ಚಿತ್ರಗುಪ್ತನಿಗೊಂದು ಸಲಹೆ
(ಸರಿ ತಪ್ಪುಗಳ ಲೆಕ್ಕ- 02 : ಚಿತ್ರಗುಪ್ತ ವಾಗ್ವಾದದ ಉತ್ತರಾರ್ಧ ಭಾಗ. ಪ್ರಾಯಶಃ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಗೆಳೆಯರಿಗೆ ಹೆಚ್ಚು ಆಪ್ತವಾಗಬಹುದಾದ ವಸ್ತು - ಅವರ ವೃತ್ತಿಯೆ ಪ್ರತಿನಿಧಿತವಾಗಿರುವುದರಿಂದ :-)
.
ಅವಿರತದಲಿ ಎಲ್ಲರ ಪಾಪ ಪುಣ್ಯದ ಲೆಕ್ಕವಿಡುತ್ತ ಬಿಡುವಿಲ್ಲದೆ ದುಡಿವ ಚಿತ್ರಗುಪ್ತನಿಗೆ, ಎಲ್ಲವನ್ನು ಗಣಕೀಕರಿಸಿ ಅವನ ದೈನಂದಿನ ಕೆಲಸ ಸುಗಮ ಮಾಡಿಕೊಡುವ ಆಮಿಷ, ತನ್ಮೂಲಕ ಅವನಿಗೆ ಸಿಕ್ಕ ಬಿಡುವಲ್ಲಿ ಉಪಯೋಗಿಸದೆ ಬಿದ್ದಿರುವ ರಜೆಗಳನ್ನು ಉಪಯೋಗಿಸಿ 'ಮಜಾ' ಮಾಡುವಂತೆ ಸಲಹೆ, ಅತಿ ಕಡಿಮೆ ವೆಚ್ಚದಲ್ಲೆ 'ಪ್ರಾಜೆಕ್ಟು' ಮಾಡಿಕೊಡುವ ವಾಗ್ದಾನ - ಎಲ್ಲವು ಇಲ್ಲಿ ಚಾಣಾಕ್ಷ್ಯ ಸಲಹೆ ಸಂವಾದದ ರೂಪದಲ್ಲಿ ಅನಾವರಣಗೊಳ್ಳುತ್ತವೆ. ಕೊನೆಯಲ್ಲಿ ಅವು ಕೂಡ ಪಾಪದ ಲೆಕ್ಕದ ಮನ್ನಾಕ್ಕೆ ತಗುಲಿಕೊಳ್ಳುವ ತರ - ನಂಬಲಿ, ಬಿಡಲಿ - ನಮ್ಮಲ್ಲಿರುವ ಆ ಪಾಪದ ಭೀತಿಯ ಆಳವನ್ನು ಪ್ರತಿನಿಧಿಸುತ್ತದೆ.
.
ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ - 02)
___________________________________
.
ಜೀವಮಾನದಲಿ ನಮ್ಮ ಸರಿ ತಪ್ಪುಗಳ ಲೆಕ್ಕ
ಇಡುತ ಹೋದರೆ ನೀನಾಗಿಬಿಡುವೆ ತಾತ
ಬೇಡ ಬಿಡು ಅನುಭವಿಸು ವಿಶ್ರಾಮ ಕಾಲ
ಬಿಡು ನಮ್ಮ ಪಾಡಿಗೆ ನಾವು ಹೊರುವಾ ಚೀಲ ||
.
ಒಂದೊಮ್ಮೆ ಮಡುಗಲೇ ಬೇಕೆಂದರೆ ಲೆಕ್ಕ
ಪಡಬೇಡ ತ್ರಾಸ ಹೊತ್ತು ದೊಡ್ಡ ಪುಸ್ತಕ, ಬೆತ್ತ
ಕೊಟ್ಟುಬಿಡು 'ಬಿಪಿಒ' ನಾವದರ ಎಕ್ಸುಪರ್ಟು
'ಆಫ್ ಶೋರಲೆ' ಮಾಡ್ತೀವಿ ಕಂಪ್ಯೂಟರ ಸರ್ವೀಸು ||
.
ಹೇಗೂ ಬರುವರು ಸತ್ತು ನಮ್ಮವರು ಕೋಟಿ
ಮುಕ್ಕಾಲು ಜನ ಅವರಲಿ ಸಾಫ್ಟುವೇರು ಘಾಟಿ
ಅಲ್ಲೆ ಕೊಡಬಲ್ಲರವರು 'ಆನ್-ಸೈಟು' ಸೇವಾದಾನ
ಮಾಡಿಬಿಟ್ಟರಾಯ್ತು ಅಷ್ಟಿಷ್ಟು ಪಾಪಗಳ ಮನ್ನಾ ||
.
ಆಗ ಸಿಗುವುದು ನಿನಗೆ ಲೋಕ ಸುತ್ತಲು ಸಮಯ
ಕೂಡಿಟ್ಟ ರಜೆಗಳನು ಸುಖಿಸುವಾ ವಿಸ್ಮಯ
ದಣಿದು ಸಾಕಾಗಿದ್ದಿ ನಿನಗೂ ಬೇಕು ಬ್ರೇಕು
ಕೆಲಸದ ಚಿಂತೆ ಬಿಡು ನಮ್ಮ ಪ್ರೋಗ್ರಾಮೆ ಸಾಕು ||
.
ಆರ್ಡರು ಕೊಟ್ಟರೆ ಸಾಕು ನಾವು ಹಾಜರು ಪುಲ್ಲು
ಮೊದಲ ತಿಂಗಳ ಕೆಲಸ ಉಚಿತ ಗುಡ್ ವಿಲ್ಲು
ಮಾಡಿಬಿಡುವ ಕಾಂಟ್ರಾಕ್ಟ್, ಸೇವಾ ನಿಘಂಟು
ಮರೆಯದೆ ಸೇರಿಸಿಕೊಡುವೆ ದೊಡ್ಡ ಡಿಸ್ಕೌಂಟು ||
.
ಚಿಂತೆಬಿಡು ನಾನಿರುವೆ ಪ್ರೊಗ್ರಾಮ್ ಮ್ಯಾನೇಜರು
ನಡೆಸುವೆ ಪ್ರಾಜೆಕ್ಟು ಅದೆ ನನ್ನ ಮೇಜರು
ದಿನ ವಾರ ತಿಂಗಳಿಗೆ ನಾ ಕೊಡುವೆ ಸ್ಟೇಟಸ್ಸು
ಬಾರಲಿ ಕುಳಿತೆ ಇಡುವ ಲೆಕ್ಕ ಪ್ಲಸ್ಸು, ಮೈನಸ್ಸು ||
.
ನಾ ಇಡುವೆ ಸರಿಲೆಕ್ಕ ಪ್ರಾಜೆಕ್ಟು ಬಡ್ಜೆಟ್ಟು
'ಗೋ ಲೈವು' ಸಮಯವದು ತಪ್ಪಿಸದೆ ಟಾರ್ಗೆಟ್ಟು
ಫಲಿತಾಂಶ ಗುಣಮಟ್ಟ ನಾ ತುಂಬ ಸ್ಟ್ರಿಕ್ಟು
ಸ್ವಲ್ಪ ಮಾಡಿಬಿಡು ಕೊನೆಗೆ, ನನ್ನ ಸರಿತಪ್ಪು 'ಅಡ್ಜೆಸ್ಟೂ!' ||
.
ಪೂರ್ವಾರ್ಧದ ಕೊಂಡಿ :-
http://sampada.net/%E0%B2%B8%E0%B2%B0%E0%B2%BF-%E0%B2%A4%E0%B2%AA%E0%B3%...
.
--------------------------------
ನಾಗೇಶ ಮೈಸೂರು, ಸಿಂಗಾಪುರ
---------------------------------
Comments
ಉ: ಚಿತ್ರಗುಪ್ತನಿಗೊಂದು ಸಲಹೆ
ವ್ಹಾ...ನಾಗೇಶರೆ, ಭರ್ಜರಿ ಹಾಸ್ಯ ಕವನವನ್ನೇ ನೀಡಿದಿರಿ. (ಮೊದಲಭಾಗವನ್ನೂ ಈಗ ಓದಿದೆ) ಚಿತ್ರಗುಪ್ತನೇನಾದರೂ ಈ ಕವನ ನೋಡಿದರೆ ಪ್ರಾಜೆಕ್ಟ್ ನಿಮ್ಮ ಕೈಗೆ ಗ್ಯಾರಂಟಿ. ಅಂದಹಾಗೇ ನಾಗೇಶರೆ...ನನ್ನದೊಂದು ರಿಕ್ವೆಸ್ಟ್... ಬಾಕಿಯವರ ಬಗ್ಗೆ ಸ್ಟ್ರಿಕ್ಟೇ ಇರಿ. ಎಡೆಯಲ್ಲಿ ನನ್ನದೇನಾದರೂ ಹೆಸರು ಕಂಡರೆ..ಸ್ವಲ್ಪ ಶಿಕ್ಷೆಯಲ್ಲಿ ಅಡ್ಜಸ್ಟ್ ಮಾಡಿ...:)
In reply to ಉ: ಚಿತ್ರಗುಪ್ತನಿಗೊಂದು ಸಲಹೆ by ಗಣೇಶ
ಉ: ಚಿತ್ರಗುಪ್ತನಿಗೊಂದು ಸಲಹೆ
ಗಣೇಶ್ ಜೀ, ನಿಮ್ಮ ಹೆಸರು ಹಾಗು ವಿಳಾಸವನ್ನು ನೋಡುತ್ತಿದ್ದ ಹಾಗೆ ಯಾವ ಚಿತ್ರಗುಪ್ತನಿಗೆ ಶಿಕ್ಷಿಸೊ ಧೈರ್ಯ ಬಂದೀತು ಹೇಳಿ? (ಗಣೇಶ, ಸನ್ ಆಫ್ ಶಿವ ಶಕ್ತಿ, ಕೇರಾಫ್ ಕೈಲಾಸ, ಬ್ರಹ್ಮಾಂಡ - 000000). ಜಿಮ್ಮಿಗಾದ ಕಥೆ ಯಮಲೋಕಕ್ಕೂ ಆಗಬಾರದು ನೋಡಿ! ಅಂದ ಹಾಗೆ ಆರ್ಡರು ಏನಾದರೂ ಸಿಕ್ಕಿದರೆ ಪಾರ್ಟ್ನರ್ಶಿಪ್ಪಿನಲ್ಲೆ ಪ್ರಾಜೆಕ್ಟು ಆರಂಭಿಸಿಬಿಡುವ ಬನ್ನಿ. ಬಂದ ಪುಣ್ಯವೆಲ್ಲ ಫಿಫ್ಟಿ-ಫಿಫ್ಟಿ, ಗಳಿಸಿದ ಪಾಪವೆಲ್ಲ (ಅಲ್ಲಿಗೆ ಬರುವ) ಪಾಪಿಗಳಿಗೆ ಪುಕ್ಕಟೆ ಪ್ರಾಪ್ತಿ (ಎಲ್ಲಾ ಬುಕ್ ಅಡ್ಜಸ್ಟ್ ಮೆಂಟ್) - ಏನಂತೀರಾ?