೧೮೫. ಲಲಿತಾ ಸಹಸ್ರನಾಮ ೮೫೭ರಿಂದ ೮೬೧ನೇ ನಾಮಗಳ ವಿವರಣೆ

೧೮೫. ಲಲಿತಾ ಸಹಸ್ರನಾಮ ೮೫೭ರಿಂದ ೮೬೧ನೇ ನಾಮಗಳ ವಿವರಣೆ

                                                                                            ಲಲಿತಾ ಸಹಸ್ರನಾಮ ೮೫೭ - ೮೬೧

Gāna-lolupā गान-लोलुपा (857)

೮೫೭. ಗಾನ-ಲೋಲುಪ

           ದೇವಿಯು ಹಾಡುಗಳನ್ನು ಇಷ್ಟಪಡುತ್ತಾಳೆ. ಶ್ಯಾಮಲ ದಂಡಕವು (೪ನೇ ಸ್ತೋತ್ರ), "ಜಯ ಸಂಗೀತ ಪ್ರಿಯೆ", ಎಂದು ಹೇಳುತ್ತದೆ. ಜಯ ಎಂದರೆ ಗೆಲುವು ಆದ್ದರಿಂದ ದೇವಿಯು ತನ್ನ ವಿಜಯವನ್ನು ಹಾಡಿ ಹೊಗಳುವ ಗೀತೆಗಳನ್ನು (ಉದಾ: ದೇವಿ ಮಹಾತ್ಮ್ಯಂ) ಕೇಳಲು ಇಷ್ಟಪಡುತ್ತಾಳೆ ಎಂದು ಹೇಳಬಹುದು. ದೇವಿಗೆ ಇಂಪಾದ ಧ್ವನಿಯಿದೆ ಎಂದು ಸೌಂದರ್ಯ ಲಹರಿಯು (ಶ್ಲೋಕ ೬೬) ಹೇಳುತ್ತದೆ. ಅದರಲ್ಲಿ ಸರಸ್ವತೀ ದೇವಿಯ ವೀಣೆಯ ತಂತಿಗಳಿಂದ ಹೊರಹೊಮ್ಮುವ ಮಧರ ಧ್ವನಿಯು ಲಲಿತಾಂಬಿಕೆಯ ಹೊಗಳಿಕೆಗೆರ್ಹವಾದ ಮೃದು ಸುಶ್ರಾವ್ಯ ಧ್ವನಿಯ ಮುಂದೆ ಏನೂ ಅಲ್ಲ ಎಂದು ಹೇಳಲಾಗಿದೆ.

Kalpanā-rahitā कल्पना-रहिता (858)

೮೫೮. ಕಲ್ಪನಾ-ರಹಿತಾ

           ಕಲ್ಪನೆ ಎಂದರೆ ಆಲೋಚನೆಗಳ ಸಂಯೋಜನೆ ಮತ್ತು ರಹಿತ ಎಂದರೆ ಇಲ್ಲದಿರುವುದು. ದೇವಿಯು ಈ ವಿಧವಾದ ಆಲೋಚನೆಗಳಿಲ್ಲದೆ ಇದ್ದಾಳೆ; ಏಕೆಂದರೆ ಆಕೆಯು ವಾಸ್ತವತೆಯ ಮೂರ್ತ ರೂಪವಾಗಿದ್ದಾಳೆ. ಯಾವಾಗ ಅಂತಿಮ ಸತ್ಯದ ಅರಿವಾಗುವುದೋ ಆಗ ಕಲ್ಪನೆಗಳನ್ನು ರೂಪಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

          ಇನ್ನೊಂದು ವಿಧವಾದ ವಿಶ್ಲೇಷಣೆಯೂ ಇದೆ. ಈ ನಾಮವನ್ನು ಕಲ್ಪ+ನರ+ಹಿತ ಎನ್ನುವುದಾಗಿ ವಿಭಜಿಸುತ್ತಾರೆ. ಕಲ್ಪ ಎಂದರೆ ಮಹಾಪ್ರಳಯ ಅಥವಾ ವಿನಾಶ ಕಾಲ, ನರ ಎಂದರೆ ಮನಷ್ಯರು ಮತ್ತು ಹಿತ ಎಂದರೆ ಒಳಿತು ಅಥವಾ ಸ್ನೇಹಪರತೆ. ಪ್ರಪಂಚದ ಸರ್ವನಾಶದ ಕಾಲದಲ್ಲಿಯೂ ಸಹ, ದೇವಿಯು ತನ್ನ ಉದರದೊಳಗೆ (ಬಹುಶಃ ಹಿರಣ್ಯಗರ್ಭ ಅಥವಾ ಬಂಗಾರದ ಮೊಟ್ಟೆಯೊಳಗೆ), ಧಾರ್ಮಿಕ ಜೀವಿಗಳನ್ನು ಪುನಃ ಸೃಷ್ಟಿಗಾಗಿ ಉಳಿಸಿಕೊಳ್ಳುತ್ತಾಳೆ ಅಂದರೆ ಆಕೆಯು ಕಲ್ಪ ಕಾಲದಲ್ಲಿ ನರರ ಹಿತವನ್ನು ಕಾಯುತ್ತಾಳೆ. ಅಷ್ಟಾವಕ್ರ ಗೀತೆಯು (೨.೨.೫), “ಆಶ್ಚರ್ಯಕರವಾದ ರೀತಿಯಲ್ಲಿ, ಅನಂತವಾದ ನನ್ನದೇ ಸಾಗರದಲ್ಲಿ, ಜೀವ ತರಂಗಗಳು ಉದ್ಭವವಾಗಿ, ಒಂದೆಡೆ ಸೇರಿ, ಆಟವಾಡಿ ಮತ್ತು ಸಹಜವಾಗಿ ಮರೆಯಾಗುತ್ತವೆ" ಎಂದು ಹೇಳುತ್ತದೆ.

ಹಿರಣ್ಯ ಗರ್ಭದ ಕುರಿತಾಗಿ ಇನ್ನಷ್ಟು ವಿವರಗಳು:

          ಪರಬ್ರಹ್ಮವು ತನ್ನ ಪ್ರಥಮ ಸೃಷ್ಟಿಯಾದ ಹಿರಣ್ಯ ಗರ್ಭಕ್ಕೆ ವೇದಗಳನ್ನು ಉಪದೇಶಿಸಿದನು. ಈ ಹಿರಣ್ಯಗರ್ಭವು ಬ್ರಹ್ಮಾಂಡದ ಆತ್ಮವಾಗಿದ್ದು ಅದರ ಪರಿಮಿತಿಯೆಂದರೆ ಅದರ ಜೊತೆಯಲ್ಲಿರುವ ಬ್ರಹ್ಮಾಂಡದ ಮನಸ್ಸು. ಒಂದು ವೇಳೆ ಒಬ್ಬ ವ್ಯಕ್ತಿಯ ನಿರ್ಗುಣ ಬ್ರಹ್ಮವನ್ನು ಅರಿಯಲಾಗದಿದ್ದರೆ ಮತ್ತು ಅವನು ಕೇವಲ ಸಗುಣ ಬ್ರಹ್ಮವನ್ನು ಮಾತ್ರವೇ ಅರಿತುಕೊಂಡರೆ ಅವನು ಮರಣದ ನಂತರ ಬ್ರಹ್ಮಲೋಕವನ್ನು ಸೇರುತ್ತಾನೆ; ಅದು ಬ್ರಹ್ಮಾಂಡದಲ್ಲಿನ ಅತ್ಯುನ್ನತ ಸ್ತರವಾಗಿದೆ. ಅಲ್ಲಿಂದ ಅವನು ಈ ಮರ್ತ್ಯಲೋಕಕ್ಕೆ ಹಿಂದಿರುಗುವುದಿಲ್ಲ ಆದರೆ ಅವನು ಬ್ರಹ್ಮಲೋಕದಲ್ಲಿ ಅನಂತಕಾಲದವರೆಗೆ ಇದ್ದು ಅವನು ಬ್ರಹ್ಮಲೋಕದ ಅಧಿದೇವತೆಯಾದ ಹಿರಣ್ಯಗರ್ಭನೊಂದಿಗೆ ಮುಕ್ತಿಯನ್ನು ಹೊಂದುತ್ತಾನೆ. ಈ ಪ್ರಕ್ರಿಯೆಯು ಭಗವದ್ಗೀತೆಯಲ್ಲಿ (೬.೪೦ - ೪೪) ವಿವರವಾಗಿ ಹೇಳಲ್ಪಟ್ಟಿದೆ. 

ಅಷ್ಟಾವಕ್ರ ಗೀತೆಯ ಕುರಿತು ಕೆಲವೊಂದು ವಿವರಗಳು:

             ಅಷ್ಟಾವಕ್ರಗೀತಾ (अष्टावक्रगीता) ಇದನ್ನು ಅಷ್ಟಾವಕ್ರ ಸಂಹಿತಾ ಎಂದೂ ಕರೆಯಲಾಗಿದ್ದು ಇದು ಅದ್ವೈತ ವೇದಾಂತಕ್ಕೆ ಸಂಭಂದಿಸಿದ ಗ್ರಂಥವಾಗಿದ್ದು ಇದು ಪರಿಪೂರ್ಣ ಗುರುವಾದ ಅಷ್ಟಾವಕ್ರ ಮತ್ತು ಮಿಥಿಲೆಯ ದೊರೆಯಾದ ಜನಕ ಇವುರುಗಳ ನಡುವಿನ ಸಂಭಾಷಣೆಯನ್ನು ದಾಖಲಿಸುತ್ತದೆ. ಅಷ್ಟಾವಕ್ರ ಗೀತೆಯು ಅಸ್ತಿತ್ವವಾಗಲಿ ಅಥವಾ ಅನಸ್ತಿತ್ವವಾಗಲಿ ಅಂತಹ ಯಾವುದೇ ವಸ್ತುವಿಲ್ಲ, ಅದೇ ವಿಧವಾಗಿ ಒಳ್ಳೆಯದು ಅಥವಾ ಕೆಟ್ಟದ್ದು, ನೈತಿಕ ಅಥವಾ ಅನೈತಿಕವಾದದ್ದು ಯಾವುದೂ ಇಲ್ಲ. ಅಷ್ಟಾವಕ್ರನ ದೃಷ್ಟಿಯಲ್ಲಿ, “ಒಬ್ಬನ ನಿಜವಾದ ವ್ಯಕ್ತಿತ್ವವು ಅವನು ತನ್ನನ್ನು ತಾನು ಪರಿಶುದ್ಧವಾದ ಅಸ್ತಿತ್ವವಾಗಿ ಗುರುತಿಸಿಕೊಳ್ಳುವುದರಲ್ಲಿ ಮತ್ತು ನಾವು ವ್ಯಕ್ತಿಗಳಾಗಿ ಎಲ್ಲಾ ವಸ್ತುಗಳ ಚೇತನವಾಗಿದ್ದೇವೆ ಎಂದು ಸರಳವಾಗಿ ಅರಿತುಕೊಳ್ಳುವುದರಲ್ಲಿದೆ” ಎನ್ನುವುದಾಗಿದೆ.

            ಅಷ್ಟಾವಕ್ರ ಗೀತೆಯು ವಾಸ್ತವವಾಗಿ ಒಬ್ಬನು ಆಗಲೇ ಮುಕ್ತನಾಗಿದ್ದಾನೆ; ಅವನು ಅದನ್ನು ಒಮ್ಮೆ ಅರಿಯಬೇಕಷ್ಟೇ ಎಂದು ಉಪದೇಶಿಸುತ್ತದೆ. ಅದು ಎರಡು ಸಾಕ್ಷಾತ್ಕಾರ ಹೊಂದಿದ ಜೀವಿಗಳ ನಡುವಿನ ಸಂಭಾಷಣೆಯ ರೂಪದಲ್ಲಿದೆ. ಅದು ನಿರ್ಲಿಪ್ತತೆ, ಆಸೆಯಿಲ್ಲದಿರುವಿಕೆ ಮತ್ತು ಪ್ರಾಪಂಚಿಕ ಬಂಧನಗಳನ್ನು ಕಡಿದುಕೊಳ್ಳುವುದನ್ನು ಉಪದೇಶಿಸುತ್ತದೆ. ಈ ಜನನ-ಮರಣಗಳ ಚಕ್ರದಿಂದ ಬಿಡುಗಡೆ ಹೊಂದಲು ಒಬ್ಬನು ತನ್ನೆಲ್ಲಾ ಆಸೆ ಮತ್ತು ದುಃಖಗಳಿಂದ ದೂರವುಳಿಯಬೇಕು. ಒಬ್ಬನು ಈ ಪ್ರಾಪಂಚಿಕ ವಿಷಯಗಳ ನಿಜವಾದ ಸಂಗತಿಗಳನ್ನು ಅರಿತುಕೊಂಡ ಮೇಲೂ ಅವಕ್ಕೇ ಜೋತು ಬೀಳುವುದು ಮೂರ್ಖತನ ಮತ್ತು ವೃಥಾ ಕಾಲಹರಣ ಮಾಡುವುದಾಗಿದೆ. ಇದರ ಬದಲಾಗಿ ಅಷ್ಟಾವಕ್ರ ಗೀತೆಯು ಒಬ್ಬ ಗುರುವಿನ ಚಿತ್ರಣವನ್ನು ನಮ್ಮ ಮುಂದೆ ಇಟ್ಟು ನಮ್ಮ ಪ್ರಾಪಂಚಿಕ ಹೊಣೆಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಹೇಳುತ್ತದೆ, ಏಕೆಂದರೆ ಹೀಗೆ ಮಾಡುವುದು ಅನಿವಾರ್ಯವೆಂದಲ್ಲ ಅಥವಾ ಪ್ರಾಪಂಚಿಕ ಬಂಧನಗಳ ಕಾರಣಗಳಿಗಾಗಿ ಅಲ್ಲ; ಆದರೆ ಕೇವಲ ಹಾಗೆ ಮಾಡುವುದು ಅವರ ಸಹಜ ಗುಣವಾಗಿದೆ. ಈ ವಿಷಯಗಳನ್ನು ತಪ್ಪಾಗಿ ಅರ್ಥೈಸದೇ ಇರಲು ಸಾಮಾನ್ಯವಾಗಿ ಗುರುವೊಬ್ಬನು ಸಾಂಪ್ರದಾಯಿಕವಾಗಿ ಅಷ್ಟಾವಕ್ರಗೀತೆಯನ್ನು ಯಾರು ಆಧ್ಯಾತ್ಮಿಕ ಮಾರ್ಗದಲ್ಲಿ ಆಗಲೇ ಸಾಕಷ್ಟು ಮುಂದುವರೆದಿದ್ದಾರೋ ಅವರಿಗೆ ಮಾತ್ರ ಇದನ್ನು ಅನುಸರಿಸಬೇಕೆಂದು ಪ್ರೇರೇಪಿಸುತ್ತಾರೆ.

Kāṣṭhā काष्ठा (859)

೮೫೯. ಕಾಷ್ಠಾ

           ಕಠೋಪನಿಷತ್ತು (೧.೩.೧೧),"ಸಾ ಕಾಷ್ಠಾ ಸಾ ಪರಾ ಗತಿಃ सा काष्ठा सा परा गतिः” ಅಂದರೆ ’ಯಾವುದು ಅತ್ಯುನ್ನತವಾದ ಗುರಿಯಾಗಿದೆಯೋ ಅದುವೇ ಒಬ್ಬನು ಬೆಳೆಯಬೇಕಾದ ಮಿತಿಯಾಗಿದೆ’, ಎಂದು ಹೇಳುತ್ತದೆ. (ಬ್ರಹ್ಮಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ, ಮತ್ತು ಅದುವೇ ಯಾರಾದರೂ ಹೊಂದಬಹುದಾದ ಅತ್ಯುನ್ನತ ಗುರಿಯಾಗಿದೆ). ಒಬ್ಬನ ಗುರಿಯು ಸ್ಥೂಲದಿಂದ ಸೂಕ್ಷ್ಮದೆಡೆಗಿರಬೇಕು. ಈ ಸಂದರ್ಭದಲ್ಲಿ ಈ ನಾಮವು ಗುರಿ ಎನ್ನುವ ಅರ್ಥವನ್ನು ಹೊಂದಿದೆ.

          ಕಾಷ್ಠ ಎಂದರೆ ೧.೬೦ ಸೆಕೆಂಡುಗಳಿಗೆ ಸರಿಸಮಾನವಾಗಿರುವ ಕಾಲಮಾನ. (ಒಂದು ನಿಮೇಷವು ೦.೦೮೮ ಸೆಕೆಂಡುಗಳಿಗೆ ಸಮಾನವಾಗಿದೆ. ಒಂದು ನಿಮೇಷವು ಕಣ್ಣು ಒಂದು ಬಾರಿ ಎವೆಯಿಕ್ಕುವ ಸಮಯಕ್ಕೆ ಸರಿಸಮಾನವಾದುದಾಗಿದೆ. ಹದಿನೆಂಟು ನಿಮೇಷಗಳು ಒಂದು ಕಾಷ್ಠಾ ಅಥವಾ ೧.೬೦ ಸೆಕೆಂಡುಗಳಿಗೆ ಸಮವಾಗಿದೆ).

          ಪಂಚ ಮಹಾಭೂತಗಳಲ್ಲಿ ಒಂದಾದ ಆಕಾಶವನ್ನು ಪ್ರತಿನಿಧಿಸುವ ಶಿವನ ಒಂದು ರೂಪಕ್ಕೆ ಭೀಮ ರೂಪವೆಂದು ಹೆಸರು ಮತ್ತು ಅವನ ಸಂಗಾತಿಯ ಹೆಸರು ಕಾಷ್ಠಾ ಆಗಿದೆ.

          ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯಲ್ಲಿ (೧೦.೪೨) ಅಂತಿಮ ಗುರಿಯ ಕುರಿತಾಗಿ ಹೀಗೆ ವಿವರಿಸುತ್ತಾನೆ, "ನನ್ನ ಯೋಗ ಶಕ್ತಿಯ ಒಂದು ಕನಿಷ್ಠ ಅಂಶದಿಂದ ಈ ಸಮಸ್ತ ಪ್ರಪಂಚವನ್ನು ನಾನು ಎತ್ತಿ ಹಿಡಿದಿದ್ದೇನೆ. ಆ ಯೋಗ ಶಕ್ತಿಯನ್ನೇ ಕಾಷ್ಠಾ ಎನ್ನುತ್ತಾರೆ. ಯಾರು ಈ ಕಾಷ್ಠವನ್ನು ಅರಿಯುತ್ತಾರೆಯೋ ಅವರನ್ನು ಆತ್ಮ ಸಾಕ್ಷಾತ್ಕಾರ ಹೊಂದಿದವರೆಂದು ಹೇಳಲಾಗುತ್ತದೆ. ಆದರೆ ಈ ಗುರಿಯನ್ನು ಹೊಂದುವ ಮಾರ್ಗವು ಸಂಪೂರ್ಣ ಮುಳ್ಳುಗಳಿಂದ ಆವರಿಸಿದ್ದು ಅದನ್ನು ಅನುಸರಿಸುವುದು ಬಹಳ ಕಠಿಣವಾದದ್ದು. ಅದು ಕತ್ತಿಯ ಅಲಗಿನ ಮೇಲೆ ನಡೆದಂತೆ, ಎಂದು ಕಠೋಪನಿಷತ್ತು (೧.೩.೧೪) ಹೇಳುತ್ತದೆ.

Akāntā अकान्ता (860)

೮೬೦. ಅಕಾಂತಾ

            ದೇವಿಯು ಪಾಪಗಳನ್ನು ನಾಶಪಡಿಸುವವಳಾಗಿದ್ದಾಳೆ. ಒಬ್ಬರು ಒಳ್ಳೆಯ ಕೆಲಸಗಳನ್ನು ಮಾಡುವುದರ ಮೂಲಕ ಪಾಪಗಳು ನಾಶವಾಗುತ್ತವೆ. ನಾಮ ೧೬೭ -ಪಾಪ ನಾಶಿನೀ ಮತ್ತು ನಾಮ ೭೪೩ ಪಾಪಾರಣ್ಯ-ಧವಾನಲಾ ಸಹ ಇದೇ ಅರ್ಥವನ್ನು ಹೊಂದಿವೆ. ಲಲಿತಾ ತ್ರಿಶತಿಯ ನಾಮ ೩೧ ಮತ್ತು ನಾಮ ೧೧೨ ಸಹ ಇದೇ ಅರ್ಥವನ್ನು ಕೊಡುತ್ತವೆ.

            ಕೃಷ್ಣನೂ ಸಹ ಭಗವದ್ಗೀತೆಯಲ್ಲಿ (೧೮.೬೬), "ಸರ್ವಧರ್ಮಗಳನ್ನು ಪರಿತ್ಯಾಗ ಮಾಡಿ, ನನ್ನೊಬ್ಬನನ್ನೇ ಶರಣು ಹೊಂದು. ನಾನು ನಿನ್ನನ್ನು ಸರ್ವ ಪಾಪಗಳಿಂದ ಬಿಡಿಸುವೆನು, ಶೋಕಿಸಬೇಡ" ಎಂದು ಹೇಳುತ್ತಾನೆ.

            ಏಸು ಕ್ರಿಸ್ತನು, "ಯಾವುದೇ ಮನುಷ್ಯನು ತನ್ನ ಮನೆಯನ್ನು, ಸಹೋದರ-ಸಹೋದರಿಯರನ್ನು, ಮಾತಾ-ಪಿತರನ್ನು ಅಥವಾ ಹೆಂಡತಿ ಮಕ್ಕಳನ್ನು, ಅಥವಾ ಜಮೀನನ್ನು ನನ್ನ ಸಲುವಾಗಿ ಅಥವಾ ಬೈಬಲ್ಲಿನ ಸಲುವಾಗಿ ತ್ಯಜಿಸಿಲ್ಲ. ಅವನು ಹಾಗೆ ಮಾಡಿದ್ದೇ ಆದರೆ, ಅವನು ಈಗಲೇ ನೂರು ಪಟ್ಟು ದೊಡ್ಡದಿರುವ ಮನೆಗಳನ್ನು, ಸಹೋದರ-ಸಹೋದರಿಯರನ್ನು, ಮಾತೆಯರನ್ನು ಮತ್ತು ಮಕ್ಕಳನ್ನು, ಮತ್ತು ಜಮೀನನ್ನು, ಕಿರುಕುಳದೊಂದಿಗೆ ಈ ಪ್ರಪಂಚದಲ್ಲಿ ಮತ್ತು ನಿರಂತರವಾದ ಜೀವನದಲ್ಲಿ ಪಡೆಯುತ್ತಾನೆ (ಮಾರ್ಕ್ ೧೦:೨೯,೩೦).

            ನಾಮ ೩೨೯ ಕಾಂತಾವು ದೇವಿಯು ಕಣ್ಣು ಕೋರೈಸುವ ಚೆಲುವಿನ ಕುರಿತಾಗಿ ಹೇಳಿತು. ಸಾಮಾನ್ಯವಾಗಿ ‘ಅ’ ಅಕ್ಷರವನ್ನು ಪೂರ್ವಪ್ರತ್ಯಯವಾಗಿ ಬಳಸಿದಾಗ ಅದು ಶಬ್ದಕ್ಕೆ ತದ್ವಿರುದ್ಧವಾದ ಅರ್ಥವನ್ನು ಕೊಡುತ್ತದೆ. ಆದರೆ ಈ ನಾಮವು ಅದಕ್ಕೆ ಹೊರತಾಗಿದೆ; ವರದಾ (ನಾಮ ೩೩೧) ಮತ್ತು ಅವರದಾ (ನಾಮ ೬೩೯)ಗಳಂತೆ.

Kāntārdha-vigrahā कान्तार्ध-विग्रहा (861)

೮೬೧. ಕಾಂತಾರ್ಧ-ವಿಗ್ರಹಾ

            ದೇವಿಯು ಆತನ ಪತಿಯಾದ ಶಿವನ ಅರ್ಧ ಶರೀರವನ್ನು ಹೊಂದಿದ್ದಾಳೆ. ಕಾಂತಾ ಎಂದರೆ ಶಿವ. ಈ ರೂಪವು ಅರ್ಧ ಪುರುಷ ಮತ್ತು ಅರ್ಧ ಸ್ತ್ರೀಯಾಗಿರುವ ಅರ್ಧನಾರೀಶ್ವರ ರೂಪವನ್ನು ಕುರಿತಾಗಿ ಹೇಳುತ್ತದೆ. ಈ ವಿಧವಾದ ರೂಪವು ಪುರಾತನ ಶಿಲ್ಪಗಳಲ್ಲಿ ಸಾಮಾನ್ಯವಾದುದಾಗಿತ್ತು. ಈ ರೂಪವೆಂದರೆ ಅದು ಸೃಷ್ಟಿಯಾಗಿದೆ. ಪುಲ್ಲಿಂಗ ರೂಪವು ಪುರಷವೆಂದು ಕರೆಯಲ್ಪಟ್ಟಿದ್ದರೆ ಸ್ತ್ರೀ ರೂಪವು ಪ್ರಕೃತಿ ಎಂದು ಕರೆಯಲ್ಪಟ್ಟಿದೆ. ಸೃಷ್ಟಿ ಕ್ರಿಯೆಯು ಪುರುಷ ಮತ್ತು ಪ್ರಕೃತಿಯ ಮಿಲನದಿಂದ ಉಂಟಾಗುತ್ತದೆ.

           ಲಿಂಗ ಪುರಾಣವು (೧.೪.೨೮), "ಸೃಷ್ಟಿಯ ಆರಂಭದಲ್ಲಿ ಬ್ರಹ್ಮನು ಒಬ್ಬ ಜೀವಿಯನ್ನು (ರುದ್ರನನ್ನು) ಸೃಷ್ಟಿಸಿದ್ದ ಅವನ ಶರೀರವು ಅರ್ಧ ಪುರುಷನದಾಗಿದ್ದರೆ ಉಳಿದರ್ಧ ಸ್ತ್ರೀಯದಾಗಿತ್ತು, ಆಮೇಲೆ ಸೃಷ್ಟಿಕರ್ತನು ಅವನಿಗೆ ನೀನು ಇಬ್ಭಾಗವಾಗು ಎಂದು ಆದೇಶವಿತ್ತನು. ಹೀಗೆ ಅಪ್ಪಣೆಗೊಳಗಾದ ಅವನು (ರುದ್ರನು) ತನ್ನನ್ನು ಎರಡು ಭಾಗಗಳಾಗಿ ವಿಭಜಿಸಿಕೊಂಡನು. ತದನಂತರ ಆಕೆಯು (ದೇವಿಯು) ಹುಟ್ಟಿದಳು".

           ಸೌಂದರ್ಯ ಲಹರಿಯೂ (ಸ್ತೋತ್ರ ೨೩) ಸಹ ಈ ರೂಪವನ್ನು ಉಲ್ಲೇಖಿಸುತ್ತದೆ. ಆ ಸ್ತೋತ್ರವು ಹೀಗೆ ಹೇಳುತ್ತದೆ, ದೇವಿಯು ಶಿವನ ಅರ್ಧ ಶರೀರವನ್ನು ಹೊಂದಿದರೂ ಸಹ ಆಕೆಯು ಇನ್ನೂ ಅತೃಪ್ತಳಾಗಿ ಉಳಿದಿದ್ದಾಳೆ. ಆಕೆಯು ಶಿವನನ್ನು ಅಷ್ಟೊಂದು ಇಷ್ಟ ಪಡುತ್ತಾಳೆ.

          ನಾಮ ೩೯೨, ಶ್ರೀಕಂಠಾರ್ಧ-ಶರೀರಿಣಿ ಸಹ ಈ ರೂಪವನ್ನು ಉಲ್ಲೇಖಿಸುತ್ತದೆ.

          ಛಾಂದೋಗ್ಯ ಉಪನಿಷತ್ತು (೩.೧೨.೬), "ಪುರಷನ (ಶಿವನ) ವೈಭವವು ಇನ್ನೂ ಹೆಚ್ಚಿನದ್ದಾಗಿದೆ. ಎಲ್ಲಾ ಜೀವಿಗಳು ಅವನ ಕಾಲುಭಾಗದಷ್ಟಿವೆ. ಉಳಿದ ಮೂರು ಭಾಗಗಳು ಸ್ವರ್ಗದಲ್ಲಿರುವ ಅಮೃತವಾಗಿದೆ", ಎಂದು ಹೇಳುತ್ತದೆ. 

                                                                                        ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 857 - 861  http://www.manblunder.com/2010/06/lalitha-sahasranamam-meaning-857-861.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
No votes yet