೧೮೩. ಲಲಿತಾ ಸಹಸ್ರನಾಮ ೮೪೧ರಿಂದ ೮೫೦ನೇ ನಾಮಗಳ ವಿವರಣೆ

೧೮೩. ಲಲಿತಾ ಸಹಸ್ರನಾಮ ೮೪೧ರಿಂದ ೮೫೦ನೇ ನಾಮಗಳ ವಿವರಣೆ

                                                                                        ಲಲಿತಾ ಸಹಸ್ರನಾಮ ೮೪೧ - ೮೫೦

Bhāvajñā भावज्ञा (841)

೮೪೧. ಭಾವಜ್ಞಾ

           ಭಾವ ಎನ್ನುವುದಕ್ಕೆ ಹಲವಾರು ಅರ್ಥಗಳಿವೆ. ಉದಾ: ಆಗುವುದು, ರೂಪಾಂತರ ಹೊಂದು, ಮುಂದುವರಿದ, ಪರಿಸ್ಥಿತಿ, ಗುಣ, ಉದ್ದೇಶ, ದೃಢ ನಿಶ್ಚಯ ಮಾಡು, ಪಂಡಿತ, ಪ್ರಪಂಚ, ಗರ್ಭ, ಅತಿಮಾನುಷ ಶಕ್ತಿ, ಧ್ಯಾನ, ಮೊದಲಾದವು.

           ಈ ನಾಮವು ಮೇಲೆ ತಿಳಿಸಿದ ಯಾವುದಾದರೂ ಅರ್ಥವೊಂದಕ್ಕೆ ಸರಿಹೊಂದುತ್ತದೆ. ಬೇರೆ ಬೇರೆ ಗ್ರಂಥಗಳು ಭಾವಕ್ಕೆ ಭಿನ್ನವಾದ ಸಾಂದರ್ಭಿಕ ವ್ಯಾಖ್ಯೆಗಳನ್ನು ಕೊಟ್ಟಿವೆ. ಪ್ರಸ್ತುತ ಸಂದರ್ಭದಲ್ಲಿ ದೇವಿಯು ಎಲ್ಲಾ ಜೀವಿಗಳ ಎಲ್ಲಾ ವಿಧವಾದ ಭಾವಗಳನ್ನು ಅರಿತವಳು ಎಂದು ಅರ್ಥೈಸಬಹುದು. ದೇವಿಗೆ ಮನುಷ್ಯರ ಮನೋವಿಕಾರಗಳ ಕುರಿತ ತಿಳುವಳಿಕೆಯಿದೆ. ಕೆಲವರಿಗೆ ದ್ವಂದ್ವ ಮನಃಸ್ತತ್ವವಿರುತ್ತದೆ, ಅವರು ಆಲೋಚಿಸುವುದು ಒಂದು ಆದರೆ ಮಾತನಾಡುವುದು ಮತ್ತೊಂದು. ದೇವಿಗೆ ಅಂತಹ ಮನುಜರ ಆಲೋಚನೆಗಳು ತಿಳಿದಿವೆ. ಒಂದು ವೇಳೆ ದೇವಿಗೆ ಒಬ್ಬನ ಆಲೋಚನೆ ಮತ್ತು ಕಾರ್ಯಗಳು ವಿಭಿನ್ನವಾಗಿವೆ ಎಂದು ತಿಳಿದರೆ ಆಕೆಯು ಅವರನ್ನು ಪ್ರಚಂಡಾ ಎನ್ನುವ ನಾಮ ೮೨೭ರ ಚರ್ಚೆಯಲ್ಲಿ ವಿವರಿಸಿರುವ ರೀತಿಯಲ್ಲಿ ಶಿಕ್ಷಿಸುತ್ತಾಳೆ.

          ಭಾವದ ಶಬ್ದವು ಭೂ ಅಂದರೆ ಅನಿರ್ಭಂದಿತ ಎನ್ನುವ ಶಬ್ದಮೂಲದಿಂದ ವ್ಯುತ್ಪನ್ನವಾಗಿದೆ. ‘ಮೂಲ ಪ್ರಕೃತಿ’ ನಾಮ ೩೯೭, ‘ಅವ್ಯಕ್ತಾ’ ನಾಮ ೩೯೮, ಮತ್ತು ‘ವ್ಯಕ್ತಾವ್ಯಕ್ತಾ’ ನಾಮ ೩೯೯ ಇವುಗಳಲ್ಲಿ ಇದುವರೆಗಾಗಲೇ ದೇವಿಯ ಅನಿರ್ಭಂದಿತ ಸ್ಥಿತಿಯ ಕುರಿತಾದ ಚರ್ಚೆಗಳನ್ನು ಮಾಡಲಾಗಿದೆ. ಪುರಾತನ ಶಾಸ್ತ್ರಗ್ರಂಥವಾದ ಯೋಗಿನೀ ಹೃದಯವು ಪಂಚದಶೀ ಮಂತ್ರಕ್ಕೆ ಆರು ವಿಧವಾದ ವ್ಯಾಖ್ಯಾನಗಳನ್ನು ಕೊಡುತ್ತದೆ ಮತ್ತು ಅವುಗಳಲ್ಲೊಂದು ‘ಭಾವಾರ್ಥ’ ಎನ್ನುವುದಾಗಿದೆ.

          ಈ ನಾಮವು ದೇವಿಯ ವಿವಧ ಗುಣ ಲಕ್ಷಣಗಳನ್ನು ಉಲ್ಲೇಖಿಸುತ್ತದೆ ಎಂದು ಹೇಳಬಹುದು.

Bhava-rogaghnī भव-रोगघ्नी (842)

೮೪೨. ಭವ-ರೋಗಘ್ನೀ

          ಭವ ಎನ್ನುವ ಶಬ್ದವನ್ನು ಇಲ್ಲಿ ಸಂಸಾರ ಅಥವಾ ಲೌಕಿಕ ಜೀವನವೆನ್ನುವ ಅರ್ಥದಲ್ಲಿ ಬಳಸಲಾಗಿದೆ. ಸಂಸಾರವನ್ನು ರೋಗವೆಂದು ಉಲ್ಲೇಖಿಸಲಾಗುತ್ತದೆ ಮತ್ತು ದೇವಿಯು ಒಬ್ಬನಿಗೆ ಸಂಸಾರದಿಂದುಂಟಾಗುವ ಬೇನೆಯನ್ನು ಉಪಶಮನ ಮಾಡುತ್ತಾಳೆ. ಶಿವನು ಸಂಸಾರ ದುಃಖವನ್ನು ನಾಶ ಮಾಡುವವನಾಗಿದ್ದಾನೆ. ಭವ (ಮೂಲ ಶಬ್ದ ಭೂ) ಎಂದರೆ ಶಿವ ಎನ್ನುವ ಅರ್ಥವನ್ನೂ ಹೊಂದಿದೆ ಮತ್ತು ಅವನ ಸಂಗಾತಿಯು ಶಕ್ತಿಯಾಗಿದ್ದಾಳೆ. ಅವರಿಬ್ಬರೂ ಭವರೋಗವನ್ನು ಉಪಶಮನಗೊಳಿಸುವ ತಜ್ಞರಾಗಿದ್ದಾರೆ.

         ಶ್ರೀ ವಿಷ್ಣು ಸಹಸ್ರನಾಮದ ಭೇಷಜಮ್ ನಾಮ ೫೭೮ ಹಾಗು ಭಿಷಕ್ - ೫೭೯ನೇ ನಾಮಗಳು ಬ್ರಹ್ಮದ ಈ ಗುಣಗಳನ್ನು ಕುರಿತಾಗಿ ಹೇಳುತ್ತವೆ. ಋಗ್ವೇದವು (೨.೩೩.೪) ಹೀಗೆ ಹೇಳುತ್ತದೆ, "ಭಿಷಕ್ತಮಂ ಅವ ಭಿಷಜಾಂ ಶ್ರುಣೋಮಿ भिषक्तमं अव भिषजां श्रुणोमि" ಅಂದರೆ ‘ನೀನು ವೈದ್ಯರಲ್ಲೆಲ್ಲಾ ಅತ್ಯುತ್ತಮವಾದವನು ಎಂದು ನಾನು ಕೇಳಿದ್ದೇನೆ’. ದೇವಿಯು ವೈದ್ಯೆಯಾಗಿದ್ದಾಳೆ ಏಕೆಂದರೆ ಆಕೆಯು ಭವರೋಗವನ್ನು ಗುಣಪಡಿಸುತ್ತಾಳೆ.

         ಕೃಷ್ಣನು ಭಗವದ್ಗೀತೆಯಲ್ಲಿ (೯.೧) ಹೀಗೆ ಹೇಳುತ್ತಾನೆ, "ಯಾವುದನ್ನು ತಿಳಿದುಕೊಂಡು ಸಂಸಾರದಿಂದ ಮುಕ್ತನಾಗುವೆಯೋ ಅಂತಹ ಗುಹ್ಯತಮವಾದ (ರಹಸ್ಯವಾದ) ವಿಜ್ಞಾನದಿಂದ ಕೂಡಿದ (ಅನುಭವಯುಕ್ತವಾದ) ಜ್ಞಾನವನ್ನು ಅಸೂಯಾರಹಿತನಾದ ನಿನಗೆ ಹೇಳುವೆನು".

         ಸಂಸಾರದ ಕುರಿತಾದ ಇನ್ನಷ್ಟು ವಿವರಣೆಗಳು: ಸಂಸಾರ (ಪುನರ್ಜನ್ಮ ಹೊಂದುವ ಈ ಭವ) ಎನ್ನುವುದನ್ನು ಜನನ ಮರಣಗಳ ನಿರಂತರ ಪ್ರಕ್ರಿಯೆ ಎಂದು ಹೇಳಬಹುದು. ಇದು ಕೇವಲ ಅವಿದ್ಯೆಯಿಂದುಂಟಾಗುತ್ತದೆ. ಅವಿದ್ಯೆಯು ಸಂಸಾರದಲ್ಲಿ ದ್ವಂದ್ವತೆಯನ್ನು ಹುಟ್ಟು ಹಾಕಿ ಅದನ್ನು ಗೋಜಲಾಗಿಸುತ್ತದೆ. ಅದು ಸತ್ಯವಲ್ಲದ್ದು ಮತ್ತು ತಾಳಿಕೊಳ್ಳಲಾಗದ ದುಃಖ ಮತ್ತು ಹೇಳಲಾಗದ ಯಾತನೆಗಳಿಂದ ತುಂಬಿದೆ. ಅವಿದ್ಯೆ ಅಥವಾ ಅಜ್ಞಾನದಲ್ಲಿ ಸಿಲುಕಿ ಮೋಹ, ಭಯ, ಕಾಮ ಮತ್ತು ದುಃಖಗಳಿಂದ ಬಂಧಿತನಾಗಿ ಜೀವಿಯು ಲೆಕ್ಕಕ್ಕೆ ಸಿಗದಷ್ಟು ಜನ್ಮಗಳನ್ನು ತೆಳೆಯುತ್ತಾನೆ. ಮನೋಭೌತಿಕ ದೃಷ್ಟಿಯಿಂದ ನೋಡಿದಾಗ ಮಾನವನ ಅಸ್ತಿತ್ವವು ಬಹುತೇಕ ಕರ್ಮ ಸಿದ್ಧಾಂತ ಅಥವಾ ಕರ್ಮ ನಿಯಮಕ್ಕೆ ಹತ್ತಿರದ ಸಂಭಂದ ಹೊಂದಿರುವುದು ಕಂಡುಬರುತ್ತದೆ. ಎಲ್ಲಿಯವರೆಗೆ ಒಬ್ಬನು ಸಂಸಾರದಲ್ಲಿ ಬಂಧಿತನಾಗಿರುತ್ತಾನೆಯೋ ಅಲ್ಲಿಯವರೆಗೆ ಅವನು ಸಾಕ್ಷಾತ್ಕಾರ ಮತ್ತು ಅಂತಿಮ ಮುಕ್ತಿಯನ್ನು ಪಡೆಯಲಾರ. ಕೃಷ್ಣನು ಸಂಸಾರ ಬಂಧನದಿಂದ ಬಿಡುಗಡೆ ಹೊಂದುವ ಮಾರ್ಗಕ್ಕೆ ಒಂದು ಪರಿಹಾರವನ್ನು ಕೊಡುತ್ತಾನೆ. ಅವನು, "ಕಾಮ, ಕ್ರೋಧ ಮತ್ತು ಲೋಭ ಈ ಮೂರು ನರಕದ ಬಾಗಿಲುಗಳಾಗಿದ್ದು ಅವು ಆತ್ಮ ವಿನಾಶಕ್ಕೆ ಕಾರಣವಾಗಿವೆ. ಆದ್ದರಿಂದ ಈ ಮೂರನ್ನು ಬಿಡಬೇಕು" ಎಂದು ಭಗವದ್ಗೀತೆಯಲ್ಲಿ (೧೬.೨೧) ಹೇಳಿದ್ದಾನೆ.

        ಈ ನಾಮವು ದೇವಿಯು ಸಂಸಾರದ ಭವಣೆಗಳಿಂದ ತನ್ನ ಭಕ್ತರನ್ನು ಮುಕ್ತರನ್ನಾಗಿಸುತ್ತಾಳೆಂದು ಹೇಳುತ್ತದೆ.

Bhava-cakra-pravartinī भव-चक्र-प्रवर्तिनी (843)

೮೪೩. ಭವ-ಚಕ್ರ-ಪ್ರವರ್ತಿನಿ

           ಸಂಸಾರವನ್ನು ಚಕ್ರಕ್ಕೆ ಹೋಲಿಸಲಾಗಿದೆ. ಚಕ್ರದ ತಿರುಗುವಿಕೆಯನ್ನು ಜನನ ಮತ್ತು ಅನುಕ್ರಮವಾಗಿ ಉಂಟಾಗುವ ಮರಣಗಳಿಗೆ ಹೋಲಿಸಲಾಗಿದೆ. ಚಕ್ರದಲ್ಲಿನ ಒಂದು ಚುಕ್ಕೆಯು ಮೇಲೆ ಹೋಗಿ ಕೆಳಗೆ ಬರುತ್ತದೆ ಅದೇ ವಿಧವಾಗಿ ಯಾರು ಸಂಸಾರದಲ್ಲಿ ಸಿಲುಕಿರುತ್ತಾರೆಯೋ ಅವರಿಗೆ ಚಕ್ರದ ತಿರುಗುವಿಕೆಯಿಂದಾಗಿ ಜನನ ಮತ್ತು ಮರಣಗಳು ಉಂಟಾಗುತ್ತವೆ. ಸಂಸಾರದ ಭವಣೆಗಳಿಂದ ಮುಕ್ತಿ ಹೊಂದುವ ಪರಿಹಾರೋಪಾಯದ ಕುರಿತಾಗಿ ಹಿಂದಿನ ನಾಮದ ಚರ್ಚೆಯಲ್ಲಿ ವಿವರಿಸಲಾಗಿದೆ. "ಯಾರು ಅವನಲ್ಲಿ ಶರಣಾಗತಿಯನ್ನು ಹೊಂದುತ್ತಾರೆಯೋ ಅವರ ಸಂಕಷ್ಟಗಳನ್ನು ಬಗೆಹರಿಸುವ ಹರಿಯನ್ನು ಜ್ಞಾನಿಗಳು ಪೂಜಿಸುತ್ತಾರೆ" ಎಂದು ಹೇಳಲಾಗುತ್ತದೆ.

          ವಿಷ್ಣು ಪುರಾಣದ ಪ್ರಕಾರ, ಭವ ಎಂದರೆ ಶಿವ ಮತ್ತು ಚಕ್ರ ಎಂದರೆ ಮನಸ್ಸು ಮತ್ತು ಪ್ರವರ್ತಿನಿ ಎಂದರೆ ಮಾರ್ಗದರ್ಶಿ. ಇದರ ಅರ್ಥ ದೇವಿಯು ಪರಶಿವನ ಮಾರ್ಗದರ್ಶಿ ಎಂದಾಗುತ್ತದೆ. ಈ ನಾಮವು ಮತ್ತೊಮ್ಮೆ ದೇವಿಯ ಪರಬ್ರಹ್ಮ ಸ್ವರೂಪವನ್ನು ದೃಢಪಡಿಸುತ್ತದೆ.

Chandaḥ Sara छन्दः सारा (844)

೮೪೪. ಛಂದಃ ಸಾರಾ

           ಛಂದಸ್ಸು ಎಂದರೆ ನಿರ್ಧಿಷ್ಟ ಸಂಖ್ಯೆಯ ಅಕ್ಷರಗಳನ್ನು ಬಳಸಿ ಪದ್ಯ ರಚನೆ ಮಾಡುವ ನಿಯಮಗಳನ್ನು ವಿವರಿಸುವ ಶಾಸ್ತ್ರ ಅಥವಾ ಛಂದಶ್ಯಾಸ್ತ್ರ. ಮುಂಡಕ ಉಪನಿಷತ್ತು (೧.೧.೫) ಹೀಗೆ ಹೇಳುತ್ತದೆ, ಛಂದಸ್ಸಿನ ಜ್ಞಾನವು ಲೌಕಿಕ ವಿದ್ಯೆ (ಅಪರಾ ಜ್ಞಾನ). ಪರಾ ಜ್ಞಾನವೆಂದರೆ ಆಧ್ಯಾತ್ಮಿಕ ಜ್ಞಾನ. ಸಾರ ಎಂದರೆ ತಿರುಳು, ಸಾರಾಂಶ, ಮೂಲಸ್ವರೂಪ, ಹೃದಯ ಭಾಗ, ಜೀವಾಳ, ಪ್ರಮುಖವಾದ ಭಾಗ, ಮೊದಲಾದವು.

           ಋಗ್ವೇದವು (೧೦.೧೪.೧೬), "ಎಲ್ಲಾ ಪವಿತ್ರ ಛಂದಸ್ಸುಗಳು, ತ್ರಿಷ್ಟುಪ್ (ಸ್ವರ್ಗ), ಗಾಯತ್ರೀ (ಭೂಮಿ) ಮತ್ತು ಉಳಿದವುಗಳು ಜಗನ್ನಿಯಾಮಕನಲ್ಲಿ ಲೀನವಾಗುತ್ತವೆ" ಎಂದು ಹೇಳುತ್ತದೆ. 

           ಛಂದಸ್ಸಿನ ಪ್ರಕಾರವು ಒಂದು ಕವಿತೆಯ ಸಾಲಿನಲ್ಲಿ ಬಳಸುವ ಅಕ್ಷರಗಳ ಸಂಖ್ಯೆಯನ್ನು ಅಬಲಂಬಿಸುತ್ತದೆ. ಛಂದಸ್ಸು ಎಂದರೆ ವೈದಿಕ ಮಂತ್ರಗಳೆನ್ನುವ ಅರ್ಥವೂ ಇದೆ. ವೇದಗಳ ಸಾರ ಅಥವಾ ಮೂಲಸ್ವರೂಪವು ಉಪನಿಷತ್ತುಗಳಾಗಿವೆ. ಆದ್ದರಿಂದ ಈ ನಾಮವು ದೇವಿಯು ಉಪನಿಷತ್ತುಗಳಲ್ಲಿ ನೆಲೆಸಿದ್ದಾಳೆ ಎಂದು ಹೇಳುತ್ತದೆ.

           ಗಾಯತ್ರೀ ಛಂದಸ್ಸನ್ನು ಛಂದಸ್ಸುಗಳಲ್ಲೆಲ್ಲಾ ಅತ್ಯಂತ ಪ್ರಮುಖವಾದುದೆಂದು ಭಾವಿಸಲಾಗಿದೆ. ವರಿವಶ್ಯಾ ರಹಸ್ಯವು (೧.೬, ೭), "ಈ ಪ್ರಪಂಚದಲ್ಲಿ ಹದಿನಾಲ್ಕು ವಿದ್ಯೆಗಳು ದೇವಿಯನ್ನು ಅರಿಯುವ ಸಾಧನಗಳಾಗಿವೆ. ಅವುಗಳಲ್ಲಿ ಅತ್ಯಂತ ಅವಶ್ಯವಾಗಿರುವುದು ವೇದಗಳು ಮತ್ತದರಲ್ಲಿಯೂ ಸಹ ಗಾಯತ್ರೀ (ಮಂತ್ರವು) ಮಹತ್ವದ್ದಾಗಿದೆ. ದೇವಿಗೆ ಎರಡು ವಿಧವಾದ ರೂಪಗಳಿವೆ. ಮೊದಲನೆಯದು ಚತುರ್ವೇದಗಳಲ್ಲಿ ಹೇಳಲ್ಪಟ್ಟಿದ್ದರೆ ಮತ್ತೊಂದು (ಶ್ರೀ ವಿದ್ಯಾ) ಸ್ಪಷ್ಟವಾಗಿಲ್ಲ, ಅದು ನಿಗೂಢವಾಗಿದೆ" ಎಂದು ಹೇಳುತ್ತದೆ. ಆದ್ದರಿಂದ ಇದರ ಮೂಲಕ ಸ್ಪಷ್ಟವಾಗುವುದೇನೆಂದರೆ ಪಂಚದಶಿ ಮಂತ್ರವು ನಾಲ್ಕು ವೇದಗಳ ಸ್ವರೂಪವಾದ ಗಾಯತ್ರೀ ಮಂತ್ರಕ್ಕಿಂತ ಉತ್ತಮವಾದುದಾಗಿದೆ (ಪಂಚದಶಿ ಮಂತ್ರವನ್ನು ಒಂದು ಸಾರಿ ಹೇಳುವುದು ಪೂರ್ಣ ಗಾಯತ್ರೀ ಮಂತ್ರವನ್ನು ಮೂರು ಬಾರಿ ಜಪಿಸುವುದಕ್ಕೆ ಸಮಾನವಾದುದು ಎಂದು ಪರಿಗಣಿಸಲಾಗಿದೆ). ಶ್ರೀ ವಿದ್ಯಾ (ಪಂಚದಶಿ) ಮತ್ತು ದೇವಿಯರಲ್ಲಿ ಭಿನ್ನತೆ ಇಲ್ಲದೇ ಇರುವುದರಿಂದ ಈ ನಾಮವು ಉದ್ಭವವಾಗಿದೆ. ಈ ವ್ಯಾಖ್ಯಾನವನ್ನು ಮತ್ತೊಂದು ಪುರಾತನ ತಂತ್ರ ಗ್ರಂಥವಾದ ಪಿಂಗಳ ತಂತ್ರವು ದೃಢಪಡಿಸುತ್ತದೆ; ಅದು ಶ್ರೀ ಚಕ್ರದ ಕುರಿತಾಗಿ ಚರ್ಚಿಸುತ್ತದೆ.

Śāstra-sārā शास्त्र-सारा (845)

೮೪೫. ಶಾಸ್ತ್ರ-ಸಾರಾ

           ದೇವಿಯು ಸಕಲ ಶಾಸ್ತ್ರಗಳ ಸಾರವಾಗಿದ್ದಾಳೆ. ಬ್ರಹ್ಮ ಸೂತ್ರವು (೧.೧.೩), "ಶಾಸ್ತ್ರಯೋನಿತ್ವಾತ್" ಎಂದು ಹೇಳುತ್ತದೆ. ಅದರ ಅರ್ಥ ಬ್ರಹ್ಮವು ಸಕಲ ಶಾಸ್ತ್ರಗಳ ಮೂಲವಾಗಿದೆ ಅಥವಾ ವೇದಗಳು ಬ್ರಹ್ಮದಿಂದಲೇ ಉಗಮಗೊಂಡವು. ಇದು ಏಕೆಂದರೆ ವೇದಗಳು ಎಲ್ಲಾ ಉತ್ತಮ ಗುಣಗಳನ್ನು ಹೊಂದಿದ್ದು ಬಹುಶಃ ಅವು ಬೇರೆ ಯಾವುದೋ ಮೂಲದಿಂದ ಉದ್ಭವಿಸಿರುವುದಕ್ಕೆ ಸಾಧ್ಯವಿಲ್ಲ; ಸಕಲವನ್ನೂ ತಿಳಿದಿರುವ ಬ್ರಹ್ಮದ ಹೊರತಾಗಿ. ಇದು ದೇವಿಯ ಪರಬ್ರಹ್ಮಸ್ವರೂಪವನ್ನು ಪುನರುಚ್ಛರಿಸುವ ಮತ್ತೊಂದು ನಾಮವಾಗಿದೆ.

           ಶಾಸ್ತ್ರ ಎನ್ನುವುದನ್ನು ಒಂದು ನಿಯಮ, ಆದೇಶ, ಆಜ್ಞೆ, ನಿಭಂದನೆ, ಕಟ್ಟಳೆ, ಮಾರ್ಗದರ್ಶಕ ಸೂತ್ರ, ಆಚಾರಸೂತ್ರ, ಸಲಹೆ, ದಿಶ ನಿರ್ದೇಶಕ, ಉಪದೇಶ, ಬುದ್ಧಿ ಹೇಳುವ, ಮೊದಲಾದ ಪದಗಳಿಂದ ವಿವರಿಸಬಹುದು. ಅದನ್ನು ಭೋದನೆಯ ಒಂದು ಉಪಕರಣ, ಅಥವಾ ನೀತಿ ನಿಯಮಗಳ ಕೈಪಿಡಿ ಅಥವಾ ಆಚರಣೆಯ ಕಟ್ಟಳೆಗಳನ್ನಗೊಂಡ ಗ್ರಂಥ, ವಿಶೇಷವಾಗಿ ಧಾರ್ಮಿಕಾಚರಣೆಗಳನ್ನು ತಿಳಿಸಿಕೊಡುವ ಗ್ರಂಥ, ಪವಿತ್ರವಾದ ಗ್ರಂಥ ಅಥವಾ ವೇದಗಳಿಗೂ ಅನ್ವಯವಾಗುವ ದಿವ್ಯಾಧಿಕಾರದ ರಚನೆ, ಮೊದಲಾದ ಶಬ್ದಗಳಿಂದ ವಿವರಿಸಬಹುದು. ಶಾಸ್ತ್ರಗಳು ಹದಿನಾಲ್ಕು ಅಥವಾ ಹದಿನೆಂಟು ವಿಧಗಳಿವೆ ಎನ್ನಲಾಗುತ್ತದೆ.

Mantra-sārā मन्त्र-सारा (846)

೮೪೬. ಮಂತ್ರ-ಸಾರಾ

           ಮಂತ್ರವು ಬೀಜಾಕ್ಷರಗಳ ಸಂಯೋಜನೆಯಾಗಿದೆ. ದೇವಿಯು ಶಬ್ದ ಬ್ರಹ್ಮವಾಗಿರುವುದರಿಂದ ಎಲ್ಲಾ ಅಕ್ಷರಗಳು ಅವಳಿಂದ ಉಗಮವಾಗಿವೆ. ಆದ್ದರಿಂದ ಈ ನಾಮವು, ದೇವಿಯ ಎಲ್ಲಾ ಮಂತ್ರಗಳ ಸಾರವಾಗಿದ್ದಾಳೆ ಎಂದು ಹೇಳುತ್ತದೆ. ಹೆಚ್ಚಿನ ವಿವರಗಳಿಗೆ ’ಸರ್ವ ಮಂತ್ರ ಸ್ವರೂಪಿಣಿ’ಯನ್ನು (ನಾಮ ೨೦೪) ನೋಡಿ.

           ಮಂತ್ರಗಳ ಕುರಿತು ಇನ್ನಷ್ಟು ವಿವರಗಳು: ಮಂತ್ರಗಳು ಸಾಂಪ್ರದಾಯಿಕ ಸಂಸ್ಕೃತವು ರೂಪುಗೊಂಡ ನಂತರದ ಪದ್ಧತಿಗಳಾಗಿವೆ. ಅವು ಸಾಂಪ್ರದಾಯಿಕ ಸೂತ್ರಗಳನ್ನು ಹೊಂದಿದ್ದು ಪುರಾತನ ಋಷಿಮುನಿಗಳು ಇಂದಿನ ಪೀಳಿಗೆಗೆ ಅವನ್ನು ನಿಖರವಾಗಿ ತಲುಪಿಸಿರುವುದರಲ್ಲಿ ಅವುಗಳ ಮಹತ್ವವು ಅಡಗಿದೆ. ಋಗ್ವೇದ ಒಂದರಲ್ಲಿಯೇ ಮಂತ್ರಗಳ ಕುರಿತಾದ ೨೧ ಉಲ್ಲೇಖಗಳಿವೆ. ಮಂತ್ರಗಳಿಗೆ ಶಕ್ತಿಯಿದೆ ಮತ್ತು ಆ ಶಕ್ತಿಯ ಮೂಲವು ಸತ್ಯವಾಗಿದ್ದು ಆ ನಿಯಮವು ವೈದಿಕ ಪ್ರಪಂಚದ ಅಂತರಾಳವಾಗಿದೆ. ಮಂತ್ರಗಳಲ್ಲಿ ಹುದುಗಿರುವ ಪರಿಶುದ್ಧವಾದ ಶಕ್ತಿಯು ಅದನ್ನು ಉಚ್ಛರಿಸುವವನ ಪರವಾಗಿ ಅಥವಾ ವಿರೋಧವಾಗಿ ಕೆಲಸ ಮಾಡಬಲ್ಲುದು. ಒಂದು ವೇಳೆ ಮಂತ್ರಗಳ ಫಲಾನುಭವಿ ಅಥವಾ ಅವುಗಳಿಂದ ಉಪಕೃತನಾದವನು ದ್ವೇಷ, ಹಗೆತನ ಸಾಧನೆ ಅಥವಾ ದುರುದ್ಧೇಶಪೂರಿತವಾಗಿ ಅಜ್ಞಾನದಿಂದ ಮಾತನಾಡಿದರೆ ಪ್ರಕಟಗೊಂಡ ಮಂತ್ರ ಶಕ್ತಿಯು ಹೆದರಿಕೆ ಅಥವಾ ಕೇಡನ್ನುಂಟು ಮಾಡಬಹುದು ಅಥವಾ ಕೆಲವೊಮ್ಮೆ ಅದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಮಂತ್ರವು ಮಾನವನ ಉದ್ದೇಶಗಳ ಪೂರೈಕೆಗಿರುವ ಒಂದು ಸಾಧನವಾಗಿದೆ ಮತ್ತು ಅದರ ಪರಿಣಾಮವು ವೈವಿಧ್ಯಮಯವಾಗಿರುತ್ತದೆ. ಮಂತ್ರವು ಮಾನವನ ಕೈಯ್ಯಲ್ಲಿರುವ ಜೀವನಾವಶ್ಯಕವಾದ ಸಲಕರಣೆಯಾಗಿದ್ದು ಅದು ಹಲವು ವೇಳೆ ನಮಗೆ ತೊಂದರೆಯನ್ನೂ ಉಂಟು ಮಾಡಬಹುದು; ಬಹುತೇಕ ಸಮಯಗಳಲ್ಲಿ ಅದು ನಮ್ಮನ್ನೇನೂ ಮಾಡದು ಎಂದು ನಾವು ಅದನ್ನು ನಿಕೃಷ್ಟವಾಗಿ ಕಾಣುತ್ತೇವೆ. ಮಂತ್ರಗಳಲ್ಲಿ ಹಲವು ವಿಧಗಳಿವೆ. ಅವೆಂದರೆ, ಗೃಹಕೃತ್ಯದ ಮಂತ್ರಗಳು, ಯಜ್ಞ-ಯಾಗಾದಿಗಳ ಮಂತ್ರಗಳು, ಪೂಜಾ ಮಂತ್ರಗಳು, ಭಕ್ತಿ ಮಂತ್ರಗಳು, ಜಪ ಮಂತ್ರಗಳು ಮತ್ತು ಬೀಜ ಮಂತ್ರಗಳು. ಕಡೆಯ ಎರಡು ವಿಧವಾದ ಮಂತ್ರಗಳನ್ನು ಸೂಕ್ತ ವಿಧಾನದಲ್ಲಿ ದೀಕ್ಷೆಯನ್ನು ಪಡೆದು ಸಾಧನೆ ಮಾಡಿದರೆ ಅವು ಬಹು ಶಕ್ತಿಯುತವಾಗಿ ಪರಿಣಮಿಸುತ್ತವೆ.

Talodarī तलोदरी (847)

೮೪೭. ತಲೋದರೀ

           ದೇವಿಯು ಸಪೂರವಾದ (ತೆಳುವಾದ) ಸೊಂಟವುಳ್ಳವಳಾಗಿದ್ದಾಳೆ. ೩೫ನೇ ನಾಮವೂ ಸಹ ದೇವಿಯ ಸೊಂಟವನ್ನು ಕುರಿತಾದ ವಿವರಣೆಯನ್ನು ಕೊಡುತ್ತದೆ.

           ಇನ್ನೊಂದು ವಿಧವಾದ ವಿಶ್ಲೇಷಣೆಯೂ ಇದೆ. ಈ ನಾಮಕ್ಕೆ ಅ ಅಕ್ಷರವನ್ನು ಸೇರಿಸಿದರೆ ಅದು ಅತಲೋದರೀ ಆಗುತ್ತದೆ. ಯಾವಾಗ ದೇವಿಯು ವಿರಾಟ್ ಸ್ವರೂಪವನ್ನು ಧರಿಸುತ್ತಾಳೆಯೋ (ನಾಮ ೭೭೮ ವಿರಾಟ್ ರೂಪಾ), ಆಗ ಆಕೆಯ ಸೊಂಟವು ಅತಳ ಲೋಕವಾಗುತ್ತದೆ (ಬ್ರಹ್ಮಾಂಡದಲ್ಲಿನ ೧೪ ಲೋಕಗಳಲ್ಲಿ ಅತಳ ಲೋಕವು ಒಂದು. ಅತಳ ಲೋಕವು ಪರಮೋನ್ನತವಾದ (ಪರಿಶುದ್ಧವಾದ) ಲೋಕದಿಂದ ಎಂಟನೆಯದಾಗಿದೆ).

Udāra-kīrtiḥ उदार-कीर्तिः (848)

೮೪೮. ಉದಾರ-ಕೀರ್ತಿಃ

           ಅವಳ ಶಕ್ತಿಯುತವಾದ ಕೀರ್ತಿಯು ಎಲ್ಲೆಡೆಯೂ ಪ್ರಚಲಿತವಾಗಿದೆ. ದೇವಿಯು ತನ್ನ ಭಕ್ತರಿಗೂ ಸಹ ಕೀರ್ತಿಯನ್ನುಂಟು ಮಾಡುತ್ತಾಳೆ. ಒಬ್ಬನು ಅಹಂಕಾರ ರಹಿತನಾಗಿ ದೇವಿಯನ್ನು ಸೂಕ್ತ ವಿಧದಲ್ಲಿ ಪೂಜಿಸಿದರೆ ಅವನಿಗೆ ಆಕೆಯು ತ್ವರಿತವಾಗಿ ಕೀರ್ತಿಯನ್ನು ದಯಪಾಲಿಸುತ್ತಾಳೆ.

          ‘ಉತ್’ ಎನ್ನುವುದು ಶ್ರೇಷ್ಠತೆಯನ್ನು ಸೂಚಿಸುವ ಪೂರ್ವ ಪ್ರತ್ಯಯವಾಗಿದೆ, ‘ಅ’ ಎಂದರೆ ಸರ್ವವ್ಯಾಪಿಯಾಗಿರುವ, ‘ಅರ’ ಎಂದರೆ ತ್ವರಿತವಾದ, ಮತ್ತು ಕೀರ್ತಿ ಎಂದರೆ ಪ್ರಸಿದ್ಧಿ.

           ಛಾಂದೋಗ್ಯ ಉಪನಿಷತ್ತು (೧.೬.೭) ಹೀಗೆ ಹೇಳುತ್ತದೆ, "ಅವನು ಉತ್ ಎಂದು ಕರೆಯಲ್ಪಟ್ಟಿದ್ದಾನೆ ಏಕೆಂದರೆ ಅವನು ಎಲ್ಲಾ ದೌರ್ಬಲ್ಯಗಳಿಗೆ (ಪಾಪಗಳಿಗೆ) ಅತೀತನಾಗಿ ಉನ್ನತವಾಗಿದ್ದಾನೆ". 

           ದೇವಿಯ ಕೀರ್ತಿಯನ್ನು ಬ್ರಹ್ಮಲೋಕದಲ್ಲಿನ ಎರಡು ಪ್ರಸಿದ್ಧವಾದ ‘ಅರ’ ಮತ್ತು ‘ಣ್ಯ’ ಎನ್ನುವ ಎರಡು ಕೊಳಗಳಿಗೆ ಹೋಲಿಸಲಾಗಿದೆ. ಇವುಗಳ ವಿವರಣೆಯು ನಮಗೆ ಛಾಂದೋಗ್ಯ ಉಪನಿಷತ್ತಿನಲ್ಲಿ (೮.೫.೪) ದೊರೆಯುತ್ತದೆ, "ಯಾವಾಗ ಅವರು ಬ್ರಹ್ಮಲೋಕವನ್ನು* ಬ್ರಹ್ಮಚರ್ಯದ ಮೂಲಕ ಹೊಂದುತ್ತಾರೆಯೋ ಆಗ ಅವರು ಎಲ್ಲಾ ಲೋಕಗಳಲ್ಲಿ ಸ್ವತಂತ್ರವಾಗಿ ಸಂಚರಿಸಬಹುದು (ಸರ್ವವ್ಯಾಪಿಯಾಗುತ್ತಾರೆ)".

          *ಬ್ರಹ್ಮಲೋಕವೆಂದರೆ ಬ್ರಹ್ಮನ ನಿವಾಸ ಸ್ಥಾನ. ಇದನ್ನು ಭೌತಿಕ ಸ್ತರವೆಂದು ಅರ್ಥಮಾಡಿಕೊಳ್ಳಬಾರದು, ಅದು ಮಾನಸಿಕ ಸ್ತರವಾಗಿದೆ. ಇದು ಬ್ರಹ್ಮಸೂತ್ರದಲ್ಲಿ (೪.೪.೨) ಹೇಳಿರುವಂತೆ,"ಆತ್ಮವು ನಿಃಶಬ್ದದ ಮೂಲಕ (ಬ್ರಹ್ಮಚರ್ಯದ ಮೂಲಕ ಎಂದು ಛಾಂದೋಗ್ಯ ಉಪನಿಷತ್ತಿನಲ್ಲಿ ಹೇಳಲಾಗಿದೆ) ಬ್ರಹ್ಮಲೋಕವನ್ನು ಹೊಂದುತ್ತದೆ".

Uddhāma-vaibhavā उद्धाम-वैभवा (849)

೮೪೯. ಉದ್ಧಾಮ-ವೈಭವಾ

            ದೇವಿಯ ವೈಭವವು ಪರಿಮಿತಿಗೆ ಒಳಪಟ್ಟಿಲ್ಲ. ಧಮ ಎಂದರೆ ವಸ್ತುಗಳನ್ನು ಕಟ್ಟಿಹಾಕಲು ಉಪಯೋಗಿಸುವ ಹಗ್ಗ. ದೇವಿಯ ವೈಭವವು ಅಂತಹ ಎಲ್ಲಾ ಬಂಧನಗಳಿಗೆ ಅತೀತವಾಗಿದೆ.

Varṇa-rūpiṇī वर्ण-रूपिणी (850)

೮೫೦. ವರ್ಣ-ರೂಪಿಣೀ

           ದೇವಿಯು ಅಕ್ಷರಗಳ ರೂಪದಲ್ಲಿದ್ದಾಳೆ. ವಿವರಗಳಿಗೆ ’ಮಾತೃಕಾ ವರ್ಣ ರೂಪಿಣೀ’ - ನಾಮ ೫೭೭ನ್ನು ನೋಡಿ.

          ಶಾಂಭವ ಮತಾನುಯಾಯಿಗಳ (‘ಪಾಣಿನೀಶಿಕ್ಷಾ’ ಎನ್ನುವ ವೇದ ಶಬ್ದಗಳನ್ನು ಅದರಲ್ಲೂ ವಿಶೇಷವಾಗಿ ಋಗ್ವೇದದ ಸರಿಯಾದ ಉಚ್ಛಾರಣೆಯನ್ನು ತಿಳಿಸಿಕೊಡುವ ಗ್ರಂಥದ ಪ್ರತಿಪಾದಕರು) ಪ್ರಕಾರ ಅಕ್ಷರಗಳ ಸಂಖ್ಯೆಯು (ಬಹುಶಃ ಕೆಲವೊಂದು ವಿರಾಮ ಚಿಹ್ನೆಗಳನ್ನೂ ಸೇರಿಸಿಕೊಂಡು) ಅರವತ್ತನಾಲ್ಕು ಆಗಿದೆ. ದೇವಿಯು ಈ ೬೪ ವರ್ಣಗಳ ರೂಪದಲ್ಲಿ ಇದ್ದಾಳೆ ಎಂದು ಈ ನಾಮವು ಉಲ್ಲೇಖಿಸುತ್ತದೆ.

          ‘ಪಾಣಿನೀಶಿಕ್ಷಾ’ (ಸೂತ್ರ ೫೨) ಹೀಗೆ ಹೇಳುತ್ತದೆ, ಯಾವುದೇ ಮಂತ್ರವು ಸೂಕ್ತವಾದ ವಿಧದಲ್ಲಿ ಉಚ್ಛರಿಸಲ್ಪಡದಿದ್ದರೆ ಅದು ಉದ್ದೇಶಿತ ಅರ್ಥವನ್ನು ಕೊಡುವುದಿಲ್ಲ ಬದಲಾಗಿ ಅದು ಯಾರು ಮಂತ್ರಗಳನ್ನು ತಪ್ಪಾಗಿ ಉಚ್ಛರಿಸುತ್ತಾ ಅವುಗಳನ್ನು ಪಠಿಸುತ್ತಾರೆಯೋ ಅವನನ್ನು ನಾಶಗೊಳಿಸುತ್ತದೆ.

                                                                                       ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 841 - 850  http://www.manblunder.com/2010/06/lalitha-sahasranamam-841-850.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
Average: 5 (1 vote)

Comments

Submitted by nageshamysore Thu, 12/12/2013 - 20:58

ಶ್ರೀಧರರೆ, "ಲಲಿತಾ ಸಹಸ್ರನಾಮ ೮೪೧ - ೮೫೦" ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
೧೮೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆ
______________________________
.
೮೪೧. ಭಾವಜ್ಞಾ
ಭಾವದ ಭಾವಗಳನೇಕ, ಭಾವಾರ್ಥ ಪರಿ ಸಾಂಧರ್ಭಿಕ
ಜೀವಿಗಳೆಲ್ಲ ತರ ಭಾವ, ಮನೋವಿಕಾರ ಅರಿತಿಹ ತರ್ಕ
ದ್ವಂದ್ವಮನ ಮಾತು ಅಲೋಚನೆ ವ್ಯತ್ಯಯ ಶಿಕ್ಷಾ ಕಾರಣ
ಭೂ - ಅನಿರ್ಭಂಧಿತ ಸ್ಥಿತಿ, ಭಾವಾರ್ಥ ಲಲಿತೆ ಭಾವಜ್ಞಾ ||
.
೮೪೨. ಭವ-ರೋಗಘ್ನೀ
ಭವ ಲೌಕಿಕ ಜೀವನ ಸಂಸಾರವೆ ರೋಗ, ದೇವಿಯಿಂದ ಉಪಶಮನ
ಭವ-ಶಿವ ಶಕ್ತಿ-ಸಂಗಾತಿ ಜತೆ, ಭವರೋಗ ಹರಿವ ತಜ್ಞ ಕರುಣ ಮನ
ವೈದ್ಯರವೈದ್ಯ ಜ್ಞಾನದೆ ಸಂಸಾರ ವಿಮುಕ್ತಿ, ಭಕ್ತರಿಗಾಗಿ ಬವಣೆ ಮುಕ್ತಿ
ಅವಿದ್ಯ ಬಂಧ ಮಾಯಾಜಾಲ ಬಿಡಿಸೊ, ಭವ ರೋಗಘ್ನಿ ಲಲಿತಾ ಶಕ್ತಿ ||
.
ಜನನ ಮರಣ ನಿರಂತರ ಪ್ರಕ್ರಿಯೆ ಸಂಸಾರ, ಅಜ್ಞಾನ ಉಗಮದ ಸಾರ
ಅತೀವ ದುಃಖ ಯಾತನೆ ಅಸತ್ಯ ಅವಿದ್ಯೆ, ಕೆಡವಿ ದ್ವಂದ್ವ ಗೋಜಲ ತರ
ಮೋಹ ಭಯ ಕಾಮ ದುಃಖ ಬಂಧಿ, ಜೀವಿ ಪುನರ್ಜನ್ಮ ಅಗಣಿತ ಕರ್ಮ
ಕಾಮ ಕ್ರೋಧ ಲೋಭ ಆತ್ಮವಿನಾಶಿ, ವರ್ಜಿಸದೆ ಸಿಗದು ಮುಕ್ತಿಯ ಮರ್ಮ ||
.
೮೪೩. ಭವ-ಚಕ್ರ-ಪ್ರವರ್ತಿನಿ
ಭವವೆನೆ ಶಿವ, ಚಕ್ರವೆ ಮನಸು, ಪ್ರವರ್ತಿನಿ ಮಾರ್ಗದರ್ಶಿನಿ ಲಲಿತೆ
ಪರಬ್ರಹ್ಮ ಸ್ವರೂಪಿಣಿ ಪರಶಿವನತ್ತ, ಕೊಂಡೊಯ್ಯೆ ದೇವಿಯ ಕ್ಷಮತೆ
ಶರಣಾಗತರ ರಕ್ಷಿಸುತ ಸಂಕಷ್ಟ ಬಗೆಹರಿಸೊ ಸಂಸಾರಚಕ್ರ ದಮನಿ
ಜನನ ಮರಣ ಚಕ್ರ ಯಾತನೆ ಬಿಡಿಸೊ ದೇವಿ ಭವ-ಚಕ್ರ-ಪ್ರವರ್ತಿನಿ ||
.
೮೪೪. ಛಂದಃ ಸಾರಾ
ಆಧ್ಯಾತ್ಮಿಕ ಜ್ಞಾನ ಪರಾ, ಛಂದಃ ಜ್ಞಾನ ಅಪರಾ- ಪರಬ್ರಹ್ಮದೆ ಲೀನ
ಸಾಲಕ್ಷರ ಮಾತ್ರಾಗಣ-ವೈದಿಕ ಮಂತ್ರ,ಉಪನಿಷತ್ತಿನಲಿ ದೇವಿಮನ
ದೇವಿಯನರಿಯೆ ಚತುರ್ದಶವಿದ್ಯೆ, ಪ್ರಮುಖ ವೇದ-ಶ್ರೀವಿದ್ಯಾ ದ್ವಾರ
ಗಾಯತ್ರಿ ಮೀರಿಸಿ ಪಂಚದಶೀ ನಿಗೂಢ ರೂಪಿಣಿಯಾಗಿ ಛಂಧಃಸಾರ ||
.
೮೪೫. ಶಾಸ್ತ್ರ-ಸಾರಾ
ಸಕಲ ವೇದ ಶಾಸ್ತ್ರಕೆ ಮೂಲ, ಬ್ರಹ್ಮದಿಂದುಗಮಿಸಿದ ವಿಸ್ತಾರ
ಸರ್ವೋತ್ಕೃಷ್ಟ ಸರ್ವೋತ್ತಮ ಗುಣವಿಹ ಲಲಿತಾ ಶಾಸ್ತ್ರ ಸಾರ
ನಿಯಮಾದೇಶ ಕಟ್ಟಳೆ ಆಚಾರ ಮಾರ್ಗದರ್ಶಿ ನಿಬಂಧನೆ ಗಣ
ನೀತಿ ನಿಯಮಾಚರಣೆಯ ಕೈ ಪಿಡಿ, ಪವಿತ್ರತೆಯ ಉಪಕರಣ ||
.
೮೪೬. ಮಂತ್ರ-ಸಾರಾ
ಮಂತ್ರ-ಸಂಯೋಜಿಸಿಟ್ಟ ಬೀಜಾಕ್ಷರ, ಶಬ್ದಬ್ರಹ್ಮದಿಂದುಗಮಿಸೆಲ್ಲ ಅಕ್ಷರ
ಲಲಿತಾ ಪರಬ್ರಹ್ಮವಾಗೆಲ್ಲ ಅಕ್ಷರಮೂಲ, ಸಾರವೇ ದೇವಿ ಮಂತ್ರಸಾರ
ಬಲಾಢ್ಯ ಮಂತ್ರದ ಶಕ್ತಿ ಮೂಲ ಸತ್ಯ, ಸಂಪ್ರದಾಯ ಸೂತ್ರ ಪುರಾತನ
ಒಳಿತುಕೆಡಕು ಫಲ -ಬಳಸುವ ರೀತಿಯೆ ಮೂಲ, ಇರಬೇಕು ವಿವೇಚನ ||
.
೮೪೭. ತಲೋದರೀ
ಚತುರ್ದಶಾ ಲೋಕದಲೊಂದು ಅತಳ, ಪರಮೋನ್ನತದಿಂದೆಂಟು
ವಿರಾಟ್ರೂಪದೆ ಅತಲೋದರೀ ದೇವಿ, ಕಟಿಯಾಗಿ ಅತಳ ನಂಟು
ತೆಳ್ಳಂ ತೆಳ್ಳನೆ ಸಪೂರ ಕಟಿಯ, ಲಲಿತೆಯಾಗಿಹಳು ತಲೋದರಿ
ಸಪೂರದಲೆ ಅಪಾರವ ಕಾಪಿಡುವ ದೇವಿ, ಪರಬ್ರಹ್ಮದ ಮಾದರಿ ||
.
೮೪೮. ಉದಾರ-ಕೀರ್ತಿಃ
ತ್ವರಿತ ಕೀರ್ತಿಯ ಶಕ್ತಿ, ಪೂಜಿಪ ಭಕ್ತರಿಗು ಹಂಚುವ ರೀತಿ
ಉತ್-ಶ್ರೇಷ್ಠ, ಅ-ಸರ್ವವ್ಯಾಪಿ, ಅರ-ತ್ವರಿತ ಪ್ರಸಿದ್ಧಿಗೆ ಶಕ್ತಿ
ದೌರ್ಬಲ್ಯಗಳಿಗತೀತ ಬ್ರಹ್ಮನ ಅರ-ಣ್ಯ ಕೊಳಗಳಾ ಸ್ಪೂರ್ತಿ
ಮಾನಸಿಕ ಬ್ರಹ್ಮ ಲೋಕಕೆ ತಲುಪಿಸುವಾ ಉದಾರ-ಕೀರ್ತಿಃ ||
.
೮೪೯. ಉದ್ಧಾಮ-ವೈಭವಾ
ಧಮವೆನೆ ವಸ್ತುವ ಕಟ್ಟಿಡಲು ಬಳಸುವ ಹಗ್ಗ 
ಬಂಧನಗಳಿಗತೀತ ದೇವಿಯ ವೈಭವದ ಜಗ
ಪರಿಮಿತಿಯಿಲ್ಲದ ಪರಿಧಿ ಅನಂತವಾಗಿರುವ
ಅಗಣಿತ ಸಂಪದ ಲಲಿತೆ ಉದ್ದಾಮ ವೈಭವ ||
.
೮೫೦. ವರ್ಣ-ರೂಪಿಣೀ
ಮಂತ್ರೋಚ್ಛಾರ ಸೂಕ್ತ ಇರದಿರೆ, ಕೆಡುಕು ವಿನಾಶ ಖಚಿತ
ಪಠನ ದೋಷ ಫಲಿತ, ಪಾಠಕನ ಸರ್ವನಾಶವಾಗಿಸುತ
ಪವಿತ್ರ ಮಂತ್ರಾಕ್ಷರಗಳ, ಅಕ್ಷರ ರೂಪದಲಿಹಳು ಜನನಿ
ಅರವತ್ನಾಲ್ಕು ವರ್ಣಾಕ್ಷರವಾಗಿಹ ಲಲಿತೆ ವರ್ಣರೂಪಿಣೀ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು