ಪ್ರಜಾಪ್ರಭುತ್ವವನ್ನು ನುಂಗುತ್ತಿರುವ ಕೋಮುವಾದ
ಇವತ್ತು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸುತ್ತಿರುವ ಬಹುದೊಡ್ಡ ಅಪಾಯವೆಂದರೆ ಕೋಮುವಾದ. ಗುಪ್ತಗಾಮಿನಿಯಂತೆ ಒಳಗೇ ಹರಿಯುತ್ತ, ವಿಷವನ್ನು ತುಂಬುತ್ತ, ಜನ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ನೋಡುತ್ತಿರುವ ಕೋಮುವಾದವನ್ನು ಬೆಳೆಯಲು ಬಿಟ್ಟರೆ ನಾವು ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಕೋಮುವಾದದ ಹಿಂದೆ ಮತ ಮೌಡ್ಯಗಳು, ಫ್ಯಾಸಿಸ್ಟ್ ಶಕ್ತಿಗಳು, ಪುರೋಹಿತಶಾಹಿ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿರುವುದರಿಂದ ಕೋಮುವಾದವು ಈ ರಾಷ್ಟ್ರವನ್ನು ಛಿದ್ರಮಾಡಬಲ್ಲದು. ಹಿಂದೂ ರಾಷ್ಟ್ರ ನಿರ್ಮಾಣದ ಗುರಿಯನ್ನು ಹೊಂದಿರುವ ಈ ಕೋಮುವಾದ ಅನ್ಯ ಧರ್ಮೀಯರನ್ನು ಈ ನೆಲದ ಮಕ್ಕಳೆಂದು ನೋಡುವುದಿಲ್ಲ.
ಭಾರತವೆಂದರೆ ಹಲವು ಧರ್ಮಗಳು, ಹಲವು ಜಾತಿಗಳು, ಹಲವು ಸಂಸ್ಕ್ರುತಿಗಳು, ಹಲವು ನಂಬಿಕೆಗಳು, ಹಲವು ಭಾಷೆಗಳು, ಹಲವು ಚಿಂತನಾ ಕ್ರಮಗಳು. ಇವೆಲ್ಲಾ ಸೇರಿದ ಜನ ಸಮುದಾಯವೇ ಭಾರತ. ಇದನ್ನೇ ಬಹುಳತ್ವ ಎಂದು ಹೇಳಲಾಗುತ್ತಿದೆ. ಆದರೆ ಕೋಮುಶಕ್ತಿಗಳು ಈ ಬಹುಳತ್ವವನ್ನು ಒಪ್ಪುವುದಿಲ್ಲ. ಅದು ಏಕ ಧರ್ಮ, ಏಕ ಸಂಸ್ಕ್ರುತಿಯನ್ನು ಮಾನ್ಯ ಮಾಡುತ್ತದೆ. ಹಿಟ್ಲರ್ ಕೂಡ ಹೀಗೆ ಮಡುತ್ತಿದ್ದ. ಇಡೀ ಜಗತ್ತನ್ನು ಒಂದು ಜನಾಂಗದ ಸ್ವತ್ತಾಗಿ ಮಾಡಲು ನೋಡಿದ ಆ ಸರ್ವಾಧಿಕರಿ ಸರ್ವನಾಶವಾಗಿ ಹೋದ. ಆದರೂ ಹಿಟ್ಲರ್ ಚಿಂತನೆ ನಾಶವಾಗಲಿಲ್ಲ. ಇವತ್ತು ಭಾರತದಲ್ಲಿ ತಲೆ ಎತ್ತಲು ನೋಡುತ್ತಿರುವ ಕೋಮುವಾದದ ಹಿಂದೆ ಹಿಟ್ಲರ್ ಚಿಂತನೆಯಿದೆ.
ಜೀವಕ್ಕೆ ಬೆಲೆಯನ್ನು ಕೊಡದ ಕೋಮುವದ ಬಾಬ್ರೀ ಮಸೀದಿಯನ್ನು ನೆಲಸಮ ಮಾಡಿ, ಧರ್ಮದ ಅಫೀಮನ್ನು ಕುಡಿಸಿ ಜನರನ್ನು ಯುದ್ದರಂಗಕ್ಕೆ ಇಳಿಸಿತು. ಗೋಧ್ರಾ ಪ್ರಕರಣವನ್ನುಬಳಸಿಕೊಂಡು ಅಮಾಯಕರನ್ನು ಬಲಿತೆಗೆದುಕೊಂಡಿತು. ಸಹಬಾಳ್ವೆಯನ್ನು ಕೋಮುವಾದ ಎಂದು ಸಹಿಸುವುದೇ ಇಲ್ಲ. ಜನ ಒಬ್ಬರನ್ನೊಬ್ಬರು ಕೊಂದುಕೊಳ್ಳುತ್ತ, ರಕ್ತ ನಿರಂತರವಾಗಿ ಹರಿಯುತ್ತಲೇ ಇರಬೇಕು. ಈ ರಾಷ್ಟ್ರದ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ತಲೆ ಎತ್ತದಂತೆ ಮಾಡಲು ಇಂಥವೇ ಪ್ರಕರಣಗಳು ಕೋಮುವಾದಿ ಶಕ್ತಿಗಳು ನಿರಂತರವಾಗಿ ಹುಟ್ಟುಹಾಕುತ್ತಲೇ ಇರುತ್ತವೆ. ಇಲ್ಲವದರೆ ಹಿಟ್ಲರ್ ನ ಮುಂದುವರಿದ ಮಾದರಿಯಂತಿರುವ ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಈ ಶಕ್ತಿಗಳು ಮುಂದಿನ ಪ್ರಧಾನಿಯಾಗಿ ಬಿಂಬಿಸುತ್ತ ಇರಲಿಲ್ಲ. ಅನ್ಯ ಧರ್ಮಿಯರು ಎನ್ನುವ ಏಕೈಕ ಕಾರಣಕ್ಕಾಗಿ ಒಂದು ದರ್ಮಕ್ಕೆ ಸೇರಿದವರನ್ನು ನಿರ್ದಾಕ್ಷಿಣ್ಯವಾಗಿ, ಅಮಾನುಷವಾಗಿ ಕೊಲ್ಲುವ, ಅದಕ್ಕಾಗಿ ಹಲವಾರು ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತಿರುವ ನರೇಂದ್ರ ಮೋದಿ ನಾಯಕನಾಗುವುದು ಎಂದರೆ ಕೋಮುಶಕ್ತಿಗಳು ಪ್ರಬಲವಾಗುತ್ತಿವೆ ಎಂದು ಅರ್ಥ.
ಸರ್ವಾಧಿಕಾರೀ ಧೋರಣೆಯ, ರಾಕ್ಷಸೀ ಪ್ರವೃತ್ತಿಯ, ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ, ಸಾವಿರ ಸುಳ್ಳುಗಳನ್ನು ಹೇಳಿ ಹೇಳಿ ಸತ್ಯವಾಗುತ್ತದೆಂದು ಭಾವಿಸುವ, ಸುಳ್ಳುಪ್ರಚಾರಕ್ಕಾಗಿ ಪ್ರಗತಿಯ ಮಾದರಿಗಳನ್ನು ಸೃಷ್ಟಿಸುತ್ತಿರುವ ಕೋಮುವಾದಿಗಳಗೆ, ಅಭಿವ್ಯಕ್ತಿ ಸ್ವಾತಂತ್ರವೇ ಇಲ್ಲದ ಗುಜರಾತ್ ರಾಜ್ಯ ಒಂದು ದೊಡ್ಡ ಮಾದರಿಯಾಗಿದೆ: ಮರಿ ಹಿಟ್ಲರ್ ಮೋದಿ ಬಹುದೊಡ್ಡ ರಾಷ್ಟ್ರನಾಯಕನಾಗಿ ಕಾಣುತ್ತಿದ್ದಾನೆ. ಇವತ್ತು ಗುಜರಾತ್ನಲ್ಲಿ ಹಿಂದೂಗಳಲ್ಲದ ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ. ಕೊಟ್ಯಾಂತರ ರೂಪಾಯಿಗಳ ಹೊಳೆಯೆ ಅಲ್ಲಿ ಹರಿದರೂ, ದೊಡ್ಡ ದೊಡ್ಡ ಬಹುರಾಷ್ಟ್ರಿಯ ಕಂಪನಿಗಳಿಗಳು ಅಲ್ಲಿ ಸ್ಥಾಪನೆಗೊಂಡಿದ್ದರೂ, ಗುಜರಾತ್ನಲ್ಲಿ ಬಡತನ, ನಿರುದ್ಯೋಗ, ಅಪೌಷ್ಟಿಕತೆ ಇತ್ಯಾದಿ ಎಲ್ಲ ಸಮಸ್ಯೆಗಳೂ ಭಿಕರವಾಗಿವೆ. ಆದರೂ ಕೋಮುವಾದಿಗಳ ಅಬ್ಬರದ ಪ್ರಚರದಲ್ಲಿ ಗುಜರತ್ನಲ್ಲಿ ಸ್ವರ್ಗಸೃಷ್ಟಿಯಾಗಿದೆ. ಈ ಸುಳ್ಳು ಪ್ರಚಾರಕ್ಕಗಿಯೇ ಮೋಚು ಖರ್ಚು ಮಾಡುತ್ತಿರುವ ಹಣ ಕೋಟ್ಯಾಂತರ ರೂಪಯಿ. ಪ್ರಚರ ನಿಲ್ಲಿಸಿ ಆ ಹಣವನ್ನು ಅಲ್ಲಿಯ ಜನರಿಗೆ ಹಂಚಿದ್ದರೂ, ಜನ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯಲ್ಲಿ ಇರುತ್ತಿದ್ದರೇನೋ.
ಇಂಥ ಸನ್ನಿವೇಶದಲ್ಲಿ ನಾವು ಮೈಮರೆತರೆ, ಪ್ರಜಾಪ್ರಭುತ್ವವೇ ಇಲ್ಲಿ ನಾಶವಾಗುತ್ತದೆ; ಮೋದಿಯಂತಹ ಮರಿಹಿಟ್ಲರ್ಗಳೇ ಸಿಂಹಾಸನದಲ್ಲಿ ಕುಳಿತು ಮೆರೆಯುತ್ತಾರೆ. ಪ್ರಜಾಪ್ರಭುತ್ವವೆಂದರೆ ಪ್ರತಿಯೊಬ್ಬರ ಪ್ರಭುತ್ವ ಇ ದೇಶದ ಪ್ರತಿಯೊಬ್ಬರ ಪ್ರಭುತ್ವ ಒಂದು ಧರ್ಮವನ್ನು ತುಳಿದು ಇನ್ನೊಂದು ಧರ್ಮವನ್ನು ಕಟ್ಟುವುದಲ್ಲ. ಎಲ್ಲರ ಅಸ್ತಿತ್ವ ಎಲ್ಲರ ವಿಕಾಸವೇ ಪ್ರಜಾಪ್ರಭುತ್ವದ ಪರಮ ಧ್ಯೇಯ. ನಮ್ಮ ಸಂವಿಧಾನವನ್ನು, ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಬಹು ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
Comments
ಉ: ಪ್ರಜಾಪ್ರಭುತ್ವವನ್ನು ನುಂಗುತ್ತಿರುವ ಕೋಮುವಾದ
ರವೀಂದ್ರ ಅವರೆ,
ನಿಮ್ಮ ಲೇಖನದ ಸಾರವನ್ನು ನಾನು ಒಪ್ಪುತ್ತೇನೆ. ಅದರೊಂದಿಗೆ ಈ ವಿಷಯಗಳ ಕುರಿತಾಗಿಯೂ ಸ್ವಲ್ಪ ಆಲೋಚಿಸಿ.
ಸ್ವಾತಂತ್ರೋತ್ತರ ಪಾಕಿಸ್ಥಾನದಲ್ಲಿ ಹಿಂದೂಗಳ ಸಂಖ್ಯೆ ೧೧-೧೪% ಇತ್ತು. ಇಂದು ಅಲ್ಲಿ ಶೇಖಡಾ ೧ರಿಂದ ೨% ಸಹ ಇಲ್ಲ. ಅಲ್ಲಿನ ದಲಿತ ಹಿಂದೂಗಳ ಮದುವೆಯನ್ನು ಮದುವೆಯೆಂದೇ ಅಲ್ಲಿನ ಸರ್ಕಾರ ಪರಿಗಣಿಸುವುದಿಲ್ಲ. ಇನ್ನು ೧೯೪೭ರಲ್ಲಿ ಪಾಕಿಸ್ತಾನದಿಂದ ಇಲ್ಲಿಗೆ ಆಗಮಿಸಿದ ದಲಿತ ಹಿಂದೂಗಳಿಗೆ ಕಾನೂನು ರೀತ್ಯಾ ಮೀಸಲಾತಿಯನ್ನು ಇದುವರೆಗೆ ನಮ್ಮ ಘನ ಸರ್ಕಾರಗಳು ಕೊಡಮಾಡಿಲ್ಲ. ೩೫-೪೦% ಬಾಂಗ್ಲಾದೇಶದಲ್ಲಿನ ಹಿಂದೂಗಳ ಸಂಖ್ಯೆ ಇಂದು ೧೦-೧೨%ಗೆ ಇಳಿದಿದೆ. ಕಾಶ್ಮೀರದಲ್ಲಿನ ಹಿಂದೂಗಳ ಪರಿಸ್ಥಿತಿ ಇಂದು ಏನಾಗಿದೆ, ಅವರು ಕೇವಲ ಜಮ್ಮೂ ಭಾಗಕ್ಕೆ ಪರಿಮಿತವಾಗಿದ್ದಾರೆ. ಉಳಿದ ಭಾಗದಲ್ಲಿದ್ದ ೩೩%ಶೇಖಡಾ ಇದ್ದ ಹಿಂದೂಗಳ ಪರಿಸ್ಥಿತಿ ಏನಾಗಿದೆ. ಉಳಿದ ಭಾಗಗಳಲ್ಲಿ ಈಗ ಅಲ್ಲಿರುವುದು ಕೇವಲ ಹಿಂದೂಗಳೆನಿಸಿಕೊಂಡಿರುವ ದಲಿತರು, ಅವರ ಮೇಲೆ ಅನೇಕ ಬಾರಿ ಅತ್ಯಾಚಾರಗಳಾಗುತ್ತವೆ ಮತ್ತು ಅವರನ್ನು ಹಿಂದೂಗಳೆಂದು ಕೊಲೆ ಮಾಡಲಾಗುತ್ತದೆ. ಇಂದಿನ ಅಫಘಾನಿಸ್ಥಾನದಲ್ಲಿಯೂ ಬಹಳ ಕಡಿಮೆ ಹಿಂದೂಗಳು ಇದ್ದಾರೆ, ಅವರು ಶಾಲೆಗೆ ಹೋದರೆ ಅವರನ್ನು ಎಲ್ಲರೂ ಅವಹೇಳನಕಾರಿ ರೀತಿಯಲ್ಲಿ ನೋಡುತ್ತಾರೆ, ಆ ಭಯಕ್ಕೇ ಅಲ್ಲಿನ ಹಿಂದೂಗಳು ಶಾಲೆಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಅವರಲ್ಲಿ ಬಹುತೇಕರು ದಲಿತರೇ ಆಗಿದ್ದಾರೆ. ಅದೇ ಭಾರತದಲ್ಲಿನ ಮುಸಲ್ಮಾನರ ಸಂಖ್ಯೆ ೧೧ರಿಂದ ೧೪%ಗೇರಿದೆ, ಮತ್ತು ಅವರಿಗೇ ವಿಶೇಷವಾದ ವಕ್ಫ್ ಮಂಡಳಿಗಳು ಮತ್ತು ಅವರು ತಮ್ಮದೇ ಆದ ಶಾಲೆಗಳನ್ನು ಹೊಂದಲು ಅವಕಾಶವಿದೆ ಮತ್ತು ಅವರಿಗೆ ಅವರದೇ ಆದ ಕಾನೂನಿನಂತೆ ಬಾಳಲು ಅವಕಾಶವಿದೆ. ಗೋದ್ರಾ ಹತ್ಯಾಕಾಂಡ ಮೊದಲು ಆರಂಭವಾಗಿದ್ದು ಮುಸ್ಲಿಮರಿಂದಲೇ ಆಮೇಲೆ ಅದನ್ನನುಸರಿಸಿ ಅವರ ಮೇಲೆ ದಂಗೆಗಳಾದವು. ಅವರು ಅಷ್ಟು ಧರ್ಮ ಸಹಿಷ್ಣುಗಳಾಗಿದ್ದರೆ ಸ್ವಯಂಸೇವಕರಿದ್ದ ಬೋಗಿಯನ್ನೇಕೆ ಸುಡುತ್ತಿದ್ದರು. ಮುಸಲ್ಮಾನರ ತುಷ್ಟೀಕರಣದಿಂದ ಮೊದಲು ಅನ್ಯಾಯವಾಗುವುದು ದಲಿತರಿಗೇ ಎನ್ನುವುದು ನೆನಪಿಡಿ. ಮುಂದುವರೆದ ಜಾತಿಗಳವರು ಇಸ್ಲಾಂ ಸ್ವೀಕರಿಸಿದಲ್ಲಿ ಅವರನ್ನು ಇತರೇ ಮುಸಲ್ಮಾನರಂತೆ ಸಮಾನವಾಗಿಯೇ ಕಾಣಲಾಗುತ್ತದೆ, ಆದರೆ ಅದೇ ದಲಿತರು ಮತಾಂತರಗೊಂಡರೆ ಅವರ ಮಸೀದಗಳಲ್ಲಿಯೂ ಇವರಿಗೆ ಪ್ರವೇಶವಿಲ್ಲ ಮತ್ತು ಅವರ ಮದ್ರಸಗಳಲ್ಲಿಯೂ ಇವರಿಗೆ ವಿದ್ಯೆ ದೊರಕದು. ಇಂದಿಗೂ ಪಿಂಜಾರ/ನಢಾಫ ಎಂದು ಕರೆಯಲ್ಪಡುವ ಮುಸ್ಲಿಂ ಬಾಂಧವರೇ ಇದಕ್ಕೆ ಉದಾಹರಣೆ. ಮತಾಂತರ ಹೊಂದಿದ ಕ್ರಿಶ್ಚಿಯನ್ ಧರ್ಮದಲ್ಲೂ ದಲಿತರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮೇಲ್ವರ್ಗದವರಿಂದ ಅನ್ಯಾಯವಾಗಿದೆ ಎನ್ನುವ ಕಾರಣಕ್ಕೆ ಮುಸ್ಲಿಮರ ತುಷ್ಟೀಕರಣ ಬೇಡ. ಡಾ! ಅಂಬೇಡ್ಕರರಿಗೆ ಇದರ ಅರಿವಿದ್ದದ್ದರಿಂದಲೇ ಅವರು ಈ ಮಣ್ಣಿನ ಇನ್ನೊಂದು ಧರ್ಮವಾದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರೇ ಹೊರತು ಇಸ್ಲಾಂಗಲ್ಲ, ಏಕೆಂದರೆ ಇಸ್ಲಾಂ ಎಂದರೆ ಏನೆಂದು ಬಾಬಾ ಸಾಹೇಬರಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ದಲಿತರ ಉದ್ದಾರ ಬೇರೆಯವರಿಂದ ಆಗದು ಅದೇನಿದ್ದರೂ ದಲಿತರಿಂದಲೇ ಆಗಬೇಕು. ಇದನ್ನು ಮನಗಂಡೇ ಸ್ವಾಮಿ ವಿವೇಕಾನಂದರು ಮೈಸೂರಿನಲ್ಲಿ ನೆಲೆಗೊಂಡಿದ್ದ ಮಲಯಾಳೀ ದಲಿತ ಡಾಕ್ಟರೊಬ್ಬನಿಗೆ ನಿಮ್ಮ ಜನಾಂಗದವರನ್ನೇ ಗುರುವಾಗಿ ಹೊಂದಿ ಎಂದು ಹೇಳಿದ್ದು. ಅವರ ಮಾತನ್ನು ಕೇಳಿದ ಮೇಲೆ ಅವರು ಒಬ್ಬ ಗುರುವಿಗಾಗಿ ಅನ್ವೇಷಣೆ ಮಾಡಿ ಕಡೆಯಲ್ಲಿ ನಾರಾಯಣಗುರುವನ್ನು ರೂಪಿಸಿಕೊಂಡದ್ದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ