ಹಕ್ಕಿಗೂಡು ಒಂದೂ...
ಪಾರಿವಾಳ ಜೋಡಿಯೊಂದು ನಮ್ಮ ಬಾಲ್ಕನಿಗೆ ಆಗಾಗ ಭೇಟಿ ಕೊಡುತ್ತಿತ್ತು. "ಊಂ..ಊಂ...ಊಂ..." ಎಂದು ಅವು "ರೂಂ" ಕಟ್ಟಲು ಅನುಮತಿ ಕೇಳುತ್ತಿವೆ ಎಂದು ಆಗ ಗೊತ್ತಾಗಲಿಲ್ಲ. ಕುಂಡದಲ್ಲಿರುವ ಗಿಡಗಳನ್ನೆಲ್ಲಾ ಅವು ಎಳೆಯುವುದು ನೋಡಿದಾಗ, ಕಿರಿಕಿರಿ ಅನಿಸಿ, ಅವುಗಳನ್ನು ಓಡಿಸಿ, ಬಾಲ್ಕನಿ ಕಿಟಕಿಗಳನ್ನು ಮುಚ್ಚುತ್ತಿದ್ದೆವು.
ಒಂದು ದಿನ ಟೆರೇಸ್‌ನಿಂದ ನೋಡುವಾಗ ಆ ಜೋಡಿ ಪಕ್ಕದ ಫ್ಲಾಟ್‌ನ ಒಂದು ಅಡ್ಡಗೋಡೆಯ ಮೇಲೆ, (ನೆಲದಿಂದ ಅಂದಾಜು ೪೦ ಅಡಿ ಎತ್ತರದಲ್ಲಿ) ಗೂಡು ಕಟ್ಟುತ್ತಿತ್ತು. ಗಂಡು ಹಕ್ಕಿ ಸುತ್ತಲೂ ಹುಡುಕಿ ಹುಲ್ಲುಕಡ್ಡಿಗಳನ್ನು ಹೆಕ್ಕಿ ತಂದು ಕೊಡುತ್ತಿತ್ತು-ಹೆಣ್ಣು ಗೂಡು ಕಟ್ಟುತ್ತಿತ್ತು. ಪಾಪ..ನಮ್ಮ ಬಾಲ್ಕನಿಯಲ್ಲೇ ಅವಕ್ಕೆ ಗೂಡು ಕಟ್ಟಲು ಬಿಡಬಹುದಿತ್ತು. ಆದರೆ ನಾವು ಎಲ್ಲಾದರೂ ಹೋಗುವಾಗ, ಕಿಟಕಿಗಳನ್ನು ಮುಚ್ಚಿದರೆ, ಅವುಗಳ ಓಡಾಟಕ್ಕೆ ತೊಂದರೆಯಾಗುತ್ತಿತ್ತು ಅಂತ ಸಮಾಧಾನ ಮಾಡಿಕೊಂಡೆವು.
ಈಗ ಗೂಡಿರುವ ಸ್ಥಳದಲ್ಲಿ ಗಾಳಿ ಮಳೆಯ ಭಯವಿಲ್ಲ. ಬೆಕ್ಕು ಹದ್ದುಗಳ ಕಾಟವೂ ಇಲ್ಲ. ಫ್ಲಾಟ್‌ನ ಮಕ್ಕಳು..!?-ಸ್ಕೂಲ್ ಮುಗಿದು ಬಂದ ಕೂಡಲೇ ಟ್ಯೂಷನ್, ನಂತರ ಅಪ್ಪನ ಮೊಬೈಲಲ್ಲಿ ಆಟವಾಡುವ ಮಕ್ಕಳು ಇದನ್ನೆಲ್ಲಾ ಗಮನಿಸುವ ಚಾನ್ಸೇ ಇಲ್ಲ. :)
ಎರಡು ಮೊಟ್ಟೆ ಇಟ್ಟ ತಾಯಿ ಹಕ್ಕಿ ಕಾವು ಕೊಡುತ್ತಾ ಸ್ಥಳಬಿಟ್ಟು ಕದಲುತ್ತಲೇ ಇರಲಿಲ್ಲ ಅಂತ ತಿಳಿದಿದ್ದೆವು. ನಾವು ನೋಡುತ್ತಿದ್ದ ಹಾಗೇ ಗಂಡು ಹಕ್ಕಿ ಬಂದು,ಹೆಣ್ಣಿಗೆ ಏನೋ ಮೆಸೇಜ್ ಹೇಳಿ, ಅದನ್ನು ಕಳುಹಿಸಿ, ತಾನೂ ಕಾವು ಕೊಡಲು ಕುಳಿತಿತು. ಹೀಗೇ ದಿನವೂ ಶಿಫ್ಟ್ ಪ್ರಕಾರ ಅವು ಕಾವು ಕೊಡುತ್ತಲಿದ್ದವು.
ಅಂದಾಜು ಎರಡು ವಾರದ ನಂತರ ಮೊಟ್ಟೆಯೊಡೆದು ಮರಿಯಾಯಿತು. (ಹುಟ್ಟಿದಾಗ ಹಳದಿ ಬಣ್ಣ ಇದ್ದು, ದಿನಗಳೆದಂತೆ ಬ್ರೌನ್, ದೊಡ್ಡದಾಗುತ್ತಾ ತಾಯಿಯ ಬಣ್ಣ ಬರುವುದು) ಮರಿಗಳಾದಾಗಲೂ ಹಕ್ಕಿಗಳ ಶಿಫ್ಟ್ ಕೆಲಸ ಮುಂದುವರೆದೇ ಇತ್ತು. ದಿನ ಕಳೆದಂತೆ ಮನೆಯೊಳಗಿದ್ದೇ ನಾವು, ಮರಿಗಳ ಚಿಲಿಪಿಲಿ ಸ್ವರದಿಂದಲೇ-ಹಕ್ಕಿಗಳು ಬಂದು ಹೋಗುವುದು, ಆಹಾರ ಕೊಡುವುದು ಎಲ್ಲಾ ಅಂದಾಜು ಮಾಡುವಷ್ಟು ಎಕ್ಸ್‌ಪರ್ಟ್ ಆಗಿದ್ದೆವು. ಮರಿಗಳು ಎಲ್ಲಿ ಕೆಳಗೆ ಬೀಳುವವೋ ಎಂದು ತಾಯಿ ಹಕ್ಕಿಗಿಂತ ಜಾಸ್ತಿ ಟೆನ್ಷನ್ ನಮಗೇ ಇತ್ತು. ಸ್ವಲ್ಪ ಬೇರೆ ಸ್ವರ ಕೇಳಿದ ಕೂಡಲೇ ಓಡಿ ಹೋಗಿ ನೋಡುತ್ತಿದ್ದೆವು.
ಮರಿಹಕ್ಕಿಗಳು ಒಂದೆರಡು ವಾರದಲ್ಲೇ ಬೆಳೆದು ಹತ್ತಿರ ಹತ್ತಿರ ತಾಯಿ ಹಕ್ಕಿಯ ಗಾತ್ರದವೇ ಆದವು. ಮರಿಗಳಿಗೆ ಹಾರುವುದನ್ನು ತಾಯಿ ಹಕ್ಕಿ ಹೇಗೆ ಕಲಿಸುವುದು ಎಂಬ ಕುತೂಹಲ ನಮಗಿತ್ತು. ಒಂದು ದಿನ....
ಹಕ್ಕಿ ಮರಿಗಳು ಜೋರಾಗಿ ಕಿರುಚುವುದು ಕೇಳಿಸಿತು. ಓಡಿ ಹೋಗಿ ನೋಡಿದಾಗ... ಆಶ್ಚರ್ಯ! ಪ್ರೀತಿಯಿಂದ ಮರಿಗಳಿಗೆ ಬಾಯಿತುತ್ತು ನೀಡುತ್ತಿದ್ದ ತಂದೆ-ತಾಯಿ ಹಕ್ಕಿಗಳು ಆ ದಿನ ಮರಿಗಳನ್ನು ಕುಕ್ಕುತ್ತಿದ್ದವು. ಎರಡೂ ಮರಿಗಳು ನಡುಗುತ್ತಾ ಗೋಡೆಗೆ ಒತ್ತಿ ಕುಳಿತು ಅಳುತ್ತಿದ್ದವು. " ಆ ಮರಿಗಳಿಗೆ ಹಾರಲು ಒತ್ತಾಯಿಸುತ್ತಿರಬಹುದು" ಎಂದು ನನ್ನ ಎಕ್ಸ್‌ಪರ್ಟ್ ಒಪೀನಿಯನ್ ಕೊಟ್ಟೆನು. ಆದರೆ ಆದ್ದದ್ದೇ ಬೇರೆ...
ಅವೆರಡೂ ಬೇರೆ ಜೋಡಿ ಪಾರಿವಾಳಗಳು. ಆ ಮರಿಗಳನ್ನು ಓಡಿಸಿ ಗೂಡನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಬಂದಿದ್ದವು. ತಾಯಿಹಕ್ಕಿ ಮರಿಗಳ ರಕ್ಷಣೆಗೆ ಬಂದಾಗ ಅದನ್ನು ಕುಕ್ಕಿ ಓಡಿಸುತ್ತಿದ್ದವು. ಇನ್ನು ಸುಮ್ಮನಿರುವುದು ಸರಿಯಲ್ಲ. ಮರಿಗಳ ರಕ್ಷಣೆಗೆ ನಾನೇ ಆಖಾಡಕ್ಕೆ ಇಳಿಯಬೇಕು ಎಂದಾಲೋಚಿಸಿ (ಭಯಬೀಳಬೇಡಿ, ಆ ಫ್ಲಾಟ್‌ಗೆ ಜಂಪ್ ಮಾಡುವುದಿಲ್ಲ...ನಾನು Krrrish ಅಲ್ಲ ಅಂತ ನನಗೆ ಗೊತ್ತು) ಅಲ್ಲೇ ಒಣಗಲು ಹಾಕಿದ್ದ ದುಪ್ಪಟ್ಟಾ ಒಂದನ್ನು ತೆಗೆದುಕೊಂಡು, ಆ ಹೊಸ ಹಕ್ಕಿಗಳ ಮೇಲೆ ಎಸೆಯುವಂತೆ ಆಕ್ಷನ್ ಮಾಡಿದೆ. ಮರಿಹಕ್ಕಿಗಳು, ತಾಯಿಹಕ್ಕಿಗೆ ನನ್ನ ಪರಿಚಯವಿದ್ದುದರಿಂದ ಸುಮ್ಮನಿದ್ದವು. ಹೊಸಹಕ್ಕಿಗಳು ಹಾರಿ ಹೋದವು. ಹತ್ತೇ ನಿಮಿಷ... ಪುನಃ ಮರಿಗಳ ಕಿರುಚಾಟ-ಟೆರೆಸ್‌ಗೆ ಓಟ- ದುಪ್ಪಟ್ಟಾ... ಹೀಗೇ ಎರಡು ದಿನ ಕದನ ಮುಂದುವರೆಯಿತು. ಗೂಡೆಲ್ಲಾ ಚೆಲ್ಲಾಪಿಲ್ಲಿ... ಮರಿಹಕ್ಕಿಗಳು ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಹಾರುತ್ತಿದ್ದರೂ, ನನ್ನ ಗಮನವೆಲ್ಲಾ ಹೊಸಹಕ್ಕಿ ಜೋಡಿಯನ್ನು ಓಡಿಸುವ ಕಡೆಗೇ ಇತ್ತು.
೩ನೇ ದಿನ ಆ ಹಕ್ಕಿಗಳು ಬರುವುದು ನಿಲ್ಲಿಸಿತು. ಮರಿಹಕ್ಕಿಗಳು ಫ್ಲಾಟ್‌ನಿಂದ ಫ್ಲಾಟ್‌ಗೆ ಹಾರುವಷ್ಟು ಚುರುಕಾಗಿದ್ದವು! ಬಹುಷಃ ಆ ಹಕ್ಕಿ ಜೋಡಿ, ಮರಿಹಕ್ಕಿಗಳಿಗೆ ಹಾರುವುದನ್ನು ಕಲಿಸಿಕೊಡಲು, ತಂದೆತಾಯಿ ಹಕ್ಕಿಗಳೇ ಕರೆಸಿದ "ಟೀಚರ್ ಹಕ್ಕಿ"ಗಳಿರಬಹುದೇ? ನಾನು ಸುಮ್ಮನೆ ಮಧ್ಯ ಪ್ರವೇಶಿಸಿ ಮರಿಹಕ್ಕಿಗಳ ಕಲಿಕೆಗೆ ಅಡ್ಡಬಂದೆನೇ..?
ಹಾರಲು ಕಲಿತಮೇಲೆಯೂ ಮರಿಹಕ್ಕಿಗಳು ಓಡಾಡಿ ಸಂಜೆ ಬಂದು ಗೂಡಿಲ್ಲದ ಗೂಡಿನ ಸ್ಥಳದಲ್ಲಿ ತಂದೆ-ತಾಯಿ ಹಕ್ಕಿಗಳ ಜತೆ ಒಟ್ಟಾಗಿ ಇರುತ್ತಿದ್ದವು. ೨-೩ ದಿನ ಕಳೆದ ಮೇಲೆ ಮರಿಗಳು ಸಂಜೆಯಾದರೂ ಕಾಣಿಸಲಿಲ್ಲ.. ಪಾಪ..ತಾಯಿಹಕ್ಕಿ "ಊಂ..ಊಂ..." ಎನ್ನುತ್ತಾ ಕರೆಯುತ್ತಲಿತ್ತು. ರೆಕ್ಕೆ ಬಲಿತ ಮೇಲೆ ಮರಿಗಳು ತಮ್ಮ ದಾರಿ ತಾವು ನೋಡಿಕೊಂಡಿರಬಹುದು. ಆದರೂ ಅಲ್ಲೆಲ್ಲಾದರೂ ಕಾಣುವವೋ ಎಂದು ಹುಡುಕಾಡಿದೆ. ಇನ್ನೂ ಸ್ವಲ್ಪ ಹೊತ್ತು ಅಲ್ಲಿರುತ್ತಿದ್ದರೆ, ತಾಯಿ ಹಕ್ಕಿಯ ಜತೆ ನಾನೂ "ಊಂ..ಊಂ...." ಅನ್ನುತ್ತಿದ್ದೆನೋ ಏನೋ...
ಜೀವನಾನೇ ಹೀಗೆ.. ಇತ್ನೀಸಿ ಹಂಸೀ..ಇತ್ನೀಸಿ ಖುಶಿ.. ಎಂದು ಸಮಾಧಾನ ಹೇಳಿಕೊಂಡು ಹಿಂದೆ ಬಂದೆನು.
ಕೆಲದಿನ ಏನೋ ಕಳಕೊಂಡ ಭಾವನೆ.. ಬಾಲ್ಕನಿಯಲ್ಲಿ ಏನೋ ಸದ್ದಾಯಿತೆಂದು ಹೋಗಿ ನೋಡಿದರೆ, ಅದೇ ಜೋಡಿ ಪಾರಿವಾಳಗಳು "ಊಂ..ಊಂ..." ಅನ್ನುತ್ತಿದ್ದವು! "ರೂಮ್ ಇಲ್ಲ, ಏನೂ ಇಲ್ಲ, ನಡೀರಿ.." ಎನ್ನಲು ಮನಸ್ಸಾಗಲಿಲ್ಲ. ಹಿಂದೆ ಬಂದೆ..
ಕಸಬರಿಕೆಯ ಕಡ್ಡಿಗಳ ತುದಿಯನ್ನು ಸ್ವಲ್ಪ ತೆಗೆದುಕೊಂಡು ಹೋಗಿ ಬಾಲ್ಕನಿಯಲ್ಲಿ ಇಟ್ಟೆನು. ಪಾರಿವಾಳಗಳು ಖುಷಿಯಲ್ಲಿ ಒಂದೊಂದೇ ಕಡ್ಡಿಯನ್ನು ತೆಗೆದುಕೊಂಡು ಹೋಗಿ ಗೂಡು ಕಟ್ಟಲು ಪ್ರಾರಂಭಿಸಿತು.
Comments
ಉ: ಹಕ್ಕಿಗೂಡು ಒಂದೂ...
ಗಣೇಶ್ ಜಿ, ಹಕ್ಕಿಗಳೆ ಮನುಷ್ಯರಿಗಿಂತ ವಾಸಿಯೆಂದು ಕಾಣುತ್ತೆ. ಸಹಜೀವನಕ್ಕೆ ಚೆನ್ನಾಗಿ ಹೊಂದಿಕೊಂಡು ಹೋಗುವ ಕುರುಹು ತೋರಿಸುತ್ತಿವೆ - ಮರದ ಬದಲು ಫ್ಲ್ಯಾಟಿನಲ್ಲೆ ಗೂಡು ಕಟ್ಟುವಷ್ಟರ ಮಟ್ಟಿಗೆ :-)
In reply to ಉ: ಹಕ್ಕಿಗೂಡು ಒಂದೂ... by nageshamysore
ಉ: ಹಕ್ಕಿಗೂಡು ಒಂದೂ...
ನಾಗೇಶರೆ, ಬೆಂಗಳೂರಲ್ಲಿ ಪಾರಿವಾಳಗಳೇ ಕಾಗೆಗಿಂತ ಜಾಸ್ತಿ ಕಾಣ ಸಿಗುತ್ತಿವೆ. ಎಲ್ಲಿ ಬೇಕಿದ್ದರೂ ಗೂಡು ಕಟ್ಟಿ ವಾಸಿಸಬಲ್ಲವು. ಗಜಿಬಿಜಿ ವಾಹನಗಳು ನಿತ್ಯ ಓಡಾಡುವ ಬ್ರಿಡ್ಜ್‌ಗಳ ಎಡೆಯ ಸ್ಥಳದಲ್ಲೂ ಗೂಡು ಕಟ್ಟಿ ವಾಸಿಸುತ್ತಿವೆ. ೩-೪ ತಿಂಗಳಲ್ಲೇ ಪುನಃ ಮೊಟ್ಟೆ ಇಡುವುದು. ಇದಕ್ಕೇ ಲಾಲ್ ಬಾಗ್ ಅಧಿಕಾರಿ, ಪಾರಿವಾಳಗಳ ಸಂಖ್ಯೆ(ಲಾಲ್ ಬಾಗ್‌ನಲ್ಲಿ) ತೀರಾ ಜಾಸ್ತಿಯಾಗಿದೆ, ಬಾಕಿ ಹಕ್ಕಿಗಳ ವಾಸಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿರುವರು.
ಉ: ಹಕ್ಕಿಗೂಡು ಒಂದೂ...
"ದಯೇ ಬೇಕು ಸಕಲ ಜೀವಿಗಳ ಮೇಲೆ" ಎನ್ನುವ ವಚನವನ್ನು ಗಮನಿಸಿದಾಗ ಇಂದಿನ ದಿನಮಾನಗಳಲ್ಲಿ ದಯೇ ಎಂದರೇ ಏನು ? ಏನ್ನುವಂತಾಗಿದೆ ಸದ್ಯದ ದಿನಗಳಲ್ಲಿ ಪ್ರಕೃತಿಯ ಮೇಲೆ ಮಾನವನ ನಿರಂತರ ದಾಳಿಯಿಂದ ಅನೇಕ ಪ್ರಾಣಿ ಪಕ್ಷಿಗಳಂತ ಜೀವಿಗಳು ಭೂಮಿಯಿಂದ ಕಣ್ಮರೆಯಾಗಿವೆ ಆದಗ್ಯೂ ಗಣೇಶರವರೇ.. ನಿಮ್ಮಂತ ಕಾಂಕ್ರೀಟ ಕಾಡಿನಲ್ಲಿ ವಾಸಿಸುವವರು ಪ್ರಾಣಿ ಪಕ್ಷಿಗಳ ದಯಾಜೀವಿಗಳು ಹೆಚ್ಚಾಗಲಿ ಎನ್ನುವುದು ನನ್ನಾಸೆ 'ದನ್ಯವಾದಗಳು ಒಂದು ಪಕ್ಷಿಯ ಬಗ್ಗೆ ಇಷ್ಟೊಂದು ಗಮನ ಹರಿಸಿದ ನಿಮ್ಮ ಪರಿಸರ ಪ್ರೇಮ ಹಾಗೂ ಏಕಾಗ್ರತೆಗೆ'
In reply to ಉ: ಹಕ್ಕಿಗೂಡು ಒಂದೂ... by Amaresh patil
ಉ: ಹಕ್ಕಿಗೂಡು ಒಂದೂ...
ಕ್ಷಮಿಸಿ ಅಮರೇಶ ಪಾಟೀಲರೆ, "ಇತ್ತೀಚಿನ ಪ್ರತಿಕ್ರಿಯೆ" ನೋಡಿ ಪಾರ್ಥರ, ಭಲ್ಲೇಜಿಯ ಪ್ರತಿಕ್ರಿಯೆ ಮಾತ್ರವೆಂದು ಉತ್ತರಿಸಿದ್ದೆ. ಮೊದಲೇ ಬಂದಿದ್ದ ನಿಮ್ಮ ಪ್ರತಿಕ್ರಿಯೆ ನೋಡಿರಲಿಲ್ಲ.
-"ನಿಮ್ಮಂತ ಕಾಂಕ್ರೀಟ ಕಾಡಿನಲ್ಲಿ ವಾಸಿಸುವವರು...." ಇಲ್ಲಿನವರ ಮನಸ್ಸು ಹೃದಯ ಎಲ್ಲವೂ ಕಾಂಕ್ರಿಟ್ದೇ ಆಗಿದೆ. ಅಪ್ಪ-ಅಮ್ಮನಿಗೇ ಪ್ರೀತಿ ತೋರಿಕೆಗಾದರೂ ತೋರಿಸುವುದಿಲ್ಲ. ಇನ್ನು ಪ್ರಾಣಿ ಪಕ್ಷಿಗಳ ಬಗ್ಗೆ...
ತಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಉ: ಹಕ್ಕಿಗೂಡು ಒಂದೂ...
ಪಾರಿವಾಳಗಳ ಲೋಕದಲ್ಲೂ real estate mafia ಇದೆಯೋ ಅನ್ನಿಸಿತು ಒಮ್ಮೆ :-)
In reply to ಉ: ಹಕ್ಕಿಗೂಡು ಒಂದೂ... by bhalle
ಉ: ಹಕ್ಕಿಗೂಡು ಒಂದೂ...
ಗಣೇಶರೆ ಲೇಖನ ಚೆನ್ನಾಗಿದೆ, ಬಲ್ಲೆಯವರು ಹೇಳಿದಂತೆ ರಿಯಲ್ ಎಷ್ಟೇಟ್ ಮಾಪಿಯ ಹಕ್ಕಿ ಹಾಗು ಪ್ರಾಣಿಗಳಲ್ಲಿ ಸಾಮಾನ್ಯ. ಆದರೆ ಅಲ್ಲಿ ಹಣದ ಪ್ರಶ್ನೆ ಸೇರುವುದು ಮನುಷ್ಯನೆಂಬ ಪ್ರಾಣಿಯಲ್ಲಿ ಮಾತ್ರ.
In reply to ಉ: ಹಕ್ಕಿಗೂಡು ಒಂದೂ... by bhalle
ಉ: ಹಕ್ಕಿಗೂಡು ಒಂದೂ...
ತಲವಾರ್ ಮಚ್ಚು ಇರಲಿಲ್ಲ ಎನ್ನುವುದು ಬಿಟ್ಟರೆ ಆದಿನ ಹಕ್ಕಿಗಳ ಹೋರಾಟ ಯಾವ ಗ್ಯಾಂಗ್ ವಾರ್‌ಗೂ ಕಮ್ಮಿಯಿರಲಿಲ್ಲ. ಎಲ್ಲೂ ಬೇಕಾದರೂ ಗೂಡು ಕಟ್ಟಬಹುದಿತ್ತು-ಅದೇ ಸ್ಥಳಕ್ಕೆ ಬೇಕಾಗಿ ಕದನ ನೋಡಿದಾಗ ನಿಮ್ಮ ಅನಿಸಿಕೆ ನನಗೂ ಬಂದಿತ್ತು. ಧನ್ಯವಾದ ಭಲ್ಲೇಜಿ ಮತ್ತು ಪಾರ್ಥಸಾರಥಿಯವರೆ.
In reply to ಉ: ಹಕ್ಕಿಗೂಡು ಒಂದೂ... by ಗಣೇಶ
ಉ: ಹಕ್ಕಿಗೂಡು ಒಂದೂ...
ಗಣೇಶ್ ಅಣ್ಣ ಅವರನ್ನು ಸಂಧಿಸೋದು ಈಗ ಅಸ್ಟು ಕಷ್ಟದ ಕೆಲಸ ಅಲ್ಲ ...!!
ಅವರೇ -ಅವರೆಲ್ಲಿಹರು ಎಂದು ಸುಳಿವು ಕೊಟ್ಟರು. ಇದಕ್ಕೆ ಆ ಲೇಖನ ಸೇರಿದ ದಿನವೇ ಪ್ರತಿಕ್ರಿಯಿಸಬೇಕಿತ್ತು -ಆದರೆ ಲಾಗ್ ಇನ್ ಆಗಲು ಆಗಲಿಲ್ಲ , ಆ ಮಧ್ಯೆ ಉಡುಪಿಗೆ ಹೋಗಿ ಬಂದಿದ್ದು ಆಯ್ತು. ಪ್ರತಿಕ್ರಿಯೆಗೆ ಸಮಯವೂ ಸಿಕ್ಕಿತು.
ಪಾರಿವಾಳಗಳು ಗೂಡು ಕಟ್ಟಿದ್ದು ಅದರ ಸಾಲು ಸಾಲು ಚಿತ್ರಗಳನ್ನು ಹಾಕಿದ ಅವರೇ ಅಲ್ಲಿ ಸುಳಿವು ಬಿಟ್ಟು ಕೊಟ್ಟಿರುವರು ..
ದಿನ ನಿತ್ಯ ನಾ ಆ ಅಪಾರ್ಟ್ ಮೆಂಟ್ ಮುಂದೆಯೇ ಅಡ್ಡಾಡೋದು ... !
ಹಾಗೆಯೇ ಕಣ್ಣೆತ್ತಿ ಅದರತ್ತ ನೋಡೋದು .. ಈ ಚಿತ್ರಗಳನ್ನು ಗಮನಿಸಿದಾಗ -ಈ ಬಿಲ್ಡಿಂಗ್ ಎಲ್ಲೋ ನೋಡಿದೆ ಅನಿಸಿತು. ಇದು ಅದೇನೇ ...!!
ಪ್ರೆ ......
ವೆ ..... ನ್
...ಕ್
......!!
ಈಗ್ಗೆ ಸುಮಾರು ವರ್ಷದ ಹಿಂದೆ ಗಣೇಶ್ ಅಣ್ಣ ಅವರು ಮನೆ ಬದಲಿಸಿದಾಗ ಒಂದು ಸುಳಿವು ಕೊಟ್ಟಿದ್ದರು -ಆಮೇಲೆ ಅಲ್ಲಲ್ಲಿ ಕೆಲವು - ಆದರೆ ಇದು ಪಕ್ಕಾ ವಿಳಾಸ ಪುರಾವೆ ..!!
ಇನ್ನು ಈ ಲೇಖನದ ವಿಚಾರಕ್ಕೆ ಬಂದರೆ ....
ನನಗೆ ಪಾರಿವಾಳ ಮತ್ತು ಗಿಳಿಗಳ ಹಿಡಿವ -ಸಾಕುವ ಹುಚ್ಚು ಹತ್ತಿದ್ದು ಬಹುಶ - ಆ ಮೈನೆ ಪ್ಯಾರ್ ಕಿಯ ಚಿತ್ರದ ಪಾರಿವಾಳದ ಪ್ರಸಂಗದಿಂದ ಅನಿಸುತ್ತಿದೆ .. !!
ನಮ್ಮೂರಲ್ಲಿ ಪಾರಿವಾಳ ಇರಲಿಲ್ಲ , ಆದರೆ ಸರಕಾರದವರು ಸಾರಾಯಿಗೆ ಹರಾಜಿಗೆ ಕರೆದಾಗ ಪಕ್ಕದ ಊರಿನ ಒಬ್ಬ -ಹರಾಜಿನಲ್ಲಿ ಗೆದ್ದು ತನ್ನ ಜೊತೆಗೆ ಒಂದು ಜೋಡಿ ಪಾರಿವಾಳ ತಂದು ನಮ್ಮೂರು ಸೇರಿದ ..!!
ಆಮೇಲೆ ಜೋಡಿ ಪಾರಿವಾಳಗಳು ಸಂಸಾರ ಹೂಡಿ , ೨-೪-೬-೧೬ ಆಗಿ ನಮ್ಮೂರಲ್ಲಿ ಎಲ್ಲಿ ನೋಡಿದರಲ್ಲಿ ಪಾರಿವಾಳಗಳೇ ಆದವು .. ಅವುಗಳಲ್ಲಿ ಕೆಲವು ನಮ್ಮೂರಿನ ಗೋದಾಮಿನ ಕಿಟಕಿಯಲ್ಲಿ (ಅದು ಮೇಲಿಂದಲೂ -ಕೆಳಗಿಂದಲೂ ಕೈಗೆ ಎಟುಕದ ಜಾಗ - ಏಣಿ ಉಪಯೋಗಿಸದ ಹೊರತು ) ಸಂಸಾರ ಹೂಡಿ ಮರಿ ಹಾಕಿದವು , ಅದು ನಮಗೂ ಗೊತ್ತಾಯ್ತು , ಪಾರಿವಾಳ ಹಿಡಿಯಲು ಹೋಗಿ ವ್ಯರ್ಥ ಪ್ರಯತ್ನ ಆಗಿದ್ದ ನಮ್ಮ ಯತ್ನಕ್ಕೆ ಇದ್ಯಾಕೋ ಕೈಗೂಡು ಅನಿಸಿತು ..!!
ಗೋದಾಮು ಹತ್ತಿ ಮೆಲ್ಲಗೆ ಕೆಳಗೆ ಅಂಚು ಹಿಡಿದು ಇಳಿದೆ , ಕೆಳಗಡೆ ನನ್ನ ಸ್ನೇಹಿತ ಒಂದು ಪರದೆ ಹಿಡಿದು ನಿಂತಿದ್ದ , ನನ್ನನು ನೋಡಿ ಪಾರಿವಾಳಗಳು ಓಡಿ ಹೋದವು ,ಆದರೆ ೩ ಮರಿಗಳು ಗೂಡಲ್ಲಿ ಹೊಯ್ದಾಡುತ್ತಿದ್ದವು - ಬಾಯಿ ತೆರೆದು ನೋಡುತ್ತಿದ್ದವು , ಇನ್ನೂ ಅವುಗಳಿಗೆ ರೆಕ್ಕೆ ಬಂದಿರಲಿಲ್ಲ ಹಾಗೆಯೇ ಕಣ್ಣು ಸಹಾ ತೆರೆದಿರಲಿಲ್ಲ , ಅವುಗಳ ಪೋಷಕರ ವಿರೋಧ ಲೆಕ್ಕಿಸದೆ ನಾನು ೩ ಮರಿ ಎತ್ತಿ ಸ್ನೇಹಿತನತ್ತ ಎಸೆದೆ .
ಪುಣ್ಯಕ್ಕೆ ಏನೂ ಆಗಲಿಲ್ಲ , ಮೆಲ್ಲಗೆ ಮೇಲೆ ಹತ್ತಲು ಹೋದರೆ -ಆಗುತ್ತಿಲ್ಲ, ಕೆಳಗೂ ಜೋಗಿಯೋ ಹಾಗಿಲ್ಲ - ಮೇಲಕ್ಕೂ ಹತ್ತೊಲೂ ಆಗ್ತಿಲ್ಲ, ಏನು ಮಾಡೋದು? ಭಯ ಆಯ್ತು , ಆಮೇಲೆ ಹೇಗೋ ಮೆಲ್ಲಗೆ ಮೇಲೆ ಹತ್ತಿ ದೀರ್ಘ ಉಸಿರು ಬಿಟ್ಟೆ .
ಮರಿಗಳನ್ನು ಮನೆಗೆ ಹೊಯ್ದು , ಸಗಣಿ ಸಾರಿಸಿದ ನೆಲದ ಮೇಲೆ ಒಂದು ಆಯತಾಕಾರದ ರಟ್ಟು ಗೂಡು ಮಾಡಿ , ಅವುಗಳ ಬಾಯಲಿ ಬೇಯಿಸಿದ ಅನ್ನದ ಅಗುಳು -ಹಾಕಿದೆ ತಿಂದವು , ೨ ದಿನ ಹೆಂಗೋ ಹೋಯ್ತು , ೩ ನೆ ದಿನ ಶಾಲೆಗೇ ಹೋಗಿ ಬಂದು ನೋಡಿದರೆ ...... ..!!
ಅವುಗಳಿಗೆ ಪುಟ್ಟ ಕೆಂಪಿರುವೆಗಳು ಮೆತ್ತಿಕೊಂಡು ಅರ್ದರ್ಧ ತಿಂದು ಬಿಟ್ಟಿವೆ ..
ಪಾರಿವಾಳ ಮರಿ ಇಲ್ಲ - ಜೊತೆಗೆ ಅವುಗಳನ್ನು ಕೊಂದ ಪಾಪ ಬೇರೆ ..!!
ಆಮೇಲೆ ಪಾರಿವಾಳಗಳ ಗೊಡವೆಗೆ ಹೋಗಲಿಲ್ಲ , ನಮ್ಮೂರ ಹನುಮಾನ್ ಟೆಂಪಲ್ ಗೋಡೆಯ ರಂದ್ರದಲ್ಲಿ ಗೂಡು ಮಾಡಿದ ಗಿಳಿಗಳ ಹಿಡಿವ ಯತ್ನವೂ ಆಗಲಿಲ್ಲ ..
ಆಮೇಲೆ ಪಟ್ಟಣಗಳಲ್ಲಿ ಪ್ರಾಣಿ ಪಕ್ಷಿಗಳನ್ನು ಹಿಡಿದು -ಕಟ್ಟಿ ಹಾಕಿ ಕೊಡಿ ಹಾಕಿದ ಬೋನು ಗಳನ್ನೂ ಮಾರಾಟಕ್ಕೆ ಇಟ್ಟಿರುವುದು ನೋಡಿ -ತೆಗೆದುಕೊಳ್ಳುವ ಮನಸ್ಸಾದರೂ ಅವುಗಳನ್ನು ಕೂಡಿ ಹಾಕುವ ರೀತಿ ಹಿಡಿಸದೆ ಕೊಳ್ಳದೆ ಹೋದೆ ..
ಪಾರಿವಾಳದ್ದು ಬೇಜಾನ್ ಹಿಕ್ಕೆ ಸಮಸ್ಯೆ ,
ಗಿಳಿಗಳದ್ದು - ಅವು ಅರ್ಧ ಮರ್ಧ ತಿಂದು ಉಳಿಸುವ ಹಣ್ಣು -ಹಂಪಲು ಕಸದ ಸಮಸ್ಯೆ ..
ಆದರೂ ಗಿಳಿ - ಪಾರಿವಾಳ-ಅಳಿಲು -ಮೊಲ -ನವಿಲು ಇತ್ಯಾದಿ ಸಾಕುವ ಆಶೆ ಯಾರಿಗೆ ತಾನೇ ಬಾರದೆ ಇರದು?
ಕೆಲವನ್ನು ಸಾಕೋದು ಅಪರಾಧ ..!!
ಗಣೇಶ್ ಅಣ್ಣ ಆವರ ಪಾರಿವಾಳ ಪ್ರಸಂಗದ ಅವುಗಳ ಚಿತ್ರಗಳ ಕಾರಣವಾಗಿ ಅವರೂ ಸಿಕ್ಕರು ..
ದಿನ ನಿತ್ಯ ನಿಮ್ಮ ಆ ಅಪಾರ್ಟ್ ಮೆಂಟ್ ಮೇಲೆ ಹಾರಾಡುವ ಕೂತು ಗುಟುರು ಹಾಕುವ ಪಾರಿವಾಳಗಳ ಕಂಡರೆ ನಂಗೆ ಇಷ್ಟ ..!
ಶುಭವಾಗಲಿ
\।/
In reply to ಉ: ಹಕ್ಕಿಗೂಡು ಒಂದೂ... by venkatb83
ಉ: ಹಕ್ಕಿಗೂಡು ಒಂದೂ...
ಗಣೇಶರು ಏನು ಹೇಳುತ್ತಾರೆ ನೋಡೋಣ , ಸಪ್ತಗಿರಿಯವರು ಹೇಳುತ್ತಿರುವ ಅಪಾರ್ಟ್ ಮೆಂಟಲ್ಲೆ ಗಣೇಶರು ಇದ್ದರೆ ...
ಕಣ್ಣ ಮುಚ್ಚೆ ಕಾಡೆಗೂಡೆ ಆಟದ ಕೊನೆ..ಇಲ್ಲದಿದ್ದರೆ ಮೊದಲಿನಂತೆ ..... :)
In reply to ಉ: ಹಕ್ಕಿಗೂಡು ಒಂದೂ... by venkatb83
ಉ: ಹಕ್ಕಿಗೂಡು ಒಂದೂ...
ಸಪ್ತಗಿರಿವಾಸಿಯವರೆ, ಪಾರಿವಾಳ ಪ್ರಸಂಗ ಚೆನ್ನಾಗಿದೆ.
>>>ಆಮೇಲೆ ಪಟ್ಟಣಗಳಲ್ಲಿ ಪ್ರಾಣಿ ಪಕ್ಷಿಗಳನ್ನು ಹಿಡಿದು -ಕಟ್ಟಿ ಹಾಕಿ ಕೊಡಿ ಹಾಕಿದ ಬೋನು ಗಳನ್ನೂ ಮಾರಾಟಕ್ಕೆ ಇಟ್ಟಿರುವುದು ನೋಡಿ -ತೆಗೆದುಕೊಳ್ಳುವ ಮನಸ್ಸಾದರೂ ಅವುಗಳನ್ನು ಕೂಡಿ ಹಾಕುವ ರೀತಿ ಹಿಡಿಸದೆ ಕೊಳ್ಳದೆ ಹೋದೆ ..
-ನಾನೂ ನಿಮ್ಮ ಹಾಗೆ ಯೋಚನೆ ಮಾಡಿ ಲವ್ ಬರ್ಡ್ಸ್ ಮತ್ತು ಗಿಳಿ ಸಾಕುವಾಗ ಅವುಗಳನ್ನು ನಮ್ಮ ಮನೆಯ ಒಂದು ರೂಮಲ್ಲಿ ಫ್ರೀ ಬಿಟ್ಟಿದ್ದೆ. ಎಲ್ಲರೂ ಹಕ್ಕಿಯನ್ನು ಬಂಧನದಲ್ಲಿಡುವುದು ಹಿಂಸೆ ಅನ್ನುತ್ತಾರಲ್ಲ.. ಆದರೆ ಅವುಗಳಿಗೆ ಗೂಡು ಇದ್ದಾಗಲೇ ಖುಷಿಯಾಗುವುದು. ಎಷ್ಟೇ ಸುತ್ತಾಡಲಿ, ತಿನ್ನಲೂ ಗೂಡಿಂದ ಹೊರಗೇ ಇಟ್ಟರೂ, ಆಗಾಗ ಮತ್ತು ರಾತ್ರಿ ಗೂಡು ಸೇರಲು ಬಯಸುವುವು. ಗೂಡು ಹಿಂಸೆಯೂ ಅಲ್ಲ.ಬಂಧನವೂ ಅಲ್ಲ. ವಾರಕ್ಕೊಮ್ಮೆಯಾದರೂ ಪತ್ನಿಯನ್ನು ಹೊರಗೆ ತಿರುಗಲು ಕರಕೊಂಡು ಹೋಗದವರು, ಪಕ್ಷಿಯ ಬಂಧನದ ಬಗ್ಗೆ ಚಿಂತಿಸುವರು..:)
In reply to ಉ: ಹಕ್ಕಿಗೂಡು ಒಂದೂ... by ಗಣೇಶ
ಉ: ಹಕ್ಕಿಗೂಡು ಒಂದೂ...
" ವಾರಕ್ಕೊಮ್ಮೆಯಾದರೂ ಪತ್ನಿಯನ್ನು ಹೊರಗೆ ತಿರುಗಲು ಕರಕೊಂಡು ಹೋಗದವರು, ಪಕ್ಷಿಯ ಬಂಧನದ ಬಗ್ಗೆ ಚಿಂತಿಸುವರು..:)"
:())))))
ನೋ ಕಾಮೆಂಟ್ಸ್ ..!!
ಕಾರಣ - ನಾವಿನ್ನೂ ಅ ..... !!
ಶುಭವಾಗಲಿ
\|/