೧೮೪. ಲಲಿತಾ ಸಹಸ್ರನಾಮ ೮೫೧ರಿಂದ ೮೫೬ನೇ ನಾಮಗಳ ವಿವರಣೆ

೧೮೪. ಲಲಿತಾ ಸಹಸ್ರನಾಮ ೮೫೧ರಿಂದ ೮೫೬ನೇ ನಾಮಗಳ ವಿವರಣೆ

                                                                                             ಲಲಿತಾ ಸಹಸ್ರನಾಮ ೮೫೧ - ೮೫೬

Janma-mṛtyu-jarā-tapta-jana-viśrānti-dāyinī जन्म-मृत्यु-जरा-तप्त-जन-विश्रान्ति-दायिनी (851)

೮೫೧. ಜನ್ಮ-ಮೃತ್ಯು-ಜರಾ-ತಪ್ತ-ಜನ-ವಿಶ್ರಾಂತಿ-ದಾಯಿನೀ

           ಜೀವಿಗಳು ಹುಟ್ಟು, ಮುದಿತನ ಮತ್ತು ಅಕಾಲ ಮರಣಗಳಿಗೆ ತುತ್ತಾಗುತ್ತವೆ. ದೇವಿಯು ಅಂತಹ ಜೀವಿಗಳ ದುಃಖವನ್ನು ಉಪಶಮನ ಮಾಡುತ್ತಾಳೆ. ಉಪಶಮನವು ಮುಕ್ತಿಯ ರೂಪದಲ್ಲಿದೆ. ಮುಕ್ತಿಯು ಮೋಕ್ಷ ಅಥವಾ ಸ್ವರ್ಗಕ್ಕಿಂತ ಭಿನ್ನವಾದುದಾಗಿದೆ. ಸ್ವರ್ಗವು ಆತ್ಮಗಳಿಗೆ ತಾತ್ಕಾಲಿಕ ನಿವಾಸವಷ್ಟೆ (ಯಾತ್ರಾ ಸ್ಥಳದಂತೆ), ಅವುಗಳು ಪುನಃ ಈ ಭೂಮಿಯನ್ನು ಪ್ರವೇಶಿಸಿ ಮರುಹುಟ್ಟುಗಳನ್ನು ಪಡೆಯುತ್ತವೆ. ಮುಕ್ತಿ ಹೊಂದಿದ ಆತ್ಮವು ಮರುಹುಟ್ಟು ಪಡೆಯುವುದಿಲ್ಲ ಏಕೆಂದರೆ ಅದು ಪರಬ್ರಹ್ಮದೊಳಗೆ ಒಂದಾಗಿರುತ್ತದೆ. ಅದು ತನ್ನ ವ್ಯಕ್ತಿಗತ ಸ್ವರೂಪವನ್ನು ಕಳೆದುಕೊಳ್ಳುತ್ತದೆ.

Sarvopaniṣadudguṣṭā सर्वोपनिषदुद्गुष्टा (852)

೮೫೨. ಸರ್ವೋಪನಿಷದುದ್ಘುಷ್ಟಾ

            ದೇವಿಯು ಎಲ್ಲಾ ಉಪನಿಷತ್ತುಗಳಲ್ಲಿಯೂ ವೈಭವೀಕರಿಸಲ್ಪಟ್ಟಿದ್ದಾಳೆ. ಉತ್ ಎನ್ನುವುದನ್ನು ಶ್ರೇಷ್ಠತೆ, ಜ್ಯೇಷ್ಠತೆ, ಹಿರಿತನ ಅಥವಾ ಅಧಿಕಾರವನ್ನು ಪರೋಕ್ಷವಾಗಿ ಸೂಚಿಸಲು ಉಪಯೋಗಿಸುತ್ತಾರೆ, ಘುಷ್ಟಾ ಎಂದರೆ ಗಟ್ಟಿಯಾಗಿ ಹೇಳುವುದು (ಘೋಷಿಸುವುದು). ಈ ನಾಮವು ಎಲ್ಲಾ ಉಪನಿಷತ್ತುಗಳು ದೇವಿಯ ವೈಭವವನ್ನು ಘೋಷಿಸುತ್ತವೆ ಎಂದು ಹೇಳುತ್ತದೆ. ಉಪನಿಷತ್ತುಗಳು ಜ್ಞಾನವನ್ನು ಒದಗಿಸುವ ಉಪಕರಣಗಳಾಗಿವೆ. ಅಂತಹ ಜ್ಞಾನವನ್ನು ಪಡೆಯುವುದರ ಮೂಲಕ ಒಬ್ಬನು ಬ್ರಹ್ಮವನ್ನು ಅರಿಯಲು ಶಕ್ಯನಾಗುತ್ತಾನೆ. ಕೇವಲ ಶಕ್ತಿ ಮಾತ್ರಳೇ ಶಿವನನ್ನು ತೋರಬಲ್ಲ ಸಾಮರ್ಥ್ಯವುಳ್ಳವಳು. ಅವಳ ಸಹಾಯವಿಲ್ಲದೆ ಶಿವನನ್ನು ಎಂದಿಗೂ ಸಾಕ್ಷಾತ್ಕರಿಸಿಕೊಳ್ಳಲಾಗದು. ದೇವಿಯು ತನ್ನ ಭಕ್ತರನ್ನು ಶಿವನೆದುರಿಗೆ ಕರೆದೊಯ್ದು ಅವರಿಗೆ ಅಂತಿಮವಾಗಿ ಅವನು ವ್ಯಕ್ತವಾಗುವಂತೆ ಮಾಡುತ್ತಾಳೆ. ಕಣ್ಣು ಕುರುಡಾಗಿಸುವಂತಹ (ಕಣ್ಣು ಕೋರೈಸುವಂತಹ) ಮಹಾಜ್ವಾಲೆಯಂತಿರುವ ಬ್ರಹ್ಮವನ್ನು ದೇವಿಯ ಕೃಪೆಯಿಲ್ಲದಿದ್ದರೆ ಭರಿಸಲಾಗದು. ದೇವಿಯು ಶ್ರೀ ಮಾತೆ ಆಗಿರುವುದರಿಂದ ಆಕೆಗೆ ಶಿವನನ್ನು ಎಲ್ಲಿಯವರೆಗೆ ಬಹಿರಂಗಪಡಿಸಬಹುದೋ ಎನ್ನುವುದು ತಿಳಿದಿರುತ್ತದೆ.

           ಉಪನಿಷತ್ತುಗಳು ವೇದಗಳ ಅಂತಿಮ ಭಾಗಗಳಾಗಿದ್ದು ಅವುಗಳು ಅತ್ಯಂತ ಶ್ರೇಷ್ಠವಾದ ಜ್ಞಾನದ ಕುರಿತಾಗಿ ಚರ್ಚಿಸುತ್ತವೆ. ಉಪನಿಷತ್ತುಗಳನ್ನು ಜ್ಞಾನಕಾಂಡವೆಂದೂ ಕರೆದಿದ್ದಾರೆ; ಆ ಪರಮೋನ್ನತ ಜ್ಞಾನವನ್ನು ಒದಗಿಸುವುದಲ್ಲದೆ ಅವುಗಳು ಬ್ರಹ್ಮವನ್ನು ಬಹಿರಂಗಗೊಳಿಸಲಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಛಾಂದೋಗ್ಯ ಉಪನಿಷತ್ತು (೧.೧.೧೦), "ಜ್ಞಾನ ಮತ್ತು ಅಜ್ಞಾನಗಳು ವಿಭಿನ್ನ ಫಲಿತಾಂಶಗಳನ್ನು ಉಂಟು ಮಾಡುತ್ತವೆ. ಜ್ಞಾನದಿಂದ ಕೂಡಿದ, ಗುರು ಮತ್ತು ಶಾಸ್ತ್ರಗಳಲ್ಲಿ ನಂಬಿಕೆಯಿರಿಸಿ ಉಪನಿಷತ್ತಿನ ತತ್ವಗಳನ್ನು ಅನುಸರಿಸಿ ಮಾಡುವ ಯಾವ ಕೆಲಸವೇ ಆಗಲಿ ಅದು ಅಧಿಕ ಫಲದಾಯಿಯಾಗಿರುತ್ತದೆ".

           ಛಾಂದೋಗ್ಯ ಉಪನಿಷತ್ತಿನ ಈ ಹೇಳಿಕೆಯನ್ನು ಬ್ರಹ್ಮಸೂತ್ರವು (೩.೩.೧) ಅನುಮೋದಿಸುತ್ತದೆ. ಅದು ಹೀಗೆ ಹೇಳುತ್ತದೆ, "ಸರ್ವವೇದಾಂತಪ್ರತ್ಯಯಂ ಚೋದನಾದ್ಯವಿಶೇಷಾತ್" - ವಿಧಿ ವಿಧಾನ ಮೊದಲಾದುವು ಒಂದೇ ತೆರನಾಗಿರುವ ಕಾರಣದಿಂದ ಎಲ್ಲಾ ಉಪನಿಷತ್ತುಗಳಲ್ಲಿ ಸೂಚಿಸಲ್ಪಟ್ಟಿರುವ ಯಾವುದೇ ವಿಧವಾದ ಆಧ್ಯಯನಗಳು". ಈ ಸೂತ್ರವು ಎಲ್ಲಾ ಉಪನಿಷತ್ತುಗಳ ಮುಖ್ಯ ಉದ್ದೇಶವು ಬ್ರಹ್ಮದೊಂದಿಗೆ ಸಂಪರ್ಕವನ್ನು ಸಾಧಿಸುವುದೇ ಆಗಿದೆ ಎಂದು ಹೇಳುತ್ತದೆ. ಬ್ರಹ್ಮದೊಂದಿಗೆ ಜೀವಿಗಳು ಅಂತಹ ಪ್ರಮುಖವಾದ ಸಂಪರ್ಕಗಳನ್ನು ಏರ್ಪಡಿಸಿಕೊಳ್ಳುವಂತೆ ಮಾಡುವುದಲ್ಲದೆ ಅವುಗಳನ್ನು ದೇವಿಯು ನಿರ್ವಹಿಸುತ್ತಾಳೆ ಎಂದು ಈ ನಾಮವು ಹೇಳುತ್ತದೆ.

Śantyatīta-kalātmikā शन्त्यतीत-कलात्मिका (853)

೮೫೩. ಶಾಂತ್ಯತೀತ-ಕಲಾತ್ಮಿಕಾ

           ಶಾಂತ್ಯತೀತ ಎನ್ನುವುದು ಕಾಲದ ಅಂಶ. ಶಾಂತ್ಯತೀತ ಎಂದರೆ ಶಾಂತಿಯನ್ನು ಪಸರಿಸುವುದು. ಇದನ್ನು ನವಾವರಣ ಪೂಜೆಯ ಒಂಬತ್ತನೇ ಆವರಣದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಇದು ಷೋಡಶೀ ಮಂತ್ರ ದೀಕ್ಷೆಯನ್ನು ಪಡೆದವರಿಗೆ ಅನ್ವಯಿಸುತ್ತದೆ. ಇದು ಜೀವನ್ಮುಕ್ತಿಯ ಹಂತವಾಗಿದೆ (ನಾಮ ೭೬೪ರ ಚರ್ಚೆಯಲ್ಲಿನ ಅಡಿ ಟಿಪ್ಪಣಿಯನ್ನು ನೋಡಿ); ಈ ಹಂತದಲ್ಲಿ ಹಿಂದಿನ ನಾಮದಲ್ಲಿ ಉಲ್ಲೇಖಿತವಾದ ಶ್ರೇಷ್ಠವಾದ ಜ್ಞಾನವನ್ನು ಪಡೆಯುವುದರ ಮೂಲಕ ಅವಿದ್ಯೆಯು ಸಂಪೂರ್ಣವಾಗಿ ನಾಶಪಡಿಸಲ್ಪಟ್ಟಿರುತ್ತದೆ. ಇಲ್ಲಿ ಅಜ್ಞಾನದ ಅಂಶಗಳು ಮಸುಕಾಗಿ ಇನ್ನೂ ಉಳಿದಿದ್ದು ಈ ಹಂತದಲ್ಲಿ ಕರ್ಮಶೇಷದಲ್ಲಿನ ನೋವು ನಲಿವುಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ಅವನು ಪರಮಾನಂದವನ್ನು ಅನುಭವಿಸುವುದು ಮುಂದುವರೆಯುತ್ತದೆ, ಏಕೆಂದರೆ ಅವನಾಗಲೇ ದ್ವಂದ್ವತೆಯನ್ನು ಅಧಿಗಮಿಸಿರುವುದರಿಂದ. ಮುಂದಿನ ಹಂತವೇ ಮುಕ್ತಿಯಾಗಿದೆ. ಜೀವನ್ಮುಕ್ತ ಹಂತವನ್ನು ಅಧಿಗಮಿಸುವುದೇ ಶಾಂತ್ಯತೀತ ಕಾಲ ಎಂದು ಹೇಳಲ್ಪಟ್ಟಿದೆ. ದೇವಿಯು ಈ ರೂಪದಲ್ಲಿ ಇದ್ದಾಳೆ ಎಂದು ಹೇಳಲಾಗುತ್ತದೆ.

Gambhīrā गम्भीरा (854)

೮೫೪. ಗಂಭೀರಾ

           ದೇವಿಯು ರುದ್ರ ಭಯಂಕರಳು. ಗಂಭೀರಾ ಎಂದರೆ ಸರೋವರವೆಂದೂ ಹೆಸರು. ಶಿವ ಸೂತ್ರವು (೧.೨೨) ಹೀಗೆ ಹೇಳುತ್ತದೆ, "ದಿವ್ಯ ಶಕ್ತಿಯ ಅನಂತ ಸರೋವರದೊಂದಿಗೆ (ಪರಿಶುದ್ಧ ಪ್ರಜ್ಞೆಯೊಂದಿಗೆ) ಒಂದಾಗುವುದರಿಂದ, ಪರಮಾತ್ಮನ ಶಕ್ತಿಯು ಹೊಂದಲ್ಪಡುತ್ತದೆ". ದೇವಿಯ ಸ್ವತಂತ್ರ ರೂಪವು (ಶಿವನಿಂದ ಪಡೆದ ಸ್ವತಂತ್ರ ಶಕ್ತಿಯು) ಶಿವನೊಂದಿಗೆ ಐಕ್ಯವಾಗುತ್ತದೆ ಅಥವಾ ಪರಮೋನ್ನತ ಪ್ರಜ್ಞೆಯು ಬ್ರಹ್ಮದೊಂದಿಗೆ ವಿಲೀನವಾಗುತ್ತದೆ. ಆದ್ದರಿಂದ ಇಲ್ಲಿ ಕಂಡುಕೊಂಡಿರುವುದು ಆ ದಿವ್ಯ ಸರೋವರವಾಗಿದೆ. ದೇವಿಯೇ ಆ ದಿವ್ಯ ಸರೋವರವಾಗಿದ್ದಾಳೆ ಎಂದು ಹೇಳಲಾಗಿದೆ. ಈ ವಿವರಣೆಯು ಹಿಂದಿನ ನಾಮದೊಂದಿಗೆ ಸಮಂಜಸವಾಗಿ ಹೊಂದುತ್ತದೆ.

         ಈ ನಾಮಕ್ಕೆ ಮತ್ತೊಂದು ವಿಶ್ಲೇಷಣೆಯೂ ಇರುತ್ತದೆ. ಗಂ (गं) ಎನ್ನುವುದು ಗಣಪತಿಯ ಬೀಜ, ಭೀ (भी) ಎಂದರೆ ಹೆದರಿಕೆ ಮತ್ತು ರ ಎಂದು ಹೊಡೆದೋಡಿಸು. ತನ್ನ ಭಕ್ತರು ‘ಗಂ’ ಬೀಜಾಕ್ಷರವನ್ನು ಹೊಂದಿದ ಗಣಪತಿಯ ಪೂಜೆಯನ್ನು ಕೈಗೊಳ್ಳುವಂತೆ ಮಾಡಿ ಅವರ ಭಯವನ್ನು ದೇವಿಯು ಹೋಗಲಾಡಿಸುತ್ತಾಳೆ.

Gaganāntasthā गगनान्तस्था (855)

೮೫೫. ಗಗನಾಂತಸ್ಥಾ

          ಗಗನಾಂತಸ್ಥಾ ಅಂದರೆ ಯಾರು ಗಗನದಲ್ಲಿ (ಆಕಾಶದಲ್ಲಿ) ಅಂತರ್ಗತಳಾಗಿದ್ದಾಳೆಯೋ ಆಕೆ. ಶ್ವೇತಾಶ್ವತರ ಉಪನಿಷತ್ತು ಹೀಗೆ ಹೇಳುತ್ತದೆ, "ಅದೇ ಆತ್ಮವೇ ಈ ಸಮಸ್ತ ಬ್ರಹ್ಮಾಂಡವನ್ನು ಆವರಿಸುತ್ತದೆ". ಅವನೇ (ಬ್ರಹ್ಮವೇ) ಆಕಾಶವು ಲಯವಾಗುವ ಮಹಾ ಪ್ರಳಯದ ಸಮಯದಲ್ಲೂ ಇರುತ್ತಾನೆ, ಎನ್ನುವುದನ್ನೂ ಸೂಚಿಸುತ್ತದೆ. ಹೆಚ್ಚಿನ ವಿವರಗಳಿಗೆ ಮಹಾ-ಪ್ರಳಯ-ಸಾಕ್ಷಿಣೀ (ನಾಮ ೫೭೧) ನೋಡಿ.

         ಗಗನವೆಂದರೆ ಆಕಾಶ. ಆಕಾಶದಿಂದ ಉಳಿದ ಮಹಾಭೂತಗಳು ಉತ್ಪನ್ನವಾದುವು (ತೈತ್ತರೀಯ ಉಪನಿಷತ್). ಆಕಾಶದ ಬೀಜವು ಹ ಆಗಿದೆ. ಇತರೇ ಮಹಾಭೂತಗಳಾದ ವಾಯು, ಅಗ್ನಿ, ನಿರುತ್ ಮತ್ತು ಭೂಮಿ ಇವುಗಳಿಗೆ ಅನುಕ್ರಮವಾಗೆ ಯ, ರ, ವ, ಲ ಬೀಜಾಕ್ಷರಗಳು ಸಹ ಆಕಾಶದಿಂದ ಉಗಮವಾದವು. ಆದ್ದರಿಂದ ದೇವಿಯು ಪಂಚಭೂತಗಳನ್ನು ಪ್ರತಿನಿಧಿಸುತ್ತಾಳೆ ಎಂದು ಹೇಳಲಾಗುತ್ತದೆ. ಅದೇ ಉಪನಿಷತ್ತು, "ಬ್ರಹ್ಮದಿಂದ ಆಕಾಶವು ಹೊರಹೊಮ್ಮಿತು" ಎಂದು ಹೇಳುತ್ತದೆ ಮತ್ತು ಈ ಹೇಳಿಕೆಯು ದೇವಿಯ ಪರಬ್ರಹ್ಮ ಸ್ವರೂಪವನ್ನು ದೃಢಪಡಿಸುತ್ತದೆ.

Garvitā गर्विता (856)

೮೫೬. ಗರ್ವಿತಾ

           ದೇವಿಯು ಗರ್ವಿಷ್ಠಳು. ದೇವಿಯು ಗರ್ವದಿಂದಿರುವುದಕ್ಕೆ ಹಲವಾರು ಕಾರಣಗಳಿವೆ. ಆದರೆ ಅದರ ಸರಿಯಾದ ನಿರ್ವಚನವು, ದೇವಿಯು ಅಹಂ (ನಾನು) ಎನ್ನುವ ಪ್ರಜ್ಞೆ  ಅಥವಾ "ಅಹಂ ಬ್ರಹ್ಮಾಸ್ಮಿ" ಅಂದರೆ ’ನಾನೇ ಅದು’ ಇಂತಹ ಮಹಾನ್ ವಾಕ್ಯಗಳ ಮೂರ್ತರೂಪವಾಗಿದ್ದಾಳೆ. ಹಲವಾರು ನಾಮಗಳಲ್ಲಿ ನೋಡಿರುವಂತೆ ತನ್ನ ಬಳಿಯಲ್ಲಿರುವುದನ್ನೇ ದೇವಿಯು ಪ್ರಸಾದಿಸುತ್ತಾಳೆ. ಈ ನಾಮವನ್ನೂ ಸಹ ಅದೇ ವಿಧವಾಗಿ ವಿಶ್ಲೇಷಿಸಬೇಕು. ಇದನ್ನು ಸಾಕ್ಷಾತ್ಕಾರಕ್ಕೆ ತೊಡಕಾಗಿರುವ ಅಹಂಕಾರದ ಭಾವನೆಯೊಂದಿಗೆ ತಳಕು ಹಾಕಬಾರದು. ನಾಮ ೫೦೮ ಅತಿ ಗರ್ವಿತಾ (ಅತ್ಯಂತ ಗರ್ವಿತಳು) ಮತ್ತು ನಾಮ ೧೫೮ ನಿರ್ಮದಾ (ಗರ್ವವಿಲ್ಲದವಳು) ಆಗಿದೆ ಎನ್ನುವುದನ್ನು ಗಮನಿಸಿ.

                                                                                             ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 851 - 856  http://www.manblunder.com/2010/06/lalitha-sahasranamam-851-856.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
Average: 5 (1 vote)

Comments

Submitted by nageshamysore Sat, 12/14/2013 - 04:08

ಶ್ರೀಧರರೆ, ೧೮೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ:-)
.
ಲಲಿತಾ ಸಹಸ್ರನಾಮ ೮೫೧ - ೮೫೬
_________________________________
.
೮೫೧. ಜನ್ಮ-ಮೃತ್ಯು-ಜರಾ-ತಪ್ತ-ಜನ-ವಿಶ್ರಾಂತಿ-ದಾಯಿನೀ
ಮೋಕ್ಷ ಸ್ವರ್ಗದ ಪರಿಧಿ, ತಾತ್ಕಾಲಿಕ ನಿವಾಸದ ತೆರದಿ
ಮರುಹುಟ್ಟಿನಲಿ ಜೀವಿ ಮತ್ತೆ ಭೂಮಿಯ ಜೀವನ ಸರದಿ
ಬ್ರಹ್ಮಲೀನ ಮುಕ್ತಾತ್ಮಕಿಲ್ಲ ವ್ಯಕ್ತಿಗತ ರೂಪ, ಮರುಹುಟ್ಟು
ಹುಟ್ಟು-ಸಾವು-ವೃದ್ದಾಪ್ಯ ದುಃಖ ದೇವಿ ನಿವಾರಿಸೊ ಗುಟ್ಟು ||
.
೮೫೨. ಸರ್ವೋಪನಿಷದುದ್ಘುಷ್ಟಾ
ಉತ್-ಶ್ರೇಷ್ಠತೆ ಜೇಷ್ಠತೆ ಅಧಿಕಾರ, ಘುಷ್ಟಾ ಗಟ್ಟಿ ಘೋಷಣೆ
ಉಪನಿಷತ್ತುಗಳೆಲ್ಲಾ ದೇವಿಯ ವೈಭವ ಘೋಷಣೆಗೆ ತಾನೆ
ಬ್ರಹ್ಮವನರಿಸೆ-ಮಹಾಜ್ವಾಲೆ ಭರಿಸೆ ಜ್ಞಾನ, ಶಕ್ತಿಯ ಕೂಟ
ಸೂಕ್ತ ಕಾಲೆ ವ್ಯಕ್ತವಾಗಿಸಿ ದೇವಿ ಸರ್ವೋಪನಿಷದುದ್ಘುಷ್ಟಾ ||
.
ಉಪನಿಷತ್ತು ಮುಖ್ಯೋದ್ದೇಶ ಬ್ರಹ್ಮದತ್ತ ಸಂಪರ್ಕ ಸಾಧನೆ
ಸಂವಹನ ಬಂಧ ನಿರ್ವಹಿಸೊ ಪರಿ,ದೇವಿ ಲಲಿತಾರಾಧನೆ
ವೇದಗಳಂತಿಮ ಭಾಗ ಉಪನಿಷತ್ತು, ಶ್ರೇಷ್ಠ ಜ್ಞಾನದ ಚರ್ಚೆ
ಜ್ಞಾನಕಾಂಡ, ಬ್ರಹ್ಮದನಾವರಣ, ಫಲಾಫಲಾ ಬ್ರಹ್ಮದೀಕ್ಷೆ ||
.
೮೫೩. ಶಾಂತ್ಯತೀತ-ಕಲಾತ್ಮಿಕಾ
ಜೀವನ್ಮುಕ್ತ ಹಂತದಧಿಗಮಿಸುವಿಕೆಯೆ ಶಾಂತ್ಯತೀತ ಕಾಲ
ಶಾಂತ್ಯತೀತ ಕಲಾತ್ಮಿಕ ರೂಪಿ ದೇವಿ ಲಲಿತೆಯಿಹ ಸಕಲ
ಶಾಂತಿಯ ಜೀವನ್ಮುಕ್ತ ಹಂತ ಕರ್ಮಶೇಷ ನೋವು ನಲಿವ
ಶ್ರೇಷ್ಠ ಜ್ಞಾನ ನುಂಗುತ ಅಜ್ಞಾನ, ಪರಮಾನಂದ ಅನುಭವ ||
.
೮೫೪. ಗಂಭೀರಾ
ಪರಿಶುದ್ಧ ಪ್ರಜ್ಞೆ ದಿವ್ಯ ಶಕ್ತಿಯನಂತ ಸರೋವರ, ಏಕತ್ವದೆ ಬ್ರಹ್ಮದ ಶಕ್ತಿ
ಸರೋವರ ಗಂಭೀರಾ ರುದ್ರ ಭಯಂಕರ ಲಲಿತೆ, ಐಕ್ಯವಾಗುತ ಶಿವಶಕ್ತಿ
ಪರಮೋನ್ನತ ಪ್ರಜ್ಞೆ ಬ್ರಹ್ಮದೆ ವಿಲೀನ, ಪರಮ ಶಾಂತ ಪ್ರಶಾಂತ ಹಂತ
ಗಂ-ಗಣಪತಿ ಬೀಜ, ಭೀ-ಭೀತಿ, ರ-ಹೊಡೆದೋಡಿಸೆ ಗಣನಾ ಪೂಜಿಸುತ ||
.
೮೫೫. ಗಗನಾಂತಸ್ಥಾ
ಆಕಾಶದ ಬೀಜ-ಹ ಹುಟ್ಟಿಸಿ ವಾಯು-ಅಗ್ನಿ-ನೀರು-ಭೂಮಿ ಯ-ರ-ವ-ಲ
ಬೀಜಾಕ್ಷರ ರೂಪದಿ, ದೇವಿ ಲಲಿತೆ ಪ್ರತಿನಿಧಿಸೊ ಪಂಚಮಹಾಭೂತಗಳ
ಗಗನಕೆ ತಾಯಿ ಬ್ರಹ್ಮ, ಆಕಾಶದೆ ಅಂತರ್ಗತಳಾಗಿ ದೇವಿ ಗಗನಾಂತಸ್ಥಾ
ಸೃಷ್ಟಿಯಂತೆ ಮಹಾಪ್ರಳಯದೆ ಉಪಸ್ಥಿತ ಬ್ರಹ್ಮವೆ ಲಯಕೆ ಸಾಕ್ಷೀಭೂತ ||
.
೮೫೬. ಗರ್ವಿತಾ
ಅಹಂಕಾರದ ಭಾವನೆಯಲ್ಲ, 'ಅಹಂ ಬ್ರಹ್ಮಾಸ್ಮಿ'ಯ ಪ್ರಜ್ಞೆ
ಪರಬ್ರಹ್ಮ ಸಾಕಾರ ಸ್ವರೂಪಿಣಿ ಲಲಿತಾಬ್ರಹ್ಮವಿಹ ಹಿರಿಮೆ
ಮೂರ್ತರೂಪಿಣಿ 'ನಾನೇ ಅದು' ಎಂದೆನುವ ಭಾವ ಗರ್ವಿತಾ
ಭಕ್ತರ ಬ್ರಹ್ಮಕೊಯ್ಯೊ ಶಕ್ತಿ ತನದಾಗಿಹುದೆಲ್ಲ ಪ್ರಸಾದಿಸುತ ||
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು