪಾಂಕ್ತಗಳು ಇಂದ್ರಿಯ ಪಾಂಕ್ತಗಳನ್ನು (ಪಂಚೇಂದ್ರಿಯಗಳನ್ನು) ಕಾರ್ಯವೆಸಗುವಂತೆ ಮಾಡುತ್ತವೆ. ಆದ್ದರಿಂದ ಇಲ್ಲಿ ವ್ಯಕ್ತವಾಗುವುದೇನೆಂದರೆ ಪ್ರಾಣವಿಲ್ಲದೆ ಇಂದ್ರಿಯಗಳು ಕಾರ್ಯನಿರ್ವಹಿಸಲಾರವು. ದೇವಿಯು ಆ ಮುಖ್ಯ ಶಕ್ತಿಯಾದ ಪ್ರಾಣವನ್ನು ಕೊಡಮಾಡುತ್ತಾಳೆ; ಅದಿಲ್ಲದಿದ್ದರೆ ಜೀವವು ಸ್ಥಿರವಾಗಿರುವುದಿಲ್ಲ.

          ಯಾವಾಗ ದೇವಿಯು ಈ ಪ್ರಪಂಚಕ್ಕೆ ಪ್ರಾಣವನ್ನು ದಯಪಾಲಿಸುತ್ತಾಳೆಯೋ ಆಗ ಆಕೆಯು ಪರಾ-ಶಕ್ತಿ ಅಥವಾ ಪರಾ-ಪ್ರಕೃತಿ ಆಗುತ್ತಾಳೆ. ಪ್ರಾಣವು ಮುಖ್ಯ ಶಕ್ತಿಯಾಗಿದ್ದು ಅದು ಬ್ರಹ್ಮದಿಂದ ಹೊಂದಲ್ಪಟ್ಟಿದೆ. ಈ ನಾಮವು ದೇವಿಯ ವ್ಯಾಪಿಸುವ ಮತ್ತು ಸುಸ್ಥಿರವಾಗಿರುವ ಪರಬ್ರಹ್ಮ ಸ್ವರೂಪವನ್ನು ಪುನಃ ಒತ್ತಿ ಹೇಳುತ್ತದೆ. 

                                                                                           ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 828 - 832 http://www.manblunder.com/2010/06/lalitha-sahasranamam-828-832.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sat, 12/07/2013 - 06:39

ಶ್ರೀಧರರೆ, "೧೮೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೮೨೮ - ೮೩೨
____________________________________________
.
೮೨೮. ಆಜ್ಞ್ನಾ
ಆಜ್ಞಾಪಿಸುವಳು ದೇವಿ, ಅಪ್ಪಣೆ ಉಲ್ಲಂಘಿಸೆ ಆಗ್ರಹಗೊಳ್ಳುವ ಶ್ರುತಿ, ಸ್ಮೃತಿ
ಇಚ್ಛಾ-ಜ್ಞಾನ-ಕ್ರಿಯಾಶಕ್ತಿಣಿಗಲ್ಲದ ಕಾರ್ಯ-ಕಾರಣ, ಗಾಯತ್ರಿ ಪಂಚಮುಖಿ
ಬ್ರಹ್ಮದಿಚ್ಛೆಯಿಂದುದ್ಭವೆ ಧನ್ಯೆ, ಅಭಯಪ್ರದಾಯಿನಿ ಪ್ರೇರೇಪಿಸಿ ಶಿವಚಿಂತನೆ
ಸಕಲಜ್ಞನಿಂದಾವೃತ ವಿಶ್ವ, ಕಾಲ ಸೃಷ್ಟಿ, ಜ್ಞಾನಮೂಲ ಪರಿಪೂರ್ಣೆ ಬ್ರಹ್ಮನೆ ||
.
೮೨೯. ಪ್ರತಿಷ್ಠಾ
ಧರ್ಮ-ಧಾರ್ಮಿಕ ನ್ಯಾಯಾಧಾರದ ಜಗ, ಅಡಿಪಾಯದಂತಿಹ ದೇವಿ ಲಲಿತೆ
ಧರ್ಮನ್ಯಾಯ ಶಿವಶಕ್ತಿಯರಿದ್ದಂತೆ, ಜೀವಾತ್ಮದೇಹದಂತೆ ಸೃಷ್ಟಿ- ಸ್ಥಿರತೆ ಜತೆ
ಷೋಡಶಾಕ್ಷರ ಛಂಧಸ್ಸು - ಜಲತತ್ವ ವಿನಾಶ ಕ್ರಮ ಕಲಾಗಳೊಂದಾಗಿ ಪ್ರತಿಷ್ಠ
ಜಲವಾಗಿ ಮುಖ್ಯ ಪ್ರಾಣ, ಜಲವಾಗಿ ವ್ಯಕ್ತವಾಗಿ, ಪವಿತ್ರ ಜಲ ರೂಪಿಣಿ ಲಲಿತ ||
.
೮೩೦. ಪ್ರಕಟಾಕೃತಿಃ
‘ನಾನು’ ಪ್ರಜ್ಞೆಯಸ್ಥಿತ್ವದ ದೇಹ, ‘ನಾನೇ ಬ್ರಹ್ಮ’ವ ಮರೆಸಿಬಿಡೆ ಮೋಹಪಾಶ
ಮಾಯಯಡಿ ಮನುಜ ಸ್ಥೂಲ ಶರೀರ, ಅರಿವಾಗದ ಅಂತರ್ಗತ ಬ್ರಹ್ಮವಿಶೇಷ
ಮುಸುಕಲಿಹ ಆಜ್ಞಾನವ ಬೆಳಗೆ, ಪ್ರತ್ಯಕ್ಷಾ ಪ್ರಕಟ ಬಹಿರಂಗ ಸಾಕಾರದ ನೀತಿ
ಆಷ್ಟಾಯೋಗಿನಿ ಪೂಜಿತೆ ಶ್ರೀ ಚಕ್ರಾವರಣದೆ, ಲಲಿತೆ ಯೋಗಿಣಿ ಪ್ರಕಟಾಕೃತಿಃ ||
.
೮೩೧. ಪ್ರಾಣೇಶ್ವರೀ
ಪ್ರಜ್ಞೆಯ ಪರಿಶುದ್ಧ ರೂಪವೆ ಬ್ರಹ್ಮ, ಪ್ರಾಣವಾಗಿ ಪ್ರಜ್ಞೆ ದೇವಿ ಪ್ರಾಣಗಳಿಗೊಡತಿ
ಸೃಷ್ಟಿಲಯ ಬ್ರಹ್ಮದ ವಿಶಿಷ್ಠ, ವಸ್ತು ಗೋಚರಮಾಯ ಪ್ರಾಣದೆ, ಬ್ರಹ್ಮದಾ ರೀತಿ
ಅಹಂ ಬಂಧಿತ ವ್ಯಕ್ತಿಗತ ಪ್ರಜ್ಞೆ, ಪ್ರಾಣೇಂದ್ರಿಯ ಸಹಯೋಗದಲುದ್ಭವ ದೇಹಶ್ರೀ
ಸೃಷ್ಟಿಯ ಪರಮೋನ್ನತ ಪರಬ್ರಹ್ಮ ರೂಪದೀ ಪ್ರಾಣ, ಲಲಿತೆಯಾಗಿ ಪ್ರಾಣೇಶ್ವರೀ  ||
.
೮೩೨. ಪ್ರಾಣದಾತ್ರೀ
ಪ್ರಾಣ ಪೋಷಿತ ಇಂದ್ರಿಯ, ಮನದೊಳ ಕಾರ್ಯಕೆ ಪ್ರಾಣ ಕಾರಣ, ವಾಕ್ಕಿಗೂ ಮುನ್ನ
ಬ್ರಹ್ಮದಿಂದುತ್ಪನ್ನ ಕಣ್ಣು-ಕಿವಿ-ಮೂಗು-ಬಾಯಿ ಸಪ್ತಾಂಗ ಪ್ರಾಣ, ಪಂಚಪ್ರಾಣದ ಭ್ರೂಣ
ಪ್ರಾಣ-ವ್ಯಾನ-ಉಪಾನ-ಉದಾನ-ಸಮಾನ, ಪಂಚೇಂದ್ರಿಯಕೆ ತ್ರಾಣ ದೇವಿ ಪ್ರಾಣಶಕ್ತಿ
ದಯಪಾಲಿಸೊ ಪರಾಶಕ್ತಿ–ಪ್ರಕೃತಿ, ಪ್ರಾಣದಾತ್ರೀ ಲಲಿತೆ ಪರಬ್ರಹ್ಮ ಸ್ವರೂಪಿ ಮಹತಿ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ಶ್ರೀಧರರೆ ೮೨೯. ಪ್ರತಿಷ್ಠಾ ತುಸು ತಿದ್ದುಪಡಿ ಮಾಡಿದ್ದೇನೆ :-)
.
೮೨೯. ಪ್ರತಿಷ್ಠಾ
ಧರ್ಮ-ಧಾರ್ಮಿಕ ನ್ಯಾಯಾಧಾರದ ಜಗ, ಅಡಿಪಾಯದಂತಿಹ ದೇವಿ ಲಲಿತೆ
ಧರ್ಮನ್ಯಾಯ ಶಿವಶಕ್ತಿಯರಿದ್ದಂತೆ, ಜೀವಾತ್ಮದೇಹದಂತೆ ಸೃಷ್ಟಿ- ಸ್ಥಿರತೆ ಜತೆ
ಷೋಡಶಾಕ್ಷರ ಛಂಧಸ್ಸು, ಜಲತತ್ವ, ವಿನಾಶಕ್ರಮ ಕಲಾದಲೊಂದಾಗಿ ಪ್ರತಿಷ್ಠ
ಜಲವೆ ಮುಖ್ಯ ಪ್ರಾಣ, ಜಲ ರೂಪದೆ ವ್ಯಕ್ತವಾಗಿ, ಪವಿತ್ರ ಜಲ ರೂಪಿಣಿ ಲಲಿತ ||
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು