ಅಜ್ಜಿಯ ನೆನಪಲೊಂದು ಲೇಖನ..

ಅಜ್ಜಿಯ ನೆನಪಲೊಂದು ಲೇಖನ..

ಬರವಣಿಗೆಯ ಮೇಲೆ ನಾಲ್ಕು ವರುಷಗಳ ಕೆಳಗೆ ಇದ್ದ ಆ ಹಿಡಿತ, ಆ ಸರಾಗ ನನಗೀಗ ಇಲ್ಲವೇನೋ ಎಂದು ಅನ್ನಿಸುತ್ತೆ. ಬರವಣೆಗೆ ಲೋಕದಿಂದ ದೂರ ಇದ್ದರೂ, ಬರೆಯಬೇಕೆಂಬ ಹಂಬಲ ಮಾತ್ರ ನನ್ನನ್ನು ಸದಾ ಕಾಡುತ್ತಾ ಇದ್ದದ್ದು ನಿಜ. ಆದರೆ ಈಗ ಲೇಖನ, ಪ್ರವಾಸ ಕಥನ ಅಥವಾ ಕವಿತೆ ಹೀಗೆ ಯಾವುದಾದರೊಂದನ್ನು ಬರೆಯಲು ಹೋದರೆ ಹೇಗೆ ಪ್ರಾರಂಭಿಸಬೇಕು? ಹೇಗೆ ಮುಂದುವರೆಸಬೇಕು? ಹೇಗೆ ಮುಗಿಸಬೇಕು? ಹೀಗೆ ಹತ್ತಾರು ವಿಚಾರಗಳು ಮನಸ್ಸಿನಲ್ಲಿ ಮೂಡಿ ಬರುತ್ತಿವೆ.

ಹೇಗೆ ಕೆಲವೊಂದು ಸನ್ನಿವೇಶ ಮತ್ತು ಘಟನೆಗಳು ನಮ್ಮನ್ನು ಬರವಣಿಗೆ ಹಾಗು ಭಾವನಲೋಕದಿಂದ ದೂರ ಕರೆದೊಯುತ್ತವೆಯೋ, ಹಾಗೆಯೇ ಕೆಲವೊಂದು  ಸನ್ನಿವೇಶ ಮತ್ತು ಘಟನೆಗಳು ನಮ್ಮನ್ನು ಬರವಣಿಗೆ ಹಾಗು ಭಾವನಲೋಕದ ಹತ್ತಿರ ಕರೆದುತರುತ್ತವೆ.   ನಾನು ಬಹಳವಾಗಿ ಗೌರವಿಸುತ್ತಿದ್ದ ಹಾಗು ಪ್ರೀತಿಸುತ್ತಿದ್ದ ನನ್ನ ಅಜ್ಜಿ (ಅಮ್ಮನ ಅಮ್ಮ) ಈಗ್ಗೆ ಕೆಲವು ತಿಂಗಳುಗಳ ಕೆಳಗೆ ಸ್ವರ್ಗಸ್ತರಾದರು.  ಅವರ ನೆನಪಲ್ಲಿ ಒಂದು ಲೇಖನ.

ನಾವು ಹಿರಿಯವರಿಂದ ಕಲಿಯಬೇಕಾಗಿರುವುದು ಬಹಳಷ್ಟು ಇರುತ್ತೆ. ಅವರ ಜೀವನದ ಅನುಭವ, ಕಷ್ಟ-ಸುಖಗಳನ್ನು ಸರಿಸಮವಾಗಿ ತೆಗೆದುಕೊಳ್ಳುವ ಮನೋಭಾವ, ಎಲ್ಲಕ್ಕಿಂತ ಮುಖ್ಯವಾಗಿ ಸ್ವಾಭಿಮಾನ ಮತ್ತು ಸ್ವಾವಲಂಬನೆ ತುಂಬಿಕೊಂಡ ಅವರ  ಬದುಕು.

ನಮ್ಮೂರಿಂದ ಎರಡೂವರೆ ಮೈಲಿ ದೂರದಲ್ಲಿ  ನನ್ನಜ್ಜಿಯ ಊರು, ಅಲ್ಲಿಗೆ ಬಸ್ಸುಗಳ ಸೌಕರ್ಯವಿಲ್ಲ, ನೆಡಿಗೆಯಲ್ಲಿ ಹೋಗಬೇಕು, ಇಲ್ಲವೇ ಸೈಕಲ್ಲು, ಮೋಟಾರು ವಾಹನಗಳಲ್ಲಿ ಹೋಗಬೇಕು. ನಾನು ಚಿಕ್ಕಂದಿನಲ್ಲಿ ಸೈಕಲ್ಲು ಕಲಿಯುವವರೆಗೂ ಅಜ್ಜಿಯೂರಿಗೆ ನೆಡಿಗೆಯಲ್ಲೇ ಹೋಗುತ್ತಿದ್ದೆ.  ಮನೆಯಿಂದ ಹೊರಟ ಸ್ವಲ್ಪ ಸಮಯದಲ್ಲೇ ತೆಂಗಿನ ತೋಟಗಳ ಸಾಲು, ತೋಟಗಳ ಸಾಲಿನ ಕೊನೆಯಲ್ಲಿ ಬೃಹದಾಕಾರದ ನಮ್ಮೂರಿನ ಕಲ್ಲುಬಂಡೆ, ಬಂಡೆ ಕೆಳಗಡೆ “ಜಲರಕಟ್ಟೆ”ಎನ್ನುವ ಕಟ್ಟೆ. ಆ ದಿನಗಳಲ್ಲಿ ನಮ್ಮೂರಿನ ಹೆಂಗಸರು ತಮ್ಮ,ತಮ್ಮ ಮನೆಯ ಕೊಳೆತುಂಬಿದ ಬಟ್ಟೆಗಳನ್ನು ಇಲ್ಲೆಯೇ ತೊಳೆಯುತ್ತಿದ್ದದ್ದು (ಈಗ ಕಾಲ ಬಹಳಷ್ಟು ಬದಲಾಗಿದೆ!). ಆ ಕಟ್ಟೆಯನ್ನು ದಾಟಿ ಸ್ವಲ್ಪ ದೂರ ನೆಡೆದರೆ ಬಯಲು ಹೊಲಗಳು, ನಂತರದಲ್ಲಿ ನನ್ನಜ್ಜಿಯೂರಿನ ಕೆರೆ (ಅದರ ಹೆಸರು ಬೊಮ್ಮೇನಹಳ್ಳಿ ಕೆರೆ). ಆ ಕೆರೆಯನ್ನು ದಾಟಿ ಸ್ವಲ್ಪ ದೂರ ನೆಡೆದರೆ ಅಜ್ಜಿಯ ಊರು ಬೊಮ್ಮೇನಹಳ್ಳಿ. ಆ ಊರನ್ನು ಲಕ್ಷ್ಮೀಪುರ ಮತ್ತು ದಿಬ್ಬ ಅನ್ನುವ ಹೆಸರಗಳಿಂದ ಕರೆಯುತ್ತಿದ್ದದ್ದು ಉಂಟು.

ಚಿಕ್ಕಂದಿನಲ್ಲಿ ಬೊಮ್ಮೇನಹಳ್ಳಿಗೆ ಹೋದಾಗಲೆಲ್ಲ ‘ಅಜ್ಜಿಮನೆ’ಗೆ ಹೋಗದೆ ನೇರವಾಗಿ ತೋಟಕ್ಕೆ ಹೋಗುತ್ತಿದೆ. ಏಕೆಂದರೆ ಬಹಳಷ್ಟು ಸಮಯವನ್ನು ಅವರು ಅಲ್ಲೆಯೇ ಕಳೆಯುತ್ತಿದ್ದರು. ಅವಳ  ಜೀವಾಳವೇ ಅಲ್ಲಿ ಇತ್ತು. ಬಡಕಲು ಶರೀರದ ನನ್ನಜ್ಜಿ  ಬಿಸಿಲಿನ ಶಾಖ ತಲೆಗೆ ತಾಗದಂತೆ ಹರಿವೆಯೊಂದನ್ನು ಕಟ್ಟಿಕೊಂಡು, ಎರಡು-ಮೂರು ಆಕಳುಗಳನ್ನು ಹಗ್ಗದ ಸಹಾಯದಿಂದ ಹಿಡಿದುಕೊಂಡು ಬದುವಿನ ಮೇಲೆ ಬೆಳೆದ ಹಸಿರು ಹುಲ್ಲನ್ನು ಮೇಯಿಸುತ್ತಿರುತ್ತಿದ್ದರು.

ನಾನು ಅವರನ್ನು ನೋಡಲು ಹೋದಾಗಲೆಲ್ಲ, ಅಮ್ಮ ಮಲ್ಲೇನಹಳ್ಳಿಯಿಂದ ಅಜ್ಜಿಗೆ ಏನಾದರೂ ತಿನ್ನಲು  ಕೊಟ್ಟಿರುತ್ತಿದ್ದರು ಅದನ್ನು ಅಜ್ಜಿಗೆ ಕೊಡುತ್ತಿದ್ದೆ. ತೋಟದಲ್ಲಿ ಇರುತ್ತಿದ್ದ ಎಳನೀರಿನ ಕಾಯಿಯನ್ನು ಕುಡಿಯಲು ನನಗೆ ಕೊಡುತ್ತಿದ್ದರು ಅಜ್ಜಿ.  ಮಲ್ಲೇನಹಳ್ಳಿಗೆ ಹೊರಡಲು ನಾನು ಇನ್ನೇನು ಸಿದ್ದನಾಗಬೇಕು ಅನ್ನುವಷ್ಟರಲ್ಲಿ ತಮ್ಮ ಸೆರಗಿನ ಗಂಟಿನಲ್ಲಿ ಕಟ್ಟಿಇಟ್ಟುಕೊಂಡಿರುತ್ತಿದ್ದ ಒಂದು ಅಥವಾ ಎರಡು ರೂಪಾಯಿ ಬಿಲ್ಲೆ ಅಥವಾ ನೋಟನ್ನು ನನಗೆ ಕೊಡುತ್ತಿದ್ದರು. ಆಗ ನನಗಂತೂ ಇನ್ನೀಲ್ಲದ ಖುಷಿಯಾಗುತ್ತಿತ್ತು. ನಾನು ಗಮನಿಸಿದ ಹಾಗೆ ಅವರಲ್ಲಿದ್ದ ಒಂದು ವಿಶೇಷ ಗುಣವೆಂದರೆ ಒಬ್ಬರಿಗೆ ಕೊಟ್ಟಿದ್ದನ್ನು ಮತ್ತೊಬ್ಬರಿಗೆ ಹೇಳುತ್ತಿರಲಿಲ್ಲ. ‘ಅಜ್ಜಿಮನೆ’ಯೆಂದರೆ ಭವ್ಯವಾದ ಮನೆಯೇನು ಅದಾಗಿರಲಿಲ್ಲ ಅದು ಅಪ್ಪಟ ಗುಡಿಸಲು. ಆ ದಿನಗಳಲ್ಲಿ ಅದರಲ್ಲೇ ಅಜ್ಜಿ ಮತ್ತು ಇಬ್ಬರು ಮಾವಂದಿರು ವಾಸವಿದ್ದದ್ದು.

ನಮ್ಮಜ್ಜಿಯ ತೌರೂರು ನನ್ನೂರೇ. ನನಗೆ ಗೊತ್ತಿರುವ ಹಾಗೆ ನಾನು ಮೂರನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮಜಿಯ ಅಮ್ಮನಿಗೆ (ಅಂದರೆ ನನ್ನ ಮುತ್ತಜ್ಜಿ) ಆರೋಗ್ಯ ಸರಿಯಿಲ್ಲದೆ ಹಾಸಿಗೆಯನ್ನು ಹಿಡಿದಾಗ ಅವರ ಹಾರೈಕೆ ಮಾಡಲು ನಾಲ್ಕೈದು ತಿಂಗಳು ಕಾಲ ದಿನನಿತ್ಯ ನನ್ನೂರಿಗೆ (ಮಲ್ಲೇನಹಳ್ಳಿ) ಕಾಲು ನೆಡಿಗೆಯಲ್ಲೇ  ಬಂದು ಹೋಗುತ್ತಿದ್ದರು.

ಅಜ್ಜಿ  ನಮ್ಮೂರಿಗೆ  ಬಂದರೆ ಏನೋ ಒಂದು ತರಹ ಖುಷಿ ನಮಗೆ, ಏನಾದರೂ ತಿನ್ನಲು ತರುತ್ತಿದ್ದರು  ಬಹಳಷ್ಟು ಸಮಯ ಸೌತೆಕಾಯಿ ರೂಪದ ಮೃದು ಹಣ್ಣನ್ನು ತರುತ್ತಿದ್ದರು. (ನಮ್ಮ ಕಡೆ ಅದಕ್ಕೆ ಕ್ಯಾಕರಿಕೆ ಹಣ್ಣು ಎಂದು ಕರೆಯುತ್ತಾರೆ), ಅದಕ್ಕೆ ಸಕ್ಕರೆ ಮತ್ತು ತೆಂಗಿನಕಾಯಿ ತುರಿ ಮಿಶ್ರಣ ಮಾಡಿಕೊಂಡು ತಿನ್ನುತ್ತಿದ್ದೆವು. ಹಬ್ಬ,ಹರಿದಿನಗಳು ಇದ್ದಾಗ ಎದ್ದು ಹೋಳಿಗೆ, ಕೀಲ್ಸ  (ರಾಗಿಯಿಂದ ಮಾಡುವ ಸಿಹಿ ತಿನಿಸು) ಮಾಡಿಕೊಂಡು ತರುತ್ತಿದ್ದರು.

೨೦೦೭ರಲ್ಲಿ ನನ್ನ ಅಪ್ಪಾಜಿ ತೀರಿ ಹೋದಾಗಿನಿಂದ ಅಮ್ಮನ  ಜೊತೆಗೆ ಇರಲು ಒತ್ತಾಯ ಮಾಡಿ ಅಜ್ಜಿಯನ್ನು ನಮ್ಮೂರಿಗೆ ಕರೆದುಕೊಂಡು ಬಂದಿದ್ದೆವು.

ನನ್ನ ಅಜ್ಜಿಯ ಬಗ್ಗೆ  ಮೊದಲಿಗಿಂತ ಹೆಚ್ಚು ವಿಷಯಗಳು ತಿಳಿದುಬಂದದ್ದು ಆ ಸಮಯದಲ್ಲೇ. ಬೆಳಗ್ಗೆ ಆರರಿಂದ ಅವರ ದಿನ ಶುರುವಾಗುತ್ತಿತ್ತು. ದಿನನಿತ್ಯ ಮನೆ ಮತ್ತು ಅಂಗಳದ ಕಸ ಗೂಡಿಸುವುದು, ಮನೆಯ ಮುಂದೆ ಅಂಗಳ ಮತ್ತು ಹಟ್ಟಿಯಲ್ಲಿ ನೀರನ್ನು ಚುಮುಕಿಸುವುದು ಮತ್ತು  ಹೂವನ್ನು ಹಾಕುವುದು, ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವುದು, ಸ್ನಾನ ಮಾಡಿ ದೇವರ ಪೂಜೆ ಮಾಡುವುದು, ಅಚ್ಚುಕಟ್ಟಾದ ಅಡುಗೆ ಮಾಡುವುದು. ಅಜ್ಜಿ ನಮ್ಮೂರಿನಲ್ಲಿ ಇರುವಾಗ ಅಮ್ಮನಿಗೆ ತೋಟದ ಕೆಲಸ ಬಿಟ್ಟು ಬೇರೇನು ಕೆಲಸವೇ ಇರುತ್ತಿರಲಿಲ್ಲ! ಊಟದ ವಿಷಯದಲ್ಲೂ ಅಜ್ಜಿ ಬಹಳ ಕಟ್ಟುನಿಟ್ಟು, ಅಪ್ಪಿತಪ್ಪಿಯು ಸಹ ಮಿತಿ ತಪ್ಪಿ ಊಟ ಮಾಡುತ್ತಿರಲಿಲ್ಲ, ಊಟಕ್ಕೆ ಒಪ್ಪುವ ಹಾಗೆ ಅಷ್ಟೇ ಮಿತವ್ಯಯದ ಮಾತು ಹಾಗು ಮನೆಯಲ್ಲಿ
 ಅದೇ ಎಷ್ಟೇ ಜನ ನೆಂಟರು ಇರಲಿ ಹರಟು ಮಾತಿಗೆ ಕೂರದೆ ರಾತ್ರಿ ಹತ್ತಕ್ಕೆ ಮಲಗಿಬಿಡುತ್ತಿದ್ದರು.  

 ನಮ್ಮಜ್ಜಿ ಅಂದರೆ ತೀರ ಸಾಧಾರಣ ವ್ಯಕ್ತಿತ್ವದ ವ್ಯಕ್ತಿ ಎಂದು ನನಗೆ ಯಾವತ್ತು ಅನ್ನಿಸಿಲ್ಲ. ಏಕೆಂದರೆ ಬದುಕಲಿ ಬಹಳ ಕಷ್ಟ ಅನುಭವಿಸಿದರು, ಕಷ್ಟಗಳನ್ನು ಸಹಿಸಿ, ಸಹಿಸಿ.ಕಷ್ಟಗಳಿಗೆ ಹೆದರದಷ್ಟು ಗಟ್ಟಿಯಾಗಿದ್ದ ಮನೋಸ್ಥೈರ್ಯ ಅವರದಾಗಿತ್ತು. ಅದರಂತೆಯೇ ಯಾವುದಕ್ಕೂ ಹೆದರದೇ, ಎಲ್ಲ ಕೆಲಸಗಳನ್ನು ತಾಳ್ಮೆ, ಶಿಸ್ತಿನಿಂದ ಮಾಡುತ್ತಿದ್ದರು.

ನನ್ನ ದೃಷ್ಟಿಯಲ್ಲಿ ನನ್ನಜ್ಜಿಯೆಂದರೆ ಅವರು ಸದಾ ಮಂದಸ್ಮಿತ, ಚಟುವಟಿಕೆಯಿಂದ ಇರುವಂತಹ ವ್ಯಕ್ತಿ ಹಾಗು ನನಗೆ ತಿಳಿದ ಮಟ್ಟಿಗೆ ಬದುಕನ್ನು ಅರ್ಥಪೂರ್ಣವಾಗಿ ಬಾಳಿ ಹೋದ ಕೆಲವರಲ್ಲಿ ಒಬ್ಬರು.

ಕೊನೆಯಲ್ಲಿ ಹೇಳುವುದಾದರೆ ದೊಡ್ಡ, ದೊಡ್ಡ ವ್ಯಕ್ತಿಗಳನ್ನು ನಮ್ಮ ಬದುಕಿನ ಆದರ್ಶವಾಗಿ ಇರಿಸಿಕೊಳ್ಳುವುದಕ್ಕಿಂತ ನಮ್ಮ ಹತ್ತಿರವೇ ಇರುವ ಹಾಗು ನಮ್ಮಲ್ಲಿ ಆಗಾಧವಾದ ಕನಸು ಕಟ್ಟಿಕೊಂಡಿರುವ ನಮ್ಮ ತಂದೆ, ತಾಯಯಿಂದಿರು ಅಥವಾ ಅಜ್ಜ, ಅಜ್ಜಿಯಿಂದಿರು ಇಲ್ಲವೇ ನಮ್ಮ ಶಿಕ್ಷಕರುಗಳು ಇವರಲ್ಲಿ ಯಾರನ್ನಾದರೂ ನಮ್ಮ ಆದರ್ಶವಾಗಿ ನೋಡುವುದು ಹೆಚ್ಚು ಸೂಕ್ತವೆಂದು ನನಗೆ ತೋರುತ್ತೆ.

 - ಸುನಿಲ್ ಮಲ್ಲೇನಹಳ್ಳಿ, ದಿನಾಂಕ ೬-ಡಿಸೆಂಬರ್ -೨೦೧೩

Comments

Submitted by vidyakumargv Sat, 12/07/2013 - 21:11

ನನ್ನ ಸೊದರ ಮಾವ ಇವತ್ತಿಗೂ ನನ್ನ ಜೋಬಿಗೆ ನೋಟನ್ನು ನೂಕಿಯೆ ಬೀಳ್ಕೊಡುತ್ತಾರೆ... ನನಗೆ ಮುಜುಗರ ಆದ್ರೆ ದೊಡ್ಡವರಿಗೆ ನಾವು ಸದಾ ಚಿಕ್ಕವ್ರೆ ಅಲ್ವಾ!
ತಾಯಿಗೆ ಮಗ ಎಸ್ಟೇ ಬೆಳೆದ್ರು ಮಗನೆ!. ಒಳೆಯ್ಯ ಬರಹ ಇಷ್ಟವಾಯ್ತು.

Submitted by Amaresh patil Sat, 12/14/2013 - 21:50

ಸುನಿಲರವರೇ ಆದುನಿಕತೆಯ ಇಂದಿನ ದಿನಗಳಲ್ಲಿ ಕುಟುಂಬವೆಂದರೆ ಬರಿ ಹೆಂಡತಿ ಮಕ್ಕಳು ಎನ್ನುವ ಮನೋಭಾವನೇ ಇರುವವರೇ ಹೆಚ್ಚಿಗಿರುವಾಗ ಶುದ್ಧ ಗ್ರಾಮೀಣ ಬದುಕಿನ ಜೀವನ ಶೈಲಿಯಲ್ಲಿ ಅವಿಭಕ್ತ ಕುಟುಂಬಗಳು ಹಾಗೂ ಅವುಗಳಲ್ಲಿರುವ ಪ್ರೀತಿ ಪರಸ್ಪರ ಸಹಬಾಳ್ವೆಯಲ್ಲಿರುವಷ್ಷು ಸಂತೋಷ, ಶಿಸ್ತು, ವಿಶಾಲಮನೋಬಾವನೆ ಬೇರೆಲ್ಲು ಕಾಣಲು ಸಾಧ್ಯವಿಲ್ಲ ಅದು ನಿಮ್ಮಂತ ತಂತ್ರಜ್ಞಾನ ವಲಯದ ವೃತ್ತಿಯಲ್ಲಿರುವವರು ನಿಮ್ಮ ಬಾಲ್ಯದ ನೆನಪನ್ನು ಚಿಕ್ಕದಾದರೂ ಅಚ್ಚುಕಟ್ಟಾಗಿ ಬರೆದಿದ್ದಿರಿ, ಹಾಗೆಯೇ ನನ್ನ ತಾಯಿಗಿಂತಲು ಹೆಚ್ಚಿಗೆ ಇಷ್ಟ ಪಡುವ ನನ್ನಜ್ಜಿ (ತಾಯಿಯ ತಾಯಿ)ನೇನಪುಗಳು ನನಗೆ ನೆನಪಿಸಿಕೊಳ್ಳುವಂತೆ ಮಾಡಿದ್ದಿರಿ, ಹೌದು ಬದುಕಿನಲ್ಲಿ ಆದರ್ಶ ವ್ಯಕ್ತಿಗಳಂದರೇ ಕೆವಲ ಇತಿಹಾಸ ನಿರ್ಮಿಸಿದವರಾಗಲಿ,ವಿಜ್ಞಾನಿಗಳಾಗಲಿ.ದಾರ್ಶನಿಕರಾಗಲಿ,ಚಿಂತಕರಾಗಲಿ ಅಲ್ಲಾ ಜನಸಾಮಾನ್ಯರ ಬದುಕಿನಲ್ಲಿ ಉತ್ತಮ ಸಮಾಜಕ್ಕೆ ನಮ್ಮ ಕುಟುಂಬದ ಹಿರಿಯರಾಗಲಿ ಅಥವಾ ನಮ್ಮ ಗುರುಗಳಾಗಲಿ ಮಾಡಿಕೊಂಡಲ್ಲಿ ಉತ್ತಮ ಸಮಾಜವನ್ನು ಕಟ್ಟಬಹುದು ಎನ್ನುವುದು ನಿಮ್ಮ ಲೇಖನದಲ್ಲಿ ಅಭಿಪ್ರಾಯಿಸಿದ್ದಿರಿ ಧನ್ಯವಾದಗಳು