ಶ್ರೀ ! ಶ್ರೀ !! ಶ್ರೀ !!!

ಶ್ರೀ ! ಶ್ರೀ !! ಶ್ರೀ !!!

 

ನಮ್ಮನ್ನು ಶ್ರೀ ಶ್ರೀ ಶ್ರೀ ಎಂದೇ ಕರೆಯಿರಿ ಆದರೆ ನಾವು ಯಾವ ಮಠದ ಶ್ರೀಗಳು ಅಲ್ಲ ... ಈಗಿರುವವರು ಅವರವರ ಮಠ ಸುಧಾರಿಸಿಸಲಿ ಸಾಕು ... ನನ್ನನ್ನು ’ನಾವು’ ಎಂದು ಸಂಭೋದಿಸಿಕೊಳ್ಳುತ್ತಿಲ್ಲ. ಶ್ರೀ ಶ್ರೀ ಶ್ರೀ ಎಂಬೋದು ನನ್ನ ಹೆಸರ ಮುಂದೇನೂ ಹಾಕಿಕೊಂಡಿಲ್ಲ ... ಬದಲಿಗೆ ಶ್ರೀ, ಶ್ರೀ, ಶ್ರೀ ಎಂಬೋದು ನಮ್ಮ ಮೂವರ ಹೆಸರಿನ ಮೊದಲಕ್ಷರಗಳು ...

ಮೂವರಲ್ಲಿ ಈ ಕಥಾನಕದ ಹೀರೋ ಆದ ಮೊದಲ ಶ್ರೀ’ಯನ್ನು ನಾನು ಭೇಟಿಯಾಗಿದ್ದು ನನ್ನ ಹೈಸ್ಕೂಲಿನಲ್ಲಿ. ಎರಡನೇ ಶ್ರೀ’ಯನ್ನು ನಾನು ಕಂಡಿದ್ದು ಹತ್ತನೇ ತರಗತಿಯ ಪರೀಕ್ಷೆಯ ಸಮಯದಲ್ಲಿ. ತ್ರಿವೇಣಿ ಸಂಗಮವಾಗಿದ್ದು ಪ್ರೀ-ಯೂನಿವರ್ಸಿಟಿಯಲ್ಲಿ. ಕೇವಲ ಎರಡೇ ವರ್ಷಗಳು ನಮ್ಮ ಪಥಗಳು ಒಟ್ಟಾಗಿ ಸಾಗಿದ್ದರೂ ಆದ ಅನುಭವಗಳು, ಗಳಿಸಿದ ಗೆಳೆತನ ಮಾತ್ರ ಸಮುದ್ರದಷ್ಟು. ಇರಲಿ ...

ನಮ್ಮ ಹೀರೋ ’ಶ್ರೀ’ ಎಡಚ, ನಿಧಾನಸ್ತ, ಗುಟ್ಟಿನ ಗೂಡು, ಸ್ಥಿತಪ್ರಜ್ಞ. ವಿದ್ಯೆ ಬಗ್ಗೆ ಹೇಳಿದರೆ ಸಂಸ್ಕೃತ ವಿಧ್ವಾಂಸ ಜೊತೆಗೆ ಲೈಫ್ ಇನ್ಸ್ಯೂರೆನ್ಸ್’ನಲ್ಲಿ ಕೆಲಸ. ಅಷ್ಟು ಹತ್ತಿರದ ಸ್ನೇಹಿತರೇ ಆಗಿದ್ದರೂ, ಯಾವ ವಿಷಯವನ್ನೂ ನಮ್ಮ ಮುಂದೆ ಹೇಳಿಕೊಳ್ಳುತ್ತಿರಲಿಲ್ಲ. ಒಂದು ಚಿಕ್ಕ ವಿಷಯ ಹೇಳಿದರೆ, ತನ್ನ ರಿಸಲ್ಟ್ ಆಗಲಿ ತಾನು ಗಳಿಸಿದ ಮಾರ್ಕ್ಸ್ ಆಗಲಿ ಎಂದೂ ಹೇಳಿಕೊಂಡಿಲ್ಲ. ರಿಸಲ್ಟ್ ದಿನ ನನ್ನ ಐದೂ ವರ್ಷಗಳು ನನಗೇ ಸಿಕ್ಕಿಲ್ಲ. ಹೋಗಲಿ ಬಿಡಿ ...

ಅಂದು ಪ್ರೀ-ಯೂನಿವರ್ಸಿಟಿ ಮುಗಿದ ಮೇಲೆ ಸ್ವಲ್ಪ ನಮ್ಮ ದಾರಿಗಳು ಬೇರೆ ಬೇರೆ ಆದವು. ನಂತರದ ದಿನಗಳಲ್ಲಿ ಆಗೊಮ್ಮೆ ಈಗೊಮ್ಮೆ ಅಂದರೆ ವರ್ಷಗಳ ಅಂತರಗಳಲ್ಲಿ ಭೇಟಿಯಾಗಿದ್ದೆವು. ನಮ್ಮ ಹೀರೋ ಶ್ರೀ’ಯ ಭೇಟಿ ಎಲ್ಲಿ ಆಗದಿದ್ದರೂ ರಾಯರ ಮಠದ ಸಮೀಪ ಹಲವಾರು ಆಗಿತ್ತು. ನಾನು ದೇಶ ಬಿಟ್ಟು ಬಂದ ಮೇಲೆ ನಮ್ಮ ಎರಡನೇ ಶ್ರೀ’ಯನ್ನು ಮೇರಿಲ್ಯಾಂಡ್’ನಲ್ಲಿ ಭೇಟಿಯಾಗಿದ್ದೆ. ನಂತರ ಈವರೆಗೆ ಮುಖತ: ಭೇಟಿಯಾಗಿಲ್ಲ.

೨೦೦೭’ರಲ್ಲಿ ನಮ್ಮಮ್ಮ ತೀರಿಕೊಂಡರು. ಭಾರತಕ್ಕೆ ಹೋಗಿದ್ದೆ. ಕಾರ್ಯಗಳನ್ನು ನೆಡೆಸಲು ಆರಂಭಗೊಂಡ ದಿನ ಆ ಸ್ಥಳಕ್ಕೆ ಹೋದಾಗ ನಮ್ಮ ಹೀರೋ ಅಲ್ಲಿ ಸಿಗಬೇಕೇ? ಅವನ ತಂದೆಯವರು ತೀರಿಕೊಂಡರಂತೆ. ಅನ್ಯಾಯದ ವಿಷಯ ಏನೆಂದರೆ ಅವನ ತಾಯಿ ತೀರಿಕೊಂಡು ಕೆಲವೇ ತಿಂಗಳಲ್ಲಿ ತಂದೆಯೂ ತೀರಿಕೊಂಡಿದ್ದರು. ಅವರ ಮನೆಗೆ ಹಲವಾರು ಬಾರಿ ಹೋಗಿದ್ದರಿಂದ ಅವರ ಮನೆಯಲ್ಲಿ ಎಲ್ಲರೂ ಪರಿಚಯವಾಗಿದ್ದರು. ಅವನ ತಂದೆಗೆ ನಮ್ಮಪ್ಪ, ಅಮ್ಮ, ತಾತ ಎಲ್ಲರೂ ಗೊತ್ತಿತ್ತು. ಒಂದೆರಡು ಬಾರಿ ಅವನ ಅಮ್ಮನ ಕೈ ಅಡುಗೆಯ ರುಚಿಯೂ ಬಿದ್ದಿತ್ತು ಅನ್ನಿ. 

ನಾನೊಮ್ಮೆ ಅವರ ಮನೆಗೆ ಹೋಗಿದ್ದಾಗ ಇನ್ಯಾರೋ ಬಂದಿದ್ದರು. ಸ್ವಲ್ಪ ದೊಡ್ಡ ಹುಡುಗ ತನ್ನ ಉಪನಯನದ ಆಹ್ವಾನ ಪತ್ರಿಕೆ ಹಿಡಿದು ಬಂದಿದ್ದ. ಕೆಲಸದಲ್ಲಿದ್ದ ಎಂದು ಕಾಣುತ್ತೆ, ಆ ವಯಸ್ಸಿನಲ್ಲಿ ಮುಂಜಿ ಹಿಂಸೆಯೆಂದೋ ಏನೋ ತನಗೆ ಈ ಮುಂಜಿ ಎಲ್ಲ ಇಷ್ಟವಿಲ್ಲ, ಸಮಯ ವ್ಯರ್ಥ ಅಂತೆಲ್ಲ ಹೇಳುತ್ತಿದ್ದ. ಶ್ರೀ ಅಪ್ಪ ಆತನಿಗೆ ಹೇಳಿದ್ದರು "ಎಲ್ಲ ಜನರಿಗೂ ತಮ್ಮ ಜಾತಿ, ಮತ, ಪದ್ದತಿ ಬಗ್ಗೆ ಹೆಮ್ಮೆ ಇರುತ್ತದೆ. ಆದರೆ ನಮ್ಮ ಬ್ರಾಹ್ಮಣರಿಗೆ ಅದೇಕೋ ಅಸಡ್ಡೆ" ಅಂತ.

ದಿನವೂ ಕಾರ್ಯಕ್ಕೆ ಹೋಗುತ್ತಿದ್ದರೂ ಕೇವಲ ಒಂದೆರಡು ಮಾತ್ರ ಸಿಕ್ಕವನಿಗೆ ನನ್ನ ಈ-ಮೈಲ್ ಐ.ಡಿ ಕೊಟ್ಟಿದ್ದೆ. ಅದೇನೋ ಆಶ್ಚರ್ಯ ಈ ವಿಷಯದಲ್ಲಿ ಗುಟ್ಟು ಮಾಡದೆ ಅವನ ಐ.ಡಿ ನನಗೆ ಕೊಟ್ಟಿದ್ದ. ಆದರೇನು ನಾನು ಈವರೆಗೂ ಕಳಿಸಿದ ಯಾವ ಈ-ಮೈಲ್’ಗೂ ಉತ್ತರ ಕೊಟ್ಟಿಲ್ಲ. 

೨೦೧೩’ರ ವರೆಗೂ ಇಬ್ಬರ ಸಂಪರ್ಕವೂ ಇರಲಿಲ್ಲ. ಒಮ್ಮೆ ಹೀಗೆ ಇದ್ದಕ್ಕಿದ್ದಂತೆ ಎರಡನೇ ಶ್ರೀ ಫೇಸ್ಬುಕ್’ನಲ್ಲಿ ಪ್ರತ್ಯಕ್ಷ. ಫೇಸ್ಬುಕ್’ಗೆ ನಮನ ಹೇಳಲೇಬೇಕು. ಮನೆಯಲ್ಲಿ ಹೆಂಡರಿಗೇ ಸಿಗದವರೂ ಫೇಸ್ಬುಕ್’ನಲ್ಲಿ ಖಂಡಿತ ಸಿಗುತ್ತಾರೆ. ಭಯಂಕರ ಖುಷಿಯಾಯ್ತು. ಸ್ವಲ್ಪ ಹೊತ್ತು ಮೆಸೇಜ್’ನಲ್ಲೇ ನಮ್ಮ ಕೆಲಸ ಕಾರ್ಯಗಳ ಬಗ್ಗೆ ಮಾತು ನೆಡೆದವು. ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ ಎಂಬಂತೆ ಕಾಲೆಳತವೂ ನೆಡೆಯಿತು. ಇದೆಲ್ಲ ಸ್ವಲ್ಪ ಹೊತ್ತು ಮಾತ್ರ. ಇಂದಿನ ದಿನಗಳಿಂದ ಅಂದಿನ ದಿನಗಳಿಗೆ ಬಹು ಬೇಗ ಲಗ್ಗೆ ಹಾಕಿದ್ದೆವು. ಸರ್ವೇ ಸಾಮಾನ್ಯವಾದ ಪ್ರಶ್ನೆಯಾದ ಅವನ ಮೊದಲ ಪ್ರಶ್ನೆ "ಯಾರಾದ್ರೂ ಸಿಕ್ಕಿದ್ರೇನೋ?"

ನನಗೆ ಸಿಕ್ಕಿದ್ದೇ ಚಾನ್ಸು "ಏನೋ ಆಗಿದೆ ಅವನಿಗೆ? ಈ-ಮೈಲ್’ಗೆ ಉತ್ತರ ಇಲ್ಲ. ಫೋನ್ ನಂಬರ್’ಅಂತೂ ಬಿಡು, ಕೊಟ್ಟೇ ಇಲ್ಲ. ೨೦೧೦’ರಲ್ಲಿ ಸಿಕ್ಕಿದ್ದೇ ದೊಡ್ಡ ವಿಷಯ ನೋಡು. ಅದಾದ ಮೇಲೆ ಅಡ್ರೆಸ್’ಗೆ ಇಲ್ಲ ಪಾಪಿ. ಮುಂದಿನ ಸಾರಿ ಬಂದಾಗ ಸೀದ ಅವನ ಮುನೆಗೇ ನುಗ್ಗಿ ಕೇಳಬೇಕು" ಅಂತ ಬಡಬಡಾಯಿಸಿದೆ.

ಮರು ಮೆಸೇಜ್ ಇಲ್ಲವೇ ಇಲ್ಲ ಎರಡನೇ ಶ್ರೀ’ಯಿಂದ. ಕೊಂಚ ಹೊತ್ತಾದ ಮೇಲೆ ಟೈಪಿಸಿದ "ನಿನಗೆ ವಿಷಯ ಗೊತ್ತಿಲ್ವಾ?" ... ನಿರ್ಜೀವ ಅಕ್ಷರಗಳಲ್ಲೇ ಏನೋ ಕಂಪನವಿದೆ ಎನ್ನಿಸಿತು. ಅವನಾಡಿದ್ದ ಮೂರೇ ಪದಗಳಾದರೂ, ಅವನು ಟೈಪಿಸಲು ತೆಗೆದುಕೊಂಡ ಅವಧಿ ಮತ್ತು ಏನನ್ನೋ ಹೇಳ ಹೊರಟಿದ್ದಾನೆ ಎನ್ನೋದು ಖಚಿತವಾಯ್ತು. ನಾನು "ಇಲ್ಲ" ಎಂದೆ ... 

"ಶ್ರೀ ಹೋಗಿಬಿಟ್ಟ ಕಣೋ" ........

ಮನಸ್ಸು ಮೂಕಾಗಿತ್ತು ... ಅಕ್ಷರ ಟೈಪಿಸಲು ಬೆರಳುಗಳು ಮುಷ್ಕರ ಹೂಡಿತ್ತು ... ಒಮ್ಮೆಲೆ ಎಲ್ಲೆಡೆ ಶೂನ್ಯ ಆವರಿಸಿತ್ತು. ಮೆಸೇಜ್ ಮಾಡಿಕೊಂಡೇ ಕುಡಿಯುತ್ತಿದ್ದ ಕಾಫಿ ಈಗ ಬೇಡವಾಗಿತ್ತು. ಈವರೆಗೂ ನಾನ್ಯಾರನ್ನೂ ಕಳೆದುಕೊಂಡಿಲ್ಲ ಅನ್ನೋ ವಿಷಯವಲ್ಲ. ಅಪ್ಪ-ಅಮ್ಮನನ್ನೇ ಕಳೆದುಕೊಂಡ ದುರ್ದೈವಿ ನಾನು. ಆದರೆ ಹೋದವರೆಲ್ಲ ಹಿರಿಯರು, ಬದುಕು ಕಂಡವರು, ಏನೋ ಖಾಯಿಲೆಯಿಂದ ನರಳುತ್ತಿದ್ದವರೋ ಆಗಿದ್ದವರು. ಆದರೆ ಈಗ ಕೇಳಿದ ಸುದ್ದಿ ನನ್ನ ಸ್ನೇಹಿತ. ಮೊದಲ ಬಾರಿಗೆ ಸ್ನೇಹಿತನನ್ನು ಕಳೆದುಕೊಳ್ಳುತ್ತಿರುವುದು.

ಸಾವರಿಸಿಕೊಂಡು "ಏನಾಯ್ತು" ಅಂತ ಕೇಳಲಷ್ಟೇ ಆಗಿದ್ದು ... 

ಅವನೆಂದಂತೆ, ಕರಾಳ ಕ್ಯಾನ್ಸರ್’ಗೆ ಮತ್ತೊಂದು ಬಲಿ ... ೨೦೧೧’ರಲ್ಲಿ ಕ್ಯಾನ್ಸರ್ ಅವನನ್ನು ಇಹಲೋಕದಿಂದ ಒಯ್ದು ಪರಲೋಕಕ್ಕೆ ಬಿಟ್ಟು ತನ್ನ ಮುಂದಿನ ಬೇಟೆಗೆ ಹೊರಟಿತ್ತಂತೆ. ತಂಪು ಚಂದ್ರಮ ಅಮಾವಾಸ್ಯೆ ರಾತ್ರಿ ರಜೆ ಹಾಕಬಹುದು. ಉರಿಯೋ ಸೂರ್ಯನ ಬೆಳಕು ಗ್ರಹಣದಿಂದಾಗಿ ಬೆಳಕ ಪಸರಿಸದೆ ಇರಬಹುದು. ಆದರೆ ಭೀಕರ ಕಾಯಿಲೆಯೆ ಮನುಷ್ಯ ಬೇಟೆ ನಿರಂತರ. 

ನಾನು ಭೇಟಿ ಮಾಡಿದ ಒಂದೇ ವರುಷದಲ್ಲಿ ನಮ್ಮನ್ನಗಲಿದ್ದ. ಅಲ್ಲಾ, ಅಂದು ಕಂಡಾಗ ಏನೊಂದೂ ಸುಳಿವು ಕಾಣಲಿಲ್ಲವಲ್ಲ? ನನ್ನ ಮರುಳು ಬುದ್ದಿಗೆ ಏನ ಹೇಳಲಿ? ಹೋಗುವವರ ಮುಖದಲ್ಲಿ ಚಿನ್ಹೆ ಕಂಡಿದ್ದರೆ ಈ ಜಗತ್ತು ಹೀಗಿರುತ್ತಿರಲಿಲ್ಲ ಅಲ್ಲವೇ? 

ಶ್ರೀ ಎರಡು ವರ್ಷಗಳ ಹಿಂದೆ ನಮ್ಮನ್ನಗಲಿ ದೂರವಾಗಿದ್ದ. ತನ್ನ ಆರು ವರ್ಷದ ಹೆಣ್ಣು ಮಗಳನ್ನು ಬಿಟ್ಟು ಹೋಗಿದ್ದ. ಒಂದು ಕೊಂಡಿ ಕಳಚಿಕೊಂಡು ಹೋಗಿ ನಮ್ಮನ್ನು ’ಶ್ರೀ ಶ್ರೀ’ ಮಾಡಿ ಹೋಗಿದ್ದ.

ನಮ್ಮ ಸ್ನೇಹಕ್ಕೆ ನಿನಗೆ ನನ್ನ ಅಕ್ಷರ ನಮನ. 

 

 

Comments

Submitted by sathishnasa Thu, 12/12/2013 - 21:04

>>ಹೋಗುವವರ ಮುಖದಲ್ಲಿ ಚಿನ್ಹೆ ಕಂಡಿದ್ದರೆ ಈ ಜಗತ್ತು ಹೀಗಿರುತ್ತಿರಲಿಲ್ಲ ಅಲ್ಲವೇ? << ನಿಜ ಶ್ರೀನಾಥ್ ರವರೆ . ಹಾಸ್ಯ ಲೇಖನವಿರಬೇಕು ಎಂದು ತಿಳಿದಿದ್ದೆ ಆದರೆ ................ ನಿಮ್ಮ ಸ್ನೇಹಿತನ ಅಗಲಿಕೆ ಮನಸ್ಸಿಗೆ ಬೇಸರವಾಯಿತು............ಸತೀಶ್

Submitted by bhalle Fri, 12/13/2013 - 08:06

In reply to by sathishnasa

ಧನ್ಯವಾದಗಳು ಸತೀಶ್ ... ಈ ವಿಷಯ ತಿಳಿದೇ ಹದಿನೈದು ದಿನದ ಮೇಲೆ ಆಯ್ತು. ಮನದ ಮೂಲೆಯಲ್ಲಿ ಹುದುಗಿದ್ದ ಭಾವನೆಗಳು ಮೇಲಿಂದ ಮೇಲೆ ಮನಸ್ಸಿಗೆ ಬಹಳ ಘಾಸಿ ಉಂಟುಮಾಡಿತ್ತು. ಅಕ್ಷರ ನಮನ ನೀಡಿದ ಮೇಲೆ ಏನೋ ಒಂದು ರೀತಿ ಸಮಾಧಾನ ಈಗ ...